Date: 06-10-2023
Location: ಬೆಂಗಳೂರು
''ಮೂಲದಲ್ಲಿ ಒಂದೆ ಆಗಿದ್ದಿರಬಹುದಾದ ಬಾಶೆ ಹೀಗೆಯೆ ನಿರಂತರ ಬೆಳವಣಿಗೆಯಲ್ಲಿ ಬಿನ್ನವಾಗುತ್ತ, ಬೇರೆಯಾಗುತ್ತ ಬಂದಿದೆ ಎಂದು ತಿಳಿದುಕೊಳ್ಳಬಹುದು. ಅಂತಹ ಅದ್ಯಯನಗಳೂ ನಡೆದಿವೆ. ಸದ್ಯಕ್ಕೆ ಬೂಮಿಯ ಮೇಲೆ ಹಲವಾರು ಬಾಶಾ ಮನೆತನಗಳು ಇಲ್ಲವೆ ಬಾಶಾಬಳಿಗಳು ಇವೆ. ಇವೆಲ್ಲವೂ ಮೂಲದಲ್ಲಿ ಒಂದೆ ಮೂಲದಿಂದ ಬಂದಿರಬಹುದು ಎಂಬ ವಾದವೂ ಅದಕ್ಕೆ ಪೂರಕವಾದ ಸಾಕಶ್ಟು ಅದ್ಯಯನಗಳೂ ನಡೆಯುತ್ತಿವೆ,'' ಭಾಷಾತಜ್ಞ, ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ 'ತೊಡೆಯಬಾರದ ಲಿಪಿ ಬರೆಯಬಾರದು' ಅಂಕಣದಲ್ಲಿ 'ಕನ್ನಡಗಂಳ್-ಯಾಕೆ ಬಹುಳತೆ?' ಪದ ಬಳಕೆಗಳ ಕುರಿತು ವಿಶ್ಲೇಷಿಸಿದ್ದಾರೆ.
ವಿಸ್ತಾರವಾದ ಬೂಪ್ರದೇಶದಲ್ಲಿ ಬಳಕೆಯಲ್ಲಿರುವ ಕನ್ನಡ ಒಂದೆ ಬಗೆಯಾಗಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹೀಗೆ ವಿಸ್ತಾರವಾದ ಬೂಪ್ರದೇಶದಲ್ಲಿ ಬಳಕೆಯಲ್ಲಿರುವ ಯಾವುದೆ ಬಾಶೆ ವಿಬಿನ್ನ ಬಗೆಗಳನ್ನು ಹೊಂದಿರುತ್ತದೆ. ಕನ್ನಡದಲ್ಲಿ ಹಲವು ಕನ್ನಡಗಳು ಇರುವುದು ಎಲ್ಲರಿಗೂ ತಿಳಿದ ವಿಶಯ. ಬೀದರ ಕನ್ನಡ, ಕುಂದಾಪುರ ಕನ್ನಡ, ಮಸ್ಕಿ ಕನ್ನಡ, ಹುಣಸೂರು ಕನ್ನಡ ಹೀಗೆ ಹಲವು ಕನ್ನಡಗಳು. ಸಾವಿರದಶ್ಟು ವರುಶಗಳ ಹಿಂದೆ ಕವಿರಾಜಮಾರ್ಗ ಹಲವು ಕನ್ನಡಂಗಳ ಪ್ರಸ್ತಾಪವನ್ನು ಮಾಡಿದೆ. ಹಾಗಾದರೆ ಈ ಕನ್ನಡಗಳ ಬೆಳವಣಿಗೆಯನ್ನು ಹೇಗೆ ಅರ್ತ ಮಾಡಿಕೊಳ್ಳುವುದು ಎಂಬ ಪ್ರಶ್ನೆಯನ್ನು ಹಲವು ಮಗ್ಗುಲುಗಳಲ್ಲಿ ನೋಡುವ ಪ್ರಯತ್ನವನ್ನು ಇಲ್ಲಿ ಮಾಡಿದೆ.
