"ಕುಂತಿ ಮತ್ತು ಮಂತ್ರ ಫಲದಿಂದ ಹಿಡಿದು ಗಾಂಧಾರಿಯವರೆಗೂ ವಿಸ್ತಾರವಾದ ಕಥೆ ಮುಂದುವರಿಯುತ್ತದೆ. ಮುಂದೆ ಧೃತಾರಾಷ್ಟ್ರನಿಗೆ ಸಂಜಯ ನಾಲ್ಕು ಭಾಗಗಳಲ್ಲಿ ಮಹಾಭಾರತ್ ಯುದ್ಧದ ವರ್ಣನೆ ಮಾಡಿದ್ದ ಘಟನೆಯಿದೆ," ಎನ್ನುತ್ತಾರೆ ಕವಿತಾ ಹೆಗಡೆ ಅಭಯಂ. ಅವರು ಗೋಪಾಲಕೃಷ್ಣ ಕುಂಟಿನಿ ಅವರ ‘ಮಹಾಭಾರತ ಪ್ರೇಮ ಮತ್ತು ಯುದ್ಧ’ ಕೃತಿ ಕುರಿತು ಬರೆದ ಅನಿಸಿಕೆ.
"ಪ್ರೇಮ ಮತ್ತು ಯುದ್ಧ” ಎಂಬ ಪುಸ್ತಕ “All is fair in love and war” ಎಂಬ ಸೂಜಿಗಲ್ಲಿನಂತೆ ಸೆಳೆಯುವ sub title ನೊಂದಿಗೆ ಈ ವಾರ ಎರಡನೇ ಸಲ ಓದಿಸಿಕೊಂಡಿತು. ಮಹಾಭಾರತದ ಕತೆಗಳೇ ಹಾಗೆ, ಎಷ್ಟು ಸಲ ಬೇಕಾದರೂ ಮರು ಕಥನಕ್ಕೆ ವೇದಿಕೆ ಒದಗಿಸಿಕೊಡುತ್ತವೆ. ಕಾಲದ ಪ್ರಭಾವಕ್ಕೆ ಕಿಂಚಿತ್ತೂ ಮಸುಕಾಗದ ಮಹಾಭಾರತದಲ್ಲಿ ಜನಜನಿತವಾದ ಅನನ್ಯ ಅಮರ ಪ್ರೇಮಕಥೆಗಳೂ ಯುದ್ಧದ ಭೀತಿಯನ್ನು ದುಗುಡವನ್ನು ಸಾರುವ ಕಥೆಗಳು ಸಾಕಷ್ಟಿವೆ. ಎಲ್ಲೋ ಅಡಗಿಕೊಂಡಿರುವ ಅಪರಿಚಿತ ಕಥೆಗಳೂ ಇವೆ. ಇವನ್ನೆಲ್ಲ ತಮ್ಮ ಮನೋಹರ ಶೈಲಿಯಲ್ಲಿ ಸುತ್ತಿಕೊಟ್ಟಿದ್ದಾರೆ ಕುಂಟಿನಿಯವರು. ವ್ಯಾಸ ಭಾರತವನ್ನು ಮತ್ತೆ ಹೊಸ ರೀತಿಯಲ್ಲಿ ಹೇಳಿದ್ದಾರೆ.
ಅವರ ಶಾರ್ಪ್ ಆದ ಪುಟ್ಟ ಪುಟ್ಟ ವಾಕ್ಯಗಳು ಗೊತ್ತಿರುವ ಕತೆಗಳನ್ನೂ ಇನ್ನಷ್ಟು ಗಾಢವಾಗಿ ಬೇರೂರಿಸುತ್ತವೆ. ಒಂದಿಷ್ಟು ಕತೆಗಳು ‘ಓ ಇದೆಲ್ಲಿ ಅವಿತಿತ್ತು?’ ಎಂದು ಬೆರಗಾಗಿಸುತ್ತವೆ.
