"ಕವಿತೆ ಬಗ್ಗೆ ಹಿಂದಿನಿಂದ ಇವತ್ತಿನವರೆಗೆ ವಿದ್ವಾಂಸರು ಹತ್ತಾರು ನುಡಿಗಳನ್ನು ಹೇಳುತ್ತಲೆ ಬಂದಿದ್ದಾರೆ. ಅಂದರೆ ತತ್ವವಿಚಾರಗಳಿಲ್ಲದಿದ್ದರೆ, ಯಾವ ಭಾಷೆಯೂ ಸಮೃದ್ಧತೆಯಿಂದ ಶೋಭಿಸದು ಎನ್ನುವಂತೆ ಪದ್ಮಣ್ಣನವರು ವ್ಯಾಕರಣ, ಛಂದಸ್ಸಿನ ಹೊಸಸಾಧ್ಯತೆಗಳನ್ನು ದುಡಿಸಿಕೊಂಡು ತನ್ನ ಸಮಕಾಲೀನ ಸಾಧ್ಯತೆಗಳಿಗೆ ಕಿವಿಯಾಗಿ ಕವಿಯಾದವರು," ಎನ್ನುತ್ತಾರೆ ಸಿ.ಬಿ. ಚಿಲ್ಕರಾಗಿ. ಅವರು ಪದ್ಮಣ್ಣ ಹಿರೇಗಿಡ್ಡಣ್ಣವರ್ ಅವರ ‘ಜನ್ಮಜೀವಪೊರೆ’ ಕೃತಿಗೆ ಬರೆದ ಮುನ್ನುಡಿ.
ವಿಚಾರಮಾಡುವ ಪ್ರತಿಯೊಬ್ಬ ಮನುಷ್ಯನನ್ನು ನಾನು ಕೇಳಬಯಸುತ್ತೇನೆ, ಕೊನೆಗೆ ಜೀವನದಲ್ಲಿ ಏನಾದರೂ ಉಳಿಯುತ್ತದೆಯೆ ತೋರಿಸಿ! ಎಂದು. - ಬೋದಿಲೇರ್
ಸರ್ವಗರ್ವನಳಿ ನಮ್ರವಾಗಿ ಬಾಳಿ|
ಸೃಷ್ಟಿಚಕ್ಷು ತಿಳಿ| ದೃಷ್ಟಿ ಭಿಕ್ಷು ತಾಳಿ| - ಪದ್ಮಣ್ಣ ಹಿರೇಗಿಡ್ಡಣ್ಣವರ್
ಇಂತಹ ವಿಚಾರಗಳನ್ನು ಒಳಗೊಂಡ ಕವಿ, ಹೃದಯವಿರದವ ಮನುಷ್ಯನೇ ಅಲ್ಲ ಎಂಬೊಂದು ಮಾತಿದೆ. ಆದ್ದರಿಂದ ಕವಿಯಾದವನು ಕೇವಲ ಕಾವ್ಯೋದ್ದೋಗದ ಕೃಷಿಯಲ್ಲಿ ತೊಡಗಿಸಿ ಕೊಂಡಿರುವವನು ಮಾತ್ರವಲ್ಲ. ತನ್ನ ಸುತ್ತಮುತ್ತಣ ಆಗುಹೋಗುಗಳಿಗೆ ಕಿವಿಯಾಗಬೇಕು. ಅದರಂತೆ ‘ಜನ್ಮಜೀವಪೊರೆ’ ಆರಕ್ಕರ ಖಂಡಕಾವ್ಯಕೊಟ್ಟ ಪದ್ಮಣ್ಣ ಹಿರೇಗಿಡ್ಡಣ್ಣವರ ಅವರು ತಮ್ಮ ಕಾವ್ಯದಿಂದ ಹೃದಯ ಸಿರಿವಂತಿಕೆ ತೋರಿಸಿಕೊಟ್ಟವರು. ಕಾವ್ಯವೆಂಬುದು ಮೂಲತಃ ಭಾಷೆಯ ಸಾಧ್ಯತೆಗಳನ್ನು ಪರಿಶೋಧಿಸುವ ಮಾರ್ಗ ಎಂಬ ಪ್ರಜ್ಞೆಯಿಂದ, ‘ಆರಕ್ಕರ ಖಂಡಕಾವ್ಯ’ದ ನೂತನಪ್ರಯೋಗಕ್ಕೆ ಮುಂದಾದವರು.
