Date: 13-11-2024
Location: ಬೆಂಗಳೂರು
"ಇವರನ್ನು ಸು.ರಂ ಎಕ್ಕುಂಡಿಯವರು ಸಂಕೀರ್ಣ ಕವಿ, ಮತ್ತು ಕೆಂಪು ಕವಿ ಎಂದು ಕರೆದರೆ, ವಿಮರ್ಶಕರು ಇವರನ್ನು ಸಂರ್ಕೀಣ ಕವಿ, ಲಿಬುಡೋ ಕವಿ, ಮಹತ್ವದ ಕವಿ ಎಂದು ಕರೆದಿದ್ದಾರೆ. ಇವರ ಕಾವ್ಯದ ಮೇಲೆ ಸಿಗ್ನಲ್ ಫ್ರಾಯ್ಡ್ ನ ಸ್ವಪ್ನ ಸಿದ್ಧಾಂತದ ಪ್ರಭಾವವಿದೆ ಎಂದು ಉಲ್ಲೇಖಿಸುತ್ತಾರೆ ವಿದ್ವಾಂಸರು," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಆಯ್ದ ಬಿ.ಸಿ. ರಾಮಚಂದ್ರ ಶರ್ಮ ಅವರ ‘ಯಾರು ಹಿತವರು ನಿನಗೆ’ ಕಥೆ ಬಗ್ಗೆ ವಿಮರ್ಶಿಸಿದ್ದಾರೆ.
ನವ್ಯ ಸಾಹಿತ್ಯ ಕಾಲಘಟ್ಟದ ಸಂದರ್ಭದಲ್ಲಿ ಬಿ.ಸಿ. ರಾಮಚಂದ್ರ ಶರ್ಮರನ್ನು ನವ್ಯ ಸಾಹಿತ್ಯ ಕಥೆಯ ಆದ್ಯ ಪ್ರವರ್ತಕರಲ್ಲಿ ಒಬ್ಬರೆಂದು ಗುರುತಿಸಲಾಗಿದೆ. ನವ್ಯ ಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಚಿಂತನೆಯನ್ನು ಮೂಡಿಸಿ ಹಲವು ಕವನ ಸಂಕಲನಗಳನ್ನು ಕನ್ನಡ ಸಾರಸತ್ವ ಲೋಕಕ್ಕೆ ಅರ್ಪಿಸಿದ್ದಾರೆ. ಪ್ರಮುಖವಾಗಿ ಹೃದಯ ಗೀತೆ, ಏಳು ಸುತ್ತಿನ ಕೋಟೆ, ಭುವಿ ನೀಡಿದ ಸ್ಪೂರ್ತಿ, ಹೇಸರುಗತ್ತೆ, ಸಪ್ತಪದಿ, ಬ್ರಾಹ್ಮಣ ಹುಡುಗ, ಇನ್ನೂ ಮುಂತಾದವು ಹಾಗೆಯೇ ನಾಡು ಒಡೆಯಿತು, ಏಳನೆಯ ಜೀವ, ಯಾರು ಹಿತವರು ನಿನಗೆ, ಸಾವು, ಭ್ರಮೆ, ಸೆರಗಿನ ಕಂಡ, ಇವು ಪ್ರಮುಖ ಕತೆಗಳಾಗಿದ್ದು, ಇನ್ನು ಕೆಲವು ಕಥಾಸಂಕಲನಗಳನ್ನು, ನಾಟಕ ಸಂಕಲನಗಳನ್ನು ಬರೆಯುವುದರ ಮೂಲಕ ನವ್ಯ ಸಾಹಿತ್ಯ ಕಾಲದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡವರು. ಇವರನ್ನು ಸು.ರಂ ಎಕ್ಕುಂಡಿಯವರು ಸಂಕೀರ್ಣ ಕವಿ, ಮತ್ತು ಕೆಂಪು ಕವಿ ಎಂದು ಕರೆದರೆ, ವಿಮರ್ಶಕರು ಇವರನ್ನು ಸಂರ್ಕೀಣ ಕವಿ, ಲಿಬುಡೋ ಕವಿ, ಮಹತ್ವದ ಕವಿ ಎಂದು ಕರೆದಿದ್ದಾರೆ. ಇವರ ಕಾವ್ಯದ ಮೇಲೆ ಸಿಗ್ನಲ್ ಫ್ರಾಯ್ಡ್ ನ ಸ್ವಪ್ನ ಸಿದ್ಧಾಂತದ ಪ್ರಭಾವವಿದೆ ಎಂದು ಉಲ್ಲೇಖಿಸುತ್ತಾರೆ ವಿದ್ವಾಂಸರು.
