ಕಾವ್ಯದ ಜೊತೆಗೆ ಅನುಸಂಧಾನ ಮಾಡುವುದು ಈ ಸಂಕಲನದ ಹೆಚ್ಚುಗಾರಿಕೆ..


"ಕನ್ನಡದಲ್ಲಿ ಹೀಗೆ ಬಂದ ಅನುವಾದ ಕಾವ್ಯಕ್ಕೆ ಒಂದು ಶತಮಾನಕ್ಕೂ ಮಿಕ್ಕ ಇತಿಹಾಸ ಇದೆ. ಅದು ಪ್ರಾರಂಭವಾಗುವುದು ರಲ್ಲಿ ಹಟ್ಟಿಯಂಗಡಿ ನಾರಾಯಣರಾಯರ ಆಂಗ್ಲ ಕವಿತೆಗಳ ಅನುವಾದ ಸಂಕಲನದಿಂದ. ನಂತರ ಬಂದ ಶ್ರೀಯವರ ಇಂಗ್ಲಿಷ್ ಗೀತೆಗಳ ಅನುವಾದ ಹೆಚ್ಚು ಜನಪ್ರಿಯವಾಯಿತು," ಎನ್ನುತ್ತಾರೆ ರಘುನಾಥ್ ಕೃಷ್ಣಮಾಚಾರ್. ಅವರು ಮೈ.ಶ್ರೀ.ನಟರಾಜ್ ಅವರ ‘ಗಾಳಿಯಲ್ಲಿ ಹಾರಿ ಬಂದ ಹೂಗಳು’ ಕೃತಿ ಕುರಿತು ಬರೆದ ವಿಮರ್ಶೆ.

ಕಳೆದ ವರ್ಷ ತಾನೇ ಇವರು ಅನುವಾದ ಮಾಡಿದ ಕನ್ನಡ ಕಾದಂಬರಿಯನ್ನು ಸಮೀಕ್ಷೆ ಮಾಡಿ ಬರೆವ ಅವಕಾಶ ದೊರೆತಿತ್ತು.ಅದು ಕುಸುಮಾಕರ ದೇವರಗೆಣ್ಣೂರ ಅವರ ಕಾದಂಬರಿ ಬಯಲು ಬಸಿರು.ಅದು ಅವರ ತಮ್ಮ ಪ್ರಹ್ಲಾದ ದಿವಾಣಜಿ ಅವರ ಕೃಪೆಯಿಂದಾಗಿ. ಈಗ ಮತ್ತೆ ಇವರು ಅನುವಾದ ಮಾಡಿದ ಕವಿತೆಗಳ ಪರಿಚಯ ಮಾಡುವ ಅವಕಾಶ. ಇದಕ್ಕೆ ಕಾರಣ ಕರ್ತರು ಪ್ರಕಾಶಕರಾ ಅಭಿನವದ ರವಿಕುಮಾರ್.

ಕೆಲವು ವರ್ಷಗಳ ಹಿಂದೆ ಇದೇ ಬಗೆಯ ಪ್ರಮೋದ್ ಮುತಾಲಿಕ್ ಅವರು ಅನುವಾದ ಮಾಡಿದ ಕವನ ಸಂಕಲನವನ್ನು ಪರಿಚಯ ಮಾಡಿಕೊಡುವ ಅವಕಾಶವನ್ನು ಅವರು ಒದಗಿಸಿದ್ದರು.

ಕನ್ನಡದಲ್ಲಿ ಹೀಗೆ ಬಂದ ಅನುವಾದ ಕಾವ್ಯಕ್ಕೆ ಒಂದು ಶತಮಾನಕ್ಕೂ ಮಿಕ್ಕ ಇತಿಹಾಸ ಇದೆ. ಅದು ಪ್ರಾರಂಭವಾಗುವುದು 1918 ರಲ್ಲಿ ಹಟ್ಟಿಯಂಗಡಿ ನಾರಾಯಣರಾಯರ ಆಂಗ್ಲ ಕವಿತೆಗಳ ಅನುವಾದ ಸಂಕಲನದಿಂದ. ನಂತರ ಬಂದ ಶ್ರೀಯವರ ಇಂಗ್ಲಿಷ್ ಗೀತೆಗಳ ಅನುವಾದ ಹೆಚ್ಚು ಜನಪ್ರಿಯವಾಯಿತು. ಅದಕ್ಕೆ ಕಾರಣ ಅವರು ಬಳಸಿದ ಕನ್ನಡ ಕಾವ್ಯದ ಲಯಗಳು.ಇದನ್ನು ಇದಕ್ಕೆ ಮುನ್ನುಡಿ ಬರೆದ ಗೆಳೆಯರಾದ ಕಮಲಾಕರ ಕಡವೆ ಗುರುತಿಸಿದ್ದಾರೆ. ಅಲ್ಲದೆ ಈ ಸಂಕಲನದ ಮೇಲೆ ಅವರ ದಟ್ಟ ಪ್ರಭಾವವನ್ನು ಕೂಡ.