ಮಾದ್ರಿ, ಪಾಂಡುವಿನ ನಿಯಂತ್ರಣ ತಪ್ಪಿದ ಒಂದು ಕ್ಷಣ ಮಹಾಭಾರತಕ್ಕೆ ಮುನ್ನುಡಿಯಾದ ಅಧ್ಯಾಯದ ನಿರೂಪಣೆ ವಿಭಿನ್ನವಾಗಿದೆ. ಭಾರದ್ವಾಜ, ಶರದ್ವತ, ಕೃಪ, ಕೃಪಿ, ಸಂವರಣ, ತಪತಿ, ಉಪರಿಚರ, ಮತ್ಸ್ಯಗಂಧಿ=ಯೋಜನಗಂಧಿ= ಸತ್ಯವತಿ, ಪರಾಶರ ಋಷಿ, ಭೀಷ್ಮ, ಪ್ರತೀಪ, ಶಂತನು, ಗಂಗೆ, ವ್ಯಾಸ, ಅಂಬಿಕೆ, ಅಂಬಾಲಿಕೆ, ದಾಸಿ, ವಿದುರ…ಓಹ್.. ಎಲ್ಲರ ಕಥೆಯನ್ನೂ ನಿರೂಪಿಸಲಾಗಿದೆ.
ಕುಂತಿ ಮತ್ತು ಮಂತ್ರ ಫಲದಿಂದ ಹಿಡಿದು ಗಾಂಧಾರಿಯವರೆಗೂ ವಿಸ್ತಾರವಾದ ಕಥೆ ಮುಂದುವರಿಯುತ್ತದೆ. ಮುಂದೆ ಧೃತಾರಾಷ್ಟ್ರನಿಗೆ ಸಂಜಯ ನಾಲ್ಕು ಭಾಗಗಳಲ್ಲಿ ಮಹಾಭಾರತ್ ಯುದ್ಧದ ವರ್ಣನೆ ಮಾಡಿದ್ದ ಘಟನೆಯಿದೆ.
ಎಲ್ಲಕ್ಕಿಂತ ನನಗೆ ಇಷ್ಟವಾದದ್ದು ಎಂದರೆ “ಆ ಹದಿನೆಂಟು ದಿನಗಳು” ಎಂಬ ಅಧ್ಯಾಯ. ಒಂದನೇ ದಿನದಿಂದ ಹದಿನೆಂಟು ದಿನಗಳ ಕಾಲ ಪ್ರತಿನಿತ್ಯ ಯುದ್ಧ ಹೇಗೆ ನಡೆಯಿತು ಮತ್ತು ಏನೇನಾಯಿತು ಎಂಬ ಸಮಗ್ರ ಉಲ್ಲೇಖ ಬಹಳ ಉಪಯುಕ್ತವೆನಿಸಿತು. ಇದನ್ನು ನಾನಿನ್ನೂ ಯಾವ ಪುಸ್ತಕದಲ್ಲೂ ಇಷ್ಟು ಶಾರ್ಟ್ ಅಂಡ್ ಕ್ರಿಸ್ಪ್ ಆಗಿ ನೋಡಿಲ್ಲ.
ಮನ ಸೆಳೆದ ಕೆಲವು ಅಧ್ಯಾಯಗಳ ಶೀರ್ಷಿಕೆಗಳನ್ನು ನೋಡಿ ಯಾರ ಕಥೆ ಎಂದು ಊಹಿಸುವುದು ಬಹಳ ಆಸಕ್ತಿಕರ.
ಬಯಲ ರತಿಯ ಭಾಗ್ಯ
ಬಟ್ಟೆ ಬಯಲಾಗಿ ಹುಟ್ಟು ಭರಣಿಯಲ್ಲಿ
ಕುಲಕುಲಕುಲಕ್ಕಾಗಿ ಸಮಾಗಮ
ಮಿಲನವೇ ಶಾಪವೂ ಮಿಲನವೇ ವರವೂ
ಆಲಿಂಗನವೇ ಅನುಶಾಸನ
ಆರನೆಯವನಾಗಿ ನೀನು
ದ್ರೌಪದಿಯ ಕುಡಿನೋಟ
ಯುದ್ಧ ಸಿದ್ಧ
ಮುಂತಾದವು.
