Samvikshane; ಸಾಹಿತ್ಯ-ಸಂಸ್ಕೃತಿಯ ಮಾಹಿತಿ ಕಣಜ


“ಈ ಕೃತಿ ಬರೀ ಕೃತಿಗಳ ವಿಮರ್ಶೆಯಾಗಿ ರೂಪಗೊಂಡಿಲ್ಲ. ಸಾಹಿತ್ಯ- ಸಂಸ್ಕೃತಿ ಕುರಿತ ಸಾಂಸ್ಕೃತಿಕ ಅಧ್ಯಯನವಾಗಿ ಪರಿಣಮಿಸಿದೆ. ಒಂದು ಪ್ರಾಂತ್ಯದ ವೈವಿಧ್ಯಮಯ ಸಾಹಿತ್ಯವನ್ನು ಪರಿಚಯಿಸುತ್ತದೆ,” ಎನ್ನುತ್ತಾರೆ ಡಾ. ಅಮರೇಶ ನುಗಡೋಣಿ ಅವರು ಡಾ. ರಘುಶಂಖ ಭಾತಂಬ್ರಾ ಅವರ ಸಂವೀಕ್ಷಣೆ ಕೃತಿಗೆ ಬರೆದ ಮುನ್ನುಡಿ.

ಡಾ. ರಘುಶಂಖ ಭಾತಂಬ್ರಾ ಅವರು ಮಧ್ಯಕಾಲೀನ ಸಾಹಿತ್ಯ-ಸಂಸ್ಕೃತಿ ಕುರಿತು ಆಳವಾದ ಅಧ್ಯಯನಕಾರರಾಗಿದ್ದಾರೆ. ವಚನ ಸಾಹಿತ್ಯ ಮತ್ತು ವಚನೋತ್ತರ ಕಾಲಾವಧಿಯಲ್ಲಿ ರಚನೆಯಾದ ವಚನ ಸಾಹಿತ್ಯ ಸಂಬಂಧಿ ವಾಹ್ಮಯವನ್ನು ಶ್ರಮ, ಶ್ರದ್ಧೆ ಮತ್ತು ಜವಾಬ್ದಾರಿಯಿಂದ ಗ್ರಹಿಸುವವರಾಗಿದ್ದಾರೆ. ವಚನ ಸಾಹಿತ್ಯ ಕೇಂದ್ರೀಕರಿಸಿಯೇ ಹರಿಹರ, ರಾಘವಾಂಕ, ಚಾಮರಸ, ನೂರೊಂದು ವಿರಕ್ತರು, ಸ್ಥಲಕಟ್ಟು ಸಂಪಾದನೆಗಳು ಟೀಕು, ವ್ಯಾಖ್ಯಾನಗಳು, ಶೂನ್ಯ ಸಂಪಾದನೆಗಳು ಅಲ್ಲದೆ ಇತರ ಪ್ರಕಾರಗಳಲ್ಲಿ ಸಾಹಿತ್ಯ ರಚನೆಯಾಗಿದೆ. ಆಧುನಿಕ ಸಾಹಿತ್ಯದಲ್ಲಿ ಶತಮಾನದ ಉದ್ದಕ್ಕೂ ರಚನೆಯಾದ ಸಾಹಿತ್ಯದಲ್ಲಿಯೂ ವಚನ ಸಾಹಿತ್ಯದ ಪ್ರಭಾವವಿದೆ. ಈ ಎಲ್ಲ ವಿದ್ಯಮಾನವನ್ನು ಲೇಖಕರು ಬಲ್ಲವರಾಗಿದ್ದಾರೆ.

ಡಾ. ರಘುಶಂಖ ಭಾತಂಬ್ರಾ ಅವರ ಅಧ್ಯಯನ ಮತ್ತು ಬರವಣಿಗೆ ಎರಡರಲ್ಲೂ ಅಪಾರ ತಾಳ್ಮೆಯಿದೆ. ತೀರ್ಮಾನಗಳಲ್ಲಿ, ಬರವಣಿಗೆಯಲ್ಲಿ ಅವಸರವೆಂಬುದು ಸುಳಿಯುವುದಿಲ್ಲ. ಸಹನೆಯಿಂದ ಪರಿಶೀಲಿಸುವ ಮತ್ತು ಸ್ಥಾನಮಾನ ಸಲ್ಲಿಸುವ ಧೋರಣೆಯಿದೆ. ಇದರಿಂದಾಗಿ ನಗಣ್ಯಕ್ಕೀಡಾಗಬಹುದಾದ ಸಾಹಿತ್ಯವನ್ನು ತಮ್ಮ ವಿಶಿಷ್ಟ ತಾತ್ವಿಕತೆಯಿಂದ ಅದಕ್ಕೊಂದು ಗೌರವ ಸ್ಥಾನವನ್ನು ಕಲ್ಪಿಸುತ್ತಾರೆ ಎನ್ನುವುದಕ್ಕೆ 'ಸಂವೀಕ್ಷಣೆ' ವಿಮರ್ಶಾತ್ಮಕ ಬರಹಗಳೇ ಸಾಕ್ಷಿ.

