ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ

Date: 28-05-2022

Location: ಬೆಂಗಳೂರು


'ಇಂದು ಹಯ್ದರಾಬಾದ ಕರ‍್ನಾಟಕ ಎಂದು ಕರೆಯುವ ಪ್ರದೇಶದಲ್ಲಿ ಹೊಮೊಸಪಿಯನ್ ಎಂಬ ಪ್ರಾಣಿಯ ಸಮೀಪಸಂಬಂದಿಗಳು, ಸ್ತೂಲವಾಗಿ ಮನುಶ್ಯ ಎಂದು ಕರೆಯಬಹುದಾದ ಪ್ರಾಣಿಗಳು ಹನ್ನೊಂದು ಲಕ್ಶ ವರುಶಗಳ ಹಿಂದೆ ನೆಲೆಸಿದ್ದರು ಎಂಬುದಕ್ಕೆ ಆದಾರಗಳನ್ನು ತೋರಿಸಲಾಗಿದೆ' ಎನ್ನುತ್ತಾರೆ ಭಾಷಾ ವಿಶ್ಲೇಷಣಾಕಾರ ಡಾ.ಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆಯ ಕುರಿತು ವಿಶ್ಲೇಷಿಸಿದ್ದಾರೆ.

ಸರಿಸುಮಾರು ದಕ್ಶಿಣ ಬಾರತದ ಬಹುಬಾಗ ಕನ್ನಡ ಬಾಶೆ ಬಳಕೆಯಲ್ಲಿದೆ. ಬಹುತೇಕ ಇಂದಿನ ಕರ‍್ನಾಟಕ ಮತ್ತು ಸುತ್ತಲಿನ ಹಲವು ರಾಜ್ಯಗಳಲ್ಲಿ ಪರಿಗಣಿಸುವಶ್ಟು ಪ್ರದೇಶದಲ್ಲಿ ಕನ್ನಡ ಬಳಕೆಯಲ್ಲಿದೆ. ಹಿಂದೊಮ್ಮೆ ಇಂದಿನ ಮಹಾರಾಶ್ಟ್ರ ಪರಿಸರದಲ್ಲಿ ಹೆಚ್ಚು ಬಾಗ ಮತ್ತು ತಮಿಳುನಾಡಿನಲ್ಲಿ ಇನ್ನೂ ತುಸು ಕೆಳಗೆ ಬಳಕೆಯಲ್ಲಿದ್ದರಬಹುದು. ಹಾಗಾದರೆ ಕನ್ನಡ ಬಾಶೆ ಈ ಪರಿಸರದಲ್ಲಿ ಎಶ್ಟು ಹಿಂದಿನಿಂದ ಬಳಕೆಯಲ್ಲಿದ್ದಿರಬಹುದು ಮತ್ತು ಅದಕ್ಕಿಂತ ಮೊದಲು ಈ ಪರಿಸರದಲ್ಲಿ ಬಾಶೆಯ ಬಳಕೆಗೆ ಎಶ್ಟು ಕಾಲದ ಹಿನ್ನೆಲೆ ಸಿಗಬಹುದು ಎಂಬುದನ್ನು ತುಸು ವಿಚಾರಿಸಬಹುದು.

