ಕನ್ನಡದಾಗ ಬಿನ್ದು > ಬಿಂದು

Date: 30-04-2022

Location: ಬೆಂಗಳೂರು


'ಬಿಂದುವಿನ ಕಾಲಾಂತರದ ಬೆಳವಣಿಗೆಯನ್ನು ಗಮನಿಸಿದಾಗ ಕನ್ನಡಕ್ಕೆ ಲಿಪಿಯನ್ನು ಅಳವಡಿಸಿಕೊಂಡಾಗ ಸೊನ್ನೆಯನ್ನು ಪರಿಗಣಿಸಿರಲಿಲ್ಲ ಎಂಬುದು ತಿಳಿಯುತ್ತದೆ. ಆದರೆ, ಲಿಪಿಯ ಅಳವಡಿಕೆಯ ಕೆಲಕಾಲಕ್ಕೆ ಇದನ್ನು ಕನ್ನಡದೊಳಗೆ ಬಳಸಲು ಶುರುವಾಗಿದೆ ಎಂದೆನಿಸುತ್ತದೆ' ಎನ್ನುತ್ತಾರೆ ಲೇಖಕ, ಭಾಷಾ ವಿಶ್ಲೇಷಣಾಕಾರ ಡಾ.ಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ಕನ್ನಡದಲ್ಲಿ ಬಿಂದುವಿನ ಬಳಕೆಯ ಕುರಿತು ವಿಶ್ಲೇಷಿಸಿದ್ದಾರೆ.

ಕನ್ನಡಕ್ಕೆ ಲಿಪಿಯ ಅಳವಡಿಕೆ ಕ್ರಿಸ್ತಶಕದ ವೇಳೆಗೆ ಆಗಿದೆಯಾದರೂ, ಕನ್ನಡ ಲಿಪಿಯಲ್ಲಿ ಬಿಂದುವಿನ ಬಳಕೆ ಮೊದಲಿಂದ ಇರಲಿಲ್ಲ. ಬಿಂದುವನ್ನು ಇನ್ನುಳಿದ ವಿಸರ‍್ಗ, ಜಿಹ್ವಾಮೂಲೀಯ ಮತ್ತು ಉಪಾದ್ಮಾನೀಯ ಇವುಗಳ ಜೊತೆಗೆ ಅಯೋಗವಾಹಗಳೆಂದು ಸಂಸ್ಕ್ರುತದಲ್ಲಿ ವಿವರಿಸಲಾಗಿದೆ. ಕನ್ನಡದಲ್ಲಿ ಇವುಗಳಿಗೆ ಯೋಗವಾಹಗಳೆಂದು ಹೇಳಲಾಗಿದೆ. ಕನ್ನಡದ ಪಾರಂಪರಿಕ ವ್ಯಾಕರಣಗಳು ಹೆಚ್ಚೂಕಡಿಮೆ ಬಿಂದುವೊಂದನ್ನು ಹೊರತುಪಡಿಸಿ ಉಳಿದ ಮೂರು ಯೋಗವಾಹಗಳು ಕನ್ನಡದಲ್ಲಿ ಇಲ್ಲ ಎಂದು ಸ್ಪಶ್ಟವಾಗಿ ಹೇಳುತ್ತವೆ. ಹಾಗಾದರೆ, ಬಿಂದುವನ್ನು ಕನ್ನಡದಲ್ಲಿ ಇದೆ ಎಂದು ಹೇಳಿದಂತಾಗುತ್ತದೆ. ಬಿಂದು ಸಂಸ್ಕ್ರುತದಲ್ಲಿ ಉಚ್ಚರಣೆಯ ಬಾಗವಾಗಿ, ಸ್ವರವನ್ನು ಆಸರಿಸಿ ಉಚ್ಚಾರವಾಗುವಂತದ್ದು ಎಂದು ವಿವರಿಸಿದೆ. ಕನ್ನಡದಲ್ಲಿ ಬಿಂದುವಿನ ಸ್ವತಂತ್ರ ಉಚ್ಚರಣೆ ಬಗೆಗೆ ಯಾವುದೆ ವಿವರಣೆ ಇಲ್ಲ. ಬದಲಿಗೆ ಅದರ ಲಿಪಿರೂಪವನ್ನೆ ಬಳಸಿಕೊಂಡು ಬಿಂದುವನ್ನು ವಿವರಿಸಲಾಗುತ್ತದೆ. ಹಾಗಾದರೆ, ನಮಗೆ ದೊರೆಯುವ ವ್ಯಾಕರಣಗಳ ಕಾಲಕ್ಕೆ ಉಚ್ಚರಣೆಯಲ್ಲಿ ಇಲ್ಲದಿದ್ದರೂ ಬರವಣಿಗೆಯಲ್ಲಿ ಬಿಂದು ರೂಡಿಯಾಗಿದ್ದಿತು ಎಂಬುದು ಸ್ಪಶ್ಟವಾಗುತ್ತದೆ.

