"ರಾಜಿಯಾಗದ ರಕ್ತದ ಕಣ ಸದ್ಯ ಸಮಾಜಕ್ಕೆ ಹಿಡಿದ ಕನ್ನಡಿಯ ಬಿಂಬವಾಗಿದೆ. ಯಾವುದೇ ಮುಲಾಜಿಗೂ ರಾಜಿಯೇ ಇಲ್ಲ. ನೈಜ ನೋವಿಗೆ ಅನ್ಯಾಯಕ್ಕೆ ಪ್ರತಿಭಟನೆಯ ಕಾವು ಖಂಡಿತ ಏರುವದಿಲ್ಲ. ಆದರೆ ರಾಜಕೀಯ ಕೋಮು ದಳ್ಳುರಿಗೆ ಅದೆಷ್ಟು ಬೇಗ ಬಡ ಮಕ್ಕಳ ಪ್ರತಿಭಟನೆ ಬೆಂಕಿ ಹತ್ತುತದೆ ಎಂದರೆ ಅಲ್ಲಿ ಏನಾಗುತ್ತಿದೆ ಎಂಬುದು ಸ್ವತಃ ಪ್ರತಿಭಟನಾಕಾರರಿಗೂ ತಿಳಿದಿರುವದಿಲ್ಲ," ಎನ್ನುತ್ತಾರೆ ಚಿರಂಜೀವಿ ರೋಡಕರ್. ಅವರು ಸುರೇಶ ಎಲ್. ರಾಜಮಾನೆ ಅವರ ‘ರಾಜಿಯಾಗದ ರಕ್ತದ ಕಣ’ ಕೃತಿ ಕುರಿತು ಬರೆದ ವಿಮರ್ಶೆ.
ರಾಜಿಯಾಗದ ರಕ್ತದ ಕಣ
ಪ್ರಕಾಶನ :- ರನ್ನ ಭೂಮಿ ಪ್ರಕಾಶನ ರನ್ನ ಬೆಳಗಲಿ
ಪುಟಗಳು :-144
ಬೆಲೆ :-120
ಪ್ರತಿಗಳಿಗೆ ಸಂಪರ್ಕಿಸಿ: 8105631055
ಯುವಕವಿ, ಶಿಕ್ಷಕ ಮಿತ್ರ ಸುರೇಶ ರಾಜಮಾನೆ ಅವರ ಮತ್ತೊಂದು ಕವನ ಸಂಕಲನ ಬಿಡುಗಡೆಯಾಗಿದೆ. ಸುಡುವ ಬೆಂಕಿಯ ನಗುವಲ್ಲು ಮೌನ ಯುದ್ಧವನ್ನೇ ಸಾರಿದ ಕವಿ, ಕತ್ತಲ ಗರ್ಭದ ಬೆಳಕಿನಲ್ಲಿ ವಿಶ್ವಾಸದ ಹೆಜ್ಜೆ ಇಟ್ಟ ಅಕ್ಷರದ ಅರಸ ಈ ಸಾರಿ ಯಾವುದೇ ಕಾರಣಕ್ಕೂ ರಾಜಿಯಾಗಲ್ಲ ಎಂದು ರಕ್ತದ ಕಣಕಣದ ಸಾಲುಗಳ ಮೂಲಕ ಹೇಳಿದ್ದಾರೆ. ರನ್ನ ಭೂಮಿ ಪ್ರಕಾಶನ ರನ್ನ ಬೆಳಗಲಿ ಈ ಕವನ ಸಂಕಲನವನ್ನು ಪ್ರಕಾಶಿಸಿದ್ದಾರೆ.
