ಗೀತಾಂತರಂಗದಲ್ಲಿ ಅವರು ಗೀತೆಯನ್ನು ಅರ್ಥೈಸಿದ ವಿಧಾನ ಅನನ್ಯ


"ಇತ್ತೀಚೆಗೆ ಅವರ ‘ಗೀತಾಂತರಂಗ’ ಕೃತಿ ಸಿಕ್ಕಿತು. ಇದು ಅವರ ಸಂಶೋಧನಾ ಕೃತಿ. ಅವರು ಇದನ್ನು ಬರೆದಿದ್ದು ಇಂಗ್ಲಿಷಿನಲ್ಲಿ. ಅದೂ ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ. ಈ ಕೃತಿಗೆ ವಿದೇಶೀ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿತ್ತು. ಹಾಗೆಂದು ಅವರು ವಿದೇಶಕ್ಕೆ ಹೋಗಿರಲಿಲ್ಲ," ಎನ್ನುತ್ತಾರೆ ಜಗದೀಶ ಶರ್ಮಾ ಸಂಪ. ಅವರು ಡಾ|| ರಾ.ಅ.ಜಾಲಿಹಾಳ ಅವರ ‘ಎಂದಿಗೂ ಮರೆಯಲಾಗದ ಮಹಾಭಾಗವತರು’ ಕೃತಿ ಕುರಿತು ಬರದ ವಿಮರ್ಶೆ.

ಮಹಾಭಾಗವತರ ಬಗ್ಗೆ ಕೇಳುತ್ತಾ ಬಂದು ಬಹಳ ಕಾಲವಾಗಿತ್ತು. ಪ್ರಾಯಶಃ ನಾನು ಸಂಸ್ಕೃತದ ವಿದ್ಯಾರ್ಥಿಯಾಗಿದ್ದಾಗಲೇ ಅವರ ಬಗ್ಗೆ ಕೇಳಿದ್ದೆ. ‘ಜಗದ್ಗುರು ಶಂಕರಾಚಾರ್ಯ ಡಾ| ಕುರ್ತಕೋಟಿ’ ಎಂದು ಅವರನ್ನು ಕರೆಯುವುದು ವಿಚಿತ್ರ ಎನಿಸಿತ್ತು. ಜಗದ್ಗುರು ಶಂಕರಾಚಾರ್ಯ ಎಂದರೆ ಪೀಠಾಧಿಪತ್ಯ. ಡಾ| ಕುರ್ತಕೋಟಿ ಎನ್ನುವುದು ಸಂನ್ಯಾಸಕ್ಕೆ ಸಲ್ಲುವ ಹೆಸರಲ್ಲ ಎಂದು. ಆದರೆ ಅವರ ಅಗಾಧ ಪಾಂಡಿತ್ಯ, ವರ್ತಮಾನಕ್ಕೆ ಸನಾತನೆಯನ್ನು ಸಲ್ಲಿಸುವಲ್ಲಿ ಅವರು ಮಾಡಿದ ಅಪಾರ ಪರಿಶ್ರಮ, ಅವರ ಸಮಾಜೋದ್ಧರಣದ ಕಾರ್ಯ ಇವನ್ನೆಲ್ಲ ಕೇಳಿ ಅಚ್ಚರಿ ಎನಿಸಿತ್ತು.

ಇತ್ತೀಚೆಗೆ ಅವರ ‘ಗೀತಾಂತರಂಗ’ ಕೃತಿ ಸಿಕ್ಕಿತು. ಇದು ಅವರ ಸಂಶೋಧನಾ ಕೃತಿ. ಅವರು ಇದನ್ನು ಬರೆದಿದ್ದು ಇಂಗ್ಲಿಷಿನಲ್ಲಿ. ಅದೂ ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ. ಈ ಕೃತಿಗೆ ವಿದೇಶೀ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿತ್ತು. ಹಾಗೆಂದು ಅವರು ವಿದೇಶಕ್ಕೆ ಹೋಗಿರಲಿಲ್ಲ.

ಗೀತಾಂತರಂಗದಲ್ಲಿ ಅವರು ಗೀತೆಯನ್ನು ಅರ್ಥೈಸಿದ ವಿಧಾನ ಅನನ್ಯ. ಸ್ವಲ್ಪ ಪ್ರೌಢ ಶೈಲಿಯ ಈ ಕೃತಿಯನ್ನು ವ್ಯಾಖ್ಯಾನಿಸಿ, ಎಲ್ಲರಿಗೂ ಸಲ್ಲುವಂತೆ ಮಾಡಿದರೆ ಅದೊಂದು ದೊಡ್ಡ ಕಾರ್ಯ.