ಇನ್ನು ಕನ್ನಡದ ಆರಂಬದ ಬಿಂದುವಿನ ಬಳಕೆಯ ಕುರಿತು ತುಸು ಅವಲೋಕಿಸುವುದು ಅವಶ್ಯ. ಆಗ, ಅಂದಿನ ಕಾಲಕ್ಕೆ ಬಿಂದುವಿನ ಬಗೆಗೆ ಇದ್ದ ತಿಳುವಳಿಕೆ ಗಮನಕ್ಕೆ ಬರುತ್ತದೆ. ಅದರ ಬಳಕೆಯಲ್ಲಿ ಕಂಡುಬರುವ ಕಾಲಾಂತರದ ಬೆಳವಣಿಗೆಗಳು ಕನ್ನಡ ಲಿಪಿ ವ್ಯವಸ್ತೆಯ ಕಾಲಾಂತರದ ಬೆಳವಣಿಗೆಯನ್ನು ಅರಿತುಕೊಳ್ಳುವುದಕ್ಕೂ ಸಹಾಯಕವಾಗುತ್ತವೆ.

ಸದ್ಯ ಬಹುಮಂದಿ ವಿದ್ವಾಂಸರು ಒಪ್ಪಿಕೊಂಡಿರುವ ಕನ್ನಡದ ಹಳೆಯ ದೊರೆತ ಕಲ್ಬರಹ ಹಲ್ಮಿಡಿ ಶಾಸನವಾಗಿದೆ. ಇದರಲ್ಲಿ ಈ ಬಿಂದುವಿನ ಬಳಕೆ ಆಗಿದೆ. ಹಾಗಾಗಿ ತಕ್ಶಣಕ್ಕೆ ಬಿಂದು ಕನ್ನಡದಾಗ ಮೊದಲಿನಿಂದಲೂ ಬಳಕೆಯಲ್ಲಿದೆ ಎಂದು ಹೇಳುವುದಕ್ಕೆ ಸಾದ್ಯವಿದೆ. ಆದರೆ ಸೊನ್ನೆಯ ಬಳಕೆ ಹೇಗೆ ಮತ್ತು ಎಲ್ಲಿ ಆಗಿದೆ ಎಂಬುದನ್ನು ಗಮನಿಸಿದಾಗ ಬಿಂದುವಿನ ಬಳಕೆಗೆ ನಿರ‍್ದಿಶ್ಟ ಪರಿಸರ/ಗಳು ಇದ್ದ ಹಾಗಿದೆ ಎನಿಸದಿರದು. ಆನಂತರ ಅಯ್ದು, ಆರು, ಏಳು ಹೀಗೆ ಆರಂಬದ ಕೆಲ ಶತಮಾನಗಳ ಕಲ್ಬರಹಗಳನ್ನು ಗಮನಿಸಿದಾಗ ಈ ಸೊನ್ನೆಯ ಲಿಪಿಯ ಬಳಕೆ ಕ್ರಮೇಣವಾಗಿ ವಿಸ್ತರಿಸಿಕೊಳ್ಳುತ್ತಾ ಒಂದು ನಿರ‍್ದಿಶ್ಟತೆಯನ್ನ ಕಾಲಾಂತರದಲ್ಲಿ ಪಡೆದಯಕೊಂಡಿರುವುದು ತಿಳಿಯುತ್ತದೆ.

