Date: 15-04-2023
Location: ಬೆಂಗಳೂರು
''ಕರ‍್ನಾಟಕದ ಪ್ರಮುಕ ಬುಡಕಟ್ಟು ಬಾಶೆಯಾದ ಕೊರಚದಲ್ಲಿ ಲಿಂಗವ್ಯವಸ್ತೆ ಇಲ್ಲ. ಅಂದರೆ, ಇದರಲ್ಲಿ ನಾಮಪದಗಳನ್ನು ಕನ್ನಡದಲ್ಲಿ ಗುಂಪಿಸಲು ಸಾದ್ಯವಿರುವಂತೆ ಗುಂಪಿಸಲು ಸಾದ್ಯವಿಲ್ಲ. ಎಣಿಕೆಯ ಆದಾರದ ಮೇಲೆ ಒಂದು ಮತ್ತು ಒಂದಕ್ಕಿಂತ ಹೆಚ್ಚು ಎಂಬ, ವಚನ ಎಂದು ಕರೆಯುವ ಗುಂಪಿಕೆ ಮಾತ್ರ ಕಂಡುಬರುತ್ತದೆ,'' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಲಿಂಗಮೆನಿತು ತೆರಂ' ಎಂಬ ವಿಚಾರಗಳ ಕುರಿತು ಬರೆದಿದ್ದಾರೆ.
ಕನ್ನಡದಾಗ ಎಶ್ಟು ಲಿಂಗಗಳು ಎಂಬ ಪ್ರಶ್ನೆಯನ್ನು ಎದುರುಗೊಂಡಾಗ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂಬ ಮೂರು ಲಿಂಗಗಳನ್ನು ಹೇಳುತ್ತಾರೆ. ಇನ್ನು ಕೆಲವರು ಇದಕ್ಕಿಂತ ಹೆಚ್ಚಿನ ಲಿಂಗಗಳನ್ನು ಇನ್ನೂ ಮಾತನಾಡುತ್ತಾರೆ. ಕೇಶಿರಾಜ ಒಂದು ಕಡೆ ಒಂಬತ್ತು ಲಿಂಗಗಳು ಎಂದು ಹೇಳುತ್ತಾನೆ. ಇವುಗಳ ಬಳಕೆ ಆಗಾಗ ಅಲ್ಲಲ್ಲಿ ಕೇಳಿಸುತ್ತಲೆ ಇರುತ್ತದೆ. ಹಾಗಾದರೆ, ಕನ್ನಡದಲ್ಲಿ ಲಿಂಗಗಳು ಎಶ್ಟು ಎಂಬುದನ್ನು ಈಗ ಮಾತಾಡೋಣ.
ಲಿಂಗ ಎಂದರೆ ಜಯಿವಿಕ ಲಿಂಗ ಎಂಬ ತಿಳುವಳಿಕೆ ಸಹಜವಾಗಿ ಇದೆ. ವ್ಯಾಕರಣದಲ್ಲಿ ಕಲಿಸುವ ಲಿಂಗ ಇದು ಜಯಿವಿಕ ಲಿಂಗ ಆಗಿರಬೇಕಿಲ್ಲ, ಆಗಿರುವುದಿಲ್ಲ ಎಂಬುದನ್ನು ಈ ಮೊದಲು ಗಮನಿಸಿದೆ. ಲಿಂಗ ಎಂದರೆ ನಾಮಪದಗಳ ಗುಣಸ್ವಬಾವವನ್ನು ಹೇಳುವ ಮತ್ತು ನಾಮಪದಗಳನ್ನು ಗುಂಪಿಸುವ ಒಂದು ವಿದಾನ ಎಂದು ನೋಡಿದೆವು. ಹಾಗಾದರೆ, ಕನ್ನಡದಲ್ಲಿ ನಾಮಪದಗಳನ್ನು ಯಾವ ಆದಾರದ ಮೇಲೆ ಗುಂಪಿಸಲಾಗುತ್ತದೆ ಎಂಬುದನ್ನು ಗಮನಿಸಬೇಕು. ಅಂದರೆ, ನಾಮಪದದ ಯಾವ ಗುಣಸ್ವಬಾವಗಳನ್ನು ಗುರುತಿಸಲು ಸಾದ್ಯವಾಗುತ್ತದೆ ಎಂಬುದು.
