Date: 24-09-2022
Location: ಬೆಂಗಳೂರು
“ಬಾಶೆಯಲ್ಲಿ ಆಗಿರುವ ಹಲವಾರು ಬಗೆಯ ಬೆಳವಣಿಗೆಗಳು ಈ ಗೋಶ, ಅಗೋಶ ಬೆಳವಣಿಗೆ ನಂತರ ಆಗಿರುವುದರಿಂದ ನೇರವಾಗಿ ಈ ಬೆಳವಣಿಗೆಯನ್ನು ಅವಲೋಕಿಸಲು ಅನುವಾಗಲಿಕ್ಕಿಲ್ಲ. ಕನ್ನಡದ ಇತಿಹಾಸವನ್ನು, ಅತ್ಯಂತ ಹಳೆಯ ಬರಹಗಳನ್ನು ಓದುವಾಗ ಮತ್ತು ಅರ‍್ತ ಮಾಡಿಕೊಳ್ಳುವಾಗ ಈ ತಿಳುವಳಿಕೆ ಅತ್ಯಂತ ಅವಶ್ಯ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಕನ್ನಡದ ಧ್ವನಿಗಳಲ್ಲಾದ ಈಚಿನ ಬೆಳವಣಿಗೆಗಳನ್ನು ಚರ್ಚಿಸಿದ್ದಾರೆ.
ಕನ್ನಡ ವ್ಯಂಜನಗಳಲ್ಲಿ ಗುಂಪುಗುಂಪಾಗಿ ಜೋಡಿಸಿದ ಕೆಲವು ವರ‍್ಗೀಯ ವ್ಯಂಜನಗಳು ಮತ್ತು ಹಾಗೆ ಜೋಡಿಸಿಲ್ಲದ ಕೆಲವು ಅವರ‍್ಗೀಯ ವ್ಯಂಜನಗಳನ್ನು ಕಾಣಬಹುದು. ವರ‍್ಗೀಯಗಳಲ್ಲಿ ಅಯ್ದಯ್ದು ದ್ವನಿಗಳನ್ನು ಜೋಡಿಸಿದೆ. ಹೀಗೆ ಜೋಡಿಸುವುದಕ್ಕೆ ಸಾದ್ಯವಾಗಿರುವುದು ಇವುಗಳು ಒಂದೆ ಜಾಗದಲ್ಲಿ ಹುಟ್ಟುತ್ತವೆ ಎಂಬ ಕಾರಣದಿಂದ.‘ಕ’ವರ‍್ಗವನ್ನು ತೆಗೆದುಕೊಂಡರೆ ಅದರಲ್ಲಿ ಇರುವ ಅಯ್ದೂ ದ್ವನಿಗಳು ಕಂಟದಲ್ಲಿಯೆ ಹುಟ್ಟುತ್ತವೆ. ಇದರಂತೆಯೆ ಉಳಿದವು. ಇವುಗಳಲ್ಲಿ ಮೊದಲ ಮತ್ತು ಮೂರನೆ ದ್ವನಿಗಳು ಅಲ್ಪಪ್ರಾಣಗಳು, ಎರಡನೆ ಮತ್ತು ನಾಲ್ಕನೆಯವು ಮಹಾಪ್ರಾಣಗಳು, ಮತ್ತು ಮೊದಲ ಮತ್ತು ಎರಡನೆಯವು ಅಗೋಶ ದ್ವನಿಗಳು, ಮೂರನೆ ಮತ್ತು ನಾಲ್ಕನೆ ದ್ವನಿಗಳು
ಗೋಶದ್ವನಿಗಳು. ಅಯ್ದನೆಯವು ಅನುನಾಸಿಕ. ಈಗಿನ ಬರಹದಲ್ಲಿ ಈ ಮೂರನೆ ಮತ್ತು ನಾಲ್ಕನೆಯವುಗಳಾದ ಗೋಶ ದ್ವನಿಗಳ ಬಗೆಗೆ ತುಸು ಚರ‍್ಚೆ ಮಾಡಾಮ. ಕನ್ನಡದಲ್ಲಿ ಮಹಾಪ್ರಾಣ ದ್ವನಿಗಳ ಬಗೆಗೆ ವಿಪರೀತ ಚರ‍್ಚೆ ಇರುವುದು ಎಲ್ಲರಿಗೂ ಗೊತ್ತು. ಆದರೆ, ಕನ್ನಡದ ರಚನೆ, ಇತಿಹಾಸವನ್ನು ಅರಿತುಕೊಳ್ಳುವಲ್ಲಿ ಗೋಶ ದ್ವನಿಗಳನ್ನು ತಿಳಿದುಕೊಳ್ಳುವುದು ಅದಕ್ಕಿಂತಲೂ ಬಹುಮುಕ್ಯವಾದುದು. ಬನ್ನಿ ತುಸು ಮಾತಾಡೋಣ.
