ಸಚ್ಚಿದಾನಂದರವರು 50 ವರ್ಷಗಳ ಹಿಂದೆ ಅವರು ಓದುತ್ತಿದ್ದ ಕಾಲದಲ್ಲಿ ನೋಡಿದ ಒಬ್ಬ ಹುಡುಗಿಯಿಂದ ಪ್ರಭಾವಿತರಾಗಿ ಅವಳ ಹೆಸರು 'ಅವಳ ಹೆಸರು' ಎಂಬ ಐದು ಪದ್ಯಗಳನ್ನು ಬರೆದಿದ್ದರು. ನಂತರ ತಮ್ಮ ವೃತ್ತಿಯಲ್ಲಿ ನಿರತರಾಗಿದ್ದುದರಿಂದ ಅವರಿಂದ 50 ವರ್ಷಗಳು ಕಾವ್ಯ ರಚನೆ ಸಾಧ್ಯವಾಗಿರಲಿಲ್ಲ. ಆಮೇಲೆ ಬರೆದ ಕವನದ ಸಂಕಲನವೂ 'ಅವಳ ಹೆಸರು' ಶೀರ್ಷಿಕೆಯದ್ದೇ ಎನ್ನುತ್ತಾರೆ ಕೆ.ಆರ್ ಪ್ರೇಮಲೀಲಾ. ಕವಿ ಸಚ್ಚಿದಾನಂದ.ಕೆ.ಎಸ್ ಅವರು ರಚಿಸಿದ "ಅವಳ ಹೆಸರು" ಕವನ ಸಂಕಲನಕ್ಕೆ ಬರೆದಿರುವ ನಲ್ನುಡಿ ನಿಮ್ಮ ಓದಿಗಾಗಿ....
ಭಾರತೀಯ ಕಾವ್ಯ ಮೀಮಾಂಸೆಯ ಪ್ರಕಾರ ಕಾವ್ಯ ನಿರ್ಮಿತಿಗೆ ಪ್ರತಿಭೆ, ವ್ಯುತ್ಪತ್ತಿ, ಮತ್ತು ಅಭ್ಯಾಸ ಅಗತ್ಯ. ಕಾವ್ಯ ರಚನೆಯಲ್ಲಿ ಪ್ರತಿಭೆಗೇ ಅಗ್ರಸ್ಥಾನ. ವ್ಯುತ್ಪತ್ತಿ ಎಂದರೆ ಬಹುಮುಖ ಜ್ಞಾನ, ಅಲಂಕಾರ ಜ್ಞಾನ, ಜೀವನದ ಅನುಭವವೂ ವ್ಯುತ್ಪತ್ತಿಯೇ, ಅನುಭವವಿಲ್ಲದ ಕವಿತೆ ಪ್ರತಿಭೆ ಇದ್ದೂ ಸೊರಗುತ್ತದೆ. ಕವಿತಾ ರಚನೆಗೆ ಅಭ್ಯಾಸ ಅಂದರೆ, ಪರಂಪರೆಯ ಪ್ರಜ್ಞೆ ಅಪೇಕ್ಷಣೀಯ, ಸುಪ್ರಸಿದ್ಧ ಕವಿಗಳ ಕೃತಿಗಳ ಓದು ರಚನೆಗೆ ಸ್ಫೂರ್ತಿದಾಯಕ. ಕುವೆಂಪುರವರು ಹೇಳಿರುವಂತೆ ಬುದ್ಧಿ ಭಾವನೆಗಳ ವಿದ್ಯುದಾಲಿಂಗನ ಕಾವ್ಯದ ಲಕ್ಷಣ.
ಕೆ.ಎಸ್. ಸಚ್ಚಿದಾನಂದರವರು ನನಗೆ ಹೊಸ ಪರಿಚಯ. ಅವರು ರಚಿಸಿರುವ ಚೊಚ್ಚಲ ಕವನ ಸಂಕಲನ 'ಅವಳ ಹೆಸರು' ಕೃತಿಗೆ ಮುನ್ನುಡಿಯನ್ನು ಬರೆದುಕೊಡಿ ಎಂದು ಕೇಳಲು ನಮ್ಮ ಮನೆಗೆ ಬಂದಾಗಲೇ ಪರಿಚಯವಾಗಿ ಅವರ ಬಗ್ಗೆ ವಿಷಯಗಳು ತಿಳಿದಿದ್ದು.
