Date: 01-07-2023
Location: ಬೆಂಗಳೂರು
“ನನ್ನ ಮನೆ, ಇದರಲ್ಲಿ ಕ್ರಿಯಾಪದ ಇಲ್ಲ. ‘ಅವಳು ಹೋದಳು’ ಈ ವಾಕ್ಯದಲ್ಲಿ ಕರ‍್ಮ ಇಲ್ಲ. ‘ನೀರು ಚೆಲ್ಲಿತು’ ಇದರಲ್ಲಿ ಕರ‍್ತ್ರು ಇಲ್ಲ. ಇನ್ನು ‘ನಿದಾನವಾಗಿ ನಡೆ’ ಇದರಲ್ಲಿ ಕರ‍್ತ್ರು, ಕರ‍್ಮ ಎರಡೂ ಇಲ್ಲ. ಹಾಗಾದರೆ, ಇವುಗಳನ್ನು ವಾಕ್ಯ ಎಂದು ಒಪ್ಪಬಹುದೆ ಎಂಬ ಪ್ರಶ್ನೆ ಈಗ. ಸಾಮಾನ್ಯವಾಗಿ ಇಂತಾ ಬಳಕೆಗಳು ಬಾಶೆಯಲ್ಲಿ ಎಲ್ಲಿ ಕಾಣಿಸುತ್ತವೆ ಎಂಬುದನ್ನು ಗಮನಿಸಬಹುದು,” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕಿರುವಾಕ್ಯಗಳು’ ವಿಚಾರದ ಕುರಿತು ಬರೆದಿದ್ದಾರೆ.
ವಾಕ್ಯವೊಂದು ಮೂರು ಮೂಲಬೂತ ಗಟಕಗಳನ್ನು ಹೊಂದಿರುತ್ತದೆ ಎಂಬುದನ್ನು ಈ ಹಿಂದೆ ನೋಡಿದೆವು. ಆದರೆ, ಇದು ಕೆಲವೊಮ್ಮೆ ಕಡಿಮೆ ಗಟಕಗಳನ್ನೂ ಹೊಂದಿರಬಹುದು. ಹಾಗಾದರೆ, ಸುಮ್ಮನೆ ಒಂದು ಅನುಮಾನವನ್ನು ತೆಗೆದುಕೊಳ್ಳೋಣ. ಒಂದು ಗಟಕ ಮಾತ್ರ ಇರುವ ವಾಕ್ಯ ಸಾದ್ಯವೆ? ಸಾಮಾನ್ಯವಾಗಿ ಮಾತುಕತೆ ನಡೆಯುವ ಸಂದರ‍್ಬದಲ್ಲಿ ಪ್ರಶ್ನೆಗಳಿಗೆ ಉತ್ತರವಾಗಿ ಇಲ್ಲವೆ ಈಗ ತಾನೆ ಹೇಳಿದ್ದಕ್ಕೆ ಪೂರಕವಾಗಿ ಸೇರಿಸುವ ರೀತಿಯಲ್ಲಿ ಬರುವ ಬಿಡಿ ಬಿಡಿ ಉಚ್ಚರಣೆಗಳು ವಾಕ್ಯದ ರೀತಿಯಲ್ಲಿ ಬಳಕೆ ಆಗಬಹುದು. ಅಂದರೆ, ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ‘ಯಾರು ಹೂವನ್ನು ತಂದವರು?’ ಇದು ಒಂದು ವಾಕ್ಯ. ಇದಕ್ಕೆ ಉತ್ತರವಾಗಿ ‘ಕರಿಯ ಹೂವನ್ನು ತಂದನು’ ಎಂಬುದು ಬರಬಹುದು. ಆದರೆ, ಮಾತುಕತೆಯಲ್ಲಿ ಸಾಮಾನ್ಯವಾಗಿ ಇಡಿಯಾಗಿ ಇಶ್ಟುದ್ದದ ವಾಕ್ಯವನ್ನು ಉಚ್ಚರಿಸುವುದಿಲ್ಲ. ಬದಲಿಗೆ, ‘ಕರಿಯ’ ಎಂಬುದು ಮಾತ್ರ ಉತ್ತರವಾಗಿರುತ್ತದೆ. ಇಲ್ಲಿ ಮುಕ್ಯವಾಗಿ ಇರುವುದೇನೆಂದರೆ, ಇದನ್ನು ವಾಕ್ಯದ ಸಣ್ರೂಪ ಎಂದು ಪರಿಬಾವಿಸಲಾಗುತ್ತದೆ. ವಾಕ್ಯದ ಸರಳೀಕ್ರುತ ಬಳಕೆ. ಆದರೆ, ಒಂದೆ ಗಟಕದ ಬಳಕೆ ಆಗಿದ್ದರೂ ಅಲ್ಲಿ ಇಡಿಯ ವಾಕ್ಯವೊಂದು ಇರುತ್ತದೆ ಎಂದು ಬಾವಿಸಿಕೊಳ್ಳಬೇಕು.
ವಾಕ್ಯದಲ್ಲಿ ಮೂಲಬೂತವಾಗಿ ಇರುವ ಕರ‍್ತ್ರು, ಕರ‍್ಮ ಮತ್ತು ಕ್ರಿಯೆ ಎಂಬ ಈ ಗಟಕಗಳು ಬಾರದಿರುವ ಹಲವು ಬಗೆಯ ವಾಕ್ಯರಚನೆಗಳನ್ನೂ ಜಗತ್ತಿನ ಹಲವು ಬಾಶೆಗಳಲ್ಲಿ ಕಾಣಬಹುದು. ಅಂದರೆ ಈ ಮೂರು ಗಟಕಗಳಲ್ಲಿ ಯಾವುದಾದರು ಒಂದು ಗಟಕ ಇಲ್ಲದ, ಇಲ್ಲವೆ ಎರಡು ಗಟಕಗಳೂ ಇಲ್ಲದ ವಾಕ್ಯಗಳನ್ನೂ ಕಾಣಬಹುದು. ಈ ಮೇಲೆ ಮಾತಾಡಿಂದತದ್ದು ಇಂತದೊಂದು ಉದಾಹರಣೆ. ಇಲ್ಲಿ ಕೆಲವು ಉದಾಹರಣೆಗಳನ್ನು ಗಮನಿಸೋಣ. ‘ನನ್ನ ಮನೆ’, ‘ನೀರು ಚೆಲ್ಲಿತು’, ‘ಅವಳು ಹೋದಳು’, ‘ನಿದಾನವಾಗಿ ನಡೆ’. ಇಂತಾ ವಾಕ್ಯಗಳ ರಚನೆಯನ್ನು ತುಸು ಪರಿಚಯಿಸಿಕೊಳ್ಳಬಹುದು.
‘ನನ್ನ ಮನೆ’ ಇದರಲ್ಲಿ ಕ್ರಿಯಾಪದ ಇಲ್ಲ. ‘ಅವಳು ಹೋದಳು’ ಈ ವಾಕ್ಯದಲ್ಲಿ ಕರ‍್ಮ ಇಲ್ಲ. ‘ನೀರು ಚೆಲ್ಲಿತು’ ಇದರಲ್ಲಿ ಕರ‍್ತ್ರು ಇಲ್ಲ. ಇನ್ನು ‘ನಿದಾನವಾಗಿ ನಡೆ’ ಇದರಲ್ಲಿ ಕರ‍್ತ್ರು, ಕರ‍್ಮ ಎರಡೂ ಇಲ್ಲ. ಹಾಗಾದರೆ, ಇವುಗಳನ್ನು ವಾಕ್ಯ ಎಂದು ಒಪ್ಪಬಹುದೆ ಎಂಬ ಪ್ರಶ್ನೆ ಈಗ. ಸಾಮಾನ್ಯವಾಗಿ ಇಂತಾ ಬಳಕೆಗಳು ಬಾಶೆಯಲ್ಲಿ ಎಲ್ಲಿ ಕಾಣಿಸುತ್ತವೆ ಎಂಬುದನ್ನು ಗಮನಿಸಬಹುದು. ಸಂಬಾಶಣೆ ನಡೆಯುವಾಗ ಇವು ಅತ್ಯಂತ ಸಹಜವಾಗಿ ಕಾಣಿಸುತ್ತವೆ. ಇದಕ್ಕೆ ಮುಕ್ಯವಾಗಿ ಮಾತುಗರ ಉಳಿತಾಯ ಯೋಜನೆಯೆ ಕಾರಣವಾಗಿರುತ್ತದೆ. ಅಂದರೆ, ಸಾದ್ಯವಾದಶ್ಟು ಉಚ್ಚರಣೆಯಲ್ಲಿ ಉಳಿತಾಯವನ್ನು ಮಾಡುವುದು.
