ಗಾಂಧೀಜಿಯವರ ಅಂತರಾತ್ಮವನ್ನು ಅರಿಯಲು ಸಹಕಾರಿಯಾಗಬಲ್ಲ ಕೃತಿ


"ಇತಿಹಾಸವನ್ನು ಮುರಿದು ಕಟ್ಟುವುದರ ಜತೆಗೆ ಅಲ್ಲಿರುವ ಲೋಪದೋಷಗಳನ್ನು ಸರಿಪಡಿಸುತ್ತಾ ಸತ್ಯವನ್ನು ನಾವು ದಾಖಲಿಸಬೇಕು. ಒಮ್ಮೊಮ್ಮೆ ಗಾಂಧಿ ವಿರೋಧಿಗಳ ಎದುರು ನಾವು ಸ್ಪೋಟಗೊಳ್ಳುವುದು ಅನಿವಾರ್ಯವಾಗುತ್ತದೆ’’ ಎಂಬ ಅವರ ಮಾತನ್ನು ನಾನು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದೀನಿ. ಪಿ.ಲಂಕೇಶರು ತಮ್ಮ ಟೀಕೆ ಟಿಪ್ಪಣಿ ಅಂಕಣಗಳಲ್ಲಿ ಗಾಂಧೀಜಿ ಕುರಿತು ದಾಖಲಿಸಿರುವ ಮಾತುಗಳು ಇಂದಿಗೂ ಶ್ರೇಷ್ಠ ಚಿಂತನೆಗಳಾಗಿವೆ," ಎನ್ನುತ್ತಾರೆ ಎನ್. ಜಗದೀಶ್ ಕೊಪ್ಪ. ಅವರು ಮಂಜುನಾಥ್ ಚಾಂದ್ ಅವರ "ಪ್ರಿಯ ಮೀರಾ’’ ಬಾಪು ಮಗಳಿಗೆ ಬರೆದ ಪ್ರೇಮ ಪತ್ರಗಳು ಕೃತಿ ಕುರಿತು ಬರೆದ ವಿಮರ್ಶೆ.

ಗಾಂಧೀಜಿಯವರನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಗಾಂಧಿ ಕುರಿತಾಗಿ ಬಂದ ಕೃತಿಗಳಲ್ಲಿ ಡಿ.ಎಸ್. ನಾಗಭೂಷಣ ಅವರ ಗಾಂಧಿ ಕಥನ ಹೊರತು ಪಡಿಸಿದರೆ, ಈಗ ಪ್ರಕಟವಾಗಿರುವ ಮಿತ್ರ ಮಂಜುನಾಥ ಚಾಂದ್ ಅವರ ‘’ ಪ್ರಿಯ ಮೀರಾ’’ ಎಂಬ ಕೃತಿಯು ಅತ್ಯಂತ ಮಹತ್ವವಾದ ಕೃತಿಯಾಗಿದೆ.

ಕಳೆದ ಮೂರೂವರೆ ದಶಕಗಳಿಂದ ಗಾಂಧಿ ಕುರಿತ ಚಿಂತನೆಯನ್ನು ಬದುಕಿಗೆ ಧ್ಯಾನದಂತೆ ಅಳವಡಿಸಿಕೊಂಡಿರುವ ನನಗೆ ಪ್ರೇರಣೆಯಾದವರು ಪಿ.ಲಂಕೇಶ್ ರವರು. ಅವರಿಂದ ಗಾಂಧೀಜಿಯವರನ್ನು ಗ್ರಹಿಸಲು ಕಲಿತೆ. 1990 ರಲ್ಲಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಒಂದು ಮಧ್ಯಾಹ್ನ ಅವರ ಜೊತೆ ಊಟ ಮಾಡುತ್ತಾ ಕುಳಿತಿರುವಾಗ, ‘’ ನೋಡಯ್ಯಾ, ಗಾಂಧಿವಾದಿಗಳು ಎಂದು ನಾವುಗಳು ತಲೆಗೆ ಟೋಪಿ ಧರಿಸಿ ಭಜನೆ ಮಾಡುತ್ತಾ ಕುಳಿತರೆ ಗಾಂಧೀಜಿಯವರ ಬದುಕು ಮತ್ತು ಚಿಂತನೆ ಹಾಗೂ ಅವರ ವ್ಯಕ್ತಿತ್ವವನ್ನು ಆಧುನಿಕ ಜಗತ್ತಿನ ತಲೆಮಾರಿಗೆ ತಲುಪಿಸಲು ಸಾಧ್ಯವಾಗುದಿಲ್ಲ. ಇತಿಹಾಸವನ್ನು ಮುರಿದು ಕಟ್ಟುವುದರ ಜತೆಗೆ ಅಲ್ಲಿರುವ ಲೋಪದೋಷಗಳನ್ನು ಸರಿಪಡಿಸುತ್ತಾ ಸತ್ಯವನ್ನು ನಾವು ದಾಖಲಿಸಬೇಕು. ಒಮ್ಮೊಮ್ಮೆ ಗಾಂಧಿ ವಿರೋಧಿಗಳ ಎದುರು ನಾವು ಸ್ಪೋಟಗೊಳ್ಳುವುದು ಅನಿವಾರ್ಯವಾಗುತ್ತದೆ’’ ಎಂಬ ಅವರ ಮಾತನ್ನು ನಾನು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದೀನಿ. ಪಿ.ಲಂಕೇಶರು ತಮ್ಮ ಟೀಕೆ ಟಿಪ್ಪಣಿ ಅಂಕಣಗಳಲ್ಲಿ ಗಾಂಧೀಜಿ ಕುರಿತು ದಾಖಲಿಸಿರುವ ಮಾತುಗಳು ಇಂದಿಗೂ ಶ್ರೇಷ್ಠ ಚಿಂತನೆಗಳಾಗಿವೆ.

ಗಾಂಧಿ ಎಂಬ ಮಹಾತ್ಮನ ಕುರಿತಾದ ಓದು ಎಂದರೆ, ನಮ್ಮ ಪಾಲಿಗೆ ಅದೊಂದು ಅಂತ್ಯವಿಲ್ಲದ ಪಯಣ. ಅವರ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಎಷ್ಟೊಂದು ಆಯಾಮಗಳಿವೆ ಎಂಬುದಕ್ಕೆ ಜಗತ್ತಿನಾದ್ಯಂತ ಅವರ ಕುರಿತಾಗಿ ಬಂದಿರುವ ಪುಸ್ತಕಗಳು ಸಾಕ್ಷಿಯಾಗಿವೆ. ಇವೆಲ್ಲಕ್ಕಿಂತ ಮಿಗಿಲಾಗಿ ಗಾಂಧೀಜಿಯವರು ಇಡೀ ಜೀವನದುದ್ದಕ್ಕೂ ತೆರೆದ ಪುಸ್ತಕದಂತೆ ಬದುಕಿದ್ದಾರೆ. ಈ ಕಾರಣದಿಂದಾಗಿ ಅವರ ನಡೆ ಮತ್ತು ನುಡಿಗಳು ಅತ್ಯುತ್ತಮ ವ್ಯಾಖ್ಯಾನಗಳಾಗಿ ಇಂದು ನಮಗೆ ಕೃತಿಯ ರೂಪದಲ್ಲಿ ದೊರೆಯುತ್ತಿವೆ. ಮಹಾತ್ಮನನ್ನು ಅರ್ಥಮಾಡಿಕೊಳ್ಳಲು ಮೊದಲು ನಮ್ಮೊಳಗೆ ಮುಕ್ತವಾದ ಮನಸ್ಸು ಇರಬೇಕು. ಇದು ಎಷ್ಟು ಮಂದಿಗೆ ಇದೆ ಎಂಬುದು ಅವರವರು ತಮ್ಮ ಆತ್ಮಸಾಕ್ಷಿಗೆ ಹಾಕಿಕೊಳ್ಳಬೇಕಾದ ಪ್ರಶ್ನೆ.