'ಸಂವೀಕ್ಷಣೆ' ಡಾ. ರಘುಶಂಖ ಭಾತಂಬ್ರಾ ಅವರ ವಿಮರ್ಶಾ ಕೃತಿ. ಹಲವಾರು ಕಾರಣಗಳಿಂದ ಗಮನ ಸೆಳೆಯುವ ಗಮನಾರ್ಹ ಕೃತಿ. ಕೃತಿಯಲ್ಲಿ ಮುಕ್ಕಾಲು ಪಾಲು ಪ್ರಕಟಿತ ಪುಸ್ತಕಗಳನ್ನು ಕುರಿತು ಬರೆದ ಲೇಖನಗಳಿವೆ. ಕೆಲವು ಸಂಪಾದಿತ ಕೃತಿಗಳನ್ನು ಕುರಿತು ಬರೆದಿರುವ ಸಮೀಕ್ಷಾ ಬರೆಹಗಳಿವೆ. 'ಸಂವೀಕ್ಷಣೆ' ಎನ್ನುವ ಪದವೇ ವಿಶಿಷ್ಟವಾದುದು. ಯಾವುದಾದರೂ ವಿಶೇಷವಾದ ಸಂಗತಿಯನ್ನು ಅವಲೋಕಿಸುವ, ನಿಕಷಕ್ಕೊಳಪಡಿಸುವ, ಸಮಗ್ರ ನೋಟವನ್ನು ಕಟ್ಟಿಕೊಡುವ ಸಂದರ್ಭಕ್ಕೆ 'ಸಂವೀಕ್ಷಣೆ" ಎನ್ನುತ್ತಾರೆ.

ಇಲ್ಲಿ ಲೇಖಕರು ತಮ್ಮ ಸಂವೀಕ್ಷಣೆಯ ಒಡಲೊಳಗೆ ಹಲವಾರು ಮೌಲಿಕ ಪುಸ್ತಕಗಳನ್ನು ತುಂಬಿಕೊಂಡಿದ್ದಾರೆ. ಹೈದರಾಬಾದ ಕರ್ನಾಟಕ ಎಂಬ ಕರ್ನಾಟಕದ ಉತ್ತರದ ತುದಿಯಲ್ಲಿರುವ ಕೆಲವು ಜಿಲ್ಲೆಗಳನ್ನು ಒಳಗೊಂಡ ಪ್ರಾಂತ್ಯವೆಂಬುದು ಈಗ ಕನ್ನಡಿಗರಿಗೆ ಗೊತ್ತಾಗಿದೆ. ೧೭೨೪ರಿಂದ ಹೈದರಾಬಾದ ಸಂಸ್ಥಾನದ ಅಧೀನದಲ್ಲಿತ್ತು. ನಿಜಾಮರು ಆಳ್ವಿಕೆ ನಡೆಸಿಕೊಂಡು ಬಂದು ೧೯೪೮ರಲ್ಲಿ ನಿರ್ಗಮಿಸಿದರು. ಈ ಪ್ರಾಂತ್ಯ ಪ್ರಾಚೀನ ಕಾಲದಿಂದಲೂ ಸಾಹಿತ್ಯ-ಸಂಸ್ಕೃತಿ, ವ್ಯವಸಾಯ, ವ್ಯಾಪಾರ, ಮುಂತಾದ ಕ್ಷೇತ್ರಗಳಲ್ಲಿ ಸಂಪದ್ಭರಿತವಾಗಿತ್ತು. ಸಾಹಿತ್ಯ ವಿಷಯಕ್ಕೆ ಬಂದರೆ ಕನ್ನಡ ಸಾಹಿತ್ಯ ಹುಟ್ಟಿ ಬೆಳೆದದ್ದು ಈ ಪ್ರಾಂತ್ಯದಲ್ಲೇ. ಜೈನ ಸಾಹಿತ್ಯ ಈ ಪ್ರಾಂತ್ಯದಲ್ಲೇ ರಚನೆಯಾಯಿತು, ಪಂಪ ಮಹಾಕವಿ ಇಲ್ಲಿಯೇ ಇದ್ದ. 'ಕವಿರಾಜ ಮಾರ್ಗ' ಇಲ್ಲಿಯದ್ದೇ. ವಚನ ಚಳುವಳಿ-ವಚನ ಸಾಹಿತ್ಯ ಹುಟ್ಟಿ ಬೆಳೆದದ್ದು ಈ ಪ್ರಾಂತ್ಯದಲ್ಲೇ. ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ ಸೇರಿ ೩೬೦ಕ್ಕೂ ಹೆಚ್ಚು ವಚನಕಾರರು ವಚನ ರಚಿಸಿದ್ದು ಇಲ್ಲಿಯೇ. ರಾಜಪ್ರಭುತ್ವ-ಧರ್ಮಪ್ರಭುತ್ವದ ಹಿಡಿತಕ್ಕೆ ಸಿಕ್ಕು ನರಳುತ್ತಿದ್ದ ಜನಸಮುದಾಯಗಳಿಗೆ ಹೊಸ ಬಾಳ್ವೆಯನ್ನು ವಚನಕಾರರು ಕಲ್ಪಿಸುವ ಚಳುವಳಿ ನಡೆದದ್ದು ಇಲ್ಲಿಯೇ. 'ಸಮಾಜವಾದ' ಬೆಳೆದದ್ದೇ ವಚನಕಾರರಿಂದ. ಮುಂದೆ ಹರಿಹರ, ರಾಘವಾಂಕ, ಚಾಮರಸ, ಶೂನ್ಯಸಂಪಾದನಕಾರರು, ಷಟಸ್ಥಲಕಾರರು, ಟೀಕು, ವ್ಯಾಖ್ಯಾನಕಾರರು, ವಿವಿಧ ಶಾಸ್ತ್ರಕಾರರು ಇಲ್ಲಿಯೇ ಇದ್ದವರು. ದಾಸ ಸಾಹಿತ್ಯ, ತತ್ತ್ವಪದ ಸಾಹಿತ್ಯ ಚಳುವಳಿಗಳು ನಡೆದದ್ದು ಇಲ್ಲಿಯೇ. ಆದರೆ ಆಳುವ ಪ್ರಭುತ್ವಗಳ ಭಾಷೆ ಕನ್ನಡವಲ್ಲದ್ದರಿಂದ, ಕನ್ನಡ ಭಾಷೆಗೆ ಮನ್ನಣೆ ಸಿಗಲಿಲ್ಲ. ಹೀಗಾಗಿ ಆಧುನಿಕ ಸಾಹಿತ್ಯ ರಚನೆಯಾಗಲು ಕನ್ನಡ ವಾತಾವರಣವಿರಲಿಲ್ಲ.