ಮೂಲಬೂತವಾಗಿ ಕನ್ನಡದಾಗ ಅಂದರೆ ಮೂಲಕನ್ನಡದ ಹಂತದಲ್ಲಿ ಲಿಂಗ ಎರಡು ತೆರನಾಗಿದ್ದಿತು ಎಂದೆನಿಸುತ್ತದೆ. ಇವುಗಳನ್ನು ಈಗಿನ ಬರವಣಿಗೆಯಲ್ಲಿ ಲಿಂಗ1 ಮತ್ತು ಲಿಂಗ2 ಎಂದು ಗುರುತಿಸಿದೆ. ಇದಕ್ಕೆ ಮಹತ್-ಅಮಹತ್ ಎಂದು ಕೆಲವೆಡೆ ಕರೆದಿರುವುದು ಇದೆ. ಲಿಂಗ ಎಂಬುದು ಸಾಮಾಜಿಕ ಪರಿಕಲ್ಪನೆಯೂ ಆಗಿರುವುದರಿಂದ ಈ ಪಾರಿಬಾಶಿಕ ಪದಗಳು ನೇರವಾಗಿ ಆ ಸಾಮಾಜಿಕ ಪರಿಕಲ್ಪನೆಯನ್ನು ತಾಕುವುದರಿಂದ ಈ ಬಗೆಯ ಸಾಪೇಕ್ಶ ಪದಗಳನ್ನು ಬಳಸಿದೆ. ಮೂಲಕನ್ನಡದಲ್ಲಿನ ಲಿಂಗ1 ಇದರಲ್ಲಿ ಜೀವಿ-ಮಾನವ-ಗಂಡು ಮತ್ತು ಉಳಿದವೆಲ್ಲ ಲಿಂಗ2 ಇದರಲ್ಲಿ ಬರುತ್ತಿದ್ದಿರಬೇಕು. ಇದಕ್ಕೆ, ಈ ಬಗೆಯ ಗುಂಪಿಕೆಗೆ ಯಾವುದು ಮೂಲಬೂತ ಆದಾರವಾಗಿದ್ದಿತು ಎಂದು ಹೇಳುವುದು ಸದ್ಯಕ್ಕೆ ಕಶ್ಟ. ಆದರೆ, ಈ ಆದಾರ ಕಾಲಾಂತರದಲ್ಲಿ ಬೆಳೆದುಬಂದಿರುವುದು ಸ್ಪಶ್ಟವೆನಿಸುತ್ತದೆ.
ಮೂಲದ್ರಾವಿಡದಲ್ಲಿ, ಬಹುಶಾ ಮೂಲಕನ್ನಡದಲ್ಲಿಯೂ ಲಿಂಗ ವ್ಯವಸ್ತೆಗೆ ಆದಾರವಾದ ಅಂಶಗಳು ಮೂರು. ಅವುಗಳೆಂದರೆ, ಜೀವ ಇರುವ-ಜೀವ ಇಲ್ಲದ, ಇದರ ಒಳಗೆ ಮನುಶ್ಯ-ಮನುಶ್ಯರಲ್ಲದ, ಮತ್ತೆ ಮೂರನೆ ಹಂತದಲ್ಲಿ ಇದರೊಳಗೆ ಗಂಡು-ಹೆಣ್ಣು ಎಂದಾಗುತ್ತದೆ. ಈ ಮೂರೂ ಅಂಶಗಳು ಮೂಲದಲ್ಲಿ ಒಟ್ಟೊಟ್ಟಿಗೆ ಬೆಳೆದಿದ್ದಿರಬಹುದೆ ಎಂಬುದಕ್ಕೆ ಆದಾರಗಳು ಇಲ್ಲ. ಬಹುಶಾ ಇವು ಒಟ್ಟೊಟ್ಟಿಗೆ ಬೆಳೆದಿರಲು ಸಾದ್ಯವಿಲ್ಲ, ಕಾಲಾಂತರದಲ್ಲಿ ಮನುಶ್ಯ ಇತಿಹಾಸದಲ್ಲಿ, ನಾಗರಿಕತೆಯಲ್ಲಿ ಆದ ಬೆಳವಣಿಗೆಗಳೊಟ್ಟಿಗೆ ಬಿನ್ನ ಕಾಲದಲ್ಲಿ ಬೆಳೆದಿರಬಹುದು. ಈ ಮೂರು ಅಂಶಗಳನ್ನು ಮತ್ತು ಅವು ಹೊಂದಿರುವ ರಚನೆಯನ್ನು ಕೆಳಗೆ ತೋರಿಸಿದೆ.