ರಾಜಿಯಾಗದ ರಕ್ತದ ಕಣ ಸದ್ಯ ಸಮಾಜಕ್ಕೆ ಹಿಡಿದ ಕನ್ನಡಿಯ ಬಿಂಬವಾಗಿದೆ. ಯಾವುದೇ ಮುಲಾಜಿಗೂ ರಾಜಿಯೇ ಇಲ್ಲ. ನೈಜ ನೋವಿಗೆ ಅನ್ಯಾಯಕ್ಕೆ ಪ್ರತಿಭಟನೆಯ ಕಾವು ಖಂಡಿತ ಏರುವದಿಲ್ಲ. ಆದರೆ ರಾಜಕೀಯ ಕೋಮು ದಳ್ಳುರಿಗೆ ಅದೆಷ್ಟು ಬೇಗ ಬಡ ಮಕ್ಕಳ ಪ್ರತಿಭಟನೆ ಬೆಂಕಿ ಹತ್ತುತದೆ ಎಂದರೆ ಅಲ್ಲಿ ಏನಾಗುತ್ತಿದೆ ಎಂಬುದು ಸ್ವತಃ ಪ್ರತಿಭಟನಾಕಾರರಿಗೂ ತಿಳಿದಿರುವದಿಲ್ಲ. ಆದರೆ "ಪ್ರತಿಭಟನೆಗೆ ಸಾಕ್ಷಿಯಾಗಿ ಅವರಿರುತ್ತಾರೆ?" ಎಂಬುದನ್ನು ಕವಿ ಪ್ರತಿಭಟನೆ ಕವನದಲ್ಲಿ ಮಾರ್ಮಿಕವಾಗಿ ಬರೆದಿದ್ದಾರೆ. ಮುಂದುವರೆದು ಮತ್ತೊಂದು ಕವನದಲ್ಲಿ ಗೂಡಿನೊಳಗೆ ಕುಂತ ಗುಬ್ಬಿಗೆ ತಿಳಿಯಬೇಕಾಗಿದೆ ತಿನ್ನಲು ಜೊಳ ಹಾಕಿ ಕರೆಯುವ ಗೌಡ್ತಿಯ ಬಂದೂಕಿನ ಶಬ್ದಕ್ಕೆ ಹೆದರುವದಕ್ಕಿಂತ ಉಪವಾಸ ಸಾಯುವುದೇ ಮೇಲೆಂದು, ಹೀಗೆ ಬರೆಯುತ್ತಾ ಸದ್ಯದ ಸಮಾಜದಲ್ಲಿ ಆಳುವವರು ಬಡವರನ್ನು ಅಳಿಸುವ ತಂತ್ರ ಮತ್ತು ಎಚ್ಚರಿಕೆಯ ಬಗ್ಗೆ ವಿವರಿಸಿದ್ದಾರೆ. ಬಂಡ ಬಾಳು ಬಾಳುವವರಿಗೆ ಚಾಟಿ ಏಟು ಬಾರಿಸಿ ಲಾಯಕ್ಕಿಲದ ನಾಯಕರುಗಳಿಗೆ ಹಿಗ್ಗಾ ಮುಗ್ಗ ಝಾಡಿಸಿ ಸ್ವಾರ್ಥ ಸುಡಗಾಡಿನ ಅಸಮರ್ಥರ ಅರ್ಥವನ್ನು ಲಾಯಕ್ಕಾಗಿ ವಿವರಿಸಿದ್ದಾರೆ.
ಸಮತೆಗಾಗಿ ಹಾತೊರೆಯುತ್ತಿದೆ ಹೂವು ಕವನದಲ್ಲಿ ಅರಮನೆಯೊಳಗಿನ ಹೂವು ಎಂದಿಗೂ ಸಮತೆಗಾಗಿ ಹಾತೊರೆವದಿಲ್ಲ. ಬೀದಿ ಬದಿಯ ಹೂವೇ ಅಸಲಿ ಬದುಕು ಅನುಭವಿಸಿ ಸಮತೆಗಾಗಿ ಹಾತೊರೆಯುತ್ತದೆ. ಹಸನು ಮಾಡುವವರ ಬದುಕು ಹಸನಾಗಲು ಶಿಕ್ಷಣ ಅವಶ್ಯಕವಾಗಿದ್ದೂ ಆಳು ಆಳುವಂತವನಾಗಬೇಕು ಎಂಬುದು ಕವಿಯ ಆಶಯವಾಗಿದೆ. ಈ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ಬೆಂಕಿ ಕಡ್ಡಿ ತನ್ನ ಆಕ್ರೋಶ ಹೊರಹಾಕುತ್ತಿದೆ. ಆ ಬೆಂಕಿ ಕಡ್ಡಿಯಲ್ಲಿ ರೋಷವಿದೆ, ಆಕ್ರೋಶವಿದೆ, ಸೇಡಿದೆ ಆದಾಗ್ಯೂ ಅದು ತಣ್ಣಗಿದೆ. ಆದರೆ ಬಿಸಿಯ ಬೆಸುಗೆಗಾಗಿ ಕಾಯುತ್ತಿರುವ ಕಡ್ಡಿ ಒಮ್ಮೆ ಜ್ವಾಲೆಯಾಗುವುದು ನಿಶ್ಚಿತ ಎಂದು ಹೇಳುತ್ತಾರೆ.
ಇಡೀ ಕವಿತೆಗಳಲ್ಲಿ ರಾರಾಜಿಸಿವುದು ಗಾಂಧಿ ಮತ್ತು ಗಾಂಧಿವಾದ. ಗಾಂಧಿ ನೋಟವೇ ಅಂಥದ್ದು ಅಲ್ಲಿ ಅಹಿಂಸೆಯಿದೆ, ಪ್ರಾಮಾಣಿಕತೆಯಿದೆ, ಹೋರಾಟವಿದೆ ಮುಖ್ಯವಾಗಿ ಸತ್ಯವಿದೆ. ಆದರೆ ವಾಸ್ತವ ಗಾಂಧೀಜಿ ನೋಟಕ್ಕಿಂತ ಗಾಂಧಿಯಿರುವ ನೋಟಿಗೆ ಬೆಲೆಯಿದೆ. ಭ್ರಷ್ಟಾಚಾರ ವಿರೋಧಿಸಿದ ಗಾಂಧೀಜಿಯವರ ಪ್ರತಿಮೆಯ ಮುಂದೆ ಕಪ್ಪು ಹಣದ ಕುಬೇರರು ಹೋರಾಟಗಿಳಿದಿದ್ದಾರೆ. ಇವರ ಸ್ವಾರ್ಥ ಹೋರಾಟ ಕಂಡು ಗಾಂಧೀಜಿಯೇ ಕೆಳಗಿಳಿದು ಅಲ್ಲಿಂದ ಹೊರಟರೂ ಸಹ ಅಲ್ಲಿದ್ದವರು ಯಾರು ಗಾಂಧೀಜಿ ಹಂತಕ್ಕೆ ಮೇಲೇರಲೇ ಇಲ್ಲ. ಇಲ್ಲಿ ಸತ್ಯ ಮತ್ತು ಸುಳ್ಳುಗಳು ಜಿದ್ದಿಗೆ ಬಿದ್ದಿವೆ ಸುಳ್ಳು ಪ್ರಮಾಣಿಸಿ ಹೇಳುತ್ತಿದೆ ಸತ್ಯವನ್ನೇ ಹೇಳುತ್ತೇನೆಂದು. ಕವಿ ಗಾಂಧಿಯ ನಗುವನ್ನು ಮಾರ್ಮಿಕವಾಗಿ ಹೇಳುತ್ತ ಗಾಂಧಿ ನೋಟಿನಲ್ಲಿ ಮಾತ್ರ ನಗುತ್ತಾರೆ, ವಾಸ್ತವವಾಗಿ ನಡೆಯುತ್ತಿರುವುದು ಗಾಂಧಿಗೆ ವಿರೋಧವಾಗಿಯೇ ಇದೆ ಎಂದು ಹೇಳಿ ಗಾಂಧಿಯನ್ನೇ ' ನೀ ಹಿಂಗ್.....ಮತ್ತ್ ss..., ನೀ ಯಾಕ್ ಹಂಗಲ್ಲ ಎಂದು ಪ್ರಶ್ನೆ ಮಾಡುವ ಕವಿ ಗಾಂಧಿ ಆದರ್ಶಗಳನ್ನು ಎತ್ತಿ ಹಿಡಿಯುತ್ತಾರೆ.
