ಕುಂ.ವೀ. ಸರ್‌ಗೆ ನಾಡೋಜ ಸಂದಿರುವುದು ನನಗಂತೂ ಹಂಡೆ ಹಾಲು ಖುಷಿ

Date: 02-04-2025

Location: ಬೆಂಗಳೂರು


"ಮೇ ಸಾಹಿತ್ಯ ಮೇಳದಲ್ಲಿ ಅವರು ಬಿಡುವಾಗಿದ್ದರೆ ಬಂದು ಸಾಮಾನ್ಯ ಪ್ರೇಕ್ಷಕನಂತೆ ಕುಳಿತು ಎಲ್ಲ ಗೋಷ್ಠಿಗಳಿಗೂ ಸಾಕ್ಷಿಯಾಗುತ್ತಾರೆ. ಅತಿಥಿಯಾಗಿದ್ದರೆ ಮಾತ್ರ ಬರುವ ಹಲವು ಹಿರಿಯ ಸಾಹಿತಿಗಳಿಗೆ ಇವರೊಂದು ಮಾದರಿಯೇ ಸರಿ," ಎನ್ನುತ್ತಾರೆ ಸಂಗಮೇಶ ಮೆಣಸಿನಕಾಯಿ. ಅವರು ಹಂಪಿ ವಿವಿಯಿಂದ ಘೋಷಣೆಯಾದ ನಾಡೋಜ ಗೌರವದ ಕುರಿತು ಹಂಚಿಕೊಂಡ ಲೇಖನ.

'ನಾಡೋಜ'ದ ಗೌರವ ಮರಳುತ್ತಿದೆ...

ಹಂಪಿ ಕನ್ನಡ ವಿ.ವಿ. ಈ ಬಾರಿ ನಾಡೋಜ ಪ್ರಶಸ್ತಿಗೆ ಆಯ್ಕೆ ಮಾಡಿರುವ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ್, ಪಂ. ವೆಂಕಟೇಶಕುಮಾರ್ ಮತ್ತು Veerabhadrappa Kumbar ಕುಂ.ವೀ.ಸರ್ ಮೂವರೂ ಅರ್ಹರೇ. ಹಿಂದೆ ಆಡಳಿತ ಮಂಡಳಿಯ ಸದಸ್ಯರಿಗೇ ನಾಡೋಜ ಕೊಟ್ಟು 'ಕೊಡು-ಕೊಳ್ಳುವ' ವ್ಯವಹಾರಕ್ಕಿಳಿದಿದ್ದ ಕನ್ನಡ ವಿ.ವಿ. ಈಗಲಾದರೂ ತನ್ನ ಘನತೆಯನ್ನು ವಾಪಸ್ ಪಡೆಯುತ್ತಿರುವುದು ಸ್ವಾಗತಾರ್ಹ.

ಅದರಲ್ಲೂ ಕುಂ.ವೀ. ಸರ್‌ಗೆ ನಾಡೋಜ ಸಂದಿರುವುದು ನನಗಂತೂ ಹಂಡೆ ಹಾಲು ಕುಡಿದಷ್ಟು ಖುಷಿಯಾಗಿದೆ.

ಕುಂ.ವೀ. ಸರ್ ಹೆಸರು ಕೇಳಿದ್ದು ನಾನು ನಾಲ್ಕನೆಯ ಕ್ಲಾಸು ಓದುವಾಗ ಅಂದರೆ 1987-88ರಲ್ಲಿ ಇವರ 'ಬೇಟೆ' ಕಾದಂಬರಿ ಆಧರಿತ ಸಿನಿಮಾ 'ಮನಮೆಚ್ಚಿದ ಹುಡುಗಿ' ಬಿಡುಗಡೆಯಾದಾಗ. 1987ರಲ್ಲಿ ನಮ್ಮ ಕುಟುಂಬ ಕೊಪ್ಪಳ ಜಿಲ್ಲೆಯ ಭಾನಾಪುರವನ್ನು ತೊರೆದು ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ಬಂದಿತ್ತು. ಕುಂ.ವೀ. ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು ಅಂತ ಒಂದು ಪತ್ರಿಕೆಯಲ್ಲಿ (ಬಹುಶಃ ಲಂಕೇಶ ಅಥವಾ ಪ್ರಜಾಮತ ಇರಬೇಕು) ಓದಿದಾಗ "ನಮ್ಮ ಕಡೆಯವರು" ಎಂಬ ಭಾವ ಮೂಡಿತ್ತು. ಆವತ್ತಿನಿಂದ ಕುಂ.ವೀ. ಹೆಸರು ಹೃದಯದಲ್ಲಿ ಕಾಪಿಟ್ಟುಕೊಂಡಿರುವೆ.