ಪ್ರಸ್ತುತ ಅನುವಾದಿತ ಸಂಕಲನದ ಕವಿತೆಗಳು ಅವರ ವೈವಿಧ್ಯಮಯ ಕಾವ್ಯಾಸಕ್ತಿಗೆ, ಬಹುಮುಖಿ ಭಾಷಾ ಪ್ರಭುತ್ವಕ್ಕೆ ನಿದರ್ಶನಗಳಾಗಿವೆ. ಈ ಮಾತನ್ನು ಸ್ಪಷ್ಟಪಡಿಸುವ ಜವಾಬ್ದಾರಿ ನನಗಿದೆ. ಯಾವುದೇ ನಾಗರಿಕತೆಯ ಹಿಂದೆ ಬುಡಕಟ್ಟು ಜನಾಂಗದ ಮಾರಣ ಹೋಮ ಇದೆ. ಇದಕ್ಕೆ ಅಮೇರಿಕಾ ಕೂಡ ಹೊರತಲ್ಲ. ಇದನ್ನು ಇವರ ಸಂಕಲನದ ಎರಡನೇ ಭಾಗದಲ್ಲಿ ಅನುವಾದ ಮಾಡಿದ ಬುಡಕಟ್ಟು ಜನಾಂಗದ ಪ್ರಾರ್ಥನೆಗಳ ಅನುವಾದ ಸಾಕ್ಷಿಯಾಗಿವೆ. ನಿಸರ್ಗದ ಆರಾಧಕರಾದ ಅವರ ಮೇಲೆ, ಇವರು ನಡೆಸಿದ ಅತ್ಯಾಚಾರಗಳ ಆರ್ತನಾದ ಅವರ ಕವಿತೆಗಳಲ್ಲಿ ಹಾಸು ಹೊಕ್ಕಾಗಿದೆ. ಇದನ್ನು ಬೆನ್ನುಡಿಯಲ್ಲಿ ಹಿರಿಯ ಗೆಳೆಯರಾ ಎಸ್.ಎನ್.ಶ್ರೀಧರ್ ಗುರುತಿಸಿದ್ದಾರೆ. ಅವರ ಪ್ರಾರ್ಥನೆಗಳನ್ನು ನಮ್ಮ ವೇದ ಉಪನಿಷತ್ತುಗಳ ಪ್ರಾರ್ಥನೆಗಳ ಜೊತೆಗೆ ಹೋಲಿಸಿರುವುದು ಅವರ ವ್ಯಾಪಕ ಅಧ್ಯಯನಕ್ಕೆ ಸಾಕ್ಷಿ.

