ಅಕ್ಷರಗಳ ಸಖ್ಯ ನಿತ್ಯ ಸಿಗುವಂತೆ ವಿಧಿ ಹರಸಲಿ


“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್ಚಿರುವ ಪರಿಸರ ನಮ್ಮದು. ಅನುಭವಗಳು ಹೀಗೊಂದು ರೂಪ ಪಡೆದಾಗ ಮನಸ್ಸಿಗೆ ಹತ್ತಿರಾಗಬಹುದಾದ ಭರವಸೆ ಇದೆ,” ಎನ್ನುತ್ತಾರೆ ನಂದಿನಿ ಹೆದ್ದುರ್ಗ. ಅವರು ತಮ್ಮ “ಒಂದು ಗುಲಾಬಿ ನೋಟು” ಕೃತಿಗೆ ಬರೆದ ಲೇಖಕರ ಮಾತು.

ಮತ್ತೂ ನನ್ನ ಸುತ್ತಲೇ ನಾನು ಗಿರಕಿ ಹೊಡೆದಿದ್ದೇನೆ. ಬರೆಯುವವರ ಬದುಕಿನಲ್ಲಿ ಒಂದು ಹಂತಕ್ಕೆ ಅನುಭವಗಳ ಕೊಡುಗೆ ಮುಗಿದು ಓದು ತನ್ನ ಕೈಂಕರ್ಯ‌ ಸಲ್ಲಿಸುತ್ತದೆ ಎನ್ನುತ್ತಾರೆ ತಿಳಿದವರು. ಏಕಾಂತ ಲೋಕಾಂತವಾಗಬೇಕು ,ವ್ಯಷ್ಟಿ ಸಮಷ್ಟಿತನ ತಳೆಯಬೇಕು ಆಗ ಮಾತ್ರ ಬರಹಕ್ಕೆ ಸಾರ್ಥಕತೆ ‌ ಎನ್ನುವವರ ನಡುವೆ ‘ನನ್ನದೇ ಸಂಗತಿಗಳನ್ನು ನನಗೆ ಇನ್ನೂ ಕಾಲ ಹೇಳಲಿಕ್ಕಿದೆ’ ಎನ್ನುತ್ತಿದ್ದೇನೆ. ಯಾವುದನ್ನು ಹೇಳಬೇಕು ಯಾವುದನ್ನು ಹೇಳಬಾರದು ಎನ್ನುವುದಕ್ಕಿಂತ ಹೇಗೆ ಹೇಳಬೇಕು ಹೇಗೆ ಹೇಳಬಾರದು ಎನ್ನುವುದರ ಕಡೆಗೆ ನನ್ನ ಗಮನ. ಬರವಣಿಗೆ ನಾಸ್ಟಾಲಜಿಕ್ ಆಗಬಾರದು ಎನ್ನುವ ಗುಟ್ಟು ಗೊತ್ತಿದ್ದರೂ ನೆನಪುಗಳ ನೆರಳು ಹಿತ.

ಹಾಗೆ ನೋಡಲಿಕ್ಕೆ ಹೋದರೆ ಬದುಕಿನ ಪ್ರತಿ ಹಂತವೂ ಚೈತ್ರ ವಸಂತ ಮಾಗಿಗಳ ಪರಿಷೆ. ನಿನ್ನೆಯ ಸಂಕಟಗಳು ದೊಡ್ಡವು ಎಂದುಕೊಳ್ಳುವಾಗಲೇ ಇಂದು ಮೂಡುವ ಮುಗುಳುನಗು ಹಾದುಬಂದ ಅಗ್ನಿದಿವ್ಯದ ಕುರುಹು, ಜೀವ ಅನುಭವಿಸಿದ ಹರಹು.‌ ಇಂದಿನ ಸಂಕಟಗಳನ್ನು ಇಂದಿಗೇ ಮುಗಿಸಿ ನಾಳೆ ಮೂಡಬಹುದಾದ ಹೊಸ ಬೆಳಕಿಗಾಗಿ ನಿರೀಕ್ಷೆಯಿಂದ ಕಾಯುವುದು ಕಾಲ ಕಲಿಸಿದ ಪಾಠ.

