Date: 13-12-2021
Location: ಬೆಂಗಳೂರು
ಉಷಾ ಅವರ ‘ಶೂಲಿಹಬ್ಬ’ ನಾಟಕವು ಸ್ತ್ರೀವಾದಿ ಅಧ್ಯಯನದ ಬಹುಮುಖ್ಯ ನಾಟಕವಾಗಿದೆ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ 'ಮಹಿಳಾ ರಂಗಭೂಮಿ’ ಅಂಕಣದಲ್ಲಿ ಎಂ.ಉಷಾ ಅವರ “ಶೂಲಿ ಹಬ್ಬ” ನಾಟಕದ ಕುರಿತು ವಿಶ್ಲೇಷಿಸಿದ್ದಾರೆ.
ಪೌರಾಣಿಕ-ಐತಿಹಾಸಿಕ ಪ್ರಸಂಗಗಳನ್ನಾಯ್ದುಕೊಂಡು ನಾಟಕ ರಚಿಸುವುದು ಕನ್ನಡದಲ್ಲಿ ಒಂದು ಪರಂಪರೆ ಯಾಗಿಯೇ ಬೆಳೆದುಕೊಂಡು ಬಂದಿದೆ. ಗಿರೀಶ ಕಾರ್ನಾಡರ ಬಹುತೇಕ ನಾಟಕಗಳು ಇಂತವುಗಳೇ ಆಗಿವೆ. ಎಂ. ಉಷಾ ಅವರು ಇಂತಹದೇ ಒಂದು ಪ್ರಯೋಗವನ್ನು ಈ ನಾಟಕದಲ್ಲಿ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಜಬ್ಬಲಗುಡ್ಡ ಪರಿಸರದಲ್ಲಿ ಕಂಪಿಲರಾಯನ ಸಾಮ್ರಾಜ್ಯ ಬೆಳೆದಿತ್ತೆಂದು ಇತಿಹಾಸಕಾರರು ಹೇಳುತ್ತಾರೆ. ಕಂಪಿಲರಾಯನ ಮಹತ್ವಾಕಾಂಕ್ಷೆಯ ಅರಸನಾಗಿದ್ದ, ಬಹುಪತ್ನಿ ವಲ್ಲಭನಾಗಿದ್ದ. ಆದರೆ ಆತನ ಮಗ ಕುಮಾರರಾಮ ಆದರ್ಶ ಪುತ್ರನಾಗಿದ್ದ. ಜೀವನ ಮೌಲ್ಯಗಳಿಗೆ ಬೆಲೆಕೊಟ್ಟು ನೀತಿಯ ಮಾರ್ಗದಲ್ಲಿ ಬದುಕಬೇಕೆಂಬುದು ಅವನ ಉದ್ದೇಶವಾಗಿತ್ತು. ಹೀಗಾಗಿ ಕುಮಾರರಾಮ ಕನ್ನಡನಾಡಿನ ಹೆಮ್ಮೆಯ ಪುತ್ರನಾಗಿ ವೀರ ರಾಜಕುಮಾರನಾಗಿ, ಎಲ್ಲರಿಗೂ ಮಾದರಿಯಾಗಬಲ್ಲ ಅರಸನಾಗಿ ಕಾಣಿಸಿಕೊಂಡಿದ್ದಾನೆ.
ಗಂಗಾವತಿ ತಾಲೂಕಿನ ಜಬ್ಬಲಗುಡ್ಡಕ್ಕೆ ಕುಮಾರರಾಮನ ದುರ್ಗವೆಂದು ಕರೆಯುತ್ತಾರೆ. ಕಪಿಲರಾಜ್ಯದ ಘಟನೆಯನ್ನು ಹೋಲುವ ಕಥಾನಕವೊಂದು ಗ್ರೀಕ್ ದೇಶದಲ್ಲಿ ಕಾಣಿಸುತ್ತದೆ. ಕ್ರಿಸ್ತ ಪೂರ್ವದಲ್ಲಿಯೇ ಗ್ರೀಕ್ ದೇಶದಲ್ಲಿ ‘ಫಿದ್ರಾ’ ಎಂಬ ಕಥಾನಕವಿದ್ದುದು ತಿಳಿದು ಬರುತ್ತದೆ. ಕುಮಾರರಾಮನ ಕಥಾನಕ ಕನ್ನಡದಲ್ಲಿ ಜನಪ್ರಿಯವಾಗಿದೆ. ಜನಪದ ಸಾಹಿತ್ಯ ಪ್ರಕಾರಗಳಾದ ಕಾವ್ಯ, ಕಥನ ಕವನ, ಲಾವಣಿ, ದುಂದುಮೆ, ಬುರ್ರಕಥಾ, ಒಗಟು, ಬಯಲಾಟ, ಕಥೆ ಇವುಗಳಲ್ಲೆಲ್ಲ ಕುಮಾರರಾಮ ಕಾಣಿಸಿಕೊಂಡಿದ್ದಾನೆ. ಕುಮಾರರಾಮ ನನ್ನು ಕುರಿತು ಶಿಷ್ಟಕವಿಗಳೂ ಕಾವ್ಯ ಕೃತಿಗಳನ್ನು ರಚಿಸಿದ್ದಾರೆ. ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಚದುರಂಗ, ವಿ. ಶ್ರೀನಿವಾಸರಾವ್ ಮೊದಲಾದವರು ಕುಮಾರರಾಮನನ್ನು ಕುರಿತು ನಾಟಕಗಳನ್ನು ರಚಿಸಿದ್ದಾರೆ. ಉಷಾ ಅವರ ‘ಶೂಲಿಹಬ್ಬ’ ನಾಟಕವು ಸ್ತ್ರೀವಾದಿ ಅಧ್ಯಯನದ ಬಹುಮುಖ್ಯ ನಾಟಕವಾಗಿದೆ.
