“ಒಟ್ಟಾರೆ ಈ ಕೃತಿ ಕೆಲವೆಡೆ ತಲೆ ಹರಟೆ ಕಷಾಯವಾಗಿಯೂ ಕಾಡಿ, ನಿಮ್ಮ ತಲೆ ತಿನ್ನುವಂತಾದರೆ ನಾನು ತಲೆ ಕೆಡಿಸಿಕೊಂಡು ಬರೆದಿದ್ದಕ್ಕೆ ಮತ್ತಷ್ಟು ಸಾರ್ಥಕತೆ,” ಎನ್ನುತ್ತಾರೆ ರಾಜು ಅಡಕಳ್ಳಿ ಅವರು ತಮ್ಮ"ಹರಟೆ ಕಷಾಯ" ಕೃತಿಗೆ ಬರೆದ ಲೇಖಕರ ಮಾತು.
ಈ 'ಹರಟೆ ಕಷಾಯ'ವನ್ನು ಬರೆಯಲೇಬೇಕೆಂದು ಹಠಕ್ಕೆ ಬಿದ್ದು ಬರೆದಿದ್ದಲ್ಲ ಅಥವಾ ಒತ್ತಾಯಕ್ಕೆ ಬಸಿರಾಗಿ ಹೆತ್ತಿದ್ದೂ ಅಲ್ಲ.
ಇದನ್ನು ತೀರಾ ಗಂಭೀರ ಕೃತಿ ಎಂದು ಭಾವಿಸುವುದಕ್ಕಿಂತಲೂ ಬದುಕಿನ ಸುಖ, ದುಃಖ, ಪ್ರೀತಿ, ನಗು, ಸಂಬಂಧ, ವಿಡಂಬನೆ, ಹಾಸ್ಯ, ಚೋದ್ಯ, ಚೊಗರು, ಚಿಗುರು, ಚೆಂದಗಳನ್ನು ಒಳಗೊಂಡಿರುವ ಕೋಸುಂಬರಿ ಎನ್ನಬಹುದೇನೋ.
ಬೇರೆಯವರ ಮನಸ್ಸಿಗೆ ಕಚಗುಳಿ ನೀಡುವುದೆಂದರೆ, ಬೇರೆಯವರ ಕಾಲೆಳೆಯುವುದೆಂದರೆ ನಮಗೇನೋ ಒಂಥರಾ ಸಂತೋಷವೇ. ಆ ಕೆಲಸವನ್ನು ಈ ಪುಸ್ತಕವೇ ಮಾಡುತ್ತದೆ ಎಂದು ಅಂದುಕೊಂಡು ಬರೆದಿದ್ದೇನೆ. 'ಕಷಾಯ' ಹಾಲಿನ ಜತೆ 'ಸಾಂಬಾರ' ವಸ್ತುಗಳನ್ನು ಸೇರಿಸಿ ನೀಡುವ ಪೇಯ. ಬೇರೆಯವರಿಗೆ 'ತಲೆಬಿಸಿ' ಮಾಡಿಸುವುದಕ್ಕೆ, ಮೂಡಿಸುವುದಕ್ಕೂ ಕಷಾಯ ಕೊಡುವುದು ಎಂದು ಮಲೆನಾಡಿನ ಆಡುಭಾಷೆಯಲ್ಲಿ ಹೇಳುವುದೂ ಉಂಟು.
ಈ ಹಿನ್ನೆಲೆಯಲ್ಲಿ ನನ್ನ ಶಬ್ದ ಸಾಲುಗಳೇ ನಿಮಗೆ ಕಷಾಯ ಹಾಗಂತ ಗಂಭೀರ ವಿಚಾರಗಳು ಇದರಲ್ಲಿಲ್ಲ ಎಂದಲ್ಲ, ಇದು ಅವರವರ ಭಾವಕ್ಕೆ! ಕೆಲವೆಡೆ ಮುಖದ ಮೇಲೆ ನಾಲ್ಕು ಗೆರೆ ಮೂಡಿಸುವಂಥ ಗಂಭೀರ ಚಿಂತನೆಗಳಿಗೆ-ಚಿಂತೆಗಳಿಗೆ ಚಿನಕುರುಳಿಯ ಸ್ಪರ್ಶ ನೀಡಿ, ಆ ಚಿನಕುರುಳಿಯನ್ನೇ ಚೆನ್ನಕುರುಳಿಯನ್ನಾಗಿ ಕಟ್ಟಿಕೊಡುವ ಪ್ರಯತ್ನವೂ ಇದರಲ್ಲಿದೆ.
