"ಈಗ ಬಂಡಾಯದ ಭರತ ಇಳಿದರೂ, ಆ ಮೂಲದ್ರವ್ಯ ಮರೆಯಾಗದೆ, ಈ ಎರಡೂ ಪ್ರಕಾರಗಳಲ್ಲಿ ನಡೆದ ಸಂಕರದ ಪರಿಣಾಮವಾಗಿ, ಸಂಕಥನ ಎಂಬ ಹೊಸ ಪ್ರಕಾರ ಮೂಡಿ ಬರುತ್ತಿದೆ. ಇದು ಪದ್ಯದ ಲಯವನ್ನು ಮತ್ತು ಗದ್ಯದ ಚಿಂತನಶೀಲತೆಯನ್ನು, ಒಟ್ಟಿಗೆ ತರುವ ಪ್ರಯತ್ನದ ಫಲವಾಗಿ ರೂಪುಗೊಂಡದ್ದು. ಪ್ರಸ್ತುತ, ಕಮಲಾ ಅವರ ಮೇಲಿನ ಶೀರ್ಷಿಕೆಯ ಹೊತ್ತಗೆ, ಈ ನೂತನ ಆವಿಷ್ಕಾರಕ್ಕೆ ಸೇರಿದ್ದು," ಎನ್ನುತ್ತಾರೆ ರಘುನಾಥ್ ಕೃಷ್ಣಾಮಾಚಾರ್. ಅವರು ಎಂ.ಆರ್. ಕಮಲ ಅವರ ‘ಈಗ ಇಲ್ಲಿ ಎಲ್ಲವೂ ಮೆಸ್ಸಿ’ ಕೃತಿ ಕುರಿತು ಬರೆದಿರುವ ವಿಮರ್ಶೆ.
ಎಂ.ಆರ್. ಕಮಲಾ ಕನ್ನಡದ ಪ್ರಯೋಗಶೀಲ ಲೇಖಕಿ. ನನ್ನ ನಾಲ್ಕುವರೆ ದಶಕಗಳ ಸಹಪಾಠಿಗಳಲ್ಲಿ ಗೆಳತಿ ಕಮಲಾ ಕೂಡ ಒಬ್ಬರು. ಅವರ ಪ್ರಯೋಗಶೀಲತೆಗೆ ನಾನಾ ಮುಖಗಳು ಇವೆ. ಅವು ಕಾವ್ಯ, ಗದ್ಯ, ಗಪದ್ಯಗಳ ಸಂಕಥನ. ಇದಲ್ಲದೆ ನೊಂದ ಹೆಣ್ಣುಗಳ ಕಾವ್ಯ ಮತ್ತು ಕಥನಗಳನ್ನು ಕನ್ನಡಕ್ಕೆ ತಂದು, ಅದರ ಕ್ಷಿತಿಜವನ್ನು ವಿಸ್ತರಿಸಿದವರಲ್ಲಿ ಇವರೂ ಒಬ್ಬರು.
80ರ ದಶಕದಲ್ಲಿ ನಾವು ಓದುತ್ತಿದ್ದಾಗ ಬಂಡಾಯ ಸಾಹಿತ್ಯದವರು " ಬೀದಿಗೆ ಬರಲಿ ಕಾವ್ಯ" ಎಂಬ ಘೋಷಣಾ ವಾಕ್ಯವನ್ನು ಜಾರಿಗೆ ತಂದರು. ಅದರ ಪರಿಣಾಮವಾಗ "ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ" ಎಂಬುದು ಅಂದು ರೂಪುಗೊಂಡ ಕಾವ್ಯದ ಜೀವಧ್ವನಿಯಾಯಿತು. ಆದರೆ ಇದು ಗದ್ಯ ಸಾಹಿತ್ಯದಲ್ಲಿ ಸಾಧ್ಯವಾದುದು ದೇವನೂರು ಅವರ ಒಡಲಾಳದ ಮೂಲಕ.
ಈಗ ಬಂಡಾಯದ ಭರತ ಇಳಿದರೂ, ಆ ಮೂಲದ್ರವ್ಯ ಮರೆಯಾಗದೆ, ಈ ಎರಡೂ ಪ್ರಕಾರಗಳಲ್ಲಿ ನಡೆದ ಸಂಕರದ ಪರಿಣಾಮವಾಗಿ, ಸಂಕಥನ ಎಂಬ ಹೊಸ ಪ್ರಕಾರ ಮೂಡಿ ಬರುತ್ತಿದೆ. ಇದು ಪದ್ಯದ ಲಯವನ್ನು ಮತ್ತು ಗದ್ಯದ ಚಿಂತನಶೀಲತೆಯನ್ನು, ಒಟ್ಟಿಗೆ ತರುವ ಪ್ರಯತ್ನದ ಫಲವಾಗಿ ರೂಪುಗೊಂಡದ್ದು. ಪ್ರಸ್ತುತ, ಕಮಲಾ ಅವರ ಮೇಲಿನ ಶೀರ್ಷಿಕೆಯ ಹೊತ್ತಗೆ, ಈ ನೂತನ ಆವಿಷ್ಕಾರಕ್ಕೆ ಸೇರಿದ್ದು.
ಮುಂಬಯಿಯಲ್ಲಿ ಇದ್ದು, ಅಲ್ಲಿನ ಕನ್ನಡ ಕಾವ್ಯವನ್ನು ಕುರಿತು ಅಧ್ಯಯನ ಮಾಡಿದ ನನಗೆ, ಅಲ್ಲಿನ ಕವಿ ಅರವಿಂದನಾಡಕರ್ಣಿಯವರು ಹೇಳುತ್ತಿದ್ದ ಕಾವ್ಯ ಹುಟ್ಟುವುದು ಖೆಯೊಸ್( ಗೊಂದಲದಿಂದ) ನಿಂದ ಎಂಬ ಮಾತು, ಇದನ್ನು ಓದುವಾಗ ಮರಳಿ ನೆನಪಾಯಿತು. ಅದನ್ನು ಅವರು ಕಾವ್ಯಕ್ಕೆ ಅನ್ವಹಿಸಿ ಹೇಳಿದ್ದನ್ನು, ಕಮಲಾ ಅವರ ಈ ಕೃತಿಗೂ ವಿಸ್ತರಿಸಬಹುದು. ಅದರಂತೆ ಅಲ್ಲಮನ "ಅಪರಿಮಿತ ಕತ್ತಲೆಯೊಳಗೆ ವಿಪರೀತದ ಬೆಳಕು " ಎನ್ನುವ ಮಾತು ಕೂಡಾ ಇಲ್ಲಿನ ಬರಹಕ್ಕೂ ಅನ್ವಹಿಸುತ್ತದೆ. ಏಕೆಂದರೆ, ಅವರೆ ಒಂದು ಕಡೆ ಗಿರೀಶ್ ಕಾರ್ನಾಡರ ಯಯಾತಿಯ ಮಾತನ್ನು ಉಲ್ಲೇಖ ಮಾಡಿದಂತೆ "ಕತ್ತಲೆಯ ದಾರಿಯಲ್ಲಿ ನಡೆಯಬಹುದು, ಕನಸುಗಳಿಲ್ಲದ ದಾರಿಯಲ್ಲಿ ನಡೆಯಬಹುದೆ? ಏಕೆಂದರೆ ಈಗ ಕನಸುಗಳ ಕತ್ತು ಹಿಸುಕುವ ಕೆಲಸ ಸತತವಾಗಿ ನಡೆಯುತ್ತಿದೆ. ಇದನ್ನು ಮೂರು ನೆಲೆಗಳಲ್ಲಿ ಗುರುತಿಸಬಹುದು ಅವು, ಪ್ರಾಕೃತಿಕ: ಋತುಗಳು ಇಲ್ಲಿ ತಮ್ಮ ಲಯವನ್ನು ಕಳೆದುಕೊಂಡಿವೆ. ಇದರ ಪರಿಣಾಮವಾಗಿ ಲೇಖಕಿ ಈಗ 'ಸರ್ವ ಋತುಬಂದರಾ'ಗುವುದು ಅನಿವಾರ್ಯವಾಗಿದೆ. ಅದರಂತೆ ಮರಗಳು ಒಣಗಿ ಬೋಳಾಗಿವೆ. ಆದ್ದರಿಂದ ನೋವೇ ಮರವಾಗಿದೆ ಇಲ್ಲ ನೋವು ಅ ಮರವಾಗಿದೆ. ಮನುಷ್ಯಲೋಕ: ತಮ್ಮ ಕ್ಷುದ್ರತನವನ್ನು ಇನ್ನೊಬ್ಬರ ಬದುಕಿನಲ್ಲಿ ಅನಾವಶ್ಯಕವಾಗಿ ಮೂಗುತೂರಿಸಿ, ಒಬ್ಬರು ಇನ್ನೊಬ್ಬರ ಕಾಲೆಳೆಯುವ ಮೂಲಕ ಮೆರೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಲೇಖಕಿ ದಿವ್ಯನಿರ್ಲಕ್ಷ್ಯತೆಯನ್ನು ಮೈಗೂಡಿಸಿಕೊಂಡಿದ್ದಾರೆ.
