ಕನ್ನಡದಾಗ ಕಾಲನಿರ‍್ವಹಣೆ

Date: 18-03-2023

Location: ಬೆಂಗಳೂರು


''ಸಾಮಾನ್ಯವಾಗಿ ಮೊದಲ ವಾಕ್ಯದಲ್ಲಿ ಕೆಲಸ ಮುಗಿದಿದೆ ಹಾಗಾಗಿ ಇದು ಬೂತ ಕಾಲ, ಎರಡನೆಯದರಲ್ಲಿ ಕೆಲಸ ನಡೆಯುತ್ತಿದೆ ಹಾಗಾಗಿ ಇದು ವರ‍್ತಮಾನ ಕಾಲ ಮತ್ತು ಮೂರನೆಯ ವಾಕ್ಯದಲ್ಲಿ ಕೆಲಸ ಆಮೇಲೆ ನಡೆಯುತ್ತದೆ ಹಾಗಾಗಿ ಇದು ಬವಿಶತ್ ಕಾಲ ಎಂದು ಹೇಳಲಾಗುತ್ತದೆ. ಇದು ತುಂಬಾ ಸರಳವಾಗಿ ಕಾಣಿಸುತ್ತದೆ,'' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕನ್ನಡದಾಗ ಕಾಲನಿರ‍್ವಹಣೆ’ ಎಂಬ ವಿಚಾರಗಳ ಕುರಿತು ಬರೆದಿದ್ದಾರೆ.

ಕನ್ನಡದಾಗ ಬೂತ-ವರ‍್ತಮಾನ-ಬವಿಶತ್ ಎಂಬ ಮೂರು ಕಾಲಗಳು ಇವೆ ಎಂದು ನಮ್ಮ ಶಾಲಾ-ಕಾಲೇಜುಗಳ ಮೇಶ್ಟ್ರುಗಳು ಹೇಳುತ್ತಲೆ ಬಂದಿದ್ದಾರೆ, ಮಕ್ಕಳು ಕಲಿಯುತ್ತಲೆ ಬಂದಿದ್ದಾರೆ. ಆದರೆ, ಆದುನಿಕ ಬಾಶಾವಿಗ್ನಾನ ಬೆಳೆದಾಗಿನಿಂದ ದ್ರಾವಿಡ ಬಾಶೆಗಳಲ್ಲಿ ಈ ಮೂರು ಕಾಲಗಳು ಇಲ್ಲ ಎಂಬುದನ್ನು ಹೇಳಲಾಗಿದೆ. ಹಾಗಾಗಿ, ಕನ್ನಡದಲ್ಲಿಯೂ ಈ ಮೂರು ಕಾಲಗಳು ಇಲ್ಲ. ಕನ್ನಡದಾಗ ಇರುವುದು ಬೂತ-ಬೂತವಲ್ಲದ (ಬೂತೇತರ) ಎಂಬ ಎರಡು ಕಾಲಗಳು ಮಾತ್ರ. ಈ ಬರಹದಲ್ಲಿ ಇದನ್ನು ತುಸು ಪರಿಚಯಿಸಿಕೊಳ್ಳುವ ಪ್ರಯತ್ನ ಮಾಡೋಣ.

ಇದುವರೆಗೆ ನಂಬಲಾಗಿರುವ, ಹೇಳುತ್ತಿರುವ ಕನ್ನಡದ ಮೂರು ಕಾಲಗಳನ್ನು ಇಲ್ಲಿ ಗಮನಿಸೋಣ.

ಬೂತಕಾಲ ಆಕೆ ಕೆಲಸ ಮಾಡಿದಳು
ವರ‍್ತಮಾನಕಾಲ ಆಕೆ ಕೆಲಸ ಮಾಡುತ್ತಿದ್ದಾಳೆ
ಬವಿಶತ್ ಕಾಲ ಆಕೆ ಕೆಲಸ ಮಾಡುವಳು

