“ಬಟ್ಟೆಯೆಂದರೆ ಬರಿಯ ಮೈಮುಚ್ಚುವ ಸಾಧನವಲ್ಲ... ಅದು ದೇಶ ದೇಶಗಳನ್ನೇ ಬೆಸೆಯುವ ಹಾದಿ... ಆ ಹಾದಿಯುದ್ದಕ್ಕೂ ನಡೆಯುವ ಕಾಲಘಟ್ಟವೊಂದರ ಪಲ್ಲಟವೇ ರೇಷ್ಮೆ ಬಟ್ಟೆ,” ಎನ್ನುತ್ತಾರೆ ಹರ್ಷ ಹೆಗಡೆ ಕೊಂಡದಕುಳಿ ಅವರು ವಸುಧೇಂದ್ರ ಅವರ “ರೇಷ್ಮೆ ಬಟ್ಟೆ” ಕಾದಂಬರಿ ಕುರಿತು ಬರೆದ ವಿಮರ್ಶೆ.
ರೇಷ್ಮೆ ಬಟ್ಟೆ - ಇತ್ತೀಚೆಗೆ ನಾನು ಓದಿದ ಒಂದು ಸಂಪೂರ್ಣ ಕಾದಂಬರಿ. ಇತಿಹಾಸದ ಪ್ರಮುಖ ಘಟನೆಯೊಂದನ್ನು ಹಿಡಿದು ಆ ಎಳೆಯ ಆಚೀಚೆಯಲ್ಲಿ ಚೆಂದದ ಕಥಾಹಂದರವನ್ನು ಎಳೆದು ಹೂಣರು, ಕುಶಾನರ ಕಾಲದ ಏಷ್ಯಾವನ್ನು ನಮ್ಮೆದುರು ಬಿಚ್ಚಿಡುವ ಸುಂದರ ಕಥಾನಕ. ಹೊತ್ತಿಗೆಯೊಂದು ಒಂದೇ ಆಶಯದಲ್ಲಿ ನಿಲ್ಲುವುದು ಬೇರೆ, ಹಲವು ವಿಚಾರಗಳನ್ನು ತನ್ನೊಳಗೆ ಹೂರಣವಾಗಿಸಿ ಎಲ್ಲದರ ರುಚಿಯನ್ನೂ ಓದುಗನಿಗೆ ಸವಿಯಗೊಡುವುದು ಬೇರೆ. ಮೊದಲ ರೀತಿಯ ಪುಸ್ತಕಗಳು ಒಂದಷ್ಟು ಬಗೆಯ ಓದುಗರನ್ನು ಮಾತ್ರ ಸೆಳೆದರೆ, ಎರಡನೇ ಜಾತಿಯವು ಬಹುತೇಕ ಬಗೆಯ ಓದುಗರನ್ನು ತನ್ನೆಡೆಗೆ ಸೆಳೆದುಕೊಂಡು ಬಿಡುತ್ತದೆ. ಎರಡಕ್ಕೂ ಅದರದೇ ಆದ ಮಹತಿಕೆಯಿದೆ, ಸ್ವಂತಿಕೆಯಿದೆ... ಆ ನೆಲೆಯಲ್ಲಿ ಇದು ಎರಡನೇ ವಿಭಾಗಕ್ಕೆ ಸೇರಿದ ಪುಸ್ತಕ ಎಂಬುದು ನನ್ನ ಭಾವನೆ...