ಈಗ ಮೊದಮೊದಲ ಕೆಲವು ಶತಮಾನಗಳಲ್ಲಿನ ಬಿಂದುವಿನ ಲಿಪಿಯ ಬಳಕೆಯನ್ನು ಗಮನಿಸಬಹುದು. ಅಯ್ದನೆಯ ಶತಮಾನದ ಕಲ್ಬರಹಗಳಲ್ಲಿ ಸೊನ್ನೆಯ ಬಳಕೆಯು ಸಂಸ್ಕ್ರುತ ಮತ್ತು ಕನ್ನಡದ ಪದಗಳಲ್ಲಿ ಬಳಕೆಯಾಗಿದೆ. ಸಂಸ್ಕ್ರುತದ ಪದಗಳಲ್ಲಿ ಇದು ಪದಕೊನೆಯಲ್ಲಿ (ದತ್ತಂ) ಮತ್ತು ಪದನಡುವೆ (ಗುಣಮಧುರಾಂಕ) ಬಳಕೆಯಾಗುತ್ತದೆ. ಆದರೆ ಕನ್ನಡದ ಶಾಸನಗಳಲ್ಲಿ ಬಿಂದು ಸಾಮಾನ್ಯವಾಗಿ ಪದಕೊನೆಯಲ್ಲಿ ಮಾತ್ರ ಬಳಕೆಯಾಗಿದೆ (ಕೋಲಂ, ಪಡೆದಂ). ಇನ್ನಿ(oತಿ)ದಾನ್ ಎಂಬ ಒಂದು ಶಬ್ದ ಹಲ್ಮಿಡಿ ಶಾಸನದ ಮುದ್ರಿತ ಪಟ್ಯಗಳಲ್ಲಿ ಕಾಣಿಸುತ್ತದೆಯಾದರೂ ಕಂಸದೊಳಗೆ ಕೊಟ್ಟಿರುವುದು ಶಾಸನ ಓದಿದ ವಿದ್ವಾಂಸರ ಊಹೆಯಾಗಿರುತ್ತದೆ, ಅಲ್ಲಿ ಆ ಅಕ್ಶರ ಓದಲು ತುಸು ತ್ರಾಸದಾಯಕವಾಗಿದೆ ಎಂಬುದು ಸ್ಪಶ್ಟ. ಹೆಚ್ಚೂ ಕಡಿಮೆ ಅಯ್ದನೆಯ ಶತಮಾನದಲ್ಲಿ ಕನ್ನಡದ ಪದಗಳಲ್ಲಿ ಬಿಂದು ಪದಕೊನೆಯಲ್ಲಿ ಮಾತ್ರ ಬಳಕೆಯಾಗಿದೆ. ಸಂಸ್ಕ್ರುತದ ಪದಗಳಲ್ಲಿ ಪದಕೊನೆಯಲ್ಲಿ ಮತ್ತು ಪದನಡುವೆ ಸಹಜವಾಗಿ ಬಳಕೆಯಾಗಿದೆ. ಇನ್ನು ಆರನೆಯ ಶತಮಾನಕ್ಕೆ ಬಂದರೆ ಕನ್ನಡದ ಪದಗಳಲ್ಲಿ ಹೆಚ್ಚಾಗಿ ಪದಕೊನೆಯಲ್ಲಿ ಬಿಂದುವಿನ ಬಳಕೆ ಕಂಡುಬರುತ್ತದೆ (ಮಳ್ಳೆಯರುಂ, ಅಕ್ಕುಂ). ಸಂಸ್ಕ್ರುತದ ಪದಗಳಲ್ಲಿ ಈ ಮೊದಲಿನಂತೆ ಪದನಡುವಲ್ಲೂ ಪದಕೊನೆಯಲ್ಲೂ ಬಿಂದು ಬಳಕೆಯಾಗುತ್ತಿದೆ. ಇದೆ ಕ್ರಮ ಏಳನೆಯ ಶತಮಾನದ ಶಾಸನಗಳಲ್ಲಿಯೂ ಹೆಚ್ಚೂಕಮ್ಮಿ ಮುಂದುವರೆಯುತ್ತದೆ (ಪಿರಿಗುಂ, ಎರಡುಂ, ಉಣ್ವೋರುಂ).