ಗಂಡು-ಹೆಣ್ಣು
ಮನುಶ್ಯ-ಮನುಶ್ಯರಲ್ಲದ
ಜೀವ ಇರುವ-ಜೀವ ಇಲ್ಲದ
ಲಿಂಗ
ಹಾಗಾದರೆ, ಕನ್ನಡದಲ್ಲಿ ಈ ಮೂರು ಅಂಶಗಳಲ್ಲಿ ಮೂಲಬೂತವಾಗಿ ಅಂದರೆ ತಳಹಂತದಲ್ಲಿ ಕಾಣಿಸುವುದು ಜೀವ ಇರುವ ಮತ್ತು ಜೀವ ಇಲ್ಲದ ಎಂಬ ಆದಾರ. ಅಂದರೆ ಲಿಂಗ1ರಲ್ಲಿ ಜೀವ ಇರುವವು ಮತ್ತು ಲಿಂಗ2ರಲ್ಲಿ ಜೀವ ಇಲ್ಲದವು ಬರುತ್ತವೆ. ಆನಂತರ, ಜೀವ ಇರುವವುಗಳಲ್ಲಿ ಮತ್ತೆ ಒಳಗುಂಪಿಕೆ ಕಂಡುಬರುತ್ತದೆ. ಇದರಲ್ಲಿ ಮನುಶ್ಯ ಮತ್ತು ಮನುಶ್ಯರಲ್ಲದ ಎಂಬುದು ಗುಂಪಿಕೆ. ಜೀವ ಇರುವ ಮನುಶ್ಯರು ಲಿಂಗ1ರಲ್ಲಿ ಬರುತ್ತಾರೆ ಮತ್ತು ಜೀವ ಇಲ್ಲದವು ಮತ್ತು ಜೀವ ಇರುವ ಮನುಶ್ಯರಲ್ಲದವು ಲಿಂಗ2ರಲ್ಲಿ ಬರುತ್ತವೆ. ಇದು ಮುಂದುವರೆದು ಮತ್ತೆ ಮನುಶ್ಯರ ಒಳಗೆ ಒಳಗುಂಪಿಕೆ ಬರುತ್ತದೆ. ಜೀವ ಇರುವ ಮನುಶ್ಯರಾದ ಗಂಡಸರು ಲಿಂಗ1ರಲ್ಲಿ ಮತ್ತು ಜೀವ ಇಲ್ಲದ, ಜೀವ ಇದ್ದು ಮನುಶ್ಯರಲ್ಲದ, ಮನುಶ್ಯರಾಗಿದ್ದೂ ಗಂಡಸರಲ್ಲದವು ಲಿಂಗ2ರಲ್ಲಿ ಬರುತ್ತವೆ. ಇದು ಮೂಲಕನ್ನಡದ ಮತ್ತು ಮೂಲದ್ರಾವಿಡದ ಲಿಂಗ ವ್ಯವಸ್ತೆ ಆಗಿದ್ದಿರಬಹುದು. ಆದರೆ, ಹೆಚ್ಚು ತಿಳುವಳಿಕೆ ಅವಶ್ಯಕತೆ ಇದೆ. ಈ ವ್ಯವಸ್ತೆಯನ್ನು ಕೆಳಗೆ ಹೀಗೆ ಚಿತ್ರಿಸಿದೆ.