ಕೌಟುಂಬಿಕ ವ್ಯವಸ್ಥೆ, ವ್ಯವಸಾಯ, ಆಡಳಿತ, ಹವಾಮಾನ, ಕಲಹ, ಆಚರಣೆ, ರೂಢಿ, ಸಂಪ್ರದಾಯ, ಧರ್ಮ, ಭಾಷೆ, ಕಟ್ಟುಪಾಡು, ವ್ಯಾಪಾರ, ವ್ಯವಹಾರ, ನಿಪುಣತೆ, ಬುಡಕಟ್ಟು ಜನ, ದಟ್ಟ ಕಾನನ, ಒಣ ಮರುಭೂಮಿ, ಹುಟ್ಟು, ಸಾವು, ಪ್ರೀತಿ- ಪ್ರೇಮ ಪ್ರಣಯ ಹೀಗೆ ಯಾವ್ಯಾವ ಸಂಗತಿಗಳನ್ನೆಲ್ಲಾ ತಲುಪಬಹುದೋ ಅವೆಲ್ಲವನ್ನೂ ಮುಟ್ಟಿ, ಓದುಗನಿಗೆ ಯಥಾವತ್ತು ದಾಟಿಸುವ ಪರಿ ಇದರಲ್ಲಿದೆ. ಲೇಖಕ ವಸುಧೇಂದ್ರರ ತೇಜೋ ತುಂಗಭದ್ರಾ ಕೃತಿಯನ್ನು ಓದಿದ್ದ ನನಗೆ ಶೈಲಿಯಲ್ಲಿ ಅದಕ್ಕಿಂತ ಭಿನ್ನ ಅಂದೇನೋ ಅನಿಸದಿದ್ದರೂ, ಬರಹಗಾರನೊಬ್ಬ ಗುರುತಿಸಿಕೊಳ್ಳಬೇಕಾದದ್ದೇ ಹೀಗೆ ಅನ್ನುವುದು ನನ್ನ ಅಭಿಮತ. ಆಯಾ ಕಾಲಘಟ್ಟದ ಪಲ್ಲಟಗಳು, ಅದರಿಂದ ಜನಸಾಮಾನ್ಯ ಅನುಭವಿಸುವ ತಾಪತ್ರಯಗಳು, ಮತ್ತೆ ಹೊಸ ಬದುಕು ಬೆಳೆಯುವ ಪರಿ, ಧರ್ಮ ಪ್ರಚಾರ ಈ ಎಲ್ಲ ಅಂಶಗಳನ್ನು ಸೊಗಸಾಗಿ ಶಬ್ಧಗಳಲ್ಲಿ ಹಿಡಿದಿಡುವ ಕಲೆ ಲೇಖಕರಿಗೆ ಆದ್ಯಂತವಾಗಿ ಸಿದ್ದಿಸಿದೆ ಎನ್ನುವುದನ್ನು ಇಲ್ಲಿ ಗಮನಿಸಬಹುದು.
ಎಲ್ಲಿಯೂ ನಿಲ್ಲದೆ ಸರಾಗವಾಗಿ ಓದಿಸಿಕೊಂಡು ಹೋಗುವ ಶೈಲಿ, ಸರಳವಾದ ಭಾಷೆ, ಉಸಿರೆಳೆದುಕೊಳ್ಳಲು ಜಾಗ, ಚಿಂತನೆಗೆ ಹಚ್ಚುವ ಸಾಲುಗಳು, ಪಾತ್ರವೊಂದರ ಮೂಲಕ ಹೇಳಿಸುವ ಜೀವನಾನುಭವ ಪುಸ್ತಕದ ಧನಾತ್ಮಕ ಅಂಶ. ಅದರಲ್ಲೂ ಕೆಲವು ಕಡೆ ಧರ್ಮಗಳ ಬಗೆಗೆ ಮಾಡಿದ ವರ್ಣನೆಗಳು, ಹೇಗೆ ಕಾಲದ ಪ್ರವಾಹಕ್ಕೆ ಸಿಲುಕಿ ಧರ್ಮವೂ ತನ್ನ ಚಹರೆಯನ್ನು ಬದಲಾಯಿಸಿಕೊಳ್ಳುತ್ತದೆ ಎನ್ನುವ ನಿರೂಪಣೆಗಳು, ಆಗಿನ ಕಾಲದಲ್ಲಿ ಚಾಲ್ತಿಯಲ್ಲಿದ್ದ, ಅವರುಗಳು ನಂಬುತ್ತಿದ್ದ ಧರ್ಮ ಮತ್ತದರ ವಿಸ್ತರಣಾ ನೀತಿ, ರಾಜಾಡಳಿತ ಇಂತಹ ಧರ್ಮಕ್ಕೆ ಕೊಡುತ್ತಿದ್ದ ಸವಲತ್ತುಗಳು ಇವೆಲ್ಲವೂ ಬಹುಚೆಂದದಲ್ಲಿ ನುಡಿಶಿಲ್ಪವಾಗಿವೆ. ನಿರಂಕುಶ ಪ್ರೇಮ, ಪ್ರೀತಿಯ ಅದಮ್ಯ ಶಕ್ತಿ, ಅದರ ಸುತ್ತಲಿನ ಸಂಗತಿಗಳು - ಈ ತರಹದ ಸಂಗತಿಗಳನ್ನು ಲೇಖಕರು ಅದೆಷ್ಟು ಲೀಲಾಜಾಲವಾಗಿ ಓದುಗನೆದೆಗೆ ಹೊತ್ತು ತಂದಿದ್ದಾರೆ ! ಬಟ್ಟೆಯೆಂದರೆ ಬರಿಯ ಮೈಮುಚ್ಚುವ ಸಾಧನವಲ್ಲ... ಅದು ದೇಶ ದೇಶಗಳನ್ನೇ ಬೆಸೆಯುವ ಹಾದಿ... ಆ ಹಾದಿಯುದ್ದಕ್ಕೂ ನಡೆಯುವ ಕಾಲಘಟ್ಟವೊಂದರ ಪಲ್ಲಟವೇ ರೇಷ್ಮೆ ಬಟ್ಟೆ.