ಕಾವ್ಯ ಜೀವದ್ರವ್ಯ ಎನ್ನುವ ನಾನು ನಾಲಿಗೆ ತುರಿಸಿದಾಗ ಹರಟೆಗೆ ಇಳಿದಿದ್ದಿದೆ. ಕಥೆಗಳ‌ ಆಸರೆಯಲ್ಲಿ ಹಗುರಾಗಿದ್ದಿದೆ. ಕೃಷಿ ಎನ್ನುವ ಮಾಂತ್ರಿಕತೆ ಅಕ್ಷರದ ಆಸರೆ ಕೊಟ್ಟು ಹರಸಿದ್ದಿದೆ. ಒಳಗಿನ ಕುದಿ ಅಕ್ಷರ ರೂಪಕ್ಕೆ ಇಳಿದಾಗ ದಕ್ಕಿದ ಸಮಾಧಾನ ನಿಜದಲ್ಲಿ ಅಪರೂಪದ್ದು. ಬರೆಯುವವರಿಗಷ್ಟೇ ತಿಳಿಯುವ ಉತ್ಕಟತೆ ಅದು. ಹೀಗೆ ಬರೆಯುವಾಗ ನಿಜದ ನಾನು ಬರೆದ ಬರಹದಲ್ಲಿ ಎಷ್ಟಿದ್ದೇನೆ ಎನ್ನುವುದು ನನ್ನ ಪಾಲಿಗೆ ಬಹುಮುಖ್ಯ ಸಂಗತಿ. ಲೋಕದ ಕಣ್ಣಿಗೆ ಕಾಣುವ ನಾನೂ , ನಿಜದ ನಾನೂ ಬಹಳವೇ ಭಿನ್ನ ಎನ್ನುವುದು ನನಗಷ್ಟೇ ಗೊತ್ತಿರುವ ಸತ್ಯವಾಗಿರುವುದರಿಂದ ಹೇಳಲೇ ಬೇಕಾದ ಸತ್ಯಗಳ ಕೊಡ ಮತ್ತೆಮತ್ತೆ ತುಂಬುತ್ತಲೇ ಇರುತ್ತದೆ. ಮಹಾ ದೈರ್ಯಗಾತಿಯಂತೆ ತೋರಿಸಿಕೊಳ್ಳುವ ಈ ಜೀವಕ್ಕೆ ವಿಧಿಯ ಅಂಜಿಕೆ ಅಗತ್ಯಕ್ಕಿಂತ ತುಸು ಹೆಚ್ಚೇ ಇದೆ. ಎಲ್ಲರನ್ನೂ ನಂಬುವ ಬುದ್ದಿಯಿಂದಾಗಿ ಆಗೀಗ ಹೊಡೆತವೂ ಸಿಕ್ಕಿದೆ. ಸ್ವಂತದವರು ಎನಿಸಿಕೊಂಡವರ ಸಣ್ಣತನ ಸಹನೆಯ ಪಾಠ ಕಲಿಸುತ್ತಿದೆ. ನಿಮಿತ್ತದ ನೋವುಗಳನ್ನು ಅನುಭವಿಸಿಯಾಗಿದೆ, ಉಳಿದಿರುವುದು ಇನ್ನೂ ಸಂಭ್ರಮವಷ್ಟೆ ಅಂತ ವಿಧಿಗೆ ತಾಕೀತು ಮಾಡಿರುವ ಘಟ್ಟ ಇದು.

