ಕೆರೆಯ ನೀರನು ಕೆರೆಗೆ ಚೆಲ್ಲಿ

Date: 22-06-2023

Location: ಬೆಂಗಳೂರು


“ನಮ್ಮಲ್ಲಿ ಸ್ಪರ್ಧಾತ್ಮಕ ಅಧ್ಯಯನಕ್ಕೆ, ಭಿನ್ನ ಭಿನ್ನ ಜ್ಞಾನಶಿಸ್ತುಗಳ ಅಧ್ಯಯನಕ್ಕೆ ಬೇಕಾದ ಆಕರಸಾಮಗ್ರಿ ಕನ್ನಡದಲ್ಲಿ ದೊರೆಯುವುದಿಲ್ಲ. ಅದನ್ನು ಇಂಗ್ಲಿಶಿನಿಂದ ಅನುವಾದಿಸಿಕೊಂಡು ಓದಬೇಕಾದ ದುಃಸ್ಥಿತಿ ಇದೆ ಎಂಬ ಮಾತಿದೆ. ಹಾಗೆಯೆ ಸಾಹಿತ್ಯ ನಮ್ಮಲ್ಲಿ ಸಮೃದ್ಧವಾಗಿದೆ; ಆದರೆ ವಿವಿಧ ಜ್ಞಾನಗಳ ಬರವಣಿಗೆಗೆ ಕನ್ನಡಕ್ಕೆ ಶಕ್ತಿ ಸಾಲದು ಎಂಬ ಕಲ್ಪಿತವೊಂದು ಕೂಡ ಚಾಲ್ತಿಯಲ್ಲಿ ಇದೆ,” ಎನ್ನುತ್ತಾರೆ ಅಂಕಣಕಾರ ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು' ಅಂಕಣದಲ್ಲಿ ‘ಕೆರೆಯ ನೀರನು ಕೆರೆಗೆ ಚೆಲ್ಲಿ' ವಿಚಾರದ ಕುರಿತು ಬರೆದಿದ್ದಾರೆ.

ಎಲ್ಲಿಂದ ಏನನ್ನು ಪಡೆದೆವೊ ಅಲ್ಲಿಗೇ ಅದನ್ನು ಕೊಡುವುದನ್ನು ನಮ್ಮ ಜನಪದರು ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಮಾತಿನ ಮೂಲಕ ಹೇಳಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಪದವಿ ಕನ್ನಡ ಪಠ್ಯಪುಸ್ತಕಗಳನ್ನು ನೋಡಿದಾಗ ಹೊಳೆಯುವ ಮಾತು ಇದು.

ನಾಲ್ಕು ಸೆಮಿಸ್ಟರುಗಳಿಗೆ ಕನ್ನಡ ಭಾಷೆ, ಕನ್ನಡ ಐಚ್ಛಿಕ, ಕನ್ನಡ ಮುಕ್ತ ಆಯ್ಕೆ, ಕಡ್ಡಾಯ ಕನ್ನಡ (ಕ್ರಿಯಾ ಕನ್ನಡ) ಹೀಗೆ ನಾಲ್ಕು ಬಗೆಯ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸಿ, ರಚಿಸಿ ಪ್ರಸಾರಾಂಗದ ಮೂಲಕ ಪ್ರಕಟಿಸಲಾಗಿದೆ. ಇವುಗಳಲ್ಲಿ 44 ಭಾಷಾ ಪಠ್ಯಗಳನ್ನೂ; ಒಂಬತ್ತು ಕೌಶಲ ಸಂಬಂಧಿ ಮುಕ್ತ ಆಯ್ಕೆ ಪಠ್ಯಗಳನ್ನೂ 08 ಕನ್ನಡ ಐಚ್ಛಿಕ ಪಠ್ಯಗಳನ್ನೂ ರೂಪಿಸಲಾಗಿದೆ. ಒಂದು ಕ್ರಿಯಾ ಕನ್ನಡ ಪಠ್ಯ ರೂಪಿಸಲಾಗಿದೆ. ಒಟ್ಟಾರೆಯಾಗಿ ಬೇರೆ ಬೇರೆ ಕಾಲೇಜುಗಳಿಗೆ ಸೇರಿದ 73 ಮಂದಿ ಅಧ್ಯಾಪಕರು ಸೇರಿ 61 ಪುಸ್ತಕಗಳನ್ನು ಸಂಪಾದಿಸಿ/ ರಚಿಸಿದ್ದಾರೆ. ಒಬ್ಬಿಬ್ಬರನ್ನು ಹೊರತುಪಡಿಸಿ ಕನ್ನಡ ಅಧ್ಯಯನ ಮಂಡಳಿಯ ಹಲವು ಸದಸ್ಯರು ತಮಗೆ ವಹಿಸಿದ ಕೆಲಸವನ್ನು ಕ್ರಿಯಾಶೀಲವಾಗಿ ನಿರ್ವಹಿಸಿದ್ದಾರೆ. ಕನ್ನಡ ಸ್ನಾತಕ ಅಧ್ಯಯನ ಮಂಡಳಿಯ ಸಂಚಾಲಕರಾಗಿ ಡಾ. ರಾಮಲಿಂಗಪ್ಪ ಟಿ. ಬೇಗೂರು ಕಾರ್ಯ ನಿರ್ವಹಿಸಿದ್ದಾರೆ. ಅಧ್ಯಕ್ಷರಾಗಿ ಒಂದು ಅವಧಿಗೆ ಡಾ. ಸಿ. ನಾಗಭೂಷಣ ಅವರೂ ಮತ್ತು ಇನ್ನೊಂದು ಅವಧಿಗೆ ಡಾ. ಮುನಿಯಪ್ಪ ಅವರೂ ಕಾರ್ಯ ನಿರ್ವಹಿಸಿದ್ದಾರೆ. ಈ ದೊಡ್ಡ ಕಾರ್ಯದಲ್ಲಿ ಎರಡು ವರ್ಷಗಳ ಕಾಲ ಭಾಗಿಯಾದ ಎಲ್ಲ 73 ಮಂದಿಯಲ್ಲಿ ಇದೆ ಮೊದಲ ಬಾರಿಗೆ ಸಂಪಾದನಾ ಕಾರ್ಯ ಮಾಡಿದವರು ಸರಿಸುಮಾರು 60 ಮಂದಿ ಇದ್ದಾರೆ. ಇವರಲ್ಲಿ ೨೫ರ ವಯೋಮಾನದಿಂದ ೫೮ರ ವಯೋಮಾನದವರೂ ಇದ್ದಾರೆ. ಸೇವಾ ಹಿರಿತನಕ್ಕಿಂತ ಕಾರ್ಯಶೀಲತೆಗೆ ಮನ್ನಣೆ ನೀಡಿರುವುದು ಸಂಪಾದಕರ ಪಟ್ಟಿಯನ್ನು ನೋಡಿದರೆ ಕಾಣುತ್ತದೆ.

