ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ

Date: 10-06-2022

Location: ಬೆಂಗಳೂರು


'ಬಳಕೆಯಲ್ಲಿರುವ ಯಾವುದೆ ಬಾಶೆಗಳು ನಿರಂತರವಾಗಿ ಬದಲಾಗುತ್ತಲೆ, ಬೆಳೆಯುತ್ತಲೆ ಇರುತ್ತವೆ. ಬದಲಾವಣೆ, ಬೆಳವಣಿಗೆ ಇಲ್ಲದಿದ್ದರೆ ಆ ಬಾಶೆಗಳನ್ನು ಸತ್ತ ಬಾಶೆಗಳೆಂದು ಕರೆಯುವುದೂ ಸಹಜವಾಗಿ ಇದೆ' ಎನ್ನುತ್ತಾರೆ ಭಾಷಾ ವಿಶ್ಲೇಷಣಾಕಾರ ಡಾ.ಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲದ ಕುರಿತು ವಿವರಿಸಿದ್ದಾರೆ.

ಇಂದಿನ ಕರ‍್ನಾಟಕದ ಹಲವು ಪರಿಸರ ಮತ್ತು ಸುತ್ತಲಿನ ಕೆಲವು ರಾಜ್ಯಗಳಲ್ಲಿನ ಪರಿಸರದಲ್ಲಿ ಬಹುಕಾಲದಿಂದ ಕನ್ನಡವು ಬಳಕೆಯಲ್ಲಿದೆ. ಆದರೆ, ಕನ್ನಡ ಸ್ವತಂತ್ರಗೊಳ್ಳುವುದು ಎಂದರೆ ಉಳಿದ ಬಾಶೆಗಳೊಂದಿಗೆ ಮೂಲದ ಬಾಶೆಯ ಹಲವು ಲಕ್ಶಣಗಳನ್ನು ಹಂಚಿಕೊಂಡು ಅವುಗಳಿಗಿಂತ ಬಿನ್ನವಾದ ಕೆಲವು ಲಕ್ಶಣಗಳನ್ನು ಬೆಳೆಸಿಕೊಂಡು ಬೇರೆಯಾಗುವುದು. ಬಾಶೆಗಳು ಸಹಜವಾಗಿ ತಮ್ಮ ರಚನೆಯಲ್ಲಿ ಬದಲಾಗುತ್ತಲೆ ಇರುತ್ತವೆ. ಹೀಗೆ, ಬಾಶೆ ನಿರಂತರವಾಗಿ ಹೊಸದಾಗುತ್ತಲೆ ಇರುತ್ತದೆ. ಆದ್ದರಿಂದ ಬಾಶೆಗಳಿಗೆ ಜೀವ ಇದೆ ಎಂದು ಸರಳವಾಗಿ ಕರೆಯಲಾಗುವುದು. ಬಳಕೆಯಲ್ಲಿರುವ ಯಾವುದೆ ಬಾಶೆಗಳು ಹೀಗೆ ನಿರಂತರವಾಗಿ ಬದಲಾಗುತ್ತಲೆ, ಬೆಳೆಯುತ್ತಲೆ ಇರುತ್ತವೆ. ಬದಲಾವಣೆ, ಬೆಳವಣಿಗೆ ಇಲ್ಲದಿದ್ದರೆ ಆ ಬಾಶೆಗಳನ್ನು ಸತ್ತ ಬಾಶೆಗಳೆಂದು ಕರೆಯುವುದೂ ಸಹಜವಾಗಿ ಇದೆ. ನಾವೀಗ ತಿಳಿದುಕೊಳ್ಳಬೇಕಿರುವುದು ಕನ್ನಡ ಸ್ವತಂತ್ರಗೊಳ್ಳುವ ಪ್ರಕ್ರಿಯೆಯನ್ನು ಅರಿತುಕೊಳ್ಳುವುದಕ್ಕೆ ಸಹಾಯಕವಾಗಬಹುದಾದ ವಿಚಾರಗಳನ್ನು. ಕನ್ನಡದಾಗ ಇತಿಹಾಸಿಕ ಅದ್ಯಯನಗಳು ಆಗಿಯೆ ಇಲ್ಲ, ಒಂದೆರಡು ಅದ್ಯಯನಗಳು ಮಾತ್ರ. ಅದರಲ್ಲೂ ಮುಕ್ಯವಾಗಿ ಮೂಲಕನ್ನಡದ ಬಗೆಗೆ ಹೆಚ್ಚೂಕಡಿಮೆ ತಿಳುವಳಿಕೆ ಇಲ್ಲ. ಹಾಗಾಗಿ, ಮೂಲಕನ್ನಡವು ಮೂಲದ್ರಾವಿಡದಿಂದ ಸ್ವತಂತ್ರಗೊಂಡ ಕಾಲವನ್ನು ಅರಿತುಕೊಳ್ಳುವುದಕ್ಕೆ ಮತ್ತು ಈ ಟಿಸಿಲೊಡೆದುದನ್ನು ಗುರುತಿಸುವುದು ಹೇಗೆ ಎಂಬುದರ ಕುರಿತು ಒಂದೆರಡು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಬಹುದು.