ಇಲ್ಲಿ ಕನ್ನಡ ಬರಹದ ಇನ್ನೊಂದು ವಿಚಾರವನ್ನು ಮಾತಾಡಬೇಕು. ಇಂದಿನ ಕನ್ನಡದ ಬರಹದಲ್ಲಿ ಸಾಮಾನ್ಯವಾಗಿ ಬಿಂದು ಆಯಾ ವರ‍್ಗಗಳ ಅನುನಾಸಿಕ ದ್ವನಿಯನ್ನು ಪ್ರತಿನಿದಿಸಿ ಬರುತ್ತದೆ. ಅಂದರೆ, ಕ್ರಮವಾಗಿ ‍‍ಙ್, ಞ್, ಣ್, ನ್ ಮತ್ತು ಮ್ ಇವು ಆಯಾ ವರ‍್ಗದ ವ್ಯಂಜನಗಳು ಅಂದರೆ ಕ್ರಮವಾಗಿ ಕ್/ಗ್, ಚ್/ಜ್, ಟ್/ಡ್, ತ್/ದ್ ಮತ್ತು ಪ್/ಬ್ ದ್ವನಿಗಳು ಬಂದಾಗ ಬರುತ್ತದೆ. ಅವರ‍್ಗೀಯಗಳ ಜೊತೆಯಲ್ಲಿ ಸಾಮಾನ್ಯವಾಗಿ ಅನುನಾಸಿಕ ಮ್ ಬಳಕೆಯಾಗುತ್ತದೆ. ಕನ್ನಡದಲ್ಲಿ ಬರಹ ಮೊದಲಾದಾಗ ಈ ಪರಿಸರದಲ್ಲಿ ಸೊನ್ನೆಯ ಬಳಕೆಯಾಗುತ್ತಿರಲಿಲ್ಲ. ಬದಲಿಗೆ ಅಲ್ಲೆಲ್ಲ ಆಯಾ ವರ‍್ಗೀಯಗಳ ಅನುನಾಸಿಕ ದ್ವನಿಯ ಲಿಪಿಯೆ ಬಳಕೆಯಾಗುತ್ತಿತ್ತು, ಅಂದರೆ ಕ್ರಮವಾಗಿ ‍‍ಙ್, ಞ್, ಣ್, ನ್ ಮತ್ತು ಮ್ ದ್ವನಿಗಳ ಲಿಪಿಗಳು. ಕೆಲವು ಪ್ರಯೋಗಗಳನ್ನು ಇಲ್ಲಿ ಗಮನಿಸಬಹುದು, ಅಯ್ದನೆ ಶ. ಅದಾನಳಿವೊನ್ಗೆ, ಸೞ್ಬಙ್ಗದರ್, ಆರನೆ ಶ. ಮಗನ್ದಿರ್, ಕುಣ್ಡಿನದೊಳ್, ಏಳನೆ ಶ. ತುನ್ತಕದ, ಇಮ್ಬಿನಿನ್, ಎಂಟನೆ ಶ. ಆಳ್ವನ್ದು, ಉಣ್ಡೊಡೆ, ಒಂಬತ್ತನೆ ಶ. ತುಱುಗೊಣ್ಡಲ್ಲಿ, ಇವಙ್ಗೆ, ಹತ್ತನೆ ಶ. ಬನ್ದಾನ್ತಿರೆ, ಎಣ್ಬತ್ತೇೞನೆಯ. ಈ ಅನುನಾಸಿಕ ದ್ವನಿಗಳ ಲಿಪಿಗಳ ಪ್ರಯೋಗ ಕನ್ನಡ ಪದಗಳಲ್ಲಿ ಮಾತ್ರವಲ್ಲದೆ ಸಂಸ್ಕ್ರುತದಿಂದ ಎರವಲು ಪಡೆದ ಪದಗಳಲ್ಲಿಯೂ ಸಹಜವಾಗಿ ಬಳಕೆಯಾಗುತ್ತಿತ್ತು. ಈ ಪ್ರಯೋಗಗಳನ್ನು ಗಮನಿಸಿ, ಅಯ್ದನೆ ಶ. ಕದಮ್ಬನ್, ಅನಿನ್ದ್ಯಗುಣನ್, ಆರನೆ ಶ. ಗನ್ಧ, ಪಞ್ಚ, ಏಳನೆ ಶ. ಅ‍ಙ್ಗಾದಿ, ಸಮ್ಪನ್ನ ಎಂಟನೆ ಶ. ದೇವೇನ್ದ್ರ, ಮಣ್ಟಪ, ಒಂಬತ್ತನೆ ಶ. ನರಸಿಙ್ಗಯ್ಯ, ಸಙ್ಕ್ರಾನ್ತಿ, ಹತ್ತನೆ ಶ. ಲಾಞ್ಚನ, ಸಮ್ಮನ್ದಂ.