ಗೋಶ ದ್ವನಿಗಳು ಅಂದರೆ ಗ್, ಜ್, ಡ್, ದ್ ಮತ್ತು ಬ್ ಇವು ಕನ್ನಡದಲ್ಲಿ ಇತ್ತೀಚಿನ ಬೆಳವಣಿಗೆ. ಮೂಲದ್ರಾವಿಡಲ್ಲಿ ಈ ದ್ವನಿಗಳು ಇರಲಿಲ್ಲ, ಮೂಲಕನ್ನಡದಲ್ಲಿಯೂ ಇರಲಿಲ್ಲ. ಮೂಲಕನ್ನಡದ ಅದ್ಯಯನದ ಆಸಕ್ತಿ ಕನ್ನಡದಲ್ಲಿ ಇಲ್ಲದಿರುವುದರಿಂದ ಈ ತಿಳುವಳಿಕೆ ಇಲ್ಲವಾಗಿದೆ. ಮೂಲದಲ್ಲಿ ಇಲ್ಲದ ಈ ದ್ವನಿಗಳು ಹೇಗೆ ಮತ್ತು ಯಾವಾಗ ದ್ರಾವಿಡದಲ್ಲಿ ಬೆಳೆದವು ಎಂಬುದರ ಬಗೆಗೂ ಚಿಂತನೆ ನಡೆದಿದೆ. ಮೂಲದ್ರಾವಿಡದಲ್ಲಿ ದ್ವನಿಗಳಾಗಿ ಇವು ಇದ್ದಿರಬಹುದು, ಆದರೆ ಇವುಗಳಿಗೆ ದ್ವನಿಮಾ ಮವುಲ್ಯ ಇದ್ದಿರಲಿಕ್ಕಿಲ್ಲ ಎಂದು ಹೇಳಲಾಗುತ್ತದೆ. ಅಂದರೆ, ಇಂದಿನ ಕನ್ನಡದಲ್ಲಿ ಙ್ ಮತ್ತು ಞ್ ದ್ವನಿಗಳಿದ್ದಂತೆ. ಇವುಗಳನ್ನು ಕೆಲವು ಪದಗಳ ನಿರ‍್ದಿಶ್ಟ ಪರಿಸರಗಳಲ್ಲಿ ಉಚ್ಚರಿಸಲಾಗುತ್ತದೆ, ಆದರೆ ಇವು ದ್ವನಿಮಾಗಳಾಗಿ ಬಳಕೆಯಲ್ಲಿ ಇಲ್ಲ. ಅದರೊಂದಿಗೆ ಇವು ಎಲ್ಲೆಡೆ ಬಳಕೆ ಆಗುವುದಿಲ್ಲ.
