Date: 14-05-2022
Location: ಬೆಂಗಳೂರು
'ಕನ್ನಡಕ್ಕೆ ಲಿಪಿಯನ್ನು ಅಳವಡಿಸಿಕೊಳ್ಳುವಾಗ ಬೆಳೆಸಿಕೊಂಡ ದ್ವನಿವಿಗ್ನಾನ ಮತ್ತೊಮ್ಮೆ ಬರತಕ್ಕೆ ಕನ್ನಡದಿಂದ ಮರುಪಸರಣಗೊಳ್ಳುವುದು ಇಲ್ಲವೆ ನಂತರದ ಬಾರತೀಯ ಬಾಶೆಗಳಲ್ಲಿನ ಲಿಪಿ ಅಳವಡಿಕೆಗೆ ಪ್ರಬಾವ ಬೀರುವುದು ಕುತೂಹಲಕರ ಮತ್ತು ಮಹತ್ವದ ವಿಚಾರ' ಎನ್ನುತ್ತಾರೆ ಲೇಖಕ, ಭಾಷಾ ವಿಶ್ಲೇಷಣಾಕಾರ ಡಾ.ಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ 'ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ' ದ ಕುರಿತು ವಿವರಿಸಿದ್ದಾರೆ.
ಸಂಸ್ಕ್ರುತ ಬಾಶೆಯ ದ್ವನಿವಿಗ್ನಾನದ ಸೂಕ್ಶ್ಮತೆಯು ಉಚ್ಚರಣೆಯ ದ್ವನಿಗಳನ್ನು ಅರಿತುಕೊಳ್ಳುವುದಕ್ಕೆ ಮಾತ್ರ. ಅವುಗಳನ್ನು ಲಿಪಿರೂಪಕ್ಕಿಳಿಸುವ ಪ್ರಯತ್ನಕ್ಕೆ ಅಲ್ಲ. ಪಾಣಿನಿಯಲ್ಲಿ, ವೇದಗಳಲ್ಲಿ ಅಕ್ಶರ, ವರ‍್ಣ ಎಂಬ ಶಬ್ದಗಳು ಬಳಕೆಯಾಗಿದ್ದರೂ ಅವು ಕಣ್ಣಿಗೆ ಕಾಣುವ ಲಿಪಿಯನ್ನು ಹೇಳುವುದಿಲ್ಲ. ಅಕ್ಶರ ಎನ್ನುವುದು ಅ-ಕ್ಶರ, ಕ್ಶರವಾಗದ್ದು. ದ್ವನಿ ಅ-ಕ್ಶರವಾದುದು. ದ್ವನಿಯಿಂದ ನಿರ‍್ಮಿತವಾದವು ವೇದಗಳು, ವೇದಗಳಲ್ಲಿನ ಶ್ಲೋಕಗಳು. ವರ‍್ಣ ಎಂಬುದು ಕಣ್ಣಿಗೆ ಕಾಣುವಂತದ್ದನ್ನು ಹೇಳಿದರೂ ಅದು ಬಣ್ಣಕ್ಕೆ ಸಂಬಂದಿಸಿದ್ದಾಗಿರಬಹುದೆ ಹೊರತು ಲಿಪಿಗೆ, ಲಿಪಿರೂಪಕ್ಕೆ ಸಂಬಂದಿಸಿದ್ದು ಆಗಿರುವುದಕ್ಕೆ ಪಾಣಿನಿಯಲ್ಲಾಗಲಿ, ವೇದಗಳಲ್ಲಾಗಲಿ ಆದಾರಗಳು ಇಲ್ಲ. ಆದ್ದರಿಂದಲೆ ಸಂಸ್ಕ್ರುತಕ್ಕೆ ಲಿಪಿಯ ಅಳವಡಿಕೆ ಆಗಲಿಲ್ಲ ಎಂಬುದು ಸ್ಪಶ್ಟ.