ಹೀಗೆ ಅನುನಾಸಿಕ ದ್ವನಿಗಳ ಲಿಪಿರೂಪವನ್ನೆ ಸಹಜವಾಗಿ ಬರೆಯಲಾಗುತ್ತಿತ್ತು. ಇದನ್ನು ಕನ್ನಡ ವ್ಯಾಕರಣಗಳು ಗುರುತಿಸಿವೆ ಕೂಡ. ಇಲ್ಲಿ ಉಲ್ಲೇಕಿಸಬೇಕಾದ ಇನ್ನೊಂದು ವಿಚಾರವೆಂದರೆ ಹಳಗನ್ನಡದಲ್ಲಿ ಬಹುತೇಕ ವ್ಯಂಜನಕೊನೆ ಪದಗಳು ಇದ್ದವು. ಈ ವ್ಯಂಜನಕೊನೆ ಹೆಚ್ಚಿನ ಕಡೆ ಉಚ್ಚರಣೆಯಲ್ಲಿ ನ್ ಆಗಿದ್ದರೂ ಸಾಮಾನ್ಯವಾಗಿ ಬರವಣಿಗೆಯಲ್ಲಿ ಮ್ ಎಂದು ಪರಿಗಣಿಸಿದಂತಿದೆ. ಇದಕ್ಕೆ ಹಲವಾರು ಕಾರಣಗಳು ಇವೆ. ಮೊದಮೊದಲ ಶಾಸನಗಳಲ್ಲಿ ಪದಕೊನೆಗೆ ನ್ ಬಳಕೆಯಾಗುತ್ತದೆ, ಇನಿಯನ್, ಚೆಲವನ್, ಮಕನ್. ಸಂಸ್ಕ್ರುತದ ಪದಗಳಲ್ಲಿ ನ್, ಕದಂಬಪನ್, ಸಂಪನ್ನನ್ ಮತ್ತು ಮ್ ಪಲ್ಲವರಂ, ದತ್ತಂ ಕಂಡುಬರುತ್ತವೆ. ಪದಕೊನೆಯ ಮ್ ಮತ್ತು ನ್ ವ್ಯಂಜನಗಳ ವಿಚಾರದಲ್ಲಿ ಈ ಗೊಂದಲ ಸಂಸ್ಕ್ರುತದಲ್ಲಿಯೂ ಇದ್ದಹಾಗಿದೆ.

