"ಪುಸ್ತಕ ತೆರೆದಾಕ್ಷಣ ಕಾಣಿಸುವ “ಕಿಸೆಯಲ್ಲಿರುವ ಕಾಸಿನಿಂದ ಆಹಾರ ಸಂಪಾದಿಸಬಲ್ಲೆ ಎಂಬ ಅಹಂನಿಂದಾಗಿ ಮನುಷ್ಯ ನಡೆದ ದಾರಿಯಲ್ಲೆಲ್ಲಾ ಅನಾಹುತಗಳು ಸೃಷ್ಟಿಯಾಗುತ್ತಿವೆ. ಅನ್ನ, ಹಣ ಸಂಪಾದಿಸುವ, ಕೂಡಿಡುವ ಮನುಷ್ಯನ ಘನ ವಿಕಾರಗಳಿಗೆ ಮೊದಲ ಆಹುತಿಗೆ ಈ ಪ್ರಕೃತಿ ಎಂಬುದೀಗ ಲೋಕಸತ್ಯ” ಎನ್ನುವ ಲೇಖಕರ ಮಾತು ಪ್ರತಿ ಬರಹದ ಕೊನೆಯಲ್ಲೂ ಕಾಡುತ್ತದೆ," ಎನ್ನುತ್ತಾರೆ ಶಮಾ ನಂದಿಬೆಟ್ಟ. ಅವರು ನರೇಂದ್ರ ರೈ ದೇರ್ಲ ಅವರ ‘ಹಸಿರು ಅಧ್ಯಾತ್ಮ’ ಕೃತಿ ಕುರಿತು ಬರೆದ ವಿಮರ್ಶೆ.
ನನ್ನ ವಯಸ್ಸು ನಾಲ್ಕೋ ಐದೋ ಇದ್ದಿರಬಹುದು. ಬಂಗಲೆಯಂಥ ನಮ್ಮ ದೊಡ್ಡ ಮನೆ ಅಂಗಳದೆರಡೂ ಬದಿಯಲ್ಲಿ ಹಬ್ಬಿತ್ತು. ತೊಟ್ಟಿ ಮನೆ ಅಲ್ಲದಿದ್ದರೂ ಅದಕ್ಕಿಂತ ಬಹಳ ಭಿನ್ನವಾಗಿಯೇನೂ ಇರಲಿಲ್ಲ. ಅಜ್ಜ, ಅಜ್ಜಿ, ದೊಡ್ಡಪ್ಪ, ಸೋದರತ್ತೆಯಂದಿರು, ಅಪ್ಪ, ಅಮ್ಮ, ನಾನು ಮತ್ತು ತಮ್ಮ ಎಲ್ಲರೂ ಜೊತೆಯಲ್ಲಿ ಇದ್ದ ದಿನಗಳವು. ಮನೆಯ ಒಂದು ಬದಿಯಲ್ಲಿ ತೆಂಗು, ಕಂಗು, ಬಾಳೆ, ಕಾಳು ಮೆಣಸು ಎಲ್ಲವೂ ಬೆಳೆಯುತ್ತಿದ್ದ ವಿಶಾಲವಾದ ತೋಟ. ಇನ್ನೊಂದೆಡೆಯಲ್ಲಿ ಗೇರು, ಮಾವು, ಹಲಸು, ಪೇರಳೆ, ಪುನರ್ಪುಳಿ, ಕುಂಟಾಲ, ನೇರಳೆ ಇನ್ನಿತರ ಕಾಡು ಹಣ್ಣುಗಳು ಬೆಳೆಯುತ್ತಿದ್ದಂಥ ಅತ್ತ ಕಾಡೂ ಅಲ್ಲದ ಇತ್ತ ತೋಟವೂ ಅಲ್ಲದ ಜಾಗ. ಇವೆಲ್ಲದರ ಜೊತೆಗೆ ಮನೆಯ ಉಪಯೋಗಕ್ಕೆ ಬೇಕಾಗುವಷ್ಟು ತೊಂಡೆ, ಹಾಗಲ, ಹರಿವೆ, ಬಸಳೆ, ಪಡುವಲ, ಹೀರೆ ಬೆಳೆಯುತ್ತಿದ್ದಂಥ ಕೈತೋಟ. ಒಟ್ಟಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಹಸಿರು. ಇದ್ದಕ್ಕಿದ್ದಂತೆ ಒಂದು ಶುಭಮೂರ್ತದಲ್ಲಿ ನಮ್ಮನ್ನು, ಅಂದರೆ ಅಪ್ಪ, ಅಮ್ಮ, ನಾನು ಮತ್ತು ತಮ್ಮ ನಾಲ್ಕು ಮಂದಿಯನ್ನು ಆ ಮನೆಯಿಂದ ಉಟ್ಟ ಬಟ್ಟೆಯಲ್ಲಿ ಹೊರಹಾಕಲಾಯಿತು. ಆ ಹೊತ್ತಿನಲ್ಲಿ ಅವರುಗಳು ನಮಗೆ ಕೊಟ್ಟಿದ್ದು ಗೊಡ್ಡು ಎಂದು ಭಾವಿಸಲಾಗಿದ್ದ ದನವೂ ಅಲ್ಲದ ಕರುವೂ ಅಲ್ಲದ ಒಂದು ಜೀವ, ಅಪ್ಪ ಉಣ್ಣುತ್ತಿದ್ದ ಒಂದು ಅಲ್ಯೂಮಿನಿಯಂ ತಟ್ಟೆ, ಮತ್ತು ಕಾಡಿನ ದಾರಿಯಲ್ಲಿ ನಡೆಯುವಾಗ ಅಡ್ಡ ಬರುವ ಗಿಡ ಮರಗಳನ್ನು ಸವರಲು ಆಗುವಂಥ ಒಂದು ಮೊಂಡು ಕತ್ತಿ. ಅಕ್ಷರಶ: ಅಲೆಮಾರಿಗಳಂತೆ ಅಲ್ಲಿಂದ ಹೊರಟ ನಾವು ತಲುಪಿದ್ದು ʼಬಳ್ಳಿʼ ಎಂಬ ಹೆಸರಿನ ಒಂದು ಶಿಥಿಲವಾದ ಗೂಡಿಗೆ. ಈಗಲೋ ಆಗಲೋ ಮುರಿದು ಬೀಳಬಹುದೆಂಬಂತಿದ್ದ ಆ ಮಣ್ಣಿನ ಬಿಡಾರಕ್ಕೆ ಬಳ್ಳಿ ಎಂಬ ಹೆಸರು ಅನ್ವರ್ಥವಿತ್ತು. ಭೂತಗನ್ನಡಿ ಹಾಕಿ ಹುಡುಕಿದರೂ ಸುತ್ತೆಲ್ಲೂ ಹಸಿರಿನ ಹೆಸರಿರಲಿಲ್ಲ. ತಿಂಗಳು ಕಳೆಯುವುದರೊಳಗೆ ಅದೇ ಒಣ ಭೂಮಿಯಲ್ಲಿ ಸಣ್ಣಗೆ ಹಸಿರು ಕುಡಿಯೊಡೆದಿತ್ತು ಮತ್ತು ಅದು ನಮ್ಮ ಬೆವರನ್ನು ಹೀರಿ ಬೆಳೆದಿತ್ತು. ನಮ್ಮವರೇ ನಮ್ಮದೇ ಮನೆಯಿಂದ ನಮ್ಮನ್ನು ಹೊರ ದಬ್ಬಿದ ಆ ನೋವಿನಲ್ಲಿ ನಮ್ಮನ್ನು ಕಾಪಾಡಿದ್ದು ಇದೇ ಅಧ್ಯಾತ್ಮ; ಹಸಿರು ಅಧ್ಯಾತ್ಮ. ಆ ಎಳೆಯ ವಯಸ್ಸಿನಲ್ಲಿ ಅಂಟಿದ ಹಸಿರಿನ ನಂಟು ಇವತ್ತಿಗೂ ಅಷ್ಟೇ ಹಸುರಾಗಿದೆ. ನರೇಂದ್ರ ರೈ ದೇರ್ಲ ಅವರು ಬರೆದ ಹಸಿರು ಪ್ರಬಂಧಗಳ ಸಂಕಲನ ಹಸಿರು ಆಧ್ಯಾತ್ಮ ಓದುತ್ತಿದ್ದರೆ ಪುಟ ಪುಟಗಳಲ್ಲೂ ಅಮ್ಮ ಕಾಣಿಸುತ್ತಿದ್ದಳು. ನಮ್ಮನ್ನು ಪೊರೆದ ಒಪ್ಪಕ್ಕ, ಗೌರಿ ಹಸುಗಳ ಸೆಗಣಿ, ಬೆರಣಿ, ಗಂಜಲದ ಗುರುತುಗಳಿದ್ದವು.