ಸಾಮಾನ್ಯವಾಗಿ ಮೊದಲ ವಾಕ್ಯದಲ್ಲಿ ಕೆಲಸ ಮುಗಿದಿದೆ ಹಾಗಾಗಿ ಇದು ಬೂತ ಕಾಲ, ಎರಡನೆಯದರಲ್ಲಿ ಕೆಲಸ ನಡೆಯುತ್ತಿದೆ ಹಾಗಾಗಿ ಇದು ವರ‍್ತಮಾನ ಕಾಲ ಮತ್ತು ಮೂರನೆಯ ವಾಕ್ಯದಲ್ಲಿ ಕೆಲಸ ಆಮೇಲೆ ನಡೆಯುತ್ತದೆ ಹಾಗಾಗಿ ಇದು ಬವಿಶತ್ ಕಾಲ ಎಂದು ಹೇಳಲಾಗುತ್ತದೆ. ಇದು ತುಂಬಾ ಸರಳವಾಗಿ ಕಾಣಿಸುತ್ತದೆ. ಆದರೆ ವಾಸ್ತವದಲ್ಲಿ ಇದು ಸರಳವಾಗಿಲ್ಲ. ತುಂಬಾ ಸಂಕೀರ‍್ಣವಾಗಿದೆ ಇಲ್ಲವೆ ಸಮಸ್ಯಾತ್ಮಕವಾಗಿದೆ. ಈ ಕೆಳಗಿನ ವಾಕ್ಯಗಳನ್ನು ಗಮನಿಸಿ, ಇದರಲ್ಲಿ ಇರುವ ಸಮಸ್ಯೆ ಏನು ಎಂಬುದು ಗೊತ್ತಾಗುತ್ತದೆ.

ಆಕೆ ಎಂಎ ಮಾಡುತ್ತಿದ್ದಾಳೆ
ಆಕೆ ಎಂಎ ಓದುತ್ತಿದ್ದಾಳೆ
ಆಕೆ ಕವನ ಓದುತ್ತಿದ್ದಾಳೆ

ಸಾಮಾನ್ಯವಾಗಿ ವರ‍್ತಮಾನ ಕಾಲ ಎಂದರೆ ಈಗ ನಡೆಯುತ್ತಿರುವ ಗಟನೆ ಎಂದು ಹೇಳುತ್ತೇವೆ. ಈ ಮೇಲಿನ ವಾಕ್ಯಗಳಲ್ಲಿ ‘ಕವನ ಓದುವ’ ಕೆಲಸ ಈಗ ನಡೆಯುತ್ತಿರಬಹುದು, ಇಲ್ಲವೆ ಅದು ನಿರಂತರ ನಡೆಯುತ್ತಿರಲೂಬಹುದು. ಆಕೆ ಎಂಎ ಓದುತ್ತಿದ್ದಾಳೆ ಎನ್ನುವ ವಾಕ್ಯದಲ್ಲಿ ಒಬ್ಬ ಹುಡುಗಿ ಇಲ್ಲವೆ ಹೆಣ್ಣು ಒಂದು ಕೆಲಸವನ್ನು ಮಾಡುತ್ತಿದ್ದಾಳೆ ಎಂದು ಹೇಳಲಾಗುತ್ತಿದೆಯಾದರೂ ವಾಸ್ತವದಲ್ಲಿ ಆ ವಾಕ್ಯ ಹೇಳುತ್ತಿರುವಾಗ ಅದು ನಡೆಯಬೇಕಿಲ್ಲ. ಎಂಎ ಅದ್ಯಯನ ಮಾಡುತ್ತಿರುವ ಹುಡುಗಿ ಆ ವಾಕ್ಯವನ್ನು ಆಡುತ್ತಿರುವಾಗ ಕುಳಿತಿರಬಹುದು, ನಿಂತಿರಬಹುದು, ನಡೆದಾಡುತ್ತಿರಬಹುದು, ಆದರೂ ಓದುತ್ತಿದ್ದಾಳೆ ಎಂದು ಬಳಸಬಹುದು. ಆಮೇಲೆ, ಎಂಎ ತರಗತಿಯನ್ನು ಮಾಡುವ ಪ್ರಕ್ರಿಯೆ ಆ ವಾಕ್ಯವನ್ನು ಆಡುವ ಸಮಯದಲ್ಲಿ ನಡೆಯುವ ಕೆಲಸವಾಗಿದ್ದರೂ ಅದು ಆ ವಾಕ್ಯವನ್ನು ಆಡುವುದಕ್ಕಿಂತ ಮೊದಲು ಮತ್ತು ಆ ವಾಕ್ಯವನ್ನು ಆಡಿದ ನಂತರ ಕೂಡ ನಡೆಯುವ ಕೆಲಸವಾಗಿರುತ್ತದೆ. ಅಂದರೆ, ಇದು ಒಂದು ನಿರಂತರ ಕೆಲಸ. ಬದಲಾಗಿ ವಾಕ್ಯವನ್ನು ಆಡುವ ಸಮಯದಲ್ಲಿ ಮಾತ್ರ ನಡೆಯುವ ಕೆಲಸ ಅಲ್ಲ. ಹಾಗಾಗಿ, ಕನ್ನಡದಲ್ಲಿ ವರ‍್ತಮಾನ ಎನ್ನುವುದು ಸ್ಪಶ್ಟವಾಗಿ, ನಿರ‍್ದಿಶ್ಟವಾಗಿ ಆಗ ನಡೆಯುತ್ತಿರುವ ಕೆಲಸವನ್ನು ಮಾತ್ರ ಹೇಳುವುದಿಲ್ಲ ಎನಿಸುತ್ತದೆ. ಹಾಗಾದರೆ, ಈ ವಾಕ್ಯ ವರ‍್ತಮಾನದ ಜೊತೆಗೆ ನಿರಂತರ ನಡೆದಿರುವ ಇಲ್ಲವೆ ನಡೆಯುವ ಗಟನೆಯನ್ನು ಹೇಳುತ್ತದೆ ಎಂದಾಗುತ್ತದೆ. ಹಾಗಾದರೆ, ವರ‍್ತಮಾನ ಎಂಬುದು ಪ್ರತ್ಯೇಕವಾಗಿ ಇಲ್ಲವೆ ಕನ್ನಡದಲ್ಲಿ? ಎಂಬ ಪ್ರಶ್ನೆ ಮೂಡುತ್ತದೆ. ಬರ್ರಿ, ಇನ್ನಶ್ಟು ಮಾತಾಡೋಣ.