ಸಂಸ್ಕ್ರುತದ ಪದಗಳಲ್ಲಿ ಪದಕೊನೆಯಲ್ಲಿ ಬರುವ ಮ್ ಇದನ್ನು ಪ್ರತಿನಿದಿಸಲು ಬಿಂದುವಿನ ಬಳಕೆ ಸಹಜವಾಗಿತ್ತು. ಇದು ಪದಕೊನೆಯ ಅನುನಾಸಿಕವನ್ನು ಪ್ರತಿನಿದಿಸುವುದಕ್ಕೆ ಬಿಂದುವಿನ ಬಳಕೆ ಎಂದು ಬೆಳೆದು ಕನ್ನಡದ ಪದಗಳಲ್ಲಿಯೂ ಪದಕೊನೆಯಲ್ಲಿ ಬಳಕೆಯಾಗಲು ಶುರುವಾಗುತ್ತದೆ, ಮೂಱಿವಳ್ಳಿಉಂ, ಪಡೆದಂ, ಪಾೞುಂ.

ಕನ್ನಡದಲ್ಲಿ ಪದದ ಕೊನೆಗೆ ಪ್ರತ್ಯಯಗಳು ಬಂದು ಸೇರುವಾಗ ಅನುನಾಸಿಕ ದ್ವನಿಗಳು ಬಂದಾಗ ಮೊದಮೊದಲು ಆ ಅನುನಾಸಿಕ ದ್ವನಿಯ ಲಿಪಿಯು ಬಳಕೆ ಆಗಿದೆ, ಸುತನ್ಗೆ = ಸುತನ್+-ಗೆ, ಅದಾನಳಿವೊನ್ಗೆ = ಅದಾನ್+ಅಳಿವೊನ್+-ಗೆ. ಇಂತಾ ಪರಿಸರಗಳಲ್ಲಿ ಅನುನಾಸಿಕದ ಲಿಪಿರೂಪದ ಬದಲಿಗೆ ಸೊನ್ನೆಯ ಬಳಕೆ ಎಂಟನೆ ಶತಮಾನದಿಂದ ಕನ್ನಡ ಕಲ್ಬರಹಗಳಲ್ಲಿ ಶುರುವಾಗುತ್ತದೆ. ಸಲಿಸುವೊಂಗಾ = ಸಲಿಸುವೊನ್ +-ಗೆ +-ಆ, ಕೇತಯ್ಯಂಗೆ = ಕೇತಯ್ಯನ್ +-ಗೆ. ಈ ಹೀಗೆ ಸೊನ್ನೆಯು ಈ ಪರಿಸರದಲ್ಲಿಯೂ ಜಾಗವನ್ನು ಮಾಡಿಕೊಂಡಿತು.

