Date: 05-04-2023
Location: ಬೆಂಗಳೂರು
“ದೇಹದ ಲಕ್ಷಣಗಳಲ್ಲಿ ಹೆಣ್ಣು-ಗಂಡುಗಳೆಂಬ ಭೇದವಿದೆಯೇ ಹೊರತು, ಆತ್ಮಕ್ಕೆ ಹೆಣ್ಣು-ಗಂಡು ಎಂಬ ಭೇದವಿಲ್ಲವೆಂದು ಸ್ಪಷ್ಟಪಡಿಸಿರುವ ಗೊಗ್ಗವ್ವೆ ಸಾಮಾಜಿಕದ ಮೂಲಕ ಆಧ್ಯಾತ್ಮ ಹೇಳುತ್ತಾಳೆ. ಆಧ್ಯಾತ್ಮವನ್ನೇ ಸಾಮಾಜಿಕವೆಂದು ಪರಿಗಣಿಸುತ್ತಾಳೆ” ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ಸಂಸಾರವನ್ನು ನಿರಾಕರಿಸಿ ಬಾಳಿದ ಗೊಗ್ಗವ್ವೆಯ ಬಗ್ಗೆ ಬರೆದಿದ್ದಾರೆ.
ಗೊಗ್ಗವ್ವೆ
ಗೊಗ್ಗವ್ವೆಯ ಬಗೆಗೆ "ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ", "ಭೈರವೇಶ್ವರ ಕಾವ್ಯ", "ಗುರುರಾಜ ಚಾರಿತ್ರ" ಈ ಮೊದಲಾದ ಪುರಾಣಕಾವ್ಯಗಳಲ್ಲಿ ಪ್ರಸ್ತಾಪವಿದೆ. "ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ" ಕೃತಿಯಲ್ಲಿ ಗೊಗ್ಗವ್ವೆಯ ಹೆಸರಿನ ಜತೆಗೆ ನಂಬಿಯಣ್ಣ ಮತ್ತು ಕೂಡಗಲೂರ ದೊರೆ ಚೇರಮರಾಯರ ಹೆಸರುಗಳು ಸೇರಿಕೊಂಡಿವೆ. ಚೇರಮ ದೊರೆಗೆ ಕೈಲಾಸದ ದಾರಿಯನ್ನು ಗೊಗ್ಗವ್ವೆ ತೋರಿಸದಳೆಂದು ಹೇಳಲಾಗಿದೆ. ಚೇರಮರಾಯ-ನಂಬಿಯಣ್ಣ ಈ ಮೊದಲಾದ 63 ಪುರಾತನ ಶರಣರ ಕಾಲ 8ನೇ ಶತಮಾನವಾಗಿದೆ. ಈ ಪುರಾಣಕಾವ್ಯಗಳಲ್ಲಿ ಪ್ರಕಟವಾಗಿರುವ ಗೊಗ್ಗವ್ವೆ 8ನೇ ಶತಮಾನದ 63 ಪುರಾತನ ಶರಣರ ಕಾಲದವಳಾಗಿದ್ದಾಳೆ. ವಚನಕಾರ್ತಿ ಗೊಗ್ಗವ್ವೆ 12ನೇ ಶತಮಾನದ ಶರಣರ ಕಾಲದವಳಾಗಿದ್ದಾಳೆ. ಈ ಎಲ್ಲಾ ಚರ್ಚೆಯಿಂದ ಈಕೆಯ ಕಾಲವನ್ನು ಕ್ರಿ.ಶ1160 ಎಂದು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ.