ಇದುವರೆಗಿನ ಇತಿಹಾಸದಲ್ಲಿ ಬೆಂಗಳೂರು ವಿ.ವಿ. ಪ್ರಸಾರಾಂಗದಿಂದ ಒಮ್ಮೆಗೇ ಇಷ್ಟು ಸಂಖ್ಯೆಯ ಪಠ್ಯ ಪುಸ್ತಕಗಳು ಪ್ರಕಟವಾದುದು ಇಲ್ಲ. ಇದುವರೆಗೆ ಕೇವಲ ಆರು ಪುಸ್ತಕಗಳು ಮಾತ್ರ ಪ್ರಕಟ ಆಗುತ್ತಿದ್ದುವು. ಪ್ರತಿ ಕೋರ್ಸಿಗು ಪ್ರತ್ಯೇಕ ಪಠ್ಯಗಳನ್ನು ನಿಗಧಿಸುವ ಹಿನ್ನೆಲೆಯಲ್ಲಿ ಇದೆ ಮೊದಲ ಬಾರಿಗೆ ಹನ್ನೊಂದು ಕೋರ್ಸುಗಳಿಗೆ ಭಿನ್ನ ಭಿನ್ನ ಕನ್ನಡ ಪಠ್ಯಗಳನ್ನು ನಿಗಧಿಸಲಾಗಿದೆ. ಮತ್ತು ಹಲವಾರು ಮುಕ್ತ ಆಯ್ಕೆ ಪಠ್ಯಗಳನ್ನು ನಿಗಧಿಸಿ ಪ್ರಕಟಿಸಲಾಗಿದೆ. ಇದುವರೆಗಿನ ಪುಸ್ತಕಗಳಲ್ಲಿ ಸಂಪಾದಕರ ಪ್ರಸ್ತಾವನೆಗಳು ಇರಲಿಲ್ಲ. ಆದರೆ ಈಗಿನ ಪುಸ್ತಕಗಳಲ್ಲಿ ಪ್ರತಿ ಪುಸ್ತಕದ ಆರಂಭದಲ್ಲಿ ಸಂಪಾದಕರ ಪ್ರಸ್ತಾವನೆ ಇದ್ದು ಅಲ್ಲಿ ಅಪೇಕ್ಷಿತ ಕಲಿಕಾ ಫಲಿತಗಳ ಬಗ್ಗೆ, ಬೋಧನಾ ವಿಧಾನಗಳ ಬಗ್ಗೆ ಮತ್ತು ಕೋರ್ಸುವಾರು ಪ್ರತ್ಯೇಕ ಪಠ್ಯಗಳನ್ನು ನಿಗಧಿಸುವ ಅಗತ್ಯದ ಬಗ್ಗೆ, ಕಲಿಕಾ ಫಲಿತಗಳ ಬಗ್ಗೆ ಹೇಳಲಾಗಿದೆ. ಹಾಗೆಯೆ ಶಿಸ್ತುವಿಶಿಷ್ಟ, ಜ್ಞಾನವಿಶಿಷ್ಟ ಕನ್ನಡ ಬರಹಗಳ ಬಳಕೆ ಮತ್ತು ಸೃಷ್ಟಿಯ ಬಗ್ಗೆ ಕೂಡ ವಿವರಿಸಲಾಗಿದೆ. ಹೀಗೆ ಕೋರ್ಸುವಿಶಿಷ್ಟ ಪ್ರತ್ಯೇಕ ಪಠ್ಯ, ಮುಕ್ತ ಆಯ್ಕೆ, ಕ್ರಿಯಾಕನ್ನಡ ಮೊದಲಾದ ಪಠ್ಯಗಳ ಮೂಲಕ ಕನ್ನಡ ಮೇಷ್ಟ್ರುಗಳಿಗೆ ವರ್ಕ್‌ಲೋಡ್‌ ಗಮನಾರ್ಹವಾಗಿ ಹೆಚ್ಚಾಗಿದೆ. ಹಾಗೆಯೆ ಕನ್ನಡ ಬಳಕೆಯಲ್ಲಿ, ಕನ್ನಡ ಜ್ಞಾನಸೃಷ್ಟಿಯಲ್ಲಿ ಗಮನಾರ್ಹ ಬದಲಾವಣೆ ಆಗುವುದನ್ನು ನಿರೀಕ್ಷಿಸಲಾಗಿದೆ.