ಬದುಕಿನ ಅನುಭವಗಳು ಕಲಿಸಿದ ಆಆ ಇಈ ಗೆ ನನ್ನ ಅಲ್ಪಸ್ವಲ್ಪ ಭಾವ ವಿನಿಯೋಗಿಸಿ ಏನೋ ಬರೆದು ಆಹಾ ಎನ್ನುತ್ತಾ ಸ್ವಮೋಹಕ್ಕೆ ಒಳಗಾದ ಹೊತ್ತಿನಲ್ಲೇ ಓದಿದವರೂ ಈ ಬರಹದ ಪ್ರಾಮಾಣಿಕತೆಗೆ ಬೆರಗಾದೆ ಅಂತ ಬೆನ್ನು ತಟ್ಟುತ್ತಿದ್ದಾರೆ. ಇದು ಕಾರಣ ಜೀವ ಮೆದುವಾಗಿದೆ. ಮುಳ್ಳುಗಿಡಗಳೇ ತುಂಬಿದ್ದ ಬದುಕಿನ ಹಾದಿಗೆ ಅಕ್ಷರಗಳು ಜೊತೆಯಾದವು. ಅಚ್ಚರಿ ಎಂದರೆ ಅಲ್ಲಿಯವರೆಗೂ ಅಲ್ಲೇ ಇದ್ದೂ ಕಾಣದಿದ್ದ ಚಿಟ್ಟೆ ಹೂವು ಹಕ್ಕಿ ಅಳಿಲು ಇರುವೆ ಹಾವು ಹಲ್ಲಿಗಳು ಅದೇ ಮುಳ್ಳುಪೊದೆಯಲ್ಲಿ ಕಾಣಿಸುತ್ತಿವೆ. ನಿನ್ನ ಪ್ರೀತಿಸುತ್ತೇವೆ ಎನ್ನುತ್ತಿವೆ. ಮುಳ್ಳುಗಳು ಚುಚ್ಚಿದರೂ ನೆತ್ತರು ಒಸರದಷ್ಟು ಹಗೂರ ತಾಗುತ್ತವೆ. ಇದು ಬೆರಗಲ್ಲದೆ ಮತ್ತೇನು ಅಂತ ನನ್ನ ನಾನೇ ಕೇಳಿಕೊಳ್ಳುತ್ತಿದ್ದೇನೆ. ಇಷ್ಟಕ್ಕೆ ನೆಮ್ಮದಿಯಾಗಿದ್ದರಷ್ಟೇ ಸಾಕೇ. ಉಹು. ಮೂಡಿರುವ ಹಳೆಯ ಯುದ್ಧಕಲೆಗಳು ನನ್ನ ಕುರಿತೂ ಹೇಳು ನನ್ನ ಸಲುವಾಗಿ ಮಾತನಾಡು ಅಂತ ಕುಂತಲ್ಲಿ ನಿಂತಲ್ಲಿ ಮನವಿ ಪತ್ರ ಕೊಡುತ್ತವೆ. ‘ಹೋಗ್ರಿ ಅತ್ಲಾಗಿ’ ಅಂತ ತಳ್ಳಿ ಎದುರು ದಾರಿಯ ಹೂಮರವನ್ನು ಕುರಿತು ಬರೆಯುವಷ್ಟು ಒರಟು ಜೀವ ನನಗಿಲ್ಲ. ಬರೆಸಿಕೊಳ್ಳುವ ಬಯಕೆಯಿಟ್ಟು ಬಂದದ್ದನ್ನು ಒಲಿದಂತೆ ನಿರೂಪಿಸಿದ್ದೇನೆ.

ಬರೆವ ಮಂದಿಗೆ ಒಂದಿಷ್ಟು ಹೆಚ್ಚೇ ಮರ್ಲು ಎನ್ನುವುದು ನಮ್ಮ ಕಡೆಗೆ ಬಳಕೆಯಲ್ಲಿರುವ ಭಾಷೆ. ಕೆಲವೊಮ್ಮೆ ಅದು ಸತ್ಯ ಎನ್ನುವುದು ನನ್ನ ಅರಿಕೆಗೆ ಬಂದಾಗ ಸಣ್ಣಗೆ ದಿಗಿಲು. ಆದರೆ ಈ ಹುಚ್ಚಿನಿಂದಾಗಿ ನನ್ನ ಸುತ್ತಿಗೆ ತೊಂದರೆಯಂತೂ ಇಲ್ಲ. ಹೆಚ್ಚೆಂದರೆ ಸಣ್ಣಸಣ್ಣ ಸಂಗತಿಗಳಿಗೂ ನೋಯುವ ಬೇಯುವ ಕಣ್ಣು ತುಂಬಿಕೊಳ್ಳುವ ಬಗೆಯಿಂದ ಜೊತೆಯಲ್ಲಿರುವವರಿಗೆ ಆಗಾಗ ಕಿರಿಕಿರಿಯಾದೀತು. ಈ ಚಾಳಿ ದಿನಚರಿಯನ್ನು ಹೈರಾಣಾಗಿ -ಸುತ್ತಿದೆಯಾದರೂ ಅದು ಕೊಡುವ ಮಧುರ ಸಂಕಟಗಳು ನನ್ನ ಇಳಿರಾತ್ರಿಗಳ ಕನವರಿಕೆಗೆ‌ ಕಿರು ಕಾಣಿಕೆ ನೀಡುತ್ತಿವೆ.