ಇಂಥ ಏಳುಬೀಳುಗಳನ್ನು ಕಂಡ ಈ ಪ್ರಾಂತ್ಯದ ಆಧುನಿಕ ಕಾಲದ ಲೇಖಕರು ಶತಮಾನ ಕಳೆದರೂ ಪ್ರಾತಿನಿಧ್ಯ ಸಿಗದೆ ಹಿನ್ನೆಲೆಯಲ್ಲೇ ಉಳಿಯುವಂತಾಗಿದೆ. ಆದರೆ ಈ ಒಂದು ರೀತಿಯಲ್ಲಿ 'ಅಲಕ್ಷಿತ' ಸಾಹಿತ್ಯಕ್ಕೆ ಸೇರುವಂಥ ಲೇಖಕರನ್ನು, ಅವರ ಸಾಹಿತ್ಯವನ್ನು ಶೋಧನ ಮಾಡಿ ವಿಮರ್ಶೆಗೆ ಒಳಗು ಮಾಡಿ ಮುನ್ನೆಲೆಗೆ ಬರುವಂತೆ ಶ್ರಮಿಸಿದ್ದಾರೆ ಡಾ. ರಘುಶಂಖ ಭಾತಂಬ್ರಾ ಅವರು. ಡಾ. ಚೆನ್ನಬಸವ ಪಟ್ಟದ್ದೇವರನ್ನು ಕುರಿತು ಹೊಸಗನ್ನಡ ಕಾವ್ಯದಲ್ಲಿ ವ್ಯಕ್ತವಾಗಿರುವ ವ್ಯಕ್ತಿತ್ವವನ್ನು ಲೇಖಕರು ಸಂಗ್ರಹಿಸಿದ್ದಾರೆ. ಗಡಿನಾಡಲ್ಲಿದ್ದು ಅದೆಷ್ಟು ಕವಿಗಳು ಕವಿತೆ ಬರೆದಿದ್ದಾರೆಂದು ಬೆರಗಾಗುತ್ತದೆ. ಹೊಸಗನ್ನಡದಲ್ಲಿ ಬರೆದಿದ್ದಾರೆ. ಒಂದು ರೀತಿಯಲ್ಲಿ ಇವರೆಲ್ಲ ಅಲಕ್ಷಿತರೇ. ಇವರ ರಚನೆಗಳೂ ಅಲಕ್ಷಿತವೇ. ಇಂತಹ ಸಾಹಿತ್ಯವನ್ನು ಕೃತಿಯ ಲೇಖಕರು ಗ್ರಹಿಸುವ ರೀತಿ, ಅಭಿವ್ಯಕ್ತಿಸುವ ಕ್ರಮ ಗಮನಾರ್ಹವಾಗಿದೆ. ಡಾ. ಚೆನ್ನಬಸವ ಪಟ್ಟದ್ದೇವರ ವ್ಯಕ್ತಿತ್ವವನ್ನು ನಿರೂಪಿಸಿರುವ ಲೇಖಕರ ಬಗ್ಗೆ 'ಪ್ರಸ್ತುತ ಸಂಕಲನದ ಕವಿಗಳು ರಾಜ್ಯದ ಬೇರೆ ಬೇರೆ ಜಿಲ್ಲೆಯವರು, ಸಾಮಾಜಿಕ ಭಾಷಾ 'ಪ್ರಭೇದದವರು' ಎಂದು ಅಭಿಪ್ರಾಯಪಡುತ್ತಾರೆ. ಗಡಿನಾಡ ಬದುಕು-ಸಂಸ್ಕೃತಿಯೇ ವಿಶಿಷ್ಟ ಎಂದು ಗ್ರಹಿಸುವ ಗುಣ ವಿಮರ್ಶಕರಲ್ಲಿರಬೇಕು.

