ರಂಗದ ಮೇಲೆ ಬಹಳ ಪರಿಣಾಮಕಾರಿಯಾಗಬಹುದಾದ ನಾಟಕವಿದು


"ಇಲ್ಲಿ ಗೌತಮನ ಕಥೆಯೊಂದಿಗೆ ಜಗತ್ತು ಹೇಗಿದೆ ಎಂಬುದರ ಪರಿಚಯವನ್ನು ಮಾಡುವ ದೃಶ್ಯಗಳನ್ನು ಸೇರಿಸಿಕೊಂಡದ್ದು ನಾಟಕಕ್ಕೊಂದು ಭಿನ್ನ ಆಯಾಮವನ್ನು ನೀಡುತ್ತದೆ. ರಂಗದ ಮೇಲೆ ಬಹಳ ಪರಿಣಾಮಕಾರಿಯಾಗಬಹುದಾದ ನಾಟಕವಿದು," ಎನ್ನುತ್ತಾರೆ ಪಾರ್ವತಿ ಜಿ. ಐತಾಳ್. ಅವರು ತಯ್ಯುಳ್ಳದಿಲ್ ರಾಜನ್ ಅವರ 'ನಿರ್ವಾಣಂ' ಮಲೆಯಾಳಂ ಕೃತಿ ಕುರಿತು ಬರೆದ ವಿಮರ್ಶೆ.

'ನಿರ್ವಾಣಂ' ಮಲೆಯಾಳ ರಂಗಭೂಮಿಯಲ್ಲಿ ನಾಟಕಕಾರರು ಮತ್ತು ನಿರ್ದೇಶಕರಾಗಿ ಬಹಳಷ್ಟು ಕಾಲ ದುಡಿದು ಹೆಸರು ಮಾಡಿದ ತಯ್ಯುಳ್ಳದಿಲ್ ರಾಜನ್ 1982ರಲ್ಲೇ ಬರೆದ ಒಂದು ಪ್ರಭಾವಶಾಲಿ ನಾಟಕ.

'ರೋಗ, ವಾರ್ಧಕ್ಯ ಮತ್ತು ಸಾವುಗಳಿಗೆ ಪರಿಹಾರ ಹುಡುಕುತ್ತ ಸಿದ್ಧಾರ್ಥನು ಮಾಡಿದ ಪಯಣವು ನಾಟಕಕಾರರಿಗೊಂದು ಸವಾಲೆಸೆಯಬಲ್ಲ ವಸ್ತುವಾಗಿದೆ' ಎಂಬ ಮಲೆಯಾಳದ ಖ್ಯಾತ ನಾಟಕಕಾರ ಜಿ.ಶಂಕರ ಪಿಳ್ಳೆಯವರ ಮಾತುಗಳಿಂದ ಸ್ಫೂರ್ತಿ ಹೊಂದಿ ಅವರು ಬರೆದ ನಾಟಕ ಇದು.
ಮೂಲ ಮಲೆಯಾಳದಲ್ಲಿರುವ. 29 ಪುಟಗಳ ಈ ನಾಟಕವನ್ನು ಕೇರಳದ ಕೋಝಿಕ್ಕೋಡು ಜಿಲ್ಲೆಯ ವಡಗರದಲ್ಲಿರುವ ಟಿ.ಕೆ.ವಿಜಯರಾಘವನ್ ಮತ್ತು ಕೆ.ಪಿ.ಸುನಿಲ್ ಕುಮಾರ್ ಎಂಬವರು ಆಸಕ್ತಿ ವಹಿಸಿ ಆರು ಭಾಷೆಗಳಿಗೆ (ಹಿಂದಿ :ಡಾ.ಹೀನಾ , ಕನ್ನಡ :ಡಾ.ನಾ.ದಾ.ಶೆಟ್ಡಿ, ತಮಿಳು : ಡಾ.ಎಂ.ರಘುರಾಮ್, ಸಂಸ್ಕೃತ: ಎ ಅ.ಅಮ್ಮಿಣಿ ವರ್ಗೀಸ್, ಇಂಗ್ಲಿಷ್: ಕೆ.ಪಿ.ಸುನಿಲ್ ಕುಮಾರ್) ಅನುವಾದ ಮಾಡಿಸಿ Nirvan: Hexalingual Edition - A Play by Thayyullathil Rajan ಎಂದು ಪ್ರಕಟಿಸಿದ್ದಾರೆ. ಹೆಸರೇ ಸೂಚಿಸುವಂತೆ ಇದು ಗೌತಮ ಬುದ್ಧನಿಗೆ ಸಂಬಂಧಿಸಿದ ದಂತಕಥೆಗಳಿಗೆ ಕಾಲ್ಪನಿಕ ಸ್ಪರ್ಶ ನೀಡಿ ತನ್ನದೇ ಆದ ಒಂದು ಗುರಿಯನ್ನಿಟ್ಟುಕೊಂಡು ಸಾಗುವ ಒಂದು ನಾಟಕ. ನಾವು ಇತಿಹಾಸದಲ್ಲಿ ಕಾಣುವ ಗೌತಮ ಬುದ್ದನ ಕೆಲವು ಚಹರೆಗಳಷ್ಟೇ ಇಲ್ಲಿ ಇವೆ. ಬುದ್ಧನು ನಿರ್ವಾಣ ಹೊಂದುವ ಹಂತವನ್ನು ತಲುಪುವುದು ಒಂದು ಭಿನ್ನವಾದ ರೀತಿಯಲ್ಲಿ. ಅಂದರೆ ಬೋಧಿವೃಕ್ಷದ ಬುಡದಲ್ಲಿ ಕುಳಿತು ಕಣ್ಣುಮುಚ್ಚಿ ಧ್ಯಾನಿಸುವುದರ ಮೂಲಕ ಅಲ್ಲ. ಅಪಾರ ಜೀವನಾನುಭವವಿದ್ದ ಓರ್ವ ಗುರುಗಳ ಜತೆಗೆ ದೇಶದುದ್ದಕ್ಕೂ ತಿರುಗಾಟ ಮಾಡಿ ಲೋಕಾನುಭವ ಪಡೆದುಕೊಳ್ಳುವುದರ ಮೂಲಕ.