ಈ ಬವಿಶತ್ ಕಾಲದ ವಾಕ್ಯಗಳನ್ನು ಗಮನಿಸಿ,
ಆಕೆ ನಾಳೆ ಬರುತ್ತಾಳೆ
ಆಕೆ ನಾಳೆ ಬರುವಳು

ರೂಪದಲ್ಲಿ, ಮುಕ್ಯವಾಗಿ ಕಾಲಪ್ರತ್ಯಯದಲ್ಲಿ ಈ ಮೇಲಿನ ಎರಡೂ ವಾಕ್ಯಗಳಲ್ಲಿ ಬಿನ್ನತೆ ಇದ್ದರೂ ಅರ‍್ತದಲ್ಲಿ ಯಾವುದೆ ವ್ಯತ್ಯಾಸ ಇಲ್ಲ. ಇವುಗಳಲ್ಲಿ ಬಳಕೆಯಾಗಿರುವ ಕಾಲಪ್ರತ್ಯಯಗಳನ್ನು ಎರಡು ಬಿನ್ನ ಕಾಲದ ಪ್ರತ್ಯಯಗಳು ಎಂದು ವ್ಯಾಕರಣಗಳು ಹೇಳುತ್ತವೆ. ಮೊದಲ ವಾಕ್ಯದಲ್ಲಿ ಬಂದಿರುವ –ವ್- ಇದನ್ನು ಬವಿಶತ್ ಕಾಲದ ಪ್ರತ್ಯಯ ಎಂದು ಹೇಳಿದರೆ, ಎರಡನೆ ವಾಕ್ಯದಲ್ಲಿ ಬಂದಿರುವ –ಉತ್ತ- ಇದನ್ನು ವರ‍್ತಮಾನದ ಪ್ರತ್ಯಯ ಎಂದು ಹೇಳಲಾಗುತ್ತದೆ. ಆದರೆ, ಎರಡೂ ರೂಪಗಳು ಬವಿಶತ್ ಕಾಲದ ಅಬಿವ್ಯಕ್ತಿಗೆ ಬಳಕೆಯಾಗುತ್ತಿವೆ. ಇದು ಕನ್ನಡದಲ್ಲಿ ಪ್ರತ್ಯೇಕವಾದ ವರ‍್ತಮಾನ ಇಲ್ಲ ಎಂಬುದನ್ನು ಹೇಳುತ್ತದೆ. ಈ ಬರಹದಲ್ಲಿ ಮೊದಲಲ್ಲಿ ವರ‍್ತಮಾನಕ್ಕೆಂದು ಕೊಟ್ಟ ವಾಕ್ಯವನ್ನು ಇಲ್ಲಿ ಮತ್ತೊಮ್ಮೆ ಗಮನಿಸೋಣ.