ಈ ಮೇಲಿನ ‘ನನ್ನ ಮನೆ’ ಎಂಬುದನ್ನು ನೋಡಿದರೆ, ಇದನ್ನು ‘ಇದು ನನ್ನ ಮನೆ’, ‘ನನ್ನ ಮನೆ ಇದೆ’, ‘ನನ್ನ ಮನೆ ಆಗಿದೆ’ ಎಂಬ ಯಾವುದಾದರೂ ಒಂದು ಅರ‍್ತ ಇಲ್ಲವೆ ರಚನೆ ಅದರಲ್ಲಿ ಇರುತ್ತದೆ ಎಂದು ಪರಿಬಾವಿಸಿಕೊಳ್ಳಬೇಕು. ಅಂದರೆ, ಆ ಮಾತಿನ ಪರಿಸರದಲ್ಲಿ ಅದು ಅರ‍್ತಪೂರ‍್ಣವಾಗಿ ಬಳಕೆಯಾಗಿರುತ್ತದೆ ಮತ್ತು ಅಲ್ಲಿ ಅವಶ್ಯವಿರುವ ಬಾಶಿಕ ಕೆಲಸವನ್ನು ಮಾಡುತ್ತಿರುತ್ತದೆ. ಹಾಗಾಗಿ ಇಂತಾ ರಚನೆಗಳನ್ನು ವಾಕ್ಯಗಳೆಂದು ಪರಿಗಣಿಸಬಹುದು. ಇವುಗಳನ್ನು ಕ್ರಿಯಾಪದಗಳಿಲ್ಲದ ವಾಕ್ಯಗಳೆಂದು ಹೇಳಲಾಗುತ್ತದೆ. ಕನ್ನಡದಲ್ಲಿ ಕ್ರಿಯಾಪದಗಳಿಲ್ಲದ ವಾಕ್ಯಗಳು ಸಾಮಾನ್ಯವಾಗಿ ಕಂಡುಬರುತ್ತವೆ.
ಕರ‍್ತ್ರು ಮತ್ತು ಕರ‍್ಮ ಗಟಕಗಳು ಇಲ್ಲದಿರುವ ರಚನೆಗಳನ್ನು ಇನ್ನು ತುಸು ಮಾತಾಡಬಹುದು. ಮೇಲೆ ಕೊಟ್ಟಿರುವ ‘ಅವಳು ಹೋದಳು’ ಎಂಬುದರಲ್ಲಿ ಕರ‍್ಮ ಪದ ಇಲ್ಲ. ಈ ವಾಕ್ಯದಲ್ಲಿ ಅವಳು ಹೋದಳು ಎಂಬುದು ತಿಳಿಯುತ್ತದೆ. ಆದರೆ, ಈ ಹೋಗುವ ಕ್ರಿಯೆಯಿಂದ ಬಾದಿತವಾದ, ಇಲ್ಲವೆ ಈ ಕ್ರಿಯೆಯ ಪರಿಣಾಮಕ್ಕೆ ಒಳಗಾದ ಗಟಕ ಯಾವುದು ಎಂಬುದರ ಬಗೆಗೆ ಮಾಹಿತಿ ಇಲ್ಲ. ಅಂದರೆ, ಸುಲಬವಾಗಿ ಹೇಳುವುದಾದರೆ ಅವಳು ಎಲ್ಲಿಗೆ ಹೋದಳು ಎಂಬ ಮಾಹಿತಿ ಈ ವಾಕ್ಯದಲ್ಲಿ ದೊರೆಯುವುದಿಲ್ಲ. ಸಾಮಾನ್ಯವಾಗಿ ಇಂತಾ ಬಳಕೆಗಳಲ್ಲಿ ಮಾತಿನ ಪರಿಸರದಿಂದ ಈ ಮಾಹಿತಿಯನ್ನು ಹೆಕ್ಕಿಕೊಳ್ಳಲು ಸಾದ್ಯವಿರುತ್ತದೆ. ಹಾಗಾಗಿ ಈ ಬಗೆಯ ಬಳಕೆಗಳು ಸಾದ್ಯ. ಇಲ್ಲಿ, ಮಾಹಿತಿಯು ಮಾತಿನ ಪರಿಸರದಲ್ಲಿ ಲಬ್ಯವಿರುತ್ತದೆ ಮತ್ತು ಅದನ್ನು ಎತ್ತಿ ಹೇಳಬೇಕಾದ ಅವಶ್ಯಕತೆ ಇರುವುದಿಲ್ಲ. ಇದರಿಂದಾಗಿ ಬಳಕೆಯಲ್ಲಿ ಅದೊಂದು ಗಟಕದ ಉಚ್ಚರಣೆಯ ಸಮಯವನ್ನು ಉಳಿತಾಯ ಮಾಡಿಕೊಂಡ ಹಾಗಾಗುತ್ತದೆ.