ಬವುದ್ದ ಹಿನ್ನೆಲೆಯ ಅಸೋಕ ಲಿಪಿ ಶೋದವನ್ನು ಮಾಡಿದ ಮತ್ತು ಬವುದ್ದ ಮತಪ್ರಸರಣಕ್ಕೆ ಅದನ್ನು ಬಳಸಿಕೊಂಡ ಎಂಬುದು ಸ್ಪಶ್ಟ. ಹಾಗೆ ಲಿಪಿಯನ್ನು ಅಳವಡಿಸುವಾಗ ಅಸೋಕನು ತನ್ನ ನಂಬಿಕೆಯ ಬವುದ್ದನ ಪಾಲಿ ಬಾಶೆಗೆ ಲಿಪಿಯನ್ನು ಅಳವಡಿಸುವ ಕೆಲಸ ಮಾಡಿದನು. ಇಂದಿನ ಪೂರ‍್ವ ಬಾಗದ ಬಾರತ ಪ್ರದೇಶದಲ್ಲಿ ಅಳವಡಿಕೆಯಾದ ಲಿಪಿ ದಕ್ಶಿಣದ ಎತ್ತರದ ಪ್ರಸ್ತಬೂಮಿಗೆ ಹರಿದುಬರುತ್ತದೆ. ಇಲ್ಲಿ ಬವುದ್ದವು ತನ್ನ 'ಪ್ರಾಕ್ರುತ' ಎಂಬ ಪರಿಕಲ್ಪನೆಯನ್ನು ಮುರಿದುಕೊಂಡು ಜಯ್ನ ನಂಬಿಕೆಯನ್ನು ಆವಾಹಿಸಿಕೊಂಡಂತೆ ಕನ್ನಡಕ್ಕೆ ಲಿಪಿಯ ಅಳವಡಿಕೆ ಆಗುತ್ತದೆ. ಬರತಕಂಡದಲ್ಲಿ ಪಾಲಿಯ ಬಳಿಕ ಲಿಪಿಯನ್ನು ಕನ್ನಡ ಪಡೆದುಕೊಳ್ಳುತ್ತದೆ.
ಈಗಿನ ಬರಹಕ್ಕೆ ಪೀಟಿಕೆಯಾಗಿ ಈ ಎಲ್ಲ ವಿಚಾರಗಳು ಅವಶ್ಯ. ಕನ್ನಡಕ್ಕೆ ಲಿಪಿಯನ್ನು ಅಳವಡಿಸಿಕೊಳ್ಳುವಾಗ ಬೆಳೆಸಿಕೊಂಡ ದ್ವನಿವಿಗ್ನಾನ ಮತ್ತೊಮ್ಮೆ ಬರತಕ್ಕೆ ಕನ್ನಡದಿಂದ ಮರುಪಸರಣಗೊಳ್ಳುವುದು ಇಲ್ಲವೆ ನಂತರದ ಬಾರತೀಯ ಬಾಶೆಗಳಲ್ಲಿನ ಲಿಪಿ ಅಳವಡಿಕೆಗೆ ಪ್ರಬಾವ ಬೀರುವುದು ಕುತೂಹಲಕರ ಮತ್ತು ಮಹತ್ವದ ವಿಚಾರ. ಬಾರತದಾಗ ಅತಿ ಹಿಂದೆ ಬವುದ್ದಿಕ ಚಟುವಟಿಕೆಗಳನ್ನು ನಡೆಸಿದ ಬಾಶೆಗಳು ಸಂಸ್ಕ್ರುತದ ಬಳಿಕ ಕನ್ನಡ , ತಮಿಳು ಹಾಗೆಯೆ ತೆಲುಗು, ಮಲಯಾಳಂ ಕೂಡ. ಆನಂತರ ಸಂಸ್ಕ್ರುತದಿಂದ ಬೆಳೆದು ಬರುವ ವಿವಿದ ಪ್ರಾಕ್ರುತಗಳು. ಇಡಿಯ ಆರ‍್ಯಾವರ‍್ತದಲ್ಲಿ, 'ದಕ್ಶಿಣ’ದ ಮಹಾರಾಶ್ಟ್ರದವರೆಗೆ ವಿವಿದ ಪ್ರದೇಶಗಳಲ್ಲಿ ಹಲವು ಪ್ರಾಕ್ರುತಗಳು ಬೆಳೆಯುತ್ತವೆ. ಈ ಪ್ರಾಕ್ರುತಗಳಲ್ಲಿ ದಕ್ಶಿಣದಲ್ಲಿ ಕನ್ನಡದ ಸಂಗದಲ್ಲಿ ಬೆಳೆದ ಮಹಾರಾಶ್ಟ್ರಿ-ಪ್ರಾಕ್ರುತವೂ ಒಂದು. ಕುತೂಹಲವೆಂದರೆ ಆರ‍್ಯಾವರ‍್ತದ ತುಂಬ ಪಸರಿಸಿಕೊಂಡಿರುವ ಮಹಾರಾಶ್ಟ್ರಿ-ಪ್ರಾಕ್ರುತ, ಪಾಲಿ, ಶವುರಸೇನಿ, ಪಯಿಶಾಚಿ, ಅರ‍್ದಮಾಗದಿ ಮೊದಲಾದ ಹಲವಾರು ಪ್ರಾಕ್ರುತಗಳಲ್ಲಿ ಅಂದು ಹೆಚ್ಚಿನ ಪ್ರಾದಾನ್ಯತೆಯನ್ನು ಪಡೆದುಕೊಂಡದ್ದು ಮಹಾರಾಶ್ಟ್ರಿ-ಪ್ರಾಕ್ರುತ. ಗಮನಿಸಬೇಕಾದ ಒಂದು ಅಂಶವೆಂದರೆ, ಈ ಮಹಾರಾಶ್ಟ್ರಿ-ಪ್ರಾಕ್ರುತ ಕನ್ನಡದ ಸಂಗದಲ್ಲಿ ಕನ್ನಡದ ಹಲವಾರು ಗುಣಗಳನ್ನು ಆತ್ಮೀಕರಿಸಿಕೊಂಡು ಬೆಳೆದದ್ದು. ದಕ್ಶಿಣದ ಪ್ರಾಕ್ರುತವಾದ ಕನ್ನಡವು ಇಡಿಯ ಬಾರತಕ್ಕೆ ಪ್ರಬಾವ ಬೀರುವುದಕ್ಕೆ ಇದು ದಾರಿಯಾಗುತ್ತದೆ. ಮಹಾರಾಶ್ಟ್ರೀ-ಪ್ರಾಕ್ರುತವು ಕನ್ನಡದ ವ್ಯಾಕರಣ, ಪದಕೋಶ, ಪ್ರಾಸ ಮೊದಲಾದ ರಾಚನಿಕ ಅಂಶಗಳನ್ನು ಪಡೆದುಕೊಂಡಿದ್ದಿತು. ಹೀಗೆ ಬವುದ್ದಿಕತೆಯ ಹಲವು ಅಂಶಗಳು ಸಂಸ್ಕ್ರುತಕ್ಕೆ ಹರಿಯುತ್ತವೆ. ಪ್ರಾಸ ಮೊದಲಾಗಿ ಚಂದಸ್ಸಿನ ಚರ‍್ಚೆಯಲ್ಲಿ, ಚಂಪೂ ಮೊದಲಾಗಿ ಸಾಹಿತ್ಯ ರೂಪದ ಚರ‍್ಚೆಯಲ್ಲಿ, ಮರಾಟಿ, ಗುಜರಾತಿ ಮೊದಲಾಗಿ ಪಶ್ಚಿಮ ಬಾರತದ ಆರ‍್ಯನ್ ಬಾಶೆಗಳಲ್ಲಿ ಕಂಡುಬರುವ ಕನ್ನಡದ ರಚನೆ ಇವುಗಳೆಲ್ಲವೂ ಕನ್ನಡವು ಉತ್ತರದತ್ತ ಬೀರಿದ ಪ್ರಬಾವವನ್ನು ಕನ್ನಡಿಸುತ್ತದೆ. ಇತ್ತ ದಕ್ಶಿಣದಲ್ಲಿ ತಮಿಳು, ತೆಲುಗು, ಮಲಯಾಳಂ ಬಾಶೆಗಳ ಮೇಲೂ ಕನ್ನಡವು ಪ್ರಬಾವವನ್ನು ಬೀರಿದ್ದಿತು.
