ಅಂಕಣ ಬರವಣಿಗೆ ನನಗೆ ಸ್ವಲ್ಪ ಶಿಸ್ತನ್ನು ಕಲಿಸಿತೆಂಬುದನ್ನು ಒಪ್ಪಿಕೊಳ್ಳಬೇಕು


“ಈಗ ಪುಸ್ತಕ ಆಗುತ್ತಿರುವ ಗಳಿಗೆಯಲ್ಲಿ ಒಂದೆರಡು ಲೇಖನಗಳ ಶೀರ್ಷಿಕೆಗಳನ್ನು ಸ್ವಲ್ಪ ಬದಲಿಸಿದ್ದೇನೆ. ಈ ಅಂಕಣಕ್ಕೆ ಕೆಲವರು ಫ್ಯಾನ್‌ಗಳಿದ್ದರು,” ಎನ್ನುತ್ತಾರೆ ಅಗ್ರಹಾರ ಕೃಷ್ಣಮೂರ್ತಿ ಅವರು ತಮ್ಮ “ಬಹುವಚನ” ಕೃತಿಗೆ ಬರೆದ ಲೇಖಕರ ಮಾತು.

ಇದು ಅಂಕಣ ಬರಹಗಳ ಸಂಕಲನ. 'ಉದಯವಾಣಿ'ಯ ಬೆಂಗಳೂರು ಕಚೇರಿಯಿಂದ ಡಾ. ಆರ್. ಪೂರ್ಣಿಮಾ ಅವರು ನನಗೊಂದು ಅಂಕಣವನ್ನು ದಯಪಾಲಿಸಿದರು. ಅದಕ್ಕೆ ನಾನೇ ನಾಮಕರಣ ಮಾಡಿಕೊಳ್ಳಬೇಕೆಂದಾಗ 'ಬಹುವಚನ' ಎಂದು ಕರೆದೆ. ಈ ಅಂಕಣ ನವೆಂಬರ್ 2003 ರಿಂದ ಸುಮಾರು ಎರಡು ವರ್ಷಗಳ ಕಾಲ ಹದಿನೈದು ದಿನಕ್ಕೊಮ್ಮೆ ಶುಕ್ರವಾರದಂದು ಪ್ರಕಟವಾಯಿತು. ನಾನು ಗುರುವಾರ ಸಂಜೆ ಆರರ ನಂತರವೇ ಯಾವಾಗಲೂ ಕೊಟ್ಟಿದ್ದು. ಅದನ್ನು ತಾಳ್ಮೆಯಿಂದ ಕಾಯ್ದು ಮರುದಿನ ಬರುವಂತೆ ನೋಡಿಕೊಳ್ಳುತ್ತಿದ್ದ ಸಂಪಾದಕ ಮಂಡಳಿಗೆ ನನ್ನ ಹೃತ್ತೂರ್ವಕವಾದ ವಂದನೆಗಳು ಸಲ್ಲಬೇಕು. ಅದರಲ್ಲೂ ಮುಖ್ಯವಾಗಿ ಗೆಳೆಯ ಇಸ್ಮಾಯಿಲ್ ಅತೀವ ಕಾಳಜಿ ತೋರಿದರು. ಈಗ ಪುಸ್ತಕ ಆಗುತ್ತಿರುವ ಗಳಿಗೆಯಲ್ಲಿ ಒಂದೆರಡು ಲೇಖನಗಳ ಶೀರ್ಷಿಕೆಗಳನ್ನು ಸ್ವಲ್ಪ ಬದಲಿಸಿದ್ದೇನೆ. ಈ ಅಂಕಣಕ್ಕೆ ಕೆಲವರು ಫ್ಯಾನ್‌ಗಳಿದ್ದರು. ನಾವು ಆಗಾಗ ಭೇಟಿ ಕೊಡುವ ಬನ್ನೇರುಘಟ್ಟ ರಸ್ತೆಯ ಪುಟ್ಟ ಬಾರ್ ಒಂದರ ಸಪ್ಲೆಯರ್ ಮಾದೇವನಿಂದ ಹಿಡಿದು ಕನ್ನಡ ದಿನಪತ್ರಿಕೆಯೊಂದರ 9 ಸಂಪಾದಕರವರೆಗೂ! ಅವರ ಮೆಚ್ಚುಗೆ ನನ್ನ ಬರಹವನ್ನು ಮುಂದುವರಿಸುವುದಕ್ಕೆ ಪ್ರೋತ್ಸಾಹವನ್ನು ನೀಡುತ್ತಿದ್ದರೂ ನನ್ನ ಸ್ವಭಾವಕ್ಕನುಗುಣವಾಗಿ ನಿಲ್ಲಿಸಿಬಿಟ್ಟೆ. ಅದರಲ್ಲೂ ಅಂಕಣ ನೀಡಿದ್ದ ಡಾ.ಪೂರ್ಣಿಮಾ ಅವರಿಗೊಂದು ಮಾತು ಹೇಳದೆ ಹೋದೆನಲ್ಲಾ... ಅದು ತುಂಬ ತಪ್ಪು. ನನ್ನನ್ನು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕಂಡಿರುವ ಅವರು ತಪ್ಪನ್ನು ಹೊಟ್ಟೆಗೆ ಹಾಕಿಕೊಳ್ಳುತ್ತಾರೆಂಬ ನಂಬಿಕೆಯಿದೆ. ಗೆಳೆಯ ಇಸ್ಮಾಯಿಲ್ ನಾನು ಅಂಕಣ ಪ್ರಾರಂಭಿಸಿದಾಗಿನಿಂದಲೇ 'ಈ ಪಾರ್ಟಿ ಮುಂದುವರಿಸಲ್ಲಾ...' ಎಂದು ಗ್ರಹಿಸಿರಲು ಸಾಕು. ಅಷ್ಟರಮಟ್ಟಿಗೆ ನಾನು ಅವರನ್ನು ಯಾಮಾರಿಸುತ್ತಿದ್ದೆ. ಅವರು ನಗುವಿನಲ್ಲಿ ಎಲ್ಲವನ್ನೂ ಸರಿ ಮಾಡುತ್ತಿದ್ದರು.