ಭೌತಿಕ ಪ್ರಪಂಚ: ಲೇಖಕಿ ಹುಟ್ಟಿ ಬೆಳೆದ ಮನೆ ಈಗ ಜೀರ್ಣಾವಸ್ತೆಗೆ ತಲುಪಿದ್ದರೂ ಅದು ಇವರ ಭಾವಪ್ರಪಂಚದಲ್ಲಿ ಸುಭದ್ರವಾಗಿದೆ. ಅದರ ನೆನಪುಗಳು ಸಜೀವವಾಗಿವೆ. ಅದನ್ನು ಅಭಿವ್ಯಕ್ತಿಸಲು ಮೊದಲು ಕವಿ ಪದಗಳ ಬೆನ್ನು ಹತ್ತಿದರೆ, ಈಗ ಪದಗಳೆ ಕವಿಯ ಬೆನ್ನುಹತ್ತಿವೆ. ಏಕೆಂದರೆ ಈಗ ಪ್ರತಿಪದವೂ ಅವರಿಗೆ ಪ್ರಾಯೋಪವೇಶವಾಗಿದೆ. ಅದರಂತೆ ಕವಿತೆ ಕೂಡಾ, ತನ್ನನ್ನು ತಪ್ಪಿಸಿಕೊಳ್ಳಲು ಯತ್ನಿಸುವ ಕವಿಯ ಬೆನ್ನುಹತ್ತಿದೆ. ಏಕೆಂದರೆ ಕವಿ ಕಾವ್ಯದ ಬೆನ್ನು ಹತ್ತುವುದನ್ನು ಕೈ ಬಿಟ್ಟು, ಬಾಲ್ಯದಿಂದ ನಕ್ಷತ್ರಗಳ ಬೆನ್ನು ಹತ್ತಿದ್ದಾರೆ. ಅದರ ಫಲವಾಗಿ ಸ್ವತಃ ನಕ್ಷತ್ರವಾಗಿ , ಬೆಳದಿಂಗಳಾಗಿ ಅವರಲ್ಲಿ ಮೈದಳೆದಿವೆ, ಅವರು ಅದನ್ನು ಪಸರಿಸುವ ಸಾಧನವಾಗಿದ್ದಾರೆ. ಆದ್ದರಿಂದ, ಯಾವುದೆಲ್ಲ ಈಗ ಗೊಂದಲದ ಗೂಡು ( ಮೆಸ್ಸಿ)ಆಗಿದೆಯೋ ಅದು ಲೇಖಕಿಯನ್ನು ತಬ್ಬಿಬ್ಬುಗೊಳಿಸುವ ಬದಲಿಗೆ, ಅದೆ ಅವರಿಗೆ ಸೃಜನಶೀಲತೆಯ ಸೆಲೆಯಾಗಿ ಪರಿಣಮಿಸಿದೆ. ಆದ್ದರಿಂದಲೆ ಇದು ಈ ಕಾಲದ ಗೊಂದಲದ ಗೂಡಿನ ಕೈಗನ್ನಡಿಯಾಗಿದೆ. ಅಂತೆಯೆ ಈಗ ಇಲ್ಲಿ ಎಲ್ಲವೂ ಒಂದರ ಜೊತೆಗೆ ಇನ್ನೊಂದು ಸೇರಿಹೋಗಿದೆ. ಇಲ್ಲಿನ ಗದ್ಯದಲ್ಲಿ ಪದ್ಯದ ಲಯಸೇರಿದಂತೆ, ಕನ್ನಡ ಕಾವ್ಯ ಪರಂಪರೆಯ ಲಯವೂ ಹಾಸುಹೊಕ್ಕಾಗಿದೆ. ಒಂದು ರೀತಿಯಲ್ಲಿ ಇದರಲ್ಲಿ ನಮ್ಮ ಚಂಪೂ ಕಾವ್ಯಪರಂಪರೆ ಮುಂದುವರೆದಿದೆ. ಕಮಲಾ ಅದರ ಸಮರ್ಥ ಆಧುನಿಕ ವಾರಸುದಾರಿಣಿ. ಪುಸ್ತಕ ಕಳಿಸಿದ್ದಲ್ಲದೆ, ಮೊನ್ನೆ ಲೇಖಕಿಯರ ಸಮ್ಮೇಳನದಲ್ಲಿ ಭೇಟಿಯಾದಾಗ, ನಮ್ಮ ಜತೆಗೆ ನಿಂತ ಭಾವಚಿತ್ರವನ್ನು ಹಂಚಿಕೊಳ್ಳುವ ಮೂಲಕ, ನಮ್ಮ ದೀರ್ಘಕಾಲಿಕ ಅನುಬಂಧವನ್ನು ಅಭಿವ್ಯಕ್ತಿಗೊಳಿಸಿದರು. ಅವರು ಬಳಸಿದ 'ಕಾಸುಮಾಸು' ಶಬ್ದಕ್ಕೆ ಏನು ಅರ್ಥ ಎಂದು ಅವರನ್ನೇ ಕೇಳಿದೆ. ಅದಕ್ಕೆ ಅವರು ಕಾಸಮಾಸ್ ಎಂದರು. ಮೇಟಿಕುರ್ಕೆಯಲ್ಲಿ ಹುಟ್ಟಿದ ಈ ಕಮಲಾ, ಈಗ ಇಡೀ ವಿಶ್ವವನ್ನೆ ಒಳಗೊಳ್ಳುವಂತೆ ಬೆಳೆದು ನಿಂತಿರುವುದು, ಒಂದು ವಿಸ್ಮಯಗಾಥೆಯೇ ಸರಿ. ಕಮಲಾ ಇಂತಹ ಪುಸ್ತಕ ಓದುವ ಅವಕಾಶ ನೀಡಿದ್ದಕ್ಕೆ ಅಭಿನಂದನೆ.
"'ದೊರೆ' ಕಥೆಯಲ್ಲಿ ಒಬ್ಬ ಚಿಕ್ಕ ಹುಡುಗನ ತುಂಟಾಟಗಳನ್ನು ಕೇಂದ್ರವಾಗಿಟ್ಟುಕೊಂಡು ಲಾಕ್ಡೌನ್ ವೇಳೆಯಲ್ಲಿ ...
"ಈ “ಏರುಘಟ್ಟದ ಹಾದಿ” ಆ ಪ್ರಶ್ನೆಗೆ ಮಾತ್ರವಲ್ಲದೇ, ದೇಶದ ಪರಿಸರ ಸಂರಕ್ಷಣಾ ಕಾಯಿದೆ, ಅರಣ್ಯ ಹಕ್ಕು...
“ಕಥೆ ರಚಿಸಿದ ಕಾಲ, ಪರಿಸರ ಮತ್ತು ಹಿನ್ನೆಲೆ ಬೇರೆಬೇರೆಯಾದರೂ ಮನುಷ್ಯನ ಮೂಲಭೂತ ಗುಣಾವಗುಣಗಳನ್ನು ಇಲ್ಲಿನ ಕಥೆಗಳ...
©2025 Book Brahma Private Limited.