ಇದು ಕನ್ನಡವು ಬಾರತದ ತುಂಬ ಪ್ರಬಾವ ಬೀರಿದ್ದಿತು ಎಂಬುದಕ್ಕೆ ಹೇಳಬಹುದಾದ ಕೆಲವು ಅಂಶಗಳು. ಇವುಗಳನ್ನು ಇಲ್ಲಿ ಉಲ್ಲೇಕಿಸಲು ಕಾರಣ ಹೀಗಿದೆ. ಕನ್ನಡಕ್ಕೆ ಮೊದಮೊದಲಿಗೆ ಲಿಪಿಯನ್ನು ಅಳವಡಿಸಿಕೊಳ್ಳುವಾಗ ಕನ್ನಡ ದ್ವನಿವಿಗ್ನಾನ ಬೆಳೆಯಿತು. ಇಲ್ಲಿ ಮುಕ್ಯವಾಗಿ ಕಾಣಿಸಿದ್ದು ಸಂಸ್ಕ್ರುತ ಮತ್ತು ಕನ್ನಡ ಬಾಶೆಯ ಉಚ್ಚರಣೆಯಲ್ಲಿ ಇರುವ ವ್ಯತ್ಯಾಸಗಳನ್ನು ಗುರುತಿಸಲು ಸಾದ್ಯವಾದದ್ದು. ಕನ್ನಡವು ಸಮಾಜ-ಸಂಸ್ಕ್ರುತಿಗಳ ಬಾಶೆಯಾಗಿ ಮೂರ‍್ನಾಲ್ಕು ಸಾವಿರ ವರುಶಗಳಿಂದ ಬಳಕೆಯಲ್ಲಿದೆ. ಕನ್ನಡಕ್ಕೆ ಹೋಲಿಸಿದರೆ ಇತ್ತೀಚೆಗೆ ಬೆಳೆದ ಪ್ರಾಕ್ರುತಗಳು ಸಹಜವಾಗಿ ಕನ್ನಡದ ಸಂಪರ‍್ಕವನ್ನು ಪಡೆದುಕೊಂಡವು. ಕನ್ನಡದ ವಿವಿದ ವಲಯಗಳಲ್ಲಿನ ಬವುದ್ದಿಕತೆ, ಸಹಜ ಲಕ್ಶಣಗಳು ಪ್ರಾಕ್ರುತವನ್ನು ಪ್ರಬಾವಿಸಿವೆ ಮತ್ತು ಪ್ರಾಕ್ರುತಕ್ಕೆ ಹರಿದಿವೆ. ಹೀಗೆ ಕನ್ನಡದ ವಿದ್ವತ್ತಿನಿಂದ ಪ್ರಾಕ್ರುತಕ್ಕೆ ಹರಿದ ಮಹತ್ವದ ವಿಶಯಗಳಲ್ಲಿ ದ್ವನಿವಿಗ್ನಾನವೂ ಒಂದು. ಸಂಸ್ಕ್ರುತಕ್ಕಿಂತ ಬಿನ್ನವಾದ ದ್ವನಿಗಳನ್ನು ಗುರುತಿಸಿದ ಹಾಗೆ ಸಂಸ್ಕ್ರುತದಲ್ಲಿ ಉಚ್ಚರಣೆಯಾಗುತ್ತಿದ್ದು ಕನ್ನಡ ಬಾಶೆಯಲ್ಲಿ ಉಚ್ಚರಣೆ ಆಗದ ದ್ವನಿಗಳನ್ನು ಗುರುತಿಸಿದ್ದು ಬಹುದೊಡ್ಡ ವಿದ್ವತ್ತು. ಕನ್ನಡದಲ್ಲಿ ಆದ ಈ ಬೆಳವಣಿಗೆ ಮುಂದೆ ಪ್ರಾಕ್ರುತವನ್ನು ಸಹಜವಾಗಿ ಪ್ರಬಾವಿಸುತ್ತದೆ. ಪ್ರಾಕ್ರುತದ ವ್ಯಾಕರಣವನ್ನು ಸುಮಾರು ಹನ್ನೊಂದನೆ ಶತಮಾನದಲ್ಲಿ ಮೊದಲಿಗೆ ಬರೆದ ಹೇಮಚಂದ್ರನು ಕನ್ನಡದ ಈ ವಿದ್ವತ್ತನ್ನು ಎರವಲು ಪಡೆದುಕೊಳ್ಳುತ್ತಾನೆ. ಸಂಸ್ಕ್ರುತ ಮತ್ತು ಕನ್ನಡ ಇವು ಎರಡು ಬಿನ್ನ ಬಾಶಾಮನೆತನಕ್ಕೆ ಸೇರಿದ ಬಾಶೆಗಳಾಗಿದ್ದು ಸಹಜವಾಗಿಯೆ ಅವುಗಳ ದ್ವನಿವಿಗ್ನಾನ ಬಿನ್ನವಾಗಿರುತ್ತದೆ, ದ್ವನಿಗಳು ಬಿನ್ನವಾಗಿರುತ್ತವೆ. ಒಂದು ಬಾಶೆಯ ಒಳಗಿನ ಎರಡು ಬಗೆಗಳಲ್ಲಿ ಇಲ್ಲವೆ ಒಂದು ಬಾಶೆಯಿಂದ ಬೆಳೆದ ಎರಡು ಬಾಶೆಗಳಲ್ಲಿಯೂ ಇಂತಾ ಬಿನ್ನತೆಗಳು ಕಾಲಾಂತರದಲ್ಲಿ ಸಹಜವಾಗಿ ಬೆಳೆಯುತ್ತವೆ. ಈ ಬಿನ್ನತೆಗಳನ್ನು ಗುರುತಿಸುವುದು ದೊಡ್ಡ ಕೆಲಸ. ಅದರಲ್ಲೂ ಮುಕ್ಯವಾಗಿ ವಿವಿದ ಬಾಶೆಗಳ ಪ್ರಬಾವದಲ್ಲಿ ಬೆಳೆದ ವಿವಿದ ಪ್ರಾಕ್ರುತಗಳು ಸಂಸ್ಕ್ರುತದೊಂದಿಗೆ ಹೆಚ್ಚಿನ ಬಿನ್ನತೆಯನ್ನು ತೋರಿಸುತ್ತವೆ. ಕನ್ನಡದಲ್ಲಿ ಈ ದ್ವನಿಗಳ ಉಚ್ಚರಣೆಯಲ್ಲಿನ ಬಿನ್ನತೆಯನ್ನು ಗುರುತಿಸಿದ್ದು ಮಾದರಿಯಾಗಿ ಪ್ರಾಕ್ರುತದಲ್ಲಿ, ಅದರಲ್ಲೂ ಮುಕ್ಯವಾಗಿ ಕನ್ನಡದ ಪ್ರಬಾವದಲ್ಲಿ ಬೆಳೆದ ದಕ್ಶಿಣದ ಮಹಾರಾಶ್ಟ್ರೀ-ಪ್ರಾಕ್ರುತದಲ್ಲಿ ಸಂಸ್ಕ್ರುತದೊಂದಿಗೆ ಹೊಂದಿರುವ ಬಿನ್ನತೆಗಳನ್ನು ಗುರುತಿಸುವುದು ಸಾದ್ಯವಾಯಿತು.