ಇದೀಗ ಅವರ ಜೀವನ ಚರಿತ್ರೆಯ ಕೃತಿ ಓದಲು ಸಿಕ್ಕಿತು. ‘ಎಂದಿಗೂ ಮರೆಯಲಾಗದ ಮಹಾಭಾಗವತರು’ ಎನ್ನುವ ಶೀರ್ಷಿಕೆಯ ಕೃತಿ ಇದು.

ಮಹಾಭಾಗವತರು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಇದ್ದವರು. ಭಾರತಕ್ಕೆ ಸ್ವಾತಂತ್ರ ಬಂದಮೇಲೂ ಇದ್ದವರು. ಆ ಕಾಲದ ಸಮಾಜ ಸುಧಾರಣೆಯ ಪ್ರಧಾನ ಭಾಗವಾಗಿದ್ದವರು. ಹಿಂದೂ ಮಹಾಸಭೆಯ ಮೊದಲ ಅಧ್ಯಕ್ಷರು. ಅಸ್ಪೃಶ್ಯತೆಯ ನಿವಾರಣೆಗೆ ಟೊಂಕ ಕಟ್ಟಿದ್ದವರು. ತಿಲಕರ ನೆಚ್ಚಿನ ವ್ಯಕ್ತಿ. ಅಂಬೇಡ್ಕರರ ನಿಕಟ ಸಂಪರ್ಕ ಇದ್ದವರು. ಗಾಂಧಿ, ಸಾವರ್ಕರ್, ಮಾಲವೀಯ, ನೆಹರು (ತಂದೆ-ಮಗ ಇಬ್ಬರೂ) ಮೊದಲಾದವರ ಗೌರವಕ್ಕೆ ಪಾತ್ರರಾದವರು. ಭಾರತದಲ್ಲಿಯೇ ಇದ್ದರೂ ಪೋಪ್’ವರೆಗೆ ತಮ್ಮ ಸಂಪರ್ಕ ಸಾಧಿಸಿದವರು. ಸ್ವಾಮಿ ರಾಮರನ್ನು ತಮ್ಮ ಉತ್ತರಾಧಿಕಾರಿಯಾಗಿಸಿದ್ದವರು. ಗೋಂದಾವಲೇಕರ ಮಹಾರಾಜರ ಮೆಚ್ಚಿನ ಶಿಷ್ಯರು. ಕರವೀರ ಶಾಂಕರ ಪೀಠದ ಪೀಠಾಧಿಪತಿಗಳಾಗಿದ್ದವರು. ಸಂಸ್ಕೃತಕ್ಕಾಗಿ ಅಹರ್ನಿಶಿ ದುಡಿದವರು. ಆ ಕಾಲದಲ್ಲಿಯೇ ಇಷ್ಟಪಟ್ಟು ಬಂದ ವಿದೇಶೀ ಮಹಿಳೆಯನ್ನು ಹಿಂದೂ ಧರ್ಮಕ್ಕೆ ಸೇರಿಸಿಕೊಂಡವರು. ಘರ್ ವಾಪಸಿಗೆ ನೆರವಾದವರು. ಅನೇಕ ಕೃತಿಗಳನ್ನು ರಚಿಸಿದ್ದರು.

ಶಾಸ್ತ್ರ ಪಾಂಡಿತ್ಯ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ಪ್ರಗಲ್ಭತೆ, ಧರ್ಮದ ಕುರಿತಾದ ಸ್ಪಷ್ಟ ನೋಟ, ಪೌರ್ವಾತ್ಯದ ಕುರಿತಾಗಿ ಇರುವಷ್ಟೇ ಪಾಶ್ಚಿಮಾತ್ಯದ ಅರಿವು, ಸಮಕಾಲದ ಸಮಸ್ಯೆಗೆ ಸ್ಪಂದಿಸುವ ಮನೋಭಾವ, ದೀನದುರ್ಬಲರ ಕುರಿತಾದ ಸಹಾನುಭೂತಿ, ಶಿಕ್ಷಣ ವಿಧಾನದ ಕುರಿತು ಸ್ಪಷ್ಟತೆ ಇಂತಹ ಹಲವು ಗುಣಗಳ ಸಂಗಮವಾಗಿದ್ದವರು.