ಹಾಸನ ಜಿಲ್ಲೆಯ ಕತ್ತರೀ ಘಟ್ಟ ಗ್ರಾಮದ ಕೆ.ಎಸ್. ಸೀತಾರಾಮಯ್ಯ ಮತ್ತು ಕಮಲಮ್ಮ ಅವರ ಜೇಷ್ಠ ಪುತ್ರರಾಗಿ ಮೈಸೂರಿನಲ್ಲಿ ಜನಿಸಿದರು. ಹುಟ್ಟಿದ್ದು ಮೈಸೂರಾದರೂ ಅವರ ಬಾಲ್ಯ ಬೆಳೆದಿದ್ದು ಮಲೆನಾಡಿನ ಸುಂದರನಗರ ಚಿಕ್ಕಮಗಳೂರು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎಸ್ಸಿ, ಡಿಗ್ರಿಯನ್ನೂ ಹಾಸನದಲ್ಲಿ ವ್ಯಾಸಂಗ ಮಾಡಿ ಬಿ.ಇ. ಪದವಿಯನ್ನೂ ಪಡೆದವರು. ಹೆಸರಾಂತ ಸಾರ್ವಜನಿಕ ಸಂಸ್ಥೆ ಬಿ.ಇ.ಎಮ್.ಎಲ್. ನಲ್ಲಿ ಸುದೀರ್ಘ 31 ವರ್ಷಗಳ ಸೇವೆ ಸಲ್ಲಿಸಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಪಡೆದಿದ್ದಾರೆ, ಈ ಅವಧಿಯಲ್ಲಿ ಮೈಸೂರಿನ ಶಾಖೆಯಲ್ಲಿ ಕನ್ನಡ ಸಂಘ ಹಾಗೂ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘಗಳ ಅಧ್ಯಕ್ಷರಾಗಿ ಹಲವಾರು ವರ್ಷಗಳ ಸೇವೆ ಮಾಡಿರುತ್ತಾರೆ. ನಮ್ಮಲ್ಲಿ ಒಂದು ಮಾತಿದೆ. 'ಸಂಯೋಜಕಾ: ದುರ್ಲಭಾ ಸಂಘ ಸಂಸ್ಥೆಗಳಲ್ಲಿ ಸಂಯೋಜಕ ಕೆಲಸವನ್ನು ಮಾಡಿ ಕ್ಲಿಷ್ಟಕರವಾದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ನಿವೃತ್ತ ಇಂಜಿನಿಯರ್ ಆದ ಇವರು ಪ್ರಬುದ್ಧ ಮನಸ್ಸಿನವರು ಅವರ ಮಾತುಕತೆಗಳಲ್ಲಿನ ಪಾರದರ್ಶಕತೆ ಕೇಳುಗರನ್ನು ಆಕರ್ಷಿಸುತ್ತದೆ.
ಈ ಕವಿತಾ ಸಂಕಲನಕ್ಕೆ ಮುನ್ನುಡಿ ಬರೆಯಲು ಭೈರವಮೂರ್ತಿಗಳನ್ನು ವಿನಂತಿಸಿದ್ದರಂತೆ. ಅವರು ಕೃತಿಯನ್ನು ಓದಿ ಮೆಚ್ಚುಗೆಯನ್ನೂ ಸೂಚಿಸಿ, ಮುನ್ನುಡಿಯನ್ನು ಬರೆದುಕೊಡುವುದಾಗಿ ಹೇಳಿದ್ದರಂತೆ. ಆದರೆ ಅನಾರೋಗ್ಯದಿಂದ ಅವರು ವಿಧಿವಶರಾಗಿದ್ದರಿಂದ ನನ್ನನ್ನು ನನ್ನುಡಿ ಬರೆಯಲು ಕೇಳಿಕೊಂಡರು. ಕರೋನದಿಂದ ಎರಡು ವರ್ಷಗಳು ಏನನ್ನೂ ಬರೆಯದಿದ್ದ ನನಗೆ ಇದನ್ನು ಓದಲು ಅವಕಾಶ ಸಿಕ್ಕಿತು. ನನ್ನ ಜಡತನವನ್ನು ದೂರಮಾಡಿತು.