ಕನ್ನಡವು ನಿಡುಗಾಲದಿಂದ ಅಂದರೆ ಕನಿಶ್ಟ ನಾಲ್ಕು ಸಾವಿರ ವರುಶಗಳಿಂದ ತುಳು, ಕೊಡವ, ತೊದ, ಕೋತ, ಇರುಳ, ತಮಿಳು, ತೆಲುಗು ಬಾಶೆಗಳೊಂದಿಗೆ ಜೊತೆಯಲ್ಲಿ ಬದುಕಿದೆ. ಮಲಯಾಳಂ ಜೊತೆಗೂ ಇದೆ, ಆದರೆ ಮಲಯಾಳಂ ಬಾಶೆಯನ್ನು ಹಲವು ವಿದ್ವಾಂಸರು ಇತ್ತೀಚೆಗೆ ಎನ್ನುವುದರಿಂದ ಪಟ್ಟಿಯಲ್ಲಿ ಅದನ್ನು ಸೇರಿಸಲಿಲ್ಲ. ಇವುಗಳಲ್ಲಿ ತೆಲುಗು ಮಾತ್ರ ಕನ್ನಡ ಬಾಶೆ ಇರುವ ತೆಂಕುದ್ರಾವಿಡ ಗುಂಪಿನ ಸದಸ್ಯ ಬಾಶೆ ಅಲ್ಲ, ಉಳಿದವೆಲ್ಲ ಹೆಚ್ಚೂ ಕಡಿಮೆ ಇದೇ ಗುಂಪಿನವು. ಸಹಜವಾಗಿ ತೆಲುಗು ಕನ್ನಡಕ್ಕೆ ದೂರದ ಬಾಶೆ. ಆನಂತರ ತುಳು, ಕೊಡವ ಮತ್ತು ತೊದ, ಕೋತ ಇವು ಕನ್ನಡದಿಂದ ದೂರದ ನಂಟನ್ನು ಹೊಂದಿವೆ. ಇರುಳ ಮತ್ತು ತಮಿಳು ಬಾಶೆಗಳು ಕನ್ನಡದೊಂದಿಗೆ ಹೆಚ್ಚು ನಿಕಟ ಸಂಬಂದವನ್ನು ಹೊಂದಿವೆ ಮತ್ತು ಮಲಯಾಳಂ ಬಾಶೆಯೂ ಹತ್ತಿರದ ನಂಟು ಎಂದೆನ್ನಬಹುದು. ಕನ್ನಡಕ್ಕೆ ಈ ಎಲ್ಲ ಬಾಶೆಗಳಲ್ಲಿ ಅತಿ ಹತ್ತಿರದ ನಂಟನ್ನು ಹೊಂದಿರುವಂತದ್ದು ತಮಿಳು. ಹಾಗಾದರೆ, ಈ ಬಾಶೆಗಳಿಂದ ಕನ್ನಡವು ಬಿನ್ನವಾದುದನ್ನು ಅರಿತುಕೊಳ್ಳುವುದಕ್ಕೆ ಯಾವ ಅಂಶಗಳು ದೊರೆಯಬಹುದು ಎಂಬುದು ಬಹು ಕುತೂಹಲದ ವಿಚಾರ.