ಕಂಪಿಲರಾಯನು ತನ್ನ ಮಗ ಕುಮಾರರಾಮನಿಗಾಗಿ ಹೆಣ್ಣುನೋಡಲು ತೆಲುಗುದೇಶಕ್ಕೆ ಹೋಗುತ್ತಾನೆ. ಅಲ್ಲಿ ಡೊಂಬರ ಕನ್ಯೆ ರತ್ನಾಜಿಯನ್ನು ನೋಡುತ್ತಾನೆ. ಅವಳ ಸೌಂದರ್ಯಕ್ಕೆ ಮನಸೋತು, ತನ್ನ ಮಗನಿಗೆ ಹೆಣ್ಣು ನೋಡಲು ಬಂದಿರುವ ವಿಷಯವನ್ನೇ ಮರೆತು ತಾನೇ ಅವಳನ್ನು ಮದುವೆಮಾಡಿಕೊಂಡು ಬರುತ್ತಾನೆ. ಇದು ಸಂಕ್ಷಿಪ್ತವಾದ ಕಥಾನಕ ಬೇರೆ ಬೇರೆ ಕಥಾನಕಗಳಿವೆ. ಕಂಪಿಲರಾಯ ರತ್ನಾಜಿಯನ್ನು ನೋಡಿ ಮೆಚ್ಚಿ ಕೊಂಡು ಬಂದು ಮಗನಿಗೆ ಅವಳ ಚಿತ್ರಪಟ ತೋರಿಸುತ್ತಾನೆ. ಅವಳ ಸೌಂದರ್ಯ ಅವಳ ವ್ಯಕ್ತಿತ್ವ ಇವೆಲ್ಲವನ್ನು ತನ್ನ ತಂದೆಯ ಬಾಯಿಯಿಂದ ಕೇಳಿದ ಮಗ ಕುಮಾರರಾಮ ಸಹಜವಾಗಿಯೇ ಇಷ್ಟ ಪಡುತ್ತಾನೆ. ತನಗಿಂತ ಚಿಕ್ಕವಳು, ಸುಂದರಿಯೂ ಆಗಿರುವ ರತ್ನಾಜಿಯ ಚಿತ್ರಪಟ ನೋಡಿದಾಕ್ಷಣವೇ ಅವನಿಗೆ ವಯೋಸಹಜವಾದ ಕುತೂಹಲ ಮೂಡುತ್ತದೆ. ಆದರೆ ಕಂಪಿಲರಾಯನು ರತ್ನಾಜಿಯನ್ನು ತಾನು ಮದುವೆಯಾಗಿ ಕರೆತಂದು ಈಕೆ ನಿನ್ನ ಚಿಕ್ಕಮ್ಮನೆಂದು ಹೇಳಿದಾಗ ಕುಮಾರರಾಮನಿಗೆ ಆಶ್ಚರ್ಯವಾಗುತ್ತದೆ. ಆದರೂ ತಂದೆಯ ಮಾತಿಗೆ ಗೌರವಕೊಟ್ಟು ರತ್ನಾಜಿಯನ್ನು ಚಿಕ್ಕಮ್ಮನೆಂದು ಒಪ್ಪಿಕೊಳ್ಳುತ್ತಾನೆ.
ರಾಜಾಜ್ಞೆಗೆ ಕಟ್ಟುಬಿದ್ದ ರತ್ನಾಜಿ ಒಲ್ಲದ ಮನಸ್ಸಿನಿಂದ ಮುದುಕ ಕಂಪಿಲರಾಯನನ್ನು ಮದುವೆಯಾಗಿ ಅರಮನೆಗೆ ಬರುತ್ತಾಳೆ. ಗೆಳೆಯರೊಂದಿಗೆ ಚೆಂಡಾಡವಾಡುತ್ತಿದ್ದಾಗ, ಚೆಂಡು ರತ್ನಾಜಿಯ ನಿವಾಸದ ಆವರಣದಲ್ಲಿ ಬೀಳುತ್ತದೆ. ಅದನ್ನು ತರಲು ಹೋದ ಕುಮಾರರಾಮನನ್ನು ರತ್ನಾಜಿ ಪ್ರೀತಿಯಿಂದ ಮಾತನಾಡಿಸುತ್ತಾಳೆ. ಕುಮಾರರಾಮನ ರೂಪ, ಯೌವನಕ್ಕೆ ರತ್ನಾಜಿ ಮನಸೋಲುತ್ತಾಳೆ. ಅವನಿಗಾಗಿ ತನ್ನನ್ನು ನೋಡಿ, ತಾನು ಮದುವೆಯಾದ ಮುದುಕ ಗಂಡನನ್ನು ಶಪಿಸುತ್ತಾಳೆ. ತನ್ನ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಾಳೆ. ಆದರೆ ಕುಮಾರರಾಮ ಇದಕ್ಕೆ ಒಪ್ಪುವುದಿಲ್ಲ. ನೀನು ನನ್ನ ಚಿಕ್ಕಮ್ಮನೆಂದು ಆಕೆಯನ್ನು ಗೌರವಿಸುತ್ತಾನೆ.
ರತ್ನಾಜಿ ಕಾಮುಕತನವನ್ನು ತೋರಿಸಿದಾಗ ಅವಳನ್ನು ತಳ್ಳಿ ಕುಮಾರರಾಮ ಹೊರಟು ಬರುತ್ತಾನೆ. ಆದರೆ ರತ್ನಾಜಿ ತನ್ನ ಮುದುಕ ಪತಿ ಕಂಪಿಲರಾಯನು ಮಗನಿಗೆ ಮರಣದಂಡನೆ ಶಿಕ್ಷೆವಿಧಿಸಿ ರಾಜಾಜ್ಞೆ ಹೊರಡಿಸುತ್ತಾನೆ. ಮಂತ್ರಿ ಬೈಚಪ್ಪನು ಕುಮಾರರಾಮ ಹಾಗೂ ಆತನ ಗೆಳೆಯರನ್ನು ನೆಲಮಾಳಿಗೆಯಲ್ಲಿ ಬಚ್ಚಿಡುತ್ತಾನೆ. ದೆಹಲಿಯ ಸುಲ್ತಾನ ದಂಡೆತ್ತಿ ಬಂದಾಗ ಮುದುಕ ಮಹಾರಾಜನು ಅಸಮರ್ಥನಾದಾಗ, ಮಂತ್ರಿ ಬೈಚಪ್ಪನೇ ನೆಲಮಾಳಿಗೆಯಲ್ಲಿದ್ದ ಕುಮಾರರಾಮನನ್ನು ಕರೆತರುತ್ತಾನೆ. ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಕುಮಾರರಾಮನು, ದೆಹಲಿ ಸುಲ್ತಾನನ ಸೈನ್ಯವನ್ನು ಸೋಲಿಸಿ ಜಯಶಾಲಿಯಾಗಿ ಬರುತ್ತಾನೆ. ಹೀಗೆ ಸಾವುಗೆದ್ದು, ಸುಲ್ತಾನನ್ನು ಗೆದ್ದು, ತ್ರೀಲೋಕಗಳ ಜನಮನವನ್ನು ಗೆದ್ದ ಕುಮಾರರಾಮ ಇಲ್ಲಿ ಆದರ್ಶ ಯುವ ರಾಜನಾಗಿ ಕಾಣಿಸಿಕೊಳ್ಳುತ್ತಾನೆ. ಆದರೆ ರತ್ನಾಜಿ ಮಾತ್ರ ತನ್ನದೇ ಸರಿಯೆಂದು ವಾದಿಸುತ್ತಾಳೆ. ಮುಂದಿನ ಜನ್ಮದಲ್ಲಾದರೂ ಕುಮಾರರಾಮನೇ ಪತಿಯಾಗಬೇಕೆಂದು ಬಯಸುತ್ತಾಳೆ. ಕೊನೆಯ ದೃಶ್ಯದಲ್ಲಿ ಕಂಪಿಲರಾಜ್ಯದಲ್ಲಿ ವರ್ಷದ ಶೂಲಿಹಬ್ಬ ಬರುತ್ತದೆ. ರತ್ನಾಜಿ ಅನಾರೋಗ್ಯದಿಂದ ಕುಸಿದು ಬಿದ್ದು ಸಾಯುತ್ತಾಳೆ. ಕುಮಾರರಾಮ ದುಃಖದಿಂದ ರತ್ನಾಜಿಯನ್ನು ಎದೆಗಾನಿಸಿ ಕೊಳ್ಳುತ್ತಾನೆ ಇಲ್ಲಿನ ನಾಟಕ ಮುಕ್ತಾಯವಾಗುತ್ತದೆ.