ಮನುಶ್ಯ ಪ್ರಾಣಿ ಉಳಿದೆಲ್ಲ ಜೀವಿಗಳಿಗಿಂತ ಬಿನ್ನವಾಗುವುದಕ್ಕೆ ವಿಚಾರಿಸುವ ಮತ್ತು ಮಾತಾಡುವ ಕಸುವುಗಳು ಬೆಳೆದಿರುವುದೆ ಕಾರಣ. ಹಾಗಾದರೆ ಎಶ್ಟು ಹಿಂದೆ ಮನುಶ್ಯ ಪ್ರಾಣಿಗೆ ಬಾಶೆ ಎಂಬ ಕಸುವು ಬಂದಿರಬಹುದೊ ತಿಳಿಯದು. ಒಂದು ಅಂದಾಜು ತಿಳುವಳಿಕೆಯ ಪ್ರಕಾರ ಸುಮಾರು ಅಯ್ವತ್ತರವತ್ತು ಸಾವಿರ ವರುಶಗಳ ಹಿಂದೆ ಮನುಶ್ಯ ಪ್ರಾಣಿಗೆ ಬಾಶೆ ಇದ್ದಿತು, ಅದಕ್ಕೆ ರಚನೆಯೊಂದು ಇದ್ದಿದ್ದಿರಬಹುದು ಎಂದು ತಳಿವಿಗ್ನಾನಿಗಳು ಹೇಳುತ್ತಾರೆ. 'ಆಪ್ರಿಕಾದಿಂದ' (From Africa) ಸಿದ್ದಾಂತವನ್ನು ಬಹುಳ ಶಿಸ್ತಿನ ವಿದ್ವಾಂಸರು ಚರ‍್ಚಿಸುತ್ತಾರೆ. ಹೀಗೆ ಮನುಶ್ಯ ಪ್ರಾಣಿ ಆಪ್ರಿಕಾದಿಂದ ಬಂದಿರಬಹುದೆ? ಹಾಗೆ ಬರುವಾಗ ಬಾಶೆಯ ಅರಿವು ಮನುಶ್ಯ ಪ್ರಾಣಿಗೆ ಇದ್ದಿತೆ? ಎಂಬುವು ಸುಲಬವಾಗಿ ಉತ್ತರಿಸುವಂತವೇನೂ ಅಲ್ಲ. ಈ ಸಿದ್ದಾಂತದ ಪ್ರಕಾರ ಬಾರತಕ್ಕೆ ಬಹುಹಿಂದೆ ವಲಸೆ ಬಂದ ಮನುಶ್ಯರ ಗುಂಪು ಸುಮಾರು ಎಪ್ಪತ್ತು ಸಾವಿರ ವರುಶಗಳ ಹಿಂದೆ ಎನ್ನಲಾಗುತ್ತದೆ. ಸುಮಾರು ಅಯ್ವತ್ತು ಸಾವಿರ ವರುಶಗಳ ಹಿಂದೆ ಇಂದು ಅಂಡಮಾನ್ ಎಂದು ಕರೆಯುವ ದ್ವೀಪ ಸಮೂಹಕ್ಕೆ ಒಂದು ಮನುಶ್ಯರ ಗುಂಪು ತಲುಪಿದ್ದಿತು. ಇದು ಇಂದಿನವರೆಗೂ ಈ ದ್ವೀಪಸಮೂಹದಲ್ಲಿಯೆ ಬದುಕಿದೆ. ಅಂದರೆ ಇಂದಿನ ಅಂಡಮಾನಿನ ನಿವಾಸಿಗಳು ಸರಿಸುಮಾರು ಅಯವತ್ತು ಸಾವಿರ ವರುಶಗಳಿಂದ ಇಲ್ಲಿಯೆ ನೆಲೆಸಿದ್ದಾರೆ.

ಇನ್ನೊಂದೆಡೆ ಇಂದಿನ ಕನ್ನಡ ಮಾತಾಡುವ ಪ್ರದೇಶದಲ್ಲಿ, ಇಂದು ಹಯ್ದರಾಬಾದ ಕರ‍್ನಾಟಕ ಎಂದು ಕರೆಯುವ ಪ್ರದೇಶದಲ್ಲಿ ಹೊಮೊಸಪಿಯನ್ ಎಂಬ ಪ್ರಾಣಿಯ ಸಮೀಪಸಂಬಂದಿಗಳು, ಸ್ತೂಲವಾಗಿ ಮನುಶ್ಯ ಎಂದು ಕರೆಯಬಹುದಾದ ಪ್ರಾಣಿಗಳು ಹನ್ನೊಂದು ಲಕ್ಶ ವರುಶಗಳ ಹಿಂದೆ ನೆಲೆಸಿದ್ದರು ಎಂಬುದಕ್ಕೆ ಆದಾರಗಳನ್ನು ತೋರಿಸಲಾಗಿದೆ. ಹಾಗೆಯೆ ಶಿಲಾಯುಗದ ವಿವಿದ ಹಂತಗಳಲ್ಲಿ ಕರ‍್ನಾಟಕದ ವಿವಿದ ಪರಿಸರಗಳಲ್ಲಿ ನಿರಂತರವಾಗಿ ಮನುಶ್ಯರು ನೆಲೆಸಿದ್ದಕ್ಕೆ ಸಾಕಶ್ಟು ಆದಾರಗಳು ಇವೆ.