ಜನಪದ ಆಚರಣೆಗಳಲ್ಲಿ ಗೊಗ್ಗಯ್ಯರು ಬರುತ್ತಾರೆ. ಇನ್ನು ಗುಳ್ಳವ್ವನ ಹಬ್ಬದಲ್ಲಿ ಗುಳ್ಳವ್ವನ ಮುಂದೆ ಗೊಗ್ಗವ್ವೆಯ ಮೂರ್ತಿ ಇಡುತ್ತಾರೆ. ಜನಪದ ಐತಿಹ್ಯಗಳಿಗೂ ಗೊಗ್ಗವ್ವೆಯ ಜೀವನಚರಿತ್ರೆಗೂ ಏನಾದರೂ ಸಂಬಂಧವಿದೆಯೇ? ಎಂಬುದರ ಬಗೆಗೆ ಸಂಶೋಧನೆಯಾಗಬೇಕಾಗಿದೆ. ಈಕೆಯ ವಚನಾಂಕಿತವನ್ನು ಗಮನಿಸಿದಾಗ, ಈಕೆ ನಾಥಪಂಥದಿಂದ ಬಂದಿರಬಹುದಾದ ಶರಣೆಯಾಗಿರಬೇಕೆಂದೆನಿಸುತ್ತದೆ. ಗೊಗ್ಗವ್ವೆಯು ಶಿವನ ದೃಢಭಕ್ತೆ. ಶಿವಶರಣೆಯರಲ್ಲಿ ಎರಡು ರೀತಿಯ ಶರಣೆಯರಿದ್ದಾರೆ. ಅನೇಕೆರು ಮದುವೆಯಾಗಿ ಶರಣ ದಂಪಂತಿಗಳಾಗಿ ಬದುಕಿದವರು.
ಇನ್ನು ಕೆಲವರು ಮದುವೆಯಾಗದೆ ಶಿವನನ್ನೇ ದೇವರೆಂದು, ಪತಿಯೆಂದು ನಂಬಿ ಪೂಜಿಸಿದವರು. ಗೊಗ್ಗವ್ವೆ ಎರಡನೇ ಪರಂಪರೆಗೆ ಸೇರುತ್ತಾಳೆ. ಇದೇ ಪರಂಪರೆಗೆ ಬೊಂತಾದೇವಿ, ಸತ್ಯಕ್ಕ ಮೊದಲಾದ ಶರಣೆಯರು ಸೇರುತ್ತಾರೆ. ಪತಿಯ ಸಹಕಾರದೊಂದಿಗೆ ಬದುಕುವುದು ಬೇರೆ, ದೇವರೇ ಪತಿಯೆಂದು ಏಕಾಂಗಿಯಾಗಿ ಬದುಕುವುದು ಬೇರೆ. ಎರಡನೇ ಮಾರ್ಗ ತುಂಬ ಕಠಿಣವಾದುದು. ಅಂತಹ ಕಠಿಣ ಮಾರ್ಗವನ್ನೇ ಗೊಗ್ಗವ್ವೆ ಆರಿಸಿಕೊಂಡಿದ್ದಾಳೆ.
ಕೇರಳ ರಾಜ್ಯದ ಅವಲೂರು ಗ್ರಾಮದಲ್ಲಿ ಶಿವಭಕ್ತ ದಂಪತಿಗಳ ಉದರದಲ್ಲಿ ಜನಿಸಿದ ಗೊಗ್ಗವ್ವೆ ಒಬ್ಬ ಶಿವಭಕ್ತೆ. ಬೊಂತಾದೇವಿಯ ಹಾಗೆ ಈಕೆಯೂ ಬಾಲ್ಯದಿಂದಲೇ ವೈರಾಗ್ಯತಾಳಿ ಶಿವಭಕ್ತರಿಗೆ ಧೂಪವನ್ನರ್ಪಿಸುವ ಕಾಯಕದಲ್ಲಿ ತೊಡಗುತ್ತಾಳೆ. ಗೊಗ್ಗವ್ವೆ ವಯಸ್ಸಿಗೆ ಬಂದಾಗ ತಂದೆ-ತಾಯಿಗಳು ಈಕೆಗೆ ಮದುವೆ ಮಾಡಲು ವರ ಹುಡುಕುತ್ತಿದ್ದಾಗ, ಈಕೆ ತನಗೆ ಮದುವೆ ಬೇಡವೆಂದು ನಿರಾಕರಿಸುತ್ತಾಳೆ. ತಂದೆ-ತಾಯಿ ಒತ್ತಾಯ ಮಾಡಿದಾಗ ಮನೆಯಿಂದ ಓಡಿಹೋಗಿ ದೇವಾಲಯ ಸೇರಿಕೊಳ್ಳುತ್ತಾಳೆ. ಆಕೆಯ ಮನಸ್ಸಿಗೆ ವಿರುದ್ಧ ಹೋಗಬಾರದೆಂದು ನಿರ್ಣಯಿಸಿದ ತಂದೆ-ತಾಯಿ ಆಕೆಯನ್ನು ದೇವಾಲಯದಿಂದ ಮನೆಗೆ ಕರೆತರುತ್ತಾರೆ. ಅಂದಿನಿಂದ ಗೊಗ್ಗವ್ವೆ ಧೂಪ ಅರ್ಪಿಸುವ ಕಾಯಕ ಕೈಗೊಂಡು ಧೂಪದ ಗೊಗ್ಗವ್ವೆಯಾಗಿ ಆಧ್ಯಾತ್ಮ ಕ್ಷೇತ್ರದಲ್ಲಿ ಬೆಳೆದುನಿಲ್ಲುತ್ತಾಳೆ. ಬೊಂತಾದೇವಿಯ ಕಥೆಯಲ್ಲಿ ಬರುವಂತೆ ಶಿವನು ಈಕೆಯನ್ನು ಪರೀಕ್ಷಿಸಲು ಸುಂದರ ಯುವಕನ ರೂಪದಲ್ಲಿ ಬರುತ್ತಾನೆ. ತನ್ನನ್ನು ಮದುವೆಯಾಗೆಂದು ಕೇಳುತ್ತಾನೆ. ಆಗ ಆಕೆ ತನಗೆ ಸಂಸಾರದಲ್ಲಿ ಆಸಕ್ತಿಯಿಲ್ಲವೆಂದು ನಿರಾಕರಿಸುತ್ತಾಳೆ. ಆಗ ಶಿವನು ಅವಳನ್ನು ಹಾರೈಸಿ, ನೀನು ಧೂಪದ ಗೊಗ್ಗವ್ವೆಯಾಗಿ ಪ್ರಸಿದ್ಧಳಾಗೆಂದು ಹೇಳಿ ಹೋಗುತ್ತಾನೆ. ಹೀಗೆ ಬೊಂತಾದೇವಿ ಮತ್ತು ಗೊಗ್ಗವ್ವೆಯರ ಬದುಕಿನಲ್ಲಿ ಸಾಮ್ಯತೆಯಿದೆ. ಇವರಿಬ್ಬರೂ ಶರಣೆಯರು ವೈರಾಗ್ಯಮೂರ್ತಿಗಳಾಗಿ ಸಂಸಾರವನ್ನು ನಿರಾಕರಿಸುತ್ತಾರೆ.
ಸ್ವತಃ ಶಿವನೇ ಮದುವೆಯಾಗುವುದಾಗಿ ಕೇಳಿಕೊಂಡರೂ ಒಪ್ಪದೆ, ತಾವು ನಂಬಿದ ತತ್ವಕ್ಕೆ ಬದ್ಧರಾಗುತ್ತಾರೆ. ಹೀಗೆ ಬದುಕಿನಲ್ಲಿ ನಿಷ್ಠೆ, ಬದ್ಧತೆ, ಪ್ರಾಮಾಣಿಕತೆಯಂತಹ ಮೌಲ್ಯಗಳನ್ನು ಈ ಶರಣೆಯರಲ್ಲಿ ಕಾಣಬಹುದಾಗಿದೆ.
``ನಾಸ್ತಿನಾಥಾ'' ಎಂಬ ಅಂಕಿತದಲ್ಲಿ ಗೊಗ್ಗವ್ವೆ ಆರು ವಚನಗಳನ್ನು ರಚಿಸಿದ್ದಾಳೆ. ಹೆಣ್ಣು-ಗಂಡು ಎಂಬ ಭೇದಭಾವ ಮಾಡಬಾರದೆಂದು ಹೇಳಿದ್ದಾಳೆ.