ಪುಸ್ತಕ ತೆರೆದಾಕ್ಷಣ ಕಾಣಿಸುವ “ಕಿಸೆಯಲ್ಲಿರುವ ಕಾಸಿನಿಂದ ಆಹಾರ ಸಂಪಾದಿಸಬಲ್ಲೆ ಎಂಬ ಅಹಂನಿಂದಾಗಿ ಮನುಷ್ಯ ನಡೆದ ದಾರಿಯಲ್ಲೆಲ್ಲಾ ಅನಾಹುತಗಳು ಸೃಷ್ಟಿಯಾಗುತ್ತಿವೆ. ಅನ್ನ, ಹಣ ಸಂಪಾದಿಸುವ, ಕೂಡಿಡುವ ಮನುಷ್ಯನ ಘನ ವಿಕಾರಗಳಿಗೆ ಮೊದಲ ಆಹುತಿಗೆ ಈ ಪ್ರಕೃತಿ ಎಂಬುದೀಗ ಲೋಕಸತ್ಯ” ಎನ್ನುವ ಲೇಖಕರ ಮಾತು ಪ್ರತಿ ಬರಹದ ಕೊನೆಯಲ್ಲೂ ಕಾಡುತ್ತದೆ.
ನಮ್ಮದೇ ಊರಿನವರಾದ ನರೇಂದ್ರ ರೈ ದೇರ್ಲ ಇವರು ಹುಟ್ಟಿ ಬೆಳೆದ ಪರಿಸರವನ್ನು ನಾನು ನೋಡದೆ ಇದ್ದರೂ ಅದು ನನ್ನದೇ ನೆಲ. ನಾವಿಬ್ಬರೂ ಹುಟ್ಟಿ ಬೆಳೆದ ಪರಿಸರಗಳಲ್ಲಿ ಲವಲೇಶ ವ್ಯತ್ಯಾಸವಿಲ್ಲದ ಕಾರಣ ಈ ಹಸಿರು ಪ್ರಬಂಧಗಳಲ್ಲಿ ಇರುವುದು "ನಂಗೆ ಪ್ರಕೃತಿ ಇಷ್ಟ" ಎಂದು ಕೊಚ್ಚಿಕೊಳ್ಳುವ ನನ್ನ ಆತ್ಮಸಾಕ್ಷಿಯನ್ನು ಹೀಯಾಳಿಸುವ ಕಥೆಗಳು. ಊರು ಬಿಟ್ಟು ನಗರ ಸೇರಿದ ನನ್ನನ್ನು ಅಣಕಿಸುತ್ತ ಪ್ರಶ್ನಿಸುವ ವ್ಯಥೆಗಳು.
ಎಳೆಯ ವಯಸ್ಸಿನಿಂದಲೇ ಅಮ್ಮನ ಮೂಲಕ ನಾನು ದೇರ್ಲರನ್ನು ಬಲ್ಲೆ. ಅವರ ಪರಿಸರ ಕಾಳಜಿಯೂ ಅಮ್ಮನ ಓದಿನ ಮೂಲಕವೇ ನನಗೆ ತಿಳಿದದ್ದು. ಆರು ಏಳನೇ ತರಗತಿಗೆ ಬರುವ ಹೊತ್ತಿಗೆ ಅಮ್ಮ ನಾಗರಿಕ ಸೇವಾ ಟ್ರಸ್ಟ್ʼನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡದ್ದು ನನ್ನೊಳಗೂ ಪರಿಸರ ಪ್ರಜ್ಞೆ ಗಾಢವಾಗಿ ಇಳಿಯಲು ಕಾರಣವಾಯಿತು; ಬಿಟ್ಟಿ ಸಿಕ್ಕಿದೆ ಎಂದು ನಾವು ಭಾವಿಸಿದ ಭೂಮಿ, ಗಾಳಿ, ನೀರಿನ ಮೌಲ್ಯ ಎಂದೂ ಮರೆಯದಷ್ಟು ಅಚ್ಚಾಯಿತು. ಅವತ್ತಿನ ಕಾಲದಲ್ಲಿ ಓದಿದವರೆಲ್ಲ ಓದಿಕೊಂಡವರೆಲ್ಲ “ಇಷ್ಟು ದೊರಕಿದರೆ ಮತ್ತಷ್ಟರಾಸೆ” ಎಂಬಂತೆ ಊರು ಬಿಟ್ಟು ಶಹರಕ್ಕೆ ತೆರಳಿ ಹೆಚ್ಚು ಸಂಪಾದನೆ ಮಾಡುವ ದಾರಿಯನ್ನು ಕಂಡುಕೊಂಡರೆ ಇವರು ʼನನ್ನೂರಿನ ಮಣ್ಣನ್ನು, ಬೇರನ್ನು ಕಿತ್ತೊಗೆದು ಬರುವುದಿಲ್ಲʼ ಎಂಬಂತೆ ಹಳ್ಳಿಯಲ್ಲೇ ನೆಲೆ ನಿಂತರು. ಪ್ರಾಧ್ಯಾಪಕರಾಗಿದ್ದುಕೊಂಡು ತನ್ನ ಕೆಲಸವೆಷ್ಟೋ ಅಷ್ಟೇ ಎಂಬಂತೆ ಪಾಠ ಹೇಳುತ್ತಾ ಸುಮ್ಮನಿರಬಹುದಿತ್ತು. ಉಹೂಂ, ಹಾಗಿರಲಿಲ್ಲ; ಇವರು ಪಾಠದಾಚೆಗೆ ಮಕ್ಕಳ ಮನಸ್ಸಿನಲ್ಲಿ ಪರಿಸರ ಪ್ರಜ್ಞೆಯನ್ನು ಬಿತ್ತುತ್ತ, ಹಳ್ಳಿಯ ಜನ ಜೀವನದ ಅಂದ ಚಂದವನ್ನು ಅವರ ಎದೆಯಾಳಕ್ಕೆ ತುಂಬುತ್ತಾ ಹೋದರು. ಯಾವುದೇ ಪ್ರಶಸ್ತಿ, ಹಾರ ತುರಾಯಿಗಳಿಗೆ ಕೈಚಾಚದೆ ಮನೋಳಿ ಕಾಡಿನ ತೆಂಗಿನ ಮರದಂತೆ ಎತ್ತರಕ್ಕೆ ಏರಿದರು. ಅಷ್ಟೇ ಯಾಕೆ, ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷಗಿರಿಯಲ್ಲಿ ಮೆರೆಯುವ ಅವಕಾಶವನ್ನು ನಿರಾಕರಿಸಿ ಕೈಗೆ ಮೆತ್ತಿದ ಮಣ್ಣು ಮತ್ತು ಹಿಡಿದ ಪೆನ್ನು ಸಾಕೆಂಬ ನೆಮ್ಮದಿಯನ್ನು ಕಂಡುಕೊಂಡವರು. ʼಯಶಸ್ಸಿಗೆ ಇನ್ನೊಂದೇ ಮೆಟ್ಟಿಲುʼ ಮುಂತಾದ ಹೆಸರುಗಳಲ್ಲಿ ಯಾವ್ಯಾವುದೋ ದೇಶದವರ ಕಥೆಗಳನ್ನು ಐವತ್ತೆರಡೂವರೆ ಸಲ ಮರು ಮುದ್ರಿಸಿ ಜಗತ್ತು ಸಂಭ್ರಮಿಸುತ್ತಿದ್ದರೆ ದೇರ್ಲರು ಹಳ್ಳಿಯ ನಡುವೆ ಕೂತು ನಮ್ಮ ದೇಶದ ರೈತರ ಯಶೋಗಾಥೆಗಳು ಪುಸ್ತಕವಾಗಬೇಕು, ಅವರ ಕಥೆಗಳು ನಮ್ಮ ಯುವ ಜನಾಂಗಕ್ಕೆ ಸ್ಪೂರ್ತಿಯಾಗಬೇಕು ಎಂದು ಛಲತೊಟ್ಟ ತ್ರಿವಿಕ್ರಮನಂತೆ ಬರೆದರು ಮತ್ತು ಅದರಂತೆ ಬದುಕಿದರು. ಹಾಗಾಗಿಯೇ ಹಸಿರು ಇವರ ಪಾಲಿಗೆ ಅಧ್ಯಾತ್ಮವೂ ಹೌದು, ಉಸಿರೂ ಹೌದು.