ಇನ್ನು ಕರ‍್ತ್ರು ಇಲ್ಲದ ವಾಕ್ಯದ ಬಳಕೆಯೊಂದನ್ನು ಮಾತಿಗೆ ತೆಗೆದುಕೊಳ್ಳೋಣ. ಮೇಲೆ ‘ನೀರು ಚೆಲ್ಲಿತು’ ಎಂಬ ವಾಕ್ಯವನ್ನು ಕೊಟ್ಟಿದೆ. ಈ ವಾಕ್ಯದಲ್ಲಿ ‘ಚೆಲ್ಲುವ’ ಕ್ರಿಯೆಯೊಂದು ಇದೆ. ಈ ಕೆಲಸದ ಪರಿಣಾಮಕ್ಕೆ ಒಳಗಾಗಿರುವ ‘ನೀರು’ ಎಂಬ ಗಟಕ ಇದೆ. ಆದರೆ, ವಾಕ್ಯದಲ್ಲಿರುವ ಈ ಕೆಲಸವನ್ನು ಯಾರು ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲ. ಸಹಜವಾಗಿ ಗಟಿಸುವ ಕೆಲಸಗಳಿಗೆ, ಕರ‍್ತ್ರುವೊಂದು ಇಲ್ಲದೆ ನಡೆಯಬಹುದಾದ ಗಟನೆಗಳಿಗೆ ಈ ರೀತಿಯ ವಾಕ್ಯ ರಚನೆಯನ್ನು ಕಾಣಬಹುದು. ಇಲ್ಲಿ ಕರ‍್ತ್ರು ಯಾರು ಇಲ್ಲ ಎಂಬುದು ಸ್ಪಶ್ಟವಾಗುತ್ತಿರುತ್ತದೆ. ಕರ‍್ಮಣಿ ರಚನೆಯಲ್ಲಿಯೂ ಇಂತಾ ಬಳಕೆಗಳನ್ನು ಕಾಣಬಹುದು. ಕರ‍್ತ್ರುವನ್ನು ಮುಚ್ಚಿಡುವ ಇಲ್ಲವೆ ಹಿನ್ನೆಲೆಗೆ ಸರಿಸುವ ಕಾರಣಕ್ಕೂ ಇಂತಾ ವಾಕ್ಯಗಳನ್ನು ಬಳಸುವುದನ್ನೂ ಕಾಣಬಹುದು. ಉದಾ. ‘ಕವನ ಸಿದ್ದವಾಯಿತು’, ‘ಹಣ್ಣು ಮಾರಾಟವಾದವು’ ಮೊ. ಇಲ್ಲಿ, ಕರ‍್ತ್ರುವನ್ನು ಹೇಳದೆ ಕ್ರಿಯೆಯನ್ನು ಮಾತ್ರ ಹೇಳುವುದನ್ನು ಕಾಣಬಹುದು.
ಇದಕ್ಕೆ ಬಿನ್ನವಾದ ಇನ್ನೊಂದು ಬಗೆಯ ಕರ‍್ತ್ರುವಿಲ್ಲದ ವಾಕ್ಯಗಳನ್ನೂ ಸಾಮಾನ್ಯವಾಗಿ ಕಾಣಬಹುದು. ಇವುಗಳನ್ನು ವಿಶೇಶವಾಗಿ ಪ್ರತ್ಯಯಗಳು ಇರುವ ಮತ್ತು ವಾಕ್ಯದಲ್ಲಿ ಕರ‍್ತ್ರುವಿನ ಗುಣಸ್ವಬಾವಗಳನ್ನು ಕ್ರಿಯಾಪದ ಹೊತ್ತುಕೊಳ್ಳುವಂತ ಬಾಶೆಗಳಲ್ಲಿ ಮಾತ್ರ ಕಾಣಬಹುದು. ಉದಾ. ‘ಸಿನಿಮಾಕ್ಕೆ ಹೋದಳು’. ಇಲ್ಲಿ ಕರ‍್ತ್ರು ಪದ ಬಳಕೆ ಆಗಿಲ್ಲ. ಆದರೆ, ಕರ‍್ತ್ರು ಯಾರು ಎಂಬುದನ್ನು ವಾಕ್ಯದಲ್ಲಿನ ಕ್ರಿಯಾಪದದ ಮೇಲೆ ಬಂದಿರುವ ವಿವಿದ ಪ್ರತ್ಯಯಗಳು ತಿಳಿಸಿಕೊಡುತ್ತಿವೆ. ‘ಹೋಗು’ ಎಂಬ ಕ್ರಿಯಾಪದದ ಮೇಲೆ ಪ್ರತಮ ಪುರುಶ ಸ್ತ್ರೀಲಿಂಗ ಏಕವಚನ ಪ್ರತ್ಯಯವು ಬಂದು ವಾಕ್ಯದ ಕರ‍್ತ್ರು ಒಂದು ಹೆಣ್ಣು ಎಂಬುದನ್ನು ತಿಳಿಸುತ್ತಿದೆ. ಹೀಗೆ ಮಾಡುಗವಿಲ್ಲದ ವಾಕ್ಯಗಳನ್ನು ಅರ‍್ತ ಮಾಡಿಕೊಳ್ಳಬಹುದು.