ಲಿಂಗ1 ಲಿಂಗ2
1) ಜೀವವಿರುವ ಮನುಶ್ಯ ಗಂಡಸು 3) ಜೀವ ಇರುವ ಮನುಶ್ಯ ಗಂಡಸಲ್ಲದವರು 2) ಜೀವ ಇರುವ ಮನುಶ್ಯರಲ್ಲದವು 1) ಜೀವ ಇಲ್ಲದವು
ಹೀಗೆ ಲಿಂಗಗಳು ಎರಡು ಇರುವಾಗ –ಅನ್ ಮತ್ತು –ಅರ್ ಇವು ಕ್ರಮವಾಗಿ ಲಿಂಗ1 ಮತ್ತು ಲಿಂ2ಕ್ಕೆ ಬಳಕೆಯಲ್ಲಿದ್ದವು.
ಆನಂತರ ತೆಂಕುದ್ರಾವಿಡ ಬಾಶೆಗಳು ಮಾತ್ರ ಸ್ತ್ರೀಲಿಂಗವನ್ನು ಪ್ರತ್ಯೇಕವಾಗಿಸಿಕೊಳ್ಳುತ್ತವೆ. ಅಂದರೆ, ಲಿಂಗ2ರಲ್ಲಿ ಬರುತ್ತಿದ್ದ ಜೀವ ಇರುವ ಮನುಶ್ಯ ಗಂಡಸಲ್ಲದ ಗುಂಪಿನಿಂದ ಜೀವ ಇರುವ ಹೆಂಗಸನ್ನು ಬೇರೆ ಮಾಡಿ ಜೀವ ಇರುವ ಮನುಶ್ಯ ಗಂಡಸು ಗುಂಪಿಗೆ ಸಂವಾದಿಯಾಗಿಸಿ ಬೆಳೆಸುತ್ತದೆ. ಆ ಮೂಲಕ ಜೀವ ಇರುವ ಮನುಶ್ಯರೊಳಗೆ ಗಂಡಸರು ಮತ್ತು ಹೆಂಗಸರು ಎಂಬ ಎರಡು ಲಿಂಗಗಳು ಬೆಳೆಯುತ್ತವೆ. ಈಗ ತೆಂಕುದ್ರಾವಿಡದಲ್ಲಿ ಮೂರು ಲಿಂಗಗಳು ಆಗುತ್ತವೆ. ಇವುಗಳ ರಚನೆಯನ್ನು ಹೀಗೆ ತೋರಿಸಬಹುದು.
ಲಿಂಗ1 (ಪುಲ್ಲಿಂಗ) ಲಿಂಗ2 (ಸ್ತ್ರೀಲಿಂಗ) ಲಿಂಗ3 (ನಪುಂಸಕಲಿಂಗ)
1.1.1) ಜೀವವಿರುವ ಮನುಶ್ಯ ಗಂಡಸು 1.1.2) ಜೀವವಿರುವ ಮನುಶ್ಯ ಹೆಂಗಸು
1.1) ಜೀವವಿರುವ ಮನುಶ್ಯ 2) ಜೀವ ಇರುವ ಮನುಶ್ಯರಲ್ಲದವು
1) ಜೀವವಿರುವವು 1) ಜೀವ ಇಲ್ಲದವು
ಮೂಲದಲ್ಲಿ ಇಲ್ಲದ ಸ್ತ್ರೀಲಿಂಗವನ್ನು ಪ್ರತ್ಯೇಕವಾಗಿ ಬೆಳೆಸಿಕೊಂಡ ಮೇಲೆ ಅದಕ್ಕೆ –ಅಳ್ ಎಂಬ ರೂಪವನ್ನು ಬೆಳೆಸಿಕೊಳ್ಳಲಾಗುತ್ತದೆ.
