Date: 02-07-2023
Location: ಬೆಂಗಳೂರು
''ಕುರುಚಲು ಗಿಡಗಳ ಗೋಡೆ, ಹುಲ್ಲಿನ ಛಾವಣಿ, ಸ್ನಾನಕ್ಕೆ ಶೌಚಕ್ಕೆ ಪರಿತಪಿಸುತ್ತ ಬದುಕುತ್ತಿರುವ ನರಸಮ್ಮ ಮತ್ತು ನಾರಾಯಣಮ್ಮನವರ ಕಥೆಯಲ್ಲ ಇದು ಅವರ ಬದುಕಿನ ವ್ಯಥೆ,'' ಎನ್ನುತ್ತಾರೆ ಅಂಕಣಕಾರ್ತಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ನರಸಮ್ಮ ಮತ್ತು ನಾರಾಯಣಮ್ಮನವರ’ ಜೀವನ ಕಥನವನ್ನು ತೆರೆದಿಟ್ಟಿದ್ದಾರೆ.
'ದೀಪದ ಬುಡದಲ್ಲಿ ಕತ್ತಲು' ಎನ್ನುವ ಹಾಗೆ ಬೆಂಗಳೂರಿನ ಸಮೀಪವಿರುವ ತೂಬ್ ಗೆರೆ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕ್, ಹಿರೇಮುದ್ದೇನಹಳ್ಳಿ ಗ್ರಾಮಕ್ಕೆ ಸರಿಯಾಗಿ ರಸ್ತೆಯಿಲ್ಲ, ಬಸ್ಸಿಲ್ಲ. ಬೆಂಗಳೂರಿನ ರಸ್ತೆಯೊಂದರಲ್ಲಿ ಕೆಲಸ ಹುಡುಕುತ್ತಿದ್ದ ಅಲೆಯುತ್ತಿದ್ದ ಈ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮಾತಾದಾಗ ಅನಾವರಣವಾದ ಅವರ ಪಾಡಿದು.
'ನಾವು ಚಿಕ್ಕಂದಿನಿಂದಲೇ ಕೂಲಿ ಕೆಲಸಕ್ಕೆ ಹೋಗ್ತಿದ್ವಿ. ಕೆಲಸಕ್ಕೆ ಹೋಗದಿದ್ರೆ ಊಟಕ್ಕೆ ಗತಿಯಿರಲಿಲ್ಲ. ಹಾಗಾಗಿ ಶಾಲೆಗೆ ಹೋಗಲು ನಮಗೆ ಅವಕಾಶವಾಗಲಿಲ್ಲ. ಅಪ್ಪ ಅಮ್ಮ ಕಾಡಿನಿಂದ ಸೌದೆ ಆಯ್ದು ಪಕ್ಕದೂರುಗಳಿಗೆ ಹೊತ್ತುಕೊಂಡು ಹೋಗಿ ಮಾರಿ ಅಕ್ಕಿಯ ನುಚ್ಚು ತರುತ್ತಿದ್ದರು. ನಾವು ಚಿಕ್ಕವರಿದ್ದಾಗ ಹಾಕಿಕೊಳ್ಳಲು ಬಟ್ಟೆಯಿಲ್ಲದೆ ಎಷ್ಟೋ ಸಲ ಫುಟ್ಪಾತ್ ಮೇಲೆ ಬಿದ್ದ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದೆವು. ನಾನು ಮೈನೆರೆದು ಎರಡು ತಿಂಗಳಲ್ಲಿ ನನ್ನ ಮದುವೆ ಆಯ್ತು ಎನ್ನುತ್ತಾರೆ ನರಸಮ್ಮ . ಗಂಡನ ಮನೆಯಲ್ಲೂ ಹೀಗೇ ಸಂಕಷ್ಟ. ನನಗೆ ಎರಡು ಗಂಡುಮಕ್ಕಳು. ಗಂಡ ಲಾರಿ ಕ್ಲೀನರ್ ಕೆಲಸಕ್ಕೆ ಹೋದರೆ 15 ದಿನಕ್ಕೊಮ್ಮೆ ಮನೆಗೆ ಬಂದರೆ ಹೆಚ್ಚು. ನಮ್ಮ ಕಷ್ಟ ನಮ್ಮ ಮಕ್ಕಳಿಗೆ ಬರಬಾರದು ಅವರಾದರೂ ಓದಿ ವಿದ್ಯಾವಂತರಾಗಲಿ ಎಂದು ಕೂಲಿನಾಲಿ ಮಾಡಿ ಓದಿಸುತ್ತಿದ್ದೇನೆ. ಎರಡನೆಯ ಮಗನಿಗೆ ಮೂರ್ಛೆರೋಗವಿದೆ. ಕೈಯಲ್ಲಿ ಹಣವಿಲ್ಲ ಆದರೆ ಮಗ ಹುಷಾರಾದ್ರೆ ಸಾಕೆಂದು ಕಂಡಕಂಡಲ್ಲಿ ಸಾಲ ಮಾಡಿ ಆಸ್ಪತ್ರೆಗೆ ತೋರಿಸುತ್ತಿದ್ದೇನೆ. ನಮಗೆ ಇರೋಕೆ ಸ್ಥಳವಿಲ್ಲ, ಮನೆಯಿಲ್ಲ ಎಂದು ಗುಟ್ಟಲ್ ಗಟ್ಟು ಎಂಬ ಬೆಟ್ಟಕ್ಕೆ ಬಂದು ನಾಲ್ಕೈದು ಟ್ರಾಕ್ಟರ್ ಮಣ್ಣು ಹೊಡೆಸಿ, ನೆಲ ಸಮತಟ್ಟು ಮಾಡಿ ಹೊಂಗೆಕಡ್ಡಿ, ನೀಲಗಿರಿ ಕಡ್ಡಿ, ಯಲಚ್ಚಿಗಿಡದ ಕವಲು ಹೀಗೆ ಸಿಕ್ಕ ಸಿಕ್ಕ ಗಿಡಮರಗಳ ಕಟ್ಟಿಗೆ, ಹುಲ್ಲು ತಂದು ಗುಡಿಸಲನ್ನು ಕಟ್ಟಿಕೊಂಡಿದ್ದೇನೆ. ಸಗಣಿಯಿಂದ ಸಾರಿಸಿ ಒಳ ನೆಲವನ್ನು ಸ್ವಚ್ಚ ಮಾಡಿಕೊಂಡಿದ್ದೇನೆ. ಇಲ್ಲಿ ಕರೆಂಟ್ ಇಲ್ಲ. ಒಮ್ಮೊಮ್ಮೆ ನಾಗರಹಾವುಗಳು, ಮಂಡಲದಹಾವುಗಳು ಬರುತ್ತವೆ. ಒಮ್ಮೆ ನೂಲುಕಟ್ಟಲು ಹಾವು ಕಟ್ಟಿಗೆಯೊಳಗೆ ಸುತ್ತಿಕೊಂಡು ಮಲಗಿತ್ತು. ಒಮ್ಮೆಯಂತೂ ಒಂದು ಸಣ್ಣ ಹಾವಿನಮರಿ ನಾವು ಮಲಗಿದ್ದಾಗ ನಮ್ಮ ಅಡಿಯಲ್ಲೇ ಸತ್ತು ಬಿದ್ದಿತ್ತು. ಬೆಳಗ್ಗೆ ಎದ್ದು ನೋಡಿದ್ವಿ. ಕೋಳಿ ಸಾಕಿದರೆ ಚಿರತೆಗಳು ಬಂದು ತಿನ್ನುತ್ತವೆ. ರಾತ್ರಿ ಕಳೆಯುವುದೇ ಕಷ್ಟ. ಸತ್ತರೂ ಪರವಾಗಿಲ್ಲ ಅಂತ ದೇವರ ಮೇಲೆ ಭಾರ ಹಾಕಿ ಜೀವನ ಸಾಗಿಸುತ್ತಿದ್ದೇವೆ.