ಹಾಗೆಯೆ ಗೋಶ ದ್ವನಿಗಳು ದ್ವನಿಮಾಗಳಾಗಿ ಇರಲಿಲ್ಲ. ಬಹುಶಾ ಈ ದ್ವನಿಗಳು ಮೂಲದ್ರಾವಿಡದ ಹಂತದಲ್ಲಿ ನಿರ‍್ದಿಶ್ಟವಾದ ಪರಿಸರಗಳಲ್ಲಿ ಬಳಕೆಯಾಗುತ್ತಿರಬಹುದು. ಅಂದರೆ ಬಹುಶಾ ಪದನಡುವೆ ಬರುತ್ತಿದ್ದಿರಬೇಕು. ಪದಗಳ ನಡುವೆಯೂ ಎಂತದೊ ದ್ವನಿಮಾ ಪರಿಸರಗಳಲ್ಲಿ ಬಳಕೆಯಾಗುತ್ತಿದ್ದಿರಬಹುದು. ಕ್ರಮೇಣ ಇವು ಪದನಡುವಿನ ಜಾಗದಲ್ಲಿ ತಮ್ಮ ಪರಿಸರವನ್ನು ಮುಕ್ತಗೊಳಿಸಿಕೊಂಡು, ಆನಂತರ ಪದಮೊದಲು ಮತ್ತು ಪದಕೊನೆ ಪರಿಸರಗಳಲ್ಲಿ ಬಳಕೆಯಾಗುವಂತೆ ಬೆಳೆದಿರಬೇಕು. ಇಂತದೆ ಪರಿಸರವನ್ನು ಇಂದಿನವರೆಗೂ ತಮಿಳಿನಲ್ಲಿ ಕಾಣಬಹುದು. ಅಂದರೆ ಪದದ ಮೊದಲಿಗೆ ತಮಿಳಿನಲ್ಲಿ ಗೋಶ ದ್ವನಿಗಳು ಬಳಕೆ ಆಗುವುದಿಲ್ಲ. ಪದ ನಡುವಿನ ಪರಿಸರದಲ್ಲಿ ಇವು ಸಹಜವಾಗಿ ಬಳಕೆಯಾಗುತ್ತವೆ. ಅಲ್ಲಿಯೂ ಕೆಲವು ನಿರ‍್ದಿಶ್ಟ ಪರಿಸರಗಳಲ್ಲಿ.
ಇನ್ನು ಕನ್ನಡದ ಸಂದರ‍್ಬದಲ್ಲಿ ಗೋಶ ದ್ವನಿಗಳ ಬಳಕೆಯನ್ನು ಗಮನಿಸಿದಾಗ ಹಳೆಯದೆನ್ನಲಾಗುವ ಸುಮಾರು ಕ್ರಿಸ್ತಶಕ ೪೫೦ಕ್ಕೆ ಅಂಟಿಸಿರುವ ಹಲ್ಮಿಡಿ ಶಾಸನದಿಂದ ಮೊದಲಾಗಿ ಎಲ್ಲೆಡೆ ಗೋಶ ದ್ವನಿಗಳ ಬಳಕೆ ’ಸಹಜ’ ಎನ್ನುವಂತೆ ಇದೆ. ಅಲ್ಲದೆ ಇದಕ್ಕಿಂತಲೂ ಬಹುಹಿಂದೆಯೆ ಬೆಳೆದ ಲಿಪಿಯ ಅಳವಡಿಕೆಯಲ್ಲಿಯೂ ಕನ್ನಡಕ್ಕೆ ಗೋಶ ದ್ವನಿಗಳಿಗೆ ಲಿಪಿಗಳನ್ನು ಇಟ್ಟುಕೊಳ್ಳಲಾಗಿದೆ, ಅಲ್ಲದೆ ಅದರ ಬಗೆಗೆ ಯಾವುದೆ ಚರ‍್ಚೆ ಕೂಡ ಎಲ್ಲಿಯೂ ಇಲ್ಲ. ಹಾಗಾದರೆ, ಇಂದಿಗೆ ಸುಮಾರು
