Date: 20-08-2022
Location: ಬೆಂಗಳೂರು
“ಒಂದು ಕಾಲಕ್ಕೆ ಹಾಸ್ಯದ ರಸ ಋಷಿಗಳಿದ್ದ ಕನ್ನಡ ಸಿನೆಮಾ ಮತ್ತು ವೃತ್ತಿ ರಂಗಭೂಮಿಯ ಭೂಮತ್ವವನ್ನೇ ಮರೆತಿರುವ ಕಾಮೆಡಿ ಷೋ ಜಗತ್ತನ್ನು ಯಾರು ಎಚ್ಚರಿಸಬೇಕು?” ಎಂದು ಪ್ರಶ್ನಿಸುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ಕಿರುತೆರೆಯ ಕಾಮೆಡಿ ಶೋಗಳು ಏನಾಗುತ್ತಿವೆ ಎಂಬುದನ್ನು ವಿವರಿಸಿದ್ದಾರೆ.
ಪ್ರಾಯಶಃ ಮೊದ ಮೊದಲಿಗೆ ಹಿಂದಿ, ಇಂಗ್ಲಿಷ್, ಮತ್ತಿತರೆ ಭಾಷೆಗಳಲ್ಲಿದ್ದ ಕಾಮೆಡಿ ಷೋಗಳ ಗುದುಮುರಿಗೆ ಕನ್ನಡಕ್ಕೂ ಅಮರಿಕೊಂಡು ಅದೀಗ ದಶಕವೇ ಮೀರಿದ ದಾಟುಹಾದಿಯಲ್ಲಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಕನ್ನಡದ ಕಿರುತೆರೆಯ ಸಾಂಸ್ಕೃತಿಕ ಸೌರಭದ ಚಹರೆ ಪಟ್ಟಿಗಳು ಸಭ್ಯತೆಯ ಎಲ್ಲೆಗಳನ್ನು ಮೀರಿ ಎಗರುತ್ತಲಿವೆ. ಅವು ಮನರಂಜನೆಯ ನೆವನದಲ್ಲಿ 'ಮಜಾ' ಗೋಜಲಿನ ಅಸಭ್ಯತೆಯ ಆಗರವೇ ಆಗುತ್ತಲಿವೆ. ಕಾಮೆಡಿ ಸ್ಕಿಟ್ ಅರ್ಥಾತ್ ಹದಿನೈದಿಪ್ಪತ್ತು ನಿಮಿಷಗಳ ಪುಟ್ಟ, ಪುಟ್ಟ ರಂಗರೂಪಕ ಗಿಲಿಗಿಚ್ಚಿ ಪ್ರದರ್ಶನಗಳ ಮೂಲಕ ಗಿಲೀಟಿನ ಪೈಪೋಟಿಗೆ ಇಳಿದು ಬಿಟ್ಟಂತಿವೆ. ಮತ್ತೆ ಕೆಲವು ರಿಯಾಲಿಟಿ ಶೋಗಳು ಕ್ರುಯಾಲಿಟಿಯ ಹಾದಿ ಹಿಡಿದಿರುವುದು ಹಳೆಯ ಸುದ್ದಿ.
ಇನ್ನೂ ಕೆಲವು ಹಿಂದೀ ಕಾಮೆಡಿ ಷೋಗಳ ತಾಸೊಪ್ಪತ್ತಿನ ರೋಲ್ ಮಾಡೆಲ್ ಮಾದರಿಯಲ್ಲಿ ಕನ್ನಡಿಗರ ವಿನೋದ ಲೋಕವನ್ನು ಆವರಿಸಿಕೊಂಡು ಷೋವೊಂದು ಹಣದ ತೈಲಿ ತುಂಬಿಸಿಕೊಂಡಿತು. ದುರಂತವೆಂದರೆ ವಿನೋದ ಪ್ರಜ್ಞೆಯ ವಿವೇಕವನ್ನೇ ಗಾಳಿಗೆ ತೂರಿದಂತಿದೆ. ಒಂದುಕಾಲಕ್ಕೆ ಹಾಸ್ಯದ ರಸ ಋಷಿಗಳಿದ್ದ ಕನ್ನಡ ಸಿನೆಮಾ ಮತ್ತು ವೃತ್ತಿ ರಂಗಭೂಮಿಯ ಭೂಮತ್ವವನ್ನೇ ಮರೆತಿರುವ ಕಾಮೆಡಿ ಷೋ ಜಗತ್ತನ್ನು ಯಾರು ಎಚ್ಚರಿಸಬೇಕು.? ಸೋಜಿಗವೆಂದರೆ ಕಿರುತೆರೆಯ ಕಾಮೆಡಿ ಷೋಗಳ ಬಹಳಷ್ಟು ಕಲಾವಿದರು ಪ್ರತಿಭಾಶಾಲಿಗಳೇ ಆಗಿರುವುದನ್ನು ಅಕ್ಷರಶಃ ಅಲ್ಲಗಳೆಯಲಾಗದು. ಆದರೆ ರಂಗಭೂಮಿಯ ಅದರಲ್ಲೂ ಬಹುತೇಕ ಗ್ರಾಮಭಾರತದ ಈ ಪ್ರತಿಭೆಗಳನ್ನು ಕಮರ್ಸಿಯಲ್ ಲಾಭಕೋರತೆಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಮನರಂಜನೆ ನೀಡುವ ಇಲ್ಲವೇ ಆಮದಾನಿ ನಿರೀಕ್ಷೆಯ ಭರದಲ್ಲಿ ಸ್ಕಿಟ್ ಗಳಿಗೆ ಆಯ್ಕೆ ಮಾಡಿಕೊಳ್ಳುವ ಅವರ ಬಹುಪಾಲು ನಾಟಕ ಪ್ರದರ್ಶನ ಕಲೆಯ ವಸ್ತುಗಳು ಅಸಭ್ಯತೆಯ ಮಾಂಸದ ಮುದ್ದೆಗಳು. ಅದರಲ್ಲೂ ಅವರ ವಿಶೇಷ ಆಯ್ಕೆಗಳಲ್ಲಿ "ಫಸ್ಟ್ ನೈಟ್ ಸ್ಕಿಟ್"ಗಳದ್ದೇ ಮೇಲೋಗರ. ಹೂಮಂಚದ ಹಸಿ ಹಸಿ ಭೋಗವಿಸರ್ಜನೆಯ ರಸಿಕ ದೃಶ್ಯಗಳದ್ದೇ ಪಾರಮ್ಯ. ಇನ್ನೇನು ಮಿಲನ ಮಹೋತ್ಸವ ಜರುಗೇ ಬಿಟ್ಟಿತ್ತೆಂಬುವ ಕಟ್ಟಕಡೆಯ ಕ್ಷಣಗಳ ತೂರ್ಯಾವಸ್ಥೆ. ಅಂತಹ ಕ್ಲೈಮ್ಯಾಕ್ಸ್ ಚಣ ಗಣನೆಯ ಗಳಿಗೆಯಲ್ಲಿ ಧುತ್ತೆಂಬಂತೆ ಸಣ್ಣದೊಂದು ಆತಂಕ ಒಡ್ಡುವ ಕಡ್ಡಿಯಂತಹ ಅಡ್ಡಿಯ ಅವತಾರ. ಆ ಎಲ್ಲ ಸಂದರ್ಭದಲ್ಲಿ ಕಲಾತ್ಮ'ಕತೆ'ಯೆಲ್ಲವೂ ಮುಂಡಾಮೋಚಿ ಅಸಭ್ಯತೆ ಮತ್ತು ಅಸೂಕ್ಷ್ಮತೆಗಳ ಅಂಡಾವರಣ.
ಅಬ್ಬಬ್ಬಾ! ಸ್ಕಿಟ್ ಗಳ ಮೈತುಂಬಾ ಬಳಕೆಯಾಗುವ ಭಾಷೆಯ ವಿಷಯದಲ್ಲಂತೂ ಸಾಂಸ್ಕೃತಿಕವಾಗಿ ಹೇಳತೀರದ ಅಪಸವ್ಯ ಸಂಗತಿಗಳ ಅಟ್ಟಹಾಸ. "ಏನ್ ಕಿಸಿತಿಯಾ ಕಿಸಿ. ಅದೇನ್ ದಬಾಕ್ತಿಯಾ ದಬಾಕು." ಇವಂತೂ ಸಾಮಾನ್ಯತೀ ಸಾಮಾನ್ಯದ ಮಾತುಗಳು. ಗಂಡು ಹೆಣ್ಣು ತಾರತಮ್ಯ ಇಲ್ಲದೇ ಸಹಜ ಎನ್ನುವಂತೆ ಯಾವ ಎಗ್ಗೂ ಇಲ್ಲದೇ ಕೆಲವರ ಬಾಯಲ್ಲಿ ಮತ್ತೆ ಮತ್ತೆ ಈ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಆ ಮೂಲಕ ಅವರು ಕಾಮೆಡಿ ಷೋಗಳ ಪಿತಾಮಹ ಪಟ್ಟ ಕಟ್ಟಿಕೊಂಡಿರುತ್ತಾರೆ. ಅವರಿಗೆ ಸದಾ ದಡಿಯಾ ವಯಸ್ಸನ್ನು ಬಚ್ಚಿಡುವುದೇ ಕೊರೊನಾ ಮೀರಿದ ಮಹಾರೋಗ. ಅದೆಲ್ಲ ಹೋಗಲಿ 'ಕ್ಷಮೆಯಿರಲಿ' ಎಂಬಂತೆ ಇದ್ದುದರಲ್ಲೇ ಇಂತಹ ಮಾತುಗಳನ್ನೇ ಅಂಥವರ ಪಾಲಿಗೆ ಪ್ರಾಯಶಃ ಪರಮ ಸಭ್ಯವೆಂದು ಕರೆಯಬಹುದೇನೋ.!?
ಕಾಮೆಡಿ ಸ್ಕಿಟ್ ಷೋಗಳೆಂದರೆ ಬಹುತೇಕ ಸದಭಿರುಚಿಯ ವಿರುದ್ಧದ ಪೆಟೆಂಟ್ ಪದಾರ್ಥಗಳು ಎಂಬ ಅರ್ಥಕ್ಕೆ ಹೇಳಿ ಮಾಡಿಸಿದಂತಹ ಷೋಗಳೆಂಬುದನ್ನು ಅವು ಸಾಬೀತು ಮಾಡಿದಂತಿರುತ್ತವೆ. ಅದರ ಸೃಷ್ಟಿಕರ್ತ ಪುಣ್ಯಾತ್ಮರು ಅವರದೇ ಆದ ಭಾಷೆ ಮತ್ತು ಭಾವವಿನ್ಯಾಸ ಹುಟ್ಟಿಸಿ ಬಿಟ್ಟಿದ್ದಾರೆ. ಅದಕ್ಕಾಗಿಯೇ ಎಂಬಂತಹ
ಹೊಸಬಗೆಯ ಶೀಘ್ರ ಸ್ಖಲನದ ಗ್ಯಾಜೆಟ್ ನುಡಿಗಟ್ಟುಗಳನ್ನೇ ಕೂಡಿಟ್ಟು ಕೊಂಡಿದ್ದಾರೆ. ಆ ಮೂಲಕ ಅವರು ತಮ್ಮ ಅಸ್ಮಿತೆಯನ್ನು ಬಂದೋಬಸ್ತ್ ಮಾಡಿಕೊಂಡು ಬಿಟ್ಟಿದ್ದಾರೆ.