ಹದಿನೇಳರ ಎಳೆತನದಲ್ಲಿಯೆ ಮಡಿಲಲ್ಲಿದ್ದ ಮಗ ‘ಅಮ್ಮಾ.. ಅದೇನು ಇದ್ಯಾಕೆ ‘ ಅಂತೆಲ್ಲ ಕೇಳುತ್ತಿದ್ದಾಗ ನಿನಗಿಂತ ಸ್ವಲ್ಪೇ ದೊಡ್ಡವಳು ಮಗಾ ನಾನು ಎನ್ನುವ ಉಮೇದಾಗ್ತಿತ್ತು. ಆ ವಯಸ್ಸಿಗೆ ಎದುರಿಸಲಾಗದ ಸಂಕಟವನ್ನು ಅವಮಾನವನ್ನು ಎಳೆಯ ಮಗನ ಮೇಲೇ ಅಡರಿದ ನೆನಪು ಬೇಡವೆಂದರೂ ಬರುತ್ತಿರುವ ಹೊತ್ತು ಇದು. ಮನೆಯ ಹಿರಿಗೋಡೆಯ ಮೇಲಿದ್ದ ವರಮಹಾಲಕ್ಷ್ಮಿಯ ಫೋಟೋ ನೋಡಿ ನನ್ನನ್ನು ತನ್ನ ಕಿರುಬೆರಳಲ್ಲಿ ಹಿಡಿದು ಕರೆತಂದ ಮೂರು ವರ್ಷದ ಮಗ ‘ನೋಡು ಅಮ್ಮಾ …ನಿನ್ನ ಥರವೇ ಇದೆ ಇದು!’ ಅಂದಿದ್ದು ಇಲ್ಲಿಯವರೆಗೆ ನಾನು ಕೇಳಿದ ಅತ್ಯಂತ ಸುಂದರ ಕಾವ್ಯ. ನಿಮ್ಮ ಬೆಳೆಸುವಾಗ ಸಾಕಷ್ಟು ಎಡವಿದ್ದೇನೆ ಮಗಳೆ, ಎಳೆ ಮೈಯಿ ಎನ್ನದೆ ಕೈ ಸೋಲುವಷ್ಟು ಹೊಡೆದಿದ್ದೇನೆ ಅಂತ ನೊಂದುಕೊಳ್ಳುವಾಗ ಮಗಳು ‘ನೋ ಅಮ್ಮಾ..ನೀನೂ ಚಿಕ್ಕವಳಿದ್ದೆ ಆಗ. ತಗ್ಗಿಬಗ್ಗಿದಷ್ಟೂ ಮೇಲೊಂದು ಗುದ್ದು ಕೊಡುವವರ ನಡುವೆ ಇದ್ದೆ. ನಿನ್ನ ಪ್ರೀತಿಸಬೇಕಾದವರೇ ಅವಮಾನಿಸುವ ಹೊಣೆ ಹೊತ್ತಕೊಂಡರು. ನಿನ್ನ ಸಮಸ್ಯೆಗಳೂ ದೊಡ್ಡವಿದ್ದವು’ ಅಂತ ಸಮಾಧಾನಿಸಿದಾಗ ಮಗಳು ತಾಯಾಗುವ ಅಪೂರ್ವ ಕ್ಷಣವನ್ನು ಆತ್ಮಕ್ಕೆ ತುಂಬಿಸಿಕೊಳ್ಳುತ್ತೇನೆ.