ಗೌತಮನಿಗೆ ಜತೆಯಾಗಿ ಸಿಗುವ ಗುರುಗಳು ಆತನಿಗೆ ಕುಷ್ಠರೋಗಿಯನ್ನೂ ಹಣ್ಣು ಮುದುಕನನ್ನೂ ಸಾವಿನ ಭಯಾನಕ ದೃಶ್ಯವನ್ನೂ ಆರಂಭದಲ್ಲಿ ತೋರಿಸುತ್ತಾರೇನೋ ನಿಜ.‌ ಆದರೆ ಅನಂತರ ಇವೆಲ್ಲಕ್ಕೂ ರೂಪಕವಾಗಿ ನಿಲ್ಲುವ ದೃಶ್ಯಗಳನ್ನೂ ತೋರಿಸುತ್ತಾರೆ. ರಾಜನ ಕೈಕೆಳಗೆ ಕೆಲಸ ಮಾಡುವವರು ಭ್ರಷ್ಟಾಚಾರ ಮಾಡಿ ಲಂಚ ವಸೂಲಿ ಮಾಡಿ ಜನಸಾಮಾನ್ಯರನ್ನು ಶೋಷಿಸುವುದೇ ಕುಷ್ಟಕ್ಕಿಂತಲೂ ಭಯಾನಕವಾದ ರೋಗವೆಂದು ಸಾಬೀತು ಪಡಿಸುತ್ತಾರೆ. ಮುಂದೆ ಸುಂದರಿಯಾದ ಪತ್ನಿಯನ್ನು ಹೊಂದಿದ ಶಕ್ತಿಶಾಲಿಯಾದ ಗಂಡ ಚಾರುದತ್ತ ತನ್ನ ಹೆಂಡತಿಯನ್ನು ಮೇಲಧಿಕಾರಿಯಾದ ದೇವದತ್ತ ಕಾಮಿಸಿ ತನ್ನ ಎದುರಿಗೇ ಅವಳನ್ನು ಎಳೆದೊಯ್ದರೂ ಏನೂ ಮಾಡದೆ ಭೀರುವಿನಂತೆ ಸುಮ್ಮನಿರುವುದನ್ನು ವಾರ್ಧಕ್ವೆಂದು ಕರೆಯುತ್ತಾರೆ. ಮೂರನೆಯದಾಗಿ ರೈತರ ಸಂಘಟನೆಯ ನಾಯಕ ಸಂಘಮಿತ್ರನು ರಾಜನು ಕಟ್ಟಿಸುವ ಅಣೆಕಟ್ಟಿನಿಂದಾಗಿ ನದಿಯ ನೀರೆಲ್ಲವೂ ಅವನಿಗೆ ಬೇಕಾದವರ ಪಾಲಾಗಿ ಬಡರೈತರು ನೀರು ಸಿಗದೆ ಕಂಗಾಲಾಗುವ ಪರಿಸ್ಥಿತಿ ಬಂದಾಗ ಅವರನ್ನು ರಾಜನ ವಿರುದ್ಧ ಎತ್ತಿಕಟ್ಟುತ್ತಾನೆ. ಮುಷ್ಕರ ಹೂಡಿಸುತ್ತಾನೆ. ಆದರೆ ಕೊನೆಗೆ ರಾಜನೊಂದಿಗೆ ಅವನಿಂದ ಒಂದು ಉಡುಗೊರೆ ಪಡೆಯುವುದರ ಮೂಲಕ ರಾಜಿಮಾಡಿಕೊಂಡು ತನ್ನನ್ನು ನಂಬಿದವರಿಗೆ ಮೋಸ ಮಾಡುತ್ತಾನೆ. ಆ ವಿಷಯ ಕೇಳಿ ಅನುಯಾಯಿ ರೈತರೆಲ್ಲರೂ ಸತ್ತು ಬಿಳುವರು. ವಸಂತಸೇನನೆಂಬ ಒಬ್ಬ ಮಾತ್ರ ಅರೆಸತ್ತ ಸ್ಥಿತಿಯಲ್ಲಿರುತ್ತಾನೆ.

