"ನನಗೆ ತುಂಬಾ ಇಷ್ಟವಾದ ಕತೆ ಮ್ಯಾಜಿಕ್ ಸೌಟು. ಇದರಲ್ಲಿ ಕೆಲಸದಾಕೆಯ ಕೈ ರುಚಿ ನೀಡುವ ನೆಮ್ಮದಿಗಾಗಿ ಹಂಬಲಿಸುವ ಕುಟುಂಬ. ಆಕೆಯ ಬದುಕಿನ ಸಂಕಷ್ಟಗಳನ್ನು ಚಿತ್ರಿಸುತ್ತಲೇ ನಾವು ಹುಡುಕುವ ನೆಮ್ಮದಿ ಎಲ್ಲಿದೆ ಎಂಬ ಪ್ರಶ್ನೆಯನ್ನು ಮೂಡಿಸಿ ಸಾಗುತ್ತದೆ. ಮಾಮರವೆಲ್ಲೋ ಕತೆ ಮಾನವ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬಂಧ, ಒಂದು ಮರದ ಉಳಿವು ಬದುಕಿಗೆಷ್ಟು ಅತ್ಯಗತ್ಯ ಎಂಬ ಸಂದೇಶವನ್ನು ಸ್ಫುರಿಸುವಂತಿದೆ," ಎನ್ನುತ್ತಾರೆ ಭವ್ಯ ಟಿ.ಎಸ್. ಅವರು ಪೂರ್ಣಿಮಾ ಮಾಳಗಿಮನಿ ಅವರ ‘ಮ್ಯಾಜಿಕ್ ಸೌಟು’ ಕಥಾ ಸಂಕಲನಕ್ಕೆ ಬರೆದ ವಿಮರ್ಶೆ.
ಮ್ಯಾಜಿಕ್ ಸೌಟು (ಕಥಾ ಸಂಕಲನ)
ಲೇಖಕರು : ಪೂರ್ಣಿಮಾ ಮಾಳಗಿಮನಿ
ಕಥೆಗಳನ್ನು ಓದುವಾಗ ನಾವು ಅದರಲ್ಲಿ ಒಂದು ಪಾತ್ರವಾಗಿದ್ದೇವೆ ಎನ್ನುವಂತೆ ಪರವಶತೆ ಆವರಿಸಬೇಕು. ನಮ್ಮ ಸುತ್ತ ಏನೇ ಆಗುತ್ತಿದ್ದರೂ ಅರವಿಗೆ ಬಾರದಷ್ಟು ಕತೆ ನಮ್ಮನ್ನು ಆವರಿಸಬೇಕು. ಓದಿ ಮುಗಿಸಿದ ನಂತರವೂ ಮನದೊಳಗೆ ಕತೆ ಅನುರಣಿಸುತ್ತಲೇ ಇರಬೇಕು. ಇಂತಹ ಅನುಭವಗಳಿಗಾಗಿ ಓದಲೇಬೇಕಾದ ಕತೆಗಳಿವೆ. ಪೂರ್ಣಿಮಾ ಮಾಳಗಿಮನಿಯವರ ಮ್ಯಾಜಿಕ್ ಸೌಟು ಕಥಾಸಂಕಲನದಲ್ಲಿ ಒಟ್ಟು ಒಂಬತ್ತು ಕತೆಗಳಿರುವ ಈ ಪುಸ್ತಕದ ಎಲ್ಲಾ ಕತೆಗಳು ನಮ್ಮ ದೈನಂದಿನ ಬದುಕಿನ ವಾಸ್ತವತೆಯನ್ನು ವಿಭಿನ್ನ ರೀತಿಯಲ್ಲಿ ಧ್ವನಿಸುವಂತಿವೆ. ನಮ್ಮೊಳಗೆ ಸುಪ್ತವಾಗಿರುವ ಭಾವಗಳೇ ಕಥಾವಸ್ತುಗಳಾಗಿವೆ. ಕತೆಗಳನ್ನು ನಿರೂಪಿಸುವ ಶೈಲಿ, ಪಾತ್ರಗಳಲ್ಲಿರುವ ನೈಜತೆಯಿಂದಾಗಿ ಕತೆಗಳು ತಡೆಯಿಲ್ಲದೆ ಓದಿಸಿಕೊಳ್ಳುತ್ತಾ ಸಾಗುತ್ತವೆ.