ಆಕೆ ಕೆಲಸ ಮಾಡುತ್ತಿದ್ದಾಳೆ

ಈ ವಾಕ್ಯದಲ್ಲಿ ವ್ಯಾಕರಣಗಳು ಹೇಳುವ –ಉತ್ತ- ಎಂಬ ರೂಪವು ವಾಸ್ತವದಲ್ಲಿ ವರ‍್ತಮಾನವನ್ನು ಹೇಳುವುದಕ್ಕೆ ಬಳಕೆ ಆದ ಹಾಗಿಲ್ಲ. ಈಗ ಕೆಲಸ ನಡೆದಿದೆ ಎಂಬುದು ನಮಗೆ ಗೊತ್ತಾಗುತ್ತಿರುವುದು ಕ್ರಿಯಾಪದದ ಮೇಲೆ ಬಂದಿರುವ –ಉತ್ತ- ರೂಪದ ಮೇಲೆ ಬಂದಿರುವ ಇನ್ನೊಂದು ರೂಪ ಇದ್ದ ಎಂಬುದರಿಂದ. ಈ ಬಿನ್ನತೆಯನ್ನು ಮಾಡಿ ಇದೆ ವಾಕ್ಯವನ್ನು ತೋರಿಸಿದೆ, ಗಮನಿಸಿ.

ಆಕೆ ಕೆಲಸ ಮಾಡುತ್ತಾಳೆ ಆಕೆ ಕೆಲಸ ಮಾಡು+-ಉತ್ತ-+-ಆಳೆ
ಆಕೆ ಕೆಲಸ ಮಾಡುತ್ತಿದ್ದಾಳೆ ಆಕೆ ಕೆಲಸ ಮಾಡು+-ಉತ್ತ-+ಇದ್ದ(ಇರ್+-ದ್)-ಆಳೆ

ಮೊದಲ ವಾಕ್ಯದಲ್ಲಿ ವರ‍್ತಮಾನ ಕಾಲದ ಪ್ರತ್ಯಯ ಎಂದು ಹೇಳುವ –ಉತ್ತ- ರೂಪವನ್ನು ಹಾಕಿದರೆ, ಬವಿಶತ್ತಿನ ಅರ‍್ತವು ಬರುತ್ತಿದೆ. ಆದರೆ, ಎರಡನೆ ಸಾಲಿನಲ್ಲಿ ಇದ್ದ(ಇರ್+-ದ್) ಎಂಬ ಹೆಚ್ಚುವರಿ ರೂಪವು ಬಂದಿರುವುದರಿಂದ ಅದು ವರ‍್ತಮಾನ ಎಂಬ ಅರ‍್ತವನ್ನು ಕೊಡುತ್ತಿದೆ. ಹಾಗಾದರೆ, -ಉತ್ತ- ಎಂಬುದು ವರ‍್ತಮಾನದ ರೂಪ ಅಲ್ಲವೆ? ಹಾಗಾದರೆ, ಈ ರೂಪವು ಏನು ಕೆಲಸ ಮಾಡುತ್ತದೆ? ಬವಿಶತ್ ಕೆಲಸವನ್ನು ಮಾಡುವುದಕ್ಕೆಂದು ಇನ್ನೊಂದು ರೂಪ ಇರುವುದಾದರೆ ಈ ರೂಪ ಏನು ಕೆಲಸ ಮಾಡುತ್ತದೆ? ಈ ಎಲ್ಲ ಪ್ರಶ್ನೆಗಳು ಬರುತ್ತವೆ. ಇದು ವರ‍್ತಮಾನ ಮತ್ತು ಬವಿಶತ್ ಇವುಗಳ ನಡುವಿನ ಅಸ್ಪಶ್ಟ ಗೆರೆಯನ್ನು ತೋರಿಸುತ್ತದೆ. ಅಂದರೆ, ಅವೆರಡು ಬೇರೆ ಆಗಿರಲಿಕ್ಕಿಲ್ಲ ಎಂದು ಹೇಳುತ್ತದೆ.

