ಕೊಂಡಿ ಎಲ್ಲಿ ಕಳಚಿದೆ?

Date: 24-05-2023

Location: ಬೆಂಗಳೂರು


''ಜನಗಳನ್ನು ನೋಡಿದರೆ ಪೇಟೆಯ ಎಲ್ಲ ಮಂಗಾಟಗಳೂ ಹಳ್ಳಿಯ ಮುಗ್ಧತೆಗಳೂ ಸಂಕರವಾದವರಂತೆ ಕಾಣುತ್ತಾರೆ. ಕೆಲವರಂತೂ ಜೇಬಿನ ತುಂಬ ಕಾಸು ತುಂಬಿಕೊಂಡು, ಕುಂಡಿಗೆ ಪಟಾಪಟ್ಟಿ ನಿಕ್ಕರು ಹಾಕಿ, ಅದರ ಮೇಲೆ ಪ್ಯಾಂಟು ಏರಿಸಿ, ಕಣ್ಣಿಗೆ ಕೂಲಿಂಗ್ ಗ್ಲಾಸು ಹಾಕಿ, ಒಂದಲ್ಲ ಒಂದು ಗಾಡಿ ಓಡಿಸುತ್ತ ಓಸಿ ತಿರುಗುವ ಬಫೂನುಗಳಂತೆ ಕಾಣುತ್ತಾರೆ,'' ಎನ್ನುತ್ತಾರೆ ಅಂಕಣಕಾರ ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು' ಅಂಕಣದಲ್ಲಿ ‘ಕೊಂಡಿ ಎಲ್ಲಿ ಕಳಚಿದೆ?' ವಿಚಾರದ ಕುರಿತು ಬರೆದಿದ್ದಾರೆ.

ಆಧುನೀಕರಣ, ನಗರೀಕರಣಗಳಿಗೆ ಒಡ್ಡಿಕೊಂಡು ಅತಿ ವೇಗವಾಗಿ ಬದಲಾಗುತ್ತಿರುವ ನನ್ನೂರು, ಅದರ ಸುತ್ತಣ ಪರಿಸರ ಮತ್ತು ಅದರ ರೂಪಾಂತರಗಳನ್ನು ಬಹು ದಿನಗಳಿಂದ ಗಮನಿಸುತ್ತ ಬರುತ್ತಿದ್ದೇನೆ. ಬಂಡಿ ಜಾಡುಗಳು ಟಾರು ರಸ್ತೆಗಳಾಗುವುದಕ್ಕು ಊರಿನ ಜನ ಸೋಮಾರಿಗಳಾಗುವುದಕ್ಕು, ನಿರುದ್ಯೋಗಿಗಳಾಗುವುದಕ್ಕು ನೇರಾನೇರ ಸಂಬಂಧವಿದೆ ಅನ್ನಿಸುತ್ತಿದೆ. ಜಾತಿ-ಕುಲಸ್ತರ ಪಂಗಡಗಳಾಗಿದ್ದ ಊರು ಈಗ ಪಕ್ಷಗಳ ಪಂಗಡಗಳಾಗಿ ಒಡೆದುಹೋಗಿದೆ. ಇದರಿಂದ ಅನುಕೂಲವೇನೂ ಆಗಿಲ್ಲ. ಪಕ್ಷಗಳಲ್ಲಿ ಧೃವೀಕರಣಗೊಂಡ ಜನ ಜಾತಿಯನ್ನು ಮೀರಿಯೇನೂ ಇಲ್ಲ. ಬದಲಾಗಿ ಜಾತಿಗಳೂ ಇವೆ. ಅವುಗಳ ಜೊತೆಗೆ ಪಕ್ಷಗಳ ಗುರುತೂ ಇವೆ. ಏಕಕಾಲಕ್ಕೆ ಪ್ರತಿಯೊಬ್ಬರೂ ಎರಡೆರಡು ಚಹರೆಗಳಲ್ಲು ಬದುಕುತ್ತಿದ್ದಾರೆ. ಊರ ಪರೇವು, ಮಾರಿಜಾತ್ರೆ ಬಂದಾಗ ಜಾತಿ ಪಕ್ಷಗಳೆರಡೂ ಜಾಗೃತ ಆಗಿ ಬಾಧೆಗಳು ಎರಡು ಪಟ್ಟು ಆಗಿವೆ. ಹಿಂದೆಯೆಲ್ಲ ಒಕ್ಕಲಿಗರು ಎಂದರೆ ಬಣ, ಬಳಿ ಯಾವುದು ಎಂದು ಕೇಳುವಾಗ ಕುಂಚೊಕ್ಕಲಿಗರು, ಗಂಗಟಕಾರ ಒಕ್ಕಲಿಗರು, ಬೆಳ್ ಕೊಡೊ ಒಕ್ಕಲಿಗರು, ಬುಜ್ಜಣಿಗೆ, ಪೆಟ್ಟಿಗೆ ಎಂದೆಲ್ಲ ಹೇಳುತ್ತಿದ್ದರು; ಆದರೆ ಈಗ ಕಾಂಗ್ರೆಸ್ ಒಕ್ಕಲಿಗರು, ದಳ ಒಕ್ಕಲಿಗರು, ಬಿಜೆಪಿ ಒಕ್ಕಲಿಗರು ಎಂದು ಹೇಳುತ್ತಾರೆ. ಎಲ್ಲ ಜಾತಿಗಳಲ್ಲು ಹೀಗೇ ಆಗಿದೆ. ಬಿಜೆಪಿ ಎಡಗೈ, ಬಿಜೆಪಿ ಬಲಗೈ, ಕಾಂಗ್ರೆಸ್ ಬಲಗೈ, ದಳ ಎಡಗೈ ಅಂತೆಲ್ಲ ಮಾತಾಡಿಕೊಳ್ಳುತ್ತಾರೆ. ಒಂದೆ ಮನೆಯಲ್ಲಿ ತಾತ ಕಾಂಗ್ರೆಸ್ ಕುರುಬ, ಅಪ್ಪ ದಳ ಕುರುಬ, ಅಣ್ಣ ಬಿಜೆಪಿ ಕುರುಬ ಅನ್ನುವಂತೆ ಆಗಿದೆ.