ಮಜಾ ಷೋಗಳ ಒಂದೆರಡು ನಿದರ್ಶನ ಇಲ್ಲಿ ಉಲ್ಲೇಖಿಸುವ ಮೂಲಕ ಅವುಗಳ ಗುಣಮಟ್ಟದ ಲೆಕ್ಕಾಚಾರ ಗುಣಿಸ ಬಹುದಾಗಿದೆ. ಕನ್ನಡದ ಹೆಸರಾಂತ ಆ್ಯಂಕರ್ ನಾಮಾಂಕಿತ ಷೋ ನಿರೂಪಕ ಮಹಾಶಯ ತನ್ನದೇ ಷೋ ಮಧ್ಯದಲ್ಲಿ ಹೀಗೆ ಸಂಭಾಷಣೆಗೆ ಇಳಿಯುತ್ತಾನೆ. " ಏಯ್ ಹುಡುಗಾ ನಿಮ್ಮ ಅಣ್ಣ ನಿನಗೆ ಖರ್ಚಿಗೆ ಹಣ ಕೊಡಲಿಲ್ಲವೆಂದು ನೀನು ನಿಮ್ಮಣ್ಣನ ಒಂದು ಕೈ ಕಟ್ ಮಾಡಿದೆ. ಇಟ್ಸ್ ಓಕೆ. ಒಂದುವೇಳೆ ನಿಮ್ಮ ಅಣ್ಣನಿಗೆ ಮಕ್ಕಳಾಗದಿದ್ದರೇ ನೀನು ಏನ್ ಕಟ್ ಮಾಡ್ತಿಯಾ.?" ಎಂದು ಗಂಭೀರವಾದ ಮುಖಭಾವದಲ್ಲಿ ತನ್ನದೊಂದು ಬಹುಮುಖ್ಯ ಪ್ರಶ್ನೆ ಅದೆನ್ನುವ ಸ್ವರದಲ್ಲಿ ಸೊಂಟದ ಮೇಲೆ ಪೊಗದಸ್ತಾಗಿ ಕೈ ಇಟ್ಟು ಕೇಳುತ್ತಾನೆ.
ಇಂತಹ ಅಸಭ್ಯ ಅರ್ಥದ ಮಾತುಗಳು ನಿರೂಪಕನ ಬಾಯಲ್ಲಿ ಬರುತ್ತಿದ್ದಂತೆ 'ಹೋಯ್' ಎಂಬ ಅರಚಾಟಗಳು. ಹಾಗೆ ನೋಡಿದರೆ ಅವೆಲ್ಲ ವಿಕೃತ ಬಗೆಯ ಕಿರುಚಾಟಗಳೇ. ಅಂತಹದೇ ಸಿಳ್ಳೆ, ಪಿಳ್ಳೆ ಚಪ್ಪಳಿಗೆಗಳ ಗೌಜು ಗದ್ದಲ. ಅವರೇನೋ ಕೆಲವೇ ಕೆಲವು ಮಂದಿ ಸ್ಟುಡಿಯೋದಲ್ಲಿ ಕುಂತು ಟೀವಿಯಲ್ಲಿ ಕಾಣಿಸಿಕೊಂಡ ಮತ್ತು ಕೇಳಿಸಿಕೊಂಡ ಉಮೇದಿನಲ್ಲಿ ಕಳೆದು ಹೋಗಬಹುದು. ಆದರೆ ಮನೆಗಳಲ್ಲಿ ಕುಂತ ಲಕ್ಷಾಂತರ ಮಂದಿ ಅದನ್ನು ನೋಡುತ್ತಾರೆಂಬ ಖಬರು ಅವರಿಗೆ ಬೇಡವೇ.?
ಇದಕ್ಕೆ ವ್ಯತಿರಿಕ್ತವಾದ ಮತ್ತೊಂದು ಸಂಭಾಷಣೆ ಸಂದರ್ಭವನ್ನು ಇಲ್ಲಿ ಉಲ್ಲೇಖಿಸಬೇಕಿದೆ. ಅಂದರೆ ಕಾಮೆಡಿ ಷೋ ತೀರ್ಪುಗಾರರನ್ನು ಉದ್ದೇಶಿಸಿ ಕಲಾವಿದನೊಬ್ಬನು ಟೆಲಿಕ್ಯಾಷ್ಟ್ ಸಂದರ್ಭದ ಸ್ಕಿಟ್ ನಡುವೆ ಕೇಳುವ ಪ್ರಶ್ನೆಯೊಂದು ನನಗಂತೂ ಮುಜುಗರ ತರಿಸಿದೆ. ಆದರೆ ಅವರ ಪಾಲಿಗೆ ಅದು ಡಬಲ್ ಮೀನಿಂಗ್ ಡೈಲಾಗ್ ಅಲ್ವಂತೆ!. ಅವರ ಆ ಸಂಭಾಷಣೆ ಕಿರಿದುಗೊಳಿಸಿ ಪ್ರಸ್ತುತ ಪಡಿಸುವೆ.