ಈ ವ್ಯವಸ್ಥೆಯಲ್ಲಿ ಹೆಣ್ಣನ್ನು ಮೊದಲಿನಿಂದಲೂ ಕೆಳದರ್ಜೆಯ ಪ್ರಜೆಯೆಂದು ಪರಿಗಣಿಸಲಾಗಿದೆ. ಶರಣರನ್ನು ಬಿಟ್ಟರೆ, ಇತರ ಧಾರ್ಮಿಕ ಮುಖಂಡರೆಲ್ಲಾ ಸ್ತ್ರೀಗೆ ಸಮಾನ ಅವಕಾಶಗಳನ್ನು ನೀಡಿರುವುದು ತುಂಬ ಕಡಿಮೆ. ಆಧ್ಯಾತ್ಮ, ಹೆಣ್ಣಿಂದ ತುಂಬ ದೂರವಿತ್ತು.
ಶರಣರು ಅವಳಿಂದಲೇ ಆಧ್ಯಾತ್ಮವನ್ನು ಪ್ರಾರಂಭಿಸಿದರು. "ಕೂಡಲಸಂಗಮದೇವನ
ನಿಲುವು ಕನ್ಯೆಯ ಸ್ನೇಹದಂತಿದ್ದಿತ್ತು" ಎಂದು ಹೇಳುವುದರ ಮೂಲಕ ಬಸವಣ್ಣ ಸ್ತ್ರೀ
ಸಮಾನತೆಯನ್ನು ಹುಟ್ಟುಹಾಕಿದ. ಇಂತಹ ವಚನಚಳುವಳಿಯ ಮೂಲಕ ಬೆಳೆದ ಗೊಗ್ಗವ್ವೆಯಂತಹ ಶರಣೆಯರು ಸಹಜವಾಗಿಯೇ ಸ್ತ್ರೀ ಶೋಷಣೆಯನ್ನು ನಿಲ್ಲಿಸಲು ಪ್ರಯತ್ನಿಸಿದರು. ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿದರು.
"ಗಂಡು ಮೋಹಿಸಿ, ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು.
ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ
ನಾಸ್ತಿನಾಥನು ಪರಿಪೂರ್ಣನೆಂಬೆ"
- ಗೊಗ್ಗವ್ವೆ (ಸ.ವ.ಸಂ.5, ವ-776)
ಗೊಗ್ಗವ್ವೆಯ ಈ ವಚನವು ಸ್ತ್ರೀಸಮಾನತೆಗೆ ಬರೆದ ವ್ಯಾಖ್ಯೆಯಂತಿದೆ. ಒಂದು ತರ್ಕದ ಮೂಲಕ ಈ ವಚನ ಪ್ರಾರಂಭವಾಗುತ್ತದೆ.
ಗೊಗ್ಗವ್ವೆ ಇಲ್ಲಿ ಸಮಾಜದಲ್ಲಿರುವ ಆಚರಣೆ, ನಂಬಿಕೆಗಳನ್ನು ಮುಂದಿಟ್ಟುಕೊಂಡೇ ತನ್ನ ಮಾತು ಪ್ರಾರಂಭಿಸುತ್ತಾಳೆ. ಒಂದು ಗಂಡು ಹೋಗಿ ಒಂದು ಹೆಣ್ಣನ್ನು ಮೋಹಿಸಿದಾಗ ಅದು ಅವನ ಒಡವೆಯಾಗುತ್ತದೆ. ಈ ಸಂಪ್ರದಾಯವನ್ನು ಗೊಗ್ಗವ್ವೆ ವಿರೋಧಿಸುವುದಿಲ್ಲ. ಅದರ ಬದಲಾಗಿ ತಾರ್ಕಿಕ ಮಾತಿನ ಮೂಲಕ ಈ ಸಂಪ್ರದಾಯವನ್ನು ಪ್ರಶ್ನಿಸುತ್ತಾಳೆ. ಒಂದು ಗಂಡು ಹೋಗಿ ಒಂದು ಹೆಣ್ಣನ್ನು ಮೋಹಿಸಿದಾಗ ಹೇಗೆ ಅದು ಅವನ ಒಡವೆಯಾಗುತ್ತದೆಯೋ, ಅದೇ ರೀತಿ ಒಂದು ಹೆಣ್ಣು ಹೋಗಿ ಒಂದು ಗಂಡನ್ನು ಮೋಹಿಸಿದಾಗ ಆತನೇಕೆ ಅವಳ ಒಡವೆಯಾಗುವುದಿಲ್ಲ? ಎಂದು ಪ್ರಶ್ನಿಸುತ್ತಾಳೆ.