ಕವಿತೆ ಬಗ್ಗೆ ಹಿಂದಿನಿಂದ ಇವತ್ತಿನವರೆಗೆ ವಿದ್ವಾಂಸರು ಹತ್ತಾರು ನುಡಿಗಳನ್ನು ಹೇಳುತ್ತಲೆ ಬಂದಿದ್ದಾರೆ. ಅಂದರೆ ತತ್ವವಿಚಾರಗಳಿಲ್ಲದಿದ್ದರೆ, ಯಾವ ಭಾಷೆಯೂ ಸಮೃದ್ಧತೆಯಿಂದ ಶೋಭಿಸದು ಎನ್ನುವಂತೆ ಪದ್ಮಣ್ಣನವರು ವ್ಯಾಕರಣ, ಛಂದಸ್ಸಿನ ಹೊಸಸಾಧ್ಯತೆಗಳನ್ನು ದುಡಿಸಿಕೊಂಡು ತನ್ನ ಸಮಕಾಲೀನ ಸಾಧ್ಯತೆಗಳಿಗೆ ಕಿವಿಯಾಗಿ ಕವಿಯಾದವರು. ತನ್ನ ವಾಕ್ಯ ರಚನೆ ತನ್ನ ಭಾಗಗಳ ಕ್ರಮಬದ್ಧ ವ್ಯವಸ್ಥೆ ಕೊಡುವ ತರ್ಕಬದ್ಧ ಅಥವಾ ವ್ಯಾಕರಣಬದ್ಧ ಅರ್ಥಕ್ಕಿಂತ, ಬಹುಪಾಲು ಹೆಚ್ಚಿನ ಅರ್ಥವನ್ನು ಭಾಷೆಯು ಸಾಹಿತ್ಯದಲ್ಲಿ ಕೊಡುವಂತೆ ಮಾಡಬೇಕು ಎಂಬ ತುಡಿತದಲ್ಲಿರುವ ಕವಿಮನಸ್ಸುಗಳು ಇಂತಹ ಸಾಧ್ಯತೆಗಳಿಗೆ ಕಣ್ಣು ಹಾಕುತ್ತವೆ.
ಜನರೇ ದೇವರು| ರಾಜ ಸೇವಕನು|
ಎಂಬಾ ನಿಲುವು| ತಾಳಿರುವವನು|
ಗಾಂಧಿ ಇಲ್ಲಿ ಸತ್ತ| ಬುದ್ದ ಇಲ್ಲಿ ಸತ್ತ|
ಬಸವನೂ ಸತ್ತ| ಕೃಷವಾಗಿ ತಪ್ತ
ಪಂಪನ ಚಂಪೂ, ವಚನಕಾರರ ವಚನಗಳು ನಮ್ಮ ನಮ್ಮನ್ನು ನಾಶಗೊಳಿಸಿದ ಸಾಮಾಜಿಕ ವ್ಯವಸ್ಥೆಯ ವಿರುದ್ಧ, ಚಾತುರ್ವರ್ಣದ ವಿರುದ್ಧ ಯುದ್ಧ ಸಾರಿ ಆ ಯುದ್ಧದಲ್ಲಿ ಕರಗಿ ಹೋದವರು. ಕವಿಯಾದವನಿಗೆ ನೋವು, ಹಲ್ಲಿಲ್ಲದ ಕಡೆಗೆ ಹೊರಳುವ ನಾಲಿಗೆಯಲ್ಲ, ಹಲ್ಲನ್ನು ಕೀಳುವ ಕುತ್ಸಿತ ಮನಸ್ಸುಗಳ ತಿದ್ದುವ ಕ್ರಿಯೆ. ನಮ್ಮ ದೇಶದಲ್ಲಿ, ವ್ಯಕ್ತಿಗೌರವನ್ನು ಹೊಸಕಿಹಾಕಿದ ಜಾತಿವ್ಯವಸ್ಥೆಯನ್ನು, ಕಿತ್ತೊಗೆಯಲು ಪ್ರಜ್ಞಾವಂತರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಅದು ಬೆಳೆಯುತ್ತಾ, ಉಳಿಯುತ್ತಲೇ ಇದೆ. ಬುದ್ಧ, ಮಹಾವೀರ, ಬಸವಣ್ಣ, ಅಂಬೇಡ್ಕರ್ ಯಾರು ಬಂದು ಹೋದರೂ ಈ ಕರಾಳತೆಯನ್ನು ಸಂಪೂರ್ಣವಾಗಿ ಅಳಿಯಲಾಗಿಲ್ಲ. ಇಂತಹ ಕರಾಳತೆಯನ್ನು ಪೋಷಿಸಿಕೊಂಡದ್ದು ನಮ್ಮ ದೇಶ ಮಾತ್ರ. ಮಾನವ ಇತಿಹಾಸದಲ್ಲಿ, ಎಂದೂ ಬದಲಾಗದೆ, ತನ್ನ ಸಾಂಸ್ಕೃತಿಕ ಲಕ್ಷಣಗಳನ್ನು ಉಳಿಸಿಕೊಂಡು, ನಾಗರಿಕತೆಯ ಮಧ್ಯೆಯೇ ಬದುಕುತ್ತ ಬಂದಿದ್ದನ್ನು, ವಿಲ್‌ಡ್ಯರ‍್ಯಾಂಟ್ ತಮ್ಮ ‘ದ ಸ್ಟೋರಿ ಆಫ್ ಸಿವಿಲೈಜೇಶನ್’ ಎನ್ನುವ ಮಹಾಗ್ರಂಥದ ಸಂಪುಟವೊಂದರಲ್ಲಿ ಈ ರೀತಿ ಅಭಿಪ್ರಾಯ ಪಟ್ಟಿದ್ದಾರೆ. ‘ವಿಶ್ವದ ಯಾವ ಭಾಗದಲ್ಲೂ ಕಾಣಲಾಗದ ಒಂದು ವಿಶಿಷ್ಟ ಹಾಗೂ ಅತ್ಯಂತ ಆಶ್ಚರಕರ ಸಂಗತಿಯಂದರೆ, ಭಾರತದ ಮೇಲೆ ಅನೇಕ ವಿದೇಶಿ ದಾಳಿಗಳು ನಡೆದಿದ್ದರೂ, ಅನೇಕ ರಾಜಮನೆತನಗಳು ಆಳಿದ್ದರೂ, ನಾನಾ ವಿಧವಾದ ಸರ್ಕಾರಗಳು ಆಡಳಿತ ನಡೆಸುತ್ತಾ ಬಂದಿದ್ದರೂ, ಅಲ್ಲಿನ ಮೇಲಿನ ಜಾತಿ ಮಾತ್ರ 2500 ವರ್ಷಗಳಿಂದಲೂ ಇತಿಹಾಸದ ಉದ್ದಕ್ಕೂ ತನ್ನ ಪ್ರಭುತ್ವವನ್ನು ನಡೆಸಿಕೊಂಡು ಎಲ್ಲ ಸವಲತ್ತುಗಳನ್ನು ತಿನ್ನುತ್ತಾ ಬಂದಿದೆ.’ ಎಂಬುದು.
ಇಂತಹ ಪ್ರಶ್ನೆಗಳನ್ನು ಪಂಪ ಕಣ್ಣ ಮೂಲಕವೂ, ಬಸವಣ್ಣ ಅಸ್ಪೃಶ್ಯತಾಚರಣೆ ವಿರುದ್ಧವೂ, ಅನುಭಾವಿ ಪರಂಪರೆ ತನ್ನ ತಾನು ತಿಳಿಯುವುದರಲ್ಲಿಯೂ ಹೇಳಿಕೊಟ್ಟಿದೆ. ಸಂಸ್ಕೃತ, ಅರಬ್ಬಿ, ಉರ್ದು, ಪಾರಸಿ, ಹಿಂದಿ ಮುಂತಾದ ಭಾಷೆಗಳ ಅನುಭವಗಳನ್ನು ತನ್ನೊಳಗೆ ಬೆರೆಸಿಕೊಂಡಿದೆ. ಅಂದರೆ ಕನ್ನಡದ ಜಾಯಮಾನ ನಾಲ್ಕೂ ದಿಕ್ಕುಗಳಿಂದ ಹರಿದು ಬರುವುದನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಾ ವಿಸ್ತಾರವಾಗಿದೆ. ಚಂಪೂ, ಚತ್ತಾಣ, ಬೆದಂಡೆ, ವಚನ, ತ್ರಿಪದಿ, ಕೀರ್ತನೆ, ಸಾಂಗತ್ಯ, ಷಟ್ಪದಿ, ಚೌಪದಿ, ರಗಳೆ, ಗಜಲ್, ತತ್ವಪದ, ಜನಪದ ಸಾಹಿತ್ಯದ ಕುಟ್ಟುವ ಬೀಸುವ, ಹತ್ತಾರು ಪ್ರಕಾರದ ಶ್ರಮಸಂಸ್ಕೃತಿಯ ಹಾಡುಗಳ ಲಯ, ಛಂದಸ್ಸಿಗೆ ಒಲಿದು ಬೆಳೆದು ಬಂದಿದೆ. ಅದರಂತೆ ನೂತನ ಪ್ರಯೋಗಗಳಾದ, ಶಾಯಿರಿ, ರುಬಾಯಿ, ಜೆನ್, ಮುಂತಾದವುಗಳ ಸಾಲಿಗೆ ಪದ್ಮಣ್ಣನವರ ಆರಕ್ಕರ ಖಂಡಕಾವ್ಯವೂ ಸೇರಿಕೊಳ್ಳುತ್ತಿದ್ದು, ವ್ಯವಸ್ಥೆಯ ಬಗ್ಗೆ ಕನಲದೆ, ಕೊಸರಲು ಪ್ರಯತ್ನಿಸಿದೆ. ಸಫಲತೆ ಓದುಗರಿಗೆ ಉಳಿಸಿದೆ. ಒಂದು ಕವಿತೆಯನ್ನು ಮಾಡತಕ್ಕದ್ದು ಛಂದಸ್ಸಲ್ಲ, ಛಂದಸ್ಸನ್ನು ರೂಪಿಸುವ ವಾದ ಒಂದು ಚೈತನ್ಯ ಶಿಲ್ಪ ಹೊಂದಿ ಅಲಂಕರಿಸುವ ಜೀವಂತ ಕೃತಿ. ಎನ್ನುವ ಹಾಗೆ ಮಹಾಕಾವ್ಯಗಳ, ಮಹಾಪಾತ್ರಗಳ ಚಿತ್ರಣವೂ ಇಲ್ಲಿ ಛಂದಸ್ಸನ್ನು ದಾಟಿ ರೂಪುಗೊಂಡಿದೆ.
ಕೌರವ ಪಾಂಡವ| ಧರ್ಮವಧರ್ಮವ
ಪಣಕೊಡ್ಡಿದರು| ಹೆಣವಾಗೋದರು!
ವ್ಯಾಮೋಹವಿರದ ಮನವು ನಿನಾದ|
ಮೋಹಮುಸುಕದ| ತೆರೆಹದ ಕದ
ಸಾವೇ ಸಾಹುಕಾರ| ಯಾರಿದ್ದು ಗೆದ್ದರಾ|
ಈ ಲೋಕದುದರ| ಈಜುವರು ಯಾರಾ|
ಓ ನೀನೇ ಹೇಳು, ಈ ಭೂಮಿ, ಈ ಆಕಾಶ, ಈ ಗಾಳಿ, ಈ ನೀರು ಈ ಹಗಲು ರಾತ್ರಿಗಳು ಈ ಸೂರ್ಯ ಚಂದ್ರರು ಯಾವ ಪಂಥದ ಅನುಯಾಯಿಗಳು. -ಅಲಕ್ ಇಲಾಹಿ ಮಧ್ಯಯುಗೀನ ಚರಿತ್ರೆಯಲ್ಲಿ ಹೊರಗಿನಿಂದ ಬಂದ ಅನುಭವ, ಹೇಳಿದ್ದರೂ ಕೇಳದವರು ನಮ್ಮವರು. ಬದಲಾಗದ ನಮ್ಮ ಮನದ ಬಗ್ಗೆ ವಿಶ್ವಕವಿ ರವೀಂದ್ರರಿಗೆ ನೋವಿದೆ. ನಮ್ಮ ದೇಶದ ಜಾತಿ ವ್ಯವಸ್ಥೆಯಲ್ಲಿ ಹಿಂಸೆಗೊಳಗಾದ ಬಹುಸಂಖ್ಯಾತರ ಬಗ್ಗೆ ಖೇದವಿದೆ. ‘ನನ್ನ ದೃಷ್ಟಿಯಲ್ಲಿ ಭಾರತೀಯ ಜನತೆಯ ಪುನರುದ್ಧಾರ, ಸಂಪೂರ್ಣವಾಗಿ ಜಾತಿ ವ್ಯವಸ್ಥೆಯ ನಿರ್ನಾಮ ಮಾಡುವುದರ ಮೇಲೆಯೇ ನಿಂತಿದೆ... ನಾನು ಅರ್ಥಮಾಡಿಕೊಂಡಂತೆ ಈ ಜಾತಿ ವ್ಯವಸ್ಥೆಯ ವಶೀಕರಣದ ಹಿಡಿತದ ಶೀತಲ ದುರ್ದಮನ ಕ್ರಿಯೆ ನಮ್ಮ ಜನರನ್ನು ಸರ್ಪಮುಷ್ಠಿಯಲ್ಲಿ ಬಂಧಿಸಿಟ್ಟಿರುವುದು ಮಾತ್ರವಲ್ಲದೆ, ಆ ಜನರ ಪುರುಷತ್ವ ಮತ್ತು ಮನುಷ್ಯತ್ವಗಳ ಸ್ವತಂತ್ರ ಅಭಿವ್ಯಕ್ತಿಯನ್ನು ಸಂಪೂರ್ಣವಾಗಿ ದುಸ್ಯಾಧ್ಯಗೊಳಿಸಿದೆ’ ರವೀಂದ್ರರು ಗುರುತಿಸಿರುವ ‘ಶೀತಲ ದುರ್ದಮನ'ವನ್ನು ಅರ್ಥೈಸಿಕೊಳ್ಳಬೇಕಾದದ್ದು ಕವಿಗಳ ಕರ್ತವ್ಯ ಎಂದು ನನ್ನ ಭಾವನೆ.