ಮಳೆ ಬಂದರಂತೂ ನಮ್ಮ ಪಾಡು ಹೇಳತೀರದು. ಗುಡಿಸಲು ಎಲ್ಲಾ ಕಡೆಯೂ ಸೋರುತ್ತದೆ, ಸಾಲದ್ದಕ್ಕೆ ಹೊರಗಿನಿಂದಲೂ ನೀರು ಬರುತ್ತದೆ. ಮಳೆ ಸೋರುವ ಕಡೆಯೆಲ್ಲಾ ಪಾತ್ರೆ, ಪಗಡೆ, ಬಕೆಟುಗಳನ್ನು ಇಟ್ಟು ನಾವು ಟಾರ್ಪಲನ್ನು ಹೊದ್ದುಕೊಂಡು ತೂಕಡಿಸುತ್ತ ಬೆಳಕು ಹರಿಸಿ ಮಳೆಗಾಲದ ರಾತ್ರಿಗಳನ್ನು ಕಳೆಯುತ್ತೇವೆ. ಸ್ನಾನಕ್ಕೆ ಹೊಳೆಹೊಂಡಗಳು ಶೌಚಕ್ಕೆ ಬಯಲೇ ಗತಿ. ಚಿಕ್ಕಂದಿನಿಂದ ಹೀಗೇ ಬದುಕುತ್ತಿರುವುದರಿಂದ ರೂಢಿಯಾಗಿದೆ. ಆದರೆ, ತುಂಬ ಆತಂಕವಾಗುತ್ತದೆ. ದೇವರ ಮೇಲೆ ಭಾರ ಹಾಕಿ ಜೀವನ ಮಾಡುತ್ತಿದ್ದೇವೆ. ಕುಡಿಯುವ ನೀರನ್ನು ಕಿಲೋಮೀಟರ್ಗಟ್ಟಲೇ ದೂರದಿಂದ ಹೊತ್ತು ತರಬೇಕು. ಅಡುಗೆ ಮಾಡಲು ಕಾಡಿನಿಂದ ಸೌದೆ ಆಯ್ದು ತರಬೇಕು. ನಾವು ತಿಂಡಿಗೆ ಉಪ್ಪಿಟ್ಟು ಇಡ್ಲಿ ದೋಸೆ ಅಂತೆಲ್ಲ ಮಾಡುವುದಿಲ್ಲ. ಡಿಪೋದಲ್ಲಿ ಕೊಡುವ ಅಕ್ಕಿಯಿಂದ ಅನ್ನ, ಕೂಲಿ ಮಾಡಿ ಕೂಡಿಟ್ಟ ರಾಗಿಯಿಂದ ಅಂಬಲಿ ಮಾಡಿ ಅದಕ್ಕೆ ಗೊಜ್ಜು ಖಾರದಪುಡಿ ಹಾಕಿಕೊಂಡು ತಿನ್ನುತ್ತೇವೆ' ಎಂದರು 37ವರ್ಷದ ನರಸಮ್ಮ.
'ಇನ್ನು ಸೀಸನ್ನಿಗೆ ತಕ್ಕಂತೆ ಸೀತಾಫಲ, ಯಲಚಿ ಹಣ್ಣುಗಳನ್ನು ಕಾಡುಗಳಿಗೆ ಹೋಗಿ ಕಿತ್ತು ಚೀಲಕ್ಕೆ ತುಂಬಿಕೊಂಡು ಬಂದು ದೊಡ್ಡಬಳ್ಳಾಪುರ, ಬೆಂಗಳೂರು ಕಡೆ ತಂದು ಮಾರುತ್ತೇವೆ. ಅದು ಮುಗಿದ ಬಳಿಕ ಹೊಲಗಳಲ್ಲಿ ಸಿಗುವ ಅಣ್ಣೆ ಸೊಪ್ಪು, ಕಾಶಿ ಸೊಪ್ಪನ್ನು ಕಿತ್ತು ಬಿಡಿಯಾಗಿ ಮಾರುತ್ತೇವೆ. ಹೊಲಗಳೆಲ್ಲ ಒಣಗಿದ ನಂತರ ಮದುವೆ ಛತ್ರಗಳಲ್ಲಿ ಹೆಲ್ಪರ್, ಕ್ಲೀನರ್, ಟಾಯ್ಲೆಟ್ ತೊಳೆಯುವುದು ಸೇರಿದಂತೆ ಯಾವುದೇ ಕೆಲಸವಿದ್ದರೂ ಮಾಡುತ್ತೇವೆ. ನಮ್ಮೂರಿಗೆ ಇರುವುದು ಸಂಜೆ ಒಂದೇ ಬಸ್ಸು. ಕೆಲಸಕ್ಕೆ ಹೋದಾಗ ಮತ್ತು ವ್ಯಾಪಾರವಾಗದೆ ತಡವಾದಾಗ ಆ ಬಸ್ಸು ತಪ್ಪಿದರೆ ಊರಿಗೆ ಹೋಗಲು ಬೇರೆ ಬಸ್ಸುಗಳಿಲ್ಲ. ಹಾಗೇನಾದರೂ ಬಸ್ಸು ತಪ್ಪಿಹೋದರೆ ಯಾವುದಾದರೂ ಬಸ್ಟ್ಯಾಂಡಲ್ಲೋ ಬ್ರಿಡ್ಜಿನ ಕೆಳಗೋ ವಾಸ ಮಾಡಬೇಕಾದ ಪರಿಸ್ಥಿತಿ ಇರುತ್ತದೆ. ನಾವು ನಿಯತ್ತಾಗಿದ್ದರೂ ಕೆಲವರು ಇಂತಹ ಸಂದರ್ಭದಲ್ಲಿ ನಮ್ಮನ್ನು ನೋಡಿ ಅಸಹ್ಯವಾಗಿ ಮಾತನಾಡುತ್ತಾರೆ. ತಪ್ಪು ಅವರದಲ್ಲ ನಾವು ಸೃಷ್ಟಿಸಿಕೊಂಡಿರುವ ಪೂರ್ವಾಗ್ರಹ ಪೀಡಿತ ಸಮಾಜದ್ದು. ಹೀಗೆ ಕೆಟ್ಟದಾಗಿ ನೋಡುವವರಿಗೆ ಮಾತನಾಡುವವರಿಗೆ ನಮ್ಮ ಹಸಿವು, ಅಸಹಾಯಕತೆ, ಬಡತನ, ನಾವು ಪಡುವ ಪಾಡು ಗೊತ್ತಿರುವುದಿಲ್ಲ. ಇನ್ನು ಶಾಲೆ-ಕಾಲೇಜು, ವ್ಯಾಪಾರ, ಕೆಲಸಕ್ಕೆ ಹೋಗುವವರಿಗೆ ಬಸ್ಸಿನದ್ದು ಬಹಳ ಸಮಸ್ಯೆ. ಹುಟ್ಟಿದಾಗಿನಿಂದ ಇದೇ ಊರಿನಲ್ಲಿದ್ದು ಇದನ್ನೆಲ್ಲ ಅನುಭವಿಸಿದ್ದೇವೆ. ನಮ್ಮೂರಿನಲ್ಲಿ ಒಂದು ಹಾಸ್ಪಿಟಲ್ ಇಲ್ಲ, ಬಸ್ ಸ್ಟಾಂಡ್ ಇಲ್ಲ, ಅಷ್ಟೇ ಯಾಕೆ ಒಂದು ದೇವಸ್ಥಾನ ಕೂಡ ಇಲ್ಲ ಎನ್ನುತ್ತಾರೆ 32ವರ್ಷದ ನಾರಾಯಣಮ್ಮ.
ನಾವು ಆದಿ ಕರ್ನಾಟಕ (SC) ಕೊನೆ ಪಕ್ಷ ಒಂದು ಚಪ್ಪಲಿ ಹೊಲೆಯುವ ಅಂದುಕೊಂಡರು ಬಂಡವಾಳವಿಲ್ಲ. ಎಷ್ಟು ಸರಿ ಗ್ರಾಮ ಪಂಚಾಯತ್, DC ಆಫೀಸ್, ಅಲ್ಲಿ ಇಲ್ಲಿ ಅಂತ ಸುಮಾರು 10 ವರ್ಷದಿಂದ ಅರ್ಜಿ ಹಾಕಿದರೂ ಏನೂ ಪ್ರಯೋಜನವಾಗಿಲ್ಲ. ಬಂಡಿಮೇಲೆ ಹಣ್ಣು, ಸೊಪ್ಪು, ತರಕಾರಿ ವ್ಯಾಪಾರ ಮಾಡೋಣ ಅಂದುಕೊಂಡರೆ ಲೈಸನ್ಸ್ ಕೊಡಲ್ಲ... ನಮ್ಮಂತಹ ಕಷ್ಟ ಬೇರೆ ಯಾವ ಹೆಣ್ಣುಮಕ್ಕಳಿಗೂ ಬರಬಾರದು ಎಂಬ ಅಳಲಿನೊಂದಿಗೆ ಕಣ್ಣಂಚಲ್ಲಿ ಕಂಬನಿ ಸುರಿಸುತ್ತಿರುವ ಈ ಹೆಣ್ಣುಮಕ್ಕಳ ಕಥೆ ಕೇಳುವವರ್ಯಾರು..!?