ಮೊದಲಿಗೆ ಯಾಕೆ ಹೀಗೆ ಹಲವು ಬಗೆಗಳು ಎಂಬ ಪ್ರಶ್ನೆಯನ್ನು ಮಾತಾಡೋಣ. ಒಂದು ಬಾಶೆ ಒಂದೆ ರೀತಿ ಇರುವುದಿಲ್ಲವೇಕೆ? ಬದಲಾವಣೆ ಜಗದ ನಿಯಮ, ಬಾಶೆಯೂ ಹೀಗೆ ಬದಲಾಗಬೇಕು. ಕಾಲಾಂತರದಲ್ಲಿ ಬಾಶೆ ಬದಲಾಗುತ್ತದೆ. ಅದರಂತೆಯೆ ಕಾಲಾಂತರದಲ್ಲಿ ವಿವಿದ ಪ್ರದೇಶಗಳಲ್ಲಿ ನಡೆಯುತ್ತಿರುವ ಬದಲಾವಣೆ ಒಂದೆ ರೀತಿಯಲ್ಲಿ ಇರಬೇಕಿಲ್ಲ, ಇರುವುದಿಲ್ಲ. ಹೀಗಾಗಿ ದೊಡ್ಡ ದೊಡ್ಡ ಸಮುದಾಯಗಳಲ್ಲಿ, ವಿಸ್ತಾರವಾದ ಬೂಪ್ರದೇಶದಲ್ಲಿ ಬಳಕೆಯಲ್ಲಿರುವ ಜಗತ್ತಿನ ಎಲ್ಲ ಬಾಶೆಗಳಲ್ಲಿ ಈ ಬಗೆಯ ಒಳನುಡಿಗಳು ಕಂಡುಬರುತ್ತದೆ.
ಬಾಶೆಯ ಈ ಮೂಲಬೂತ ಬದಲಾವಣೆಯ ಲಕ್ಶಣವೆ ಬಾಶೆಯೊಂದು ಬದುಕಿರುವುದರ ಸಂಕೇತವಾಗಿ ಕಾಣಿಸುತ್ತದೆ. ದಿನದಿನದ ಜೀವನದಲ್ಲಿ ಬಳಕೆಯಲ್ಲಿ ಇಲ್ಲದ ಬಾಶೆಗಳಲ್ಲಿ ಬದಲಾವಣೆಗಳು ಕಾಣಿಸುವುದಿಲ್ಲ. ಹಾಗಾಗಿ ಅಂತ ಬಾಶೆಗಳನ್ನು ಸತ್ತ ಬಾಶೆಗಳು ಎಂದು ಕರೆಯಲಾಗುತ್ತದೆ. ಅಂದರೆ, ಬದಲಾವಣೆಗಳು ಇಲ್ಲದ ಬಾಶೆಗಳನ್ನು ಹೀಗೆ ಹೇಳಲಾಗುವುದು. ಆದ್ದರಿಂದ ಬದಲಾವಣೆ ಎಂಬುದು ಬಹುಮುಕ್ಯವಾಗುತ್ತದೆ.
ಈ ಬದಲಾವಣೆ ಬಾಶೆಯ ಎಲ್ಲ ಹಂತಗಳಲ್ಲಿಯೂ ನಡೆಯುತ್ತಿರುತ್ತದೆ. ದ್ವನಿ, ಪದ, ವಾಕ್ಯ, ಅರ್ತ ಹೀಗೆ ಎಲ್ಲ ಹಂತಗಳಲ್ಲಿ ಇದನ್ನು ಕಾಣಬಹುದು. ಈ ಬದಲಾವಣೆಗೆ ಆಂತರಿಕವಾದ ಸಹಜ ಕಾರಣಗಳ ಜೊತೆಗೆ ಸಾಮಾಜಿಕವಾದ ಬಾಹ್ಯ ಕಾರಣಗಳೂ ಇರುತ್ತವೆ. ವಿಬಿನ್ನ ಕಾರಣಗಳಿಂದಾಗಿ ಬದಲಾವಣೆಗಳು ನಡೆಯುತ್ತವೆಯಾದ್ದರಿಂದ ಗಟಿಸುವ ಬದಲಾವಣೆಗಳೂ ವಿಬಿನ್ನವಾಗಿರುತ್ತವೆ.