ಗೂರ್ಮೆಯ ಬಗ್ಗೆ ಬರೆಯುತ್ತಾ ತನ್ನ ಹಳ್ಳಿಯ ಮಂದಿಯ ಕುರಿತು “ಇವರ್ಯಾರೂ ಕೀಟ, ಪಕ್ಷಿ ಶಾಸ್ತ್ರಗಳನ್ನು, ಜೀವ ವಿಜ್ಞಾನವನ್ನು ವಿಶ್ವವಿದ್ಯಾನಿಲಯದಲ್ಲಿ ಓದಿದವರಲ್ಲ. ಆದರೆ ನೆಲ ವಿಶ್ವವಿದ್ಯಾನಿಲಯದ ಎಷ್ಟೋ ಕಥೆಗಳು ಅನುಭವದ ಹಿನ್ನೆಲೆಯದೇ ಆಗಿರುತ್ತದೆ ಮತ್ತು ನಂಬಲು ಹೆಚ್ಚು ಯೋಗ್ಯವಾಗಿರುತ್ತವೆ” (ಪು.14) ಎನ್ನುತ್ತಾರೆ. ಮಣ್ಣಿನ ಒಡನಾಟದಲ್ಲಿ ನಿತ್ಯ ಸಿಗುವ ಪಾಠಗಳ ಬಗ್ಗೆ ಇದಕ್ಕಿಂತ ಹೆಚ್ಚಿನ ವಿವರಣೆ ಬೇಕಿಲ್ಲ. ಒಮ್ಮೆ ಚೇರೆ ಹಣ್ಣಿನ ಸೊನೆ ತಾಗಿಸಿಕೊಂಡ ನನ್ನ ಕಥೆ ಇವರ ಕತೆಯಲ್ಲೂ ಇದೆ (ಪುಟ 22 ಮತ್ತು 23). ಅಂಥದ್ದೊಂದು ಭಯಂಕರವಾದ ಹಣ್ಣನ್ನು ಕೂಡ ತಿನ್ನಲು ಒಂದು ನಾಜೂಕು ನಾಟಿ ಕ್ರಮವಿದ್ದು ಅದರ ಮೋದವನ್ನು ಓದಿಯೇ ತಿಳಿದುಕೊಳ್ಳಬೇಕು. ತನ್ನೊಳಗಿನ ಸಮಸ್ಯೆಗೆ ಪ್ರಕೃತಿ ತಾನಾಗಿ ಪರಿಹಾರಗಳನ್ನು ಕೂಡ ಕೊಡುತ್ತದೆ ಎಂಬುದು ಅರ್ಥವಾಗಬೇಕಾದರೆ ನಾವು ಹೆಚ್ಚು ಹೆಚ್ಚು ಇಂಥ ಕಥೆಗಳನ್ನು ಓದಬೇಕು. ಸಾಧ್ಯವಾದಷ್ಟು ಮೈ ಮನಗಳನ್ನು ಮಣ್ಣಿನ ಒಡನಾಟಕ್ಕೆ ಒಪ್ಪಿಸಿಕೊಳ್ಳಬೇಕು, ತೆರೆದುಕೊಳ್ಳಬೇಕು.
ಇನ್ನು ಈ ಪುಸ್ತಕದ ತುಂಬಾ ಬರುವ ಅಷ್ಟು ಹೆಸರುಗಳು ನನ್ನ ಬಾಲ್ಯದವೂ ಹೌದು. ನಾನು ಬೆಳೆದದ್ದೂ ಸೋಂಪ, ತನಿಯ, ಪಿಜಿನ, ಕರಿಯ, ದಾಮು, ತೋಡು, ಸಂಕ, ಅದರ ಮೇಲಿನ ಪಾಂಬಜಿಗಳ ನಡುವೆಯೇ. ನಂದಿಬೆಟ್ಟವಾಗಿ ರೂಪಾಂತರ ಹೊಂದುವ ಮುನ್ನ ವಿಚಿತ್ರ ನಿಗೂಢತೆಯನ್ನು ಆವಾಹಿಸಿಕೊಂಡಿದ್ದ, ಮನೆಯ ಮುಂದಿದ್ದ ದೇವರಗುಡ್ಡಕ್ಕೂ ಇವರ ಮನೋಳಿ ಕಾಡಿಗೂ ಹೆಚ್ಚು ವ್ಯತ್ಯಾಸವಿಲ್ಲ. ಹಾಗಾಗಿ ಇವಷ್ಟೂ ನನಗೆ ಉಸಿರಿತ್ತ ಹಸಿರೂ ಹೌದು.