ನಮ್ಮಲ್ಲಿ ಸ್ಪರ್ಧಾತ್ಮಕ ಅಧ್ಯಯನಕ್ಕೆ, ಭಿನ್ನ ಭಿನ್ನ ಜ್ಞಾನಶಿಸ್ತುಗಳ ಅಧ್ಯಯನಕ್ಕೆ ಬೇಕಾದ ಆಕರಸಾಮಗ್ರಿ ಕನ್ನಡದಲ್ಲಿ ದೊರೆಯುವುದಿಲ್ಲ. ಅದನ್ನು ಇಂಗ್ಲಿಶಿನಿಂದ ಅನುವಾದಿಸಿಕೊಂಡು ಓದಬೇಕಾದ ದುಃಸ್ಥಿತಿ ಇದೆ ಎಂಬ ಮಾತಿದೆ. ಹಾಗೆಯೆ ಸಾಹಿತ್ಯ ನಮ್ಮಲ್ಲಿ ಸಮೃದ್ಧವಾಗಿದೆ; ಆದರೆ ವಿವಿಧ ಜ್ಞಾನಗಳ ಬರವಣಿಗೆಗೆ ಕನ್ನಡಕ್ಕೆ ಶಕ್ತಿ ಸಾಲದು ಎಂಬ ಕಲ್ಪಿತವೊಂದು ಕೂಡ ಚಾಲ್ತಿಯಲ್ಲಿ ಇದೆ. ಕನ್ನಡ ಪಡೆಯುವ ಭಾಷೆ ಆಗಿದೆ. ಅದು ಕೊಡುವ ಭಾಷೆಯಾಗಿ ಬೆಳೆಯಬೇಕಾದ ಅವಶ್ಯಕತೆ ಇದೆ ಎಂದೂ ವಿದ್ವಾಂಸರು ಹೇಳಿದ್ದಾರೆ. ಶೈಕ್ಷಣಿಕ ಪಠ್ಯಗಳಲ್ಲಿ ವೈವಿದ್ಯಮಯವಾದ ಕನ್ನಡಗಳನ್ನು ಅಳವಡಿಸಿ ಓದಿಸುವ ಯೋಜನೆಗಳಿಂದ ಇದನ್ನೆಲ್ಲ ಬದಲಿಸುವುದು ಸಾಧ್ಯ ಎಂಬ ನಂಬುಗೆ ಈಗಿನ ಬೆಂ.ವಿ.ವಿ. ಪದವಿ ಕನ್ನಡ ಪಠ್ಯಪುಸ್ತಕಗಳಲ್ಲಿ ಇರುವುದನ್ನು ಕಾಣಬಹುದು.

ಕನ್ನಡ ಎಂಬುದು ಒಂದಲ್ಲ. ಹಲವು ಕನ್ನಡಗಳು ಸದಾ ನಮ್ಮಲ್ಲಿ ಸೃಷ್ಟಿಯಾಗುತ್ತ, ಬಳಕೆಯಾಗುತ್ತ ಬಂದಿವೆ. ಒಂದು ಜ್ಞಾನಶಿಸ್ತಿಗೆ ಬಳಸುವ ಕನ್ನಡ ಭಾಷೆಗು ಮತ್ತು ಇನ್ನೊಂದು ಜ್ಞಾನಶಿಸ್ತಿಗೆ ಬಳಸುವ ಕನ್ನಡ ಭಾಷೆ ಮತ್ತು ಪರಿಭಾಷೆಗೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಹಾಗೆಂದೆ ಇಲ್ಲಿ ಒಂದೊಂದು ಶಿಸ್ತಿಗು ಭಿನ್ನವಾದ ಕನ್ನಡಗಳನ್ನು ಕಲ್ಪಿಸಿಕೊಳ್ಳಲಾಗಿದೆ. ಕನ್ನಡ ಭಾಷಾ ಪಠ್ಯಗಳಿಗೆ ಕಲಾಕನ್ನಡ, ವಾಣಿಜ್ಯ ಕನ್ನಡ, ವಿನ್ಯಾಸ ಕನ್ನಡ, ಗಣಕ ಕನ್ನಡ, ಗಗನಯಾನ ಕನ್ನಡ, ದೃಶ್ಯ ಮತ್ತು ಲಲಿತಕಲಾ ಕನ್ನಡ, ಸಮಾಜಕಾರ್ಯ ಕನ್ನಡ, ಒಳಾಂಗಣ ವಿನ್ಯಾಸ ಕನ್ನಡ, ವ್ಯವಹಾರ ನಿರ್ವಹಣಾ ಕನ್ನಡ ಹೀಗೆ ಕೋರ್ಸುವಿಶಿಷ್ಟ ಹೆಸರುಗಳನ್ನು ಇಡಲಾಗಿದೆ. (ನೋಡಿ ಚಿತ್ರ : ೧-೨) ಆ ಮೂಲಕ ಭಿನ್ನ ಭಿನ್ನ ಜ್ಞಾನಶಿಸ್ತುಗಳಿಗೆ ಭಿನ್ನ ಭಿನ್ನ ಕನ್ನಡಗಳನ್ನು ಗುರ್ತಿಸಲು/ ಸೃಷ್ಟಿಸಲು ಯತ್ನಿಸಲಾಗಿದೆ. ಅಲ್ಲೆಲ್ಲ ಕಲಿಯುವವರು ಈಗಾಗಲೆ ಕನ್ನಡದಲ್ಲಿ ಸೃಷ್ಟಿ ಆಗಿರುವ ಕೋರ್ಸುವಿಶಿಷ್ಟ ಜ್ಞಾನವನ್ನು ಅಭ್ಯಾಸ ಮಾಡುವ ಮೂಲಕ ಕೋರ್ಸುವಿಶಿಷ್ಟ ಕನ್ನಡಗಳನ್ನು ನಾಳೆ ಸೃಷ್ಟಿಸಲು ಸಜ್ಜಾಗಲಿ ಎಂಬುದು ಇಲ್ಲಿನ ಮುಖ್ಯ ಉದ್ದೇಶವಾಗಿದೆ.