ಎಶ್ಟು ದೊಡ್ಡ ವಾಕ್ಯ:
ಇನ್ನು, ಎಶ್ಟು ದೊಡ್ಡ ವಾಕ್ಯ ಇರಬಹುದು? ಅಂದರೆ ಎಶ್ಟು ಹೆಚ್ಚು ಗಟಕಗಳನ್ನು ಒಂದು ವಾಕ್ಯ ಹೊಂದಿರಬಹುದು? ಎಂಬ ಪ್ರಶ್ನೆಯನ್ನು ತೆಗೆದುಕೊಳ್ಳೋಣ. ವಾಸ್ತವದಲ್ಲಿ ಒಂದು ವಾಕ್ಯದ ಒಳಗೆ ಎಶ್ಟು ಗಟಕಗಳಿರಬಹುದು ಎಂಬುದಕ್ಕೆ ಇಲ್ಲವೆ ಎಶ್ಟು ದೊಡ್ಡ ವಾಕ್ಯ ಇರಬಹುದು ಎಂಬುದಕ್ಕೆ ಉತ್ತರ ಅನಂತ ಎಂಬುದೆ ಆಗಿರುತ್ತದೆ. ರಚನಾತ್ಮಕವಾಗಿ ಇದಕ್ಕೆ ಯಾವುದೆ ಮಿತಿ ಎಂಬುದು ಇಲ್ಲ. ಆದರೆ, ದಿನಬಳಕೆಯಲ್ಲಿ ಬಹು ಉದ್ದನೆಯ ವಾಕ್ಯಕ್ಕೆ ಅವಕಾಶವೆ ಇರುವುದಿಲ್ಲ. ಬರಹದಲ್ಲಿ ಇಂತಾ ಪ್ರಯೋಗಗಳನ್ನು ಕಾಣಬಹುದು. ಹಳಗನ್ನಡದಲ್ಲಿ, ಕೆಲವು ಕಾದಂಬರಿಗಳಲ್ಲಿ ಹಲವು ಸಾಲುಗಳವರೆಗೆ ಒಂದು ವಾಕ್ಯ ಮುಂಬರಿಯುವುದನ್ನು ಕಾಣಬಹುದು. ಅಂದರೆ, ಪೂರ‍್ಣ ಕ್ರಿಯಾಪದವನ್ನು ತಾರದೆ, ಅಪೂರ‍್ಣ ಕ್ರಿಯಾಪದಗಳೊಂದಿಗೆ ವಾಕ್ಯವನ್ನು ಹಾಗೆ ದಾಟಿಸಿಕೊಂಡು ನಡೆಸಬಹುದು. ಚೆನ್ನಣ್ಣ ವಾಲೀಕಾರ ಅವರು ವ್ಯೋಮಾವ್ಯೋಮ ಎಂಬ 1500 ಪುಟಕ್ಕೂ ಹೆಚ್ಚಿನ ವ್ಯಾಪ್ತಿಯ ಮಹಾಕಾವ್ಯವೊಂದನ್ನು ಬರೆದಿದ್ದಾರೆ. ಇದನ್ನು ಒಂದೆ ವಾಕ್ಯದಲ್ಲಿ ಬರೆದಿದೆ ಎಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಇಶ್ಟು ದೊಡ್ಡ ವಾಕ್ಯವೊಂದು ಸಾದ್ಯವೆ ಆಗಿದೆ. ಆದರೆ,
ವಾಲೀಕಾರರ ಆ ಕ್ರುತಿಯ ಒಳಗೆ ಹಲವೆಡೆ ಪೂರ‍್ಣ ಕ್ರಿಯಾಪದ ಬಂದಿರುವುದು ಸ್ಪಶ್ಟವಿದೆ. ಇರಲಿ, ನಮಗಿಲ್ಲಿ ಮುಕ್ಯವಾಗಿರುವುದು ವಾಕ್ಯವೊಂದರ ರಚನೆ. ಬಾಶೆಯಲ್ಲಿ ರಚನೆ ಮುಕ್ಯವಾಗುತ್ತದೆ. ಈ ರಚನೆಯನ್ನು ಬಳಸಿಕೊಂಡು ಮಾಡುವ ರೂಪಣೆಗಳಲ್ಲ.
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.