ಪ್ರತಿ ವರ್ಷ ನಡೆಯುತ್ತಿದ್ದ ಊರ ಪರೇವು, ಊರ ಹಬ್ಬ, ಜಾತ್ರೆಗಳು ಮೂರು ವರ್ಷಕ್ಕೋ ಐದು ವರ್ಷಕ್ಕೊ ನಡೆಯಲು ತೊಡಗಿ ಈಗ ಹಬ್ಬಗಳಾದರೆ ಜಗಳ; ಜಾತ್ರೆಗಳಾದರೆ ಮಾರಾಮಾರಿ ಎಂಬಂತಾಗಿದೆ. ಈಗಂತೂ ಹೆಚ್ಚುಕಡಿಮೆ ಊರ ಪರೇವು, ಜಾತ್ರೆಗಳೆಲ್ಲ ನಿಂತೇ ಹೋಗಿವೆ. ಏನಿಲ್ಲವೆಂದರೂ ಒಂದೋ ಎರಡೋ ಪೋಲೀಸ್ ಕೇಸುಗಳು ಪ್ರತಿ ತಿಂಗಳೂ ಇರುತ್ತವೆ. ಪ್ರತಿ ದಿನ ಸಂಜೆ ಊರ ಹೆಂಗಸರು ಕಯ್ಯಲ್ಲಿ ದನಗಳ ಹಗ್ಗ ಹಿಡಿದು, ಸೊಂಟದಲ್ಲಿ ಮಕ್ಕಳನ್ನು ಇರುಕಿಕೊಂಡು, ತಲೆ ಮೇಲೆ ಹುಲ್ಲಿನ ಹೊರೆ ಹೊತ್ತುಕೊಂಡು ಮನೆಗೆ ಹಿಂದಿರುಗುತ್ತಿದ್ದ ದೃಶ್ಯಗಳು ಈಗ ಬದಲಾಗಿವೆ. ಎಲ್ಲ ಕಡೆ ಕಾರ್ಖಾನೆಗಳು ತಲೆ ಎತ್ತಿವೆ. ಪರಿಚಯವೇ ಇಲ್ಲದ ಮಂದಿ ಊರಿಗೆ ಬಂದು ವ್ಯಾಪಾರ ಆರಂಭಿಸಿದ್ದಾರೆ. ಜಮೀನು ಸಮೀನು ಮಾಡಿಕೊಂಡಿದ್ದ ಪರಿಚಿತರೆಲ್ಲ ಬಹುಪಾಲು ಈಗ ಕೂಲಿಗಳಾಗಿದ್ದಾರೆ.

ಜಮೀನು ಮಾರಿ ತಾವು ಜೀವಮಾನವಿಡೀ ಕಾಣದಷ್ಟು ದುಡ್ಡು ಕಂಡವರೆಲ್ಲ ಕುಡಿಯುವುದು, ತಿನ್ನುವುದು, ಪುಡಿ ರಾಜಕೀಯ ಮಾಡುವುದು ಕಲಿತು ಸೋಮಾರಿಗಳಾಗಿ ಹೋಗಿದ್ದಾರೆ. ಹೊಲ ಗದ್ದೆಗಳನ್ನು ಮಾರಿ ಬಂದ ಹಣವನ್ನು ಹೇಗೆ ಮರುಹೂಡಿಕೆ ಮಾಡಬೇಕು ಎಂಬುದು ಗೊತ್ತಿಲ್ಲದೆ; ಹಣ ಬಿತ್ತಿ ಹಣ ಬೆಳೆಯುವುದು ಗೊತ್ತಿಲ್ಲದೆ ಅತ್ತ ತಮ್ಮ ಪಾರಂಪರಿಕ ಕೃಷಿಯನ್ನೂ ಮಾಡದೆ ಇತ್ತ ಯಾವ ಬೇರೆ ಕೆಲಸವೂ ಇಲ್ಲದೆ ಸೋಮಾರಿಗಳಾಗುತ್ತಿದ್ದಾರೆ. ನನ್ನ ಹಳ್ಳಿಗೆ ಹೋಗಲು ಈಗ ಸಂತೋಷವಾಗುವುದಿಲ್ಲ. ಆತಂಕವಾಗುತ್ತದೆ. ಹೋದಾಗೆಲ್ಲ ಏನೋ ಅನಾಥಪ್ರಜ್ಞೆ ಕಾಡುತ್ತದೆ. ಹಳ್ಳಿಯೆಂದರೆ ಅದು ಅತ್ತ ಹಳ್ಳಿಯಲ್ಲ. ಇತ್ತ ಪೇಟೆಯಲ್ಲ. ಎರಡರ ನಡುವಿನ ತ್ರಿಶಂಕು. ಎರಡರ ಸಂಕರಮೂರ್ತಿ.