ಕವಿತಾ ಸಂಕಲನವನ್ನು ಓದಿದ ಮೇಲೆ ನನಗನಿಸಿದ್ದು ಹೀಗೆ. ಈ ಕೃತಿಗೆ ಮುನ್ನುಡಿ ಬೇಕಾಗಿಲ್ಲ. ಸರಳವಾಗಿದೆ. ಪಾಂಡಿತ್ಯದ ಪ್ರದರ್ಶನವಿಲ್ಲ. ಅಲಂಕಾರದ ಬಳಕೆ ಸಹಜವಾಗಿದೆ. ಹಾಗೂ ಸಾಮಾಜಿಕ ಕಳಕಳಿಯಿದೆ. ಆದರೆ ಲೇಖಕರು ತಮ್ಮ ಮೊದಲ್ನುಡಿ-ತೊದಲ್ನುಡಿಯಲ್ಲಿ ಹೇಳಿರುವಂತೆ 'ನಾನು ಎಷ್ಟೋ ಓದಿಲ್ಲ, ಸ್ವಲ್ಪವೂ ಬರೆದಿಲ್ಲ' ಈ ಕ್ಷೇತ್ರಕ್ಕೆ ಹೊಸಬರು ಎಂದೆಲ್ಲ ಹೇಳಿಕೊಂಡಿದ್ದಾರೆ. ಆದರೆ ಈ ರಚನೆ ಪಳಗಿದ ಕೈಯಿಂದ ಮಾತ್ರವೇ ಹೊರಹೊಮ್ಮಲು ಸಾಧ್ಯ.
ಸಚ್ಚಿದಾನಂದರವರು 50 ವರ್ಷಗಳ ಹಿಂದೆ ಅವರು ಓದುತ್ತಿದ್ದ ಕಾಲದಲ್ಲಿ ನೋಡಿದ ಒಬ್ಬ ಹುಡುಗಿಯಿಂದ ಪ್ರಭಾವಿತರಾಗಿ ಅವಳ ಹೆಸರು 'ಅವಳ ಹೆಸರು' ಎಂಬ ಐದು ಪದ್ಯಗಳನ್ನು ಬರೆದಿದ್ದರು. ನಂತರ ತಮ್ಮ ವೃತ್ತಿಯಲ್ಲಿ ನಿರತರಾಗಿದ್ದುದರಿಂದ ಅವರಿಂದ 50 ವರ್ಷಗಳು ಕಾವ್ಯ ರಚನೆ ಸಾಧ್ಯವಾಗಿರಲಿಲ್ಲ. ಆಮೇಲೆ ಬರೆದ ಕವನದ ಸಂಕಲನವೂ 'ಅವಳ ಹೆಸರು' ಶೀರ್ಷಿಕೆಯದ್ದೇ.
ಸಚ್ಚಿದಾನಂದರವರಿಗೆ ಭಾಷೆಯ ಮೇಲೆ, ಆಯದ ಮೇಲೆ ಹಿಡಿತವಿದೆ. ಅನುಭವಕ್ಕೆ ತಕ್ಕ ಅಭಿವ್ಯಕ್ತಿ ಇದೆ, ಕವಿಯಾದವನಿಗೆ ಅಂತಃಕರಣ, ಪ್ರೀತಿ, ಮಮತೆ, ಅನುಕಂಪ ಇರಬೇಕು. ಈ ಕವನ ಸಂಕಲನದಲ್ಲಿ ಈ ಭಾವನೆಗಳನ್ನು ಬಿಂಬಿಸಿರುವುದಕ್ಕೆ ಅನೇಕ ಉದಾಹರಣೆಗಳಿವೆ.
ಟಿ.ಎಸ್. ಏಲಿಯಟ್ ಪ್ರಕಾರ ಅತಿ ಪಾಂಡಿತ್ಯ ಕಾವ್ಯ ಸಂವೇದನೆಯನ್ನು ಜಡಗೊಳಿಸುತ್ತದೆ. ಇದೇ ರೀತಿಯ ಅಭಿಪ್ರಾಯವನ್ನು ಹಿರಿಯ ಸಾಹಿತಿಗಳಾದ ಸಿ.ಪಿ. ಕೃಷ್ಣಕುಮಾರ್ ರವರು ಹೀಗೆ ಹೇಳುತ್ತಾರೆ. 'ಕವಿತೆಗಳು, ವಿದ್ವತ್ತೂರ್ಣವಾಗಿದ್ದರೆ ಸಾಲದು. ವಿದ್ಯುತ್ ಪೂರ್ಣವಾಗಿರಬೇಕು. ಓದಿದರೆ ರೋಮಾಂಚನವಾಗಬೇಕು. ಪಾಂಡಿತ್ಯಪೂರ್ಣರಚನೆಗಳನ್ನು ಎಲ್ಲರೂ ಆಸ್ವಾದಿಸಲು ಸಾಧ್ಯವಾಗದು. ಕಾವ್ಯವು ಸೃಜನಶೀಲ ಪ್ರಕ್ರಿಯೆ ಹಾಗೂ ಕಲಾತ್ಮಕ ಅಭಿವ್ಯಕ್ತಿ. ಕ್ಲಿಷ್ಟಪದಗಳಿರಬಾರದು. ಸಹೃದಯ ಓದುಗರೂ ಕೂಡ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಅವರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಕಾವ್ಯರಚನೆಯಾಗಬೇಕು. ಗಿಡದಲ್ಲಿ ಹೂವು ಅರಳುವಂತೆ ಸಹಜ ಪ್ರಕ್ರಿಯೆಯಾಗಿ ಕವಿತೆಗಳು ರೂಪಗೊಳ್ಳಬೇಕು.
ಈಗ ಈ ಸಂಕಲನದ ಪ್ರತ್ಯೇಕ ಕವನಗಳ ಬಗ್ಗೆ ನನ್ನ ಅನಿಸಿಕೆಗಳು ಹೀಗಿವೆ.
ಅವಳ ಹೆಸರು : ಈ ಶೀರ್ಷಿಕೆಯ ಗೀತೆಗಳು ಪ್ರೇಮ ಗೀತೆಗಳು. ಯಾವ ಕವಿಯೇ ಆಗಲಿ ಪ್ರೇಮ, ತಾಯಿ, ನಾಡು, ನುಡಿ ಇವುಗಳನ್ನು ಕವಿತೆಯನ್ನು ರಚಿಸದೇ ಇರಲಾರ. ಈ ಕವನದ ಕೆಳಕಂಡ ಸಾಲುಗಳು
ಹಾವಾಡಿಗನ ಪುಂಗಿಗೆ ತೂಗಾಡುವ ಫಣಿಯಂತೆ
ಬೆನ್ನಿಂದ ಓಲಾಡುವುದು ತೂಗು ಉಯ್ಯಾಲೆಯಂತೆ
ರಾಷ್ಟ್ರಕವಿ ಶ್ರೀ ಜಿ.ಎಸ್. ಶಿವರುದ್ರಪ್ಪನವರ ಜಡೆ ಎಂಬ ಕ ಜ್ಞಾಪಕಕ್ಕೆ ಹಂದಿತು, ಜಡೆಯನ್ನು ವರ್ಣಿಸುವುದರಲ್ಲಿ ಇಬ್ಬರ ರಚನೆಯ ಸಾಮ್ಯವಿದೆ. ಇದು ತುಂಬ ಖುಷಿ ನೀಡಿದೆ.