ಪ್ರಿಯ ಮೀರಾ ಎಂಬ ಈ ಕೃತಿಯು ಗಾಂಧಿಜಿಯವರು ತಮ್ಮ ಮಾನಸ ಪುತ್ರಿ ಹಾಗೂ ಇಂಗ್ಲೇಡಿನಲ್ಲಿ ಜನಿಸಿ, ಭಾರತಕ್ಕೆ ಬಂದು ಸ್ವಾತಂತ್ರ್ಯ ಹೋರಾಟದಲ್ಲಿ ಕೈ ಜೋಡಿಸುತ್ತಾ, ಅಪ್ಪಟ ಭಾರತೀಯ ಹೆಣ್ಣುಮಗಳಂತೆ ಮೀರಾ ಬೆಹನ್ ಹೆಸರಿನಲ್ಲಿ ಬದುಕಿದ ಮೆಡಲೀನ್ ಸ್ಲೇಡ್ ಎಂಬ ನೌಕಪಡೆಯ ಅಧಿಕಾರಿಯ ಪುತ್ರಿಗೆ ಗಾಂಧೀಜಿ ಬರೆದ ಬರೆದ ಪತ್ರಗಳ ಕೃತಿ. ನಾಲ್ಕು ಗಂಡು ಮಕ್ಕಳ ತಂದೆಯಾಗಿದ್ದ ಗಾಂಧೀಜಿಯವರಿಗೆ ಹೆಣ್ಣು ಮಕ್ಕಳಿರಲಿಲ್ಲ. 1923 ರಲ್ಲಿ ಭಾರತಕ್ಕೆ ಬಂದ ಮೆಡಲಿನ್ ಸ್ಲೇಡ್ ಮಹಾತ್ಮನ ಪಾಲಿಗೆ ಪುತ್ರಿಯಾದರು. ಓರ್ವ ತಂದೆಯಾಗಿ ಪುತ್ರಿಗೆ ಬರೆದ ಪತ್ರಗಳು ಇವು. ಸುಮಾರು 25 ವರ್ಷಗಳ ಅವಧಿಯಲ್ಲಿ ಆರನೂರಕ್ಕೂ ಹೆಚ್ಚು ಪತ್ರಗಳನ್ನು ಗಾಂಧೀಜಿಯವರು ಮೀರಾ ಬೆಹನ್ ಗೆ ಬರೆದಿದ್ದಾರೆ. ಅವುಗಳಲ್ಲಿ ಆಯ್ದ ಮುನ್ನೂರು ಪತ್ರಗಳನ್ನು ಅವರು 1948 ರಲ್ಲಿ ಗಾಂಧಿ ನಿಧನರಾದ ನಂತರ ನವಂಬರ್ ತಿಂಗಳಿನಲ್ಲಿ ಪ್ರಕಟಿಸಿದರು.

ಭಾರತದ ರಾಜಕೀಯ ಇತಿಹಾಸದಲ್ಲಿ ತಂದೆ-ಮಕ್ಕಳ ನಡುವೆ ನಡೆದ ಪತ್ರವ್ಯವಹಾರ ಕೇವಲ ಖಾಸಾಗಿ ಸಂಗತಿಯಾಗದೆ, ಅದು ತಾವು ಬದುಕಿದ ವರ್ತಮಾನದ ಜಗತ್ತಿನ ಆಗು-ಹೋಗುಗಳ ಕುರಿತು ಚರ್ಚೆ ಮತ್ತು ಮಾರ್ಗದರ್ಶನವಾಗಿರುವುದು ವಿಶೇಷ. ಇವುಗಳಲ್ಲಿ ನೆಹರು ಮತ್ತು ಅವರ ಪುತ್ರಿ ಇಂದಿರಾ ನಡುವೆ ನಡೆದ ಪತ್ರ ವಿನಿಮಯ ಮತ್ತು ಗಾಂಧಿ ಮತ್ತು ಮೀರಾ ನಡುವೆ ನಡೆದ ಈ ಪತ್ರಗಳ ವಿಷಯನ್ನ ಅವಲೋಕಿಸಿದಾಗ, ಗಾಂಧಿ ಮತ್ತು ನೆಹರು ಅವರ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಈ ಕೃತಿಗಳು ನಮಗೆ ಸಹಾಯಕವಾಗುತ್ತವೆ. 1928 ರಲ್ಲಿ ಎ ಲೆಟರ್ಸ್ ಪ್ರಂ ಎ ಪಾದರ್ ಟು ಹಿಸ್ ಡಾಟರ್’’ ಶೀರ್ಷಿಕೆಯ ನೆಹರೂ ಅವರ ಇಂಗ್ಲೀಷ್ ಕೃತಿಯು ಪ್ರಕಟವಾದ ನಂತರ 1929 ರಲ್ಲಿ ಹಿಂದಿ ಭಾಷೆಯ ಪ್ರಸಿದ್ಧ ಕಥೆಗಾರ ಮತ್ತು ಕಾದಂಬರಿಕಾರ ಮುನ್ಸಿ ಪ್ರೇಮಚಂದ್ ಅವರು ಈ ಕೃತಿಯನ್ನು ಹಿಂದಿ ಭಾಷೆಗೆ ಅನುವಾದಿಸಿದ್ದರು.