ರತ್ನಾಜಿ ಬೈಚಪ್ಪ ಈ ನಾಟಕದಲ್ಲಿ ಕಂಪಿಲರಾಯ, ಕುಮಾರರಾಮ ಪುತ್ರಗಳ ಜತೆಗೆ ಕುಮಾರರಾಮನ ಗೆಳೆಯರಾದ ಕಾಚರಾಮ, ನಾಗಲಿಂಗ ಕಾಣಿಸಿಕೊಂಡಿದ್ದಾರೆ. ನಟಿಯೇ ಸಂಗಿಯ ಇನ್ನೊಂದು ರೂಪವಾಗಿ, ರತ್ನಾಜಿಯ ಗೆಳತಿಯಾಗಿ ಕಾಣಿಸಿಕೊಂಡಿದ್ದಾಳೆ. ಡೊಂಬರ ನಾಯಕ, ಕೋಡಂಗಿ, ಕೋತಿ, ಪ್ರೇಕ್ಷಕ ಈ ಮೊದಲಾದ ಪಾತ್ರಗಳು ಇಲ್ಲಿವೆ.
ನಂಜುಂಡ ಕವಿ ರಚಿಸಿರುವ ಕುಮಾರರಾಮನ ಕಾವ್ಯದಲ್ಲಿ ಸಂಗಿಯ ಪಾತ್ರವಿದೆ. ಕುಮಾರರಾಮನು ಕನ್ನಡಿಗರ ಹೆಮ್ಮೆಯ ರಾಜಕುಮಾರನಾಗಿ, ರತ್ನಾಜಿಯು ತೆಲುಗು ದೇಶದ ಡೊಂಬರ ಹೆಣ್ಣಾಗಿ ಈ ಕಾವ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಡೊಂಬರಾಟಕ್ಕೂ ನಾಟಕಕ್ಕೂ ಇರುವ ಸಂಬಂಧವನ್ನು ಉಷಾ ಅವರು ತಮ್ಮ ನಾಟಕದ ಪ್ರಾರಂಭದಲ್ಲಿಯೇ ಪ್ರಸ್ತಾಪಿಸಿದ್ದಾರೆ. ರತ್ನಾಜಿಯನ್ನು ಲಂಪಟ ಸ್ತ್ರೀಯನ್ನಾಗಿ, ಕುಮಾರರಾಮನನ್ನು ಮರ್ಯಾದಾ ಪುರುಷೋತ್ತಮನನ್ನಾಗಿ ಉಳಿದ ಕಾವ್ಯಗಳು ಚಿತ್ರಿಸಿದರೆ, ಈ ನಾಟಕದಲ್ಲಿ ಉಷಾ ಅವರು ವಿಭಿನ್ನವಾದ ರೀತಿಯಲ್ಲಿ ರತ್ನಾಜಿಯ ಪಾತ್ರವನ್ನು ಸೃಷ್ಟಿಸಿದ್ದಾರೆ.
ಕಂಪಿಲರಾಯ ತನ್ನ ಮಗಳ ವಯಸ್ಸಿನ ರತ್ನಾಜಿಯನ್ನು ಮದುವೆಯಾಗಿ ಕರೆತಂದು ಜನಪ್ರೀಯತೆಗೆ ಕಾರಣವಾದರೆ, ಕುಮಾರರಾಮನು ತನ್ನನ್ನು ಪ್ರೀತಿಸಲು ಬಂದ ರತ್ನಾಜಿಯನ್ನು ತಿರಸ್ಕರಿಸಿ ಮರ್ಯಾದಾ ಪುರುಷೋತ್ತಮನಾಗುತ್ತಾನೆ. ಅಂದರೆ ಗಂಡಸಾದವನು ಹೆಣ್ಣನ್ನು ಬೋಗದವಸ್ತುವನ್ನಾಗಿ ಮಾಡಿಕೊಂಡರೂ ಇಲ್ಲಿ ಪ್ರಸಿದ್ಧಿ ಪಡೆಯುತ್ತಾನೆ. ಪ್ರೀತಿಸಲು ಬಂದ ಹೆಣ್ಣನ್ನು ತಿರಸ್ಕರಿಸಿದಾಗಲೂ ಆದರ್ಶ ವ್ಯಕ್ತಿಯಾಗುತ್ತಾನೆ. ಆದರೆ ಅದೇ ಹೆಣ್ಣಿಗೆ ಈ ವ್ಯವಸ್ಥೆಯಲ್ಲಿ ಅಂತಹ ಅವಕಾಶಗಳಿಲ್ಲ ಅವಳಿಗೆ ಸ್ವತಂತ್ರವಾದ ಮನೋಭಿಲಾಷೆಗಳಿಲ್ಲ ಗಂಡು ಕರೆದಾಗ ಹೋಗಬೇಕು, ಬೇಡವೆಂದಾಗ ಸುಮ್ಮನಿರಬೇಕು. ಹೀಗೆ ಇತಿಹಾಸದುದ್ದಕ್ಕೂ ಭೋಗದ ವಸ್ತುವಾಗಿ ಬಳಕೆಯಾಗಿರುವ ಹೆಣ್ಣಿನ ಒಳಮನಸ್ಸಿನ ತುಡಿತ ಈ ನಾಟಕದಲ್ಲಿ ಪ್ರಕಟವಾಗಿದೆ.