ಜನಗಳನ್ನು ನೋಡಿದರೆ ಪೇಟೆಯ ಎಲ್ಲ ಮಂಗಾಟಗಳೂ ಹಳ್ಳಿಯ ಮುಗ್ಧತೆಗಳೂ ಸಂಕರವಾದವರಂತೆ ಕಾಣುತ್ತಾರೆ. ಕೆಲವರಂತೂ ಜೇಬಿನ ತುಂಬ ಕಾಸು ತುಂಬಿಕೊಂಡು, ಕುಂಡಿಗೆ ಪಟಾಪಟ್ಟಿ ನಿಕ್ಕರು ಹಾಕಿ, ಅದರ ಮೇಲೆ ಪ್ಯಾಂಟು ಏರಿಸಿ, ಕಣ್ಣಿಗೆ ಕೂಲಿಂಗ್ ಗ್ಲಾಸು ಹಾಕಿ, ಒಂದಲ್ಲ ಒಂದು ಗಾಡಿ ಓಡಿಸುತ್ತ ಓಸಿ ತಿರುಗುವ ಬಫೂನುಗಳಂತೆ ಕಾಣುತ್ತಾರೆ. ಊರಿಗೆ ಮುಂಚೆ ಹೊಲ ಮಾರಿ ಇದ್ದ ಬದ್ದ ಕಾಸೆಲ್ಲ ನೀಚಿಕೊಂಡ ಕೆಲವರಂತೂ ಹೆಚ್ಚುಕಡಿಮೆ ಭಿಕ್ಷುಕರೇ ಆಗಿದ್ದಾರೆ. ಹಾಡಹಗಲೆ ನೈಂಟಿ, ಕ್ವಾಟ್ರು ಹಾಕಿ ತೇಲಾಡುತ್ತ ವಾಲಾಡುತ್ತ ಬೆಂಕಿಕಡ್ಡಿಗಳ ಹಾಗೆ ನನ್ನ ವಾರಿಗೆಯ ಹಲವು ಗೆಳೆಯರು ಆಗಿರುವುದ ನೋಡಿದಾಗೆಲ್ಲ ಕರುಳು ಕಿತ್ತು ಬರುತ್ತದೆ. ಮೊನ್ನೆ ಮೊನ್ನೆ ಎಲ್ಲರೂ ಒಳಗೆ ಬೆಂಕಿ ಇಟ್ಟುಕೊಂಡು ಹೊರಗೆ ಒಗ್ಗಟ್ಟು ತೋರಿಕೊಂಡು ಮನೆಗೆ ಎರಡು ಮೂರು ಮರಿ ಹೊಡೆದು ಮಾರಿ ಜಾತ್ರೆ ಮಾಡಿದ್ದು ಮಾತ್ರ ಭಾರೀ ಸಾಧನೆ.

ಸಂಬಂಧಗಳೆಲ್ಲ ಒಡೆದು ಹೋಗಿವೆ. ಯಾವ ಸಂಬಂಧಗಳಿಗೂ ಬೆಲೆಯಿಲ್ಲ. ಮನೆಗಳೆಲ್ಲ ಪಾಲಾಗಿವೆ. ವಯಸ್ಸಾದ ತಂದೆ ತಾಯಿಯರನ್ನು ನೋಡುವವರಿಲ್ಲ. ಒಂದೊ ಎರಡೊ ಮನೆಗಳು ಆರೋಗ್ಯವಾಗಿವೆ. ಕೆಲವಂತು ಸುಣ್ಣದ ಮಡೆಕೆಗೆ ನೀರು ಹುಯ್ದಂತೆ ಒಳಗೊಳಗೆ ಕೊತ ಕೊತ ಕುದಿಯುತ್ತವೆ.

ಹೊರಗೆ ಬೆಳ್ಳಗೆ ಕಾಣುತ್ತವೆ. ಬಹುಪಾಲು ಮಕ್ಕಳೆಲ್ಲ ಹೆಂಡತಿಮನೆ ಪಾಲಾಗಿದ್ದಾರೆ. ಊಟ, ತಿಂಡಿ, ನೀರು, ನಿಡಿ ಎಲ್ಲ ಲೆಕ್ಕಾಚಾರ. ಎಲ್ಲೂ ಕೈಸಾಲ ಸಿಕ್ಕಲ್ಲ. ಮಾಡಿದರೆ ಬಡ್ಡಿ ವ್ಯವಹಾರ ಮಾಡಬೇಕು. ನಂಬಿಕೆ ಎಕ್ಕುಟ್ಟಿಹೋಗಿದೆ. ಯಾರನ್ನು ಕೇಳಿದರೂ ಮೋಸಾ, ದಗಾ, ಬೆನ್ನಿಗೆ ಚೂರಿ. ಮಾತಿನ ಮೇಲೆ ನಿಗಾ ಇಲ್ಲ.

