ಕಹಿ ಸಿಹಿಗಳೆರಡರ ಮಿಶ್ರಣ ‘ಹೀಗೊಂದು ಏರೋಸ್ಪೇಸ್ ಪುರಾಣ’


"ಪ್ರಸಿದ್ಧ ಸಾಹಿತಿಗಳು, ಕವಿಗಳು ಹಿಂದಿನ ಶತಮಾನಗಳಲ್ಲಿ ವಾಸಿಸಿ ತೆರಳಿದ ನೀಲಿ ಫಲಕಗಳ ಮನೆಗಳನ್ನು ಅವರು ಕಾಯ್ದುಕೊಂಡಿರುವ ಸ್ವಾರಸ್ಯ, ನೋವು ತರಿಸುವ ಕ್ಲಿಫ್ಡ್ ಬ್ರಿಜ್ ನ ಸ್ಯೂಸೈಡ್ ಪಾಯಿಂಟ್, 'ಎ ಪೊಯೆಟ್ ಫಾರ್ ಸೇಲ್...ಕಾಸಿಗಾಗಿ ಕವಿತೆ ಬರೆಯುವವನ ಸುದ್ದಿಯ ವಿಷಾದ," ಎನ್ನುತ್ತಾರೆ ಜಯಶ್ರೀ ದೇಶಪಾಂಡೆ. ಅವರು ಜಯಶ್ರೀ ಕಾಸರವಳ್ಳಿ ಅವರ ‘ಹೀಗೊಂದು ಏರೋಸ್ಪೇಸ್ ಪುರಾಣ’ ಕೃತಿ ಕುರಿತು ಬರೆದ ವಿಮರ್ಶೆ.

ವಿದೇಶೀ ಸೀಮೆಗಳಿಗೆ ಮಾಡುವ ಪ್ರಯಾಣಗಳು ತಂದೊಡ್ಡುವ ಅನುಭವಗಳಿಗೆ ಸೀಮೆಯೆಂಬುದೇ ಇಲ್ಲ! ಆರಂಭಕ್ಕೂ ಮುಕ್ತಾಯಕ್ಕೂ ನಡುವೆ ಘಟಿಸುವ ಅನಿರೀಕ್ಷಿತ ತೊಂದರೆಗಳನ್ನು-ಹೌದು ಅವು ತೊಂದರೆಗಳೇ- ಸಹಿಸಲೇಬೇಕಾಗುವ ಅನಿವಾರ್ಯತೆ ನಿಜಕ್ಕೂ ದುರ್ಭರವೇ.‌ ಅದರಲ್ಲೂ ಗಗನಕ್ಕೇರಲು ಹೊರಟು ನಿಂತ ಫ್ಲೈಟು ಒಲ್ಲೆನೆಂಬಂತೆ ಹಠ ಕಟ್ಟಿ ನಿಂತಂತೆ, ಅದಕ್ಕೆ ಕಾರಣವೂ ತಿಳಿಯದ ನಿಮ್ಮ ಆತಂಕ, ಬ್ಯಾಗೇಜಿನ ಕುರಿತಾದ ಪಡಿಪಾಟ್ಲು, ದೈಹಿಕ ಶ್ರಮ, ಊಟ ತಿಂಡಿಯೂ‌ ಸರಿಯಿಲ್ಲದ ಮಾನಸಿಕ ಟೆನ್ಶನ್, ಎಲ್ಲಕ್ಕೂ ಇರಾನ್ ಇಸ್ರೇಲ್ ಹೋರಾಟದ ಭಯಂಕರ ಮಿಸೈಲ್ ಅಟ್ಯಾಕಿನಂಥ ಜಾಗತಿಕ ಪರಿಸ್ಥಿತಿ ಮೂಲವೆಂಬ ಉತ್ತರವಿದ್ದದ್ದು ಕೊನೆಯಲ್ಲಿ ತಿಳಿದುಬಂದರೆ ಆಗುವ ಒತ್ತಡದ ಗಳಿಗೆಗಳನ್ನು ನಿಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತಂದಿದ್ದೀರಿ.‌ ಅದರಲ್ಲೂ ಹಿರಿಯ ನಾಗರಿಕರ ಪ್ರವಾಸ ಹೀಗೆ ಕ್ಷಣಕ್ಷಣಕ್ಕೂ‌ ಮುಂದೇನು ಎಂದು ತಿಳಿಯದ ಅನಿರೀಕ್ಷಿತಗಳಲ್ಲಿ ತೊಳಲಾಟವನ್ನು ಕೊಟ್ಟರೆ ಆ ಇಡೀ ಪ್ರವಾಸದ ಹಿಂದಿನ ಖುಶಿಯೂ ಮಸಕಾಗಿಬಿಡಬಹುದು.‌ ಗಂಟೆಗಟ್ಲೆ ವಿಮಾನದಲ್ಲೇ ಕಾದು, ಮತ್ತೆ ಇಳಿ, ಹೊಟೆಲ್ ಸೇರು, ಮತ್ತೆ ಬಂದು ರೀ ಬುಕ್ ಮಾಡು, ಮತ್ತೆ ಇನ್ನೆಲ್ಲೋ ಇಳಿದು ಬೇಸ್ ಮೆಂಟಿನ ನಿರ್ಜನ ಲೌಂಜಿನಲ್ಲಿನ ಕಳವಳದ ದೀರ್ಘಾತಿದೀರ್ಘ ಕ್ಷಣಗಳು! ಅಬ್ಬ!