"ಜಗ್ಗಣ್ಣ, ಒಂದ್ ವಿಷ್ಯಾ ಗೊತ್ತಾ.? ಮದುವೆಗೆ ಮುಂಚೆ ನನ್ನ ಬಂದೂಕು ನೆಟ್ಟಗೆ ನಿಂತ್ಕೋತಿತ್ತು. ಎಂದು ತನ್ನ ಬಲಗೈಯನ್ನು ಮುಷ್ಟಿಮಾಡಿ ಎದೆಮಟ್ಟಕೆ ಕೈ ನೆಟ್ಟಗೆ ನಿಲ್ಲಿಸಿ ಬಿಟ್ಟ. ಅರೆಗಳಿಗೆ ತಡೆದು ಮದುವೆ ಆದ ಮೇಲೆ ನನ್ನ ಬಂದೂಕು ಠುಸ್ಸಂತ್ ಮಲಗಿ ಬಿಟ್ಟಿತೆಂದು ನೆಟ್ಟಗೆ ಮಾಡಿದ್ದ ಬಲಗೈ ಮುಷ್ಟಿಯನ್ನು ತೊಡೆತನಕ ಮೆತ್ತಗೆ ಕೆಳಗಿಳಿಸಿ ಬಿಟ್ಟ." ಅವನ ಬಂದೂಕಿನ ಈ ಖರಾಬು ಕತೆಯನ್ನು ಕೇಳುತ್ತಿದ್ದಂತೆ ತೀರ್ಪುಗಾರ ಮಹೋದಯ ಕಿಸಿ ಕಿಸಿ ನಗ ತೊಡಗಿದ. ಮಹಿಳಾ ತೀರ್ಪುಗಾರಳು ಮುಖಕ್ಕೆ ತನ್ನೆರಡು ಹಸ್ತಗಳನ್ನು ಮುಚ್ಚಿಕೊಳ್ಳುತ್ತಾ ಸಹ ತೀರ್ಪುಗಾರನಿಗಿಂತ ತಾನೇನು ಕಮ್ಮಿ ಎನ್ನುವಂತೆ ಅವನಿಗಿಂತ ಜೋರಾಗಿ ನಗ ತೊಡಗಿದಳು. ಮತ್ತೆ ಮತ್ತೆ ಇಬ್ಬರೂ ನಗತೊಡಗಿದರು.
ಸ್ಟುಡಿಯೋದಲ್ಲಿದ್ದವರು ಜಿದ್ದಿಗೆ ಬಿದ್ದವರಂತೆ ಅವರಿಬ್ಬರಿಗಿಂತ ಮತ್ತಷ್ಟು, ಇನ್ನಷ್ಟು ಎನ್ನುವಂತೆ ಅಧಿಕ ಸ್ವರಗಳಲ್ಲಿ ಬಿದ್ದು ಬಿದ್ದು ನಗಾಡ ತೊಡಗಿದರು. ಈ ಎರಡು ಸಂದರ್ಭಗಳ ರೂಪಕದಲ್ಲಿನ ಯಾವುದನ್ನು ಕಟ್ ಮಾಡ್ತಿದ್ದೆ ಮತ್ತು 'ಬಂದೂಕು' ಯಾವುದರ ಸಂಕೇತ ಎಂಬುದನ್ನು ಬಿಚ್ಚಿ ಹೇಳುವ ಅಗತ್ಯವೇ ಇಲ್ಲ. ಈ ಎರಡೂ ರೂಪಕಗಳಲ್ಲಿ ಬಳಕೆಯಾದ ಡಬಲ್ ಮೀನಿಂಗ್ ಏನೆಂಬುದು ಗೊತ್ತಾಗದೇ ಇದ್ದೀತೇ.? ಈಗ ಹೇಳಿ ಈ ಬಗೆಯ ಗಲೀಜು ರೇಟಿನ ಮೀಮಾಂಸೆಯ ಪ್ರದರ್ಶನಗಳಿಂದ ವಿನೋದ ಸಂಸ್ಕೃತಿ ಬಾಳಿ ಬದುಕ ಬಲ್ಲದೇ.? ಅದೊತ್ತಟ್ಟಿಗಿರಲಿ ಮನೆಯಲ್ಲೇ ಕುಂತು ಖಾಸಗಿ ದೂರದರ್ಶನಗಳ ಇಂತಹ ಕಚಡಾ ಅಭಿರುಚಿಯ ಕಾಮೆಡಿ ಕಾರ್ಯಕ್ರಮ ವೀಕ್ಷಿಸುವ ಕುಟುಂಬಸ್ಥರೆಲ್ಲ ಅವುಗಳಿಂದ ನಾವೇನು ಕಲಿಯ ಬಹುದು.?