ನಲವತ್ತು ಮನೆಗಳಿರುವ ಈ ನನ್ನ ಪುಟ್ಟ ಊರಿನಲ್ಲಿ ಅಂಗಡಿಯಿಲ್ಲ, ಬಸ್ಸು ಬರುವುದಿಲ್ಲ, ಬ್ಯಾಂಕು ಮುಂತಾದ ಬದುಕಿನ ಅನಿವಾರ್ಯ ಸಂಗತಿಗಳು ಇಲ್ಲ ಎನ್ನುವುದನ್ನು ಮರೆಯುವಷ್ಟು ತಂತ್ರಜ್ಞಾನ ಮುಂದುವರೆದಿದೆ. ಮೊಬೈಲ್ ಬ್ಯಾಂಕಿಂಗು, ಮೇಯ್ಲು ಕೂತಲ್ಲೇ ನಡೆಯುತ್ತವಾದರೂ ನಗರದ ಗೌಜೂ ಸೆಳೆಯುತ್ತದೆ. ಕನಿಷ್ಟ ನಾಲ್ಕಾರು ವರ್ಷವಾದರೂ ನಗರದ ಅನಾಮಿಕತೆಗೆ ಜೀವವೊಡ್ಡಿಕೊಳ್ಳಬೇಕು ಎನ್ನುವುದು ನನ್ನ ಅನಾದಿಕಾಲದ ಕನಸು.

ಆದರೆ ನಾವು ಹಳ್ಳಿಗರು. ಮನೆಯಿರಲಿ , ಊರನ್ನೂ ಬದಲಾಯಿಸುವುದಿಲ್ಲ. ಹುಟ್ಟಿ ಸಾಯುವವರೆಗೂ ನಮಗಿರುವುದು ಒಂದೇ ಊರು.ಒಂದೇ ಮನೆ, ಅದೇ ಮಣ್ಣು ಅದೇ ಬಾವಿ‌ ಅದೇ ನೆರೆಹೊರೆ.

‘ಆಗು ನೀ ಅನಿಕೇತನ’ ಎನ್ನುವುದನ್ನ ‘ಆಗು ನೀ‌ ನಿಕೇತನ’ ಮಾಡಿಕೊಂಡವರು ನಾವು. ಹಳ್ಳಿಯ ಪ್ರತಿ ಚಲನೆಗೂ ಹೃದಯ ಮಿಡುಕುವಷ್ಟು ಊರು ಸ್ವಂತದ್ದಾಗುವುದು ಸದ್ಯದ ‌ಸುಖ.

ಆದರೆ…ಮಹಾನಗರಗಳಲ್ಲಿ ನಡೆಯುವ ಭಾವ ಸಂಬಂಧಿ ಕಾರ್ಯಕ್ರಮಗಳು ಜೀವಕ್ಕೆ ಆಮಿಷ ಒಡ್ಡುತ್ತವೆ. ಕೇವಲ ಮನೆವಾರ್ತೆಯೇ ಉಸಾಬರಿಯಾದಾಗ ‘ಇದು ನಾನಲ್ಲ ಇದು ನಾನಲ್ಲ’ ಎನ್ನುವ ಒಳಧ್ವನಿ ಎಬ್ಬಿಸುವ ಗೌಜಿಗೆ ವಿಚಿತ್ರ ಆಯಾಸ. ತವರಿನ ನಾಲ್ಕು ಮನೆಯ ಊರೂ ಇಲ್ಲಿನ ನಲ್ವತ್ತು ಮನೆಯ ಜೋರೂ ಅದದೇ ಜೀವಂತಿಕೆಯಿಂದಲೂ ಏಕತಾನತೆಯಿಂದಲೂ ಸಲಹುತ್ತಿರುವ ಹೊತ್ತಿನಲ್ಲಿ ಸಹಿಸುವ ಸಂಭ್ರಮಿಸುವ ಬುದ್ದಿ ಬಂದಿದೆ. ಬಾಳುವ ಮತ್ತು ಕೆರಳುವ ನಡುವಿನ‌ ಸಮಸ್ಥಿತಿಗೆ ತಲುಪಲು ಈ ನಡುವಯಸ್ಸೇ ಬರಬೇಕೇನೊ..!?

