Date: 22-04-2023
Location: ಬೆಂಗಳೂರು
''ಕನ್ನಡದ ಲಿಂಗವ್ಯವಸ್ತೆಯನ್ನು ಮಹತ್-ಅಮಹತ್ ಎಂಬ ಪದಗಳನ್ನು ಬಳಸಿ, ಬುದ್ದಿ ಇರುವ ಮತ್ತು ಬುದ್ದಿ ಇಲ್ಲದ ಎಂಬ ಗುಂಪಿಕೆ ಇದೆ ಎಂಬ ವಿವರಣೆಯನ್ನು ಕೆಲವು ಆದುನಿಕ ಅದ್ಯಯನಗಳು ಗುರುತಿಸುತ್ತವೆ. ದ್ರಾವಿಡದಲ್ಲಿ ಈ ವ್ಯವಸ್ತೆ ಇದೆ ಎಂಬುದನ್ನು ಆದುನಿಕ ಬಾಶಾವಿಗ್ನಾನ ಸಾಕಶ್ಟು ಮಾತಾಡಿದೆ,'' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕನ್ನಡದಲ್ಲಿ ಲಿಂಗವು ತೆರತೆರ' ಎಂಬ ವಿಚಾರ ಕುರಿತು ಬರೆದಿದ್ದಾರೆ.
ಕನ್ನಡದಲ್ಲಿ ಲಿಂಗದ ಅಬಿವ್ಯಕ್ತಿ ವಿವರಣೆ ತುಂಬಾ ಸರಳವಾಗಿದೆಯಾದರೂ ಬಳಕೆಯಲ್ಲಿ ಲಿಂಗವ್ಯವಸ್ತೆ ಅಶ್ಟು ಸರಳವಾಗಿಲ್ಲ.
ಕನ್ನಡದಲ್ಲಿ ಗಂಡು ಇದು ಪುಲ್ಲಿಂಗ ಎಂದಾದರೆ, ಎತ್ತು, ಆಡು, ಹುಂಜ ಮೊದಲಾದ ಗಂಡು ಜೀವಿಗಳನ್ನು ಪುಲ್ಲಿಂಗವಾಗಿ ಗುರುತಿಸುವುದಿಲ್ಲ. ಹಾಗೆಯೆ, ಸ್ತ್ರೀಲಿಂಗದ ಕತೆಯೂ ಕೂಡ. ಮನುಶ್ಯರಲ್ಲಿ ಮಾತ್ರ ಗಂಡು-ಹೆಣ್ಣು ಎಂಬ ಬೇದವನ್ನು ಮಾಡುತ್ತೇವೆ. ಅಲ್ಲದೆ, ಮನುಶ್ಯರಲ್ಲಿಯೂ ಗಂಡು-ಹೆಣ್ಣು ಬೇದ ಸ್ಪಶ್ಟವಾಗಿ ಎಲ್ಲೆಡೆ ಇಲ್ಲ. ಮಗುವೊಂದು ಹೆಣ್ಣೊ ಗಂಡೊ ಎಂಬುದು ಗೊತ್ತಿದ್ದೂ ಅದನ್ನು ನಪುಂಸಕವಾಗಿ ಬಳಸಲಾಗುತ್ತದೆ. ಹಲವೆಡೆ ಮನುಶ್ಯರನ್ನು ನಪುಂಸಕ ಪ್ರತ್ಯಯವನ್ನು ಹಾಕಿ ಗುರುತಿಸುವುದೂ ಸಾಮಾನ್ಯ. ಈ ಸಂಕೀರ‍್ಣ ರಚನೆಯನ್ನು-ಬಳಕೆಯನ್ನು ಇಲ್ಲಿ ಮಾತಾಡೋಣ.