ಈ ದೃಷ್ಟಿಯಿಂದ ಡಾ. ರಘುಶಂಖ ಭಾತಂಬ್ರಾ ಅವರು ನಿರ್ಲಕ್ಷ್ಯಕ್ಕೀಡಾದ ಪ್ರಾಂತ್ಯದಲ್ಲಿದ್ದು ಇಲ್ಲಿನ ನಿರ್ಲಕ್ಷಿತ ಸಾಹಿತ್ಯವನ್ನೇ ಅಧ್ಯಯನಕ್ಕೆ ಒಳಪಡಿಸಿದ್ದಾರೆ. 'ನಾಮಾವಳಿಗೊಂದು ಬೆಳಕಿಂಡಿ' ಲೇಖನವೂ ಗಮನ ಸೆಳೆಯುತ್ತದೆ. ಈ 'ನಾಮಾವಳಿ' ಸಾಹಿತ್ಯ ಪ್ರಕಾರವನ್ನು ಮಧ್ಯಕಾಲೀನ ಸಾಹಿತಿಗಳು ಬೆಳೆಸಿದ್ದಾರೆ. ಆಧುನಿಕ ಕಾಲದಲ್ಲಿ ಈ ಪ್ರಕಾರವನ್ನು ಯಾರೂ ಬೆಳೆಸಿಲ್ಲ. ಆಧುನಿಕ ಕಾಲದಲ್ಲಿದ್ದರೂ ಸಂಪ್ರದಾಯವಾದಿಯಾದ ಶ್ರೀ ರಘುನಾಥ ಹಡಪದರು ತಮ್ಮ ಹಲವು ಹವ್ಯಾಸಗಳ ನಡುವೆ 'ನಾಮಾವಳಿ” ಸಾಹಿತ್ಯವನ್ನು ರಚಿಸಿದ್ದಾರೆ. ರೂಪಾಂತರಿಸಿದ್ದಾರೆ. ಹಲವರು ಬರೆದಿರುವ ತತ್ವಪದಗಳನ್ನು ಸಂಗ್ರಹಿಸಿದ್ದಾರೆ. ಹಲವರ ಮೇಲೆ ಭಕ್ತಿ ಪ್ರಧಾನವಾಗಿ ಗ್ರಂಥಗಳನ್ನು ರಚಿಸಿದ್ದಾರೆ. "ಸ್ವತಃ ಹಲವಾರು ನಾಮಾವಳಿಗಳನ್ನು ರಚಿಸಿದ್ದಾರಲ್ಲದೆ ಹಲವರ ನಾಮಾವಳಿಗಳನ್ನು ಛಂದಸ್ಸಿನ ರೂಪವಾಗಿರುವ ಉತ್ಸಾಹ ರಗಳೆಯ ಚೌಕಟ್ಟಿಗೆ ರೂಪಾಂತರಿಸಿ ಹಾಡುಗಬ್ಬವಾಗಿಸಿ ಯಶಸ್ವೀ ಸಂಪಾದಕರಾಗಿ" ಬೆಳೆದಿದ್ದಾರೆಂದು ಕೃತಿಕಾರರು ಹೇಳಿದ್ದಾರೆ.

ಡಾ. ರಘುಶಂಖ ಭಾತಂಬ್ರಾ ಅವರ ವಿಶೇಷತೆ ಏನೆಂದರೆ, ಒಂದು ಕೃತಿ, ಅದರ ವಸ್ತು ವಿಷಯವನ್ನು ಅರಿಯುವ ಪ್ರಯತ್ನ ಮಾಡುತ್ತಾರೆ. ಅಂದರೆ ಕೃತಿಯ ವಸ್ತು- ವಿಷಯಗಳ ಬಗ್ಗೆ ತಮಗಿರುವ ಜ್ಞಾನವನ್ನು ಹಂಚಿಕೊಳ್ಳುತ್ತಾರೆ. “ನಾಮ ಎಂದರೆ ಹೆಸರು; ವ್ಯಾಕರಣದಲ್ಲಿ ವಸ್ತುವಿನ ಹೆಸರನ್ನು ಸೂಚಿಸುವ ಪದ; ಒಬ್ಬ ವ್ಯಕ್ತಿಯನ್ನು ಕರೆಯುವ ಸಂಜ್ಞಾಶಬ್ದ ಎಂಬರ್ಥಗಳಿವೆ. 'ನಾಮಾವಳಿ' ಎಂದರೆ ಹೆಸರುಗಳ ಮಾಲಿಕೆ, ವ್ಯಕ್ತಿಸೂಚಿ, ವೈಶಿಷ್ಟ್ಯಗಳನ್ನು ಬಣ್ಣಿಸುವ ಹೆಸರುಗಳ ಸಮೂಹ ಎಂದರ್ಥ. ಸಾಮಾನ್ಯವಾಗಿ ನಾಮಾವಳಿಗಳಲ್ಲಿ ಒಂದೇ ಪದ ಹಲವು ಅರ್ಥಗಳಲ್ಲಿ ಪ್ರಯೋಗ ವಾಗುತ್ತದೆ. ಸಂದರ್ಭಾನುಸಾರವಾಗಿ ಅದು ಬೇರೆಬೇರೆ ಅರ್ಥಗಳನ್ನು ಕೊಡುತ್ತದೆ. ಅರ್ಥವೊಂದೇ ಆಗಿದ್ದರೂ ಅದು ಪದಭೇದ, ನಾನಾ ಅರ್ಥಗಳಿಂದ ಕೂಡಿರುತ್ತದೆ. ನಾಮಾವಳಿಯಲ್ಲಿ ಅಂತರ್ಗತ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ" ಈ ಬಗೆಯಲ್ಲಿ ತಮ್ಮ ಅರಿವನ್ನು ದಾಖಲಿಸುತ್ತಾರೆ. ಈ ಲೇಖನದಲ್ಲಿ ಶ್ರೀ ರಘುನಾಥ ಹಡಪದ ಅವರ ಸಾಹಿತ್ಯ ರಚನೆಯ ಧೋರಣೆಯನ್ನು ಕಾಣುತ್ತೇವೆ.