ಒಳಗಿರುವ ಚೆಲ್ಲುಚೆಲ್ಲು ಹೆಣ್ಣಿನ ಅತೃಪ್ತಿ ಹೆಚ್ಚಾದಾಗೆಲ್ಲ ನನ್ನ ಕಂಫರ್ಟ್ ಝೋನಿನಿಂದ ಆಚೆಗೆ ಕಾಲಿಡುತ್ತೇನೆ. ಹೊರಗಿನ ಸಮಚಿತ್ತ ಪ್ರಪಂಚ ಕೂಡ ಕನ್ನೆ ಕಣ್ಣಿಗೆ ಅಪರೂಪವಾಗಿ ಕಾಣುತ್ತದೆ. ನಡುರಾತ್ರಿಯಲ್ಲಿ ಒಮ್ಮೆ ಎದ್ದು ನೋಡಿದರೆ ನಮ್ಮದೇ ಮನೆಯಂಗಳ,ಹಿತ್ತಿಲು ,ನಿತ್ಯವೂ ಓಡಾಡುವ ಅದೇ ಹಾದಿ ,ಸುತ್ತೂ ಬೆಳೆದ ನಿಂತ ತೆಂಗು ಅಡಿಕೆ, ತುದಿಗೊಂಬೆಯಲ್ಲಿ ಮೊಗ್ಗು ಮಲಗಿಸಿಕೊಂಡು ಅರೆನಿದ್ದೆಯಲ್ಲಿ ಹೊಯ್ದಾಡುವ ದಾಸವಾಳ ಎಲ್ಲ ಎಲ್ಲವೂ ಹೊಸತಾಗಿ ಕಾಣಿಸುವ ಬೆರಗು! ದೂರಕ್ಕೆ ಒಮ್ಮೊಮ್ಮೆಯಾದರೂ ಈ ಸುಖ ನನ್ನದಾಗುತ್ತಲೇ ಇದೆ. ಈ ಉರಿಬಿಸಿಲಲ್ಲಿ ,ಸುರಿವ ಮಳೆಯಲ್ಲಿ ದೂರಕ್ಕೆ ಪ್ರಯಾಣ ಬೇಡ ಅಂತ ನೆಪ ಹೇಳುವಾಗಲೆಲ್ಲ ಅದಕ್ಕೆ ನಿಜವಾದ ಕಾರಣ ಬೇರೆಯೇ ಇರುತ್ತದೆ. ಲೋಕದೆಲ್ಲ ಹೆಣ್ಣುಮಕ್ಕಳಂತೆ ಇಲ್ಲೂ ಸ್ತ್ರೀ ಲಿಂಗಕ್ಕೆ ಎರಡು ದಿನ ಹೆಚ್ಚಿಗೆ ರಜ ಕೊಡುವುದಕ್ಕೆ ಸಂಸಾರ ಕಂಜೂಸು ಮಾಡುತ್ತದೆ. "ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು" ಎಂಬ ಸೊಗಸಾದ ಸಾಲು ನೆನೆದು ದೂರವಾದರೂ ಸೈ ಹತ್ತಿರಕ್ಕೂ ಒಯ್ಯಿ ಅಂತಂದುಕೊಳ್ಳುವುದು ನನಗಿಷ್ಟ.

ಮನೆಯೇ ಮಂತ್ರಾಲಯವಾದವರಿಗೆ ಸಣ್ಣಪುಟ್ಟ ಪ್ರಯಾಣಗಳೂ ಬೆರಗನ್ನು ತೋರುತ್ತವೆ. ಅಂತಹ ಪ್ರಯಾಣಗಳಲ್ಲಿ ಎದುರಿಸಿದ ಪ್ರಸಂಗಗಳನ್ನು ಒಳಗೊಂಡ ಬರಹಗಳು ಈ ಸಂಕಲನದಲ್ಲಿವೆ.