ನಂತರ ಅಲ್ಲಲ್ಲಿ ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ ಅವರನ್ನು ಅತಿಥಿಯಾಗಿ, ಸಭಿಕರಾಗಿ ನೋಡುತ್ತ ಬಂದಿರುವೆ. ಅಷ್ಟಿಷ್ಟು ಪರಿಚಯ ಈಗ, "ಹೇಗಿದ್ದೀರಿ ಸಂಗಮೇಶ್?" ಎಂದು ಅವರು ನನ್ನನ್ನು ಗುರುತು ಹಿಡಿಯುವಷ್ಟು ಸಾಂಗತ್ಯ ಬೆಳೆದಿದೆ ಎಂಬುದು ನನ್ನ ಹೆಮ್ಮೆ.

ಕುಂ.ವೀ. ಸರ್ ಕೊಟ್ಟೂರಿನಲ್ಲಿ ಗೌರವಿಸುತ್ತಿದ್ದ ಅವರ ಹಿರಿಯ ಸಹೋದ್ಯೋಗಿ ದಿ. ಪಿ.ಎಂ. ಮಹಾಬಲೇಶ್ವರಯ್ಯನವರ ಮಗ Veeresha Sharma ನನ್ನ ಆತ್ಮೀಯ ಗೆಳೆಯ ಎಂಬುದು ಕುಂ.ವೀ.ಸರ್ ಸಿಕ್ಕಾಗ ಮಾತನಾಡಲು ಸಿಗುವ ಮತ್ತೊಂದು ವಿಷಯ.

ಇಂತಿಪ್ಪ ಕುಂ.ವೀ. ಸರ್, ಎದುರಿಗೆ ಸಿಕ್ಕಾಗ ನನ್ನನ್ನು ಅತಿಯಾಗಿ ಹೊಗಳಿ ನನ್ನ ದೇಹದ ಎಲ್ಲ ಅಂಗಾಂಗಗಳೂ ಮುದುಡುವಂತೆ ಮಾಡುತ್ತಾರೆ. "ಪ್ರಶಸ್ತಿ ವಾಪಸಿ ವಿಷಯದಲ್ಲಂತೂ ನೀವೇ ನನಗೆ ಆದರ್ಶ ಸಂಗಮೇಶಣ್ಣ. ಇದನ್ನು ಎಲ್ಲಿ ಬೇಕಾದರೂ ಹೇಳಬಲ್ಲೆ..." ಎನ್ನುತ್ತ ನನ್ನನ್ನು ಮತ್ತಷ್ಟು ಕುಬ್ಜನನ್ನಾಗಿ ಮಾಡುತ್ತಾರೆ. "ಅಣ್ಣ" ನನಗೆ ಮತ್ತೊಂದು ಶಾಪ! "ಹಂಗನ್ನಬ್ಯಾಡ್ರಿ ಸರ್" ಅಂದರ "ಅದು ನಮ್ಮ ಬಳ್ಳಾರಿ ಭಾಷೆಯ ರೂಢಿರಿ..." ಅಂತಾರೆ.

ಮೇ ಸಾಹಿತ್ಯ ಮೇಳದಲ್ಲಿ ಅವರು ಬಿಡುವಾಗಿದ್ದರೆ ಬಂದು ಸಾಮಾನ್ಯ ಪ್ರೇಕ್ಷಕನಂತೆ ಕುಳಿತು ಎಲ್ಲ ಗೋಷ್ಠಿಗಳಿಗೂ ಸಾಕ್ಷಿಯಾಗುತ್ತಾರೆ. ಅತಿಥಿಯಾಗಿದ್ದರೆ ಮಾತ್ರ ಬರುವ ಹಲವು ಹಿರಿಯ ಸಾಹಿತಿಗಳಿಗೆ ಇವರೊಂದು ಮಾದರಿಯೇ ಸರಿ.