ಹೀಗಾಗಿ ಈ ನಾಟಕ ಉಳಿದ ಕಥಾನಕಗಳಿಗಿಂತ ಭಿನ್ನವಾಗಿ ಕಾಣಿಸುತ್ತದೆ. ಕುಮಾರರಾಮನ ಚರಿತ್ರೆಯ ಘಟನೆಗಳನ್ನು ತಿದ್ದುಪಡಿ ಮಾಡದೆ, ಹಿಂದಿನ ಕಥಾ ಹಂದರವನ್ನೇ ಇಟ್ಟುಕೊಂಡು ಹೊಸ ರೀತಿಯ ಚಿಂತನೆಯನ್ನು ಈ ನಾಟಕ ಮಾಡುತ್ತದೆ. ಆದಿಕವಿ ಪಂಪನಿಂದ ಹಿಡಿದು ಆಧುನಿಕ ಕವಿ ಕುವೆಂಪು ವರೆಗೆ ಇಂತಹ ಅನೇಕ ಪ್ರಯೋಗಗಳು ನಡೆದಿವೆ. ಪಂಪನು, ತನ್ನ ಪಂಪಭಾರತದಲ್ಲಿ ಧರ್ಮರಾಜನನ್ನು ನಾಯಕನನ್ನಾಗಿ ಮಾಡಿಕೊಳ್ಳದೆ, ಅರ್ಜುನನನ್ನು ನಾಯಕನನ್ನಾಗಿ ಮಾಡಿಕೊಂಡು ಆ ಕೃತಿಗೆ ‘ವಿಕ್ರಮಾರ್ಜುನ ವಿಜಯ’ ಎಂದು ಹೆಸರಿಡುತ್ತಾನೆ. ಅದೇ ರೀತಿ ರನ್ನಕವಿ ತನ್ನ ಸಾಹಸ ಭೀಮ ವಿಜಯದಲ್ಲಿ ಭೀಮನನ್ನು ನಾಯಕನನ್ನಾಗಿ ಮಾಡಿಕೊಂಡು, ದುರ್ಯೋಧನನ್ನು ಪ್ರತಿನಾಯಕನೆಂದು ರೂಪಿಸುತ್ತಾನೆ. ಉಷಾ ಅವರು ಇಲ್ಲಿ ಮೂಲಕಥೆಯಲ್ಲಿ ಅಂತಹ ಬದಲಾವಣೆಗಳನ್ನು ಮಾಡಿಕೊಳ್ಳದೆ, ಇದ್ದ ಕಥಾನಕದಲ್ಲಿಯೇ ವಿಶಿಷ್ಟ ರೀತಿಯ ಬೆಳವಣಿಗೆಗೆ ಕಾರಣರಾಗುತ್ತಾರೆ. ಹೀಗಾಗಿ ಈ ನಾಟಕ ವಿಶಿಷ್ಟವಾಗಿ ಕಾಣಿಸುತ್ತದೆ.
ಈ ನಾಟಕದಲ್ಲಿ ಐದು ದೃಶ್ಯಗಳಿವೆ. ಒಂದನೇ ದೃಶ್ಯವು ಸೂತ್ರಧಾರ, ನಟಿ, ಪ್ರೇಕ್ಷಕರ ಸಂಭಾಷಣೆಯಲ್ಲಿಯೇ ಮುಗಿದು ಹೋಗುತ್ತದೆ. ನಂಜುಂಡಕವಿಯ ರಾಮನಾಥ ಚರಿತೆಯ ಸಾಂಗತ್ಯ ಪದ್ಯಗಳನ್ನೇ ನಾಂದಿ ಪದ್ಯಗಳನ್ನಾಗಿ ಬಳಸಿಕೊಂಡು ಎರಡನೇ ದೃಶ್ಯ ಪ್ರಾರಂಭವಾಗುತ್ತದೆ. ಇಲ್ಲಿ ಸಂಗಿ ರತ್ನಾಜಿ, ನಾಗಿ, ಸೂತ್ರಧಾರ ಇವರ ಸಂಭಾಷಣೆಗಳಿವೆ. ಮೂರನೇ ದೃಶ್ಯದಲ್ಲಿ ಕುಮಾರರಾಮನ ಪ್ರವೇಶವಾಗುತ್ತದೆ. ರತ್ನಾಜಿಯೊಂದಿಗೆ ಕುಮಾರರಾಮನು ಸಂಭಾಷಣೆ ಮಾಡುತ್ತಾನೆ, ಸಂಗಿ ಇದನ್ನೆಲ್ಲ ಕೇಳಿಸಿ ಕೊಳ್ಳುತ್ತಾಳೆ. ರತ್ನಾಜಿಗೆ ಸಲಹೆ ಕೊಡುತ್ತಾಳೆ. ನಾಲ್ಕನೇ ದೃಶ್ಯವು ನೆಲಮನೆಯ ದೃಶ್ಯವಾಗಿದೆ. ನೆಲಮನೆಯಲ್ಲಿದ್ದ ಕುಮಾರರಾಮ, ಕಾಟ ಮತ್ತು ನಾಗ ಹಾಗೂ ಮಂತ್ರಿ ಬೈಚಪ್ಪನವರ ಸಂಭಾಷಣೆಗಳು ಇಲ್ಲಿವೆ. ಐದನೇ ದೃಶ್ಯವು ರತ್ನಾಜಿಯ ಕೋಣೆಯಲ್ಲಿ ನಡೆಯುತ್ತದೆ. ಕಂಪಿಲರಾಯ, ರತ್ನಾಜಿ, ಸಂಗಿ, ಕುಮಾರರಾಮ ಈ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೊಸನಾಂದಿಯೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ಪುಟ:57 ರಲ್ಲಿ ಕುಮಾರರಾಮನ ಸಂಭಾಷಣೆ ರತ್ನಾಜಿಯ ಸಂಭಾಷಣೆಯಲ್ಲಿ ಸೇರಿಕೊಂಡಿದೆ, ಅಲ್ಲಲ್ಲಿ ಮುದ್ರಣ ದೋಷಗಳಿವೆ. ಕಥಾವಸ್ತುವನ್ನು