ಪ್ರಿಯ ಮೀರಾ ಕೃತಿಯಲ್ಲಿ ಗಾಂಧೀಜಿಯವರು ತಮ್ಮ ಮಾನಸ ಪುತ್ರಿಗೆ ಬರೆದಿರುವ ಒಂದೊಂದು ಪತ್ರವನ್ನು ಓದುತ್ತಿದ್ದರೆ, ಈ ಜಗತ್ತಿನ ನಿಸ್ವಾರ್ಥ ಜೀವವೊಂದು ವ್ಯಕ್ತಪಡಿಸಬಹುದಾದ ಮೌಲ್ಯಯುತವಾದ ಅನಿಸಿಕೆಗಳು ಎಂದು ಓದುಗರಿಗೆ ಮನದಟ್ಟಾಗುತ್ತದೆ. ಒಂದು ಪತ್ರದಲ್ಲಿ ‘’ ನಮ್ಮ ಪ್ರೀತಿ ಪಾತ್ರರು ಸಾಧ್ಯವಾದಷ್ಟು ಕಾಲ ರಕ್ತ ಮಾಂಸದ ನಡುವೆ ಇರಲಿ ಎಂದು ಬಯಸುವುದು ನಿಜಕ್ಕೂ ಸ್ವಾರ್ಥ ಬಯಕೆ. ಇದು ನಮ್ಮ ದೌರ್ಬಲ್ಯದಿಂದ ಹುಟ್ಟಿಕೊಂಡಿದ್ದು ಅಥವಾ ಕಾಯವನ್ನು ತೊರೆದ ಬಳಿಕ ಆತ್ಮದ ಉಳಿವಿನ ಬಗ್ಗೆ ಇರುವ ನಂಬಿಕೆಯ ಫಲ’’ ಎನ್ನುವ ಮಾತುಗಳು ಗಾಂಧಿ ಅವರನ್ನು ಸನಾತನವಾದಿ ಎಂದು ಹೀಗೆಳೆಯುವರು ಒಮ್ಮೆ ಯೋಚಿಸಬೇಕಾದ ಮಾತು ಎಂದು ನನಗೆ ಅನಿಸಿತು,