ಹರಪ್ಪಾ ನಾಗರಿಕತೆಗೆ ಸುಮಾರು ಅಯ್ದಾರು-ಆರೇಳು ಸಾವಿರ ವರುಶಗಳ ಇತಿಹಾಸವನ್ನ ತೋರಿಸಲಾಗಿದೆ. ಆ ವೇಳೆಗೆ ನಾಗರಿಕತೆ ಮತ್ತು ಸಂಸ್ಕ್ರುತಿಗಳು ಬೆಳೆದಿದ್ದವು. ಹರಪ್ಪಾ ನಾಗರಿಕತೆಯ ಸಮಸಮ ಕಾಲದಲ್ಲಿ ದಕ್ಶಿಣದಲ್ಲಿ, ನಾವಿಂದು ಮಾತನಾಡುತ್ತಿರುವ ಕರ‍್ನಾಟಕದಲ್ಲಿ ಹಲವು ಮನುಶ್ಯ ವಸತಿ ನೆಲೆಗಳು ಇದ್ದವು. ಈ ಕಾಲಕ್ಕೆ ಮನುಶ್ಯರು ಇಲ್ಲಿ ನೆಲೆಸಿದ್ದರು ಎಂಬುದಕ್ಕೆ ಆದಾರವನ್ನು ಇವು ಒದಗಿಸುತ್ತವೆ. ನಾವೀಗ ವಿಚಾರಿಸಬೇಕಿರುವುದು ಈ ನೆಲೆಗಳಲ್ಲಿ ಬದುಕಿದ್ದ ಮನುಶ್ಯರು ಬಾಶೆಯನ್ನು ಬಳಸುತ್ತಿದ್ದರೆ ಎಂಬುದಕ್ಕೆ ಆದರಗಳೇನು ದೊರೆಯಬಹುದು ಎಂಬುದನ್ನು. ವಾಯವ್ಯ ಬಾರತದಾಗ ಇದ್ದ ಹಾಗೆ ನಾಗರಿಕತೆ, ಸಂಸ್ಕ್ರುತಿ ಈ ಪರಿಸರದಲ್ಲಿ ಬೆಳೆದಿದ್ದವೆ ಎಂಬುದನ್ನು ಕುರಿತು ಯೋಚಿಸಬೇಕು.

ಹರಪ್ಪಾ ನಾಗರಿಕತೆಯಲ್ಲಿ ವಿವಿದ ಶಿಲ್ಪಗಳು ದೊರೆಯುವುದು ತಿಳಿದ ವಿಚಾರ. ಈ ಶಿಲ್ಪಗಳನ್ನು ಮಾಡಿದ ನಿರ‍್ದಿಶ್ಟ ಜಾತಿಯ ಕಲ್ಲುಗಳು ಹರಪ್ಪಾ ಮತ್ತು ಆ ನಾಗರಿಕತೆಯ ಪರಿಸರದಲ್ಲಿ ಸಿಗುವುದಿಲ್ಲವಂತೆ ಮತ್ತು ಆ ಜಾತಿಯ ಕಲ್ಲುಗಳು ಇಂದಿನ ಹಯ್ದರಾಬಾದ ಕರ‍್ನಾಟಕ ಪರಿಸರದ ಮಸ್ಕಿ ಮತ್ತು ಬಳ್ಳಾರಿ ಪರಿಸರದ ತೆಕ್ಕಲಕೋಟೆ ಪರಿಸರಗಳಲ್ಲಿ ವೆಗ್ಗಳವಾಗಿ ಸಿಗುತ್ತವೆಯಂತೆ. ಇದರೊಟ್ಟಿಗೆ ಈ ಊರುಗಳ ಗುಡ್ಡಗಳಲ್ಲಿ ಕಲ್ಲು ಗಣಿಗಾರಿಕೆ ಇತಿಹಾಸ ಹರಪ್ಪಾದಶ್ಟು, ಅದಕ್ಕಿಂತಲೂ ಹಿಂದೆ ಹೋಗುತ್ತದೆ. ಈ ಗುಡ್ಡಗಳಿಂದ ಕಲ್ಲುಗಳನ್ನು ಕರಾವಳಿ ಪ್ರದೇಶಕ್ಕೆ ಸಾಗಿಸಿ ಅಲ್ಲಿಂದ ನೀರಿನ ಮೂಲಕ ಹರಪ್ಪಾ ನಾಗರಿಕತೆಗೆ ತಲುಪಿಸುತ್ತಿರಲಾಗುತ್ತಿತ್ತಂತೆ. ಹಾಗಾದರೆ, ಇದೆಲ್ಲವು ನಡೆಯುವುದಕ್ಕೆ ಬಾಶೆಯೊಂದರ ಬಳಕೆ ಇದ್ದಿರಲೇಬೇಕು.