ಶಂಭುಕನು, ತಾನು ಶೂದ್ರಯೋನಿಯಲ್ಲಿ ಜನಿಸಿದವನು ಎಂಬ ಮಾತು, ಹೊರ ಬರು ಬರುತ್ತಿದ್ದಂತೆಯೇ ರಾಮನ ಖಡ್ಗವು, ಅವನ ಶಿರವನ್ನು ಕತ್ತರಿಸಿತು. ಇಲ್ಲಿ ನಾವು ಹೆದರಬೇಕಾದದ್ದು, ಶೂದ್ರನನ್ನು ಕೊಂದದ್ದಕ್ಕೆ ಮಾತ್ರವಲ್ಲ, ಮಿಗಿಲಾಗಿ ಆ ಕೊಲ್ಲುವವನ ಮನಸ್ಥಿತಿಯ ಬಗ್ಗೆ. ಕೊಂದವನು ಯಾವ ವಿಧವಾದ ಮಾನವೀಯ ಭಾವನೆ ಇಲ್ಲದೆ, ಯಾವ ತಪ್ಪು ಮಾಡದ ಮುಗ್ಧನೊಬ್ಬನ ಮಾತು, ಮುಗಿಯುವವರೆಗೆ ಕಾಯದೆ, ಕೊಂದು ತನ್ನ ಅಪರಾಧದಿಂದಲೂ ಜನರಿಂದ ಸೈ ಎನ್ನಿಸಿಕೊಂಡ ಬಗ್ಗೆ ಕವಿ ರವೀಂದ್ರರಿಗೆ ನೋವಿದೆ. ಇದನ್ನು ಅವರು ‘ಶೀತಲ ದುರ್ದಮನ'ಗೊಳಿಸಲು ಕರೆ ನೀಡಿದ್ದಲ್ಲವೇ? ಇಂತಹ ಮನಸ್ಥಿತಿ ಮುಂದುವರಿದ ಭಾಗದಂತೆ, ಮಹಾಭಾರತದಲ್ಲಿ ದ್ರೋಣನು ಏಕಲವ್ಯನ ಬೆರಳು ಕತ್ತರಿಸಿ ನಿರ್ವಿರ್ಯಗೊಳಿಸುವಂಥದು, ಪರಶರಾಮನು ಶೂರ ಕರ್ಣನನ್ನು ಶಪಿಸಿ ಪಾಪಪ್ರಜ್ಞೆಯಲ್ಲಿ ಕೊಳೆಯುವಂತೆ ಮಾಡಿದ್ದು. ಈ ಮನೋಧರ್ಮ ಹರಿದುಬಂದು ಭಾರತೀಯರ ಇಡೀ ಬದುಕನ್ನು ನಿಯಂತ್ರಿಸಿರುವ ಧರ್ಮಶಾಸ್ತ್ರಗಳಲ್ಲಿ ಬರುವ ಸರ್ವೆಸಾಮಾನ್ಯವಾಗಿದೆಯಲ್ಲ!
ನಮ್ಮ ಮನಸ್ಸು ಕಿಂಚಿತ್ತೂ ತಲ್ಲಣಗೊಳ್ಳದೆ, ಹಿಂಸೆಯನ್ನು ವೈಭವೀಕರಿಸುತ್ತಾ, ಶಿಕ್ಷೆಯನ್ನು ವಿಧಿಸುವ ಈ ಶೀತಲ ಮನೋಭಾವ ನಮ್ಮಲ್ಲಿಯ ಮಾನವೀಯತೆಯನ್ನು ತಲ್ಲಣಗೊಳಿಸಲಾರದೆ? ಶೂದ್ರ ಎಂದರೆ ಕೀಳು ಎಂಬ ಕಲ್ಪನೆ ಅಷ್ಟೆ ಅಲ್ಲ, ಜಗಕೆ ಅನ್ನ ನಿಡುವ ವೃತ್ತಿಯೂ ಕೀಳೇ. ವೈದಿಕರು ಎಲ್ಲ ದಾಸ್ಯತ್ವದ ವೃತ್ತಿಗಳನ್ನು ಶೂದ್ರರಿಗೆ, ಸ್ತ್ರೀಯರಿಗೆ ಬಿಟ್ಟುಕೊಟ್ಟು, ತಾವು ಮಾತ್ರ ಯಜನ, ಯಾಜನದಲ್ಲಿ, ಪೌರೋಹಿತ್ಯ ಇತ್ಯಾದಿ ಬೌದ್ಧಿಕ ಕ್ರಿಯೆಗಳಲ್ಲಿ ತೊಡಗಿಕೊಂಡು, ನಮ್ಮದನ್ನು ಕೀಳೆಂದು, ತಮ್ಮದನ್ನು ಶ್ರೇಷ್ಠವೆಂದು ಶ್ರೇಷ್ಠತೆಯ ವ್ಯಸನಿಗಳಾಗಿ, ನಮ್ಮ ಕೈಯ ಕಟ್ಟಿಗೆಯನ್ನು ನಮ್ಮ ಕಣ್ಣಲ್ಲಿ ಚುಚ್ಚಿಸಿ ಸುಖವಾಗಿದ್ದರಲ್ಲಾ! ಜಾತಿಗೆ ಅನುಗುಣವಾಗಿ ವೃತ್ತಿಗಳನು ಕಟ್ಟಿ, ಎಲ್ಲ ಜಾತಿಗಳು ಬಯ್ಗುಳಗಳಾಗಿಸಿ ಬಿಟ್ಟರಲ್ಲಾ. ಇನ್ನೂ ನಾವು ಅವುಗಳನ್ನು ಹೆಮ್ಮೆಯಿಂದ ನಡೆಸಿಕೊಂಡು ಬರುತ್ತಿದ್ದೇವಲ್ಲಾ, ಕವಿಗೆ ಮನ ನೋಯದೆ. ವಿಶ್ವಕವಿ ರವೀಂದ್ರರಿಗೆ ಆದ ನೋವು ವಿಶ್ವಕವಿ ಕುವೆಂಪುರವರಿಗೆ ಮಾತ್ರ ಆಗಬೇಕೆ?
ಮಣ್ಣಾಗುವಾ ಕಾಯ| ಹಣ್ಣಾಗುವಾ ಜೀವ|
ಬಣ್ಣದೋರಿ ಮಾಯ| ಸಣ್ಣ ಕರಗುವ| ಎನ್ನುವ ಕವಿ ಪದ್ಮಣ್ಣನವರಿಗೂ ಅಂತಹ ನೋವು ಕಾಣುತ್ತದೆ.
ಜಗಳ ನಡೆದಾಗ, ಸ್ವಲ್ಪ ಬಿಸಿಯಾದಾಗ ಪರಸ್ಪರ ಜಾತಿಯನ್ನು ಸಂಬೋಧಿಸಿ ಬಯ್ಯುವುದನ್ನು ರೂಢಿಸಿಕೊಂಡವರು ನಾವು. ಕುರುಬ, ಹಜಾಮ, ಕಟುಗ, ವಡ್ಡ, ಕೊರಮ, ಅಕ್ಕಸಾಲಿ, ಕೋಮ್ಟಿ, ಗೌಡ, ಗಾಣಿಗ, ಕುಂಬಾರ, ಮಾದಿಗೆ, ಹೊಲೆಯ ಇತ್ಯಾದಿ. ಈ ಕಲ್ಪನೆಯಲ್ಲಿ ಗೌಡ, ಕುರುಬ, ಗೌಡ, ಗಾಣಿಗ, ಕುಂಬಾರ ಎಂದರೆ ಪೆದ್ದನೆಂದೂ, ವಡ್ಡ ನೆಂದರೆ ಅನಾಗರಿಕ ನೆಂದೂ, ಕಟುಕ ಎಂದರೆ ನಿರ್ದಯನೆಂದೂ, ಕೋಮ್ಟಿ ಎಂದರೆ ಜಿಪುಣ ಅನಾಗರಿಕ ಎಂದೂ, ಅಕ್ಕಸಾಲಿಗನೆಂದರೆ ನಯವಂಚಕನೆAದೂ, ಕೊರಮನೆಂದರೆ ಕಾಡುಪ್ರಾಣಿಯೆಂದೂ, ಹೊಲೆ-ಮಾದಿಗನೆಂದರೆ ನೀಚನೆಂದೂ ಅರ್ಥಗಳನ್ನು ಸೃಷ್ಟಿಸಿಕೊಂಡಿದೆ. ಕವಿಗಳು ಇದನ್ನು ಒಪ್ಪಿಕೊಂಡಿದ್ದಾರೆಯೇ? ಪ್ರಶ್ನಿಸಿದ್ದಾರೆ ಸಿಡಿದು ನಿಂತಿದ್ದಾರೆ.