ಸೈದ್ಧಾಂತಿಕವಾಗಿ ಹೇಗೆ ಬದ್ಧರೋ ಆರೋಗ್ಯದ ವಿಷಯದಲ್ಲೂ ಇವರು ಅಷ್ಟೇ ಕಠಿಣ. ವಿಜಯಪುರದ ಮೇ ಸಾಹಿತ್ಯ ಮೇಳದ ವೇಳೆ ನಾನು ಗೋಳ ಗುಮ್ಮಟದ ಉದ್ಯಾನದಲ್ಲಿ ವಾಕ್ ಮಾಡುತ್ತಿದ್ದರೆ ಇವರು ಕಠಿಣ ವ್ಯಾಯಾಮ ಮಾಡುತ್ತಿದ್ದರು. ಅಲ್ಲಿನ ಕೆಲವು ಸ್ಥಳೀಯರು, "ಇವರು ಯಾರೋ ಅದಾರಲ್ಲ, ಹಾಂ ಕುಂ. ವೀರಭದ್ರಪ್ಪ ಅಲ್ಲ?" ಅಂತ ತಮ್ಮ ತಮ್ಮಲ್ಲೇ ಮಾತಾಡುತ್ತಿದ್ದುದನ್ನು ನಾನೇ ಕೇಳಿಸಿಕೊಂಡಿದ್ದೆ. ಸರ್ ಮಾತ್ರ ತಮ್ಮ ಎಲ್ಲ ನಿಗದಿತ ವ್ಯಾಯಾಮಗಳನ್ನು ಮುಗಿಸಿಯೇ ಬಂದರು.

ಹುಬ್ಬಳ್ಳಿಯಲ್ಲಿ ತಮ್ಮ ಮಂಡಿ ನೋವಿಗೆ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಎಲ್ಲ ಮುಗಿದು ಹೊರಡುವ ದಿನ ಫೋನ್ ನನಗೆ ಮಾಡಿದ್ದರು. "ಯಾಕ್ ಸರ್ ಮೊದಲೇ ಹೇಳೋದಲ್ವಾ?" ಅಂದರೆ ಅದಕ್ಕೆ ಅವರ ಉತ್ತರವೇ ಬೇರೆ: "ನಾನೇ ಮಲಗಿರುವಾಗ ನೀವಾಗಲಿ ಬೇರೆಯವರಾಗಲಿ ಬಂದು ಏನು ಮಾಡ್ತೀರಿ? ಸುಮ್ಮನೆ ನೋಡಿಕೊಂಡು ಹೋಗೋದಲ್ವಾ? ಅದರ ಬದಲು ನಾನು ಸಂಪೂರ್ಣ ಚೇತರಿಸಿಕೊಂಡ ನಂತರ ಬಂದರೆ ಆರಾಮಾಗಿ ಮಾತನಾಡಬಹುದು ಅಲ್ವೇ?" ಸರ್ ಮಾತಿಗೆ ಎದುರುತ್ತರ ಕೊಡಬಹುದೇ.

ಆಗಾಗ ಫೋನ್‌ನಲ್ಲಿ ಮಾತುಕತೆ. ಇವರ ಜೊತೆ ಮಾತನಾಡುವುದೆಂದರೆ ಅದೊಂದು ರೀತಿಯ ಜಾಗತಿಕ ಸಾಹಿತ್ಯದ ಚುಂಗು ಹಿಡಿದು ಹೊರಟಂತೆ. ಅದು ಹೊಸಪೇಟೆಯಿಂದ ನಮ್ಮನ್ನು ಜಗತ್ತಿನ ಯಾವುದೇ ಭಾಗಕ್ಕೂ ಕರೆದೊಯ್ದು ನಮ್ಮ ಭಾವಕೋಶವನ್ನು ವಿಸ್ತರಿಸಬಲ್ಲದು. ಕೆಲವೊಮ್ಮೆ ಆಶ್ಚರ್ಯಕ್ಕೂ ದೂಡಿ ಮೌನವನ್ನು ಹೊದೆಸಬಲ್ಲದು. ಅಂತೆಯೇ ಇವರಿಂದ "ಎಲ್ಲೋ ಜೋಗಪ್ಪ ನಿನ್ನರಮನೆ"ಯಂಥ ಕಾದಂಬರಿ ಬಂದಿರಲು ಸಾಧ್ಯವಾಗಿರಬಹುದು.