ಸಂಸ್ಕ್ರುತ ದ್ವನಿವಿಗ್ನಾನ, ಪಾಲಿಯ ಲಿಪಿ ಮತ್ತು ಕನ್ನಡದ ಲಿಪಿ ಅಳವಡಿಕೆಯ ಪ್ರಕ್ರಮ ಈ ಮೂರೂ ಕಲೆತು ಪ್ರಾಕ್ರುತಕ್ಕೆ ವರ‍್ಣಮಾಲೆ ರೂಪುಗೊಳ್ಳುತ್ತದೆ. ಹೀಗೆ ಸಂಸ್ಕ್ರುತ, ಪಾಲಿ ಮತ್ತು ಕನ್ನಡ ಈ ಮೂರೂ ಬಾಶೆಗಳು ಪ್ರಾಕ್ರುತ ವರ‍್ಣಮಾಲೆ ಸಂಯೋಜನೆಗೆ ಪೂರಕವಾದವು.
ಹೇಮಚಂದ್ರ ಸಿದ್ದ ಹಯಿಮ ಎಂಬ ಸಂಸ್ಕ್ರತ ವ್ಯಾಕರಣವನ್ನು ಬರೆಯುತ್ತಾನೆ. ಇದರಲ್ಲಿ ಕೊನೆಯಲ್ಲಿ ಪ್ರಾಕ್ರುತಕ್ಕೆ ಮೀಸಲಾದ ಅದ್ಯಾಯಗಳು ಇವೆ. ಇದರಲ್ಲಿ ಪ್ರಾಕ್ರುತಕ್ಕೆ ಅಕ್ಶರಮಾಲೆಯನ್ನು ವಿವರಿಸುವಾಗ ಕನ್ನಡ ವ್ಯಾಕರಣಗಳು ಮಾಡುವಂತೆ ಅಕ್ಶರಗಳನ್ನು ಕಳೆಯುವ ಕೆಲಸ ಮಾಡುತ್ತಾನೆ. ಅಂದರೆ, ಸಂಸ್ಕ್ರುತದಲ್ಲಿ ಉಚ್ಚಾರವಾಗುತ್ತಿದ್ದ ಆದರೆ ಪ್ರಾಕ್ರುತದಲ್ಲಿ ಉಚ್ಚಾರವಾಗದ ಅಕ್ಶರಗಳನ್ನು ಗುರುತಿಸಿ, ಅವು ಪ್ರಾಕ್ರುತದಲ್ಲಿ ಇಲ್ಲ ಎಂದು ಅವುಗಳನ್ನು ಕಳೆದು ಪ್ರಾಕ್ರುತದ ಅಕ್ಶರಗಳ ಸಂಕೆಯನ್ನು ನಿರ‍್ದಿಸಲಾಗುತ್ತದೆ. ಹೇಮಚಂದ್ರ ದಕ್ಶಿಣದ ಹಿನ್ನೆಲೆಯವನು. ಇದಕ್ಕಿಂತ ನೇರವಾದ ಪ್ರಬಾವ ನಾಗವರ‍್ಮನ ಕರ‍್ಣಾಟಕ ಬಾಶಾಬೂಶಣ. ಹೇಮಚಂದ್ರ ಕಂಡಿತವಾಗಿಯೂ ಬಾಶಾಬೂಶಣವನ್ನು ಓದಿದ್ದಾನೆ. ಕರ‍್ಣಾಟಕ ಬಾಶಾಬೂಶಣ ಕನ್ನಡ ಬಾಶೆಯ ವ್ಯಾಕರಣವಾದರೂ ಇದು ಸಂಸ್ಕ್ರುತದಲ್ಲಿ ಇದೆ. ಇದನ್ನು ಕನ್ನಡಿಗರಲ್ಲದವರು ಓದಿದ್ದರು ಎನ್ನುವುದಕ್ಕೆ ಆದಾರಗಳು ಇವೆ. ಸಂಸ್ಕ್ರುತ ಬಾಶೆಗೆ ಈಗಾಗಲೆ ಹೇಳಿದಂತೆ ಲಿಪಿ ಇಲ್ಲದಿರುವುದರಿಂದ ಸಂಸ್ಕ್ರುತ ಬಾಶೆಯಲ್ಲಿನ ಈ ಕರ‍್ಣಾಟಕ ಬಾಶಾಬೂಶಣವನ್ನು ಸಹಜವಾಗಿ ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಆದರೆ, ಮಲಯಾಳಂ ಲಿಪಿಯಲ್ಲಿ ಬರೆದಿರುವ ಹಸ್ತಪ್ರತಿ ದೊರೆತಿರುವುದು ಈ ವ್ಯಾಕರಣವನ್ನು ಕನ್ನಡಿಗರಲ್ಲದವರೂ ಓದುತ್ತಿದ್ದರು ಎನ್ನುವುದಕ್ಕೆ ಸ್ಪಶ್ಟ ಆದಾರ. ಪ್ರಾಕ್ರುತದವರೂ, ಸಂಸ್ಕ್ರುತದವರೂ ಇದನ್ನು ಓದಿದ್ದಾರೆ. ಹೀಗೆ ಕನ್ನಡ ಲಿಪಿ ಅಳವಡಿಕೆ ಪ್ರಯತ್ನಗಳು ಪ್ರಾಕ್ರುತದ ಮೂಲಕ ಆನಂತರದಲ್ಲಿ ಲಿಪಿಯನ್ನು ಅಳವಡಿಸಿಕೊಂಡ ಇತರ ಬಾಶೆಗಳಿಗೆ ಸಹಜವಾಗಿ ಹರಿದುಬರುತ್ತದೆ. ಈ ಕ್ರಮದಲ್ಲಿಯೆ ಉಳಿದ ಬಾಶೆಗಳು ಲಿಪಿಯನ್ನು ಬೆಳೆಸಿಕೊಳ್ಳುತ್ತವೆ. ಕನ್ನಡದ ಈ ಪ್ರಕ್ರಮ ದಕ್ಶಿಣದಲ್ಲಿ ತಮಿಳಿನ ಲಿಪಿ ಬೆಳವಣಿಗೆಯ ಹಿಂದೆಯೂ ಪ್ರಬಾವ ಬೀರಿರುವಂತಿದೆ. ಹಾಗಾಗಿ, ತಮಿಳಿನಲ್ಲಿಯೂ ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಮತ್ತು ತಮಿಳಿನಲ್ಲಿ ಇಲ್ಲದ ದ್ವನಿಗಳನ್ನು ತಮಿಳು ವರ‍್ಣಮಾಲೆಯಲ್ಲಿ ಸೇರಿಸಿಲ್ಲದ್ದನ್ನು ಕಾಣಬಹುದು. ಹಾಗಾಗಿ ಬಹುತೇಕ ಆದುನಿಕ ಬಾರತೀಯ ಬಾಶೆಗಳಲ್ಲಿನ ವರ‍್ಣಮಾಲೆಯಲ್ಲಿ ಸಂಸ್ಕ್ರುತದಲ್ಲಿ ವಿವರಿಸಿದ ಎಲ್ಲ ಅಕ್ಶರಗಳು ಕಾಣಸಿಗುವುದಿಲ್ಲ.