ಮಹಿಳಾ ಕಲಾವಿದೆಯರ ಡೈಲಾಗ್ಸ್ ಇದಕ್ಕಿಂತ ಹೊಲಸು. ನಿನಗ್ಯಾಕ ಮಕ್ಕಳಾಗಿಲ್ಲಂತ ಕೇಳುವ ಸಹ ಕಲಾವಿದೆ ಮಾತಿಗೆ ಇನ್ನೋರ್ವ ಕಲಾವಿದೆ ಕೊಡುವ ಉತ್ತರ ಹೀಗಿದೆ. " ನನ್ಗಂಡ ಕಬಡ್ಡಿ ಆಟಗಾರ. ಕಬಡ್ಡಿ, ಕಬಡ್ಡಿ ಅಂತ ಹತ್ರ ಬರ್ತಾನೆ. ನನ್ನ ಮುಟ್ತಿದ್ದಂಗೇ ಔಟ್ ಅಂತ ಹೊರಟೋಯ್ತಾನೆ. ಅದ್ಹೆಂಗೆ ಮಕ್ಕಳಾಗ್ತವೆ." ಮಕ್ಕಳಾಗದ್ದಕ್ಕೆ ಅವಳು ಕೊಡುವ ಉತ್ತರದ ಅರ್ಥ ಏನಂತ ಸಣ್ಣ ಮಕ್ಕಳಿಗೂ ಆಗ್ತದಲ್ಲವೇ?
ನಮ್ಮ ರಂಗಸಂಸ್ಕೃತಿ ವಿಮರ್ಶಕ ಬೃಹಸ್ಪತಿಗಳು ವೃತ್ತಿ ರಂಗಭೂಮಿಯ ನಾಟಕಗಳನ್ನು ಡಬಲ್ ಮೀನಿಂಗ್ ಡೈಲಾಗುಗಳ ಕಾರ್ಖಾನೆಗಳು ಎಂಬಂತೆ ಕಡೆಗಣ್ಣಿನಿಂದ ಕಾಣುತ್ತಾರೆ. ಆದರೆ ಕಿರುತೆರೆಯ ಇಂತಹ ಶೀಘ್ರ ಸ್ಖಲನದ ಕಾಮೆಡಿ ಸ್ಕಿಟ್ಟುಗಳ ಪಠ್ಯದ ಮಾತುಗಳನ್ನು ಕೇಳಿದರೆ, ಅಂತಹ ದೃಶ್ಯಗಳನ್ನು ಕಂಡರೆ ಪ್ರಾಯಶಃ ಡಬಲ್ ಅಲ್ಲ ನೇರವಾದ ಮೀನಿಂಗ್ ಎಂದು ಅರ್ಥವಾಗಿ ಬಾಯಿ ಮಾತ್ರವಲ್ಲ ಎಲ್ಲ ಮುಚ್ಚಿಕೊಂಡು ಅವರುಗಳು ಸುಮ್ಮನಿರಬಹುದೇನೋ.? ಅಷ್ಟಕ್ಕೂ ಮುದ್ರಣ ಮಾಧ್ಯಮದ ಓದುವಿಕೆಯೇ ಔಟ್ ಡೇಟೆಡ್ ಎಂಬಂತೆ ಪರಿಗಣಿಸುವ ವರ್ತಮಾನದ ವಿದ್ಯುನ್ಮಾನ ಮಾಧ್ಯಮದ ಮಂದಿಗೆ ಇದ್ಯಾವ ಲೆಕ್ಕ ಎನ್ನುವಂತಾಗಿರ ಬಹುದೇನೋ.? ಅದೊಂದು ರೀತಿಯಲ್ಲಿ ಟೀವಿ ಟಾಕೀಜಿನ ಮೋಜು - ಮಸ್ತಿ, ಕೊಳಕು - ಕಾಮೆಡಿ ಮತ್ತು ಕಿಲಾಡಿತನವೂ ಆಗಿದ್ದೀತು.?
ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.