ಸಮಾಜದಲ್ಲಿರುವ ಯಥಾಸ್ಥಿತಿಯನ್ನು, ಅಂದಿನ ನಂಬಿಕೆ ಆಚರಣೆಗಳನ್ನು ವಿರೋಧಿಸದೆ, ಅವುಗಳ ಮೂಲಕವೇ ತರ್ಕವೊಂದನ್ನು ಹುಟ್ಟುಹಾಕಿದ ಗೊಗ್ಗವ್ವೆ ಇಲ್ಲಿ ಲಿಂಗ ಅಸಮಾನತೆಯ ಬಗೆಗೆ, ಲಿಂಗರಾಜಕಾರಣದ ಬಗೆಗೆ ಹೊಸ ರೀತಿಯ ಪ್ರತಿಭಟನೆಯನ್ನು ಮಾಡಿದ್ದಾಳೆ. ಗಂಡು ಮೋಹಿಸಿದಾಗ ಆ ಹೆಣ್ಣು ಅವನ ಒಡವೆಯಾಗಬೇಕಾದರೆ, ಹೆಣ್ಣು ಮೋಹಿಸಿದಾಗ ಆ ಗಂಡು, ಅವಳ ಒಡವೆಯೇಕಾಗಬಾರದು? ಎಂಬ ಅವಳ ಪ್ರಶ್ನೆಗೆ ಇಂದಿಗೂ ಉತ್ತರವಿಲ್ಲ. ಮುಂದಿನ ಸಾಲುಗಳಲ್ಲಿ ಇದಕ್ಕವಳು ಪರಿಹಾರ ಸೂಚಿಸಿದ್ದಾಳೆ. ಈ ಅಸಮಾನತೆ, ಈ ಭೇದ ಹೋಗಬೇಕಾದರೆ ಈ ಎರಡರ ದ್ವಂದ್ವ ಮೊದಲು ಹೋಗಬೇಕೆಂದು ಹೇಳಿ, ಎರಡೆಂಬುದನ್ನು ಅಳಿದು ಒಂದಾಗಬೇಕೆಂದು ಹೇಳುತ್ತಾಳೆ.ದ್ವೈತವಳಿದು ಅದ್ವೈತವಾಗುವ, ಅದ್ವೈತ ಬೆಳೆದು ಶಕ್ತಿವಿಶಿಷ್ಟಾದ್ವೈತವಾಗುವ
ಬಹುಮಹತ್ವದ ಬೆಳವಣಿಗೆ ಈ ವಚನದಲ್ಲಿದೆ.
ಧೂಪದ ಕಾಯಕ ಮಾಡುತ್ತಿದ್ದ ಒಬ್ಬ ಸಾಮಾನ್ಯ ಮಹಿಳೆ ಗೊಗ್ಗವ್ವೆ, ಅಂದು ಈ ಪ್ರಶ್ನೆಯ ಮೂಲಕ ಅಸಮಾನತೆಯ ವ್ಯವಸ್ಥೆಯನ್ನು ವಿರೋಧಿಸಿದ್ದಾಳೆ. ಮೊದಲಿನ ವಚನದಲ್ಲಿ ಹೇಳಿದಂತೆ, ದೇಹದ ಲಕ್ಷಣಗಳಲ್ಲಿ ಹೆಣ್ಣು-ಗಂಡುಗಳೆಂಬ ಭೇದವಿದೆಯೇ ಹೊರತು, ಆತ್ಮಕ್ಕೆ ಹೆಣ್ಣು-ಗಂಡು ಎಂಬ ಭೇದವಿಲ್ಲವೆಂದು ಸ್ಪಷ್ಟಪಡಿಸಿರುವ ಗೊಗ್ಗವ್ವೆ ಸಾಮಾಜಿಕದ ಮೂಲಕ ಆಧ್ಯಾತ್ಮ ಹೇಳುತ್ತಾಳೆ. ಆಧ್ಯಾತ್ಮವನ್ನೇ ಸಾಮಾಜಿಕವೆಂದು ಪರಿಗಣಿಸುತ್ತಾಳೆ.