ಸಮಾಜದಲ್ಲಿ ಆಗುವ ಅನ್ಯಾಯ, ಅನಾಚಾರ, ಮೋಸ, ವಂಚನೆ, ಸ್ವಾರ್ಥಸಾಧನೆಗಳಿಗೆ ಸಾಕ್ಷಿಯಾಗಿ ಈ ಮೂರು ದೃಶ್ಯಗಳನ್ನು ತೋರಿಸಿಯಾದ ನಂತರ ಕೊನೆಯ ದೃಶ್ಯ ಬಹಳ ಪರಿಣಾಮಕಾರಿಯೂ ಶಕ್ತಿಯುತವೂ ಆಗಿದೆ. ಅಲ್ಲಿಗೆ ಗೌತಮ ಗುರುವಿನೊಂದಿಗೆ ಬಂದು ಈ ಎಲ್ಲ ಅವ್ಯವಸ್ಥೆಗಳಿಗೆ ಪರಿಹಾರವೇನೆಂದು ಕೇಳುತ್ತೇನೆ. 'ಇಷ್ಟು ಲೋಕಾನುಭವ ಪಡೆದ ನಂತರ ನೀನೇ ಕಂಡುಕೊಳ್ಳಬೇಕು ಎಂದು ಗುರು ಹೇಳುತ್ತಾನೆ. ಗೌತಮ ತಪಸ್ಸಿನ ಭಂಗಿಯಲ್ಲಿ ಧ್ಯಾನಸ್ತನಾಗಿ ಕುಳಿತುಕೊಳ್ಳುತ್ತಾನೆ. ಕಣ್ಣು ತೆರೆದಾಗ ಭಗ್ಗೆಂದು ಬೆಳಕುಗಳು ಹತ್ತಿಕೊಳ್ಳುತ್ತವೆ. ಗೌತಮ ಎದ್ದು ವಸಂತಸೇನನನ್ನು ಕರೆದುಕೊಂಡು ಜನರ ಮಧ್ಯ ಹೋಗಿ ನಿಲ್ಲುತ್ತಾನೆ. ಜನರು ಅರಿವು ಪಡೆಯುವುದರ ಮೂಲಕ ಬದುಕನ್ನು ಅದು ಇದ್ದಂತೆ ಸ್ವೀಕರಿಸುವುದೇ ಪರಿಹಾರವೆಂಬ ಸೂಚನೆಯೊಂದಿಗೆ ನಾಟಕ ಮುಗಿಯುತ್ತದೆ.

ಇಲ್ಲಿ ಗೌತಮನ ಕಥೆಯೊಂದಿಗೆ ಜಗತ್ತು ಹೇಗಿದೆ ಎಂಬುದರ ಪರಿಚಯವನ್ನು ಮಾಡುವ ದೃಶ್ಯಗಳನ್ನು ಸೇರಿಸಿಕೊಂಡದ್ದು ನಾಟಕಕ್ಕೊಂದು ಭಿನ್ನ ಆಯಾಮವನ್ನು ನೀಡುತ್ತದೆ. ರಂಗದ ಮೇಲೆ ಬಹಳ ಪರಿಣಾಮಕಾರಿಯಾಗಬಹುದಾದ ನಾಟಕವಿದು.

MORE FEATURES

‘ಕೊನೆಯ ಕುಣಿಕೆ’ ಹೆಸರಿನಲ್ಲಿ ಭುಟ್ಟೊ ನಾಟಕ..

06-01-2025 ಬೆಂಗಳೂರು

“ಇದೀಗ ಭುಟ್ಟೋ ನಾಟಕ “ಕೊನೆಯ ಕುಣಿಕೆ" ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದೆ. ಆಗಾಗ ನನ್ನನ್ನು ಕನ್ನಡದ...

ಸುಳಿವುಗಳನ್ನು ಓದಿ ಸೂಕ್ತ ಉತ್ತರ ಕಂಡುಹಿಡಿಯಬೇಕು

06-01-2025 ಬೆಂಗಳೂರು

“ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ,...

ಸಾಗರ ಸೀಮೆಯ ನಿಷ್ಕಲ್ಮಶ ಹೃದಯ, ನೆಹರು ನಗರದ ಅಚ್ಚಳಿಯದ ನಗು

06-01-2025 ಬೆಂಗಳೂರು

"“ಬನ್ನಿ, ಬನ್ನಿ” ಎಂದು ನನ್ನನ್ನು ಕೂರಿಸಿದ ಅವರು ಒಳಗಿದ್ದ ನಾ.ಡಿ. ಅವರಿಗೆ ಕೊಂಕಣಿಯಲ್ಲಿ ನನ್ನ ಬ...