ನಾವೇ ಸ್ವಂತಕ್ಕೆ ಒಂದು ಸಣ್ಣ ಕೆಲಸವನ್ನೋ ಅಂಗಡಿಯನ್ನೋ ಮಾಡೋಣವೆಂದರೆ ಬಂಡವಾಳವಿಲ್ಲ ಅರ್ಜಿ ಹಾಕಿದರೆ ಸಾಲವೂ ಸಿಗಲಿಲ್ಲ. ನಮಗೆ ಒಂದು ಸಣ್ಣ ಮನೆಯಾದರೂ ಸಾಕು ಒಂದಿಷ್ಟು ನೆಮ್ಮದಿಯಿರುತ್ತದೆ. ಇಬ್ಬರು ಮಕ್ಕಳಿದ್ದಾರೆ ಅವರಿಗಾದರೂ ಆಸರೆಯಾಗಲೆಂದು ಮನೆಗೂ ತುಂಬ ಸಲ ಅರ್ಜಿ ಹಾಕಿದ್ದೇವೆ. ಯಾರೂ ಒಮ್ಮೆಯಾದರೂ ನಮ್ಮ ಕಡೆ ನೋಡಿಲ್ಲ. ಇಲ್ಲಿ ಎಲ್ಲ ಕೆಲಸಕ್ಕೂ ಲಂಚ ಕೊಡಬೇಕು. ನಾವು ಊಟಕ್ಕೂ ಪರದಾಡುವಾಗ ಲಂಚ ಕೊಡಲು ಹೇಗೆ ಸಾಧ್ಯ? ವಾಸಕ್ಕೆ ಮನೆಯಿಲ್ಲ ಹೊಟ್ಟೆ ಪಾಡಿಗೆ ಕೂಲಿನಾಲಿ ಮಾಡಿ ಅಂಬಲಿ ಗಂಜಿ ಕುಡಿದು ಬದುಕುತ್ತಿದ್ದೇವೆ. ನರಸಮ್ಮ ನವರಿಗೆ ಈಗಲೋ ಆಗಲೋ ಬೀಳುವ ಗುಡಿಸಲು ಆಸರೆಯಾದರೆ.. ನನಗೆ ಅದೂ ಇಲ್ಲ. ಬೇರೆಯವರ ಮನೆಯಲ್ಲಿ ನಾನು ನನ್ನ ಇಬ್ಬರು ಮಕ್ಕಳು ಬದುಕುತ್ತಿದ್ದೇವೆ. ಅವರು ಜಾಗ ಖಾಲಿ ಮಾಡಿ ಎಂದರೆ ಗಂಟು ಮೂಟೆ ಕಟ್ಟಬೇಕು.
ನಾನಂತೂ ಹುಟ್ಟು ಅಂಗವಿಕಲೆ. ಒಂದು ಕಾಲು ಚಿಕ್ಕದಿದೆ ಸರಿಯಾಗಿ ನಡೆದಾಡಲು ಆಗಲ್ಲ. ನನಗಂತೂ ಕೂಲಿ ಕೆಲಸ ಸಿಗುವುದೂ ಕಷ್ಟ. ತಳ್ಳುಗಾಡಿಯಲ್ಲಿ ಸೊಪ್ಪು ತರಕಾರಿ ಮಾರುವುದಕ್ಕೂ ಲೈಸೆನ್ಸ್ ಕೊಡ್ತಿಲ್ಲ. ನಮ್ಮಂಥ ಕಷ್ಟ ಬೇರೆ ಯಾವ ಹೆಣ್ಮಕ್ಳಿಗೂ ಬರಬಾರದು. ನಮ್ಮಂಥವರು ಬಡವರು ಭೂಮಿಯ ಮೇಲೆ ಬದುಕುಬಾರದೇ..? ಲಂಚ ಕೊಡದೆ ನ್ಯಾಯ ಸಿಗುವುದಿಲ್ಲವೇ..?' ಎಂದು ನಾರಾಯಣಮ್ಮ ಕಣ್ಣೀರಾದರು.