ಇಲ್ಲಿನ ಬರಹಗಳು ಮಗ ಆರು ವರ್ಷದವನಿಂದ ಹಿಡಿದು ಈಗಿನ ಸರ್ಕಾರಿ ಅಧಿಕಾರಿಯ ಹುದ್ದೆಯೇರುವವರೆಗೂ ಬೆಳೆದು ನಿಂತಿವೆ. ಕೈಗೂಸಾಗಿ ಹೊಟ್ಟೆಗೆ ಒದೆಯುವ ಪುಟ್ಟ ಮಗಳ ಕಥೆಗಳು ಬೆಳೆದು ಅಮ್ಮನನ್ನು ತನ್ನ ದುಡ್ಡಿನಿಂದ ಸ್ಪಾಗೆ ಕರೆದುಕೊಂಡು ಹೋಗುವವರೆಗೆ ಹರವು ಪಡೆದಿವೆ. ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್ಚಿರುವ ಪರಿಸರ ನಮ್ಮದು. ಅನುಭವಗಳು ಹೀಗೊಂದು ರೂಪ ಪಡೆದಾಗ ಮನಸ್ಸಿಗೆ ಹತ್ತಿರಾಗಬಹುದಾದ ಭರವಸೆ ಇದೆ. ಹೇಳಲೇ ಬೇಕಾದದ್ದು ಇನ್ನೂ ಒಳಗೇ ಉಳಿಯುತ್ತಿದೆ. ವೈಯಕ್ತಿಕವನ್ನು ಸಾರ್ವತ್ರಿಕವಾಗಿಸಲು ಹೊರಟಾಗ ಇದಿರಾಗುವ ದಿಗಿಲುಗಳೇ ಬರಹಕ್ಕೆ ಆಸರೆ. ಎಂದಿಗೂ ಅದು ನನ್ನನ್ನು ಬಿಟ್ಟು ಹೊರಡದಿರಲಿ. ಅಕ್ಷರಗಳ ಸಖ್ಯ ನಿತ್ಯ ಸಿಗುವಂತೆ ವಿಧಿ ಹರಸಲಿ. ಉಳಿದಿದ್ದನ್ನು ಹೇಳುತ್ತಲೇ ಇರುವ ಭಾಗ್ಯ ನನ್ನದಾಗಲಿ.

- ನಂದಿನಿ ಹೆದ್ದುರ್ಗ

MORE FEATURES

‘ಕೊನೆಯ ಕುಣಿಕೆ’ ಹೆಸರಿನಲ್ಲಿ ಭುಟ್ಟೊ ನಾಟಕ..

06-01-2025 ಬೆಂಗಳೂರು

“ಇದೀಗ ಭುಟ್ಟೋ ನಾಟಕ “ಕೊನೆಯ ಕುಣಿಕೆ" ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದೆ. ಆಗಾಗ ನನ್ನನ್ನು ಕನ್ನಡದ...

ಸುಳಿವುಗಳನ್ನು ಓದಿ ಸೂಕ್ತ ಉತ್ತರ ಕಂಡುಹಿಡಿಯಬೇಕು

06-01-2025 ಬೆಂಗಳೂರು

“ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ,...

ಸಾಗರ ಸೀಮೆಯ ನಿಷ್ಕಲ್ಮಶ ಹೃದಯ, ನೆಹರು ನಗರದ ಅಚ್ಚಳಿಯದ ನಗು

06-01-2025 ಬೆಂಗಳೂರು

"“ಬನ್ನಿ, ಬನ್ನಿ” ಎಂದು ನನ್ನನ್ನು ಕೂರಿಸಿದ ಅವರು ಒಳಗಿದ್ದ ನಾ.ಡಿ. ಅವರಿಗೆ ಕೊಂಕಣಿಯಲ್ಲಿ ನನ್ನ ಬ...