'ಧರಿನಾಡ ಕಥನ ಗೀತೆಗಳು : ಅಂತರಾಳ' ಪಂಚಾಕ್ಷರಿ ಜಿ. ಹಿರೇಮಠ ಅವರು ಸಂಪಾದಿಸಿರುವ ಜನಪದ ಕಾವ್ಯಗಳ ಸಂಕಲನ, ಸಂಪಾದನ ಕ್ರಮ ಮತ್ತು ಕಾವ್ಯಗಳನ್ನು ಗ್ರಹಿಸುವ ವಿಧಾನವನ್ನು ಲೇಖಕರು ಹೇಳುವುದಕ್ಕಿಂತ, ಸಂಪಾದಕರು ಹೇಳಬೇಕು. ಇಲ್ಲಿ ಲೇಖಕರು ಕಾವ್ಯಗಳ ವಸ್ತು-ವಿಷಯಗಳನ್ನು ವಿವರಿಸಿದ್ದಾರೆ. ಈ ಮೂಲಕ 'ಬುಲಾಯಿ ಹಾಡುಗಳು' ಎಂಬ ಪ್ರಕಾರ ಬೀದರ್ ಭಾಗಕ್ಕೆ ಮಾತ್ರ ಮೀಸಲಾಗಿದ್ದುದ್ದಕ್ಕೆ ಕಾರಣಗಳನ್ನು ಶೋಧಿಸಬೇಕಾಗಿತ್ತು.

'ಹಾರಿತೋ ಹಂಸ ಹಾರಿತು : ಸಮೀಕ್ಷೆ' ಇದು ಡಾ. ಈಶ್ವರಯ್ಯ ಮಠ ಅವರ ಪಿಎಚ್.ಡಿ ಮಹಾಪ್ರಬಂಧ 'ಸಂವೀಕ್ಷಣೆ' ಕೃತಿಕಾರರು ಗುರುತಿಸಿರುವಂತೆ. ಈ ಮಹಾಪ್ರಬಂಧ ಡಾ. ಈಶ್ವರಯ ಮಠ ಅವರ ಅಧ್ಯಯನ ಮತ್ತು ಪರಿಶ್ರಮದ ಫಲವಾಗಿ ರಚಿತವಾದ ಅಧ್ಯಯನ ಗ್ರಂಥ, ವಚನ ಸಾಹಿತ್ಯ ರಚನೆಯಾದ ಕಾಲದಿಂದಲೇ ಈ ಸ್ವರವಚನಗಳು ರಚನೆಯಾಗಿವೆ. ನಂತರ 14, 15ನೇ ಶತಮಾನದಿಂದ ಈ ಪ್ರಕಾರವನ್ನು ಬಲಪಡಿಸಿದವರು ಹಲವರಿದ್ದಾರೆ. ಆದರೆ ವಚನ ಸಾಹಿತ್ಯದಷ್ಟು ವೈಚಾರಿಕತೆ, ಕ್ರಾಂತಿಕಾರತನ, ಸತ್ವ ಸ್ವರವಚನಗಳಲ್ಲಿ ಕಾಣುವುದಿಲ್ಲವೆಂದು ಸಂಶೋಧಕರು, ಆಧುನಿಕ ವಿಮರ್ಶಕರು ಈ ಪ್ರಕಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಈ ಸ್ವರವಚನ ಸಾಹಿತ್ಯಕ್ಕೆ ಸ್ವತಂತ್ರವಾದ ಅಸ್ತಿತ್ವವಿದೆ ಎಂದು ಡಾ. ಈಶ್ವರಯ್ಯ ಮಠ ಅವರು ಈ ಅಧ್ಯಯನದಲ್ಲಿ ನಿರೂಪಿಸಿದ್ದಾರೆ. "88 ಜನ ವಿದ್ವಾಂಸರು ಸಂಪಾದಿಸಿರುವ ವಿವಿಧ ಸ್ವರವಚನಗಳ ಸಂಕಲನಗಳನ್ನು ತಮ್ಮ ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಅದರ ಜತೆಗೆ 350 ಸಂದರ್ಭ ಗ್ರಂಥಗಳಿಗೆ, 5 ನಿಯತಕಾಲಿಕೆಗಳಿಗೆ, 142 ಗ್ರಂಥಗಳಿಗೆ ಡಾ ಈಶ್ವರಯ್ಯ ಮಠರ ಸಂಶೋಧನ ಅಧ್ಯಯನ ಋಣಿಯಾಗಿದೆ'' ಎಂಬ ಈ ಕೃತಿಕಾರರ ಮಾತು ನಿಜ.