ಕಲ್ಲಿನಯುಗದ ಹಲವಾರು ನೆಲೆಗಳಲ್ಲಿ ನಾಲ್ಕಾರು ಸಾವಿರ ವರುಶಗಳ ಹಿಂದಿನಿಂದ ಒಕ್ಕಲುತನ ನಡೆಯುತ್ತಿದ್ದಿತು, ಲೋಹದ ಬಳಕೆ ಇದ್ದಿತು, ಹಲವು ನಾಗರಿಕತೆಯ ಲಕ್ಶಣಗಳು ಬೆಳೆದಿದ್ದವು, ಕೆಲವು ಸಂಸ್ಕ್ರುತಿಯ ಆಚರಣೆಗಳು ಬೆಳೆದಿದ್ದವು ಎಂದು ಹಲವಾರು ಸಂಶೋದನೆಗಳು ತೋರಿಸಿವೆ. ಇನ್ನೊಂದು ಮುಕ್ಯವಾದ ವಿಚಾರವನ್ನೂ ಇಲ್ಲಿ ಗಮನಿಸಬಹುದು. ಎಲ್ಲಮ್ಮ ಎಂದು ಹೆಸರಾಗಿರುವ ನಂಬಿಕೆಯೊಂದು ದಕ್ಶಿಣದಾಗ ಬಹುಕಾಲದಿಂದಲೆ ಬದುಕಿದೆ. ಬಹುಶಾ ಎಲ್ಲಮ್ಮ ಅಯ್ದಾರು ಸಾವಿರ ವರುಶಗಳ ಹಿಂದೆಯೆ ಒಕ್ಕಲುತನದ ನಂಬಿಕೆ, ಆಚರಣೆಯಾಗಿ ಬೆಳೆದಿದೆ. ಮುಂದೆ ಇದುವೆ ಪಂತವೆಂದು ಕರೆಯುವ ಲಕ್ಶಣಗಳನ್ನು ಪಡೆದುಕೊಂಡಿದೆ. ಈ ಎಲ್ಲ ಬೆಳವಣಿಗೆಗಳು ಕಂಡಿತವಾಗಿಯೂ ಬಾಶೆಯ ಬಳಕೆಯನ್ನು ಸ್ಪಶ್ಟಗೊಳಿಸುತ್ತವೆ.

ಈ ಪರಿಸರದಲ್ಲಿ ದ್ರಾವಿಡದ ಬಾಶೆ ಬಳಕೆಯಲ್ಲಿದ್ದಿತು ಎನ್ನುವುದಕ್ಕೆ ಅನುಮಾನವಿಲ್ಲ. ದಕ್ಶಿಣ ಬಾಗದ ಸಂಸ್ಕ್ರುತಿ ಮತ್ತು ಬಾಶೆ ಇವುಗಳ ಅದ್ಯಯನಗಳು ಇದನ್ನು ಸ್ಪಶ್ಟಪಡಿಸುತ್ತವೆ. ಬಾಶಾ ರಚನೆ ಮತ್ತು ಸಂಸ್ಕ್ರುತಿಯ ರಚನೆ ಇವುಗಳ ನಡುವಿನ ಆಳಹಂತದ ಸಂಬಂದ ಇವುಗಳನ್ನು ಗಮನಿಸಿದಾಗ ದ್ರಾವಿಡ ಬಾಶೆಗಳು ಇಲ್ಲಿ ಬಹುಹಿಂದಿನಿಂದಲೂ ಬಳಕೆಯಲ್ಲಿವೆ ಎನ್ನುವುದಕ್ಕೆ ಅನುಮಾನಗಳಿಲ್ಲ.