ಅಭಿವ್ಯಕ್ತಿಸುವ ಕ್ರಿಯೆಯಲ್ಲಿ ಕೆಲವು ಮಿತಿಗಳಿವೆ. ಡೊಂಬರ ನಾಯಕ, ಡೊಂಬರ ಹೆಣ್ಣುಮಗಳು, ಕೋತಿ, ಕೋಂಡಂಗಿ ಈ ಪಾತ್ರಗಳ ಅಗತ್ಯವಿರಲಿಲ್ಲ. ನೇರವಾಗಿ ರತ್ನಾಜಿಯು ಕಂಪಿಲರಾಯನೊಂದಿಗೆ ಮತ್ತು ಕುಮಾರ ರಾಮನೊಂದಿಗೆ ಮುಖಾಮುಖಿಯಾಗುವ ದೃಶ್ಯಗಳನ್ನು ಬೆಳೆಸಬೇಕಾಗಿತ್ತು. ಆ ಮೂಲಕ ವೈಚಾರಿಕ ಸಂಘರ್ಷ ನಡೆಯಬಹುದಾಗಿತ್ತು. ರತ್ನಾಜಿಯ ಪ್ರಶ್ನೆಗಳೀರುವುದು ಕಂಪಿಲರಾಯನೊಂದಿಗೆ ಆದರೆ ಇಲ್ಲಿ ಕಂಪಿಲರಾಯ ಮತ್ತು ರತ್ನಾಜಿಯ ಸಂಭಾಷಣೆಗಳ ಬೆಳವಣಿಗೆಯಿಲ್ಲ. ಇದೊಂದು ತ್ರಿಕೋನಮುಖಿಯಾದ ನಾಟಕ. ರತ್ನಾಜಿ ಇಲ್ಲಿ ಕೇಂದ್ರಬಿಂದು ಇತ್ತ ಕಂಪಿಲರಾಯ ಅತ್ತ ಕುಮಾರರಾಮ ಇವರಿಬ್ಬರೊಂದಿಗಿನ ಸಂಭಾಷಣೆಗಳಲ್ಲಿ ಹೆಚ್ಚಿನ ಬೆಳವಣಿಗೆಯಿಲ್ಲ. ಹೀಗಾಗಿ ನಾಟಕದ ಉದ್ದೇಶ ಸಾಮಾನ್ಯ ಪ್ರೇಕ್ಷಕರಿಗೆ ಸ್ಪಷ್ಟವಾಗುವುದಿಲ್ಲ. ಇಂತಹ ಕೆಲವು ಮಿತಿಗಳ ನಡುವೆಯೂ ನಾಟಕ ಬೆಳೆದು ನಿಂತಿದೆ. ರತ್ನಾಜಿಯ ಸಂಭಾಷಣೆಗಳು ತೀವ್ರ ಪರಿಣಾಮವನ್ನುಂಟು ಮಾಡುತ್ತವೆ. ಕಂಪಿಲರಾಯನ ವಿರುದ್ಧ ನಡೆಯಬೇಕಾಗಿದ್ದ ರತ್ನಾಜಿಯ ಪ್ರತಿಭಟನೆ ಹಾಗೆಯೇ ಕರಗಿ ಹೋಗುತ್ತದೆ. ನಾಟಕದಲ್ಲಿ ಭಾಷೆ ಸೊಗಸಾಗಿದೆ. ಅನೇಕ ಗಾದೆ ಮಾತುಗಳನ್ನು ಬಳಸಿಕೊಳ್ಳಲಾಗಿದೆ. ಅನೇಕ ಕಾವ್ಯಾತ್ಮಕ ನುಡಿಗಳಿವೆ.
ಜನಪದ ಪರಂಪರೆಗೆ ಸೇರಿರುವ ‘ಶೆಟವಿ’ ಕಥಾನಕ ಮತ್ತು ‘ಅಗ್ನಿರಾಜನ ವೃತ್ತಾಂತ’ ಕನ್ನಡದಲ್ಲಿ ಗಮನ ಸೆಳೆಯುತ್ತವೆ. ಶೆಟವಿ ಕಥೆಯಲ್ಲಿ ಸ್ವತಃ ತಾಯಿಯೇ ಮಗನನ್ನು ಮದುವೆಯಾದರೆ, ಅಗ್ನಿರಾಜನ ಕಥೆಯಲ್ಲಿ, ಅಗ್ನಿರಾಜನು ತನ್ನ ಮಗಳನ್ನೇ ವರಿಸುತ್ತಾನೆ. ಈ ಡಿಸ್ ಮತ್ತು ಅಂತಿಗೊನೆಯ ಪ್ರಸಂಗಗಳಲ್ಲಿಯೂ ಇದೇ ಇದೆ. ಅಮೃತಮತಿಯ ಕಥಾನಕಗಳು ಬೇರೆ. ಪುರಾಣಗಳಲ್ಲಿ ಬ್ರಹ್ಮ ತನ್ನ ಮಗಳನ್ನೇ ಮದುವೆಯಾಗುತ್ತಾನೆ. ಕೆಲವು ಬುಡಕಟ್ಟುಗಳಲ್ಲಿ ತಂದೆಯಾದವನೇ ಮಗನಿಗೆ ಕನ್ಯೆಯನ್ನು ಹುಡುಕಿಕೊಂಡು ಬಂದು ಮೊದಲು ತಾನು ಅನುಭವಿಸಿ ನಂತರದಲ್ಲಿ ಮಗ ವಯಸ್ಸಿಗೆ ಬಂದ ನಂತರ ಆತನಿಗೆ ಮದುವೆ ಮಾಡಿಕೊಡುತ್ತಾನೆ. ಹೀಗೆ ಭಾರತೀಯ ಕೌಟುಂಬಿಕ ಚೌಕಟ್ಟನ್ನು ಮೀರಿ ಬೆಳೆಯುವ ಇಂತಹ ಕಥಾನಕಗಳನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಮತ್ತು ಅಸಮಾನತೆಯ ವ್ಯವಸ್ಥೆಯ ಕ್ರೌರ್ಯಗಳ ಮೂಲಕವೇ ಚರ್ಚಿಸಬೇಕಾಗುತ್ತದೆ. ಅಂತಹ ಚರ್ಚೆಯೊಂದು ಇಲ್ಲಿ ನಡೆದಿದೆ.