ಕೂಡು ಕುಟುಂಬಗಳು ಒಂದೂ ಇಲ್ಲ. ಅಲ್ಪ ಸ್ವಲ್ಪ ವಿದ್ಯೆ ಕಲಿತವರೆಲ್ಲ ಬೆಂಗಳೂರಿಗೆ ವಲಸೆ ಹೋಗಿದ್ದಾರೆ. ಅಕ್ಕಪಕ್ಕದ ಮನೆಯವರು ಪರಸ್ಪರ ಮಾತಾಡುವುದಿಲ್ಲ. ಒಬ್ಬರಿಗೊಬ್ಬರು ಆಗುವುದಿಲ್ಲ. ಒತ್ತುವರಿ ಮಾಡಿಕೊಂಡು ಅಳಿದುಳಿದ ಕೆರೆ ಮೀನುಗಾರಿಕೆಗೆ ಹರಾಜಾಗಿದೆ. ತಿಳಿನೀರ ಕೆರೆಯೀಗ ಕೊಚ್ಚೆನೀರ ಹೊಂಡವಾಗಿದೆ. ತೂಬೆತ್ತಿದರೆ ಗದ್ದೆಗಳಿಗೆ ಮಾರಿಕೊಂಡ ದಿಣ್ಣೆ ಹೊಲಗಳ ಫ್ಯಾಕ್ಟರಿಗಳು ಬಿಟ್ಟ ಕೊಚ್ಚೆ-ವಿಷ ಬರುತ್ತದೆ. ಇಡೀ ಲ್ಯಾಂಡ್‌ಸ್ಕೇಪೇ ಬದಲಾಗಿದೆ. ಹಳ್ಳಿಯಾದ ಹಳ್ಳಿಯೆಲ್ಲ ನಗರವಾಗಲು ಪೈಪೋಟಿ ನಡೆಸುತ್ತಿದೆ. (ಈ ಪರಿಸರದ ಬೆಳವಣಿಗೆ-ಬದಲಾವಣೆಗಳೇ ನನ್ನ ‘ಸಂಕರಬಂಡಿ’ ಕವನಸಂಕಲನದ ಬಹುಪಾಲು ಸಾಮಗ್ರಿ)

ಎಡ್ಡುಪೆಡ್ಡುಗಳಿಗೆಲ್ಲ ದಿಡೀರ್ ದುಡ್ಡು ಸಿಕ್ಕಿಬಿಟ್ಟರೆ ಹೇಗೆ ಆಡಬಹುದು? ಜಾತಿ ವರ್ಗ ವಿನ್ಯಾಸಗಳು ಮುರಿದುಕೊಳ್ಳುತ್ತಾ, ಬಲಗೊಳ್ಳುತ್ತಾ ಸಾಂಪ್ರದಾಯಿಕ ಅಸಮಾನ ಮೌಲ್ಯಗಳು ಪ್ರಸಾರಗೊಳ್ಳುವ ವಿನ್ಯಾಸಗಳು ಬದಲುಗೊಳ್ಳುತ್ತಾ, ಜೊತೆಗೆ ಹೊಸ ಹೊಸ ಅಸಮಾನ ವಿನ್ಯಾಸಗಳು ರೂಪಗೊಳ್ಳುತ್ತಾ, ಹೊಸ ವಿಕಾರಗಳೆಡೆಗೆ ಸಮಾಜ ಸಾಗುತ್ತಿರುವಾಗ ಒಂದು ಕಡೆ ಆನಂದ, ಇನ್ನೊಂದು ಕಡೆ ಸಂಕಟ. ಸಮಾಜದ ನಡೆ ಏಕಕಾಲಕ್ಕೆ ಪ್ರಗತಿಯೂ ಪಾತಾಳವೂ ಆಗಿದ್ದಾಗ ದುಃಖವಾಗುವುದಿಲ್ಲವೇ? ಕೆಲವರಂತು ಗಂಡಸರು ಕೆಲಸಕ್ಕೆ ಬಾರದವರಾಗಿ ಹೆಣ್ಣು ಮಕ್ಕಳು ಹ್ತತಿರದ ಕಾರ್ಖಾನೆಗಳಿಗೆ ಹೋಗಿ ಮನೆ ನಡೆಸುವಂತೆ ಆಗಿದೆ. ಅಲ್ಲೊಂದು ಇಲ್ಲೊಂದು ಅಪವಾದಗಳೊ ಎಂಬಂತೆ ಸಂಸಾರಗಳು ಸುಸೂತ್ರವಾಗಿವೆ. ಹಂಗಾಗಿಯೆ ಇನ್ನೂ ಊರು ಊರಾಗಿ ಉಳಿದುಕೊಂಡಿದೆ.