ಹಾಗಂತ ಇಲ್ಲಿರುವುದು ಬರೀ ಪ್ರಕೃತಿ ಮತ್ತು ಹಸಿರಿನ ಕಥೆಗಳು ಮಾತ್ರವಲ್ಲ. ಇವು ಸಂಬಂಧಗಳ ಕಥೆಯೂ ಹೌದು. ಬದುಕಿನ ಹಲವು ಮುಖಗಳ, ಮಾನವನ ಮನೋವ್ಯಾಪಾರದ ಕಥೆಗಳೂ ಇಲ್ಲಿವೆ. ʼಲಾರಿ ಜಂಗಮರು ಮತ್ತು ಅವರ ಬೀದಿ ಬದುಕುʼ ಓದುತ್ತಿದ್ದರೆ ನಾವು ಕಲ್ಪನೆಯೂ ಮಾಡಿರದ ಮುಖಗಳು ತೆರೆದುಕೊಳ್ಳುತ್ತವೆ, ಜೊತೆಗೆ ಸಂಬಂಧದ ಸೂಕ್ಷ್ಮ ತಂತುಗಳೂ ಅನಾವರಣಗೊಳ್ಳುತ್ತವೆ. “ಬದುಕಿಗಾಗಿ ಲಾರಿಯನ್ನು ಪ್ರೀತಿಸುವ ಜಂಗಮ ಜಗತ್ತು ತಮ್ಮ ದೇಹವನ್ನು ಪ್ರೀತಿಸದಿರುವುದೇ ಈ ದುರಂತಕ್ಕೆ ಕಾರಣ” ಎಂಬ ಒಂದು ವಾಕ್ಯದಲ್ಲಿ ಎಷ್ಟೆಲ್ಲ ಅಡಗಿದೆ! ಒಂದು ಕಾಲದಲ್ಲಿ ದೇಶದ ಸುಭಿಕ್ಷತೆಯ ಮೂಲವಾಗಿದ್ದ ಕೃಷಿಯ ಕಡೆಗಣನೆ ಮಾನವನ ಬದುಕನ್ನು ಬೀದಿಗೆ ತಂದು ಹಾಕಿದ ಪರಿ ಕರುಳು ಹಿಂಡುತ್ತದೆ.
ಹಿಂದಿನ ಶತಮಾನದ ಅದ್ಭುತ ಅವಿಷ್ಕಾರ ಎನ್ನಲಾದ ಕೊಳವೆಬಾವಿಯನ್ನು ಇವರು “20ನೇ ಶತಮಾನದ ಅತ್ಯಂತ ಘೋರ ಸಂಶೋಧನೆ” ಎನ್ನುತ್ತಾರೆ. ಅದು ನಮಗೆ ಅರ್ಥವಾಗಬೇಕಾದರೆ ಈ ಹಸಿರು ಅಧ್ಯಾತ್ಮ ಜಗತ್ತಿನೊಳಗೆ ನಾವು ಸಂಪೂರ್ಣವಾಗಿ ಪ್ರವೇಶಿಸಬೇಕು. ಎರಡನೇ ಮಹಾಯುದ್ಧ ಮುಗಿದ ಮೇಲೆ ತಮಗುಂಟಾದ ಸಮಸ್ಯೆಗಳ ಪರಿಹಾರಕ್ಕಾಗಿ ಉತ್ಪಾದಿಸಿದ ರಾಸಾಯನಿಕಗಳನ್ನು ಅಮೆರಿಕಾದಂಥ ರಾಷ್ಟ್ರಗಳು ಭಾರತದ ಗದ್ದೆಗಳಿಗೆ ಚೆಲ್ಲಿ ನಮ್ಮ ನೆಲವನ್ನು ವಿಷವನ್ನಾಗಿಸಿದ ದುರಂತ ಅರಿವಾಗಬೇಕಾದರೆ, ರಸಗೊಬ್ಬರಗಳ ಹೆಸರಿನಲ್ಲಿ ಪ್ರವೇಶಿಸಿದ ರಾಸಾಯನಿಕಗಳು ನಮ್ಮ ರೈತರ ಜೀವರಸವನ್ನೇ ಹಿಂಡಿದ್ದನ್ನು ನಾವು ಮನಗಾಣಬೇಕಾದರೆ ಇಂಥ ಬರಹಗಳು ಬೇಕು.