ಅಂತಹ ಸಿಡಿಯುವ ಅನುಭವ ಹೊಂದಿರುವ ಅನುಭವ, ಎಂದಿಗೂ ಸರಳವಾಗಿರಲಾರದು. ಕಡೆಯಪಕ್ಷ ಮನಸ್ಸಿಗೆ ಕೊಟ್ಟದ್ದನ್ನು ಮನಸ್ಸು ಕೊಟ್ಟದ್ದರೊಡನೆ ಅದು ಯಾವಾಗಲೂ ಮಿಲನಗೊಳಿಸಬೇಕು. ಕಲೆಯ ಗುರಿ ಅಭಿವ್ಯಕ್ತಿಗೊಳಿಸವುದು, ನಿರೂಪಿಸುವುದು, ವಹಿಸುವುದು. ಎನ್ನುವ ಹಾಗೆ, ಈ ಸಂಕಲನದಲ್ಲಿ ಎಷ್ಟೋ ಸಾರೆ ಕವಿಗೆ ಮಾತ್ರ ಅನುಭವವೂ ಆಗಿ, ಸಹೃದಯರಿಗೆ ದಕ್ಕದೇ ಹೋಗಲೂ ಬಹುದು. ಅಂತಹ ಆರಕ್ಕರಗಳೂ ಇಲ್ಲಿವೆ.
ರಾಮನ ರಾಜ್ಯವು | ಪ್ರಜಾ ಹೃದಯವು|
ಪ್ರಜಾಹಿತಾಕಾಂಕ್ಷೆ| ಮೂಲ ಉದ್ದೇಶವು|
ಒಬ್ಬ ಸಾಮಾನ್ಯನೂ| ರಾಮನ ದೇವನು|
ಎನ್ನುವ ರೀತಿಯು| ರಾಮರಾಜ್ಯದೊಳು|
ಒಳಗಿನ ಅನುಭಾವದ ದನಿಗೇಳಿ, ಅಭಿವ್ಯಕ್ತಿ ಇಲ್ಲಿ ಆಧ್ಯಾತ್ಮಿಕ ಸ್ವರೂಪ ತಾಳಿ, ಶಬ್ದಾತೀತವಾದ ವಿಸ್ಮಯ, ತಲ್ಲೀನತೆಯ ಚಹರೆ ಸದಾ ಎಚ್ಚರದಲ್ಲಿರುವುದು ಎಂಬ ಬಗ್ಗೆ ಕವಿ ಪದ್ಮಣ್ಣನವರ ಪ್ರತಿಪಾದನೆಯೂ ಕಾವ್ಯದ ತುಂಬಾ ಕಂಡು ಬರುತ್ತದೆ.
ಪ್ರಾಣನೆಂಬ ನೆಂಟ| ಮಾಂಸೆಲುಬು ಬಂಟ|
ಧಮನಿ ನಾಳುಂಟ| ಬಿಮ್ಮ ಚಿತ್ರಕೂಟ|
ಸುಂದರಾಂಗ ಕಾಯ| ಸಂದು ತಿಳಿಯಾಯ|
ಕುಂದು ಕೊಂದುಮಾಯ| ಸಿಂಧು ಯೋಗವೀಯ
ಕಾಯನ ಕಾಂತಿಯ| ನ್ಯಾಯ ಸಮ್ಮತಿಯ|
ನಿಯಮಾಯೋಗವ| ಪ್ರಯೋಗದ ಜೀವ|
ಅಖಂಡ ಖಂಡವು| ಪಿಂಡಮುಂಡಾಂಡವು|
ಒಂದರೊಳೊಂದಾಗಿ ಸಂದೀಜಗವಾಗಿ|
ನೀನಾರೆಂಬುದನು|ನೀನರಿಯದಲೆ|
ನಿನಗೂನೂ ನೀನು| ತಿಳಿಯೆ ಮರುಳೆ
ಅಂಗಿಯ ಕೊಟ್ಟವ| ಬೇರೊಬ್ಬನಿರುವ|
ಹರಿದಾ ಮೇಲೆಯೇ| ಕಳಚಿ ಹೋಗುವೆ|
ಬೆತ್ತಲೆಯೆ ಬಂದು| ಕತ್ತಲಲಿ ನಿಂದು|
ಬೆಳಕನು ತಿಂದು| ತಮಂಧದಿ ಮಿಂದು|
ದೇಹದಿಂ ಜೀವಾತ್ಮ| ಬೇರ್ಪಡಿಸೊತ್ಯಾಗ|
ಆತ್ಮನಂ ಜೀವದಿಂ| ಮರು ಸೃಷ್ಟಿಯೋಗ|
ಕವಿಯು ನಮ್ಮ ಸಮೃದ್ಧ ಪರಂಪರೆಯ ಕೊಂಡಿಯಾಗಿ ಕಂಡುಬರುವುದು ಅವರ ಹಿಂದಣ ಪರಂಪರೆಯನ್ನು ಸ್ಮರಿಸಿಕೊಳ್ಳುವಾಗ. ಕನ್ನಡ ಅಧ್ಯಾಪಕರಾದ ಶ್ರೀಯುತರು, ಕಲಿಸುವ ತಹತಹದಲ್ಲಿ ನಮ್ಮ ಹಿಂದಣ ಶಕ್ತಿ, ಸಾಮರ್ಥ್ಯಗಳನ್ನು ಅರ್ಥಪೂರ್ಣವಾಗಿ ನೆನೆಯುವ ಬಗೆ ಖುಷಿ ಕೊಡುತ್ತದೆ. ಎದ್ದೊಂದು ಗಳಿಗೇಲಿ ಯಾರ್ಯಾರ ನೆನೆಯಲಿ? ಎಳ್ಳು ಜಿರಿಗೆ ಬೆಳೆಯೋಳೆ ಭೂಮ್ತಾಯಿ ನಿನ್ನೊಂದು ಗಳಿಗೆ ನೆನದೇನ ಎನ್ನುವಂತೆ ಕವಿ ಪಂಪನಿಂದ ಸಿದ್ಧಾರೂಢರವರೆಗೆ ಒಂದು ಸಮರ್ಥ ಪರಂಪರೆಯನ್ನು ಸಹೃದಯರಿಗೆ ಉಣಬಡಿಸಿದ್ದಾರೆ.