ಎನ್‌ಇಪಿ ೨೦೨೦ರ ಅನುಸಾರ ಮುಕ್ತ ಆಯ್ಕೆ ಪಠ್ಯಗಳನ್ನಾಗಿ ೧. ಕನ್ನಡ ಸಾಹಿತ್ಯ ಸಂಸ್ಕೃತಿ, ೨. ಕನ್ನಡ ವ್ಯಾಕರಣ, ೩. ವಿಚಾರ ಸಾಹಿತ್ಯ, ೪. ಕನ್ನಡ ಭಾಶಾಂತರ ಕೌಶಲ, ೫. ಡಿಜಿಟಲ್‌ ಕನ್ನಡ ಕೌಶಲ, ೬. ಕನ್ನಡ ಸ್ಪರ್ಧಾ ಕೌಶಲ, ೭. ಆತ್ಮಚರಿತ್ರೆಗಳು ಹೀಗೆ ಹಲವು ಆಯ್ಕೆಗಳನ್ನು ನೀಡಲಾಗಿದೆ. ಈ ಎಲ್ಲ ಪುಸ್ತಕಗಳೂ ಪ್ರಕಟವಾಗಿ ಕಲಿಕೆಗೆ ಅಳವಡಿಕೆ ಆಗಿವೆ. ಕನ್ನಡ ಭಾಶಾಂತರ ಕೌಶಲ, ಡಿಜಿಟಲ್‌ ಕನ್ನಡ ಕೌಶಲ, ಕನ್ನಡ ಸ್ಪರ್ಧಾ ಕೌಶಲಗಳನ್ನು ಕೌಶಲ ವಿಶಿಷ್ಟವಾಗಿ ರೂಪಿಸಿ, ಉದ್ಯೋಗ ಗಳಿಕೆಯ ಸಾಧ್ಯತೆಯನ್ನು ತೆರೆಯಲಾಗಿದೆ. ಹಾಗೆಯೆ ಕನ್ನಡ ಬಳಕೆಯ ನೆಲೆಗಳ ಸಾಧ್ಯತೆಗಳನ್ನು ವಿಸ್ತರಿಸಲು ಪ್ರಯತ್ನಿಸಲಾಗಿದೆ. ಆ ಮೂಲಕ ಕನ್ನಡವನ್ನು ಅನ್ನದ ಭಾಷೆಯಾಗಿ ಮತ್ತು ಜ್ಞಾನದ ಭಾಷೆಯಾಗಿ ಕಟ್ಟುವ ಎರಡೂ ಕೆಲಸವನ್ನು ಮಾಡಲು ಇಲ್ಲಿ ಯತ್ನಿಸಲಾಗಿದೆ. ವಿವಿಧ ವಲಯಗಳಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸಬೇಕು, ವಿವಿಧ ಜ್ಞಾನಶಿಸ್ತುಗಳಲ್ಲಿ ಕನ್ನಡ ಬಳಕೆ ಮತ್ತು ಕನ್ನಡದಲ್ಲಿ ಜ್ಞಾನ ಸೃಷ್ಟಿಸುವವರನ್ನು ಸೃಷ್ಟಿಸಬೇಕು ಎಂಬ ಹಲವು ಉದ್ದೇಶಗಳಿಂದ ಹಲವು ಕನ್ನಡಗಳನ್ನು ನಿರ್ಮಿಸಲು ಇಲ್ಲಿ ಶೈಕ್ಷಣಿಕವಾಗಿ ಯತ್ನಿಸಿರುವುದು ಕಾಣುತ್ತದೆ. (ನೋಡಿ ಚಿತ್ರ ೩-೪-೫)

ಇದೆ ಮೊದಲ ಬಾರಿಗೆ ಪಠ್ಯಪುಸ್ತಕಗಳಲ್ಲಿ ಕಲಿಕಾ ಯೋಜನೆ, ಪ್ರಶ್ನೆಪತ್ರಿಕೆ ನೀಲನಕ್ಷೆ, ಪರಿಭಾಷಾ ಕೋಶ ಇತ್ಯಾದಿ ಹಲವು ಅನುಬಂಧಗಳನ್ನು ನೀಡಲಾಗಿದೆ. ಇವುಗಳಲ್ಲಿ ಸನ್ನಿವೇಶ/ಚಿತ್ರ ನೋಡಿ ಕವಿತೆ ಬರೆಯುವ, ಕಥೆ ಬರೆಯುವ ಅಭ್ಯಾಸಗಳೂ; ರೆಸುಮೆ ತಯಾರಿಸುವ, ಪತ್ರ ಬರೆಯುವ, ಸಂಕ್ಷೇಪೀಕರಣ ಮಾಡುವ ಅಭ್ಯಾಸಗಳೂ ಇವೆ. ಪದ, ವಾಕ್ಯ, ಕಂಡಿಕೆ ಹೀಗೆ ಹಲವು ಹಂತಗಳಲ್ಲಿ ಭಾಶಾಂತರ ಅಭ್ಯಾಸಗಳನ್ನು ಅಳವಡಿಸಲಾಗಿದೆ. ಅಲ್ಲದೆ ಪ್ರತಿ ಅಧ್ಯಾಯಗಳಲ್ಲು ಪ್ರವೇಶಿಕೆ, ಆಕರವಿವರ, ಪದಕೋಶ, ಪ್ರಶ್ನಾಕೋಶ, ಲೇಖಕರ ಪರಿಚಯ, ಚಟುವಟಿಕೆಗಳು, ಹೆಚ್ಚಿನ ಪರಾಮರ್ಶನ ಇತ್ಯಾದಿಗಳನ್ನು ನೀಡಲಾಗಿದೆ. ಕಲಿಕೆಯನ್ನು ವಿದ್ಯಾರ್ಥಿಕೇಂದ್ರಿತ ಮಾಡುವ ಸಲುವಾಗಿ ಸಹಭಾಗಿ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಚಟುವಟಿಕೆ ಆಧಾರಿತ ಅನುಭವಾತ್ಮಕ ಕಲಿಕೆಯನ್ನು ಆಗುಮಾಡುವ ಹಲವು ಚಟುವಟಿಕೆಗಳನ್ನು ಅಳವಡಿಸಲಾಗಿದೆ. ಕಂಟೆಂಟ್‌ ಜೊತೆಗೆ ಪೆಡೆಗಾಜಿಯನ್ನೂ ವಿಭಿನ್ನ ಆಗಿಸಲು ಯತ್ನಿಸಲಾಗಿದೆ. ಪ್ರತಿ ಪುಸ್ತಕದ ಕೊನೆಯಲ್ಲಿ ೮೦ಕ್ಕು ಹೆಚ್ಚಿನ ಚಟುವಟಿಕೆಗಳ ಯಾದಿಯನ್ನು ನೀಡಲಾಗಿದ್ದು; ಅವುಗಳನ್ನು ತರಗತಿಯಲ್ಲಿ ಬಳಸಲು ಯೋಜನಾ ಸ್ವಾತಂತ್ರ್ಯವನ್ನೂ ನೀಡಲಾಗಿದೆ. ಒಟ್ಟು ೪೪ ಕನ್ನಡ ಭಾಷಾ ಪುಸ್ತಕಗಳು ಪ್ರಕಟ ಆಗಿದ್ದು ಅವುಗಳಲ್ಲಿ ಪ್ರತಿ ಅಧ್ಯಾಯದಲ್ಲಿ ಅಳವಡಿಸಿರುವ ಚಟುವಟಿಕೆಗಳನ್ನು ಲೆಕ್ಕ ಹಾಕಿದರೆ ಅವೇ ಸುಮಾರು 1750ಕ್ಕು ಹೆಚ್ಚು ಚಟುವಟಿಕೆಗಳು ಆಗುತ್ತವೆ.