ತಾಯಿ ಎದೆ ಹಾಲು ಕುಡಿದವರಿಗೆ ಹೆಣ್ಣೆದೆಯ ಬಯಕೆ, ಗರ್ಭಗುಡಿಯ ಗೋಡೆ ಕೆಡವಿ ಹೊರ ಬಂದವರಿಗೆ ರವಿಕೆಯ ಹರಿದು ನಕ್ಕವರಿಗೆ ದಿಕ್ಕಾರ ಕೂಗುತ್ತದೆ ರವಿಕೆಯ ಹರಿದು ನಕ್ಕವರಿಗೆ ಕವನದ ಸಾಲುಗಳು. ಕರೋನ ಲಾಕ್ ಡೌನ್ ಏರಿನ ಮೇಲೆ ಇದ್ದ ಜನರ ಬದುಕನ್ನ ಒಮ್ಮೆಲೇ ಡೌನ್ ಮಾಡಿಸಿತು. ನಿಜಕ್ಕೂ ಆ ಬದುಕು ಕರಾಳವಾಗಿತ್ತು. ಸ್ವಾರ್ಥ ಮನುಜನ ಹಪಾಹಪಿಗೆ ನಿಸರ್ಗವೇ ಹೇರಿದ ಕರ್ಫ್ಯೂ ಆಗಿತ್ತು ಎಂಬುದು ಕೂಡ ಕವಿಯ ಸಮಾಧಾನಿಕ ಮಾತುಗಳು.
ಸಾರ್ವಜನಿಕರಿಗೆ ಮಾತ್ರ ಕವನದಲ್ಲಿ 'ಮನೆ ಇಲ್ಲದವರಿಗಾಗಿ, ಮನೆಯಲ್ಲಿ ಇಲ್ಲದವರಿಗಾಗಿ ಶೌಚಾಲಯಕ್ಕೆ ಭೂಮಿ ಪೂಜೆ ನೆರವೇರಿಸಿ ಬಂದೆ ' ಎಂದು ಹೇಳುತ್ತಾ ಬಡಜನರಿಗೆ ಒಂದೊತ್ತಿನ ಊಟಕ್ಕೂ ನೀಡದೆ, ಆಸರೆ ನೀಡದೆ ತಮ್ಮ ಸುಳ್ಳು ಪ್ರಚಾರಕ್ಕೆ ರಾಜ್ಯಭಾರ ಮಾಡುವ ಸುಳ್ಳಿನ ಸಮಯ ಸಾಧಕರಿಗೆ ಬಿರುಸಾಗಿ ಹೇಳುತ್ತಾರೆ. 'ಇದು ಸಾರ್ವಜನಿಕರಿಗೆ ಮಾತ್ರ ಅತ್ಯಾಚಾರಿಗಳಿಗಲ್ಲ ಎಂದು.