ಇಲ್ಲಿ ವಿವರಿಸಿದ ಈ ಅಂದಾಜು ತಿಳುವಳಿಕೆ ಬೆಳೆಯುವುದಕ್ಕಿಂತ ಮೊದಲು ಮೂಲದಲ್ಲಿ ಯಾವುದು ಮೂಲಬೂತವಾದ ಆದಾರವಾಗಿದ್ದಿತೊ ತಿಳಿಯದು. ಆದರೆ, ಈ ಮೂರೂ ಅಂಶಗಳು ಒಟ್ಟಿಗೆ ಬೆಳೆದಿಲ್ಲ ಎಂಬುದು ಮಾತ್ರ ಸ್ಪಶ್ಟ. ಇದಕ್ಕೆ ಆದಾರವಾಗಿ ದ್ರಾವಿಡ ಬಾಶಾ ಬಳಿಯ ವಿವಿದ ಬಾಶೆಗಳಲ್ಲಿನ ಲಿಂಗ ವ್ಯವಸ್ತೆಯನ್ನು ಅವಲೋಕಿಸಬಹುದು.
ಕರ‍್ನಾಟಕದ ಪ್ರಮುಕ ಬುಡಕಟ್ಟು ಬಾಶೆಯಾದ ಕೊರಚದಲ್ಲಿ ಲಿಂಗವ್ಯವಸ್ತೆ ಇಲ್ಲ. ಅಂದರೆ, ಇದರಲ್ಲಿ ನಾಮಪದಗಳನ್ನು ಕನ್ನಡದಲ್ಲಿ ಗುಂಪಿಸಲು ಸಾದ್ಯವಿರುವಂತೆ ಗುಂಪಿಸಲು ಸಾದ್ಯವಿಲ್ಲ. ಎಣಿಕೆಯ ಆದಾರದ ಮೇಲೆ ಒಂದು ಮತ್ತು ಒಂದಕ್ಕಿಂತ ಹೆಚ್ಚು ಎಂಬ, ವಚನ ಎಂದು ಕರೆಯುವ ಗುಂಪಿಕೆ ಮಾತ್ರ ಕಂಡುಬರುತ್ತದೆ. ತೆಲುಗಿನಲ್ಲಿ ಸ್ತ್ರೀಲಿಂಗ ಎಂಬುದು ಕನ್ನಡದಲ್ಲಿ ಇರುವಂತೆ ಪ್ರತ್ಯೇಕವಾಗಿ ಇಲ್ಲ ಮತ್ತು ಅದು ಮೇಲಿನ ಗುಂಪಿಕೆಯ ಪ್ರಕಾರ ಲಿಂಗ2ರಲ್ಲಿ ಬರುತ್ತದೆಯಾದರೂ ಬಹುವಚನದಲ್ಲಿ ಮಾತ್ರ ಅದು ಲಿಂಗ1ರ ಜೊತೆಗೆ ಸೇರಿಕೊಂಡುಬಿಡುತ್ತದೆ. ಇನ್ನೂ ಮುಂದುವರೆದು ಪೆಂಗೊ ಬಾಶೆಯಲ್ಲಿ ಕನ್ನಡದಲ್ಲಿ ಇಲ್ಲದ ಸ್ತ್ರೀಲಿಂಗ ಬಹುವಚನವೂ ಬೆಳೆದಿದೆ. ಮಲಯಾಳಂದಲ್ಲಿ ಕನ್ನಡದಂತೆ ಲಿಂಗವ್ಯವಸ್ತೆ ಇದೆಯಾದರೂ ಈ ಲಿಂಗಸೂಚಕ ಪ್ರತ್ಯಯಗಳು ವಾಕ್ಯದಲ್ಲಿ ಕ್ರಿಯಾಪದದ ಮೇಲೆ ಕನ್ನಡದಲ್ಲಿ ಬರುವಂತೆ ಬರುವುದಿಲ್ಲ. ಇವೆಲ್ಲವು ದ್ರಾವಿಡದಲ್ಲಿ ಹಾಗೆಯೆ ಕನ್ನಡದ ಲಿಂಗವ್ಯವಸ್ತೆಯ ಬೆಳವಣಿಗೆಯನ್ನು ತಿಳಿದುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಲಿಂಗವ್ಯವಸ್ತೆ ಬೆಳೆದಿರಬಹುದಾದ ಕ್ರಮ, ವಿವಿದ ಹಂತಗಳು ಇವುಗಳನ್ನು ತಿಳಿದುಕೊಳ್ಳುವುದಕ್ಕೂ ಸಹಾಯವಾಗುತ್ತವೆ. ಮುಂದುವರೆದು ಈ ಬೆಳವಣಿಗೆಗೆ ಸಾಮಾಜಿಕ ಮತ್ತು ಇತರೇತರ ಕಾರಣಗಳೇನಿರಬಹುದು ಎಂಬುದನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಬಹುದು.