ಮನಿ/ಮನೆ ಎಂಬ ಪದವು ಕನ್ನಡದಾಗ ಸಹಜವಾಗಿಯೆ ಎಲ್ಲರಿಗೂ ಪರಿಚಯ. 'ಮನೆ' ಎನ್ನುವುದು ಶಿಶ್ಟಕನ್ನಡದ ರೂಪವೆಂದು ಪರಿಗಣಿಸಲಾಗಿದೆ. 'ಮನೆ' ಎಂಬ ರೂಪ ಮಯ್ಸೂರು ಕರ‍್ನಾಟಕದಲ್ಲಿ ಹಲವು ಕಡೆ ಬಳಕೆಯಲ್ಲಿದೆ. 'ಮನಿ' ಎಂಬ ರೂಪ ಉತ್ತರ ಕರ‍್ನಾಟಕದಲ್ಲಿದೆ ಎಂಬ ತಪ್ಪು ತಿಳುವಳಿಕೆ ಎಲ್ಲರಿಗೂ ಇದೆ. ಆದರೆ, 'ಮನಿ' ಎನ್ನುವುದು ಉತ್ತರ ಕರ‍್ನಾಟಕ ಮಾತ್ರವಲ್ಲದೆ ಮಯ್ಸೂರು ಕರ‍್ನಾಟಕದ ಕೋಲಾರ, ತುಮಕೂರು ಮೊದಲಾದ ಹಲವಾರು ಪ್ರದೇಶಗಳಲ್ಲಿಯೂ ಬಳಕೆಯಲ್ಲಿದೆ. ಇವುಗಳ ಜೊತೆಗೆ ಚಾಮರಾಜನಗರ ಪರಿಸರದಲ್ಲಿ 'ಮನ' ಎಂಬ ರೂಪ ಬಳಕೆಯಲ್ಲಿದೆ. ಇಲ್ಲಿಯೆ ಹುಣಸೂರು ಪರಿಸರದಲ್ಲಿ ಇದಕ್ಕೆ 'ಮನಯ್' ಎಂಬ ರೂಪ ಬಳಕೆಯಲ್ಲಿದೆ. ಹಾಗಾದರೆ ಈ ಶಬ್ದಕ್ಕೆ ಕನ್ನಡದಲ್ಲಿ ನಾಲ್ಕು ರೂಪಗಳು ಇವೆ. 'ಮನಿ', 'ಮನೆ', 'ಮನ', 'ಮನಯ್'. ಇವುಗಳಲ್ಲಿ 'ಮನ' ಎಂಬ ರೂಪ ತೆಲುಗಿನಲ್ಲಿ ಇದೆ, 'ಮನಯ್' ರೂಪ ತಮಿಳಿನಲ್ಲಿದೆ. ಈಗ ಕನ್ನಡದ ರೂಪಗಳನ್ನು ವಿವರಿಸುವುದಕ್ಕೆ ಮೂಲದಲ್ಲಿ ಇದು ಯಾವ ರೂಪದಲ್ಲಿ ಇದ್ದಿತು ಮತ್ತು ಹೇಗೆ, ಎಲ್ಲಿ, ಯಾವಾಗ ಈ ರೂಪಗಳು ಒಡೆದುಕೊಂಡು ಬೆಳೆದವು ಎಂಬುದನ್ನು ತಿಳಿದುಕೊಳ್ಳಬೇಕು. ಆಗ, ಕನ್ನಡದ ಬೆಳವಣಿಗೆ ಬಗೆಗೆ ತಿಳಿದುಕೊಳ್ಳಲು ಸಾದ್ಯವಾಗುತ್ತದೆ. ಇದು ಪದರೂಪದ ಬಗೆಗಿನ ವಿಚಾರ. ಮನಯ್ ಎಂಬ ರೂಪದಲ್ಲಿ ಪದಕೊನೆಯಲ್ಲಿ ಅಯ್ ಅಂದರೆ ಅ+ಇ ಎರಡು ಸ್ವರಗಳನ್ನು ಪರಿಗಣಿಸಿದೆ. ತಮಿಳಿನಲ್ಲಿ ಹಳೆಯ ರೂಪ ಅಇ ಇದುವೆ ಉಳಿದುಕೊಂಡಿದೆ, ಕೊನೆಯ ಇ ಬಿದ್ದುಹೋಗಿ ಅ ಉಳಿದು ಮನ ಎಂಬುದು ತೆಲುಗಿನಲ್ಲಿ ಇದೆ. ಈ ರೂಪವು ಚಾಮರಾಜನಗರ ಪರಿಸರದಲ್ಲಿ ಬಳಕೆಯಲ್ಲಿದೆ. ಇನ್ನು ಈ ರೂಪದ ಕೊನೆಯ ಅ ಬಿದ್ದುಹೋಗಿ ಇ ಉಳಿದು ಮನಿ ಎಂಬ ರೂಪವಾಗಿದ್ದು ಇದು ಹೆಚ್ಚಿನ ಕನ್ನಡಗಳಲ್ಲಿ ಕಾಣಿಸುತ್ತದೆ. ಇ>ಎ ಬೆಳವಣಿಗೆಯ ಪ್ರಬಾವದಿಂದಲೊ ಈ ರೂಪ ಮನೆ ಎಂದಾಗಿದ್ದು ಕೆಲವು ಕನ್ನಡಗಳಲ್ಲಿ ಬಳಕೆಯಲ್ಲಿದೆ. ಹೀಗೆ ಮನಯ್ ಎಂಬ ರೂಪವು ಮನಿ ಎಂದು ಬಿನ್ನವಾಗಿ ಒಡೆದುಕೊಳ್ಳುವಲ್ಲಿ ಕನ್ನಡದ ಸ್ವತಂತ್ರ ಬೆಳವಣಿಗೆಯ ಹೆಜ್ಜೆಗಳನ್ನು ಗುರುತಿಸುವುದಕ್ಕೆ ಸಾದ್ಯ. ಹೀಗೆ 'ಇ' ಮತ್ತು 'ಎ'ಕಾರದಿಂದ ಮುಗಿಯುವ ಸಾಕಶ್ಟು ಪದಗಳು ಕನ್ನಡದಲ್ಲಿ ದೊರೆಯುತ್ತವೆ.