ಪಂಪ ಪೊನ್ನ ರನ್ನ| ಜೈನ ಕಾವ್ಯ ಚಿನ್ನ|
ದೈವ ಭಾವ ಹೊನ್ನ | ಪಸರಿಸಿ ಚೆನ್ನ
ಸರ್ವಜ್ಞ ತೀರ್ಥರ| ಆನಂದರಾಯರ|
ಮಧ್ವಾಚಾರ್ಯರ |ಸಾತ್ವಿಕರ ಜೋರ
ಭಕ್ತಿ ಕನಕರ| ಮುಕ್ತಿ ಪುರಂಧರ|
ಶ್ರೀವ್ಯಾಸರಾಯರ| ಅಪರಾವತಾರ!
ಸಿದ್ಧಾರೂಢ ತಂದೆ| ಆರೂಢಾತ್ಮದೊಂದೆ|
ಒಂದೇ ಬೆಳಕಿಂದೆ| ಜಗ ಬೆಳಗಿದೆ|
ಹಿಂದೂ ಋಷಿಜಪ| ಮುಸಲ್ಮಾನ ಹಜ|
ಪಾರಸಿಯಾ ಪ್ರಾರ್ಥನೆI ಹಿರಿದೀ ಕ್ಷಿತಿಜ|
ಇಂತಹ ಹೊಸ ಪದ್ಧತಿಯನ್ನು ಕಟ್ಟಿಕೊಡಲು ಬಳಸಿಕೊಂಡ ಛಂದಸ್ಸು ಇನ್ನೂ ಮಾಗಬೇಕಿದೆ, ಹೊಸದೆಂಬ ಕಟ್ಟಿಗೆ ಬಿದ್ದು, ಭಾವ, ಮೌಲ್ಯ ಮರೆಯದಂತೆ ಎಚ್ಚರವಹಿಸುವ ಎಚ್ಚರಿಕೆಯೂ ಮೈಗೂಡಿಸಿಕೊಳ್ಳಬೇಕಿದೆ. ಮುಂದೆ ಮುಂದೆ ಅದು ಮೈಗೂಡಲಿ ಪದ್ಮಣ್ಣನವರು ನಮ್ಮ ಭಾಗದ ಶರಣ, ದಾಸ, ತತ್ವಪದಕಾರರಾಗಲಿ.
ಡಾ.ಸಿ.ಬಿ.ಚಿಲ್ಕರಾಗಿ
ಸದಸ್ಯರು, ಕನ್ನಡ ಸಾಹಿತ್ಯ ಅಕಾಡೆಮಿ.
"ಇತ್ತೀಚೆಗೆ ಅವರ ‘ಗೀತಾಂತರಂಗ’ ಕೃತಿ ಸಿಕ್ಕಿತು. ಇದು ಅವರ ಸಂಶೋಧನಾ ಕೃತಿ. ಅವರು ಇದನ್ನು ಬರೆದಿದ್...
"ಇತಿಹಾಸವನ್ನು ಮುರಿದು ಕಟ್ಟುವುದರ ಜತೆಗೆ ಅಲ್ಲಿರುವ ಲೋಪದೋಷಗಳನ್ನು ಸರಿಪಡಿಸುತ್ತಾ ಸತ್ಯವನ್ನು ನಾವು ದಾಖಲಿಸಬೇಕ...
"ರಾಜಿಯಾಗದ ರಕ್ತದ ಕಣ ಸದ್ಯ ಸಮಾಜಕ್ಕೆ ಹಿಡಿದ ಕನ್ನಡಿಯ ಬಿಂಬವಾಗಿದೆ. ಯಾವುದೇ ಮುಲಾಜಿಗೂ ರಾಜಿಯೇ ಇಲ್ಲ. ನೈಜ ನೋವ...
©2024 Book Brahma Private Limited.