ಇವರ ಪ್ರಮುಖ ಕಥೆಗಳಲ್ಲಿ ಒಂದಾದ “ಯಾರು ಹಿತವರು ನಿನಗೆ” ಎಂಬ ಕಥೆಯು ನವ್ಯಕತೆಗಳಲ್ಲಿ ಪ್ರಮುಖ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಶರ್ಮ ರವರ “ಸೆರಗಿನ ಕೆಂಡ” ಪ್ರಾಧಿನಿದಿಕ ಕಥೆಗಳಲ್ಲಿ ಒಂದು. ಯಾರು ಹಿತವರು ನಿನಗೆ ಎಂಬ ಕಥಾಲಹರಿಯಲ್ಲಿ ‘ಅವರ ತಪ್ಪಲ್ಲ’,,,, ಎಂಬ ವಾಕ್ಯಗಳಿಂದ ಪ್ರಾರಂಭಗೊಳ್ಳುವ ಕಥೆಯು ಮೂರು ತರುಣರು ಮೈಸೂರಿನಿಂದ ಟ್ರಿಪ್ ಗೆ ಎಂದು ಬಂದವರು ಬೆಳೆಗೊಳದಿಂದ ತೆರಳುತ್ತಿರುವವರಿಗೆ ದಿಢೀರನೆ ಸುರಿದ ಮಳೆಯಿಂದ ಅಲ್ಲೇ ಸಿಕ್ಕ ಒಬ್ಬ ಬ್ರಾಹ್ಮಣ ಯಜಮಾನರ ಮನೆಯಲ್ಲಿ ರಾತ್ರಿ ತಂಗಿದ್ದು ಬೆಳಗ್ಗೆ ಹೊರಡುವ ಒಂದು ಸುಂದರ ಕಥಾನಕ. ಇದು ಬೇಸಿಗೆಯ ಸಮಯ ಮುಂಗಾರಿನ ಪ್ರಾರಂಭದ ದೆಸೆಯಲ್ಲಿ ಬಂದ ವರುಣನ ಕೃಪೆಯಿಂದ ಆಕಸ್ಮಿಕವಾಗಿ ಆ ಬ್ರಾಹ್ಮಣರ ಮನೆಯಲ್ಲಿ ತಂಗುವುದು ಅಲ್ಲೇ ಕೆಲಸ ಮಾಡಿಕೊಂಡಿದ್ದ ಒಕ್ಕಲಿಗರ ಮಲ್ಲಿ ಅವರ ಮನೆಯ ಕೆಲಸದಳಾಗಿರುವುದು ಗಂಡ ಇವಳನ್ನು ಬಿಟ್ಟಿರುವುದರ ಪ್ರಯುಕ್ತ ಆ ಬ್ರಾಹ್ಮಣ ದಂಪತಿಗಳಿಗೆ ಮಕ್ಕಳು ಇಲ್ಲದಿರುವುದರಿಂದ ಅಲ್ಲಿಯೇ ವಾಸವಾಗಿದ್ದ ಮಲ್ಲಿಗೆಯ ಬೆಂಗಾಡಿನಂತ ಬದುಕಿಗೆ ತಂಗಲು ಬಂದವನಲೊಬ್ಬ ಹೂ ಮಳೆಯನ್ನು ಸುರಿಸಿ ತೆರಳಿದ್ದ.
ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ, ಆ ಮನೆಯ ಬ್ರಾಹ್ಮಣ ದಂಪತಿಗಳಿಗೆ ಮಕ್ಕಳಿಲ್ಲ ಅವರ ಮನೆಯಲ್ಲಿ ಮಲ್ಲಿ ಎಂಬ ಒಕ್ಕಲಿಗರ ಹುಡುಗಿ ಕೆಲಸ ಮಾಡಿಕೊಂಡಿದ್ದಾಳೆ ಇಲ್ಲಿಂದಲೇ ಕತೆ ತನ್ನ ತೀವ್ರತೆಯಿಂದ ತೆರೆದುಕೊಳ್ಳುತ್ತದೆ. ಮೂವರು ಪ್ರವಾಸಿ ಹುಡುಗರು ಯಜಮಾನರ ಮನೆಯಲ್ಲಿ ಒಂದು ರಾತ್ರಿ ತಂಗುವುದರ ಮೂಲಕ ಇಲ್ಲಿ ಕಥೆಗಾರ ಎಂತಹ ಅದ್ಭುತ ಕಥಾ ತಂತ್ರವನ್ನು ಹೆಣೆದಿದ್ದಾರೆ ಎಂದರೆ ಕಥೆ ಆಗ ನಿಜವಾದ ತನ್ನ ಗತಿಯನ್ನು ಲಯವನ್ನು ಪಡೆದುಕೊಳ್ಳುತ್ತದೆ ಆದರೆ ಅದು ಪಡೆದುಕೊಳ್ಳುವ ಚಲನೆ ಎಂತದ್ದು ಎಂಬುದು ಮಾತ್ರ ಸಹೃದಯರ ಅರಿವಿಗೆ ತಕ್ಷಣ ಬರುವುದಿಲ್ಲ. ನವ್ಯದ ಬಹುಪಾಲು ಕಥೆಗಳು ಶ್ರೀಮಂತ ಪಟ್ಟಣದ ವಾತಾವರಣದಲ್ಲಿ ಜರುಗುವಂತದಾದರೆ ಇಲ್ಲಿ ಮಾತ್ರ ಒಂದು ಹಳ್ಳಿ ಪ್ರದೇಶದ ಒಬ್ಬ ಬ್ರಾಹ್ಮಣ ಕುಟುಂಬದ ಒಂದು ರಾತ್ರಿಯಲ್ಲಿ ಕಥಾ ಸಂವಿಧಾನ ಬೆಳೆದು ಬೃಹದಾಕಾರವನ್ನು ಪಡೆದುಕೊಳ್ಳುತ್ತದೆ.
ನಿದ್ದೆ ಬಾರದೆ ಮಲಗಿದ ಮಲ್ಲಿ ಗತ ನೆನಪಿನಾಳಕೆ ತೆರಳುತ್ತಾಳೆ. ಪ್ರೀತಿಯಿಂದ ಬೆಳೆಸಿದ ತಂದೆ ಹಾಗೂ ಭರವಸೆಯ ಬೆಳಕಾಗಿ ಬಂದ ಗಂಡ ಪ್ರೀತಿಯ ಹೊಳೆಯನ್ನೆನೋ,, ಹರಿಸಿದ್ದ. ಆದರೆ “ಬಲ ಮಂಡಿಯ ಬಳಿ ಗುಲಗಂಜಿಯಗಲ ಬಹುದಿನಗಳಿಂದ ಇದ್ದ ಬಿಳಿ ಮಚ್ಚೆ ಎಷ್ಟೋ ದಿನಗಳಿಂದ ಯಾರಿಗೂ ಕಾಣದ ಹಾಗೆ ಬೈಚ್ಚಿಟ್ಟಿದ ಮಚ್ಚೆ ಗಂಡನ ಕಣ್ಣಿಗೆ ಬಿತ್ತು ತನ್ನ ಸುಖಕ್ಕೆ ಬಂದ ಕುತ್ತು” ಹೀಗೆ ತನ್ನ ಗಂಡ ತನ್ನನ್ನು ಬಿಟ್ಟುಹೋದದ್ದು, ಹೊಲ ಮನೆ ಮಾರಿಕೊಂಡು ಇನ್ನೊಬ್ಬಕೆಯನ್ನು ಕೂಡಿಕೆ ಮಾಡಿಕೊಂಡ ಸುದ್ದಿ, ಇದೇ ನೋವ್ವಲ್ಲೇ ತನ್ನ ತಂದೆ ತೀರಿಕೊಂಡದ್ದು ಹೀಗೆ ಎಲ್ಲವೂ ನೆನಪಾಗಿ ತನ್ನ ಬದುಕಲ್ಲಿ ಪ್ರೀತಿಯ ಮಳೆ ಇರದೇ ಬೆಂಗಾಡದ ದೇಹ ಹಳೆಯ ನೆನಪಲ್ಲಿ ಮನಸ್ಸನ್ನು ನೆನೆಸಿ ಒಂಟಿತನದಲ್ಲೇ ಕಾಲ ಕಳೆಯುವ ಆಕೆಯ ಪರಿಸ್ಥಿತಿಗೆ ಆಕೆ ಹೈರಾಣಾಗಿ ಕುಸಿದರು ಎತ್ತಿ ಮುದ್ದಾಡುವವರು ಯಾರು ಇಲ್ಲ ಎಂಬ ಚಿಂತೆಯಲ್ಲೇ ರಾತ್ರಿ ಹೊಳ್ಳಾಡಿದ್ದು ಪುರುಷನ ಸ್ಪರ್ಶ ಸುಖವಿಲ್ಲದ ದೇಹ ತಂಪೆರೆವ ಹೂ ಮಳೆಗಾಗಿ ಕಾದಿದ್ದು ಸಾರ್ಥಕ ಎಂಬಂತೆ ಕಾಡುಗತ್ತಲ ನಡುವಿನಲ್ಲಿ ಬೆಳಕೊಂದು ಅರಸೀ ಬಂದಿತ್ತು ಆ ರಾತ್ರಿ.