ಹೊಲ ಗದ್ದೆ ಮಾರಿಕೊಂಡ ಹಲವು ಮನೆಗಳು ಒಡೆದುಹೋಗಿವೆ. ಅಣ್ಣತಮ್ಮಗಳೆ ವೈರಿಗಳಾಗಿದ್ದಾರೆ. ಜಮೀನು ಮಾರಿ ಬಂದ ಹಣವನ್ನು ಹಂಚಿಕೊಳ್ಳುವಾಗ, ದಲ್ಲಾಳಿಗಳಾಗಿ ಬದಲಾಗಿರುವ ಸಂಬಂಧಿಕರಿಗೆ ಕಮೀಶನ್ನು ಕೊಡುವಾಗ, ನಮ್ಮವರು ಎನ್ನಿಸಿಕೊಂಡವರೆ ಮೋಸ ಮಾಡಿ ಎಸ್ಟೇಟ್ ಬ್ಯುಸಿನೆಸ್ ಏಜೆಂಟರಾಗಿ ಬೆನ್ನಿಗೆ ಚೂರಿ ಹಾಕಿದಾಗ, ಪುಡಿ ರಾಜಕೀಯಕ್ಕೆ ಸಂಬಂಧಗಳು ಎಕ್ಕುಟ್ಟಿ ಹೋಗಿರುವಾಗ ಪ್ರತಿ ಮನೆ ಮನಸ್ಸುಗಳೂ ಒಡೆದು ಹೋಗಿವೆ. ರಕ್ತಸಂಬಂಧಗಳಿಗು, ಸ್ನೇಹಸಂಬಂಧಗಳಿಗು ಬೆಲೆಯಿಲ್ಲದಾಗಿದೆ. ಪಕ್ಷಗಳ ಪ್ರಕಾರ ವಿಂಗಡಿಸಿ ಹೋಗಿರುವ ಸ್ನೇಹಿತರೆಲ್ಲ ಆಗಾಗ ಪಕ್ಷಾಂತರ ಮಾಡುತ್ತ; ಎದುರಿಗಿನ ಇಂದಿನ ಸ್ನೇಹಿತನನ್ನು ನಾಳೆ ಹೇಗೆಲ್ಲ ವಿಲನ್ ಮಾಡಿ ನಾನು ಹೀರೋ ಆಗಲಿ ಎಂದು ಪೈಪೋಟಿಗೆ ಇಳಿದಿದ್ದಾರೆ. ಹೀಗಾಗಿ ಯಾರು ನಂಬಿಕೆದ್ರೋಹಿಗಳು, ಯಾರು ಒಳ್ಳೆಯವರು ಎಂದು ಬ್ಯಾಟರಿ ಹಾಕಿ ಹುಡುಕಬೇಕಾಗಿದೆ. ಬೆಳಗ್ಗೆ ಹೀರೋ ಆಗಿರುವವನು ಸಂಜೆ ವಿಲನ್ ಆಗಬಹುದು. ಇಂದು ಒಳ್ಳಯವ ಆಗಿರುವವನು ನಾಳೆ ಕೆಟ್ಟವ ಆಗಬಹುದು. ಗುಣ, ನಡತೆ, ಸ್ವಭಾವ ಎಲ್ಲ ಊಸರವಳ್ಳಿ ಆಗಿವೆ. ಕೊಂಡಿಗಳೆಲ್ಲ ಎಲ್ಲೆಲ್ಲಿ ಕಳಚಿಕೊಂಡಿವೆ?

2.

ನಮ್ಮಲ್ಲಿ ಸಾಹಿತ್ಯ ದುಃಖವನ್ನು ಅಡ್ರೆಸ್ ಮಾಡಬೇಕು ಹಾಗೂ ಆನಂದವನ್ನು ನೀಡಬೇಕು ಎಂಬ ಎರಡು ಮುಖ್ಯ ಸ್ಕೂಲುಗಳಿವೆ. ಆನಂದವೆಂಬುದು ಸ್ವಲ್ಪ ಹಗುರವಾದ ಅರ್ಥದಲ್ಲಿ ರಂಜನೆ ಎಂಬಂತೆ ಇಂದು ಆಗಿದೆ. ಓದಿನಿಂದ ಒದಗುವ ಅನುಭವವು ಯಾವಾಗಲೂ ರಚಿತ ಪಠ್ಯವನ್ನು ಮಾತ್ರ ಅವಲಂಬಿಸಿರುವುದಿಲ್ಲ. ಅದು ಓದುಗನ ಭಾವಕೋಶ, ಗ್ರಹಿಕೆಯ ಸನ್ನಿವೇಶ, ಸಾಮರ್ಥ್ಯ, ಕಾಲ, ದೇಶ, ಭಾಷೆ ಹೀಗೆ ಹಲವು ಸಂಗತಿಗಳಿಂದ ನಿರ್ಧಾರಿತವಾಗುತ್ತಿರುತ್ತದೆ. ಹಾಗಾಗಿ ಅನುಸಂಧಾನವೆ ಸಾಹಿತ್ಯದ ಸ್ವರೂಪವನ್ನು ನಿರ್ಧರಿಸುತ್ತಿರುತ್ತದೆ. ಬಡತನವೆ ಸಾಹಿತ್ಯದ ವಸ್ತು ಆಗಬೇಕು, ದುಃಖವನ್ನೆ ಸಾಹಿತ್ಯ ಅಡ್ರೆಸ್ ಮಾಡಬೇಕು ಎಂಬುದು ಸಾಹಿತ್ಯದ ಹಲವು ಕಾರ‍್ಯಗಳಲ್ಲಿ ಒಂದಷ್ಟೆ. ಸಾಹಿತ್ಯದ ಸಾಮಗ್ರಿ-ಕಾಳಜಿ ಇದೇ ಆಗಿರಬೇಕು ಎಂಬ ಥಿಯರಿಗಳು ಹೆಚ್ಚು ಕಾಲ ಬಾಳುವುದಿಲ್ಲ. ದುಃಖವೇ ಆಗಲೀ ಆನಂದವೇ ಆಗಲೀ ಇವೆರಡೂ ಪರಸ್ಪರ ವೈರುಧ್ಯಗಳೇನೂ ಅಲ್ಲ. ಎಲ್ಲ ಅವಳಿ ನೆಲೆಗಳೂ ವೈರುಧ್ಯಗಳೆ ಆಗಿರಬೇಕಿಲ್ಲ. ‘ಪಟ್ಟ ಪಾಡೆಲ್ಲ ಹುಟ್ಟು ಹಾಡಾಗಿ’ ಬರುವಾಗ ದುಃಖವೂ ಕೂಡ ಸಮಾಜದ ನಡೆಯನ್ನು ಗ್ರಹಿಸುವ ಮತ್ತು ರೂಪಿಸುವ (ಪಠ್ಯ) ಅಕ್ಷರಮೊತ್ತವಾಗಿಯೇ ಸಂಭವಿಸುತ್ತದೆ. ಹೀಗೇ ಬರೆಯಬೇಕು, ಇದನ್ನೇ ಬರೆಯಬೇಕು ಎಂಬಷ್ಟೇ ಮುಖ್ಯವಾದದ್ದು ಅದರೊಂದಿಗೆ ಹೇಗೆ ಅನುಸಂಧಾನ ನಡೆಸಬೇಕು ಎಂಬುದು ಕೂಡಾ.