ಆದರೂ ನೀವು ಇದೆಲ್ಲದರ ನಡುವೆಯೂ ಹದಿನಾಲ್ಕು ದಿನಗಳಲ್ಲಿ ಕಂಡ ಸ್ಥಳಗಳು, ಅಲ್ಲಿ ಮೂಡಿದ ಅನಿಸಿಕೆ, ಅನುಭವ, ಚಿತ್ರಿಸಿದ ಭಾವ ವಿಭೋರತೆಗಳನ್ನೆಲ್ಲ ಓದುತ್ತ ಖುಶಿಯಾಗುತ್ತದೆ.

ಆ ಕಷ್ಟಕ್ಕೂ ಮುಂಚೆ ಒಂದು ಸುಂದರ ಸಮಯವನ್ನು ಕಳೆದದ್ದು ಅಲ್ಲಿನ ವಿವರಗಳಲ್ಲಿ ತಿಳಿದು ಬರುತ್ತದೆ. ಸಾಹಿತ್ಯಿಕ ಆಸಕ್ತಿಯ ಸ್ನೇಹಿತರೊಂದಿಗೆ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡದ್ದು, ಅವರೆಲ್ಲರ ಆತ್ಮೀಯ ಆತಿಥ್ಯ ನಿಜಕ್ಕೂ ಖುಶಿ ಕೊಟ್ಟಿದ್ದು ಎಷ್ಟು ಮಧುರವಲ್ಲವೆ?

ಇಂಗ್ಲೆಂಡ್ ನ ಪುರಾತನ ಪ್ರಸಿದ್ಧಿಯ ಸಂಕೇತಗಳನ್ನು ಕಾಣಲು ಸುತ್ತುತ್ತ ಐಸಾಕ್ ನ್ಯೂಟನ್ ಮನೆ, ಸಸಿಯಾಗಿಸಿ ಬೆಳೆಸಿರುವ ನಾನೂರು ವರ್ಷದ ಅವನ‌ ಆ್ಯಪಲ್ ಮರ, ಇಂಗ್ಲಿಷ್ ಸಾಹಿತ್ಯದ ಋಷಿಪುಂಗವ ಶೇಕ್ಸ್ ಪಿಯರನ ಮನೆ, ಗ್ಲೋಬ್ ಥಿಯೆಟರಿನಲ್ಲಿ ನೋಡಿದ ಕಾಮೆಡಿ ಆಫ್ ಎರರ್ಸ್ ನಾಟಕ, ಡ್ಯಾಫೋಡಿಲ್ಸ್ ಪ್ರಣೀತ ರೊಮ್ಯಾಂಟಿಕ್ ಕವಿ ವರ್ಡ್ಸ್ ವರ್ಥ್, ಜಾನ್ ಕೀಟ್ಸ್, ಜೆ ಎಚ್ ಲಾರೆನ್ಸ್ ರ ಮನೆಗಳೆದುರು ನಿಂತಾಗ ಅವರೇ ಜೀವಿದ್ದ ಸಮಯಕ್ಕೆ ಹೋದಂಥ ಭಾವನೆ... ಹೇ ಆನ್ ವೇನ ಅಗಣಿತ ಪುಸ್ತಕದಂಗಡಿಗಳಿಗೆ ಹೋಗಿ ಹಿಗ್ಗಿದ್ದು.