ವರ‍್ತಮಾನಕ್ಕೆ ಬಳಕೆಯಲ್ಲಿರುವ ರೂಪವನ್ನು ಗಮನಿಸೋಣ. ಅವಲೋಕನೆಗೆ ಅನುವಾಗಲೆಂದು ಹಳಗನ್ನಡದ ಮತ್ತು ಈಗಿನ ಕನ್ನಡದ ಕಾಲಪ್ರತ್ಯಯಗಳು ಎಂದು ವ್ಯಾಕರಣಗಳು ವಿವರಿಸುವ ಮೂರೂ ಕಾಲದ ಮೂರು ರೂಪಗಳನ್ನು ಕೆಳಗೆ ಕೊಟ್ಟಿದೆ.

ಹಳಗನ್ನಡ ಹೊಸಗನ್ನಡ
ಬೂತಕಾಲ ಪ್ರತ್ಯಯ : -ದ್- -ದ್-
ವರ‍್ತಮಾನ ಕಾಲ ಪ್ರತ್ಯಯ : -ದಪ- -ಉತ್ತ-
ಬವಿಶತ್ ಕಾಲ ಪ್ರತ್ಯಯ : -ವ್- -ವ್-

ಈ ರೂಪಗಳನ್ನು ನೋಡಿದ ತಕ್ಶಣ ಸುಲಬವಾಗಿ ಗ್ರಹಿಸಬೇಕಾದ ಒಂದು ಸಮಸ್ಯೆ ಎಂದರೆ, ಬೂತ ಮತ್ತು ಬವಿಶತ್ ಕಾಲಗಳ ಪ್ರತ್ಯಯಗಳಲ್ಲಿ ಯಾವುದೆ ಬದಲಾವಣೆ ಇಲ್ಲ, ಆದರೆ, ವರ‍್ತಮಾನದ ರೂಪಗಳಲ್ಲಿ ಪರಸ್ಪರ ಸಂಬಂದವೆ ಇಲ್ಲದ ರೂಪಗಳ ವಿವರಣೆ ಕಾಣಿಸುತ್ತದೆ. ಸಾಮಾನ್ಯವಾಗಿ ಒಂದು ವ್ಯಾಕರಣ ರೂಪ ಹೀಗೆ ಅಸಂಬಂದಿತವಾಗಿ ಬೆಳೆಯುವುದಕ್ಕೆ ಸಾದ್ಯವೆ ಇಲ್ಲ. ಹಾಗಾದರೆ, ಇಲ್ಲಿ, ಈ ವಿವರಣೆಯಲ್ಲಿ ಏನೊ ಸಮಸ್ಯೆ ಇದೆ ಎಂದಾಗುತ್ತದೆ. ಇದು ಕನ್ನಡದಲ್ಲಿ ವರ‍್ತಮಾನ ಎಂಬ ಪ್ರತ್ಯೇಕವಾದ ಕಾಲ ಇಲ್ಲ ಎಂಬುದಕ್ಕೆ ಆದಾರವನ್ನು ಒದಗಿಸುತ್ತದೆ.