ಇಲ್ ಎಂಬುದು 'ಮನೆ' ಎಂಬ ಅರ‍್ತದ ಸ್ವತಂತ್ರ ಪದ. ಇದು ನೆಲೆಯನ್ನು ಹೇಳುವ ಸಪ್ತಮಿ ಪ್ರತ್ಯಯವಾಗಿ ಬಳಕೆಯಾಗಿದೆ. ತಮಿಳಿನಲ್ಲಿ ಇದು ಹೆಚ್ಚಿನ ಬಳಕೆಯಲ್ಲಿ ಉಳಿದಿದೆ ಮತ್ತು ಪ್ರತ್ಯಯವಾಗಿಯೂ ಬಳಕೆಯಲ್ಲಿದೆ. ಕನ್ನಡದಲ್ಲಿ ಹಳೆಯ ಸಾಹಿತ್ಯದಲ್ಲಿ ಕೆಲವೆಡೆ ಮಾತ್ರ ಇಲ್ ಎಂಬ ಪದವು ಸ್ವತಂತ್ರ ಪದವಾಗಿ ಬಳಕೆಯಾಗಿರುವುದಕ್ಕೆ ಉದಾಹರಣೆ ಸಿಗುತ್ತವೆ. ಅದರ ಹೊರತಾಗಿ ಹೊಸ್ತಿಲು, ಬಾಗಿಲು ಮೊದಲಾದ ಸಮಾಸ ಪದಗಳಲ್ಲಿ ಈ ಪದ ಕಂಡುಬರುತ್ತದೆ. ಅಂದರೆ ಕನ್ನಡ ಮತ್ತು ತಮಿಳು ಇವು ಬಿನ್ನವಾಗುವ ಮೊದಲು ಇಂತಾ ರೂಪಗಳು ತೆಂಕು ದ್ರಾವಿಡ ಗುಂಪಿನಲ್ಲಿ ಬಳಕೆಯಲ್ಲಿದ್ದು ನಂತರ ಅವುಗಳ ನಡುವೆ ಈ ಪದದ ಬಳಕೆಯಲ್ಲಿ ಬಿನ್ನತೆ ಬೆಳೆಯಿತು. ಇಲ್ಲಿ ಕನ್ನಡವೂ ತಮಿಳೂ ಬಿನ್ನ ಬೆಳವಣಿಗೆಯನ್ನು ಕಂಡುಕೊಂಡವು. ಹೀಗೆ ಸಾಕಶ್ಟು ಬಿನ್ನತೆಗಳು ಮತ್ತು ಅವು ಬೆಳೆದ ಬಗೆಯನ್ನು ತಿಳಿದುಕೊಳ್ಳುವುದಕ್ಕೆ ಸಾದ್ಯವಿದೆ.