ಈ ಅಂಕಣ ಬರವಣಿಗೆ ನನಗೆ ಸ್ವಲ್ಪ ಶಿಸ್ತನ್ನು ಕಲಿಸಿತೆಂಬುದನ್ನು ಒಪ್ಪಿಕೊಳ್ಳಬೇಕು. ಆದರೂ ಅದು ಬಹುಕಾಲ ಉಳಿಯಲಿಲ್ಲ. ಹಿರಿಯರಾದ ಯು.ಆರ್. ಅನಂತಮೂರ್ತಿ, ಕಾಳೇಗೌಡ ನಾಗವಾರ, ಜಿ. ರಾಜಶೇಖರ್, ಗೆಳೆಯರಾದ ಕುಂ.ವೀ., ಕೆ.ಬಿ. ಸಿದ್ದಯ್ಯ, ಕೆ. ಪುಟ್ಟಸ್ವಾಮಿ, ಕರೀಗೌಡ ಬೀಚನಹಳ್ಳಿ, ಮಲ್ಲೇಪುರಂ ಜಿ. ವೆಂಕಟೇಶ, ಸಹೋದ್ಯೋಗಿಗಳಾದ ಮಹಾಲಿಂಗೇಶ್, ಮೀನಲೋಚನಿ, ಮಡದಿ ಕಲ್ಪನಾ, ಮಗ ರವಿ ಈ ಲೇಖನಗಳನ್ನು ಓದಿ ಮೆಚ್ಚುಗೆ ಸೂಚಿಸುತ್ತಿದ್ದರು.

ಕನ್ನಡದ ಸಾಹಸೀ ಪ್ರಕಾಶಕ ಸಿವಿಜಿ ಚಂದ್ರು ಮತ್ತು ಅವರ ಬಾಳ ಸಂಗಾತಿ ಗಿರಿಜಾ ಪ್ರೀತಿಯಿಂದ ಈ ಕೃತಿಯನ್ನು ಹೊರತರುತ್ತಿದ್ದಾರೆ. ಕಲಾವಿದ ಯು.ಟಿ. ಸುರೇಶ್ ಮುಖಪುಟ ಅಂದಗೊಳಿಸಿದ್ದಾರೆ. ಕಲಾವಿದ ಹಾದಿಮನಿ ನನ್ನ ಚಿತ್ರ ಬರೆದು ಕೃತಿಯ ಬೆನ್ನಿಗಿರಿಸಿದ್ದಾರೆ. ಡಿ.ಟಿ.ಪಿ. ಮಾಡಿದವರು ಗೆಳೆಯ ಕೃ. ಮೋಹನ್.

ಎಲ್ಲರಿಗೂ ಬಹು ಬಹು ಪ್ರೀತಿ ವಿಶ್ವಾಸದ ವಂದನೆ.

- ಅಗ್ರಹಾರ ಕೃಷ್ಣಮೂರ್ತಿ

MORE FEATURES

ವರ್ತಮಾನ ಸಾಯುತ್ತಲೇ ಭೂತವಾಗುತ್ತದೆ

07-01-2025 ಬೆಂಗಳೂರು

"ಸಾಹಿತಿ ಶರೀಫ ಗಂಗಪ್ಪ ಚಿಗಳ್ಳಿ ಇವರು ಈ ಪುಸ್ತಕದಲ್ಲಿ 15 ಲೇಖನ ಬರೆದಿದ್ದಾರೆ. ಬಹುತೇಕ ಕನ್ನಡಿಗರು ಕೇಳಬಲ್ಲ, ನ...

ಇತಿಹಾಸ ಸಂಶೋಧನೆಗಳ ಕ್ಷೇತ್ರದಲ್ಲಿ ನಾನು ನಿರಕ್ಷರಿ

07-01-2025 ಬೆಂಗಳೂರು

“ನನ್ನ ಆತ್ಮವೃತ್ತಾಂತದ ಈ ತುಣುಕುಗಳು ಡಾ. ಎ ಓ ನರಸಿಂಹಮೂರ್ತಿಯವರ ಪುಸ್ತಕದೊಡನೆ ತಳುಕು ಹಾಕಿಕೊಳ್ಳುತ್ತಿರುವುದು...

ಕೃಷ್ಣಮೂರ್ತಿಯವರು ಸೂಕ್ಷ್ಮಗ್ರಹಿಕೆಯ ಲೇಖಕರು

07-01-2025 ಬೆಂಗಳೂರು

“ವ್ಯಂಗ್ಯ-ಕುಹಕಗಳ ಸೋಂಕಿಲ್ಲದಂತೆ ತಾವು ನಡೆದುಬಂದ ಹಾದಿಯಲ್ಲಿ ದಾರಿದೀಪಗಳಂತಿದ್ದ ಗುರು-ಹಿರಿಯರಿಗೆ ನುಡಿಗೌರವ ಸ...