ಕೇಳದೆ ನಿಮಗೀಗ ಕತೆ ಮೊಬೈಲ್ ನ ಮಾಯಾ ಪ್ರಪಂಚದೊಳಗೆ ಸಾಮಾಜಿಕ ಜಾಲತಾಣಗಳೊಳಗೆ ಕಳೆದು ಹೋಗಿರುವ ಬದುಕು ಸುತ್ತಲಿನ ಪ್ರಪಂಚದ ದನಿಗಳಿಗೆ ಕಿವಿಗೊಡಲಾರದೆ ಅಸಹನೀಯ ಮೌನದಲ್ಲಿ ನಿಸ್ತೇಜವಾಗುತ್ತಿರುವುದನ್ನು ಧ್ವನಿಸುತ್ತದೆ.
ನನಗೆ ತುಂಬಾ ಇಷ್ಟವಾದ ಕತೆ ಮ್ಯಾಜಿಕ್ ಸೌಟು. ಇದರಲ್ಲಿ ಕೆಲಸದಾಕೆಯ ಕೈ ರುಚಿ ನೀಡುವ ನೆಮ್ಮದಿಗಾಗಿ ಹಂಬಲಿಸುವ ಕುಟುಂಬ. ಆಕೆಯ ಬದುಕಿನ ಸಂಕಷ್ಟಗಳನ್ನು ಚಿತ್ರಿಸುತ್ತಲೇ ನಾವು ಹುಡುಕುವ ನೆಮ್ಮದಿ ಎಲ್ಲಿದೆ ಎಂಬ ಪ್ರಶ್ನೆಯನ್ನು ಮೂಡಿಸಿ ಸಾಗುತ್ತದೆ. ಮಾಮರವೆಲ್ಲೋ ಕತೆ ಮಾನವ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬಂಧ, ಒಂದು ಮರದ ಉಳಿವು ಬದುಕಿಗೆಷ್ಟು ಅತ್ಯಗತ್ಯ ಎಂಬ ಸಂದೇಶವನ್ನು ಸ್ಫುರಿಸುವಂತಿದೆ.
ಅದಲು ಬದಲು ಕತೆ ಮನುಷ್ಯ ಹೇಗೆ ತನ್ನದೇ ಸಮಸ್ಯೆಗಳೊಳಗೆ ಬಂಧಿಯಾಗಿ ಇನ್ನೊಬ್ಬರ ಕಡೆ ನೋಡುವುದನ್ನು ನಿಲ್ಲಿಸಿರುತ್ತಾನೆ. ಆದರೆ ಸಮಸ್ಯೆಗಳನ್ನು ಅದಲು ಬದಲು ಮಾಡಲು ಹೊರಟಾಗ ಸಮಸ್ಯೆಗಳ ನೈಜತೆ ಬೆಳಕಿಗೆ ಬರುತ್ತದೆ ಎಂಬುದನ್ನು ತಿಳಿಸುತ್ತ ಕುತೂಹಲಕಾರಿಯಾಗಿದೆ. ಒಂದು ಬೇಡಿಕೆ ಕತೆಯು ಇಂದಿನ ತಲೆಮಾರಿನ ಮಕ್ಕಳ ಆಲೋಚನಾ ಲಹರಿ ಮತ್ತು ಜೀವನಶೈಲಿ ತಂದೆತಾಯಿಗಳಿಗೆ ಹೇಗೆ ತೊಡಕಾಗುತ್ತದೆ. ಮೂಢನಂಬಿಕೆ ಮತ್ತು ನಂಬಿಕೆಗಳ ನಡುವಿನ ವೈರುಧ್ಯಗಳನ್ನು ಕುರಿತು ಚಿಂತಿಸುವಂತಿದೆ. ಗಂಟುಕಳ್ಳರು ಕತೆ ಮನುಷ್ಯನ ತಪ್ಪುಗಳಿಗೆ, ವರ್ತನೆಗಳಿಗೆ ಅವನಿರುವ ಪರಿಸರ ಮತ್ತು ಶಿಕ್ಷಣದ ಕೊರತೆ ಕಾರಣವೇ? ಕೆಲವೊಮ್ಮೆ ಶಿಕ್ಷಣವಿದ್ದರೂ ಅಪರಾಧವೆಸಗುವ ಮನಸ್ಥಿತಿಗೆ ಬಡತನ, ಕಾಡುವ ಕೊರತೆಗಳು ಪ್ರೇರಣೆ ನೀಡುತ್ತವೆಯೇ ಎಂಬ ಪ್ರಶ್ನೆಗಳನ್ನು ಮನದಲ್ಲಿ ಮೂಡಿಸುತ್ತದೆ.