ಇಂತಹ ಮಹಾಭಾಗವತರು ಕರ್ನಾಟಕದವರು ಎನ್ನುವುದು ಹೆಮ್ಮೆಯ ಸಂಗತಿ. ಪೀಠಾಧಿಪತಿಗಳಾಗುವ ಮೊದಲು ಧಾರವಾಡ, ಬೆಂಗಳೂರುಗಳಲ್ಲಿ ತಮ್ಮ ಕಾರ್ಯ ನಡೆಸಿದ್ದರು. ಅನಂತರ ಮಹಾರಾಷ್ಟ್ರದಲ್ಲಿ ನೆಲೆ ನಿಂತರಾದರೂ ಅವರ ವ್ಯಾಪ್ತಿ ಭಾರತವೇ ಆಗಿತ್ತು.

ಡಾ|| ರಾ.ಅ.ಜಾಲಿಹಾಳ ಅವರು ಇತಿಹಾಸವನ್ನು ಸಂಶೋಧಿಸಿ ಈ ಕೃತಿ ಬರೆದಿದ್ದಾರೆ. ಸರಳವಾಗಿ ಅವರು ಹೇಳುತ್ತಾ ಹೋಗುತ್ತಾರೆ. ಬರಿಯ ಘಟನೆಗಳನ್ನು ನಿರೂಪಿಸದೇ ಮಹಾಭಾಗವತರ ತಾತ್ತ್ವಿಕತೆಯನ್ನು ಹೇಳುವುದು ಇದರ ಪ್ರಧಾನ ಅಂಶ. ಜೊತೆಗೆ ಆ ಕಾಲದ ವ್ಯಕ್ತಿ, ಸನ್ನಿವೇಶ ಮೊದಲಾದವುಗಳ ವಿಮರ್ಶೆಯೂ ಇದರಲ್ಲಿದೆ. ಮಾನನೀಯ ಕೃ ಸೂರ್ಯನಾರಾಯಣ ರಾವ್ ಅವರ ಮುನ್ನುಡಿ ಮತ್ತು ಇತಿಹಾಸ ತಜ್ಞ ಸೂರ್ಯನಾಥ ಕಾಮತರ ಹಿನ್ನುಡಿ ಕೃತಿಯ ಘನತೆಯನ್ನು ಹೆಚ್ಚಿಸಿದೆ.

MORE FEATURES

ಗಾಂಧೀಜಿಯವರ ಅಂತರಾತ್ಮವನ್ನು ಅರಿಯಲು ಸಹಕಾರಿಯಾಗಬಲ್ಲ ಕೃತಿ

02-11-2024 ಬೆಂಗಳೂರು

"ಇತಿಹಾಸವನ್ನು ಮುರಿದು ಕಟ್ಟುವುದರ ಜತೆಗೆ ಅಲ್ಲಿರುವ ಲೋಪದೋಷಗಳನ್ನು ಸರಿಪಡಿಸುತ್ತಾ ಸತ್ಯವನ್ನು ನಾವು ದಾಖಲಿಸಬೇಕ...

ಕವಿಯಾದವನು ಕೇವಲ ಕಾವ್ಯೋದ್ದೋಗದ ಕೃಷಿಯಲ್ಲಿ ತೊಡಗಿಸಿ ಕೊಂಡಿರುವವನು ಮಾತ್ರವಲ್ಲ

02-11-2024 ಬೆಂಗಳೂರು

"ಕವಿತೆ ಬಗ್ಗೆ ಹಿಂದಿನಿಂದ ಇವತ್ತಿನವರೆಗೆ ವಿದ್ವಾಂಸರು ಹತ್ತಾರು ನುಡಿಗಳನ್ನು ಹೇಳುತ್ತಲೆ ಬಂದಿದ್ದಾರೆ. ಅಂದರೆ ತ...

ಇಡೀ ಕವಿತೆಗಳಲ್ಲಿ ರಾರಾಜಿಸಿವುದು ಗಾಂಧಿ ಮತ್ತು ಗಾಂಧಿವಾದ

02-11-2024 ಬೆಂಗಳೂರು

"ರಾಜಿಯಾಗದ ರಕ್ತದ ಕಣ ಸದ್ಯ ಸಮಾಜಕ್ಕೆ ಹಿಡಿದ ಕನ್ನಡಿಯ ಬಿಂಬವಾಗಿದೆ. ಯಾವುದೇ ಮುಲಾಜಿಗೂ ರಾಜಿಯೇ ಇಲ್ಲ. ನೈಜ ನೋವ...