ಈಗಾಗಲೆ ಮಾತಾಡಿದಂತೆ ಜನರಲ್ಲಾಗಿ ಕನ್ನಡದಲ್ಲಿ ಮೂರು ಲಿಂಗಗಳು ಇವೆ ಎಂದು ಹೇಳಲಾಗುತ್ತದೆ ಮತ್ತು ಅದನ್ನು ಕೇಶಿರಾಜನ ಜನಪ್ರಿಯ ಸಾಲಾದ ಪುರುಶರೆ ಪುಲ್ಲಿಂಗಂ ಸ್ತ್ರೀಯರೆ ಸ್ತ್ರೀಲಿಂಗಂ ಉಳಿದುವೆಲ್ಲ ನಪ್ಪಾಗಿರೆ ಸಲ್ಗುಂ ಎಂಬುದನ್ನು ಬಳಸಿಕೊಂಡು ಸಮರ‍್ತಿಸಲಾಗುತ್ತದೆ. ವಿವರಣೆ ಹೆಚ್ಚೂ ಕಡಿಮೆ ನಮ್ಮ ವ್ಯಾಕರಣಗಳಲ್ಲಿ ಸಹಜವೆನ್ನುವಂತೆ ಕಂಡುಬರುತ್ತದೆ. ಆದರೆ, ಬಳಕೆಯನ್ನು ಗಮನಿಸಿದಾಗ ಹಲವು ವಿಬಿನ್ನ ಅಂಶಗಳು ಕಂಡುಬರುತ್ತವೆ. ಈ ಬಗೆಯ ಸರಳ ವಿವರಣೆಗೆ ದಕ್ಕದ ವಿಚಾರಗಳನ್ನು ನಿರ‍್ವಹಿಸುವ ಪ್ರಯತ್ನದ ಬಾಗವಾಗಿಯೆ ಕೇಶಿರಾಜ ಒಂಬತ್ತು ಲಿಂಗಗಳನ್ನು ಹೇಳುವ ಪ್ರಯತ್ನ ಮಾಡಿ, ಅದು ಸರಿಹೋಗದೆನಿಸಿದ ಕೂಡಲೆ ಕೊನೆಗೆ ಕನ್ನಡದಾಗ ಮೂರೆ ಲಿಂಗಗಳು ಎಂದು ಮಾತುಕತೆಯನ್ನು ನಿಲ್ಲಿಸಿಬಿಡುತ್ತಾನೆ. ಇರಲಿ, ಇಂದಿನ ಕನ್ನಡದಲ್ಲಿನ ಲಿಂಗದ ಅಬಿವ್ಯಕ್ತಿಯ ಕ್ರಮಗಳನ್ನು ತುಸು ಅವಲೋಕಿಸುವ ಪ್ರಯತ್ನ ಮಾಡೋಣ.
ಈಗಾಗಲೆ ಮಾತಾಡಿದಂತೆ ಹೆಣ್ಣು-ಗಂಡು ಇವುಗಳನ್ನು ಕ್ರಮವಾಗಿ ಸ್ತ್ರೀಲಿಂಗ-ಪುಲ್ಲಿಂಗ ಎಂದು ಕರೆಯಲಾಗುವುದು. ಇದರೊಳಗೆ ಹಲವು ವಿಬಿನ್ನತೆಗಳು ಇವೆ. ಕೂಸು ಇದು ಕನ್ನಡದಲ್ಲಿ ನಪುಂಸಕ. ಕೂಸು ಹೆಣ್ಣೊ ಗಂಡೊ ಎಂಬುದು ತಿಳಿದೂ ಅದು ನಪುಂಸಕ. ಸಾಮಾನ್ಯವಾಗಿ ಮದುವೆ ಹೊತ್ತಿನಲ್ಲಿ ಹುಡುಗಿಯನ್ನು ನೋಡಲು ಹೋಗುವುದು, ಹುಡುಗನ ಬಗೆಗೆ ಮಾತಾಡುವುದು ಇರುತ್ತದೆ. ಇಂತ ಮಾತುಕತೆಯಲ್ಲಿ ‘ಹುಡುಗಿ ಹೇಗಿದೆ’, ‘ಹುಡುಗ ಏನು ಮಾಡುತ್ತಿದೆ’ ಎಂಬ ಬಳಕೆ ಅತ್ಯಂತ ಸಾಮಾನ್ಯವಾಗಿ ಕಂಡುಬರುತ್ತದೆ. ಇಲ್ಲೆಲ್ಲ ಮದುವೆ ವಯಸ್ಸಿಗೆ ಬಂದ ಹುಡುಗಿ-ಹುಡುಗ ಇವರು ನಪುಂಸಕ. ಹುಚ್ಚರು, ಬುದ್ದಿ ಇಲ್ಲದವರು ಇಲ್ಲವೆ ಕಡಿಮೆ ಬುದ್ದಿ ಇರುವವರು, ಕಡಿಮೆ ಸಾಮಾಜಿಕ ಅಂತಸ್ತು ಇರುವವರು ಎಂದು ಪರಿಗಣಿತವಾದವರನ್ನೂ ಸಾಮಾನ್ಯವಾಗಿ ಹೀಗೆ ‘ಬಂತು’, ‘ಹೋಯ್ತು’ ಎಂಬ ನಪುಂಸಕ ರೂಪದಲ್ಲಿ ಮಾತಾಡುವುದು ಕಾಣಿಸುತ್ತದೆ. ಹತ್ತಿರದ ಗೆಳೆತನದಲ್ಲಿಯೂ ನಪುಂಸಕದ ಬಳಕೆ ತೀರಾ ಸಾಮಾನ್ಯ, ‘ಬಂತಪ ಇದು’ ಎಂಬಂತ ಪ್ರಯೋಗಗಳು ಸಹಜ. ವಿರೋದವನ್ನು ಸೂಚಿಸುವ ಸಂದರ‍್ಬದಲ್ಲಿ, ರಾಜಕೀಯ ಮೊದಲಾದ ವಿವಿದ ಸಾಮಾಜಿಕ ಕ್ಶೇತ್ರಗಳಲ್ಲಿ ಇರುವವರ ಬಗೆಗೆ ಅಸಹನೆ ವ್ಯಕ್ತಪಡಿಸುವಾಗಲೂ ಈ ಬಗೆಯ ಬಳಕೆ ಬಲು ಸಹಜ.
ಸಾಂಸ್ಕ್ರುತಿಕ ಸಂದರ‍್ಬಗಳಲ್ಲಿ ಈ ಲಿಂಗದ ಬಳಕೆಯು ವಿಬಿನ್ನತೆಯನ್ನು ಪಡೆದುಕೊಳ್ಳುತ್ತದೆ. ಗುಡಿ ಮೊದಲಾದವುಗಳಲ್ಲಿ ಇರುವ ಶಿಲ್ಪವು ಮರದ್ದೊ ಕಲ್ಲಿನದ್ದೊ ಲೋಹದ್ದೊ ಆಗಿರಬಹುದು. ಆದರೆ, ಆ ಶಿಲ್ಪಕ್ಕೆ ಹೆಣ್ಣು-ಗಂಡು ಎಂದು ಸ್ತ್ರೀಲಿಂಗ-ಪುಲ್ಲಿಂಗವನ್ನು ಆರೋಪಿಸಿ ಬಳಸುವುದು