ಮೂಲದಲ್ಲಿ ಒಂದೆ ಆಗಿದ್ದಿರಬಹುದಾದ ಬಾಶೆ ಹೀಗೆಯೆ ನಿರಂತರ ಬೆಳವಣಿಗೆಯಲ್ಲಿ ಬಿನ್ನವಾಗುತ್ತ, ಬೇರೆಯಾಗುತ್ತ ಬಂದಿದೆ ಎಂದು ತಿಳಿದುಕೊಳ್ಳಬಹುದು. ಅಂತಹ ಅದ್ಯಯನಗಳೂ ನಡೆದಿವೆ. ಸದ್ಯಕ್ಕೆ ಬೂಮಿಯ ಮೇಲೆ ಹಲವಾರು ಬಾಶಾ ಮನೆತನಗಳು ಇಲ್ಲವೆ ಬಾಶಾಬಳಿಗಳು ಇವೆ. ಇವೆಲ್ಲವೂ ಮೂಲದಲ್ಲಿ ಒಂದೆ ಮೂಲದಿಂದ ಬಂದಿರಬಹುದು ಎಂಬ ವಾದವೂ ಅದಕ್ಕೆ ಪೂರಕವಾದ ಸಾಕಶ್ಟು ಅದ್ಯಯನಗಳೂ ನಡೆಯುತ್ತಿವೆ. ಆದರೆ, ಎಶ್ಟೊ ಸಾವಿರ ವರುಶಗಳ ಹಿಂದಿನ ಬೆಳವಣಿಗೆಯ ಅದ್ಯಯನಕ್ಕೆ ಸಹಜವಾಗಿ ಆದಾರಗಳು ಕಡಿಮೆ. ಹಾಗಾಗಿ, ಮೂಲದ್ರಾವಿಡ ಎಂಬ ಕಲ್ಪಿತ ಬಾಶೆಯ ಬೆಳವಣಿಗೆಯನ್ನು ಸ್ತೂಲವಾಗಿ ಮಾತಿಗೆ ಬಳಸಿಕೊಳ್ಳಬಹುದು. ಇದರಿಂದ ಬಾಶೆಯ ಬೆಳವಣಿಗೆ ಬಗೆಗೆ ಒಂದು ಚಿತ್ರಣ ದೊರೆಯಬಹುದು.
ಮೂಲದ್ರಾವಿಡ ಎಂಬುದು ಒಂದು ಬಾಶೆಯಾಗಿ ಎಲ್ಲಿ ಯಾವಾಗ ಬಳಕೆಯಲ್ಲಿದ್ದಿತು ಎಂಬುದಕ್ಕೆ ಆದಾರ ಇಲ್ಲ. ಆದರೆ ಆದುನಿಕ ವಿಗ್ನಾನ ವಿವಿದ ತಂತ್ರಗಳನ್ನು ಬಳಸಿಕೊಂಡು ಇಂತದೊಂದು ಬಾಶೆ ಮೂಲದಲ್ಲಿ ಬಳಕೆಯಲ್ಲಿದ್ದಿತು ಎಂದು ಕಲ್ಪಿಸಿಕೊಂಡಿದೆ. ಈ ಕಲ್ಪಿತ ಬಾಶೆಯ ಒಂದು ನಿರ್ದಿಶ್ಟ ಬಿಂದುವಿನಿಂದ ಮೂಲದ್ರಾವಿಡ ಚರಿತ್ರೆಯನ್ನು ಹೇಳಲು ತೊಡಗುತ್ತಾರೆ. ಅದಕ್ಕಿಂತ ಹಿಂದಿನ ಸ್ತಿತಿಯ ಬಗೆಗೆ ಹೆಚ್ಚಿನ ತಿಳುವಳಿಕೆ ಇಲ್ಲ ಎಂಬುದು ಇದರಿಂದ ವಿದಿತವಾಗುತ್ತದೆ. ಹೀಗೆ ಮೂಲದಲ್ಲಿ ಒಂದು ರೀತಿಯಲ್ಲಿ ಇದ್ದ ಬಾಶೆ ಕ್ರಮೇಣ ಬೆಳವಣಿಗೆಯನ್ನು ಪಡೆದುಕೊಳ್ಳುತ್ತದೆ. ಇಲ್ಲಿ ಒಂದು ಕುತೂಹಲದ ಮತ್ತು ಮಹತ್ವದ ವಿಚಾರವೊಂದನ್ನು ಸ್ಪಶ್ಟಪಡಿಸಬೇಕು. ಮೂಲದ್ರಾವಿಡ ಎಂಬ ಕಲ್ಪಿತ ಬಾಶೆ ಒಂದೆ ರೀತಿಯಲ್ಲಿ ಅಂದರೆ ಅದರೊಳಗೆ ಬಿನ್ನತೆಗಳು ಇಲ್ಲದೆ ಬಳಕೆಯಲ್ಲಿದ್ದಿತು ಎಂದು ಹೇಳುವುದಕ್ಕೆ ಸಾದ್ಯವಿಲ್ಲ. ಮೂಲದ್ರಾವಿಡ ಹಂತದಲ್ಲಿಯೆ ಸಾಕಶ್ಟು ವಿಚಾರಗಳು ವಿಬಿನ್ನವಾಗಿದ್ದವು. ಈ ಬಿನ್ನ ರಚನೆಗಳೆ ಮುಂದೆ ದೊಡ್ಡದಾಗಿ ಬೆಳೆದು ಅವು ಬೇರೆ ಬಾಶೆಗಳಾಗಿ ಬೆಳೆಯುವುದಕ್ಕೆ ಆದಾರವಾಗುತ್ತವೆ.
ಹೀಗೆ ಮೂಲದ್ರಾವಿಡದಿಂದ ಸುಮಾರು ಮೂರು-ನಾಲ್ಕು ಪ್ರದಾನ ಗುಂಪುಗಳು ಒಡೆದುಕೊಂಡು ಬೆಳೆದವು ಎಂದು ವಿದ್ವಾಂಸರು ಹೇಳುತ್ತಾರೆ. ಹೀಗೆ ಈ ಗುಂಪುಗಳು ಬೆಳೆದ ಮೇಲೆ ಮೂಲದ್ರಾವಿಡ ಎಂಬ ಕಲ್ಪಿತ ಬಾಶೆ ಏನಾಯಿತು ಎಂಬುದು ಪ್ರಶ್ನೆಯಾಗುತ್ತದೆ. ಆ ಬಾಶೆ ಸಹಜವಾಗಿ ಹಲವು ಟಿಸಿಲುಗಳಾಗಿ ಒಡೆದುಕೊಂಡು ಬೇರೆ ಬಾಶೆಗಳಾಗಿ ಇಲ್ಲವೆ ಈ ಮೇಲೆ ಕರೆದಂತೆ ಗುಂಪುಗಳಾಗಿ ಬೆಳೆದುಬಂದಿರುತ್ತದೆ. ಅಂದರೆ, ಈಗ ಮೂಲದ್ರಾವಿಡ ಎಂಬ ಬಾಶೆ ಇಲ್ಲವಾಯಿತು. ಆದರೆ, ಅದೆ ವೇಳೆಗೆ ಮೂಲದ್ರಾವಿಡ ಬಾಶೆ ಬಡದ್ರಾವಿಡ, ನಡುದ್ರಾವಿಡ, ತೆಂಕುದ್ರಾವಿಡ ಎಂದು ವಿವಿದ ಗುಂಪುಗಳಾಗಿ ಬೆಳೆಯಿತು ಎಂದೂ ಹೇಳಬಹುದು. ಈ ಎರಡೂ ವಿವರಣೆಗಳು ಸರಿ ಎನಿಸುತ್ತವೆ. ಆನಂತರ ಈ ಗುಂಪುಗಳು ಮತ್ತೆ ಬೆಳವಣಿಗೆಯನ್ನು ಹೊಂದುತ್ತವೆ. ಮುಂದೆ ಪ್ರತಿಯೊಂದು