“ಪ್ರಸ್ತುತ ನಾಟಕದಲ್ಲಿ ಮೇಲೆ ಉಲ್ಲೇಖಿಸಲಾದ ಕಾವ್ಯಗಳಲ್ಲಿನ ಪರಪಕ್ಷದವಾದದ ನೆಲೆಗಟ್ಟನ್ನು ಹಿಡಿದು ಪುನರ್ಲೇಖನವನ್ನು ಮಾಡಿದ್ದೇನೆ. ಹದಿನಾಲ್ಕು ಹದಿನೈದನೇ ಶತಮಾನಕ್ಕೆ ಸಂಪೂರ್ಣವಾಗಿ ಕಟ್ಟಿಕೊಳ್ಳಲಾಗದ ಪರಪಕ್ಷದ ನಿಲುವೊಂದನ್ನು ಈ ಆಧುನಿಕ ಸಂದರ್ಭದಲ್ಲಿ ದಕ್ಕಿಸಿಕೊಳ್ಳಲು ಸಾಧ್ಯವಾಗಬಹುದೇ ಎಂಬ ಕುತೂಹಲವೇ ಈ ಪುನರ್ಲೇಖನದ ಕೈಹಿಡಿದು ನಡೆಸಿರುವ ಅಂಶ. ಕುಮಾರರಾಮನಿಗೆ ಸಂಬಂಧ ಪಟ್ಟ ಆಚರಣೆಗಳು ಇನ್ನೂ ಕರ್ನಾಟಕದ ಉದ್ದಕ್ಕೂ ಜೀವಂತವಾಗಿವೆ”. (ಪು-xvii)
‘ಶೂಲಿಹಬ್ಬ’ ನಾಟಕದ ಪ್ರಾರಂಭದಲ್ಲಿ ಲೇಖಕಿ ಈ ಮಾತುಗಳನ್ನಾಡಿದ್ದಾರೆ. ಈ ಕಥಾ ಹಂದರದಲ್ಲಿ ಹೆಣ್ಣಿನ ಅಭಿವ್ಯಕ್ತಿಗೊಂದು ಅವಕಾಶವಿದೆ. ಅದನ್ನೇ ಕೇಂದ್ರವಾಗಿಟ್ಟುಕೊಂಡು ಈ ನಾಟಕ ರಚಿಸಲಾಗಿದೆ. ಇಲ್ಲಿ ರತ್ನಾಜಿ ಒಂದು ಹೆಣ್ಣು, ಸುಂದರಿಯಾದ ಈ ಯುವತಿಯನ್ನು ಮುದುಕ ರಾಜನೊಬ್ಬ ಮದುವೆಯಾದಾಗ ಅವಳಿಗೇನನಿಸಿರಬೇಡ? ಅರಸೊತ್ತಿಗೆಯ ಕಾಲವದು, ಅರಸ ಮೆಚ್ಚಿಕೊಂಡರೆ ಸಾಕು, ಯಾವ ಹೆಣ್ಣಾದರೂ ಅವನಲ್ಲಿಗೆ ಬರಲೇಬೇಕು. ಇಂತಹ ರಾಜ ಪ್ರಭುತ್ವವನ್ನು ರತ್ನಾಜಿ ಪ್ರಶ್ನಿಸುತ್ತಾಳೆ. ಎಷ್ಟೋ ಮುದಿ ಅರಸರು, ಎಷ್ಟೋ ಯುವತಿಯರನ್ನು ಮದುವೆಯಾಗಿದ್ದಾರೆ. ಸಂಬಂಧವಿಟ್ಟುಕೊಂಡಿದ್ದಾರೆ. ಆದರೆ ಅಲ್ಲಿಯ ಯುವತಿಯರು ಮೌನವಾಗಿದ್ದಾರೆ; ಆದರೆ ರತ್ನಾಜಿ ಇಲ್ಲಿ ದನಿಯೆತ್ತಿದ್ದಾಳೆ. ದನಿಯೆತ್ತುವ ಕ್ರಿಯೆಯೇ ಇಲ್ಲಿ ಪ್ರಮುಖವಾಗಿದೆ. ಇದೇ ಎಳೆಯನ್ನು ಹಿಡಿದುಕೊಂಡು ರಚನೆಯಾದ ಈ ನಾಟಕವು ಇಂದಿನ ಸ್ತ್ರೀವಾದಿ ಅಧ್ಯಯನದ ಮಹತ್ವದ ಕೃತಿಯಾಗಿದೆ.
ರತ್ನಾಜಿ ತನ್ನ ಅಸ್ತಿತ್ವಕ್ಕಾಗಿ ಇಲ್ಲಿ ಹೋರಾಡುತ್ತಾಳೆ. ಮುದುಕ ಅರಸನೊಂದಿಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದಾಗ, ಅವನ ಮಗನಾಗಿದ್ದ ರಾಜಕುಮಾರನನ್ನೇ ಪಡೆಯಬೇಕೆಂದು ಪ್ರಯತ್ನಿಸುತ್ತಾಳೆ. ಆ ಪ್ರಯತ್ನ ವಿಫಲವಾದಾಗ ಮುದುಕ ಅರಸನಿಗೆ ಅವನ ಮಗನ ವಿರುದ್ಧ ದೂರು ಕೊಟ್ಟು ಆತ ಶಿಕ್ಷೆಗೊಳಗಾಗುವಂತೆ ಮಾಡುತ್ತಾಳೆ. ತನಗಾದ ಅಪಮಾನದ ನೋವಿನಿಂದ ಸಹಿಸಿಕೊಳ್ಳಲಾಗದೆ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಹೀಗಾಗಿ ರತ್ನಾಜಿ ಇಲ್ಲಿ ಖಳನಾಯಕಿಯಾಗಿರದೆ, ತನ್ನ ಆಸ್ಮಿತೆಗಾಗಿ ಚಡಪಡಿಸುವ ಕರುಣಾಜನಕ ಪಾತ್ರವಾಗಿ ಸೃಷ್ಟಿಯಾಗಿದ್ದಾಳೆ.
“ಮದುವೆ ವಯಸ್ಸಿನ ಮಗನಿರೋನ್ನ ಮದುವೆ ಗಂಡು ಮಾಡಿದ್ರು. ತಾಯಿ ವಯಸ್ಸಿನವಳನ್ನು ಸವತಿ ಮಾಡಿದ್ರು. ಸಪ್ತಸಾಗರಗಳನ್ನು ದಾಟಿ ಬಂದು ಕುದುರೆ ಏರಿಸಿಕೊಂಡು ಹೋಗೋ ರಾಜಕುಮಾರನ ಕನಸನ್ನು ಮಗಳಿಗೆ ತೋರಿಸಿ, ಈ ಗೂರಲು ಗುಬೆ ಕೈಗೆಕೊಟ್ಟರು. ನನ್ನ ಈ ಅರಮನೆ ಸೂಳೆ ಮಾಡಿದ್ರು”-(ಪು:14) ರತ್ನಾಜಿಯ ಈ ಮಾತುಗಳಲ್ಲಿ ಅವಳಿಗಾದ ಅನ್ಯಾಯ ಸ್ಪಷ್ಟವಾಗುತ್ತದೆ. ಈ ವ್ಯವಸ್ಥೆ ಹೆಣ್ಣನ್ನು ಇಷ್ಟೇಕೆ ಕ್ರೌರ್ಯದಿಂದ ಕಾಣುತ್ತದೆಯೆಂಬ ಆತಂಕವಿದೆ. ಇಲ್ಲಿ ವಸ್ತುಗಳ ವ್ಯಾಪಾರ ನಡೆಯದೆ ಸಂಬಂಧಗಳ ವ್ಯಾಪಾರ ನಡೆದಿದೆಯೆಂಬುದು ಅವಳ ಇಂಗಿತವಾಗಿದೆ.