ರೂಪಸಿ : ಇದು ಇನ್ನೊಂದು ಪ್ರೇಮಗೀತೆ, ಕವಿಯ ಕಲ್ಪನಾಶಕ್ತಿಗೆ ಉತ್ತಮ ಉದಾಹರಣೆಯಾಗಿದೆ.
ಚೌಕಾಸಿ : ಈ ಕಥನ ಕವನದಲ್ಲಿ ಸಂಭಾಷಣ ತಂತ್ರವನ್ನು ಬಳಸಿ ಸುಕೋಮಲ ಮನಸಿನ ಲೇಖಕರ ಅಂತರಂಗ, ಬಹಿರಂಗಗೊಳ್ಳುತ್ತದೆ. ಕುಡುಕ ಗಂಡನ ಕಟ್ಟಿಕೊಂಡ ಹೆಣ್ಣೂಬ್ಬಳ ಬವಣೆಯ ಚಿತ್ರ ಕಣ್ಣಿಗೆ ಕಟ್ಟುತ್ತದೆ.
ಕುಡಿತಕ್ಕೆ ಸುರಿಯುವನು ಹಣದ ರಾಶಿಯನು
ಮಡದಿ ಮಕ್ಕಳಿಗೆ ಮಾಡುವನು ಚೌಕಾಶಿಯನ್ನು
ಸಂಸಾರಕ್ಕೆ ಕೇಳಲು ಕೊಡುವನು ಭಿಕ್ಷೆ.
ಮೈಮುಖಗಳ ಮೇಲೆ ಬಾಸುಂಡೆಯ ನಕ್ಷೆ.
***
ಮೈಸೂರಿನ ಸಮಗ್ರ ಚಿತ್ರಣವನ್ನು ಕೊಡುವ ಈ ನೀಳವನ ಬಹಳ ಸುಂದರವಾಗಿದೆ. ಇಷ್ಟು ವಿವರವಾಗಿ ಮೈಸೂರನ್ನು ಯಾರೂ ಬಣ್ಣಿಸಿ ಬರೆದಿಲ್ಲ. ಭೌಗೋಳಿಕ, ಪ್ರಾಕೃತಿಕ, ಸಾಮಾಜಿಕ, ಸಾಂಸ್ಕೃತಿಕ ಮುಂತಾದ ಎಲ್ಲ ಆಯಾಮಗಳಲ್ಲೂ ಮೈಸೂರನ್ನು ವರ್ಣಿಸಿರುವ ಮನೋಜ್ಞ ಕವಿತೆ. ಶ್ರೀಯುತರು ಇಲ್ಲೇ ಹುಟ್ಟಿ ಬಹಳ ವರ್ಷಗಳ ನಂತರ ಇಲ್ಲಿಯೇ ನೆಲಸಿರುವುದರಿಂದ ಸಹಜವಾಗಿಯೇ ಮೈಸೂರಿನ ಬಗ್ಗೆ ಸರ್ವಾಂಗೀಣವಾಗಿ ವರ್ಣಿಸಿ ತಮ್ಮ ಅಭಿಮಾನವನ್ನು ಕಾವ್ಯಮಯವಾಗಿ ವ್ಯಕ್ತಪಡಿಸಿದ್ದಾರೆ.
ತರು(ಣಿ) : ತಾನು ಬೆಳಸಿದ ಸಸಿಯೊಂದು ತರುವಾಗಿ ಬೆಳೆದಿರಲು, ಮಗುವೊಂದು ತರುಣಿಯಾಗಿ ಕಂಗೊಳಿಸುತಿರಲು ಕವಿಯ ಮಗಳು ಗಂಡನ ಮನೆಗೆ ತೆರಳುವಾಗ, ಅತಿಯಾಗಿ ಹಚ್ಚಿಕೊಂಡಿರುವ ಮನೆ ಮುಂದೆ ಬೆಳದಿರುವ ತರುವಿಗೆ ಹೀಗೆ ಹೇಳಿರಬಹುದೇ ಎಂದು ಕಲ್ಪಿಸಿಕೊಳ್ಳುವ ಸನ್ನಿವೇಶವನ್ನು ವರ್ಣಿಸುವ ಈ ಕವಿತೆಯ ಸಾಲುಗಳು
'ಹೋಗಿ ಬರುವನು ಸಖಿ, ನನ್ನ ನೀಮರೆಯದಿರು
ಬಿಟ್ಟು ಹೋಗುತಿಹನು ನಿನ್ನ ನೆರಳಲಿ ತವರು
ನಾನಿಲ್ಲದ ಬೇಸರದ ಅವರ ಬೇಗೆಯ ನೀಗು
ಸೂಸಿ ತುಂಟಾಟದ ಚೆಲ್ಲಾಟದ ಮುಗ್ಧನಗು'
ಕಾಳಿದಾಸನ 'ಶಕುಂತಲೆ'ಯ ಇದೇ ಸನ್ನಿವೇಶವನ್ನು ನೆನಪಿಸಿತು.
ಪರಿಸರ: ವೃಕ್ಷವೊಂದು ಮಕ್ಕಳಿಗೆ, ತರುಣ, ತರುಣಿಯರಿಗೆ ನ ನೆರಳ ನೀಡುವುದನ್ನು ಬಣ್ಣಿಸುತ್ತ, ಬಣ್ಣಿಸುತ್ತ ಕರ್ಣಬೇಧಕ ಸದ್ದುಗಳು ತಿಳಿಸುವ ಈ ಗೀತೆ ಭಾವುಕ ಕವಿಯ ಉತ್ತಮ ಗೀತೆ,
ಈ ಸಂಕಲನದ ಮತ್ತಷ್ಟು ಕವನಗಳಾದ ಆರೋಹಣ, ನಿರೀಕ್ಷ ಮುಕ್ತ, ದೊಡ್ಡಬಂಗ್ಲ ಶೀರ್ಷಿಕೆಯ ಕವನಗಳು ಆನಂದದಾಯಕವಾಗಿದೆ ಕಾವ್ಯದ ಪ್ರಯೋಜನಗಳಲ್ಲಿ ಆನಂದದ ಆಸ್ವಾದನೆಯೂ ಒಂದಲ್ಲವೇ?
ಅವಳು: ಗೇಯ ಗುಣವನ್ನು ಹೊಂದಿರುವ ಈ ಗೀತೆಯು ಈ ಸಂಕಲನದ ಉತ್ತಮವಾದ ಗೀತೆಗಳಲ್ಲಿ ಒಂದಾಗಿದೆ. ಕ್ಲಿಷ್ಟಪದಗಳಿಲ್ಲದೆ ಲಯಬದ್ಧವಾಗಿ ಸಾಗುವ ಈ ಪದ್ಯದ ರಚನೆ ಕವಿಯನ್ನು ಉತ್ತಮ ಕವಿಯನ್ನಾಗಿಸಿದೆ. ಕವಿಯ ಕಲ್ಪನೆ ಪರಾಕಾಷ್ಟೆಯನ್ನು ಮುಟ್ಟಿದೆ. ಈ ಶೃಂಗಾರ ಕವಿತೆಗೆ ರಾಗ ಹಾಕಿ ಹಾಡಿದರೆ ಯಾವ ಚಿತ್ರಗೀತೆಗೂ ಭಾವಗೀತೆಗೂ ಕಡಿಮೆ ಎನಿಸದು. ಮೇಲ್ನೋಟಕ್ಕೆ ಪ್ರೇಮಿಯನ್ನು ಕುರಿತಾಗಿ ಬರೆದಿದ್ದರೂ ಪ್ರಕೃತಿಗೆ ಇನ್ನೂ ಹೆಚ್ಚಾಗಿ ಅನ್ವಯಿಸುತ್ತದೆ. ಒಂದೇ ವರ್ಣನೆ ಪ್ರೇಮಿಗೂ, ಪ್ರಕೃತಿಗೂ ಚೆನ್ನಾಗಿ ಒಪ್ಪುತ್ತದೆ.