ಇದರೊಟ್ಟಿಗೆ ಇನ್ನೊಂದು ವಿಚಾರವನ್ನೂ ಅವಗಾಹಿಸಬಹುದು. ಅದೆಂದರೆ, ಬೂತದ ಅಬಿವ್ಯಕ್ತಿಗೆ ಬಹುತೇಕ ಕನ್ನಡಗಳಲ್ಲಿ ಹೆಚ್ಚೇನೂ ವ್ಯತ್ಯಾಸ ಇಲ್ಲ. ಬವಿಶತ್ ಎನ್ನುವ ಕಾಲದಲ್ಲಿ ತುಸು ಗೊಂದಲ. ಇದನ್ನು ಈ ಮೇಲೆ ಗಮನಿಸಿದೆವು. ಆದರೆ, ವರ‍್ತಮಾನದ ವಿಚಾರದಲ್ಲಿ ಹೆಚ್ಚು ಗೊಂದಲ. ವಿಬಿನ್ನ ಒಳನುಡಿಗಳಲ್ಲಿ ವರ‍್ತಮಾನದ ಅಬಿವ್ಯಕ್ತಿಗೆ ವಿಬಿನ್ನ ರೂಪಗಳು ಬಳಕೆಯಲ್ಲಿವೆ. ಇದು ಕನ್ನಡದಾಗ ವರ‍್ತಮಾನ ಪ್ರತ್ಯೇಕವಾಗಿ ಇಲ್ಲ ಎಂಬುದನ್ನೆ ಎತ್ತಿ ಹಿಡಿಯುತ್ತದೆ. ಇಲ್ಲಿ ಒಂದೆರಡು ಎತ್ತುಗೆಗಳನ್ನು ಕೊಟ್ಟಿದೆ, ಗಮನಕ್ಕೆಂದು,

ಮಸ್ಕಿ ಕನ್ನಡ : ಅಕಿ ನಡ್ಯಾಕತ್ಯಾಳ
ಕಲಬುರಗಿ ಕನ್ನಡ : ಕಕಿ ನಡಿಲಾಕತ್ಯಾಳ
ದಾರವಾಡ ಕನ್ನಡ : ಆಕಿ ನಡಿಯಾಕ ಹತ್ಯಾಳ
ಮಂಗಳೂರು ಕನ್ನಡ : ಅವ್ಳ್ ನಡೀತಿದ್ಲ್
ಚಾಮರಾಜನಗರ ಕನ್ನಡ : ಅವ್ಳ ನ್ಯಡ್ಕೊಹೋಯ್ತವ್ಳೆ
ಚಿಕ್ಕಮಗಳೂರು ಕನ್ನಡ : ಅವ್ಳು ನಡೀತಿದಾಳೆ

ಕನ್ನಡದ ವಿವಿದ ಒಳನುಡಿಗಳು ವರ‍್ತಮಾನ ಕಾಲವನ್ನು ಸ್ಪಶ್ಟವಾಗಿ ಹೇಳುವುದಕ್ಕೆ ವಿಬಿನ್ನ ರೂಪಗಳನ್ನು ಬೆಳೆಸಿಕೊಂಡಿವೆ. ಇದು ಕನ್ನಡದಲ್ಲಿ ಸ್ಪಶ್ಟವಾದ, ವಿಬಿನ್ನವಾದ ವರ‍್ತಮಾನ ಕಾಲ ಇಲ್ಲ ಎಂಬುದು ಸ್ಪಶ್ಟವಾಗುತ್ತದೆ.

ಹಾಗಾದರೆ, ಕನ್ನಡದಲ್ಲಿ ಯಾವ ಬಗೆಯ ಕಾಲದ ಗುಂಪಿಕೆ ಸಾದ್ಯ ಎಂಬ ಪ್ರಶ್ನೆ ಮೂಡುತ್ತದೆ. ಕನ್ನಡದಾಗ ಬೂತ-ಬೂತವಲ್ಲದ ಎಂಬ ಕಾಲ ವಿಂಗಡಣೆ ಸೂಕ್ತ. ಆದ್ದರಿಂದಲೆ ಬವಿಶತ್ ಮತ್ತು ವರ‍್ತಮಾನ ಇವುಗಳ ನಡುವೆ ಸಾಕಶ್ಟು ಗೊಂದಲಗಳು ಕಾಣಿಸುತ್ತವೆ. ಈ ಹಲವು ಗೊಂದಲಗಳು ಬೂತ ಕಾಲದೊಂದಿಗೆ ತಳುಕು ಹಾಕಿಕೊಂಡಿಲ್ಲ ಎಂಬುದನ್ನು ಗಮನಿಸಬಹುದು.

ಇಲ್ಲಿ ಹೆಚ್ಚು ಹೆಚ್ಚು ಅದ್ಯಯನಗಳು ಬೇಕು, ನಮ್ಮ ಕನ್ನಡದ ತಿಳುವಳಿಕೆಯನ್ನು ಅಗ್ಗಲಿಸಿಕೊಳ್ಳುವುದಕ್ಕೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...