ಕೆಲವೊಂದು ಕಡೆ ಪ್ರವೇಶಿಕೆ, ಚಟುವಟಿಕೆ, ಹೆಚ್ಚಿನ ಪರಾಮರ್ಶನ ರೂಪಿಸುವಲ್ಲಿ ವೃತ್ತಿಪರತೆಯ ಕೊರತೆ ಎದ್ದು ಕಾಣುತ್ತದೆ. ಬಹುತೇಕ ಎಲ್ಲ ಸಂಪಾದಕರೂ ಎಂ.ಎ. ಎಂಫಿಲ್‌, ಪಿಎಚ್.ಡಿ. ಎನ್‌ಇಟಿ, ಎಸ್‌ಎಲ್‌ಇಟಿ ಪಾಸು ಮಾಡಿದ್ದರೂ ಪ್ರವೇಶಿಕೆ ಬರೆಯುವಲ್ಲಿ; ಕಂಟೆಂಟೆ ಎಡಿಟಿಂಗ್‌ ಮಾಡುವಲ್ಲಿ, ಕರಡಚ್ಚು ತಿದ್ದುವಲ್ಲಿ ಯಾಕೆ ವೃತ್ತಿಪರತೆ, ಫರ್ಫೆಕ್ಷನ್‌ ತೋರುವುದಿಲ್ಲ! ಮುಂದಿನ ಪೀಳಿಗೆಯನ್ನು ಸೃಷ್ಟಿಸುವ ಗುರುತರ ಜವಾಬ್ದಾರಿ ಹೊತ್ತಿರುವ ಅಧ್ಯಾಪಕ ವೃಂದಕ್ಕೆ ಸಾಮಾಜಿಕ ಹೊಣೆಗಾರಿಕೆ, ಉತ್ತರದಾಯಿತ್ವ, ವೃತ್ತಿಪರತೆಯನ್ನು ರೂಢಿಸಿಕೊಳ್ಳುವ ಪರಿಶ್ರಮ ಯಾಕೆ ಇಲ್ಲವಾಗಿದೆ? ಪಠ್ಯಗಳ ಆಯ್ಕೆಯಲ್ಲಿ ನೆಪೋಟಿಸಮ್‌ ಯಾಕೆ ಇಣುಕುತ್ತದೆ? ಹೊಟ್ಟೆಪಾಡು ಮಾತ್ರವೆ ಮುಖ್ಯವಾಗಿ ವೃತ್ತಿಪರತೆ ಮತ್ತು ನಿಖರತೆ ಕೊರತೆ ಯಾಕೆ ಎದ್ದು ಕಾಣುತ್ತದೆ? ಮಲ್ಟಿಟಾಸ್ಕಿಂಗ್‌ ವ್ಯಕ್ತಿತ್ವದ ಅಭಾವ, ವಹಿಸಿದ ಕೆಲಸವನ್ನು ಡೆಡಿಕೇಟೆಡ್‌ ಆಗಿ ಮಾಡದ ಅವಕಾಶವಾದಿ ಅಪೇಕ್ಷೆ, ಇತರರಲ್ಲಿ ಮಾತ್ರವೆ ತಪ್ಪು ಹುಡುಕುವ ಉದ್ಯೋಗ ಮಾಡುತ್ತ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡದಿರುವ ಸ್ವಭಾವ ಯಾಕೆ ಅಧ್ಯಾಪಕರಲ್ಲಿ ಉಂಟಾಗುತ್ತದೆ?

ನಾವೆಲ್ಲರೂ ನಮ್ಮ ನಮ್ಮ ಚಹರೆಗಳನ್ನೆ ಕಳೆದುಕೊಳ್ಳುತ್ತಿರುವ, ಬೇರುಗಳನ್ನೆ ಕಳೆದುಕೊಳ್ಳುತ್ತಿರುವ ಜಾಗತೀಕರಣದ ಯುಗದಲ್ಲಿ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲೆ ದೋಷ ಇದೆಯೋ? ಅಧ್ಯಾಪಕರ ಆಯ್ಕೆ ಪ್ರಕ್ರಿಯೆಯಲ್ಲಿ ದೋಷ ಇದೆಯೋ? ಕಾಲಾನುಕಾಲಕ್ಕೆ ಅವರಿಗೆ ಒದಗಿಸುವ ಓರಿಯೆಂಟೇಶನ್‌, ರಿಫ್ರೆಶರ್‌ ಕೋರ್ಸುಗಳಲ್ಲೆ ಕೊರತೆ ಇದೆಯೊ? ವ್ಯಕ್ತಿಗಳಲ್ಲೆ ಕೆಲಸಕ್ಕೆ ಒಮ್ಮೆ ಸೇರಿದ ನಂತರ ಕಲಿಕೆಯ ಕೊರತೆ, ಆಲಸ್ಯ ಮತ್ತು ಇಚ್ಛಾಶಕ್ತಿಯ ಕೊರತೆ ಉಂಟಾಗುತ್ತದೆಯೋ? ಕಾರಣಗಳನ್ನು ನಾವೆಲ್ಲರೂ ಶೋಧಿಸಿಕೊಳ್ಳಬೇಕಿದೆ. ನಮ್ಮ ಮುಂದಿನ ಪೀಳಿಗೆಯನ್ನು ರೂಪಿಸುವ ಹೊಣೆ ನಿಭಾಯಿಸುವಾಗ ಅಲ್ಪಸ್ವಲ್ಪ ಎಚ್ಚರತಪ್ಪುವುದೂ ಸಲ್ಲದು ಅಲ್ಲವೆ?