ಗುಂಪಿನಲ್ಲಿಯೂ ಹಲವಾರು ಬಾಶೆಗಳು ಟಿಸಿಲೊಡೆದು ಬೆಳೆಯುತ್ತವೆ. ಆಯಾ ಗುಂಪಿನ ಮಾತುಗರ ಸಾಮಾಜಿಕತೆಗೆ ತಕ್ಕಂತೆ ಹೆಚ್ಚಿನ ಇಲ್ಲವೆ ಕಡಿಮೆ ಬಾಶೆಗಳು ಈ ಗುಂಪುಗಳಲ್ಲಿ ಬೆಳೆಯುತ್ತವೆ. ನಾವಿಂದು ನೋಡುವ ಕನ್ನಡ, ತಮಿಳು, ತುಳು ಮೊದಲಾದ ಬಾಶೆಗಳು ಹೀಗೆ ತೆಂಕುದ್ರಾವಿಡ ಎಂಬ ಒಂದು ಗುಂಪಿನಿಂದ ಬೆಳೆದವು. ಅಂದರೆ, ಈಗ ತೆಂಕುದ್ರಾವಿಡ ಎಂಬ ಹಂತ ಇಲ್ಲವಾಯಿತು. ಅದು ಮುಂದೆ ಹಲವು ಬಾಶೆಗಳಾಗಿ ಬೆಳೆಯಿತು. ಆನಂತರ ಕನ್ನಡ ಎಂಬ ಬಾಶೆ ಬೆಳೆದ ಮೇಲೆ ಮತ್ತೆ ಕನ್ನಡದೊಳಗೆ ಹಲವು ಬಗೆಗಳು, ಬಿನ್ನತೆಗಳು ಬೆಳೆದಿವೆ. ಇವುಗಳನ್ನೆ ನಾವಿಂದು ಕನ್ನಡದ ಒಳನುಡಿಗಳು ಎಂದು ಕರೆಯುತ್ತೇವೆ. ಹೀಗೆ ಹೇಳಿದ ತಕ್ಶಣ ಒಂದು ಸಹಜ ಪ್ರಶ್ನೆ ಎದುರಾಗಬಹುದು. ಹಾಗಾದರೆ, ಈ ಕನ್ನಡದ ಒಳನುಡಿಗಳು ಮುಂದೆ ಬೇರೆ ಬಾಶೆಗಳಾಗಿ ಕನ್ನಡ ಇಲ್ಲವಾಗಬಹುದೆ? ಹವುದು. ನಿಜ. ಅದುವೆ ಸಹಜವಾದ ಪ್ರಾಕ್ರುತಿಕವಾದ ಬೆಳವಣಿಗೆ. ಕನ್ನಡದೊಳಗಿನಿಂದ ಯಾವುದು ಎಶ್ಟು ಹೇಗೆ ಬೆಳೆಯುತ್ತದೆ ಎಂಬುದು ಅಸ್ಪಶ್ಟ. ಈಗಿನ ಒಳನುಡಿಗಳನ್ನು ಅವಲೋಕಿಸಿದಾಗ ಈ ಬಗೆಗೆ ಒಂದಶ್ಟು ಅಂದಾಜು ತಿಳುವಳಿಕೆ ದೊರೆಯಬಹುದಾದರೂ ಇದುವರೆಗಿನ ಬೆಳವಣಿಗೆ ಹೀಗೆಯೆ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಸಮಾಜದಲ್ಲಿನ ಹಲವಾರು ಬಗೆಯ ಬೆಳವಣಿಗೆಗಳು ಬಾಶೆಯ ಬೆಳವಣಿಗೆಯನ್ನು ನಿರ್ದರಿಸುತ್ತಿರುತ್ತವೆ.