ಸ್ತ್ರೀಲಿಂಗ ತೆಂಕುದ್ರಾವಿಡದಲ್ಲಿ ಮಾತ್ರ ಯಾಕೆ ಬೆಳೆಯುತ್ತದೆ ಎಂಬುದಕ್ಕೆ ವಿವರಣೆ ಇದೆ. ಸಂಸ್ಕ್ರುತದ ವಿಶೇಶ ಸಂಬಂದವನ್ನು ಬೆಳೆಸಿಕೊಂಡದ್ದು ತೆಂಕುದ್ರಾವಿಡ ಬಾಶೆಗಳು ಮಾತ್ರ. ಕನ್ನಡ, ತಮಿಳು, ತೆಲುಗು, ಮಲಯಾಳಂ ಇವು ಮತ್ತು ತುಸುಮಟ್ಟಿಗೆ ತುಳು ಇವು ಅತಿಹೆಚ್ಚಿನ ಸಂಸ್ಕ್ರುತದ ಸಂಬಂದವನ್ನು ಪಡೆದುಕೊಳ್ಳುತ್ತವೆ. ಈ ಬಾಶೆಗಳು ಪರಸ್ಪರ ಎದುರುಗೊಂಡಾಗ ಪರಸ್ಪರ ಪ್ರಬಾವವನ್ನು ಬೀರುತ್ತವೆ. ಇಂತದೊಂದು ಪ್ರಬಾವದ ವ್ಯಾಕರಣಾತ್ಮಕ ಬೆಳವಣಿಗೆಗಳಲ್ಲಿ ಸ್ತ್ರೀಲಿಂಗದ ಪ್ರತ್ಯೇಕ ಬೆಳವಣಿಗೆಯೂ ಒಂದಾಗಿರಲು ಸಾದ್ಯವಿದೆ. ಸಂಸ್ಕ್ರುತದಲ್ಲಿ ಸ್ತ್ರೀಲಿಂಗ
ಪ್ರತ್ಯೇಕವಾಗಿ ಇರುವುದು ಇದಕ್ಕೆ ಕಾರಣವಾಗಿರಬಹುದು. ಇದಕ್ಕಿಂತ ಮುಕ್ಯವಾಗಿ ಈ ಬಾಶೆಗಳ ಮಾತುಗ ಸಮುದಾಯದಲ್ಲಿ ನಾಗರಿಕ ಬೆಳವಣಿಗೆ ಆಗಿ ಗಂಡು-ಹೆಣ್ಣು ಬೇದವನ್ನು ಮಾಡಿಕೊಳ್ಳಬೇಕಾದ ಅವಶ್ಯಕತೆ ಕಂಡುಬಂದಿರಬೇಕು. ಹೀಗೆ ಸ್ತ್ರೀಲಿಂಗದ ಬೆಳವಣಿಗೆಗೆ ವಿವರಣೆ ಕೊಡಲು ಸಾದ್ಯ. ಆದರೆ ಅದಕ್ಕಿಂತ ಮೂಲದಲ್ಲಿ ಇದ್ದ ವಿವಿದ ವಿಚಾರಗಳ ಬೆಳವಣಿಗೆಗೆ ಹೆಚ್ಚಿನ ವಿವರಣೆ ಇಲ್ಲ. ಈ ತಾತ್ವಿಕ ಅಂಶಗಳು ಇಂದಿನ ಕನ್ನಡದ ಲಿಂಗವ್ಯವಸ್ತೆಯನ್ನು ರೂಪಿಸಿವೆ. ಇಂದಿನ ಕನ್ನಡದಲ್ಲಿನ ಲಿಂಗದ ಅಬಿವ್ಯಕ್ತಿಯ ವಿವಿದ ಆಯಾಮಗಳನ್ನು ಮುಂದಿನ ಬರವಣಿಗೆಯಲ್ಲಿ ಗಮನಿಸೋಣ.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.