ಮಂಟೇಸ್ವಾಮಿ ಜಾತ್ರೆ, ಹರಿಕತೆ, ಗಮಕ, ಪಾರಾಯಣ, ಕಲ್ಗಿತುರಾ-ಸವಾಲ್‌ಬವಾಬ್, ಬಯಲಾಟ, ಯಕ್ಷಗಾನ, ತಾಳಮದ್ದಳೆ, ಕೇಳಿಕೆ, ವಿಚಾರಕ್ಕೆ ಹಾಕುವುದು, ಕೋಲಾಟ, ಭಜನೆ ಹೀಗೆ ಹತ್ತಾರು ರೀತಿಗಳಲ್ಲಿ ಸಾಹಿತ್ಯವು ಹಿಂದಿನಿಂದ ಅನುಸಂಧಾನಕ್ಕೆ ಗುರಿಯಾಗುತ್ತ ಬಂದಿದೆ. ಅಲ್ಲದೆ ನೀಲಗಾರರು, ಗುಡ್ಡರು, ಅರ್ಜುನಜೋಗಿಗಳು, ಆಸಾದಿಗಳು ಹೀಗೆ ಹತ್ತಾರು ವೃತ್ತಿಗಾಯಕರು. (ಆಚರಣೆಯ ಅಂಗವಾಗಿ ಹಾಡುವವರು) ಕಲೆ-ಸಾಹಿತ್ಯವನ್ನು ಅನುಸಂಧಾನಕ್ಕೆ ಗುರಿಮಾಡುತ್ತ ಬಂದಿದ್ದಾರೆ. ಈಗೀಗ ಈ ಅನುಸಂಧಾನಗಳೆಲ್ಲ ನಶಿಸುತ್ತ ಆಧುನಿಕ ವಿಮರ್ಶೆಯೊಂದೇ ಯಜಮಾನಿಕೆ ನಡೆಸುತ್ತಿದೆ. ವಿಜ್ಞಾನ, ಕಲೆ, ಸಾಹಿತ್ಯ, ಜಾನಪದ, ಶಿಷ್ಟ ಹೀಗೆ ಹೊಸ ಅಸಮಾನತೆಗಳು ಬೆಳೆಯುತ್ತಿವೆ. ನಮ್ಮ ಪ್ರಾಚೀನ ವಿಮರ್ಶನ ಪ್ರಜ್ಞೆಗಳು, ಸಾಹಿತ್ಯವನ್ನು ಬದುಕಿನೊಂದಿಗೆ ಕೊಂಡುಹೋಗುವ ಅನುಸಂಧಾನ ಮಾರ್ಗಗಳು ರೂಪಾಂತರಗೊಂಡಾದರೂ ಮರುಜೀವ ಪಡೆಯಬೇಕಿದೆ. ಹೊಸ ಹೊಸ ರೀತಿಯ ಅನುಸಂಧಾನಗಳನ್ನು (ಮೀಮಾಂಸೆಗಳನ್ನು) ಶೋಧಿಸಿಕೊಳ್ಳುವಂತೆ ಜನರನ್ನು ಪ್ರೇರೇಪಿಸಬಲ್ಲ ಸಾಹಿತ್ಯ ನಮಗಿಂದು ಬೇಕಾಗಿದೆ. ಎಲ್ಲಿ ಒಡಕು ಉಂಟಾಗಿದೆ? ಎಲ್ಲಿ ಕೊಂಡಿ ಕಳಚಿದೆ?