ಒಂದಿಷ್ಟು ಮರೆಯಲಾಗದ ವಾಕ್ಯ ಸಂಪತ್ತು:
ಈ ಕಥೆಗಳಿಗೆ ಸ್ಥಾಯಿ ಜಗತ್ತಿಲ್ಲ,
ಕಾಲದ ಪಾಡುಗಳಿಲ್ಲ.
ಅಂತರಂಗದ ಆಸ್ವಾದಕ್ಕೆ ಬಹಿರಂದ ತೆರೆ ಬಿತ್ತು.
ಗಂಗೆಯ ವಿರಹವನ್ನು ಯಮುನೆ ಕಳೆಯಿತು.
ಮಹಾಕಾವ್ಯದ ಮಹತ್ವದ ಶುರುವಿಗೆ ನಾಂದಿ ತೋರಣ ಕಟ್ಟುವ ಸಂದರ್ಭದಲ್ಲಿ ಮಗನೇ ಕವಿಯಾಗಿ, ಕವಿಯೇ ಮಗನಾಗಿ ತಾಯಿಗೆ ಕಂಡನು.
ಅರಮನೆ ಎಂಬುದೇ ರಹಸ್ಯ ಗರ್ಭ
…. ಇನ್ನೂ ಎಷ್ಟೊಂದು ಸಾಲುಗಳು ಕಾಡುತ್ತಿವೆ!
ಇಲ್ಲಿ ಪಾತ್ರಗಳು ಚುಟುಕಾಗಿ - ಚುರುಕಾಗಿ ಹಾದು ಹೋಗುವ ಮತ್ತು ತಮ್ಮ ಗುರುತನ್ನು ಗಾಢವಾಗಿ ಉಳಿಸಿಹೋಗುವ ರೀತಿ ಮೆಚ್ಚುವಂತಹದು. ಕುಂಟಿನಿಯವರ ಶೈಲಿ ವಿಶಿಷ್ಟ. ಇಲ್ಲಿನ ಸರಳ ನಿರೂಪಣಾ ವಿಧಾನ ಈ ಪುಸ್ತಕದ ಓದನ್ನು ಸವಿಯಾಗಿಸುತ್ತದೆ. ಇಡೀ ಮಹಾಭಾರತವನ್ನು ಸ್ಪಷ್ಟವಾಗಿ, ವೇಗವಾಗಿ ಮನನ ಮಾಡಿಕೊಳ್ಳಲು, ಬೇಕಾದ ಪ್ರಸಂಗದ ವಿವರವನ್ನು ಥಟ್ಟನೆ ಆಯ್ದುಕೊಳ್ಳಲು, ಆಕರ ಗ್ರಂಥವಾಗಿಯೂ ಪುಸ್ತಕ ಸಲ್ಲುತ್ತದೆ.
"ಏನಿಲ್ಲವೆಂದರೂ ಇಲ್ಲಿಯವರೆಗೆ ಬೆಣ್ಣೆಹಳ್ಳಿ ಯಮನೂರ ಸಾಹೇಬ ಅವರು ಮೂರು ಸಾವಿರಕ್ಕೂ ಹೆಚ್ಚು ನಾಟಕಗಳ ರಂಗಸಂಗೀತಕ್ಕ...
"ಎಚ್. ಬಿ. ಎಲ್. ರಾಯರು ಛಂದೋಬದ್ಧವಾಗಿ ಪದ್ಯಗಳನ್ನು ಹೊಸೆಯಬಲ್ಲ ಅಪೂರ್ವ ವ್ಯಕ್ತಿ. ಅಪೂರ್ವ ಯಾಕೆಂದರೆ ಈ ಕಾಲದ ಸ...
“ಈ ಕೃತಿಯನ್ನು ಪ್ರಕಟಿಸುವ ವಿಚಾರ ಬಂದಾಗ ಅದು ನನಗೆ ಅಷ್ಟು ಸೂಕ್ತವಾಗಿ ತೋರಲಿಲ್ಲ. ಹೀಗಾಗಿ ಇದರ ಮೂಲ ಕಥಾ ಸ್ವರೂ...
©2025 Book Brahma Private Limited.