ಮೊದಲ ಭಾಗದಲ್ಲಿ ಅಮೇರಿಕಾದ ಕವಿಗಳ ವೈವಿಧ್ಯಮಯ ಕವಿತೆಗಳನ್ನು ಅನುವಾದಿಸಿದ್ದಾರೆ. ಅವುಗಳಲ್ಲಿ ಪ್ರಸಿದ್ಧವಾದ ಮಾಯಾ ಏಂಜಲೋ ಪಂಜರದ ಪಕ್ಷಿ ಮುಂತಾದ ಕವಿತೆಗಳನ್ನು ಕೂಡ ಒಳಗೊಂಡಿದೆ. ಅದರಲ್ಲಿ ಈಗಾಗಲೇ ಕೆಲವು ಅನುವಾದಗೊಂಡಿವೆ. ಅವುಗಳನ್ನು ಗಮನಕ್ಕೆ ತಂದು ಕೊಳ್ಳಬಹುದಿತ್ತು. ನಮ್ಮ ಅಮೇರಿಕಾ ಪ್ರವಾಸದಲ್ಲಿ ಅವಳ ಕವಿತೆಗಳನ್ನು ಶಾಲೆಗಳ ಗೋಡೆಗಳ ಮೇಲೆ ಕೂಡ ನೋಡಿ ಆಶ್ಚರ್ಯ ಚಕಿತನಾಗಿದ್ದೆ. ಇವಳ ಜೊತೆಗೆ ಹೆಸರು ಉಲ್ಲೇಖ ಮಾಡಬೇಕಾದ ನನ್ನ ಮೆಚ್ಚಿನ ಕವಿ ಸ್ಪ್ಯಾನಿಶ್ ಕವಿ ನೆರೂಡನದು. ಅವನ ಕೆಲವು ಪ್ರಸಿದ್ಧ ಕವಿತೆಗಳನ್ನು ಅನುವಾದಿಸಿದ್ದಾರೆ. ಅವನ ಕಾವ್ಯ ಈಗಾಗಲೇ ಕನ್ನಡಕ್ಕೆ ಬಂದಿದ್ದು ಕನ್ನಡ ಕಾವ್ಯ ಸಂವೇದನೆಯ ಭಾಗವಾಗಿದೆ.

ಇದಲ್ಲದೆ ಅಮೇರಿಕಾ ತನ್ನ ದೇಶದ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕರಿ ಜನರ ಮೇಲೆ ಎಸಗುವ ದೌರ್ಜನ್ಯಕ್ಕೆ ನಿದರ್ಶನವಾಗಿ ಅವರ ಬುದ್ಧಿ ಮಾತು ಕವಿತೆಯನ್ನು ನೋಡಬಹುದು.ಅದರಲ್ಲಿ ಬರುವ ಕೊನೆಯ ಸಾಲು "ನಿಂತು ನಿಶ್ಚಲನಾಗು, ಇಲ್ಲವಾದರೆ ಹಾರೀತು ಗುಂಡು, ಬಿಗಿದೀತು ಕತ್ತು" ಇನ್ನು ಬುಡಕಟ್ಟಿನ ಮೇಲೆ ನಿಸರ್ಗದ ಮೇಲೆ ಎಸಗಿದ ಕ್ರೌರ್ಯದ ಸಂಕೇತವಾಗಿ "ಜಿಂಕೆಯನು ಕೊಂದಿರುವೆ..ಹಸಿರು ಹುಲ್ಲನು ತುಳಿದು ಹಾಕಿರುವೆ" ಎನ್ನುವ ಹಾಡು ನಿದರ್ಶನ. ಇದಕ್ಕೆಲ್ಲ ಸಾಧನವಾಗಿ ಅವರು ಸೈನಿಕರನ್ನು ಬಲಿಪಶುಗಳನ್ನಾಗಿಸುತ್ತಾರೆ. ಅವರ 'ಕದನಕೆ ಹೊರಟ ಲೆನಾಪೆ ಯೋಧನ ಆಶಯ ಗೀತೆ "ಅವನ ಆಶಯವೆಂದರೆ" ಗೆದ್ದು ಯುದ್ಧದಲ್ಲಿ ಹೊಡೆದ ಕೊಳ್ಳೆಯ ಸೂರೆಯನು ತಂದು ಮನೆಮಂದಿಗೆಲ್ಲ ಹಂಚಿ ಸುಖಿಸುವಂತೆ ಮಾಡು" ಇದು ಸಾಮ್ರಾಜ್ಯಶಾಹಿಯಾದ ಅಮೇರಿಕಾದ ಆಶಯದ ಪ್ರತೀಕವಾಗಿದೆ. ಇದರ ಜೊತೆಗೆ ಮನುಷ್ಯ ನಿರ್ಮಿತ ಗಣಿ ಸ್ಫೋಟದಿಂದ ತಂದೆಯನ್ನು ಕಳೆದುಕೊಂಡ ಮಕ್ಕಳ ಆರ್ತನಾದವೂ ಸೇರಿಕೊಂಡು ಈ ದುರಂತವನ್ನು ಮತ್ತಷ್ಟು ಹೃದಯ ವಿದ್ರಾವಕವನ್ನಾಗಿಸಿದೆ.