ಒಂದಂತೂ ನಿಜ. ಇಲ್ಲಿನ ಬಹುತೇಕ ಸಂಪಾದಕರಿಗೆ ಸರಿಯಾದ ಸಂಪಾದನಾ, ಕಂಟೆಂಟ್‌ ಎಡಿಟಿಂಗ್‌, ಪ್ರೂಫ್‌ ರೀಡಿಂಗ್‌, ಅಪೇಕ್ಷಿತ ಕಲಿಕಾ ಫಲಿತಗಳ ಸಾಧನೆ, ಕ್ರಿಯಾಸಂಶೋಧನೆ, ಬೋಧನಾ ವಿಧಾನ ಇತ್ಯಾದಿ ಕುರಿತ ಕಾರ್ಯಾಗಾರಗಳನ್ನು ನಡೆಸುವ ಅಗತ್ಯವಿದೆ. ಭಿನ್ನ ಜ್ಞಾನಶಿಸ್ತುಗಳಿಗೆ ತೆರೆದುಕೊಳ್ಳುವ ಮನಸ್ಥಿತಿಯನ್ನು ಬಿತ್ತುವ; ಭಿನ್ನ ಕೋರ್ಸುಗಳಲ್ಲಿ ತರಗತಿಯಲ್ಲಿ ಕಲಿಕಾರ್ಥಿಗಳ ಕಲಿಕೆಗೆ ಅನುವು ಮಾಡಿಕೊಡುವ ಸಮಗ್ರ ವ್ಯಕ್ತಿತ್ವವನ್ನು ಭಾಷಾ ಅಧ್ಯಾಪಕರು ರೂಪಿಸಿಕೊಳ್ಳುವ ತರಬೇತಿ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಒದಗಿಸಬೇಕಾಗಿದೆ. ಸ್ಪರ್ಧಾ ಕೌಶಲ, ಭಾಶಾಂತರ ಕೌಶಲ, ಡಿಜಿಟಲ್‌ ಕನ್ನಡ ಕೌಶಲ ಇತ್ಯಾದಿ ಕೌಶಲಗಳನ್ನು ಸ್ವತಃ ಗಳಿಸಿಕೊಂಡು ಅವುಗಳನ್ನು ಕಲಿಕಾರ್ಥಿಗಳೂ ಪಡೆಯಲು ಅನುವು ಮಾಡಿಕೊಡುವ ಕಾರ್ಯಾಗಾರಗಳನ್ನು ಕಡ್ಡಾಯವಾಗಿ ನಡೆಸಬೇಕಿದೆ. ಇದನ್ನು ಯಾರು ನಡೆಸಬೇಕು? ಆಯಾ ಕಾಲೇಜುಗಳ ಕನ್ನಡ ವಿಭಾಗಗಳು, ವಿ.ವಿ., ಪ್ರಸಾರಾಂಗ, ಕನ್ನಡ ಅಧ್ಯಾಪಕರ ಸಂಘ, ಕನ್ನಡ ಸ್ನಾತಕ ಅಧ್ಯಯನ ಮಂಡಳಿಗಳು ಇದನ್ನೆಲ್ಲ ಆಗುಮಾಡಬೇಕಿದೆ.

ನಮ್ಮ ಇದುವರೆಗಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಹಿತ್ಯ ಪ್ರಕಾರಗಳನ್ನೆ ಹೆಚ್ಚು ಅವಲಂಬಿಸಲಾಗಿತ್ತು. ಕಥೆ, ಕವನ, ನಾಟಕ, ಪ್ರಬಂಧಗಳ ಪ್ರಾತಿನಿಧ್ಯ ಮತ್ತು ಅವುಗಳಿಗೆ ಪ್ರಾದೇಶಿಕ, ಲಿಂಗೀಯ, ಜಾತೀಯ, ಕಾಲೀಯ ಪ್ರಾತಿನಿಧ್ಯ ನೀಡುವ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಇದುವರೆಗಿನ ನಮ್ಮ ಪಠ್ಯಪುಸ್ತಕಗಳೆಲ್ಲವೂ ಸಾಹಿತ್ಯವನ್ನೆ ಹೆಚ್ಚು ಹೆಚ್ಚು ಪ್ರೊಮೋಟ್‌ ಮಾಡುತ್ತ ಸಾಹಿತ್ಯ ಪ್ರಕಾರಗಳಲ್ಲೆ ಕನ್ನಡ ಜ್ಞಾನವೆಲ್ಲವೂ ಸೃಷ್ಟಿ ಆಗಬೇಕು; ಪ್ರಸಾರ ಆಗಬೇಕು ಎಂಬ ಜಡ್ಡಿಗೆ ಬಿದ್ದಿತ್ತು. ಈಗಲು ಸರಿಸುಮಾರು ಇದೆ ಪರಿಸ್ಥಿತಿ ಕರ್ನಾಟಕದ ಇತರ ಎಲ್ಲ ಕಡೆಗು ಇದೆ. ಆದರೆ ಬೆಂಗಳೂರು ವಿವಿ ಪಠ್ಯಗಳಲ್ಲಿ ಇದನ್ನು ಮೀರಲು ಯತ್ನಿಸಲಾಗಿದೆ. ಎಲ್ಲಿಯವರೆಗೆ ನಾವು ಈ ಸಾಹಿತ್ಯದ ಅತಿ ಯಜಮಾನಿಕೆಯಿಂದ ಬಿಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಕನ್ನಡ ರೆಂಬೆಕೊಂಬೆಗಳನ್ನು ಚಾಚಿ ಬೆಳೆಯಲಾರದು ಎಂಬ ಐಡಿಯಾಲಜಿ ಇಲ್ಲಿನ ಪ್ರತಿ ಪುಸ್ತಕಗಳಲ್ಲು ಎದ್ದು ಕಾಣುತ್ತದೆ. ಆ ಮೂಲಕ ವಿಭಿನ್ನ ಕನ್ನಡಗಳನ್ನು ಒಳಗೊಳ್ಳಲು ಇಲ್ಲಿ ಯತ್ನಿಸಲಾಗಿದೆ ಕೂಡ. ನಿರ್ದಿಷ್ಟ ಜನವರ್ಗದ ಸಾಹಿತ್ಯಕ್ಕೆ ಮಾತ್ರವೆ ಇದ್ದ ಯಜಮಾನಿಕೆಯನ್ನು ಒಡೆದು ಅಲಕ್ಷಿತರ ಬರಹಗಳನ್ನು ಒಳಗೊಳ್ಳುವ ಕೆಲಸ ಕೂಡ ಇಲ್ಲಿ ಹೆಚ್ಚಿನ ಮಟ್ಟದಲ್ಲಿ ನಡೆದಿರುವುದನ್ನು ಕಾಣಬಹುದು. ಬರೀ ಹಳೆಯ ಆಲದ ಮರಕ್ಕೆ ಜೋತು ಬೀಳುವ ಕೆಲಸಕ್ಕಿಂತ ಹೊಸತನ್ನು ಒಳಗೊಳ್ಳುವ ಕೆಲಸ ಕೂಡ ಇಲ್ಲಿ ಸಾಕಷ್ಟು ನಡೆದಿದೆ.