ಆಕೆ ಇರುಳಿನಲ್ಲಿ ಅವಳನ್ನರಸಿ ಬಂದ ಆ ಮೂರಲ್ಲಿ ಒಬ್ಬ ತರುಣ ಆಕೆಯ ಬಯಕೆಯನ್ನೇನೋ ತಣಿಸಿದ, ಆ ಕ್ಷಣಕಷ್ಟೇ ಅವಳ ಬಾಳಿಗೇನು ದಾರಿ ದೀಪವಾಗಲಿಲ್ಲ. ಇದರ ಜೊತೆಗೆ ಈ ಕಥೆಯುದ್ಧಕ್ಕೂ ನೋಡಬಹುದಾದ ಅಂಶ “ಅವರ ತಪ್ಪಲ್ಲ”,,, ಎಂಬ ಪದಗಳು ಅಲ್ಲಲ್ಲಿ ರಾರಾಜಿಸುತ್ತಲೇ ಇರುವುದು. ಹಾಗಾದರೆ ತಪ್ಪು ಯಾರದ್ದು? ತನ್ನ ಪಾಡಿಗೆ ತಾನಿದ್ದ ಮಲ್ಲಿಯದ್ದ? ಪ್ರಕೃತಿ ಸಹಜವಾಗಿ ಭಾವನೆಗಳ ಮೇಳೈಸುಸುವಿಕೆಯದ್ದಾ? ಎಂಬಂತಹ ಪ್ರಶ್ನೆ ಓದುಗಳಲ್ಲಿ ಸಹಜವಾಗಿ ಮೂಡುವುದು.
ಈ ಕಥೆಯ ಅಂತ್ಯದಲ್ಲಿ ಮಲ್ಲಿ ಆ ಮೂವರಲ್ಲಿ ಯಾರು ಅವನು? ಯಾರು,, ಯಾರು,, ಆ ದೇವರು? ಬಂಜರು ಭೂಮಿಗೆ ಮಳೆ ಕರೆದ ಆ ದೇವರು? ಬಂಜೆ ಬಾಳಿಗೆ ಬಂಗಾರ ತಂದ ಆ ದೇವರು ಯಾರಿರಬಹುದು? ಉತ್ತರ ಕಾಣದ ಮಲ್ಲಿ ಹುಲ್ಲಿನ ಬಣವೆಗೆ ಮುಖ ಬಿಟ್ಟು ಅತ್ತಳು. ಎಂಬಲ್ಲಿಗೆ ಕಥೆ ಕೊನೇ ಹಾಡುವುದು. ಇಲ್ಲಿ ಲೇಖಕರು ಕಥೆಯುದ್ಧಕ್ಕೂ ‘ಅವರ ತಪ್ಪಲ್ಲ’,,, ಎಂದೇ ಪ್ರಾರಂಭಿಸುವಾಗಿನ ಸಂದರ್ಭವನ್ನು ವಿವೇಚಿಸುವುದಾದರೆ ಮಲ್ಲಿದೆ ತಪ್ಪಾ ಮಲ್ಲಿ ಹೆಣ್ಣಾಗಿ ಹುಟ್ಟಿದ್ದೆ ತಪ್ಪಾ? ಅನಾಥಳಾಗಿ ಬದುಕನ್ನು ಕಟ್ಟಿಕೊಂಡಿರುವುದೇ ತಪ್ಪಾ? ಸಹಜ ಬಯಕೆಯನ್ನು ಮನದೊಳಗೆ ತಳಮಳಿಸಿಕೊಂಡಿದ್ದೆ ತಪ್ಪಾ? ಲೇಖಕರ ಅಭಿಪ್ರಾಯದಂತೆ ಅವರ ತಪ್ಪಲ್ಲದಿದ್ದರೆ ಸಹಜ ಪ್ರಕೃತಿ ಪ್ರಕ್ರಿಯೆಯನ್ನು ಒಪ್ಪುವುದಾದರೆ ಮಾನವೀಯತೆ ಮಾರಾಟವೇ?? ಅಂತಃಕರಣದ ಕೊಲೆ ಮನುಷ್ಯ ಸಹಜ ಜೀವನಕ್ಕೆ ಅರ್ಥವ್ಯಾಪ್ತಿಯ ಮೌಲ್ಯತೆ ಇಲ್ಲದಾಯ್ತೆ?
ಮಲ್ಲಿ ಯಾವ ಸಂದರ್ಭದಲ್ಲಿ ಸಹ ತನ್ನ ಬಯಕೆಯನ್ನು ಅವರ ಎದುರಿನಲ್ಲಿ ಪ್ರಸ್ತಾವನೆಯನ್ನೇ ಮಾಡಿರುವುದಿಲ್ಲ. ತನ್ನ ಪಾಡಿಗೆ ತಾನೇ ಕೆಲಸದಲ್ಲಿ ತಲ್ಲೀನಳಾದ ಆಕೆ ತನ್ನ ಮನದಾಳದ ನೋವನ್ನು ತನ್ನ ಮನಸ್ಸಿನೊಂದಿಗೆ ಅಷ್ಟೇ ಹಂಚಿಕೊಂಡವಳು. ಕನಿಷ್ಠಪಕ್ಷ ಆ ರಾತ್ರಿ ತನ್ನ ಬಯಕೆಯನ್ನು ತೀರಿಸಿಕೊಳ್ಳಲು ಬಂದವನು ಅವನ ಹೆಸರು ಮುಖವನ್ನಾದರೂ ಸರಿಯಾಗಿ ಪ್ರದರ್ಶಿಸಿದರೆ ಬಹುಶಃ ಅವಳ ತಾಳ್ಮೆ ಪ್ರೀತಿಗೆ ಒಂದಿಷ್ಟು ಅರ್ಥವಾದರೂ ಸಿಗುತ್ತಿತ್ತು. ಆಕೆಯನ್ನು ಮತ್ತೆ ಅಸಹಾಯಗಳನ್ನಾಗಿಯೇ ಚಿತ್ರಿಸಲಾಗಿದೆ. ತೊನ್ನೆಂಬ ಅಂಗುಲದಗಲದ ಮಚ್ಚೆಯನ್ನು ಕಂಡು ಬೇರೆ ಕೂಡಿಕೆ ಮಾಡಿಕೊಂಡು ದೂರ ತಳ್ಳಿ ಮತ್ತೊಬ್ಬಾಕೆಯ ಜೊತೆ ಕೂಡಿಕೆ ಮಾಡಿಕೊಂಡಾಗಲು ಅದೇ ಅಸಹಾಯಕತೆ ಆಕೆಯದು. ಲಿಂಗರಾಜಕಾರಣದ ಹಿನ್ನೆಲೆಯಿಂದ ಪೌರುಷತ್ವದ ನಡವಳಿಕೆ. ಒಂದು ಹೆಣ್ಣಿನ ಅಸಹಾಯಕತೆಯ ಸದುಪಯೋಗ ಮತ್ತೊಂದು ಹೆಣ್ಣು ಪಡೆಯುವಂತಾದರೂ ಕೂಡ ಅದರ ಹಿನ್ನೆಲೆಯ ಭಾಗ ಮಾತ್ರ ಒಬ್ಬ ಪುರುಷನೇ ಆಗಿರುತ್ತಾನೆ ಎಂಬುದು ವಾಸ್ತವ ಸತ್ಯ ಸಂಗತಿ.