ಕವಿತಾ ಮಿಶ್ರಾರ ಶ್ರೀಗಂಧದ ಯಶೋಗಾಥೆ, ನಮ್ಮದೇ ನೆಲದ ಹಲವು ಪದ್ಮಶ್ರೀಗಳು, ಇವೆಲ್ಲವನ್ನೂ ನಮಗೆ ಪರಿಚಯಿಸುತ್ತಲೇ “ಟಿವಿಯ ಕಾರ್ಯಕ್ರಮಗಳಲ್ಲಿ ವರ್ಷಕ್ಕೆ ನೂರಾರು ಬುದ್ದಿವಂತರು ಮಾತನಾಡುತ್ತಾರೆ. ಈ ಗುಂಪಿನಲ್ಲಿ ರಾಜಕಾರಣಿಗಳು, ಸಾಹಿತಿಗಳು, ಸಮಾಜ ಸೇವಕರು, ಮಠಾಧಿಪತಿಗಳು, ಇರುತ್ತಾರೆ. ಆದರೆ ಕೃಷಿಕರು ನೆಲದವರು ಇರುವುದು ಕನಿಷ್ಠ. ಏಕೆಂದರೆ ಅವರು ʼಚಂದʼ ಮಾತನಾಡುವುದಿಲ್ಲ” (ಪು. 86) ಎನ್ನುವ ಮಾತಿನಲ್ಲಿ ಅನ್ನದಾತನನ್ನು ನಾವು ನಿರ್ಲಕ್ಷ್ಯ ಮಾಡಿದ್ದರ ಕುರಿತು ನೋವಿದೆ, ಸಿಟ್ಟಿದೆ. ಇಂಥವರನ್ನು, ನಮ್ಮದೇ ಮೂಡಬಿದ್ರೆಯ ಸೋನ್ಸ್ ಅಂಥವರನ್ನು ಮಾಧ್ಯಮಗಳು, ಪಠ್ಯಪುಸ್ತಕಗಳು ಹೀರೋ ಮಾಡಿದ್ದರೆ ನನ್ನಂಥವರು ಮಣ್ಣು ಬಿಟ್ಟು ಬೆಂಗಳೂರಿನಂಥ ಕಾಂಕ್ರೀಟ್ ಕಾಡಿಗೆ ಖಂಡಿತವಾಗಿಯೂ ಬರುತ್ತಿರಲಿಲ್ಲ ಎನ್ನುವಾಗ ಸಮಾಜವಾಗಿ ನಾವೆಷ್ಟರ ಮಟ್ಟಿಗೆ ಸೋತಿದ್ದೇವೆ ಎಂಬುದರ ಚಿತ್ರಣ ಸ್ಪಷ್ಟವಾಗುತ್ತದೆ.
ಅನ್ನದ ಕಥೆ ಪುಸ್ತಕ ವಾಗಬೇಕು ಎಂಬ ಬರಹದಲ್ಲಿ “ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಮ್ಮೆ ಪ್ರವಾಸ ಮಾಡಿ ಬನ್ನಿ. ದೇಶದ ಉದ್ದಗಲಕ್ಕೂ ಸಾವಿರಾರು ಪ್ರತಿಮೆಗಳನ್ನು ಗಮನಿಸಬಹುದು. ಆದರೆ ಒಬ್ಬನೇ ಒಬ್ಬ ರೈತನ ಪ್ರತಿಮೆಯನ್ನು ನಾನು ಈ ದೇಶದ ಎಲ್ಲೂ ನೋಡಿಲ್ಲ.” (ಪು.142) ಎಂಬುದು ಎಂಥ ದುರಂತ ನೋಡಿ! ನಿತ್ಯವೂ ನಮ್ಮ ಹೊಟ್ಟೆ ತುಂಬಿಸುವ ಆ ಅಮೃತಹಸ್ತ ನಮಗೆ ಪ್ರಮುಖ ಎನಿಸುವುದೇ ಇಲ್ಲ. ಇದನ್ನು ಮನಗಂಡೇ ದೇರ್ಲರು ರೈತರ ಯಶೋಗಾಥೆಯೂ ಚರಿತ್ರೆ ಸೇರಲಿ, ಅನ್ನದ ಜೊತೆ ಅದಕ್ಕಂಟಿದ ಬೆವರಿನ ಕಥೆಯೂ ಒಳಗಿಳಿಯಲಿ ಎಂಬ ಉದ್ದೇಶದಿಂದ ಇವನ್ನು ಬರೆಯುತ್ತಿದ್ದಾರೆ. ಅನೇಕರು ಪರಿಸರದ ಹೆಸರಿನಲ್ಲಿ ಸಮಸ್ಯೆಗಳನ್ನಷ್ಟೇ ಹೇಳಿದರೆ ದೇರ್ಲರು ಪರಿಹಾರಗಳನ್ನೂ ಬೊಗಸೆಯಲ್ಲಿಟ್ಟುಕೊಂಡಿದ್ದಾರೆ. ಇವರಿಟ್ಟ ಈ ಹೆಜ್ಜೆ ಏಕವ್ಯಕ್ತಿಯದಾಗದಂತೆ ನೋಡಿಕೊಳ್ಳುವ ಹೊಣೆ ನಮ್ಮೆಲ್ಲರದೂ ಆಗಿದೆ. ಹಲವಾರು ಹೆಜ್ಜೆಗಳು ಜೊತೆಗೆ ಸೇರಿ ನಾವೆಲ್ಲ ಒಟ್ಟಾಗಿ ರೈತರ ಪ್ರತಿಮೆಗಳನ್ನು ಸ್ಥಾಪಿಸಿದರೆ ಅನ್ನವಿತ್ತ ಕೈಗಳಿಗೆ ಸಣ್ಣದೊಂದು ಕೃತಜ್ಞತೆ ಹೇಳಿದಂತಾದೀತೇ ?