ಎರಡು ಸಾವಿರ ವರುಶಗಳಿಂದ ಗೋಶ ದ್ವನಿಗಳು ಕನ್ನಡದಾಗ ‘ಸಹಜ’ವಾಗಿ ಬಳಕೆಯಲ್ಲಿವೆ ಎಂದೆನ್ನಬಹುದು. ಆದರೆ ಅದಕ್ಕಿಂತ ಮೊದಲು ಇವು ಹೇಗಿದ್ದವು ಎಂಬ ಪ್ರಶ್ನೆಯನ್ನು ಎತ್ತಿಕೊಂಡಾಗ, ಈಗ ನಮಗೆ ದೊರೆಯುವ ಸಾಹಿತ್ಯಿಕ, ಶಾಸನ, ದಿನಜೀವನದ ಬಾಶಿಕ ಮಾಹಿತಿ ಇವು ಅದಕ್ಕಿಂತ ಹಿಂದೆ ಕನ್ನಡದಲ್ಲಿ ಗೋಶ ದ್ವನಿಗಳು ‘ಸಹಜ’ವಾಗಿ ಇರಲಿಲ್ಲ ಎಂಬ
ಅನುಮಾನವನ್ನು ಕೊಡುತ್ತವೆ. ಇದಕ್ಕೆ ಒಂದೆರಡು ಉದಾಹರಣೆಗಳನ್ನು ಇಲ್ಲಿ ಮಾತಿಗೆ ತೆಗೆದುಕೊಳ್ಳಬಹುದು. ಇಂದು ’ಕಾಡು’ ಎಂದು ಬಳಸುವ ಪದವು ಹಿಂದೊಮ್ಮೆ ’ಕಾಟು’; ’ಕಾಟ್’; ’ಕಾಟ್ಟು’; ’ಕಾಟ್ರು’ ಎಂದು ಬಳಕೆಯಲ್ಲಿತ್ತು. ರಾಯಚೂರು ಜಿಲ್ಲೆಯಲ್ಲಿ ’ಕಾಟಗಲ್ಲು’ ಅಂದರೆ ಕಾಡುಗಲ್ಲು ಎಂಬ ಅರ‍್ತದ ಊರು ಇದೆ. ಅದಲ್ಲದೆ ’ಕಾಡಯ್ಯ’ ಎಂಬ ವ್ಯಕ್ತಿಗಳ ಜೊತೆಗೆ ’ಕಾಟಯ್ಯ’ ಎಂಬುವವರೂ ನಮ್ಮ ಜೊತೆಗೆ ಇದ್ದಾರೆ. ಇಂತ ಹಲವಾರು ಊರುಗಳು, ಹೆಸರುಗಳು, ಬಳಕೆಗಳು ಸಿಗುತ್ತವೆ.
ಇದಕ್ಕೆ ಕಾರಣವೇನಿರಬಹುದು? ’ಕಾಡು’ ಎಂಬ ಪದವು ಮೂಲದಲ್ಲಿ ’ಕಾಟ್’; ’ಕಾಟ್’ ಎಂಬ ರೂಪದಲ್ಲಿ ಇದ್ದಿತು. ಬಾಶೆಯಲ್ಲಿ ದ್ವನಿಬದಲಾವಣೆ ಅತ್ಯಂತ ಸಹಜ. ಹೀಗೆ ದ್ವನಿಗಳು ಬದಲಾದಾಗ ಇಟ್ಟ ಹೆಸರುಗಳಲ್ಲಿ ಈ ಬದಲಾವಣೆ ಅಶ್ಟು ಸಹಜವಾಗಿ ನಡೆಯುವುದಿಲ್ಲ ಇಲ್ಲವೆ ಅತ್ಯಂತ ತಡವಾಗಿ, ಅಸಹಜವಾಗಿ ನಡೆಯುತ್ತದೆ. ಮೂಲದ ಟ್ ದ್ವನಿ ಆನಂತರ ಡ್ ದ್ವನಿಯಾಗಿ ಬದಲಾಗಿದೆ. ಆದರೆ, ಈ ಬದಲಾವಣೆ ನಡೆಯುವದಕ್ಕಿಂತ ಮೊದಲು ಟ್ ದ್ವನಿ ಇರುವ ಪದಗಳು ಊರು, ವ್ಯಕ್ತಿಗಳ ಹೆಸರುಗಳಾಗಿ ಬಳಕೆಯಾಗಿದ್ದವು. ಹಾಗಾಗಿ, ಬೇರೆ ಎಲ್ಲ ಕಡೆ ’ಟ್’, ’ಡ್’ ಬದಲಾವಣೆ ನಡೆದರೂ ಇಟ್ಟ ಹೆಸರುಗಳಲ್ಲಿ ಈ ಬದಲಾವಣೆ ಆಗಲಿಲ್ಲ, ಇಲ್ಲವೆ ಅಸಹಜವಾಗಿ ಆಯಿತು. ಅಂದರೆ, ಕಾಟಗಲ್ಲಿನಂತ ಊರ ಹೆಸರುಗಳಲ್ಲಿ ಅದು ಹಾಗೆಯೆ ಅಂದರೆ ಬದಲಾಗದೆ ಉಳಿದುಕೊಂಡಿತು. ಹಾಗೆಯೆ ಕಾಟಯ್ಯ ಎಂಬ ಹೆಸರು ಕೂಡ ಹಾಗೆಯೆ ಉಳಿಯಿತು.
ಇದರ ಜೊತೆಗೆ ಬಾಶೆಯಲ್ಲಿ ಬೇರೆಡೆ ಬೆಳೆದಿದ್ದ ಡ್ ದ್ವನಿಯ ಕಾರಣ ಮತ್ತು ಪ್ರಬಾವದಿಂದ ’ಕಾಡಯ್ಯ’ ಎಂಬ ಹೆಸರು ಕೂಡ ಬೆಳೆಯಿತು. ಅದರಿಂದಾಗಿ ನಮ್ಮೊಂದಿಗೆ ಇಂದು ಹಲವರು ’ಕಾಟಯ್ಯ’;ರ ಜೊತೆಗೆ ’ಕಾಡಯ್ಯ’;ರು ಕೂಡ ಇದ್ದಾರೆ.’;ಕಾಡು’ - ’ಕಾಟ’ ಎಂಬ ಪದಗಳ ಜೋಡಿಯನ್ನು ನೋಡಿದಾಗ ಇದನ್ನು ಕಾಣಬಹುದು. ಹೀಗೆ ಹಲವು ಪದಗಳನ್ನು ಕಾಣಬಹುದು.
’ಅಕನ್’ ಎಂದಿದ್ದ ಪದ ಮುಂದೆ ’ಅಗ’ ಎಂದು ಬೆಳೆದಿದೆ. ಇಂದಿಗೂ ನೆಲೆ ಹೇಳುವ ಸಪ್ತಮಿ ಪ್ರತ್ಯಯವಾಗಿ ಬಳಕೆಯಲ್ಲಿರುವ ರೂಪ ’ಆಗ’ ಎಂದಾಗಿದೆ. ಇದೆ ರೂಪ ’ಕರ‍್ನಾಟ’ ಇದಕ್ಕೆ ಸೇರಿಕೊಂಡು ’ಅಕ’ ಎಂದೆ ಉಳಿದಿದೆ. ಹಲವು ಪ್ರತ್ಯಯಗಳಲ್ಲಿ ಗೋಶ-ಅಗೋಶ ದ್ವನಿಗಳು ವ್ಯತ್ಯಯದಲ್ಲಿ ಬಳಕೆಯಾಗುತ್ತವೆ. ಕಾರ-ಗಾರ, - ಕಾರ‍್ತಿ-ಗಾರ‍್ತಿ, - ಪುರುಕ-ಬುರುಕ ಮೊ. ಸಮಾಸವಾಗುವಾಗ ಕ್, ಚ್, ಟ್, ತ್,, ಪ್ ದ್ವನಿಗಳಿಗೆ ಆದೇಶವಾಗಿ ಗ್, ಜ್, ಡ್, ದ್, ಬ್ ದ್ವನಿಗಳು ಬರುವುದು ಎಲ್ಲರಿಗೂ ತಿಳಿದ ವಿಚಾರ. ಇದಕ್ಕೆ ಕಾರಣ, ಮೂಲದಲ್ಲಿ ಅಗೋಶವಿದ್ದ ಕಡೆ ಗೋಶ ದ್ವನಿ ಬೆಳೆದಿರುವುದು.