ಆಗಾಗ ತೋಚಿದ್ದು, ನೆನಪಾಗಿದ್ದನ್ನು ಬರೆದಿಟ್ಟಿದ್ದ ನನ್ನ ಕೈಪಟ್ಟಿ ಒಮ್ಮೆ ನಮ್ಮ ಮನೆಯಲ್ಲಿ ಅಕ್ಷರ ತಪಸ್ವಿ ವಿಶ್ವೇಶ್ವರ ಭಟ್ಟರ ಕಣ್ಣಿಗೆ ಕಂಡಿದ್ದೇ ತಡ ಅವರು 'ಏನಯ್ಯಾ ನೀನು ಇದನ್ನು ಯಾಕೆ ಇನ್ನೂ ಪುಸ್ತಕವಾಗಿ ಪ್ರಕಟಿಸಿಲ್ಲವಯ್ಯಾ...' ಎಂದು ತಿವಿದರು. ಇದಕ್ಕೆ ಸಾಧಿಯಾಗಿ ಸಪ್ನ ಬುಕ್ ಹೌಸ್‌ನ ನಲ್ಲೆಯ ದೊಡ್ಡಗೌಡರು, ನಿತಿನ್ ಷಾ ಜೀಯವರೂ ಈ ಪುಸ್ತಕ ರೂಪಕ್ಕೆ ಕಾವು ಕೊಟ್ಟ ಫಲಶೃತಿಯಾಗಿ ಈ ಪುಸ್ತಕದ ಮರಿ ನಿಮ್ಮ ಕೈ ಸೇರುವಂತಾಗಿದೆ.
ಈ ಕೃತಿಯಲ್ಲಿನ ಅಂಶಗಳು ಯಾವುದೇ ವ್ಯಕ್ತಿಗಳ ಕುರಿತಾಗಿದ್ದಲ್ಲ. ಬೇರೆ ಭಾಷೆಗಳಿಂದ ಕಡ ತಂದಂಥವೂ ಅಲ್ಲ. ಯಾರನ್ನೂ ಗುರಿಯಾಗಿಸಿಕೊಂಡು ಬರೆದಿದ್ದೂ ಅಲ್ಲ, ಜೀವನದಲ್ಲಿ ಕಂಡಿದ್ದು, ಕೇಳಿದ್ದು, ಕಲ್ಪನೆ ಮೂಡಿದ್ದು... ಇವುಗಳಿಗೆ ಒಂದಷ್ಟು ಉಪ್ಪು, ಖಾರ, ಲಿಂಬು, ಶುಂಠಿ, ಒಗ್ಗರಣೆ ಸೇರಿಸಿ ಈ ಪುಸ್ತಕದ ಪಾಕ ತಯಾರಿಸಿ ನಿಮಗೆ ಬಡಿಸುತ್ತಿರುವುದಷ್ಟೇ ನನ್ನ ಕೆಲಸ. ಸರಿಯಾಗಿ ಊಟ ಮಾಡುವುದು ನಿಮ್ಮ ಕೆಲಸ. ಒಟ್ಟಾರೆ ನಿಮಗೆಲ್ಲಾ ಇದು ರುಚಿ ಎನಿಸಿದರೆ ನನ್ನ ಧನ್ಯವಾದಗಳ ಸಮರ್ಪಯಾಮಿ! ಹೆಂಡತಿ ಬಗ್ಗೆ, ಗುಂಡಿನ ಬಗ್ಗೆ, ಗಂಡನ ಬಗ್ಗೆ ಬರೆದಿರುವುದನ್ನು ಓದಿ ನಕ್ಕು ಬಿಡಿ. ತುಂಬಾ ಗಂಭೀರವಾಗಿ ಪರಿಗಣಿಸಬೇಡಿ. ತಮಾಷೆಯೂ ಜೀವನಕ್ಕೆ ಬೇಕಲ್ಲ. ಈ ರೀತಿಯ ಬರಹಗಳ ಸೃಷ್ಟಿಗೆ ಕುಳಿತಾಗ ಬೀಚಿ, ಡುಂಡಿರಾಜ್, ವಿಶ್ವೇಶ್ವರ ಭಟ್, ದಿನಕರ ದೇಸಾಯಿ ಅವರಂಥವರ ಉಕ್ತಿಗಳು - ನಮ್ಮನ್ನು ಕೆಣಕುವುದರಿಂದ ಅವರಿಗೂ ನನ್ನ ಅಕ್ಷರಪೂರ್ವಕ ವಂದನೆಗಳು.