ಗಾಂಧಿಜಿಯವರ ಪತ್ರ 116 ರಲ್ಲಿ ಅವರು ಮೀರಾ ಅವರಿಗೆ ಭೂಮಿಯ ಕುರಿತಾಗಿ ಬರೆದಿರುವ ಮಾತುಗಳಿವು. ‘’ ಭೂಮಿ ಎಂದರೆ, ವಿನಯದ ಪ್ರತೀಕ. ಧರೆಯ ಮುಂದೆ ವಿನೀತರಾಗುವುದನ್ನು ನಾವು ಕಲಿಯಬೇಕು. ತನ್ನ ಮೇಲೆ ನಡೆದಾಡುವ, ಪಾದ ಸ್ಪರ್ಶ ಮಾಢುವ ಪ್ರತಿಯೊಂದು ಜೀವಿಯನ್ನು ಆಕೆ ರಕ್ಷಿಸುತ್ತಾಳೆ. ಹಾಗಾಗಿಯೇ ಆಕೆ ವಿಷ್ಣುವಿನ ಆತ್ಮ ಸಂಗಾತಿ. ನನ್ನ ಅಭಿಪ್ರಾಯದ ಪ್ರಕಾರ ಈ ಪರಿಕಲ್ಪನೆ ಸತ್ಯಕ್ಕೆ ಅಪಚಾರ ಮಾಡದೇ ಇರುವುದು ಎಂದು ಅರ್ಥೈಸಿಕೊಳ್ಳಬೇಕು. ದೇವರು ಎಲ್ಲೆಲ್ಲೂ ಇದ್ದಾನೆ ಎಂಬುದನ್ನು ಇದು ಸಂಪೂರ್ಣವಾಗಿ ಪ್ರತಿಪಾದಿಸುತ್ತದೆ. ಆತನಿಗೆ ಅಚೇತನವಾದುದು ಯಾವುದೂ ಇಲ್ಲ ನಾವು ಭೂಮಿಯಲ್ಲಿ ವಿಲೀನವಾದವರು. ಭೂಮಿ ಇಲ್ಲದೆ ಇದ್ದರೆ ನಾವೂ ಇಲ್ಲ. ಭೂಮಿಯಿಂದ ಆತನನ್ನು ಕಲ್ಪಸಿಕೊಳ್ಳುವುದರ ಮೂಲಕ ನಾನು ಆತನಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಆ ತಾಯಿಯ ಅರ್ಹ ಮಗುವಾಗಿದ್ದರೆ, ಈ ಧರೆಗೆ ಧೂಳಾಗಬೇಕು ಮತ್ತು ಕಟ್ಟಕಡೆಯ ಮಾನವ ಜೀವಿಯಾಗಿ ಮಾತ್ರವಲ್ಲದೆ, ಈ ಸೃಷ್ಟಿಯ ಅತಿ ಸಣ್ಣ ಧೂಳಿನ ಕಣವಾಗಿ ಬಾಂಧವ್ಯ ಹೊಂದುವ ಮೂಲಕ ಸಂಭ್ರಮಿಸಲು ಬಯಸುತ್ತೇನೆ’’ ಎಂಬ ಗಾಂಧೀಜಿಯವರ ಮಾತುಗಳು ಓರ್ವ ಆಸ್ತಿಕನ ಮಾತುಗಳಂತೆ ನಮಗೆ ಗೋಚರವಾಗುವುದಿಲ್ಲ.ಸಂತನೊಬ್ಬನ ಉಪದೇಶದಂತೆ ಭಾಸವಾಗುತ್ತವೆ.

ಅದೇ ಸುಧೀರ್ಘ ಪತ್ರದಲ್ಲಿ ತಮ್ಮ ಪುತ್ರಿಗೆ ಸತ್ಯ ಮತ್ತು ಅಹಿಂಸೆಯ ಬಗ್ಗೆ ಬರೆಯುತ್ತಾ, ( 1931 ರಲ್ಲಿ)

‘’ಗೌಪ್ಯತೆಗಾಗಿ ಹೇಳುವುದಾದರೆ,, ಒಬ್ಬ ಕಟುಕ ಬಂದು ಯಾವ ಕಡೆ ಹಸು ಹೋಯಿತು ಎಂದು ಕೇಳಿದರೆ ನಾನು ಅವನಿಗೆ ಸರಿಯಾದ ಮಾಹಿತಿಯನ್ನು ತಿಳಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ನಾನು ಅವನನ್ನು ದಾರಿ ತಪ್ಪಿಸದೆ ಇರಬಹುದು ಅಥವಾ ಹಸು ಯಾವ ಕಡೆ ಹೋಯಿತು ಎಂದು ಹೇಳದೇ ಇರಬಹುದು. ಅಷ್ಟು ಮಾತ್ರವಲ್ಲದೆ, ನಾನು ಅವನಿಂದ ಹಸುವನ್ನು ಅಡಗಿಸಿ ಕೂಡ ಇಡಬಹುದು. ಅದು ನನ್ನ ಕರ್ತವ್ಯ ಕೂಡಾ ಹೌದು’’ ಎಂದು ಬರೆದಿದ್ದಾರೆ.