"ಮೊಲೆಮುಡಿ ಬಂದಡೆ ಹೆಣ್ಣೆಂಬರು
ಮೀಸೆಕಾಸೆ ಬಂದಡೆ ಗಂಡೆಂಬರು
ಈ ಉಭಯದ ಜ್ಞಾನ
ಹೆಣ್ಣೊ ಗಂಡೋ ನಾಸ್ತಿನಾಥ?"
ಗೊಗ್ಗವ್ವೆ (ಸ.ವ.ಸಂ.5, ವ-779, 1993)
ಜೇಡರದಾಸಿಮಯ್ಯನ ವಚನವನ್ನು ಈ ವಚನ ಹೋಲುತ್ತದೆ. ಇವು ಪಾಠಾಂತರದ ವಚನಗಳೊ ಅಥವಾ ಆ ವಚನಕಾರರ ಸ್ವತಂತ್ರ ರಚನೆಗಳೊ ಎಂಬುದರ ಬಗೆಗೂ ಸಂಶೋಧನೆಯಾಗಬೇಕು. ದಾಸಿಮಯ್ಯನು ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲವೆಂದು ಹೇಳಿದ್ದರೆ, ಗೊಗ್ಗವ್ವೆ ಈ ಎರಡರಲ್ಲಿರುವ ಜ್ಞಾನ ಹೆಣ್ಣೊ, ಗಂಡೊ ಎಂದು ಪ್ರಶ್ನಿಸಿದ್ದಾಳೆ.
ಈಕೆಯ ಆರೇ ವಚನಗಳು ಪ್ರಕಟವಾಗಿದ್ದರೂ ಅವು ಕುತೂಹಲಕಾರಿಯಾಗಿವೆ.
"ಮಾರುತನಲ್ಲಿ ಬೆರೆದ ಗಂಧದಂತೆ
ಸುರತದಲ್ಲಿ ಬೆರೆದ ಸುಖದಂತೆ ಮಚ್ಚಿದಲ್ಲಿ ಕೊಡುವ ಉಚಿತದಂತೆ
ಭಕ್ತರಿಗದೆ ಹಾದಿ ಎಂದೆ ನಾಸ್ತಿನಾಥಾ"
ಗೊಗ್ಗವ್ವೆ (ಸ.ವ.ಸಂ.5, ವ-778, 1993)
ಈ ವಚನ ಅಲಂಕಾರಿಕವಾಗಿದ್ದರೂ ಇಲ್ಲಿಯ ಅನುಭವ ಬಹುದೊಡ್ಡದು. ಗಂಧವು ಗಾಳಿಯಲ್ಲಿ ಬೆರೆತಾಗಲೇ ಅದರ ಸುಗಂಧ ಹೆಚ್ಚುತ್ತದೆ. ಅದೇ ರೀತಿ ಗಂಡು- ಹೆಣ್ಣು ಕೂಡಿದಾಗಲೇ ಸುರತಸುಖ ಗೊತ್ತಾಗುತ್ತದೆ. ಹೀಗೆ ಲೌಕಿಕ ಉದಾಹರಣೆಗಳ ಮೂಲಕ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ ಬಹುದೊಡ್ಡ ಸಾಧಕಿಯಾಗಿದ್ದಾಳೆ.
ಈ ಅಂಕಣದ ಹಿಂದಿನ ಬರೆಹಗಳು:
ವಚನಗಾರ್ತಿ ಮುಕ್ತಾಯಕ್ಕ
ಅಕ್ಕನಾಗಮ್ಮ
ಅಮುಗೆ ರಾಯಮ್ಮ
ವಚನಕಾರ ಜೇಡರ ದಾಸಿಮಯ್ಯನ ಪತ್ನಿ ದುಗ್ಗಳೆ
ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ, ಶಾಂಭವಿದೇವಿ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ
ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.