ಅಂದರೆ, ಸೊನ್ನೆಯ ಬಳಕೆಯು ಮೊದಲು ಸಂಸ್ಕ್ರುತದ ಪದಗಳ ಕೊನೆಯಲ್ಲಿ ಸಹಜವಾಗಿ ಮತ್ತು ಪದನಡುವೆ ಕೆಲವೊಮ್ಮೆ ಬಳಕೆಯಾಗುತ್ತಿತ್ತು. ಕ್ರಮೇಣ ಅದು ಸಂಸ್ಕ್ರುತ ಪದಗಳ ಕೊನೆಯಲ್ಲಿ ಮತ್ತು ನಡುವೆಯೂ ಜಾಗವನ್ನು ಮಾಡಿಕೊಂಡಿತು. ಇದು ಮೊದಲಿಗೆ ಕನ್ನಡದ ಪದಗಳ ಕೊನೆಯಲ್ಲಿ ಬರುವ ಅನುನಾಸಿಕವನ್ನು ಬದಲಿಸಿ ಬಳಕೆಯಾಗಲು ಶುರುವಾಯಿತು. ಆನಂತರ, ಪದಕೊನೆಯ ಅನುನಾಸಿಕವು ತನ್ನ ಮುಂದಿನ ಪ್ರತ್ಯಯ ರೂಪದೊಂದಿಗೆ ಸಂದಿಯಾಗುವ ಜಾಗದಲ್ಲಿಯೂ ಸೊನ್ನೆಯ ಬಳಕೆ ಮೊದಲಾಯಿತು. ಪದ ಮತ್ತು ಪ್ರತ್ಯಯಗಳ ನಡುವೆ ಸಂದಿಯಾಗುವಾಗ ಅನುನಾಸಿಕವನ್ನು ಬದಲಿಸಿ ಸೊನ್ನೆ ಬಳಕೆಯಾದ ಹಾಗೆ ಎರಡು ಪದಗಳ ನಡುವಿನ ಸಂದಿಯಲ್ಲಿಯೂ ಹೀಗೆ ಸೊನ್ನೆಯ ಬಳಕೆ ಮೊದಲಾಗಿದೆ, ವಿನ್ನಪ್ಪಂಗೆಯ್ದೊಡೆ = ವಿನ್ನಪಂ(ಪ್ಪಂ)+ಕೆಯ್ದೊಡೆ. ಇದು ಪದದ ನಡುವಿನ ಜಾಗವನ್ನು ಸೊನ್ನೆ ಆವರಿಸಿಕೊಂಡಿದ್ದಕ್ಕೆ ಆದಾರವಾಯಿತು. ಇನ್ನೂ ಮುಂದುವರೆದು ಆನಂತರ ಕ್ರಮೇಣ ಪದನಡುವಿನ ಅನುನಾಸಿಕವನ್ನೂ ಬದಲಿಸಿ ಸೊನ್ನೆಯ ಬಳಕೆ ಮೊದಲಾಯಿತು, ಪಾಮ್ಬು>ಪಾಂಬು, ದಾಣ್ಟು>ದಾಂಟು. ಹೀಗೆ ಸೊನ್ನೆಯು ಕನ್ನಡ ಬರಹದಲ್ಲಿ ಕಾಲಾಂತರದಲ್ಲಿ ಬೆಳೆದು ಬಹುಕಾಲ ಎರಡೂ ರೂಪಗಳ ಬಳಕೆ ಮುಂದುವರೆದು, ಆದುನಿಕಪೂರ‍್ವ ಕಾಲಕ್ಕೆ ಅನುನಾಸಿಕ ದ್ವನಿಗಳ ಲಿಪಿರೂಪಗಳ ಬಳಕೆ ಹೆಚ್ಚೂಕಡಿಮೆ ಇಲ್ಲವಾಗಿ ಅಲ್ಲೆಲ್ಲ ಸೊನ್ನೆಯ ಬಳಕೆ ಸ್ತಿರಗೊಂಡಿತು. ಹೀಗೆ ಕನ್ನಡದ ಬಿಂದುವಿನ ಚರಿತ್ರೆ ವಿವಿದ ಹಂತಗಳನ್ನು ಒಳಗೊಂಡು ಬೆಳೆದಿದೆ.

ಬಿಂದುವಿನ ಈ ಕಾಲಾಂತರದ ಬೆಳವಣಿಗೆಯನ್ನು ಗಮನಿಸಿದಾಗ ಕನ್ನಡಕ್ಕೆ ಲಿಪಿಯನ್ನು ಅಳವಡಿಸಿಕೊಂಡಾಗ ಸೊನ್ನೆಯನ್ನು ಪರಿಗಣಿಸಿರಲಿಲ್ಲ ಎಂಬುದು ತಿಳಿಯುತ್ತದೆ. ಆದರೆ, ಲಿಪಿಯ ಅಳವಡಿಕೆಯ ಕೆಲಕಾಲಕ್ಕೆ ಇದನ್ನು ಕನ್ನಡದೊಳಗೆ ಬಳಸಲು ಶುರುವಾಗಿದೆ ಎಂದೆನಿಸುತ್ತದೆ. ಕ್ರಿಸ್ತಶಕದ ಆರಂಬದ ಒಂದೆರಡು ನೂರು ವರುಶಗಳ ನಂತರದ ಕಾಲದಲ್ಲಿಯೆ ಈ ಬಗೆಯ ಬಳಕೆ ಮೊದಲಾಗಿರುವ ಸಾದ್ಯತೆ ಇದೆ.

ಈ ಅಂಕಣದ ಹಿಂದಿನ ಬರೆಹ:
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

ಕನ್ನಡದಾಗ ದ್ವನಿವಿಗ್ನಾನ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...