'ಸಪ್ನ'ದಂಥ ಪ್ರತಿಷ್ಠಿತ ಪ್ರಕಾಶನವು ಕನ್ನಡ ಬಂಧುಗಳಿಗೆ ರಾಜ್ಯೋತ್ಸವದ ಉಡುಗೊರೆಯಾಗಿ ಈ ಕೃತಿಯನ್ನು ನೀಡಲು ಪ್ರಕಟಣೆಗೆ ಆಯ್ಕೆಗೊಳಿಸಿರುವುದು ನನಗೆ ಮತ್ತಷ್ಟು ಹಿಗ್ಗು! ಹೆಮ್ಮೆ!! ಹೀಗಾಗಿ ಮತ್ತೊಮ್ಮೆ ಸಪ್ನಕ್ಕೆ ನನ್ನ ನಮೋನ್ನಮಃಗಳು ವಿಚಾರಗಳಿಗೆ ಒಂದಷ್ಟು ವಿನೋದ, ಪನ್ ಮತ್ತು ಫನ್‌ಗಳನ್ನೂ ಸೇರಿಸಿ ಈ 'ಹರಟೆ ಕಷಾಯ'ವನ್ನು ಸಿದ್ಧಪಡಿಸಿ, ಈ ಕಷಾಯಕ್ಕೆ ಸ್ವಲ್ಪ ಜೀರಿಗೆ, ಮೆಂತ್ಯ, ಕಾಳಮೆಣಸು, ಏಲಕ್ಕಿ, ದಾಲ್ಟಿನ್ನಿಗಳಂಥ ಒಂದಷ್ಟು ಮಸಾಲೆ ಸೇರಿಸುವಲ್ಲಿ ಮಗ ನಂದನ್, ಸೊಸೆ ನಾಗಶ್ರೀ, ಶಿರಸಿಯ ವೀಣಾ ಅರುಣ್ ಜೋಶಿ, ಅಪರ್ಣಾ, ಬನಾನಾ ಕೌಂಟಿಯ ಎಂ.ಜಿ. ಹೆಬ್ಬಾರ್ ಅವರೂ ಒಂದಷ್ಟು ಸಾಲುಗಳನ್ನು ಸಾಲವಾಗಿ ನೀಡಿದ್ದಾರೆ.
ಈ ಸಾಲಕ್ಕೆ ಬಡ್ಡಿಯಾಗಿ ನನ್ನ ಕೃತಜ್ಞತೆಗಳು!
ಒಟ್ಟಾರೆ ಈ 'ಹರಟೆ ಕಷಾಯ' ಕೆಲವೆಡೆ 'ತಲೆ ಹರಟೆ ಕಷಾಯ'ವಾಗಿಯೂ ಕಾಡಿ, ನಿಮ್ಮ ತಲೆ ತಿನ್ನುವಂತಾದರೆ ನಾನು ತಲೆ ಕೆಡಿಸಿಕೊಂಡು ಬರೆದಿದ್ದಕ್ಕೆ ಮತ್ತಷ್ಟು ಸಾರ್ಥಕತೆ.
ಕೊನೆಯಲ್ಲಿ:
ನಿಮ್ಮ ಪ್ರೀತಿಗೆ ಅದರ ರೀತಿಗೆ ಈ ಕೃತಿಯೇ ಕಾಣಿಕೆ!
ವಂದನೆಗಳು.
- ರಾಜು ಅಡಕಳ್ಳಿ
"ಪುಸ್ತಕದ ಬಗ್ಗೆ ನಾನು ಹೆಚ್ಚು ವಿವರಿಸಲು ಹೋಗುವುದಿಲ್ಲ. ಏಕೆಂದರೆ ಅದು ನಿಮ್ಮ ಓದಿನ ಸುಖಕ್ಕೆ ಧಕ್ಕೆ ತಂದೀತು. ಆ...
“ಈ ಕೃತಿ ಬರೀ ಕೃತಿಗಳ ವಿಮರ್ಶೆಯಾಗಿ ರೂಪಗೊಂಡಿಲ್ಲ. ಸಾಹಿತ್ಯ- ಸಂಸ್ಕೃತಿ ಕುರಿತ ಸಾಂಸ್ಕೃತಿಕ ಅಧ್ಯಯನವಾಗಿ ಪರಿಣ...
“ಕೃತಿಯು ನನ್ನ ನಾಲ್ಕು ದಶಕಗಳ ಬರೆವಣಿಗೆ ಮತ್ತು ಚಿಂತನೆಗೆ ಪ್ರೇರಕರಾದ ಮಹಾನ್ ದಾರ್ಶನಿಕ ಮನೋಭಾವದ ವ್ಯಕ್ತಿಗಳ ...
©2025 Book Brahma Private Limited.