ಸಾಹಿತ್ಯ ಮತ್ತು ಬದುಕುಗಳು ಬೇರಲ್ಲದಂತೆ ಬೆರೆತಿದ್ದ ಜೀವನವು ಬದಲಾಗಿ ಸಾಹಿತ್ಯವು ಒಣ ಶೈಕ್ಷಣಿಕ ಶಿಸ್ತಾಗಿ ಪರಿಣಮಿಸಿದೆ. ಜನರಲ್ಲಿ ಚಾಲ್ತಿಯಲ್ಲಿರುವ ಸುಗಮ ಸಾಹಿತ್ಯ, ಸಿನೆಮಾ-ಕಿರುತೆರೆ ಸಾಹಿತ್ಯಗಳು ಮತ್ತು ಗಂಭಿರ ಸಾಹಿತ್ಯಗಳ ನಡುವೆ ದೊಡ್ಡ ಕಂದರಗಳು ನಿರ್ಮಾಣವಾಗಿವೆ. ಮುಂಚೆ ಈ ಕಂದರ ಇರಲಿಲ್ಲವೋ? ಇತ್ತು. ಆದರೆ ಇಂದಿನಂತೆ ಅವು ಪ್ರತ್ಯೇಕಿತ ಲೋಕಗಳಾಗಿರಲಿಲ್ಲ. ಒಂದರೊಡನೊಂದು ಕೊಡುಕೊಳ್ಳುವ ವಲಯಗಳಾಗಿದ್ದವು. ವಚನ, ಕೀರ್ತನ, ಸ್ವರವಚನ, ತತ್ವಪದಗಳಾದಿಯಾಗಿ ಜಾನಪದ ಬಗೆಗಳಾದ ಲಾವಣಿ, ಕೋಲಾಟ, ಭಜನೆ, ಮೊಹರಂ ಗೀತೆಗಳು ಹೀಗೆ ಹಲವು ಕಡೆ ಆದಾನ ಪ್ರದಾನ ಸಾಧ್ಯವಿತ್ತು. ಹಿಂದಿನದೆಲ್ಲ ಹಾಳಾಯಿತಲ್ಲ ಎಂದು ಕೊರಗುವುದಲ್ಲ. ಹಳೆಯವು ಸಂಪೂರ್ಣ ಅಳಿಯುವುದಿಲ್ಲ ನಿಜ. ಆದರೆ ಹೊಸ ರೂಪಾಂತರಗಳಾದರೂ ಸಂಭವಿಸಬೇಕಿತ್ತಲ್ಲ! ಸಂಭವಿಸುತ್ತಿಲ್ಲ! ಎಲ್ಲವೂ ದೃಶ್ಯಮಯ ಆಗುತ್ತಿದೆ. ದೃಶ್ಯಮಾದ್ಯಮ, ಸಿನೆಮಾಗಳೆ ನಮ್ಮ ಅಭಿವ್ಯಕ್ತಿ ಮತ್ತು ಸಂಸ್ಕೃತಿ ಆಗುತ್ತಿರುವುದು ಕೂಡ ನಮ್ಮ ವಾಣಿಜ್ಯ ರಾಜಕಾರಣದ ಫಲವಲ್ಲವೆ? ಕೊಂಡಿ ಎಲ್ಲಿ ಕಳಚಿದೆ?

ಸ್ವಲ್ಪ ನನ್ನ ಕವಿತೆಯ ವಿಚಾರಕ್ಕೆ ಬರುತ್ತೇನೆ. ನಾವು ಬೆಳೆದ ತರಕಾರಿಯನ್ನು ಮಾರ್ಕೇಟಿಗೆ ತೆಗೆದುಕೊಂಡು ಹೋದರೆ ಹರಾಜು ಕೂಗಲು ದಳ್ಳಾಳಿ ಬರೋನು. ಕೋಳಿಯೊಂದು ಕಲ್ಲು ಮಣ್ಣು ಕಸ ಎಲ್ಲ ಕೆದಕುವಂತೆ ಟಕಟಕನೆ ಡಾಗು ಹುಳುಕುಗಳನ್ನೆಲ್ಲ ಎತ್ತಿ ಕಣ್ಣಿಗೆ ಹಿಡಿದು; ‘ಏನ್ರಯ್ಯಾ ಇವನ್ನೆಲ್ಲ ಆರಿಸಿ ನೀಟಾಗಿರೋದು ತರೋಕೆ ಆಗಲ್ವಾ?’ ಒಂದ್ ಡಾಗು ಇದ್ರೂ ರೇಟು ಡೌನಾಗುತ್ತೆ ಅಂತ ಗೊತ್ತಿಲ್ವೇನ್ರಯ್ಯಾ? ಎಷ್ಟ್ ಹೇಳುದ್ರು ಅಷ್ಟೆ ನಿಮ್ಗೆ’ ಅನ್ನೋನು. ಅವನು ಹೇಳಿದ ರೇಟಿಗೆ ನಮ್ಮನ್ನು ಬಗ್ಗಿಸುವ ಪೀಠಿಕೆ ಅದು ಎಂದು ಆಗ ನಮಗೆ ತಿಳಿಯುತ್ತಿರಲಿಲ್ಲ. ಜಾಗತೀಕರಣದ ಕರಿನೆರಳಿನಲ್ಲಿ ಶ್ರೇಷ್ಠತೆಯನ್ನು ಇಲ್ಲವೆ ಉಪಯುಕ್ತತೆಯನ್ನು ಗ್ರಾಹಕರಾಗಲೀ ಉತ್ಪಾದಕರಾಗಲೀ ನಿರ್ಧರಿಸದೆ ವ್ಯಾಪಾರಿಗಳು ನಿರ್ಧರಿಸುವಂತೆ ಆಗಿರುವುದರ ಪರಿಣಾಮ ನಮ್ಮ ಕಾವ್ಯದ ಮೇಲೂ ಬಿದ್ದಿರುವಂತೆ ಕಾಣುತ್ತಿದೆ. ಆಧುನಿಕ-ನವ್ಯ ವಿಮರ್ಶೆಯ ಶ್ರೇಷ್ಠತೆ-ಶಿಲ್ಪ-ಬಂಧ-ಸೌರ‍್ಯಾದಿ ಮಾನದಂಡಗಳು ನಮ್ಮ ಸಾಹಿತ್ಯ-ಕಾವ್ಯವನ್ನು ಶಿಕ್ಷಿತರ ಉತ್ಪನ್ನವನ್ನಾಗಿ ಮಾಡಿರುವಂತೆ ಕಾಣುತ್ತಿದೆ.