ಕಂಡುಬರುತ್ತದೆ. ‘ಗುಡಿಯಲ್ಲಿ ದೇವಿ ಎದ್ದು ಬರುವ ಹಾಗೆ ಕಾಣಿಸ್ತಾ ಇದಾಳೆ’, ‘ಮಲ್ಲಯ್ಯ ಏನು ಕಳೆ ತುಂಬಿಕೊಂಡಿದಾನೆ’ ಇಂತಾ ಬಳಕೆಗಳನ್ನು ಕಾಣಬಹುದು. ಹಾಗೆ, ದುರುಗಮ್ಮನಿಗೆ ಬಿಟ್ಟ ಕೋಣವನ್ನು ‘ದುರುಗಮ್ಮ ಬಂದಳು’ ಎಂದು ಸ್ತ್ರೀಲಿಂಗವಾಗಿಯೆ, ಮಲ್ಲಯ್ಯನಿಗೆ ಬಿಟ್ಟ ಗೂಳಿಗೆ ‘ಮಲ್ಲಯ್ಯ ಬಂದ’ ಎಂದು ಪುಲ್ಲಿಂಗವಾಗಿಯೆ ಬಳಸುತ್ತಾರೆ. ಸಾಮಾಜಿಕವಾಗಿ, ಸಾಂಸ್ಕ್ರುತಿಕವಾಗಿ, ಮಾನಸಿಕವಾಗಿ ಆಗುತ್ತಿರುವ ಪಲ್ಲಟಗಳು ನಮ್ಮ ಬದುಕಿನಲ್ಲಿ ಆ ನಾಮಪದಗಳ ಅಂತಸ್ತನ್ನು ರೂಪುಗೊಳಿಸುತ್ತಿರುತ್ತವೆ. ಈ ಅಂತಸ್ತುಗಳು ಆ ನಾಮಪದಗಳ ಲಿಂಗವನ್ನು ನಿರ‍್ದರಿಸುತ್ತವೆ.
ಇನ್ನು ಪ್ರಾದೇಶಿಕವಾಗಿ ನೋಡಿದರೆ, ಚಿತ್ರದುರ‍್ಗ ಕನ್ನಡದಲ್ಲಿ ಹೆಣ್ಣನ್ನು ನಪುಂಸಕವಾಗಿಯೆ ಕರೆಯುತ್ತಾರೆ. ಚಿತ್ರದುರ‍್ಗ ಕನ್ನಡದಲ್ಲಿ ಎರಡೆ ಲಿಂಗಗಳು ಇವೆ. ಲಿಂಗ1 ಮತ್ತು ಲಿಂಗ2. ಬಳಕೆ ಗಮನಿಸಿ, ‘ಅಪ್ಪ ಬಂದ’, ಅಮ್ಮ ಬಂತು’, ‘ದನ ಬಂತು’, ‘ಗಾಡಿ ಬಂತು’. ಇಲ್ಲಿ ಉಳಿದ ಕನ್ನಡಗಳಲ್ಲಿ ಪುಲ್ಲಿಂಗವಾಗಿರುವುದು ಚಿತ್ರದುರ‍್ಗ ಕನ್ನಡದಲ್ಲಿ ಲಿಂಗ1, ಉಳಿದೆಲ್ಲವೂ ಲಿಂಗ2. ಈ ಬಗೆಯ ಅವಶೇಶಗಳು ಅಂದರೆ ಹಳೆಕಾಲದ ಇನ್ನೂ ಕೆಲಕೆಲವೆಡೆ ಉಳಿದುಕೊಂಡಿರುವ ಬಳಕೆಗಳು ಇಂತ ಅದ್ಯಯನಕ್ಕೆ ಹೆಚ್ಚು ಸಹಾಯವಾಗುತ್ತವೆ.