ಜೆನೆಟಿಕ್ಸ್‌, ಡಿಜಿಟಲ್‌, ವೈದ್ಯಕೀಯ, ವಾಣಿಜ್ಯ, ನಿರ್ವಹಣೀಯ ಇತ್ಯಾದಿ ಸಂಗತಿಗಳನ್ನೆಲ್ಲ ಕಾವ್ಯದಲ್ಲೆ ಹೇಳಬೇಕು ಅಥವಾ ಕಥೆ, ನಾಟಕ ರೂಪದಲ್ಲೆ ಹೇಳಬೇಕು ಎಂದರೆ ಹೇಗೆ? ನಮ್ಮ ಪಠ್ಯಪುಸ್ತಕಗಳು ಸಾಹಿತ್ಯದ ಓದಿಗೆ ಮಾತ್ರ ಸೀಮಿತ ಆಗಬೇಕು ಎಂದರೆ ಹೇಗೆ? ನೂರಾರು ವರ್ಷಗಳಿಂದ ಪಠ್ಯಪುಸ್ತಕಗಳಲ್ಲಿ ನಾವು ಅನುಸರಿಸುತ್ತ ಬಂದಿರುವ ಈ ಸಾಹಿತ್ಯ ಮಡಿವಂತಿಕೆಯಿಂದ ಕನ್ನಡವನ್ನು ಹತ್ತು ಹಲವು ಜ್ಞಾನ ಕ್ಷೇತ್ರಗಳಲ್ಲಿ ಬಳಸುವ ಜನರನ್ನು ಗುರ್ತಿಸಲು ಸಾಧ್ಯವಾಗಿಲ್ಲ. ಅಷ್ಟೆ ಅಲ್ಲ; ಕನ್ನಡದಲ್ಲೆ ಭಿನ್ನ ಭಿನ್ನ ಜ್ಞಾನಕ್ಷೇತ್ರಗಳ ಜ್ಞಾನ ಸೃಷ್ಟಿಗೆ ಕನ್ನಡಿಗರನ್ನು ಪ್ರೇರೇಪಿಸುವ ಕೆಲಸ ಆಗಿಲ್ಲ. ಕನ್ನಡದ ಭಿನ್ನಜ್ಞಾನ ಸೃಷ್ಟಿ ಮತ್ತು ಬಳಕೆಯ ನೆಲೆಗಳನ್ನು ವಿಸ್ತರಿಸಲು ಸಾಧ್ಯವಾಗಿಲ್ಲ. ಈ ಜಡ್ಡನ್ನು ತೊಡೆಯುವ ಕೆಲಸವನ್ನು ಆದಷ್ಟು ಮಾಡಲು ಇಲ್ಲಿನ ಪಠ್ಯಪುಸ್ತಕಗಳಲ್ಲಿ ಯತ್ನಿಸಲಾಗಿದೆ. (ಸಾಹಿತ್ಯ ಪ್ರಕಾರಗಳ ಜಿಡ್ಡು ಮೆತ್ತಿರುವ ಕನ್ನಡ ಮೇಷ್ಟ್ರುಗಳ ಮೆದುಳುಗಳನ್ನು ಆಧುನಿಕೋತ್ತರ ಕಾಲಕ್ಕೆ ತೊಳೆದುಕೊಳ್ಳಲು ಸಜ್ಜುಮಾಡುವುದು ಕೂಡ ಬಹಳ ದೊಡ್ಡ ಟಾಸ್ಕ್‌.)

ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಹುಟ್ಟಿಸುವುದು ಮಾತ್ರ ಇಲ್ಲಿನ ಪಠ್ಯಪುಸ್ತಕಗಳ ಕಲಿಕಾ ಫಲಿತ ಅಲ್ಲ. ಅದರಾಚೆಗೆ ಅವರನ್ನು ಕನ್ನಡ ಬಳಕೆದಾರರನ್ನಾಗಿ, ಕನ್ನಡ ಬರಹಗಾರರನ್ನಾಗಿ ರೂಪಿಸುವ ಗುರಿಯನ್ನು ಇಲ್ಲಿ ಇರಿಸಿಕೊಳ್ಳಲಾಗಿದೆ. ಇಂದು ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರದಂತಹ ಮಾನವಿಕಗಳಲ್ಲಿ ಗೈಡುಗಳೆ ಪಠ್ಯಗಳ ಹಾಗೆ ಮೆರೆಯುತ್ತಿವೆಯಾದರೂ ಅಷ್ಟರಮಟ್ಟಿಗೆ ಆದರೂ ಕನ್ನಡದಲ್ಲಿ ಅಲ್ಲಿ ಬರವಣಿಗೆ ಸೃಷ್ಟಿ ಆಗಿದೆ. ಇನ್ನಿತರ ಜ್ಞಾನಶಿಸ್ತುಗಳಲ್ಲಿ ಅಲ್ಪಸ್ವಲ್ಪ ಬರವಣಿಗೆ ಸೃಷ್ಟಿ ಆಗಿದ್ದರೂ ಅದನ್ನು ಗುರ್ತಿಸುವವರು ಇಲ್ಲ. ಬೆಳೆಸುವ ಮತ್ತು ಬಳಸುವವರು ಇಲ್ಲ. ಔಷಧಶಾಸ್ತ್ರ, ಶರೀರಶಾಸ್ತ್ರ, ಪ್ರಾಣಿಶಾಸ್ತ್ರ, ಪಶುವೈದ್ಯ ಇಂಥೆಲ್ಲ ಕಡೆ ಕನ್ನಡ ಹೊರಗಾಗುತ್ತಿದೆ. ಅಲ್ಲಿ ಕಲಿಯುವವರು ಕನ್ನಡವನ್ನು ಒಂದು ಭಾಷೆಯಾಗಿಯೂ ಕಲಿಯಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕನ್ನಡ ಮಾದ್ಯಮದಲ್ಲಿ ಕಲಿಯುವುದು ಕನಸೆ ಆಗಿದೆ. ಹಾಗಾಗಿ ಕನ್ನಡ ವಿಸ್ತೃತ ನೆಲೆಯಲ್ಲಿ ಸೋಲುತ್ತಿದೆ. ಕನ್ನಡಿಗರು ಯಾಕೆ ಕನ್ನಡವನ್ನು ಕಲಿಕೆಗೆ ಎತ್ತಿಕೊಳ್ಳುತ್ತಿಲ್ಲ ಎಂದರೆ ಇಂತಹ ಸಾಹಿತ್ಯದ ರಾಜಕಾರಣವೂ ಇದರಲ್ಲಿ ಮುಖ್ಯ ಪಾತ್ರ ವಹಿಸಿದೆ. ಹಾಗಾಗಿ ಸಾಹಿತ್ಯದ ಯಜಮಾನಿಕೆಯಿಂದ ಪಠ್ಯಪುಸ್ತಕಗಳಿಗೆ ಒಂದು ಘಟಕದಲ್ಲಾದರೂ ಬಿಡುಗಡೆ ನೀಡುವ ಮತ್ತು ಶಿಸ್ತು ವಿಶಿಷ್ಟ, ಕೋರ್ಸುವಿಶಿಷ್ಟ ಜ್ಞಾನಬರಹಗಳನ್ನು ಅಲ್ಲಿ ಅಳವಡಿಸುವ ಪ್ರಯತ್ನವನ್ನು ಈ ಪಠ್ಯಪುಸ್ತಕಗಳಲ್ಲಿ ಮಾಡಲಾಗಿದೆ. ಅದಕ್ಕಾಗಿ ಸಾಕಷ್ಟು ಒಳಗುದ್ದುಗಳನ್ನು ಪಡೆದಿದ್ದರೂ ಅದಕ್ಕೆ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ.

ಸಾಮಾಜಿಕ ನ್ಯಾಯ, ಲಿಂಗನ್ಯಾಯಗಳನ್ನು ಆದಷ್ಟು ಪಾಲಿಸಲು ಇಲ್ಲಿನ ಪಠ್ಯಗಳ ಕಂಟೆಂಟ್‌ ಮತ್ತು ಲೇಖಕರ ಆಯ್ಕೆಯ ಸಂದರ್ಭದಲ್ಲಿ ಯತ್ನಿಸಿರುವುದು ಇಲ್ಲಿನ ಪಠ್ಯಭಾಗಗಳನ್ನು ನೋಡಿದರೆ ತಿಳಿಯುತ್ತದೆ. ಸಾಹಿತ್ಯವನ್ನು ಸಂಪೂರ್ಣ ಅಲಕ್ಷಿಸದೆ, ಅದನ್ನೆ ತಲೆ ಮೇಲೆ ಹೊತ್ತೂ ಮೆರೆಯದೆ ಅನ್ಯಜ್ಞಾನಶಿಸ್ತು ಬರವಣಿಗೆ ಮತ್ತು ಸಾಹಿತ್ಯ ಬರವಣಿಗೆಗಳಲ್ಲಿ ಒಂದು ಸಮತೋಲ ಸಾಧಿಸುವ ಪ್ರಯತ್ನವನ್ನೂ ಇಲ್ಲಿ ಕಂಟೆಂಟಿನಲ್ಲಿ ಮಾಡಲಾಗಿದೆ. ಇಂತಹ ಎಚ್ಚರ ಸ್ಥಳೀಯತೆಯನ್ನು ಪೋಷಿಸಬಲ್ಲುದು. ಈ ಕಾರ್ಯದಲ್ಲಿ ಸಾಮೂಹಿಕವಾಗಿ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು. ವಿವಿಯ ಮೇಲಧಿಕಾರಿಗಳು, ಪ್ರಸಾರಾಂಗದ ನಿರ್ದೇಶಕರುಗಳು ಅಭಿನಂದನಾರ್ಹರು.

ರಾಮಲಿಂಗಪ್ಪ ಟಿ. ಬೇಗೂರು

ಈ ಅಂಕಣದ ಹಿಂದಿನ ಬರೆಹಗಳು:
ಕೊಂಡಿ ಎಲ್ಲಿ ಕಳಚಿದೆ?
ಯಾರದೊ ಅಜೆಂಡಾ ಮಾರಮ್ಮನ ಜಾತ್ರೆ

ಹೊಸಕಾವ್ಯದ ಭಾಷೆ, ಗಾತ್ರ, ಹೂರಣ
ಗೌರಿಯರು: ಕುಟುಂಬ - ದಾಂಪತ್ಯ ಸಂಕಥನ
ರಾಷ್ಟ್ರೀಯತೆಯ ಆಚರಣೆಯ ಸುತ್ತ
ನೆನ್ನೆ ಮನ್ನೆ-1
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...