ಇವೇ ಹಸಿರು ಕಥೆಗಳು ಅಂಕಣವಾಗಿಯೋ, ಲೇಖನವಾಗಿಯೋ ಯಾವುದೋ ಪತ್ರಿಕೆಯಲ್ಲಿ ಪ್ರಕಟವಾಗಿದ್ದರೆ ಮರುದಿನಕ್ಕೆ ರದ್ದಿ ಆಗುತ್ತಿತ್ತು. ಅದರ ಬದಲಿಗೆ ಈ ರೀತಿ ದಾಖಲಾಗಿ ಪುಸ್ತಕವಾಗಿ ಪ್ರಕಟವಾಗಿರುವುದು, ಎಲ್ಲ ಚಿತ್ರಣಗಳು ಒಂದೇ ಕ್ಯಾನ್ವಾಸಿನಲ್ಲಿ ದೊರಕುತ್ತಿರುವುದು ನಿಜಕ್ಕೂ ಅದೃಷ್ಟ. ನೆಲ ಪ್ರೀತಿ, ಪ್ರಕೃತಿ ಪ್ರೀತಿ, ಮಣ್ಣಿನೆಡೆಗೆ ಎಳ್ಳಷ್ಟಲ್ಲ, ಸೂಜಿ ಮೊನೆಯಷ್ಟಾದರೂ ಪ್ರೀತಿ ಇರುವವರು, ನಮ್ಮ ಮಕ್ಕಳು ನಮ್ಮ ಅರ್ಧದಷ್ಟಾದರೂ ನೆಮ್ಮದಿಯಾಗಿ ಬದುಕಲು ಯೋಗ್ಯವಾಗಿರುವಂತೆ ಭೂಮಿಯನ್ನು ಕಾಪಿಡಲು ಇಚ್ಚಿಸುವವರು ಈ ಪುಸ್ತಕವನ್ನು ಓದಲೇಬೇಕು.
ಅಂದ್ಹಾಗೆ, ಇದು ಒಮ್ಮೆ ಓದಿ ಎತ್ತಿಡುವ ಪುಸ್ತಕವಲ್ಲ. ಖರೀದಿಸಿ, ಓದಿ, ದಿನವೂ ಕಣ್ಣಿಗೆ ಕಾಣುವಂತೆ ಇಟ್ಟು ಮತ್ತೆ ಮತ್ತೆ ಓದಬೇಕಾದ, ಮನದೊಳಗೇ ಮಥಿಸಿ ನಮ್ಮ ಕೈಲಾದಷ್ಟು ಕಾರ್ಯಗತರಾಗಲು ಸ್ಪೂರ್ತಿಯಾಗಬಲ್ಲ ಪುಸ್ತಕ ಎಂದು ದೃಢವಾಗಿ ಹೇಳಬಲ್ಲೆ. ತೇಜಸ್ವಿ, ಕಾರಂತರು ಇದನ್ನೇ ಹೇಳಿದ್ದರು; ನಾವು ಕೇಳಲಿಲ್ಲ. ಅಭಿವೃದ್ಧಿ ಎಂಬ ಮಾಯೆಯ ಝಗಮಗ ಬೆಳಕಿನ ಶಾಖದಲ್ಲಿ ನಮ್ಮ ಜ್ಞಾನೇಂದ್ರಿಯಗಳೆಲ್ಲವೂ ಮರಗಟ್ಟಿದ್ದವು. ಈಗ ಅವರ ಮುಂದಿನ ತಲೆಮಾರಿನ ದೇರ್ಲರೂ ಅದನ್ನೇ ಹೇಳುತ್ತಿದ್ದಾರೆ. ಇನ್ನೂ ಎಚ್ಚರ ಆಗದಿದ್ದರೆ ನಾವು ಮಲಗಿದ್ದಲ್ಲಿಯೇ ಮುಗಿದುಹೋಗುವ ಅಪಾಯವಿದೆ, ನೆನಪಿರಲಿ.
“ಇದೀಗ ಭುಟ್ಟೋ ನಾಟಕ “ಕೊನೆಯ ಕುಣಿಕೆ" ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದೆ. ಆಗಾಗ ನನ್ನನ್ನು ಕನ್ನಡದ...
“ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ,...
"“ಬನ್ನಿ, ಬನ್ನಿ” ಎಂದು ನನ್ನನ್ನು ಕೂರಿಸಿದ ಅವರು ಒಳಗಿದ್ದ ನಾ.ಡಿ. ಅವರಿಗೆ ಕೊಂಕಣಿಯಲ್ಲಿ ನನ್ನ ಬ...
©2025 Book Brahma Private Limited.