ಕನ್ನಡದ ಲಿಂಗವ್ಯವಸ್ತೆಯನ್ನು ಮಹತ್-ಅಮಹತ್ ಎಂಬ ಪದಗಳನ್ನು ಬಳಸಿ, ಬುದ್ದಿ ಇರುವ ಮತ್ತು ಬುದ್ದಿ ಇಲ್ಲದ ಎಂಬ ಗುಂಪಿಕೆ ಇದೆ ಎಂಬ ವಿವರಣೆಯನ್ನು ಕೆಲವು ಆದುನಿಕ ಅದ್ಯಯನಗಳು ಗುರುತಿಸುತ್ತವೆ. ದ್ರಾವಿಡದಲ್ಲಿ ಈ ವ್ಯವಸ್ತೆ ಇದೆ ಎಂಬುದನ್ನು ಆದುನಿಕ ಬಾಶಾವಿಗ್ನಾನ ಸಾಕಶ್ಟು ಮಾತಾಡಿದೆ. ಇದನ್ನೆ ಕನ್ನಡದಲ್ಲಿ ಬಾಶಾವಿಗ್ನಾನಿಗಳು ವಿವರಿಸಿದ್ದಾರೆ. ಆದರೆ ಆದಾರವಾಗಿ ಪರಿಗಣಿಸುವಂತದ್ದು ಬುದ್ದಿಯೊ ಇನ್ನೇನೊ ಅಸ್ಪಶ್ಟ. ಬುದ್ದಿ ಅಲ್ಲ ಎಂದು ಈ ಮೇಲಿನ ವಿವರಣೆಗಳು ಹೇಳುತ್ತವೆ. ಅಂದರೆ ವಿವಿದ ಬಗೆಯ ಅಂತಸ್ತುಗಳು ಲಿಂಗವನ್ನು ನಿರ‍್ದರಿಸುತ್ತವೆ ಎಂಬ ವಿಚಾರ.
ಇಲ್ಲಿ ಆಗುತ್ತಿರುವ ಚಳಕವನ್ನು ಗಮನಿಸಿ. ಮನುಶ್ಯರನ್ನು ತುಸು ಅಂತಸ್ತನ್ನು ಕಡಿಮೆ ಮಾಡುತ್ತಿದ್ದ ಹಾಗೆ ಅವರು ನಪುಂಸಕಕ್ಕೆ ಇಳಿದುಬಿಡುತ್ತಾರೆ. ಆದರೆ, ಮನುಶ್ಯ ಅಲ್ಲದವುಗಳಿಗೂ ಜೀವ ಇಲ್ಲದವುಗಳಿಗೂ ತುಸು ಅಂತಸ್ತನ್ನು ಕಟ್ಟಿದ ಕೂಡಲೆ ಅವು ಸ್ತ್ರೀಲಿಂಗವೊ ಪುಲ್ಲಿಂಗವೊ ಆಗಿಬಿಡುತ್ತವೆ. ಇಲ್ಲಿ ಅಂತಸ್ತು ಎನ್ನುವುದನ್ನು ಉದ್ದೇಶಪೂರ‍್ವಕವಾಗಿ ಬಳಸಿದೆ. ಈ ಅಂತಸ್ತು ಈ ಮೇಲೆ ಹೇಳಿದ ಹಾಗೆ ಸಾಮಾಜಿಕವೂ ಸಾಂಸ್ಕ್ರುತಿಕವೂ ಮಾನಸಿಕವೂ ಆಗಿರುತ್ತದೆ. ಇದು ಅತ್ಯಂತ ಸ್ಪಶ್ಟವಾಗಿ ಕನ್ನಡ ಮಾತುಗ ಸಮುದಾಯ ಇಲ್ಲವೆ ಹಿಂದಕ್ಕೆ ಹೋಗಿ ದ್ರಾವಿಡ ಮಾತಾಡುವ ಗುಂಪುಗಳು ಲಿಂಗವನ್ನು ಅಂದರೆ, ನಾಮಪದಗಳ ಗುಂಪಿಕೆಯನ್ನು ಹೇಗೆ
ಪರಿಬಾವಿಸಿಕೊಂಡಿದ್ದವು ಎಂಬುದನ್ನು ತೋರಿಸುವಂತಿದೆ. ಈ ಬಳಕೆ ಕನ್ನಡದ ಲಿಂಗವ್ಯವಸ್ತೆ ಎಂತಹದು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಒಂದು ದೊಡ್ಡ ಪ್ರಮಾಣದ ಅದ್ಯಯನದ ಅವಶ್ಯಕತೆ ಇದೆ. ಹಾಗಾದರೆ, ಕನ್ನಡದಲ್ಲಿ ಲಿಂಗವು ತೆರತೆರ ಎಂದಾಯಿತು.
- ಬಸವರಾಜ ಕೋಡಗುಂಟಿ.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
©2024 Book Brahma Private Limited.