ವಿಶೇಷವೆಂದರೆ ನನ್ನೊಳಗೂ ಒಬ್ಬ ವಿಮರ್ಶಕ ಇದ್ದಾನೆ. ಮಾರುಕಟ್ಟೆಯ ದಲ್ಲಾಳಿಯಂತೆ ಅವನೂ ಸದಾ ಜಾಗೃತನಾಗಿರುತ್ತಾನೆ. ಬರವಣಿಗೆ ಬಗ್ಗೆ ನನ್ನೊಳಗಿನ ಕವಿಗೆ ತಾಯ ಮಮತೆ ಇದ್ದರೆ, ಈ ವಿಮರ್ಶಕನಿಗೆ ದಲ್ಲಾಳಿಯ ಅಹಂ ಇರುತ್ತದೆ. ಸದ್ಯಕ್ಕೆ ಈ ಇಬ್ಬರನ್ನೂ ಎರಡು ಪಾಲು ಮಾಡಿ ಸೃಷ್ಟಿ ಕಾಲದಲ್ಲಿ ಒಬ್ಬರು ಇನ್ನೊಬ್ಬರ ತಂಟೆಗೆ ಬರದಂತೆ ಮಾಡುವುದು ನನ್ನ ಕಾವ್ಯ ಕಟ್ಟಾಣಿಕೆಯ ಮೊದಲ ಎಚ್ಚರವಾಗಿದೆ. ‘ಕೂಸು ಹುಟ್ಟೋಕೆ ಮುಂಚೆ ಕುಯ್ದಾಕುದ್ರು’ ಅನ್ನೋ ಹಾಗೆ ಎಲ್ಲಿ ನಮ್ಮೊಳಗಿನ ವಿಮರ್ಶಕ ಸವಾರಿ ಮಾಡ್ತಾನೋ ಅಲ್ಲಿ ಕವಿತೆ ಸಾಯ್ತದೆ. ಎಚ್ಚರದ ಕಟ್ಟುವಿಕೆ ಎನ್ನುವುದು ಒಂದು ಮಿತಿಯನ್ನು ಮೀರಬಾರದು. ಹಾಗೆ ಮೀರಿದರೆ ಅದು ಕೃತಕ ಆಗುತ್ತದೆ.

ಕಟ್ಟಿದ್ದು ಕವಿತೆಯಾಗುವುದು ಅಪರೂಪ. ಸಹಜ ಸಂಭವಿ ಮಾತ್ರವೆ ನನ್ನ ಪ್ರಕಾರ ಒಳ್ಳೆ ಕವಿತೆ. ಸಾಹಿತ್ಯಕ್ಕಾಗಿ ಹುಟ್ಟುವ ಸಾಹಿತ್ಯ ಎಂದೂ ಒಳ್ಳೆಯ-ಉಪಯುಕ್ತ ಸಾಹಿತ್ಯ ಆಗಲಾರದು. ಇನ್ನು ಹಠದಿಂದ ಹೊಸೆದದ್ದು ಕವಿತೆ ಆಗೋಕೆ ಸಾಧ್ಯವೇ ಇಲ್ಲ ಬಿಡಿ. ಅವೆಲ್ಲ ಏನಿದ್ದರೂ ರಚನೆಗಳಷ್ಟೆ. ವಿಮರ್ಶಕರು ಬೇಕಾದರೆ ಆ ರಚನೆಗಳಲ್ಲಿ ವಾಸಿಸಬಹುದು. ದೆವ್ವಗಳ ಥರಾ. ಆದರೆ ಜನ ಅಲ್ಲಿ ವಾಸಿಸಲಾರರು. ಅದನ್ನು ಜೀವಿಸಲಾರರು. ಸಾಹಿತ್ಯವನ್ನು ಎಲ್ಲ ಜನ ಓದಬೇಕು. ಓದಿದರೆ ಸಾಲದು ಸಾಹಿತ್ಯವನ್ನು ಬಾಳಬೇಕು. ಒಳ್ಳೆಯ ಪದ್ಯ ಹೇಗೆ ಬರೆಯಬೇಕು ಅನ್ನೋದರ ಜೊತೆಗೆ ಜನರ ಬಾಳಿನಲ್ಲಿ ಆಚರಣೆಗೆ ಗುರಿಯಾಗುವಂತೆ ಚೆನ್ನಾಗಿ ಹೇಗೆ ಸಾಹಿತ್ಯ ಹಡೆಯಬೇಕು ಅನ್ನೋದು ಒಂದು ನಿಗೂಢವಾಗಿ ನನ್ನನ್ನು ಕಾಡುತ್ತಲೇ ಇದೆ. ನನಗಿದೊಂದು ನಿರಂತರ ಹುಡುಕಾಟ. ಕನಸು. ಊರು, ಕಾಡು, ನಗರ ಎಲ್ಲವೂ ಬದಲಾಗುತ್ತಿರುವಾಗ ನಮ್ಮ ಸಾಹಿತ್ಯವೂ ಬದಲಾಗಬೇಕಲ್ಲವೆ. ಬದಲಾವಣೆಯನ್ನು ಕಥಿಸಬೇಕಲ್ಲವೆ?

- ಡಾ. ರಾಮಲಿಂಗಪ್ಪ ಬೇಗೂರ

ಈ ಅಂಕಣದ ಹಿಂದಿನ ಬರೆಹಗಳು:
ಯಾರದೊ ಅಜೆಂಡಾ ಮಾರಮ್ಮನ ಜಾತ್ರೆ

ಹೊಸಕಾವ್ಯದ ಭಾಷೆ, ಗಾತ್ರ, ಹೂರಣ
ಗೌರಿಯರು: ಕುಟುಂಬ - ದಾಂಪತ್ಯ ಸಂಕಥನ
ರಾಷ್ಟ್ರೀಯತೆಯ ಆಚರಣೆಯ ಸುತ್ತ
ನೆನ್ನೆ ಮನ್ನೆ-1
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...