ತಂದೆಯನ್ನು ಕೂಡ ಕಳೆದುಕೊಂಡ ಆಕೆಯ ಅಂದಿನ ಸ್ಥಿತಿ ದುರ್ಬಲತೆಯನ್ನೇ ಕಟ್ಟಿಕೊಡುವುದು. ಬಂಜರು ಭೂಮಿಗೆ ಮಳೆ ಕರೆದ ಆ ದೇವರು ಯಾರೆಂಬುದನ್ನು ಅರಿಯಲಾರದಂತಹ ಮತ್ತದೇ ದುರ್ಬಲತೆ. ಮತ್ತದೇ ಅಸಹಾಯಕ ಸ್ಥಿತಿ. ಹಾಗೂ ಮುಗ್ಧತೆಯ ಪ್ರದರ್ಶನವಾಗುತ್ತದೆ ಹಾಗಾಗಿ ಮುಗ್ದತೆ ಅಸಹಾಯಕತೆ ಕೀಳರಮೆ ಖಿನ್ನತೆ ಇವೆಲ್ಲವೂ ಕೇವಲ ಹೆಣ್ಣಿನ ಸ್ವತ್ತೆ? ಎಂಬ ಚಿಂತನೆ ಮೂಡದೆ ಇರದು.
ಅಷ್ಟಾಗಿಯೂ ಬಂದ ಆತ ಮೂವರಲ್ಲಿ ಒಬ್ಬ ಇವಳ ದೃಷ್ಟಿಯಲ್ಲಿ ಅಷ್ಟೇ ದೇವರಾದ. ಕಣ್ಣಿಗೆ ಕಾಣದ ಆ ಪರಮಾತ್ಮನಾದ.ಬೇಡದೆ ವರ ನೀಡಿದ ದೇವರಾದ. ಆದರೆ ಮನೆಯಿಂದ ಹೊರ ಬಿದ್ದ ಮೇಲೆ ಆತ ತಮ್ಮ ಪುರುಷತ್ವದ ಪ್ರಾಬಲ್ಯತೆಯ ಸಫಲತೆಯನ್ನು ಮತ್ತು ಚಪಲತೆಯನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳಲಾರ ಎಂಬುದಕ್ಕೆ ಏನು ಸಾಕ್ಷಿ ಇದೆ. ಆಗ ಉಳಿದಿಬ್ಬರ ದೃಷ್ಟಿಯಲ್ಲಿ ಮಲ್ಲಿಯ ಸ್ಥಾನ ಪಾತಾಳಕ್ಕಿಳಿಸದೇ ಇರುವುದೇ? ಆತನಿಗೆ ಮಲ್ಲಿಯ ಮೇಲೆ ಕ್ಷಣಮಾತ್ರದ ಪ್ರೇಮಾಂಕುರ ಆ ಹೊತ್ತಿಗಾರು ಇದ್ದಿದ್ದರೆ ಬ್ರಾಹ್ಮಣ ಮನೆಯಿಂದ ಹೊರ ಬೀಳುವ ಮುನ್ನ ಕನಿಷ್ಠ ಪಕ್ಷ ಸೌಜನ್ಯಗಾದರೂ ಮಲ್ಲಿಗೆ ತಿಳಿಸಿ ವಿದಾಯ ಹೇಳಬಹುದಾದ ಪ್ರಯತ್ನವನ್ನು ಆ ತರುಣ ಮಾಡಬಹುದಿತ್ತು ಅಲ್ಲವೇ? ಅಂತಹ ಯಾವ ಸನ್ನಿವೇಶವನ್ನು ಕಥೆ ನಮಗೆ ಕಟ್ಟಿಕೊಡುವುದಿಲ್ಲ.ಈ ಸಮ್ಮಿಲನ ಪೂರ್ವ ನಿಯೋಜಿತವಲ್ಲದಿದ್ದರೂ ಬಿರು ಬಿದ್ದ ನೆಲಕ್ಕೆ ಮಳೆ ಹನಿಯ ಅವಶ್ಯಕತೆ, ಬೇಗುದಿಯ ಬಾಳಿಗೆ ಭರವಸೆಯ ಬೆಳಕು ಬೇಕೆಂದು ಬಯಸುವುದು ತಪ್ಪಲ್ಲ. ಆದರೆ ಆಕಸ್ಮಿಕವಾಗಿ ಮಳೆ ಸುರಿದರೂ ಒಪ್ಪಿತ ಪ್ರಕ್ರಿಯೇ ಆ ಕ್ಷಣಕ್ಕೆ ಎಂದಾದ ಮೇಲೆ ಅವರ ತಪ್ಪಲ್ಲ ಎಂದು ಹೇಳುವ ಕಥೆಗಾರರ ಉದ್ದೇಶವಾದ್ರು ಏನು? ಬಹುಶಃ ಅಕೆಯ ಅ ಕ್ಷಣದ ಒಪ್ಪಿತ ಚಿಂತನೆಯ ಫಲಕ್ಕೆ ಪ್ರವಾಸಿಗರ ತಪ್ಪಿಲ್ಲ ಎಂಬ ಯೋಚನೆಯ ಭಾವ ಲೇಖಕರಿರಬಹುದೇ?. ಮಲ್ಲಿ ಗೆ ಮುಖ ತೋರಿಸಲಾರದ ಭಾವೋದ್ವೇಗಕ್ಕೆ ಯಾವ ಒಪ್ಪಿತ ಕ್ರಿಯೆ ಸಮರ್ಪಿತವಾಗಬಲ್ಲದು? ಯಾವುದು ಸಮಯೋಚಿತ, ಎಲ್ಲ ಅಸಮರ್ಪಕ ಛಾಯೆಯನ್ನು ಮೂಡಿಸುವುದು.ಅದರೆ ಉತ್ತರ ಮಾತ್ರ ಶೂನ್ಯ.
ಮಲ್ಲಿ ತಾನಾಗಿಯೇ ಅವರಲ್ಲಿ ಹೋಗಿರಲಿಲ್ಲ ಅವನಾಗಿಯೇ ಬಂದವನನ್ನು ಒಪ್ಪಿ ಹೂವಾಗಿ ಅರಳಿದಳಷ್ಟೇ. ಆ ಕ್ಷಣಕ್ಕೆ ಒಪ್ಪಿಗೆ ನೀಡಿದ ಮಲ್ಲಿಯದೆ ತಪ್ಪು ಎಂದಾದರೆ ಅವಳಲ್ಲಿಗೆ ಅವನು ಬಂದದ್ದು ಯಾವ ನೈತಿಕತೆಯ ಬಲದಿಂದ. ಪುರುಷತ್ವದ ಪ್ರಾಬಲ್ಯವನ್ನು ಪ್ರತಿಪಾಧಿಸಲೋ ಅಥವಾ ಒಂಟಿ ಹೆಣ್ಣಿನ ಮೇಲೆ ಎರಗಬಹುದಾದ ಮೃಗತ್ವದ ಚಿಂತನೆಯ? ಒಟ್ಟಾರೆ ಹೆಣ್ಣು ಎಂಬುದು ಭೋಗದ ವಸ್ತು ಅಷ್ಟೇ ಅವಳ ಅಸಹಾಯಕತೆ ಪ್ರಕೃತಿ ಸಹಜ ಭಾವುಕತೆಗೆ ಸಿಕ್ಕ ಪ್ರತಿಫಲ ಮಾತ್ರ ಅರ್ಥಹೀನ ನಡೆ. ಕೊನೆಗೂ ಯಾರು ಹಿತವರು ನಿನಗೆ ಎಂಬುದನ್ನು ಮಲ್ಲಿ ಜೀರ್ಣಿಸಿಕೊಳ್ಳಲಾರದ ಆಕೆಯ ಮುಗ್ಧತೆ ಓದುಗರಿಗೆ ಬಹಳವಾಗಿ ಕಾಡುತ್ತದೆ. ನೊಂದ ನೆಲಕ್ಕೆ ಹೂವು ಮಳೆ ಹರಿಸಿದ ಆತ ಯಾರೆಂಬುದನ್ನು ಅರಿಯದ ದ್ವಂದ್ವ ಆಕೆಯನ್ನು ಬಹಳ ಕಾಡುತ್ತದೆ. ಆಕೆ ಹುಲ್ಲಿನ ಬಣವೆಗೆ ಮುಖವಿಟ್ಟು ಅತ್ತಳು ಎಂಬಲ್ಲಿಗೆ ಆಕೆಯ ಆ ಸುಖ ಸಹ ಮತ್ತೆ ಬೆಂಕಿಗೆ ಆಹುತಿ ಎಂಬುದು ಬಣವೆ, ಬಿಸಿಲು, ಶಾಖ, ಬೆಂಕಿ, ಎಂಬ ಪ್ರತಿಮೆಗಳನ್ನು ಉಲ್ಲೇಖಿಸಿರುತ್ತಾರೆ. ಅದು ಕೂಡ ಸುಡುವ ತಾಪದ ಜಾಗವಾದ್ದರಿಂದ ಆ ರಾತ್ರಿಯ ಸುಖ ಕೂಡ ಯಾರೆಂದು ತಿಳಿಯದ ಒಬ್ಬ ಅನಾಮಿಕನ ಕಾಡುವಿಕೆಯು ನೋವಾಗಿ ಓದುಗರಲ್ಲಿ ಹಾಗೆಯೇ ಉಳಿಯುತ್ತದೆ.