ಹೀಗೆ, ಹಲವಾರು ಇಂತ ಲಕ್ಶಣಗಳು ದೊರೆಯುತ್ತವೆ. ಅದ್ಯಯನಗಳು ಇಲ್ಲದಿರುವುದರಿಂದ ಇವುಗಳ ಬಗೆಗೆ ಹೆಚ್ಚಿನ ವಿವರಣೆ ಕೊಡಲು ಸಾದ್ಯವಿಲ್ಲ. ಇಂದು ಕನ್ನಡದಲ್ಲಿ ಹಲವಾರು ಲಕ್ಶಣಗಳು ಹೀಗೆ ಮೂಲದಿಂದ ಬೆಳೆದುಬಂದಿರುವುದು ಸಹಜ. ಆದರೆ, ಅವು ಬೆಳವಣಿಗೆಯಲ್ಲಿ ಬಿನ್ನವಾಗುತ್ತ ಬಂದಿರುತ್ತವೆ. ಈ ಬಿನ್ನತೆಯು ಇತರ ಬಾಶೆಗಳ ನಡುವೆ ಹೊಡೆದುಕೊಳ್ಳುವಲ್ಲಿ ಕೆಲವು ವಿಚಾರಗಳು ಅಪವಾದಗಳಾಗಿ, ಅಪರೂಪವಾಗಿ ಉಳಿದುಕೊಂಡಿರಬಹುದು. ಇಂತಾ ಲಕ್ಶಣಗಳನ್ನು ಅದ್ಯಯನ ಮಾಡುವುದರಿಂದ ಕನ್ನಡವು ಕನ್ನಡವಾಗಿ ಹರಗಡೆದುಕೊಳ್ಳುವುದಕ್ಕಿಂತ ಮೊದಲಿನ ಬಿನ್ನ ಬಾಶೆಗಳೊಂದಿಗಿನ ಹಂಚಿಕೊಂಡ ಲಕ್ಶಣಗಳನ್ನು ಅರಿತುಕೊಳ್ಳುವ ಸಾದ್ಯತೆ ಇದೆ.

ಈ ಅಂಕಣದ ಹಿಂದಿನ ಬರೆಹ:
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

 

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...