ಪ್ರಸಿದ್ಧ ಸಾಹಿತಿಗಳು, ಕವಿಗಳು ಹಿಂದಿನ ಶತಮಾನಗಳಲ್ಲಿ ವಾಸಿಸಿ ತೆರಳಿದ ನೀಲಿ ಫಲಕಗಳ ಮನೆಗಳನ್ನು ಅವರು ಕಾಯ್ದುಕೊಂಡಿರುವ ಸ್ವಾರಸ್ಯ, ನೋವು ತರಿಸುವ ಕ್ಲಿಫ್ಡ್ ಬ್ರಿಜ್ ನ ಸ್ಯೂಸೈಡ್ ಪಾಯಿಂಟ್, 'ಎ ಪೊಯೆಟ್ ಫಾರ್ ಸೇಲ್...ಕಾಸಿಗಾಗಿ ಕವಿತೆ ಬರೆಯುವವನ ಸುದ್ದಿಯ ವಿಷಾದ.

ಒಂದು ನೆನಪು ನನಗೆ ಇಲ್ಲಿ, US ನ ಸೌತ್ ಡಕೋಟಾದಲ್ಲಿ ಮೌಂಟ್ ರಶ್ಮೋರ್ ಪರ್ವತದ ತುದಿಯಲ್ಲಿ ದೊಡ್ಡದಾಗಿ ನಾಲ್ವರು ಅಮೇರಿಕನ್ ಅಧ್ಯಕ್ಷರುಗಳ ಮುಖವನ್ನು ಕೆತ್ತಿದ್ದಾರೆ.(ಜಾರ್ಜ್ ವಾಷಿಂಗ್ಟನ್,ಥಾಮಸ್ ಜೆಫರ್ಸನ್,ರೂಸ್ ವೆಲ್ಟ್ ಮತ್ತು ಅಬ್ರಹಾಂ ಲಿಂಕನ್) ಬಲು ಭವ್ಯವಾದದ್ದೇ. ಆದರೆ ಅಲ್ಲೇ ಕೆಳಗೆ ಅವುಗಳ ಪುಟ್ಟ ಪ್ರತಿಕೃತಿಗಳನ್ನು ಮಾರುತ್ತಿದ್ದರು. ಯಾಕೋ ಅವನ್ನು ಕೊಳ್ಳಬೇಕೆಂದು ನನಗೆ ಅನಿಸಲಿಲ್ಲ. ಇಲ್ಲವಾದರೆ ಆ ನಾಲ್ವರ ಶಿಲಾ ಮೂರ್ತಿಗಳು ನನ್ನೊಂದಿಗೆ ಬೆಂಗಳೂರಿಗೆ ಬಂದಿರುತ್ತಿದ್ದುವು.

ಲೇಕ್ ಡಿಸ್ಟ್ರಿಕ್ಟ್ ನ surreal, ವರ್ಣನಾತೀತ ಸೃಷ್ಟಿಸಿರಿ, ಆ ನೀಲಿ ನೀರು, ಆ ಹಂಸಗಳು, ಆ ಹಸಿರು... ನೋಡಿದಷ್ಟೂ ಮನಸ್ಸು ತುಂಬಿಲ್ಲ ಇನ್ನೂ ಎಂದೇ ಅನಿಸುತ್ತದಲ್ಲವೇ? ಯೂರೋಪಿನ ಉತ್ತರ ಭಾಗ- ನಾರ್ಡಿಕ್ ನಾಡುಗಳಲ್ಲಿ ನಾನು ಹೋಗಿದ್ದ ಒಂದೊಂದು ಊರೂ ಹೆಚ್ಚು ಕಡಿಮೆ ಇಂಥ ಅನುಭವವನ್ನೇ ಕೊಟ್ಟಿದ್ದು ನಿಜ.

ಮತ್ತೆ ಭಾರತಕ್ಕೆ ಮರಳುವ ಸಮಯದ ನಿಮ್ಮ ಅನುಭವದಲ್ಲಿ ದೊರಕಿದ ಅನೇಕ ಸಂಸ್ಕೃತಿಗಳಿಂದ ಬಂದ ಸಹಪ್ರಯಾಣಿಕರ ಒಂದೊಂದೂ ಸಂಗತಿ ಎಷ್ಟು ಆಯಾಮಗಳದ್ದು! ವೀಲ್ ಚೇರ್ ಸೌಲಭ್ಯ ಭಾರತದಲ್ಲಿ ಎಷ್ಟು ಸುಲಭವಾಗಿ ದೊರೆಯುತ್ತದೆ... ಅಲ್ಲೆಲ್ಲ ಹಾಗೆ ಸಿಗದೆ ಹೋಗಲು ಬಹುಶ: ಸಿಬ್ಬಂದಿಯ ಕೊರತೆಯೂ ಒಂದು ಕಾರಣ ಇರಬಹುದು. ಇಷ್ಟಾಗಿಯೂ ಹೀಥ್ರೂ 'ಪ್ರಯಾಣಿಕ ಸ್ನೇಹಿ' ಏರ್ ಪೋರ್ಟ್ ಖಂಡಿತ ಅಲ್ಲ!