ಇನ್ನಾದರೂ ಆಳುವವರು ಇಂಥವರೆಡೆ ನೋಡಬೇಕು. ಬರಿಯ ಚುನಾವಣೆಗಳಿಗೆ ಸೀಮಿತವಾದ ಆಳುಗರ ಪ್ರವಾಸ ಇಂಥ ಪ್ರಯಾಸಕರ ಸಂದರ್ಭಗಳಿಗೆ ವಿಸ್ತರಣೆಯಾಗಬೇಕು. ಸರ್ಕಾರದ ಸೌಲಭ್ಯಗಳಿರೋದೇ ದುರ್ಬಲರನ್ನು ಸಬಲರನ್ನಾಗಿ ಮಾಡಲು. ಪ್ರಸ್ತುತ ವ್ಯವಸ್ಥೆಯಲ್ಲಿ ಅವ್ಯವಸ್ಥೆಯೇ ನೆಲೆಸಿದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜನಪ್ರತಿನಿಧಿಗಳು ಮತ್ತು ಅಧಿಕಾರಗಳ ದಿವ್ಯನಿರ್ಲಕ್ಷ್ಯ ಬಹಿರಂಗ ಗುಟ್ಟು. ಹಿರೇಮುದ್ದೇನಹಳ್ಳಿಯಂಥ ಕುಗ್ರಾಮಗಳ, ನರಸಮ್ಮ ನಾರಾಯಣಮ್ಮನವರಂಥ ಕುಟುಂಬಗಳ ಶಾಪ ಸರ್ಕಾರವನ್ನು ಪ್ರತಿನಿಧಿಸುವ ಬೇಜವಾಬ್ದಾರಿಗಳಿಗೆ ತಟ್ಟದೇ ಇರದು. ಸರ್ಕಾರದ ಯೋಜನೆಗಳ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬ ವಿಚಾರ ಬರೀ ಪುಸ್ತಕಗಳಿಗೆ ಘೋಷಣೆಗಳಿಗೆ ಸೀಮಿತವಾಗಬಾರದು. ಕೊನೇಪಕ್ಷ ಇಂಥ ಮೂಲಭೂತ ಸೌಕರ್ಯವಂಚಿತ ಊರುಗಳಿಗೆ ಕುಟುಂಬಗಳಿಗೆ ಕನಿಷ್ಟ ಸೌಲಭ್ಯಗಳನ್ನಾದರೂ ಕೊಡಮಾಡಿದರೆ ಸರ್ಕಾರದ ಯೋಜನೆಗಳಿಗೊಂದಿಷ್ಟು ಸಾರ್ಥಕತೆ ಲಭಿಸೀತು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸೌಲಭ್ಯವಂಚಿತರ ಒಂದು ನೆಮ್ಮದಿಯ ನಿಟ್ಟುಸಿರಿಗೆ ಅವಕಾಶ ಮಾಡಿಕೊಡಿ ಎಂಬುದು ಜನಪ್ರತಿನಿಧಿಗಳಲ್ಲಿ ನಮ್ಮದು ಕಳಕಳಿಯ ವಿನಂತಿ.
ಧನ್ಯವಾದಗಳೊಂದಿಗೆ....
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಬರಹಗಳು:
ವಿನು ಮಾವುತ ಅವರ ಗಜಪ್ರೀತಿ
ರಂಗಭೂಮಿಯ ಆರಾಧಕ, ಸಾಹಿತ್ಯ ಪ್ರೇಮಿ ನಂದಕುಮಾರ
ಫೋಟೋಗ್ರಾಫರ್ ಆಗುವ ಕನಸೂ ಇಲ್ಲದೆ ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ
ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್
ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.