ಇದುವರೆಗಿನ ಅದ್ಯಯನಗಳ ಪ್ರಕಾರ ದಕ್ಶಿಣ ದ್ರಾವಿಡ ಬಾಶೆಗಳು ಈ ಬಾಗದಲ್ಲಿ ಬಹುಕಾಲದಿಂದ ಬಳಕೆಯಲ್ಲಿದ್ದವು ಎನ್ನುವುದಕ್ಕೆ ಆದಾರಗಳು ಇವೆ. ದ್ರಾವಿಡದಲ್ಲಿ ಮೂಲದಲ್ಲಿ ಸ್ತ್ರೀಲಿಂಗ ಇರಲಿಲ್ಲ ಮತ್ತು ಸಂಸ್ಕ್ರುತದ ಪ್ರಬಾವ ಮತ್ತು ಹೆಚ್ಚಿನ ಸಾಮಾಜಿಕ ವ್ಯವಹಾರ ಮೊದಲಾದವು ಕಾರಣವಾಗಿ ಪ್ರತ್ಯೇಕವಾದ ಸ್ತ್ರೀಲಿಂಗ ಬೆಳೆದಿರುವ ಸಾದ್ಯತೆಯನ್ನು ವಿದ್ವಾಂಸರು ಕೊಟ್ಟಿದ್ದಾರೆ. ದ್ರಾವಿಡ ಬಾಶೆಗಳಲ್ಲಿ ಸ್ತ್ರೀಲಿಂಗವು ವಿಶೇಶವಾಗಿ ತೆಂಕುದ್ರಾವಿಡ (ದಕ್ಶಿಣ ದ್ರಾವಿಡ) ಬಾಶೆಗಳಲ್ಲಿ ಕಂಡುಬರುತ್ತದೆ. ಈ ಬದಲಾವಣೆ ಕಂಡಿತವಾಗಿಯೂ ಎರಡು-ಮೂರು ಸಾವಿರ ವರುಶಗಳ ಹಿಂದೆಯೆ ಆಗಿರಲು ಸಾದ್ಯ. ದ್ರಾವಿಡ ಮತ್ತು ಸಂಸ್ಕ್ರುತಗಳ ನಂಟು ಕಡಿಮೆ ಎಂದರೂ ನಾಲ್ಕು ಸಾವಿರ ವರುಶಗಳಶ್ಟು ಹಿಂದಕ್ಕೆ ಹೋಗುತ್ತದೆ. ಈ ಅಂಶಗಳನ್ನು ಗಮನಿಸಿದಾಗ ದಕ್ಶಿಣ ದ್ರಾವಿಡ ಬಾಶೆಗಳು ಇಲ್ಲಿ ಇದ್ದಿದ್ದವು ಎಂಬುದು ಸ್ಪಶ್ಟವಾಗುತ್ತದೆ. ಅಂದರೆ, ಕನ್ನಡವು ಇಲ್ಲಿ ಬಳಕೆಯಲ್ಲಿದ್ದ ಅನುಮಾನಕ್ಕೆ ಇದು ಹೆಚ್ಚಿನ ಪುಶ್ಟಿಯನ್ನು ಒದಗಿಸುತ್ತದೆ. ಅಲ್ಲದೆ ಬಡದ್ರಾವಿಡ ಮತ್ತು ನಡುದ್ರಾವಿಡ ಬಾಶೆಗಳ ಲಕ್ಶಣಗಳು ತೆಂಕದ್ರಾವಿಡ ಬಾಶೆಗಳಿಗಿಂತ ಬಿನ್ನವಾಗಿರುವುದೂ ಸ್ಪಶ್ಟವಿದೆ.

ಈ ಅಂಕಣದ ಹಿಂದಿನ ಬರೆಹ:
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

 

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...