ಸೆಕ್ಯುರಿಟಿ, ಇಮಿಗ್ರೇಶನ್ ಗಳಲ್ಲಿ ಕೆಲವರು- ಚಿತ್ರಗುಪ್ತನ ಆಸ್ಥಾನದಲ್ಲಿ ಟ್ರೇನಿಂಗ್ ಪಡೆದುಕೊಂಡು ಬಂದಿರಬಹುದು ಅನಿಸುವುದು ಖಚಿತ. ಅಪವಾದಗಳನ್ನು ಹೊರತುಪಡಿಸಿ.

ಇಮಿಗ್ರೇಶನ್, ಕಸ್ಟಮ್ಸ್ ಅಂದಾಗ ನಾನು ಹಿಂದೊಮ್ಮೆ ಫಿನ್ಲೆಂಡಿನಿಂದ -ಅವರ ಪ್ರವಾಸೀ ಗ್ರೂಪ್ 'ಮಾತ್ಕಾ' ಜೊತೆಗೆ- ರಶ್ಯಾಗೆ ಸೋಲೋ ಟ್ರಿಪ್ ಮಾಡಿದ ನೆನಪು. ಹೋಗುವಾಗ ಸಲೀಸಾಗಿ ಒಳಗೆ ಸ್ವಾಗತಿಸಿದ್ದವರು ಎಲ್ಲ ಮುಗಿಸಿಕೊಂಡು ಮರಳಿ ಹೋಗುವಾಗ‌ ಕಾಡಿದರು!

ಬಾರ್ಡರ್ ಕಸ್ಟಮ್ಸ್ ಕಂಟ್ರೋಲಿನಲ್ಲಿದ್ದ ಖಡೂಸ್ ಮುಖದ ಧಡೂತಿಯಮ್ಮನೂ ಮತ್ತೊಬ್ಬಾತ ಧಾಂಡಿಗನೂ ನನ್ನ ಪಾಸ್ ಪೋರ್ಟ್ ಇಟ್ಟುಕೊಂಡು ನನಗೆ ವಿಂಡೋ ಆಚೆ ಕಾಯಲು ಹೇಳಿ ಏನೋ ಪತ್ತೆ ತರದೂದು ನಡೆಸಿದ್ದರು.‌ ನನ್ನ ಫಿನ್ನಿಶ್ ಸಹಪ್ರಯಾಣಿಕರೆಲ್ಲ ಕ್ಲಿಯರ್ ಸೀಲ್ ಹಾಕಿಸಿಕೊಂಡು ಹೊರಟರೆ ನಾನು ಅಲ್ಲೇ! ಯಾಕೆಂದೇ ತಿಳಿಯುತ್ತಿಲ್ಲ, ಅವಳ ಇಂಗ್ಲಿಷ್ ಅರ್ಥವೇ ಆಗ್ತಿಲ್ಲ, ನನಗೆ ರಶ್ಯನ್ ಗೊತ್ತಿಲ್ಲ. ನಿಜಕ್ಕೂ ಆತಂಕದ ಸಮಯ ನನಗದು. ಎಷ್ಟೋ ಹೊತ್ತಿ ಮೇಲೆ ನಮ್ಮ ಬಸ್ಸಿನ ಒಂದಿಬ್ಬರು ರಶ್ಯನ್ ಭಾಷೆ ಬಲ್ಲ ಸ್ನೇಹಿತರು ಬಂದು ನನ್ನ ಅಳಿಯ ಫಿನ್ಲೆಂಡಿನ ಸರಕಾರದಲ್ಲಿ ಹಿರಿಯ ವಿಜ್ಞಾನಿಯಾಗಿದ್ದು ಅಲ್ಲಿನ ನಾಗರಿಕರೇ ಎಂದೆಲ್ಲ ನನ್ನ ಕುರಿತಾಗಿ ವಿವರ ಕೊಟ್ಟ ನಂತರ ಆಕೆ ಮತ್ತೊಮ್ಮೆ ನನ್ನ ದಿಟ್ಟಿಸಿ ನೋಡಿ ತೃಪ್ತಳಂತೆ ಸೀಲು ಹಾಕಿ ಕೊಟ್ಟಳು...ಬಹುಶ: ಚಳಿ ಹೆಚ್ಚಿತ್ತೆಂದು ಆ್ಯಂಕಲ್ ವರೆಗಿನ ಉದ್ದದ ಕಪ್ಪು ಲಾಂಗ್ ಕೋಟು ಧರಿಸಿ, ಕನ್ನಡಕ ಹಾಕಿ, ಬಾಯಿಯನ್ನೂ ಮುಚ್ಚುವಂತೆ ಕರಿ ಮಫ್ಲರನ್ನು ತಲೆಗೆ ಸುತ್ತಿಕೊಂಡಿದ್ದ ನಾನು ಅವರಿಗೆ 'ಏನೆಂದು' ಕಂಡಿದ್ದೆನೋ?!