ಇವರು ಸಂವಹಿಸ ಬಯಸಿದ ವ್ಯಕ್ತಿಗಳಲ್ಲಿ 'ಚಾಪ್ಲಿನ್', 'ರಾಹುಲ ಸಾಕೃತ್ಸಾಯನ', 'ನೇತಾಜಿ ಸುಭಾಷ ಚಂದ್ರ ಬೋಸ್', 'ಸುಭದ್ರಮ್ಮ ಮನ್ಸೂರ', 'ಶ್ರೀ ಕೃಷ್ಣದೇವರಾಯ' ಅವರ ಜೀವನ ಚರಿತ್ರೆಗಳು ಇವರಿಂದ ಬಂದಿವೆ. ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳು, ಹದಿನೇಳು ಕಥಾಸಂಕಲನಗಳು, ನಾಲ್ಕು ಅನುವಾದಿತ ಕೃತಿಗಳು ಇವರ ಬತ್ತಳಿಕೆಯಲ್ಲಿವೆ. ಏಳು ಕನ್ನಡ ಸಿನಿಮಾಗಳು ಇವರ ಕತೆ/ಕಾದಂಬರಿಗಳನ್ನು ಆಧರಿಸಿವೆ.

ಇಷ್ಟೆಲ್ಲ ಇದ್ದರೂ ಇವರು ತಮ್ಮನ್ನು ತಾವು 'ಗಾಂಧಿ ಕ್ಲಾಸು' (ಅವರ ಆತ್ಮಚರಿತ್ರೆ) ಎಂದೇ ಹೆಮ್ಮೆಯಿಂದ ಗುರುತಿಸಿಕೊಳ್ಳುತ್ತಾರೆ. ಎದುರಿಗೆ ಭೇಟಿಯಾದವರಿಗೆಲ್ಲ ಸರಳತೆಯನ್ನೇ ಮೆರೆಯುತ್ತಾರೆ.

ಹಾಗಾಗಿ ಇವರಿಗೆ ಪ್ರಶಸ್ತಿ ಬಂದರೆ ನಮ್ಮಂಥವರಿಗೆ ಎಲ್ಲಿಲ್ಲದ ಖುಷಿ.

MORE NEWS

ಕನ್ನಡ ಪುಸ್ತಕ ಪ್ರಾಧಿಕಾರದ 2022, 2023 ಹಾಗೂ 2024ನೇ ಸಾಲಿನ ಪ್ರಶಸ್ತಿ ಪ್ರಕಟ

09-04-2025 ಬೆಂಗಳೂರು

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2022, 2023 ಮತ್ತು 2024ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸ...

ಮಕ್ಕಳಿಗಾಗಿ ಕನ್ನಡ ಕಾವ್ಯ ಕಸ್ತೂರಿ ಮತ್ತು ರಂಗ-ಸಂಸ್ಕೃತಿ ಶಿಬಿರ

09-04-2025 ಧಾರವಾಡ

ಧಾರವಾಡ: ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್, ಧಾರವಾಡ ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಧಾರವಾಡ ಕುರ್ತಕೋಟಿ ...

2025 Booker prize; ಕಿರುಪಟ್ಟಿಯಲ್ಲಿ ಬಾನು ಮುಷ್ತಾಕ್‌ ಅವರ ಅನುವಾದಿತ 'ಹಾರ್ಟ್‌ ಲ್ಯಾಂಪ್‌' ಕೃತಿ

08-04-2025 ಬೆಂಗಳೂರು

ಲಂಡನ್: ಪ್ರತಿಷ್ಠಿತ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿಯ ಕಿರುಪಟ್ಟಿ ಪ್ರಕಟವಾಗಿದ್ದು, ಕನ್ನಡದ ಸಾಹಿತಿ ಬಾನು ಮುಸ್ತಾಕ್...