ಇನ್ನೊಂದು ಮಹತ್ವದ ಮಹಾಪ್ರಬಂಧವನ್ನು ಡಾ. ಕಲ್ಯಾಣರಾವ ಜಿ. ಪಾಟೀಲರು ಬರೆದಿದ್ದಾರೆ, 'ಡಾ. ಎಂ.ಎಂ. ಕಲಬುರ್ಗಿ ಅವರ ಶೋಧಗಳು'. ಡಾ. ಎಂ.ಎಂ. ಕಲಬುರ್ಗಿ ಅವರು ಸಂಶೋಧನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈ ಕೃತಿಕಾರರು ಗುರುತಿಸಿರುವಂತೆ ಶಾಸನ, ವಾಸ್ತುಶಿಲ್ಪ, ಸ್ಮಾರಕಗಳ ಪರಿವೀಕ್ಷಣೆ, ಶಿಷ್ಟ ಸಾಹಿತ್ಯ, ಜಾನಪದ ಸಾಹಿತ್ಯ, ಚರಿತ್ರೆ, ಹಸ್ತಪ್ರತಿ, ಗ್ರಂಥ ಸಂಪಾದನೆ, ನಾಮವಿಜ್ಞಾನ, ಪ್ರಾಚ್ಯವಸ್ತು, ವ್ಯಾಕರಣ, ಧರ್ಮ, ಸಂಸ್ಕೃತಿ, ಛಂದಸ್ಸು, ಸಂಶೋಧನೆ, ವಿಮರ್ಶೆ, ನಾಟಕ, ಕಾವ್ಯ' ಹತ್ತಾರು ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿರುವ ವಿದ್ವಾಂಸರನ್ನು ಕುರಿತು ಓದುವುದೇ ಒಂದು ಸಾಹಸ. ಇನ್ನು ಅವರ ಸಾಹಿತ್ಯವನ್ನೆಲ್ಲ ಓದಿ ಗ್ರಹಿಸುವುದು ವಿದ್ವಾಂಸರಿಗೆ ಮಾತ್ರ ಸಾಧ್ಯ ಹತ್ತಾರು ಕ್ಷೇತ್ರಗಳ ತಿಳುವಳಿಕೆ ಪಿಎಚ್.ಡಿ. ಮಾಡುವ ಸಾಹಿತ್ಯದ ವಿದ್ಯಾರ್ಥಿಗಳಲ್ಲಿ ಈಚೆಗೆ ಕಾಣೆಯಾಗಿದೆ. ಡಾ. ಪಾಟೀಲರು ಶ್ರಮ ಶ್ರದ್ಧೆಗಳಿಂದ ಅಧ್ಯಯನ ನಡೆಸಿರುವುದನ್ನು ಡಾ. ರಘುಶಂಖ ಭಾತಂಬ್ರಾ ಅವರು ಮಹಾ ಪ್ರಬಂಧವನ್ನು ಪರಿಶೀಲಿಸಿ ಮೆಚ್ಚಿಕೊಂಡಿದ್ದಾರೆ. ಸ್ವತಃ ಡಾ. ರಘುಶಂಖ ಭಾತಂಬ್ರಾ ಅವರೂ ಕ್ರಿಯಾಶೀಲ ಅಧ್ಯಯನಕಾರರು 'ಸಂವೀಕ್ಷಣೆ' ಕೃತಿಯನ್ನು ಅವಲೋಕಿಸಿದಾಗ,

ಅವರು ಆಯ್ದುಕೊಂಡ ಕೃತಿಗಳನ್ನು, ಕೃತಿಕಾರರನ್ನು ಗಂಭೀರವಾಗಿ ಓದಿರುವ ಗ್ರಹಿಸಿರುವ ಅನುಭವ ಓದುಗನ ಅರಿವಿಗೆ ಬರುತ್ತದೆ.

'ಹೈದರಾಬಾದ ಕರ್ನಾಟಕ ಜನಪದ ಸಾಹಿತ್ಯ ಕೃತಿಯ ಸಮೀಕ್ಷೆ' ಈ ಕೃತಿ ಡಾ. ಬಸವರಾಜ ಪೊಲೀಸ್ ಪಾಟೀಲರ ಪಿಎಚ್.ಡಿ ಮಹಾಪ್ರಬಂಧ, ಈ ಪ್ರಾಂತ್ಯದಲ್ಲಿ ಆಧುನಿಕ ಪೂರ್ವ ಸಾಹಿತ್ಯ ಹೇಗೆ ಸಮೃದ್ಧವೋ ಹಾಗೆ ಜನಪದ ಸಾಹಿತ್ಯವೂ ಅಷ್ಟೇ ಸಮೃದ್ಧವಾಗಿದೆ. 'ಸಂವೀಕ್ಷಣೆ" ಕೃತಿಕಾರರ ಓದು ಎಷ್ಟು ಅಪಾರವಾಗಿದೆ ಎಂದರೆ, ಅವರ ಶಿಷ್ಟ ಸಾಹಿತ್ಯದಲ್ಲಿದ್ದಷ್ಟೇ ಜಾನಪದ ಸಾಹಿತ್ಯದಲ್ಲೂ ಇದೆ. ಇದಕ್ಕೆ ಈ ಕೃತಿಯ ಅನೇಕ ಬರಹಗಳೇ ಸಾಕ್ಷಿ. ಜನಪದ ಸಾಹಿತ್ಯದ ಅರಿವಿಲ್ಲದಿದ್ದರೆ ಈ ಮಹಾಪ್ರಬಂಧವನ್ನು ವಿಮರ್ಶಿಸಲು ಬರುವುದಿಲ್ಲ. ಹಾಗೆಯೇ ಡಾ. ಎಂ.ಎಂ. ಕಲಬುರ್ಗಿ ಅವರ ಸಾಹಿತ್ಯದ ಅಭ್ಯಾಸವಿರದಿದ್ದರೆ, ಅವರ ಕುರಿತ ಮಹಾಪ್ರಬಂಧದ ವಿಮರ್ಶೆ ಸಾಧ್ಯವಿಲ್ಲ ಸ್ವರವಚನಗಳ ಅರಿವಿರದಿದ್ದರೆ 'ಹಾರಿತೋ ಹಂಸ ಹಾರಿತೊ' ಮಹಾಪ್ರಬಂಧವನ್ನು ಗ್ರಹಿಸಲು ಆಗುವುದಿಲ್ಲ 'ಪಂಪು ಕೇಂದ್ರಿತ' ಅವಲೋಕನ-ಅಂತರಾಳ, 'ದೀಪ್ತಿ: ಒಂದಷ್ಟು ಆಲೋಚನೆ", ಜಗದೇವಿ ದುಬಲಗುಂಡೆ ಅವರ 'ಭಕ್ತಿ ಪಥವೇ ಮುಕ್ತಿ ಪಥ', 'ವಿಮರ್ಶ ವಲ್ಲರಿ'ಯ ಒಳಹೊರಗೆ, ಶಿವಪುತ್ರ ಕಣಜಿಯವರ 'ವಚನ ಪರಿಮಳ' ಮುಂತಾದ ಕೃತಿಗಳ ಅವಲೋಕನಕ್ಕೆ ಓದು-ಅಧ್ಯಯನದ ಬಲ ಬೇಕಾಗುತ್ತದೆ.