ಶರ್ಮರ ಬಹುಪಾಲು ಕಥೆಗಳಲ್ಲಿ ಕಾಮ ಚಿತ್ರಿತಗೊಂಡಿದೆ. “ಕಾಮ ಶರ್ಮರಲ್ಲಿ ಮನುಷ್ಯರ ಮೂಲ ಪ್ರವೃತ್ತಿಯ ವಾಸನಾಮಯ ನೆಲೆಯಲ್ಲಿ ಮಾತ್ರ ಚಿತ್ರಿತವಾಗದೆ ಚರಿತ್ರೆ ಹಾಗೂ ಸೃಷ್ಟಿಯ ರಹಸ್ಯವನ್ನು ಒಳಗೊಳ್ಳುತ್ತದೆ”( ಸಾಲುದೀಪ) ಈ
ಕಥೆಯಲ್ಲಿ “ತಂತ್ರ ನಾವೀನ್ಯದ ಬಗೆಗಿನ ಅತ್ಯುತ್ಸಾಹ, ಸಂಕೇತ, ಪ್ರತಿಮೆಗಳ ದುಂದುಗಾರಿಕೆ, ಕಾಮದ ಬಗೆಗಿನ ತರುಣ ಕುತೂಹಲ ಇವುಗಳಿಂದಾಗಿ ಶರ್ಮರ ಕಥೆಗಳ ಸಾಹಿತ್ಯಿಕ ಮಹತ್ವ ಹೆಚ್ಚಿನದಾಗಲಿಲ್ಲ”. (ಜಿ. ಹೆಚ್.ನಾಯಕ.) ಈ ಹಿನ್ನೆಲೆಯಲ್ಲಿ ಶರ್ಮರ ಕತೆಯ ಭಾಷೆ ತಂತ್ರ ಸಂವಿಧಾನ ತೀವ್ರತೆ ಸಹ ಕಾಮಾಂಕುರದೊಳಗೆ ಮುಳುಗಿ ಹೋಗುವುದನ್ನು ವಿದ್ವಾಂಸರು ವ್ಯಕ್ತಪಡಿಸುತ್ತಾರೆ.
- ವಾಣಿ ಭಂಡಾರಿ
ಈ ಅಂಕಣದ ಹಿಂದಿನ ಬರಹಗಳು:
ಯಾರು ಅರಿಯದ ವೀರನ ತ್ಯಾಗ
ಮಾಸ್ತಿಯವರ ಮೊಸರಿನ ಮಂಗಮ್ಮ
ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು
ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ
ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ
"ಈ ಕಥೆಯ ಒಳತಿರುಳುಗಳನ್ನು ಅರ್ಥೈಸುತ್ತಾ ಸಾಗಿದಂತೆ ಒಂದಿಷ್ಟು ವೈರುಧ್ಯ ವ್ಯಂಗ್ಯ ವಿಡಂಬನೆ ನಮಗೆ ಕಾಣುತ್ತದೆ. ಜಿ...
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
©2025 Book Brahma Private Limited.