'ಬಂಗಾರದೊಡವೆ ಬೇಕೇ ನೀರೆ...
ಎಂಬ ಚಿತ್ರಗೀತೆ ನೆನಪಾಗುತ್ತದೆ. ಈ ಕವಿತೆಯ ಮೂಲಕ ಸಹೃದಯರಿಗೆ ಭಾಷಾ ಮಾಧುರ, ಭಾವ ಮಾಧುರಿ ಎರಡನ್ನೂ ಉಣ ಬಡಿಸಿದ್ದಾರೆ.
ಕವಿತೆ : ಇದು ಈ ಸಂಕಲನದ ಅತಿ ಉತ್ತಮವಾದ ಕವನ. ಪದಲಾಲಿತ್ಯಕ್ಕೆ ಉದಾಹರಣೆಯೇ ಈ ಕವಿತೆ, ಅಂತ್ಯಪ್ರಾಸದ ಹೊಳೆಯೇ ಹರಿದಿದೆ. ಈ ತರಹದ ರಚನೆ ಪಳಗಿದ ಕೈಗಷ್ಟೆ ಸಾಧ್ಯ. ಲೇಖಕರ ಭಾಷಾ ಸಂಪತ್ತು ಓದುಗರನ್ನು ಬೆರಗುಗೊಳಿಸುತ್ತದೆ.
ಹೆಸರು ಜಯ : 'ಹೆಸರು ಜಯ, ಅದರಲ್ಲೇನಿದೆ ಅತಿಶಯ' ಈ ಅತಿಶಯವನ್ನು ಕುತೂಹಲಕಾರಿಯಾಗಿ ಮುಂದುವರೆಸಿ ಕವನದ ಕೊನೆಯ ಸಾಲಿನಲ್ಲಿ 'ಹಸೆಮಣೆಗೆ ಬಾ ಮಗಳೇ ಜಯ' ಎಂದು ವಿಸ್ಮಯದ ಅನಾವರಣ ಮಾಡಿರುವುದು ನನಗೆ ತುಂಬ ಇಷ್ಟವಾಗಿದೆ. ಕೃತಿಯ ಹೆಸರು 'ಅವಳ ಹೆಸರು', ಇದರ ಸಮಾಪ್ತಿಯಲ್ಲಿ ಅವಳ ಹೆಸರನ್ನು ಹೇಳಿರುವ ಸಂದರ್ಭ ಚಮತ್ಕಾರ ಪೂರ್ಣವಾಗಿದೆ.
ಕನ್ನಡ ಸಾಹಿತ್ಯಕ್ಕೆ ಅಮೋಘ ಕೊಡುಗೆಯನ್ನು ನೀಡಿರುವ ಕೆ.ಎಸ್. ಸಚ್ಚಿದಾನಂದವರಿಗೆ ಅಭಿನಂದನೆಗಳು. ಇವರ ಲೇಖನಿಯಿಂದ ಇನ್ನು ಹೆಚ್ಚು ಕೃತಿಗಳು ಮೂಡಿಬರಲೆಂದು ಹಾರೈಸುತ್ತೇನೆ.
- ಕೆ.ಆರ್ ಪ್ರೇಮಲೀಲಾ
"ಇಲ್ಲಿ ಗೌತಮನ ಕಥೆಯೊಂದಿಗೆ ಜಗತ್ತು ಹೇಗಿದೆ ಎಂಬುದರ ಪರಿಚಯವನ್ನು ಮಾಡುವ ದೃಶ್ಯಗಳನ್ನು ಸೇರಿಸಿಕೊಂಡದ್ದು ನಾಟಕಕ್...
"ಪುಸ್ತಕ ತೆರೆದಾಕ್ಷಣ ಕಾಣಿಸುವ “ಕಿಸೆಯಲ್ಲಿರುವ ಕಾಸಿನಿಂದ ಆಹಾರ ಸಂಪಾದಿಸಬಲ್ಲೆ ಎಂಬ ಅಹಂನಿಂದಾಗಿ ಮನುಷ್ಯ...
“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್...
©2025 Book Brahma Private Limited.