“ಮಲಗುವುದಕ್ಕೆ ಮಗ್ಗುಲಲ್ಲಿರಬೇಕಿರೋದು ದೇಹ ಅಲ್ಲ, ಭಾವನೆಗಳು, ಕನಸುಗಳು”-(ಪು:16)
“ಈ ಜಗತ್ತಿನ ನ್ಯಾಯವೇ ಹೀಗೆ, ಯಾರಿಗೋ ಸೇರಬೇಕಾದ್ದನ್ನು ಇನ್ನಾರಿಗೋ ಕೊಡುವುದು”-(ಪು:23)
“ಕೇಳಿಸ್ಕೊಳ್ಳೋದೇನು ಬಂತು, ಶೂಲ ಎದೆಯಲ್ಲಿನಟ್ಟಿದೆ. ಕುಮಾರರಾಮರ ಬೊಲ್ಲನನ್ನೇರಿ ಬರ್ತಾ ಇರೋದು ಕಣ್ಮುಂದೆ ತೇಲ್ತಾಯಿದೆ” -(ಪು:24)
“ನೀವು ಚಿಕ್ಕಮ್ಮ ಅಂದದ್ದು ಗಿಳಿ ಪಾರಿವಾಳವನ್ನ ಅಮ್ಮ ಅಂದಂಗಾಯ್ತು”-(ಪು:27)
ಎಂದು ಮಹಾರಾಜರು ಮಗನಿಗೆಂದು ನೋಡಿದ ಹೆಣ್ಣ ಮೇಲೆ ಆಸೆ ಪಟ್ಟರೋ ಅಂದೇ ಅದೆಲ್ಲ ಗಾಳಿಗೆ ತೂರಿಹೋಯ್ತು”-(ಪು:29)
“ಅರಮನೆ ಜನ ತಿಳಿದುಕೊಂಡಿರುವ ಹಾಗೆ ತಳಿರು ಕಂಡಕ್ಷಣ ಮೈಮರೆತು ಮೇಯುವ ಕುರಿ ಅಲ್ಲ ನಾನು” -(ಪು:30)
ರತ್ನಾಜಿಯ ಈ ಎಲ್ಲ ಸಂಭಾಷಣೆಗಳಲ್ಲಿ ಅವಳ ವ್ಯಕ್ತಿತ್ವವೆಂತಹದೆಂಬುದು ಸ್ಪಷ್ಟವಾಗುತ್ತದೆ. ತನಗಾದ ಅನ್ಯಾಯದ ಬಗೆಗೆ ಅವಳಲ್ಲಿ ನೋವು ತುಂಬು ಕೊಂಡಿದೆ. ಇದು ಕೇವಲ ನೋವಿನ ಅಭಿವ್ಯಕ್ತಿ ಮಾತ್ರವಾಗಿರದೆ, ಪ್ರತಿಭಟನೆಯ ಮಾರ್ಗವೂ ಆಗಿದೆ. ಹದಿನೈದನೇ ಶತಮಾನದ ಹೆಣ್ಣೊಂದು ಹೀಗೆ ಸೇಡು ತೀರಿಸಿಕೊಳ್ಳುವುದರ ಮೂಲಕ ಪ್ರತಿಭಟನೆಯನ್ನು ಪ್ರಾರಂಭಿಸಿದ್ದು ಇಲ್ಲಿ ಮುಖ್ಯವಾಗುತ್ತದೆ.
ಹಾಗೆ ನೋಡಿದರೆ ಇಲ್ಲಿಯ ಕಂಪಿಲರಾಯನ ಪಾತ್ರ ಕ್ರೌರ್ಯದಿಂದ ಕೂಡಿರದೆ ತುಂಬ ಸಪ್ಪೆಯಾಗಿದೆ ಕಂಪಿಲರಾಯ ರತ್ನಾಜಿಯೊಂದಿಗೆ ಇಲ್ಲಿ ಮಾತನಾಡುವ ಮಾತುಗಳು ಕೇವಲ ಮೂರು ಮಾತ್ರ. ಪ್ರಾರಂಭದಲ್ಲಿ ಕುಮಾರರಾಮನೊಂದಿಗಿಷ್ಟು ಸಂಭಾಷಣೆಗಳಿವೆ. ಕಂಪಿಲರಾಯನ ಪಾತ್ರ ಇಲ್ಲಿ ಬೆಳವಣಿಗೆಯೇ ಆಗಿಲ್ಲ. ರತ್ನಾಜಿಯ ಸಿಟ್ಟಿರಬೇಕಾದದ್ದು ಕಂಪಿಲರಾಯನ ಮೇಲೆ, ಆದದಕ್ಕೆ ಇಲ್ಲಿ ಹೆಚ್ಚಿನ ಅವಕಾಶ ದೊರೆತಿಲ್ಲ. ಕಂಪಿಲರಾಯನೊಂದಿಗೆ ರತ್ನಾಜಿ ನೇರವಾಗಿ ಮುಖಾಮುಖಿಯಾಗಿದ್ದರೆ ನಾಟಕಕ್ಕೆ ಹೊಸ ತಿರುವು ಕಾಣಿಸಿಕೊಳ್ಳುತಿತ್ತು.
ರತ್ನಾಜಿ ತನ್ನನ್ನು ಕಾಮುಕತನದಿಂದ ಕಂಡದ್ದು ಕುಮಾರರಾಮನಿಗೆ ಸರಿಯೆನ್ನಿಸುವುದಿಲ್ಲ. ಹಾಗೆ ಅವಳಿಗೆ ಕಾಮವಾಸನೆಯೇ ಮುಖ್ಯವಾಗಿದ್ದರೆ ಈಡೇರಿಸಿಕೊಳ್ಳಲು ಹಲವು ಮಾರ್ಗಗಳಿದ್ದುವೆಂದು ಹೇಳುತ್ತಾ “ಅನೈತಿಕ ಸಂಬಂಧಗಳು ಅರಮನೆಗಳಿಗೇನು ಹೊಸದಲ್ಲ” (ಪು:43)ವೆಂದು ಸ್ಪಷ್ಟಪಡಿಸುತ್ತಾನೆ. ಕಂಪಿಲರಾಯನಿಗೆ ತನ್ನ ತಪ್ಪಿನ ಅರಿವಾಗಿದೆ. ನಾಲ್ಕನೇ ದೃಶ್ಯದಲ್ಲಿ “ಅಪ್ಪಾಜಿ ನೀವು ರತ್ನಾಜಿ ಯವರನ್ನು ಕ್ಷಮೀಸಬೇಕೆಂದು” ಕುಮಾರ ಹೇಳಿದಾಗ ಕಂಪಿಲರಾಯ ಹೀಗೆ ಹೇಳುತ್ತಾನೆ. “ಅಯ್ಯೋ ರಾಮ, ನಾನು ಕ್ಷಮೆಯ ಮಾತನ್ನಾಡುವುದು ಹೊಸಲು ನೀರಿನಿಂದ ಕೊಳೆತೊಳೆಯಲು ಹೊರಟಂತೆ” (ಪು:41) ಎನ್ನುತ್ತಾನೆ. ಅಂದರೆ ಕಂಪಿಲರಾಯನಿಗೆ ತನ್ನ ತಪ್ಪು ಅರಿವಾದದ್ದು ಇಲ್ಲಿ ಸ್ಪಷ್ಟವಾಗಿದೆ. ಕುಮಾರರಾಮನಿಗೂ ತಂದೆಯ ಬಗ್ಗೆ ಬೇಸರವಿದೆ. ರತ್ನಾಜಿಗೆ ಕುಮಾರ ಹೀಗೆ ಹೇಳುತ್ತಾನೆ.