ಕವಿಯ ಬದುಕು ಬರಹಕ್ಕೆ ಬೇಂದ್ರೆ ಅಜ್ಜನೇ ಸ್ಫೂರ್ತಿ. ಕನ್ನಡಕದ ಕನ್ನಡದ ಅಜ್ಜ ಬೇಂದ್ರೆ ಅಜ್ಜನ ನೆನೆಹುತ್ತ ನನ್ನೀ ಬದುಕಿಗೆ ಅಜ್ಜನೇ ಮಾಸ್ತರ ಎಂದು 'ಭಾಳ್ ಚಂದ್ ' ಬರ್ದಿದಾರೆ. ಈ ಸಂಕಲನದ ಕವಿತೆಗಳು ಬಹಳ ಪರಿಣಾಮಕಾರಿಯಾಗಿವೆ, ನಾವು ಕವಿಯನ್ನು ಕೆಣಕಬಹುದು ಆದರೆ ಅವರ ಕವಿತೆಗಳನ್ನಲ್ಲ ಎಂದು ಅವರ ಆಂಬೊಣ.ಕವಿತೆ ಕಟ್ಟುವುದು ಕವಿಗೆ ಅನಿವಾರ್ಯವಾಗಿದೆ.ಆದರೆ ಕವಿಗೆ ಕವನ ಕಟ್ಟುವುದು ಮಾತ್ರ ತೆರೆದ ಹೃದಯಗಳಿಗೆ ಹೊರತು ಸಂಕುಚಿತ ಇರುವವರಿಗೆ ಅಲ್ಲ. "ನೀನು ಕಲ್ಲು ಹೃದಯದವನು ಎಂದೂ ನೀ -ನಾಡಿದ ಮಾತೂ ಕೂಡ ಕವಿತೆಯಾಗುತ್ತದೆ. ಭಾವದ ಜೊತೆ ಭಾವ ಬೆಸೆದು ಕವಿತೆ ಬದುಕಿನ ಜೊತೆಯಾಗುತ್ತದೆ ಎಂದು ಹೇಳುತ್ತಾ 'ಬರೆಯುವುದು ಅನಿವಾರ್ಯ ಎನಗೆ ' ಎಂದು ಹೇಳುತ್ತಾರೆ.
ಕವಿಯ ಕವನಗಳು ಓದುಗರನ್ನು ತರ್ಕದ ತಾರಕಕ್ಕೆ ಒಯುತ್ತವೆ. ಓದುಗರನ್ನೆ ವಿಮರ್ಶೆಗೆ ಒಳಪಡಿಸುತ್ತವೆ. ಎಲ್ಲಿಯೂ ರಾಜಿಯಾಗದ ಕವಿ ಹುಡುಗಿ ಮತ್ತು ಅವಳ ಪ್ರೀತಿಯ ವಿಷಯಕ್ಕೆ ಬಂದಾಗ ಅದೇಗೆ ರಾಜಿಯಾಗುತ್ತಾರೆ ಎಂದೂ ಕೂಡ ಓದುಗರಿಗೆ ಅನಿಸುತ್ತದೆ. ನಂತರ ಯುವ ಕವಿ ಅಲ್ಲವೇ ಎಂದು ಓದುಗನೇ ಸಮಾಧಾನ ಮಾಡಿಕೊಳ್ಳುವ ಹಂತಕ್ಕೆ ಸಮಾಧಾನಿಸುತ್ತವೆ.
-ಚಿರಂಜೀವಿ ರೋಡಕರ್.
"ಆತ್ಮ-ಪರಮಾತ್ಮ, ಭೂತ-ಪ್ರೇತ, ಧರ್ಮ-ಅಧರ್ಮಗಳಿಗೆ ಹೆದರಿ ಬದುಕುವುದು ಸರಿಯಲ್ಲ ಎನ್ನುತ್ತಾರೆ. ಅಂಧಶ್ರದ್ಧೆಯಿಂದ ಮ...
"ಪ್ರಪಂಚದಾದಂತ್ಯ ರೈತರು, ಸಾಮಾನ್ಯ ಜನರು, ಹೆಂಗಸರು, ಮಕ್ಕಳು ಹೇಗೆ ತಮ್ಮದಲ್ಲದ ಯುದ್ಧದಂತಹ, ಕ್ಷಾಮದಂತಹ ಸದಾ ಕಾಡ...
"ಈ ಕೃತಿಯಲ್ಲಿ ವಿಜಯನಗರ ಸಾಮ್ರಾಜ್ಯದ ಶಂಕುಸ್ಥಾಪನೆಯ ವಿವರ, ವಿದ್ಯಾರಣ್ಯರ ಪ್ರಶಂಸೆ, ಕೃಷ್ಣರಾಯ ನಿಗೆ ಮಂತ್ರಿಗಳ ...
©2024 Book Brahma Private Limited.