ಇಡೀ ಕೃತಿಯ ಅನೇಕ ಪತ್ರಗಳು ನಮ್ಮನ್ನು ಕ್ಷಣ ಕಾಲ ಅಲುಗಾಡಿಸಿಬಿಡುತ್ತವೆ. ಈ ಕೃತಿಯನ್ನು ವೀರಲೋಕದ ಪ್ರಕಾಶನದವರು ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ಹೊರತಂದಿರುವುದು ವಿಶೇಷ. ಕ್ರೌನ್ ¼ ಸೈಜಿನ ಆಕಾರದ 312 ಪುಟಗಳ ಈ ಕೃತಿಯ ಪ್ರತಿ ಪುಟದ ವಿನ್ಯಾಸ ಮನ ಸೆಳೆಯುವಂತಿದೆ. ಪತ್ರಗಳ ಅನುವಾದ ಕುರಿತು ಹೇಳಬೇಕೆಂದರೆ, ಮಂಜುನಾಥ ಚಾಂದ್ ಮತ್ತು ನಾನು ಉದಯ ಟಿ.ವಿ.ಯಲ್ಲಿ ಸಹೋದ್ಯೋಗಿಗಳಾಗಿ ದುಡಿದವರು. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಪ್ರಸಾರವಾಗುತ್ತಿದ್ದ ಉದಯ ವಾರ್ತೆಯ ಜವಾಬ್ದರಿ ಹೊತ್ತು ದುಡಿದವರು. ಅವರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳ ಅನುವಾದವನ್ನು ನಾನು ಹತ್ತಿರದಿಂದ ನೋಡಿಕೊಂಡು ಬಂದವನು. ಅನುವಾದಕನಾಗಿ ನಲವತ್ತು ವರ್ಷಗಳ ಅನುಭವ ಇರುವ ನನಗೆ ಗಾಂಧೀಜಿ ಅವರ ಇಂಗ್ಲೀಷ್ ಭಾಷೆಯ ಅನುವಾದ ಎಷ್ಟೋಂದು ಕ್ಲಿಷ್ಟಕರ ಸಂಗತಿ ಎಂಬುದು ಗೊತ್ತಿದೆ.

ಲೇಖಕ ಚಾಂದ್ ಈ ವಿಷಯದಲ್ಲಿ ಗೆದ್ದಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಈ ಕೃತಿಯಲ್ಲಿ ನನಗೆ ಕಂಡು ಬಂದ ಒಂದು ಪುಟ್ಟ ದೋಷ ಏನೆಂದರೆ, ಮೀರಾ ಬೆಹನ್ ಕುರಿತಾಗಿ ಒಂದು ಪುಟ್ಟ ಕಿರು ಚರಿತ್ರೆ ಇರಬೇಕಾಗಿತ್ತು. ಎಂಟು ವರ್ಷಗಳ ಹಿಂದೆ ‘’ ಗಾಂಧಿಗಿರಿಯ ಫಸಲುಗಳು’’ ಎಂಬ ನನ್ನ ಕೃತಿಯಲ್ಲಿ ಈ ತಾಯಿಯ ಬಗ್ಗೆ ಒಂದು ಅಧ್ಯಾಯ ಬರೆಯಲು ಆಕೆಯ ವಿವರಗಳನ್ನು ಓದಿ ನಾನು ತಲ್ಲಣಿಸಿ ಹೋಗಿದ್ದೆ. ನಿಮಗೆ ನೆನಪಿರಲಿ 1952 ರಲ್ಲಿ ಹಿಮಾಲಯದ ತಪ್ಪಲಿನಲ್ಲಿ ವಿಶೇಷವಾಗಿ ಕುಮ್ಮಾವನ್ ಮತ್ತು ಗರವಾಲ್ ಪ್ರಾಂತ್ಯದಲ್ಲಿ ಬ್ರಿಟೀಷ್ ಸರ್ಕಾರ ಮರಕಡಿಯುವುದನ್ನು ಮೀರಾ ಬೆಹನ್ ವಿರೋಧಿಸಿದ್ದರು. ರೈಲ್ವೆ ಹಳಿಗಳ ಕೆಳಗೆ ಹಾಸಲು ಮರ ಕಡಿಯುತ್ತಿದ್ದ ಕಾರಣ ಭವಿಷ್ಟಯದಲ್ಲಿ ಈ ಗುಡ್ಡ, ಹಸಿರು, ನೀರು, ಮಂಜು ಇಲ್ಲಿರುವುದಿಲ್ಲ ಎಂದು ಎಚ್ಚರಿಸಿದ್ದರು. 1980 ರಲ್ಲಿ ಮೀರಾ ಬೆಹನ್ ಅವರು ನುಡಿದಿದ್ದ ಭವಿಷ್ಯ ನಿಜವಾಯಿತು. ಸುಂದರಲಾಲ್ ಬಹುಗುಣ ನೇತೃತ್ವದಲ್ಲಿ ಅಪ್ಪಿಕೋ ಚಳುವಳಿ ಆರಂಭವಾಯಿತು.