ಇಲ್ಲಿ ಪ್ರತಿ ಗೋಶ-ಅಗೋಶ ಜೋಡಿಗೆ ಒಂದೆರಡು ಉದಾಹರಣೆಗಳನ್ನು ಕೊಟ್ಟಿದೆ.
ಕ್ ಗ್: ಮೂಕ ಮೂಗ, ಮುಸುಕು ಮುಸುಗು, ಕೊಂಡೆ ಗೊಂಡೆ
ಚ್ ಜ್: ಚಾಳಿಗೆ ಜಾಳಿಗೆ, ಕರ‍್ಚಿಗೆ ಕರ‍್ಜಿಗೆ, ಚೋಳ ಜೋಳ
ಟ್ ಡ್: ಚಪ್ಪಟಿ ಚಪ್ಪಡಿ, ಕಟು ಕಡು, ಕಟೆ ಕಡೆ
ತ್ ದ್: ತಡ ದಡ, ಚತುರ ಚದುರ,
ಪ್ ಬ್: ಕಪಟ ಕಬಟ, ಮಂಪು ಮಬ್ಬು
ಈ ದ್ವನಿಗಳಿಗೆ ಹಳೆಯ ಶಾಸನಗಳಲ್ಲಿ, ಹಳೆಯ ಸಾಹಿತ್ಯ ಕ್ರುತಿಗಳಲ್ಲಿ ಬೇಕಾದಶ್ಟು ಉದಾಹರಣೆಗಳು ಸಿಗುತ್ತವೆ. ದ್ವನಿ ಬದಲಾವಣೆ ಆಗಿದೆ ಎನ್ನುವುದನ್ನು ಗುರುತಿಸಲು ಸಾದ್ಯವಾದ ಮೇಲೆ ದ್ವನಿ ಬದಲಾವಣೆ ಪರಿಸರ ಮೊದಲಾದವನ್ನು ಸ್ಪಶ್ಟಪಡಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಅದ್ಯಯನಗಳು ಅವಶ್ಯ. ಆದರೆ ಇದು ಬಹು ಹಳೆಯದಾದ ಬೆಳವಣಿಗೆ. ಹಾಗಾಗಿ ಇಲ್ಲಿ ಹೆಚ್ಚು ಎಚ್ಚರ ಅವಶ್ಯ. ಬಾಶೆಯಲ್ಲಿ ಆಗಿರುವ ಹಲವಾರು ಬಗೆಯ ಬೆಳವಣಿಗೆಗಳು ಈ ಗೋಶ, ಅಗೋಶ ಬೆಳವಣಿಗೆ ನಂತರ ಆಗಿರುವುದರಿಂದ ನೇರವಾಗಿ ಈ ಬೆಳವಣಿಗೆಯನ್ನು ಅವಲೋಕಿಸಲು ಅನುವಾಗಲಿಕ್ಕಿಲ್ಲ. ಕನ್ನಡದ ಇತಿಹಾಸವನ್ನು, ಅತ್ಯಂತ ಹಳೆಯ ಬರಹಗಳನ್ನು ಓದುವಾಗ ಮತ್ತು ಅರ‍್ತ ಮಾಡಿಕೊಳ್ಳುವಾಗ ಈ ತಿಳುವಳಿಕೆ ಅತ್ಯಂತ ಅವಶ್ಯ.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.