ಶ್ರೀ, ಜಿ.ಪಿ. ರಾಜರತ್ನಂ, ನಮ್ಮ ದಿನಕರ ದೇಸಾಯಿ ಅವರ "ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ" ಕವಿತೆಯನ್ನು ಹೋಲುವ ಕವಿತೆಗಳು ಕೂಡ ಇವೆ.

ಮೇಲಿನ ಆಧುನಿಕ ಕನ್ನಡ ಕಾವ್ಯದ ಛಂದೋಲಯಗಳ ಬಳಸುವ ಮೂಲಕ, ತಾವು ಅನುವಾದ ಮಾಡುತ್ತಿರುವ ಕಾವ್ಯದ ಜೊತೆಗೆ ಅನುಸಂಧಾನ ಮಾಡುವುದು ಈ ಸಂಕಲನದ ಹೆಚ್ಚುಗಾರಿಕೆಯಾಗಿದೆ. ಈ ಮೂಲಕ ಕನ್ನಡ ಕಾವ್ಯದ ಅನುವಾದ ಪರಂಪರೆಯನ್ನು ಇವರು ಸಮರ್ಥವಾಗಿ ಮುಂದುವರಿಸಿದ ಶ್ರೇಯಸ್ಸು ಇವರಿಗೆ ಸಲ್ಲಬೇಕು. ಅಲ್ಲದೆ ತಮ್ಮ ಕನ್ನಡದ ಅಸ್ಮಿತೆಯನ್ನು ಕೂಡಾ ಪ್ರಕಟಿಸಿದ್ದಾರೆ.

ಮೂಲ ಕವಿಗಳ ಕವಿತೆಗಳ‌ ಹೆಸರುಗಳನ್ನು ಕೊಟ್ಟು ತೌಲನಿಕ ಅಧ್ಯಯನದಲ್ಲಿ ಆಸಕ್ತಿ ಇರುವವರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಲ್ಲಿ ಅವರು ಒದಗಿಸುವ ಸಾಂದರ್ಭಿಕವಾಗಿ ನಮೂದಿಸಿದ ಟಿಪ್ಪಣಿಗಳು ಕಾವ್ಯದ ಗ್ರಹಿಕೆಗೆ ಸಹಾಯಕ.

MORE FEATURES

ಡಂಕಲ್‌ಪೇಟೆಗೆ ಹೊರಡುವ ಮುನ್ನ…….

05-07-2024 ಬೆಂಗಳೂರು

‘ಈ ಡಂಕಲ್‌ಪೇಟೆ ಎಂಬುದು ನನ್ನ ಕಥೆಗಳಿಗಾಗಿ ನಾನೇ ಸೃಷ್ಟಿಸಿಕೊಂಡಿರುವ ಒಂದು ಪ್ರಾದೇಶಿಕ ಚೌಕಟ್ಟು ಇರುವ ಕಾ...

`ಕುದ್ಮಲ್ ಪಿಜ್ಜ' ಹೇಗಿದ್ದರೆಂದು ತಿಳಿಯುವ ಪ್ರೇಮಿ ರಾವ್ ಅವರ ಮುಗ್ಧ ಆಸಕ್ತಿಯೇ ಈ ಪುಸ್ತಕದ “ಮೂಳೆ ಹಂದರ”

05-07-2024 ಬೆಂಗಳೂರು

"ಕುದ್ಮಲ್ ಅವರ ಮರಿಮೊಮ್ಮಗ ಪ್ರೇಮಿ ಎಂ. ರಾವ್ ಬರೆದ ಪುಸ್ತಕದ ಅನುವಾದ “ನೀವು ಕಂಡರಿಯದ ಕುದ್ಮಲ್ ರಂಗರಾವ್,...

ಕವಿತೆ ಕಟ್ಟುತ್ತ ಬಿರಾದಾರ ಸೃಷ್ಟಿಸುವ ರೂಪಕ-ಪ್ರತಿಮೆಗಳು ಚೆಲುವಾಗಿವೆ: ಕೇಶವ ಮಳಗಿ

05-07-2024 ಬೆಂಗಳೂರು

'ಮಧು ತಮ್ಮ ಕಾವ್ಯದ ನಿಧಾನ ನಡಿಗೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಕವಿತೆಗಳ ದೀರ್ಘತೆ. ವಸ್ತು ಬೆಂಕಿಯಂತೆ ಸುಡುತ್ತಿ...