ನಿಜ ಹೇಳಬೇಕೆಂದರೆ ಬ್ರಿಟಿಶರ ಆಳಿಕೆಯ ನಮ್ಮ ದೇಶದ ಇತಿಹಾಸವನ್ನು ಮುಗಿದ ಅಧ್ಯಾಯ ಎಂದು ಬದಿಗಿಟ್ಟು ನೋಡುವುದಾದರೆ ಯು ಕೆ ಎಂಬ ನಾಡು ನಿಜಕ್ಕೂ‌ ಹೋಗಿ ನೋಡಲೇಬೇಕೆಂಬಂಥ ಅಸೀಮ‌ ಸೌಂದರ್ಯ ಸಿರಿ. ಅಪ್ರತಿಮ ಸಾಹಿತ್ಯ, ವಾಸ್ತು, ಕಲೆ, ಸಮೃದ್ಧ ಸಾಂಸ್ಕೃತಿಕತೆಯ ನೆಲವೇ ಹೌದು. ಅದನ್ನು‌ ನೀವಿಬ್ಬರೂ ಸಹೃದಯ ಸ್ನೇಹಿತರೊಟ್ಟಿಗೆ ಕಂಡು ಬಂದದ್ದು ಒಳ್ಳೆಯ ಅನುಭವವೇ.

ನಿಮ್ಮ ಏರೋಸ್ಪೇಸ್ ಪುರಾಣ ಓದುಗರಿಗೆ ವಿದೇಶ ಪ್ರಯಾಣದ ಒಂದು ಮಗ್ಗುಲನ್ನು‌ ವಿಭಿನ್ನವಾಗಿ ಪರಿಚಯಿಸುತ್ತದೆ. ಕಹಿ ಸಿಹಿಗಳೆರಡರ ಮಿಶ್ರಣವನ್ನು‌ ನಿರ್ಭಾವುಕವಾದರೂ ಸ್ವಾರಸ್ಯಕರವಾಗಿ, ಹಾಸ್ಯದ ಲೇಪವನ್ನೂ ಸವರಿ ಕೊಟ್ಟಿದ್ದೀರಿ.

'ಮೊಮೋ' ಓದಲಿದೆ ಇನ್ನೂ.

 

MORE FEATURES

ಇಡೀ ಪುಸ್ತಕದ ತುಂಬ ನಮ್ಮೂರಿನ ಪಾತ್ರಗಳಿವೆ

24-04-2025 ಬೆಂಗಳೂರು

"ಮಾನವೀಯ ಮೌಲ್ಯಗಳಿಗೆ ದನಿಯಾದ ಈ ಕಥೆಗಳಿಗೆ ಒಮ್ಮೆ ಜೀವ ಸವರಿ, ಝಲ್ಲೆನಿಸಿಬರುವ ಶಕ್ತಿಯಿದೆಯೆಂದರೆ ಅತಿಶಯೋಕ್ತಿಯಲ...

ರಂಗಾಸಕ್ತರಿಗೆ ಒಳ್ಳೆಯ ಮಾರ್ಗದರ್ಶನ

24-04-2025 ಬೆಂಗಳೂರು

"ಗಿರೀಶ್ ಕಾರ್ನಾಡ್ ಅವರ "ಹೂವು" ನಾಟಕ ಅರ್ಚಕನೊಬ್ಬ ವೇಶ್ಯೆಗೆ ಒಲಿದು , ಹೂಗಳಿಂದ ಅವಳನ್ನು ಸಿಂಗರಿಸು...

‘ಥೇರವಾದ’ ಎಂದರೆ ಹಿರಿಯರ ಹಾದಿ ಬೌದ್ಧಧಮ್ಮದ ಅತ್ಯಂತ ಹಳೆಯ ಶಾಖೆ

24-04-2025 ಬೆಂಗಳೂರು

"ಒಂದು ಜೀವಂತವಾದ, ಚಲನಶೀಲವೂ ಸಂವೇದನಾಶೀಲವೂ ಆದ ಸಂಸ್ಕೃತಿ, ಸಮುದಾಯ ಅಥವಾ ಸಿದ್ಧಾಂತವು ತನ್ನನ್ನು ತಾನೇ ತಿದ್ದಿಕ...