“ನೀವು ಆರೋಪ ಹೊರಿಸಿದ್ದೇ ತಡ, ತಂದೆಯಾಗಿ ತಿದ್ದಬೇಕಾಗಿದ್ದ ಮಹಾರಾಜರು ಸಂಬಂಧಗಳನ್ನು ಮರೆತು ರಾಜಕಾರಣಿಯಾದರು. ಅಂದೇ ನಾನು ಅರಿತೆ, ಭಾವನೆಗಳು-ಸಂಬಂಧಗಳು ಎಲ್ಲವೂ ಅಧಿಕಾರಕ್ಕೆ ಮೆಟ್ಟಿಲುಗಳು ಮಾತ್ರ ಎಂದು” (ಪು:55) ಕುಮಾರರಾಮನ ಈ ಮಾತು ಕೇವಲ ಅಂದಿನ ಕಾಲಕ್ಕೆ ಮಾತ್ರ ಸೀಮಿತವಾಗಿರದೆ, ಇಂದಿಗೂ ತುಂಬ ಪ್ರಸ್ತುತವಾಗಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಹೇಗೆ ಸಂಬಂಧಗಳನ್ನೇ ಅವಮಾನಿಸುತ್ತಾನೆಂಬುದು ಈ ನಾಟಕದಿಂದ ಸ್ಪಷ್ಟವಾಗುತ್ತದೆ.
ಈ ನಾಟಕದಲ್ಲಿ ಬಂದಿರುವ ಗಾದೆ ಮಾತುಗಳಂತೂ ತುಂಬ ಪರಿಣಾಮಕಾರಿಯಾಗಿವೆ. ಅವುಗಳನ್ನಿಲ್ಲಿ ನೋಡಬಹುದಾಗಿದೆ.
ಹಾದೀಲಿ ಹೋಗೋ ಮಾರೀನ ಮನೆ ಒಕ್ಕಿಸಿಕೊಂಡಂಗೆ (ಪು:4)
ಗೆದ್ದಲು ಕಟ್ಟಿದ ಗೂಡಲ್ಲಿ, ಹಾವು ಸೇರಿದಂಗೆ (ಪು:7)
ಪಾಲಿಗೆ ಬಂದದ್ದು ಪರಮಾನ್ನ (ಪು:14)
ಮೀಸೆ ಬಂದೀನಿಗೆ ದೇಶ ಕಾಣಲ್ಲ (ಪು:27)
ಈ ನಾಟಕದಲ್ಲಿ ಹೊಸ ಚರ್ಚೆಯೊಂದನ್ನು ಉಷಾ ಅವರು ಪ್ರಾರಂಭಿಸಿದ್ದಾರೆ. ಇದು ತುಂಬ ಸ್ವಾಗತಾರ್ಹ. ಆದರೆ ಆ ಚರ್ಚೆ ಇನ್ನೂ ವಿಸ್ತೃತವಾಗಿ, ಪರಿಣಾಮಕಾರಿಯಾಗಿ ಬರಬಹುದಾಗಿತ್ತು. ಮುಖ್ಯವಾಗಿ ಕಂಪಿಲರಾಯನ ಪಾತ್ರ ಇಲ್ಲಿ ಹೆಸರಿಗೆ ಮಾತ್ರವಿದೆ. ಆ ಪಾತ್ರದ ಬೆಳವಣಿಗೆಯೇ ಆಗಿಲ್ಲ. ಪ್ರಭುತ್ವದ ಪ್ರತಿನಿಧಿಯಾಗಿರುವ ಆ ಪಾತ್ರವೇ ಗೌಣವಾದಾಗ ಯಾರೊಂದಿಗೆ ಮುಖಾಮುಖಿಯಾಗುವುದು? ರತ್ನಾಜಿಯ ಕ್ರೋಧದ ನಡುವೆಯೂ, ಕುಮಾರಾಮ ಇಲ್ಲಿ ಆದರ್ಶ ಪುರುಷನಾಗಿ, ವೀರ ರಾಜಕುಮಾರನಾಗಿ ಕಾಣಿಸಿಕೊಳ್ಳುತ್ತಾನೆ.
ರತ್ನಾಜಿ ಪಾತ್ರ ಮಾತ್ರ ಇಲ್ಲಿ ಬೆಳೆದು ನಿಂತಿದೆ. ಆಕೆ ಕಂಪಿಲರಾಯನನ್ನು ಮದುವೆಯಾಗಿ ಬಂದಾಗಿನಿಂದ ನಡೆದ ಘಟನೆಗಳೆಲ್ಲ ಇಲ್ಲಿ ಫ್ಲಾಟ್ ಬ್ಯಾಕ್ ತಂತ್ರದ ಮೂಲಕ ಬಿಚ್ಚಿ ಕೊಂಡಿವೆ. ಸಂಗಿಯೊಂದಿಗೆ ನಡೆಸುವ ರತ್ನಾಜಿಯ ಸಂಭಾಷಣೆಗಳು ತುಂಬ ಮುಖ್ಯವಾಗಿವೆ. ಇಲ್ಲಿ ಸಂಗೀಯೇ ರತ್ನಾಜಿಯಾಗಿರುವವಷ್ಟು ಅವರಿಬ್ಬರ ಸಂಬಂಧ ಗಟ್ಟಿಯಾಗಿರುವುದು ಕಾಣಿಸಿಕೊಂಡಿದೆ. ಎಂ. ಉಷಾ ಅವರು ಈ ನಾಟಕದ ಮೂಲಕ ಹೊಸ ಪ್ರಯೋಗವೊಂದನ್ನು ಪ್ರಾರಂಭಿಸಿದ್ದಾರೆ. ಅವರಿಂದ ಇನ್ನೂ ಹೆಚ್ಚಿನ ನಾಟಕಗಳು ರಚನೆಯಾಗಲೆಂದು ಹಾರೈಸುತ್ತೇನೆ.
ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220
ಈ ಅಂಕಣದ ಹಿಂದಿನ ಬರಹಗಳು:
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.