ಕನ್ನಡದ ಒಳನುಡಿಗಳನ್ನು ಹೀಗೆ ಒಂದು ಸಹಜ ಬೆಳವಣಿಗೆಯ ಬಾಗವಾಗಿ ನೋಡಬೇಕಾಗುತ್ತದೆ. ಆದರೆ, ಯಾವಾಗ ಇಂತ ಬೆಳವಣಿಗೆ ಗಟಿಸಬಹುದು ಎಂಬ ಪ್ರಶ್ನೆಯನ್ನು ಎದುರು ಹಾಕಿಕೊಳ್ಳಬಹುದು. ಒಂದು ಬಾಶೆಯಲ್ಲಿ ಯಾವುದೆ ಸಣ್ಣ ದ್ವನಿ ಬದಲಾವಣೆ ಗಟಿಸಬೇಕಾದರೂ ಕೆಲವು ನೂರು ವರುಶಗಳಿಂದ ಹಲವು ನೂರು ವರುಶಗಳ ಕಾಲ ಬೇಕಾಗಬಹುದು. ಅಂದರೆ, ಆ ಬದಲಾವಣೆಯ ತೀವ್ರತೆ ಆ ಸಮಾಜದಲ್ಲಿ ಹೇಗಿದೆ, ಎಶ್ಟಿದೆ ಎನ್ನುವುದರ ಮೇಲೆ ಆ ಬದಲಾವಣೆಯ ವೇಗ, ದಿಕ್ಕು ನಿರ್ದಾರವಾಗುತ್ತವೆ. ಹೀಗಾಗಿ ಇಶ್ಟು ವರುಶಗಳಿಗೆ ಇಶ್ಟು ಬೆಳವಣಿಗೆ ಎಂಬ ಲೆಕ್ಕ ಸಿಗದೆ ಹೋಗಬಹುದು. ಸಾಮಾಜಿಕ ಪಲ್ಲಟಗಳು ಇಂದಿನಂತೆ ವಿಪರೀತವಾಗಿ ಇಲ್ಲದ ಹಳೆಯ ಕಾಲದಲ್ಲಿ ಈ ಬದಲಾವಣೆ ಹೆಚ್ಚಿನ ಕಾಲವನ್ನು ತೆಗೆದುಕೊಂಡಿದ್ದಿರಬಹುದು. ಇಂದು ಅದು ಬೇಗನೆ ನಡೆಯುತ್ತಿರಬಹುದು. ಇದಕ್ಕೆ ಕಟ್ಟೆದುರಾಗಿ ಇನ್ನೊಂದು ವಿಚಾರ ಇದೆ. ಆದುನಿಕತೆ, ತಂತ್ರಗ್ನಾನ ಇವುಗಳ ಬೆಳವಣಿಗೆಯಿಂದಾಗಿ ಬಾಶೆಯ ಸಹಜ ಬೆಳವಣಿಗೆಯನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಕುರಿತು ಬೇರೊಂದ ಕಡೆ ಮಾತಾಡಬಹುದು. ಹೀಗಾಗಿ, ಇಂದಿನ ಕಾಲದಲ್ಲಿ ಬದಲಾವಣೆ ಕಡಿಮೆಯಾಗಿದೆ ಎಂದೂ ಹೇಳಬಹುದು. ಆದರೆ ವಾಸ್ತವದಲ್ಲಿ ಬದಲಾವಣೆ ಸ್ವರೂಪದಲ್ಲಿ ಬದಲಾಗಿದೆಯೆ ಹೊರತು ಬದಲಾವಣೆ ಎಂಬುದು ಇದ್ದೆ ಇರುತ್ತದೆ ಹೀಗೆ ಬಾಶೆಯಲ್ಲಿ ಬದಲಾವಣೆ ಎನ್ನುವುದು ಅತಿ ಸಹಜ. ಮುಂದಿನ ಬರಹದಲ್ಲಿ ಕನ್ನಡದ ಒಳನುಡಿಗಳು ಎಶ್ಟು ಮತ್ತು ಅವು ಯಾವಾಗಿನಿಂದ ಒಡೆದುಕೊಂಡಿರಬಹುದು ಎಂಬ ಬಗೆಗೆ ಮಾತಾಡಬಹುದು.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ್ಣ ಮತ್ತು ಅಪೂರ್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ್ವನಾಮಗಳು
ಸರ್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
"ಇವರನ್ನು ಸು.ರಂ ಎಕ್ಕುಂಡಿಯವರು ಸಂಕೀರ್ಣ ಕವಿ, ಮತ್ತು ಕೆಂಪು ಕವಿ ಎಂದು ಕರೆದರೆ, ವಿಮರ್ಶಕರು ಇವರನ್ನು ಸ...
"ಮಕ್ಕಳು ಹುಟ್ಟಿನಿಂದ ಎಲ್ಲವನ್ನೂ ಗ್ರಹಿಸುವ, ಕಲಿಯುವ, ಪಡೆಯುವ ಸಾಮರ್ತ್ಯವನ್ನು ಹೊಂದಿರುತ್ತವೆ ಮತ್ತು ನಿರ...
©2024 Book Brahma Private Limited.