ಮೈನಸ್ ಪಾಯಿಂಟ್ ಅಂತಿದ್ದರೆ, ಅದೂ ನನಗನಿಸಿದ ಮಟ್ಟಿಗೆ, ಆಗಿನ ಕಾಲದ ಪ್ರದೇಶಗಳ ಹೆಸರುಗಳ ಜೊತೆಗೆ ಈಗ ಅದಕ್ಕೇನೆನ್ನುತ್ತಾರೆ ಅನ್ನುವುದನ್ನು ಮತ್ತೆ ಮತ್ತೆ ಬಳಸಿದ್ದರೆ ಚೆನ್ನವಿತ್ತೇನೋ... ! ಸಂಗಡ ನಕ್ಷೆಗಳನ್ನು ಆಗಾಗ ಬಳಸಿದ್ದರೆ ಕಲ್ಪನೆಯ ರೆಕ್ಕೆಗೆ ಮತ್ತಷ್ಟು ಸತು ಸಿಗುತ್ತಿತ್ತೇನೋ. ಪುಸ್ತಕದ ಮೊದಲೆರಡು ಪುಟಗಳಲ್ಲಿ ಅವು ಇದ್ದರೂ ಮತ್ತಷ್ಟು ವಿಸ್ತೃತ ನಕಾಶೆ ಬಳಸಬಹುದಿತ್ತೇನೋ.. ಇವೆಲ್ಲಾ ನನಗನಿಸಿದ ಋಣಾತ್ಮಕ ಅಂಶಗಳು ಅಷ್ಟೇ...
ಕೊನೆಗೆ ಓದಿ ಮುಗಿಸಿದ ಬಳಿಕ ನಿಮ್ಮಲ್ಲಿ ಅಳುವಾಗಲಿ, ಹತಾಶೆಯಾಗಲಿ, ಕ್ರೋಧವಾಗಲಿ ಅಥವಾ ಇನ್ಯಾವುದೇ ಭಾವವಾಗಲಿ ಮೂಡುವುದಿಲ್ಲ... ಹಾಗಂತ ದೇವರಾಣೆಗೂ ಸಪ್ಪೆಯಲ್ಲ... ಒಂದು ಅದ್ಭುತ ಓದನ್ನು ಅನುಭವಿಸಿದ ಖುಷಿ ನಿಮ್ಮ ಪಾಲಿಗಾಗುತ್ತದೆ... ನಿಮ್ಮ ಸಂಚಿಗೆ ಸಾಕಷ್ಟು ಬರೆದಿಡಬಹುದಾದ ಸಾಲುಗಳು ಸೇರಿಕೊಳ್ಳುತ್ತವೆ... ತೇಜೋ ತುಂಗಭದ್ರಾ ಕೃತಿಯನ್ನು ಓದಿದ್ದರೆ, ಅದನ್ನು ಮುಗಿಸಿದಾಗ ನಿಮಗೆ ಹೇಗನಿಸಿತ್ತೋ ಥೇಟು ಅದೇ ಫೀಲು... ಐಸ್ ಕ್ರೀಮ್ ಒಂದನ್ನು ತಿನ್ನುವಾಗ ಆಗುವ ಹಾಯಾದ ಭಾವ ಓದುವಾಗ...
ಓದಿ... ಓದಿಸಿ... ಆತ್ಮೀಯವಾದ ಓದು ನಿಮ್ಮದಾಗಲಿ...
- ಹರ್ಷ ಹೆಗಡೆ ಕೊಂಡದಕುಳಿ
“ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ,...
"“ಬನ್ನಿ, ಬನ್ನಿ” ಎಂದು ನನ್ನನ್ನು ಕೂರಿಸಿದ ಅವರು ಒಳಗಿದ್ದ ನಾ.ಡಿ. ಅವರಿಗೆ ಕೊಂಕಣಿಯಲ್ಲಿ ನನ್ನ ಬ...
“ಈಗ ಪುಸ್ತಕ ಆಗುತ್ತಿರುವ ಗಳಿಗೆಯಲ್ಲಿ ಒಂದೆರಡು ಲೇಖನಗಳ ಶೀರ್ಷಿಕೆಗಳನ್ನು ಸ್ವಲ್ಪ ಬದಲಿಸಿದ್ದೇನೆ. ಈ ಅಂಕಣಕ್ಕೆ...
©2025 Book Brahma Private Limited.