ಗಮನಿಸಬೇಕಾದ ಲೇಖನಗಳೆಂದರೆ, 'ಬೀದರ ಜಿಲ್ಲೆಯ ಕಾದಂಬರಿಗಳ ವಸ್ತು ವೈಶಿಷ್ಟ್ಯ' ಮತ್ತು 'ಬೀದರ ಜಿಲ್ಲೆಯ ಸೂಫಿಗಳು-ಒಂದಷ್ಟು ಚಿಂತನೆಗಳು'. ಇವು ಬೀದರ ಜಿಲ್ಲೆಯಲ್ಲಿ ಹತ್ತಾರು ಕಾದಂಬರಿಕಾರರು ಅವರ ಕಾದಂಬರಿಗಳನ್ನು ಶೋಧಿಸಿ, ಪ್ರತಿಯೊಂದರ ಅನನ್ಯತೆಯನ್ನು ವಿವರಿಸಿದ್ದಾರೆ. ಬೀದರ ಜಿಲ್ಲೆಯಲ್ಲೂ ಕಾದಂಬರಿ ಸಾಹಿತ್ಯವಿದೆ ಎಂಬುದನ್ನು ತೋರಿಸಿರುವುದು ಮಹತ್ವದ ವಿಷಯ. ಅಷ್ಟೇ ಅಲ್ಲ ಈ ಕಾದಂಬರಿಗಳನ್ನೇ ಕುರಿತು ಪಿಎಚ್.ಡಿ. ಮಾಡಲು ದಾರಿ ತೋರಿಸಿದಂತಾಗಿದೆ. 'ಬೀದರ ಜಿಲ್ಲೆಯ ಸೂಫಿಗಳು: ಒಂದಷ್ಟು ಚಿಂತನೆಗಳು ಈ ಕೃತಿಯನ್ನು ಬರೆದಿರುವವರು ಪೊಲೀಸ್ ಇಲಾಖೆಯಲ್ಲಿರುವ ಶಕೀಲ್ ಐ.ಎಸ್. ಅವರು 300 ಪುಟಗಳ ಈ ಕೃತಿಯ ವಿಮರ್ಶೆಯೂ ಗಮನಾರ್ಹವಾಗಿದೆ. ದರ್ಗಾ, ಭಿಲ್ಲಾ, ಸಮಾಖಾನ, ಮದರಸಾ, ಖಾನ್‌ಕಾ, ಮಜೀದ್ ಮುಂತಾದ ದೈವಿಕ ಸ್ಥಳಗಳಿಗೆ ಭೇಟಿ ನೀಡಿ, ಅಧ್ಯಯನ ಮಾಡಿ ಬರೆದಿರುವ ಪುಸ್ತಕವೆಂದು ಹೇಳುವ ಮೂಲಕ, ಸೂಫಿಗಳ ಬಗ್ಗೆ ಡಾ. ರಘುಶಂಖ ಭಾತಂಬ್ರಾ ಅವರು ಒಳನೋಟಗಳ ಅಧ್ಯಯನ ಮಾಡಿದ್ದಾರೆ. ಈ ಲೇಖನವನ್ನು ಶಾಲಾ-ಕಾಲೇಜುಗಳ ಪಠ್ಯಪುಸ್ತಕದಲ್ಲಿ ಸೇರಿಸುವಷ್ಟು ಮಾಹಿತಿ ಮತ್ತು ವಿಶ್ಲೇಷಣೆಯಿದೆ.