1948 ರಲ್ಲಿ ಗಾಂಧೀಝಿ ನಿಧನರಾದ ನಂತರ ಹನ್ನೊಂದು ವರ್ಷಗಳ ಭಾರತದ ಹಿಮಾಲಯ ಪ್ರಾಂತ್ಯದಲ್ಲಿ ಪಶು ಆಶ್ರಮ ನಡೆಸುತ್ತಿದ್ದ ಮೀರಾ ಅವರು 1959 ರಲ್ಲಿ ಇಂಗ್ಲೇಂಡಿಗೆ ತೆರಳಿ ನಂತರ , 1960 ರಲ್ಲಿ ಆಸ್ಟ್ರೀಯಾದ ವಿಯನ್ನಾಕ್ಕೆ ಹೋಗಿ ಅಲ್ಲಿ ಆಶ್ರಮ ನಿರ್ಮಿಸಿಕೊಂಡು 1982 ರ ತಮ್ಮ ತೊಂಬತ್ತನೇ ವಯಸ್ಸಿನವರೆಗೆ ಗಾಂಧಿ ಅನುಯಾಯಿಯಾಗಿ ಬದುಕಿ, ನಿಧನ ಹೊಂದಿದರು. ಈ ಒಂದು ಪುಟ್ಟ ಮಾಹಿತಿ ಕೃತಿಗೆ ಅವಶ್ಯಕತೆ ಇತ್ತು. ಮೀರಾ ಅವರು ಬರೆದಿರುವ ಮುನ್ನುಡಿಯಲ್ಲಿ ಇರುವ ಮಾಹಿತಿಗಳು ಓದುಗರಿಗೆ ಸಾಕಾಗುವುದಿಲ್ಲ. ಸಾಧ್ಯವಾದರೆ. ಮಿತ್ರ ಚಾಂದ್ ರವರು ಮೀರಾ ಅವರ ಆತ್ಮಕಥನವನ್ನು ಕನ್ನಡಕ್ಕೆ ತರುವುದು ಒಳಿತು.

- ಎನ್. ಜಗದೀಶ್ ಕೊಪ್ಪ

MORE FEATURES

ಗೀತಾಂತರಂಗದಲ್ಲಿ ಅವರು ಗೀತೆಯನ್ನು ಅರ್ಥೈಸಿದ ವಿಧಾನ ಅನನ್ಯ

02-11-2024 ಬೆಂಗಳೂರು

"ಇತ್ತೀಚೆಗೆ ಅವರ ‘ಗೀತಾಂತರಂಗ’ ಕೃತಿ ಸಿಕ್ಕಿತು. ಇದು ಅವರ ಸಂಶೋಧನಾ ಕೃತಿ. ಅವರು ಇದನ್ನು ಬರೆದಿದ್...

ಕವಿಯಾದವನು ಕೇವಲ ಕಾವ್ಯೋದ್ದೋಗದ ಕೃಷಿಯಲ್ಲಿ ತೊಡಗಿಸಿ ಕೊಂಡಿರುವವನು ಮಾತ್ರವಲ್ಲ

02-11-2024 ಬೆಂಗಳೂರು

"ಕವಿತೆ ಬಗ್ಗೆ ಹಿಂದಿನಿಂದ ಇವತ್ತಿನವರೆಗೆ ವಿದ್ವಾಂಸರು ಹತ್ತಾರು ನುಡಿಗಳನ್ನು ಹೇಳುತ್ತಲೆ ಬಂದಿದ್ದಾರೆ. ಅಂದರೆ ತ...

ಇಡೀ ಕವಿತೆಗಳಲ್ಲಿ ರಾರಾಜಿಸಿವುದು ಗಾಂಧಿ ಮತ್ತು ಗಾಂಧಿವಾದ

02-11-2024 ಬೆಂಗಳೂರು

"ರಾಜಿಯಾಗದ ರಕ್ತದ ಕಣ ಸದ್ಯ ಸಮಾಜಕ್ಕೆ ಹಿಡಿದ ಕನ್ನಡಿಯ ಬಿಂಬವಾಗಿದೆ. ಯಾವುದೇ ಮುಲಾಜಿಗೂ ರಾಜಿಯೇ ಇಲ್ಲ. ನೈಜ ನೋವ...