ನೆನಪಿನ ದೋಣಿಯಲ್ಲಿ ಕತೆಯು ಕಾಲಚಕ್ರದ ಚಲನೆಯೊಂದಿಗೆ ನೆನಪುಗಳು ಮನದ ತೆರೆಗೆ ಸರಿಯುವುದು ಸಹಜ. ಆದರೆ ಕೆಲವು ನೆನಪುಗಳು ಮಾಸದೆ ಹಾಗೆ ಉಳಿದು ಯಾತನೆಗೆ ಕಾರಣವಾಗಬಹುದು. ಅಂತಹ ನೆನಪುಗಳನ್ನು ಒತ್ತಾಯಪೂರ್ವಕವಾಗಿ ಅಳಿಸುವ, ಬದಲಿಸಿಕೊಳ್ಳುವ ತಂತ್ರಜ್ಞಾನ ಆವಿಷ್ಕಾರ ಮಾಡುವ ವ್ಯಕ್ತಿಯ ಸಂದಿಗ್ಧತೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.
ನಮ್ಮಿಬ್ಬರ ಕಥೆ ಒಂದೇ ಕತೆಯು ಒಂದೇ ನೋವನ್ನು ಅನುಭವಿಸುವ ಒಬ್ಬ ಮೇಲ್ವರ್ಗದ ವ್ಯಕ್ತಿ ಮತ್ತು ಕೆಲಸದಾಳುವಿನ ನಡುವೆ ಬೆಳೆಯುವ ಸ್ನೇಹ, ಭಾವನೆಗಳನ್ನು ವಿನಿಮಯಿಸುವಾಗ ಸತ್ಯವೊಂದು ಗೋಚರಿಸುವ ವಸ್ತುವಿನಿಂದ ಕೂಡಿದೆ.
ಹಸಿದ ಹೊಟ್ಟೆ ಮತ್ತು ಶಿಷ್ಟಾಚಾರ ಕತೆಯು ಕಾಲ್ ಸೆಂಟರ್ ಉದ್ಯೋಗಿಯೊಬ್ಬಳ ಶಿಷ್ಟಾಚಾರದ ಬಗ್ಗೆ ಅಸಹನೆ ವ್ಯಕ್ತಪಡಿಸುವ ಶ್ರೀಮಂತ ವ್ಯಕ್ತಿಯ ಮನಸ್ಥಿತಿ.ತನಗಾದ ಅವಮಾನದಿಂದ ನೊಂದ ಆಕೆ ತನ್ನ ಕಷ್ಟದ ಅರಿವನ್ನು ಆ ವ್ಯಕ್ತಿಗೆ ಸ್ಪಷ್ಟಪಡಿಸಲು ಕಂಡುಕೊಳ್ಳುವ ಮಾರ್ಗ ರೋಚಕವೆನಿಸಿದರೂ ಅಂತ್ಯದಲ್ಲಿ ಬಡತನ ಮತ್ತು ಹಸಿವು ಶಿಷ್ಟಾಚಾರದ ಪಾಲನೆಯನ್ನು ಅನಿವಾರ್ಯವಾಗಿಸುವ ರೀತಿಯನ್ನು ಮನೋಜ್ಞವಾಗಿ ತಿಳಿಸುತ್ತದೆ.
ಒಟ್ಟಿನಲ್ಲಿ ಮನೋಲೋಕದ ವಿಭಿನ್ನ ಚಹರೆಗಳನ್ನು ಆಕರ್ಷಕ ನಿರೂಪಣಾ ಶೈಲಿಯೊಂದಿಗೆ ಪ್ರಸ್ತುತಪಡಿಸುವ ಇಲ್ಲಿನ ಎಲ್ಲಾ ಕತೆಗಳು ಸಹೃದಯರನ್ನು ಮ್ಯಾಜಿಕ್ ನಂತೆ ಮಂತ್ರಮುಗ್ಧಗೊಳಿಸುವಲ್ಲಿ ಗೆದ್ದಿವೆ.
ಭವ್ಯ ಟಿ.ಎಸ್.
“ಸಮಾಜೋ ಸಾಂಸ್ಕೃತಿಕ ಸಂರಚನೆಯನ್ನು ಆಳುತ್ತಿರುವ ಊಳಿಗಮಾನ್ಯ ಪದ್ಧತಿಯ ಪ್ರಜ್ಞೆ ಮತ್ತು ಅದರಲ್ಲಿ ಆಳವಾಗಿ ಬೇರೂರಿ...
"ಆ ಶಾಲೆಯ ಸಿಬ್ಬಂದಿಯೊಂದಿಗೆ ಅವಳು ತಾತ್ಕಾಲಿಕ ಸಂಬಂಧ ಉಂಟಾಗಿ, ಅದು ಊರಿನವರ ಮಾತುಕತೆಗೆ ಆಹಾರವಾಗುತ್ತದೆ. ಕಿಡಿಗ...
“ಈ ಕೃತಿಯಲ್ಲಿ ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನೆ, ಸಂಗೀತ, ವ್ಯಕ್ತಿಚಿತ್ರ ಮೊದಲಾದ ವಿಷಯಗಳ...
©2025 Book Brahma Private Limited.