ಲಿಪಿ ವಿಚಾರವನ್ನೊಂದಿಶ್ಟು ಗಮನಿಸಬಹುದಾದರೆ, ಪಾಲಿಯ ಲಿಪಿಯಿಂದ ಕನ್ನಡವು ಲಿಪಿಯನ್ನು ಬೆಳೆಸಿಕೊಳ್ಳುತ್ತದೆ. ಇದು ತೆಲುಗಿಗೂ ಬಹುಕಾಲ ಬಳಕೆಯಾಗುತ್ತದೆ. ವಿಜಯನಗರ ಕಾಲದಿಂದ ತೆಲುಗು ಲಿಪಿ ತುಸು ವ್ಯತ್ಯಾಸವನ್ನು ಹಿಗ್ಗಿಸಿಕೊಳ್ಳುತ್ತಾ ಬೇರೆಯಾಗುತ್ತದೆ. ತಮಿಳಿನ ಲಿಪಿಯ ಬೆಳವಣಿಗೆಗೂ ಪಾಲಿ ಲಿಪಿಯ ಪ್ರಬಾವವನ್ನು ತೋರಿಸಿದೆ. ಬಾರತೀಯ ಲಿಪಿ ವಿಕಸನದಲ್ಲಿ ಕನ್ನಡದ ನಂತರ ತಮಿಳು ಒಡೆದುಕೊಳ್ಳುತ್ತದೆ. ತಮಿಳಿನಲ್ಲಿ ಗೋಶ ದ್ವನಿಗಳಿಗೆ ಲಿಪಿಗಳು ಇಲ್ಲವಾದರೂ ಪಾರಂಪರಿಕವಾಗಿ ಕನ್ನಡದಂತೆ ಅಕ್ಶರಮಾಲೆಯನ್ನು ಹೊಂದಿದ್ದ ವ್ಯವಸ್ತೆಯೊಂದೂ ಸಮಸಮನಾಗಿ ಇದ್ದಿತು. ನಡುಗಾಲದಲ್ಲಿ ತುಳು ಬಾಶೆಗೆಂದು ಬೆಳೆದ ಲಿಪಿಯು ಇಂದು ಮಲಯಾಳಂ ಬಾಶೆಗೆ ಬಳಕೆಯಲ್ಲಿದೆ. ಉತ್ತರದಲ್ಲಿ ನಾಗರಿಯ ಬೆಳವಣಿಗೆಯಿಂದ ಉತ್ತರ ಬಾರತದ ಬಹುತೇಕ ಬಾಶೆಗಳಿಗೆ ನಾಗರಿ ಲಿಪಿ ಬಳಕೆಯಲ್ಲಿದೆ. ಪಂಜಾಬಿಯಂತ ಬಾಶೆಗಳಿಗೆ ಬಹುಲಿಪಿಗಳ ಬೆಳವಣಿಗೆ ನಡುಗಾಲದಲ್ಲಿ ಆಗುತ್ತದೆ. ಮಣಿಪುರಿಯಂತ ಈಶಾನ್ಯ ಬಾಶೆಗಳಿಗೆ ಬಿನ್ನ ಮೂಲದ ಲಿಪಿವ್ಯವಸ್ತೆ ಇದೆ. ಅರಾಬಿಕ್, ಪರ‍್ಶಿಯನ್, ಉರ‍್ದು, ಕಾಶ್ಮೀರಿ ಮೊದಲಾದ ಕೆಲವು ಬಾಶೆಗಳಿಗೆ ಪರ‍್ಸೊ-ಅರಾಬಿಕ್ ಲಿಪಿಯನ್ನು ಬಳಸಲಾಗುತ್ತದೆ. ಇಂಗ್ಲೀಶು ಮೊದಲಾದ ಯುರೋಪಿನ ಬಾಶೆಗಳಿಗೆ ರೋಮನ್ ಲಿಪಿಯ ಬಳಕೆ ಇದೆ. ಮಣಿಪುರಿ, ಪರ‍್ಸೊ-ಅರಾಬಿಕ್, ರೋಮನ್ ಈ ಲಿಪಿಗಳನ್ನು ಹೊರತಾಗಿ ಆದುನಿಕ ಬಾರತದ ಬಹುತೇಕ ಬಾಶೆಗಳ ಲಿಪಿಗಳಲ್ಲಿ ಪಾರಂಪರಿಕ ಅಕ್ಶರಮಾಲೆ ಕಾಣಿಸುತ್ತದೆ. ಇಲ್ಲೆಲ್ಲ ಕನ್ನಡದ ಬಹುಹಳೆಯ ದ್ವನಿವಿಗ್ನಾನದ ನಡೆಯೊಂದರ ಪ್ರಬಾವ ಉಳಿದಿದೆ.
ಈ ಅಂಕಣದ ಹಿಂದಿನ ಬರೆಹ:
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.