'ಬೀದರ ಜಿಲ್ಲೆಯ ಆಧುನಿಕ ವಚನ ಸಾಹಿತ್ಯ', 'ಬೀದರ ಜಿಲ್ಲೆಯ ಸಂಶೋಧನ ಸಾಹಿತ್ಯ' ಈ ಎರಡು ಲೇಖನಗಳಲ್ಲಿ ಆಕರಗಳು ಬಹಳಷ್ಟಿವೆ. ಪಿಎಚ್.ಡಿ ಮಾಡಬಯಸುವವರಿಗೆ ವಿಷಯವನ್ನು ಒದಗಿಸುತ್ತವೆ. ಇದು ಮಹತ್ವದ ಕೆಲಸವೇ, ಡಾ. ರಘುಶಂಖ ಭಾತಂಬ್ರಾ ಅವರು ಮಧ್ಯಕಾಲೀನ ಸಾಹಿತ್ಯ-ಸಂಸ್ಕೃತಿಯನ್ನು ಬೀದರ ಅ ಮೂಲಕ ಹೈದರಾಬಾದ ಕರ್ನಾಟಕ ಪ್ರಾಂತ್ಯದ ವ್ಯಾಪ್ತಿಯೊಳಗೆ ಚಿಂತಿಸುತ್ತಾರೆ ಎಂಬುದು ದಿಟ. ಆದರೂ 'ಸಂವೀಕ್ಷಣೆ' ಕೃತಿಯಲ್ಲಿ ಆಧುನಿಕ ಕವಿತೆ, ಕಥೆಗಳನ್ನು ವಿಮರ್ಶೆಗೆ ಒಳಪಡಿಸಿದ್ದಾರೆ. ವಿಮರ್ಶೆ ಹುಟ್ಟಿ ಬೆಳೆದದ್ದೇ ಆಧುನಿಕ ಕಾಲದಲ್ಲಿಯೇ, ಸಂಶೋಧನೆ-ವಿಮರ್ಶೆಯನ್ನು ಸೂಕ್ಷ್ಮವಾಗಿ ಗ್ರಹಿಸುವ ಪ್ರಜ್ಞೆ, ಈ ಕೃತಿಕಾರರಿಗಿದೆ. 'ಕನ್ನಡ ಸಾಹಿತ್ಯ: ಪುನರಾವಲೋಕನ ಮಾಲೆಯ ೧೦ ಸಂಪುಟಗಳ ವೈಶಿಷ್ಟ್ಯಗಳು' ಈ ಲೇಖನ ಮತ್ತು ಶಾಸ್ತ್ರ ಸಾಹಿತ್ಯ, ಶಾಸನ ಸಾಹಿತ್ಯ, ಸಾಹಿತ್ಯ ರೂಪಗಳು ಕುರಿತ ಚಿಂತನೆಗಳು, ಸಮೀಕ್ಷೆಗಳು ಗಮನ ಸೆಳೆಯುತ್ತವೆ.

'ಸಂವೀಕ್ಷಣೆ' ಕೃತಿ ಬರೀ ಕೃತಿಗಳ ವಿಮರ್ಶೆಯಾಗಿ ರೂಪಗೊಂಡಿಲ್ಲ. ಸಾಹಿತ್ಯ- ಸಂಸ್ಕೃತಿ ಕುರಿತ ಸಾಂಸ್ಕೃತಿಕ ಅಧ್ಯಯನವಾಗಿ ಪರಿಣಮಿಸಿದೆ. ಒಂದು ಪ್ರಾಂತ್ಯದ ವೈವಿಧ್ಯಮಯ ಸಾಹಿತ್ಯವನ್ನು ಪರಿಚಯಿಸುತ್ತದೆ. ಕೃತಿಗಳ ಕಣಜವೇ ಆಗಿದೆ. ಈ ಭಾಗದ ಸಾಹಿತ್ಯ-ಸಂಸ್ಕೃತಿಯ ಮಾಹಿತಿ ಕಣಜವೇ ಆಗಿದೆ, ಲೇಖಕರ ಅಪಾರ ಓದು, ಶ್ರದ್ಧೆ- ಶ್ರಮದ ಫಲವಾಗಿ ರೂಪಗೊಂಡಿದೆ. ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ನಾಲ್ಕು ಮಾತು ಬರೆಯುವ ಮೂಲಕ ಸಲ್ಲಿಸಿದ್ದೇನೆ.

- ಡಾ.ಅಮರೇಶ ನುಗಡೋಣಿ

 

MORE FEATURES

Bhinna-Ruchi: ಆಹಾರ ಸೇವನೆ “ಸುರಕ್ಷಿತ” ಅನ್ನಿಸುವುದು ಯಾವಾಗ?!

08-01-2025 ಬೆಂಗಳೂರು

"ಪುಸ್ತಕದ ಬಗ್ಗೆ ನಾನು ಹೆಚ್ಚು ವಿವರಿಸಲು ಹೋಗುವುದಿಲ್ಲ. ಏಕೆಂದರೆ ಅದು ನಿಮ್ಮ ಓದಿನ ಸುಖಕ್ಕೆ ಧಕ್ಕೆ ತಂದೀತು. ಆ...

Harate-kashaya ನನ್ನ ಶಬ್ದ ಸಾಲುಗಳೇ ನಿಮಗೆ ಕಷಾಯ

08-01-2025 ಬೆಂಗಳೂರು

“ಒಟ್ಟಾರೆ ಈ ಕೃತಿ ಕೆಲವೆಡೆ ತಲೆ ಹರಟೆ ಕಷಾಯವಾಗಿಯೂ ಕಾಡಿ, ನಿಮ್ಮ ತಲೆ ತಿನ್ನುವಂತಾದರೆ ನಾನು ತಲೆ ಕೆಡಿಸಿಕೊಂಡು...

ತಮ್ಮ ಮೂಗಿನ ನೇರಕ್ಕೆ ಬರೆದದ್ದೇ ಇತಿಹಾಸ ಎಂಬಂತೆ ಬಿಂಬಿಸಲಾಗುತ್ತಿದೆ

08-01-2025 ಬೆಂಗಳೂರು

“ಕೃತಿಯು ನನ್ನ ನಾಲ್ಕು ದಶಕಗಳ ಬರೆವಣಿಗೆ ಮತ್ತು ಚಿಂತನೆಗೆ ಪ್ರೇರಕರಾದ ಮಹಾನ್ ದಾರ್ಶನಿಕ ಮನೋಭಾವದ ವ್ಯಕ್ತಿಗಳ ...