Date: 02-07-2022
Location: ಬೆಂಗಳೂರು
“ಇಂದು ಹಲವು ಕನ್ನಡಗಳು ಸಾವಿರಕ್ಕೂ ಹೆಚ್ಚು ವರುಶಗಳ ಬದುಕಿನ ಮತ್ತು ಸಮಾಜದ ಅನುಬವವನ್ನು ಗಟ್ಟಿಗೊಳಿಸಿಕೊಂಡು ಬಳಕೆಯಲ್ಲಿವೆ, ಬದುಕಿವೆ. ಈ ಒಳನುಡಿಗಳನ್ನು ಅದ್ಯಯನ ಮಾಡುವುದು ಮಾತ್ರವಲ್ಲದೆ ಅವುಗಳ ಬಳಕೆಯನ್ನು ಗವುರವಿಸುವುದು ಅವಶ್ಯ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಕನ್ನಡದ ಒಳನುಡಿಗಳ ಬಗ್ಗೆ ಚರ್ಚಿಸಿದ್ದಾರೆ.
ಕರ‍್ನಾಟಕ ರಾಜ್ಯವನ್ನು ಇಂದಿನ ರಾಜಕೀಯ, ಬೂಗೋಳಿಕ ಗಡಿಯಲ್ಲಿ ಇಟ್ಟು ಅರ‍್ತ ಮಾಡಿಕೊಳ್ಳುವಾಗ ಸಹಜವಾಗಿಯೆ ಹಲವು ತಪ್ಪು ತಿಳುವಳಿಕೆಗಳು ಆಗುತ್ತವೆ. ಸಾವಿರಾರು ವರುಶಗಳ ಕಾಲದಲ್ಲಿ ಆಗಿರುವ ಬೆಳವಣಿಗೆಗಳನ್ನು ಕೆಲವೆ ವರುಶಗಳ ಹಿಂದೆ ಆಗಿರುವ ಗಡಿಗಳೊಂದಿಗೆ ಅಂಟಿಸಿಕೊಂಡು ನೋಡುವಾಗ ಮತ್ತು ಇಂದಿನ ತಿಳುವಳಿಕೆಯಲ್ಲಿ ಅರ‍್ತ ಮಾಡಿಕೊಳ್ಳುವ ಪ್ರಯತ್ನ ಮಾಡುವಾಗ ಈ ಸಮಸ್ಯೆ ಸಹಜ.
ಕರ‍್ನಾಟಕವನ್ನು, ಕನ್ನಡವನ್ನು ಅರ‍್ತ ಮಾಡಿಕೊಳ್ಳುವಾಗ ಉತ್ತರ-ದಕ್ಶಿಣ ಎಂದು ವಿವರಿಸುವುದು ಸಾಮಾನ್ಯವಾಗಿ ಕಾಣಿಸುತ್ತದೆ. ವಾಸ್ತವದಲ್ಲಿ, ಇಂದಿನ ಕರ‍್ನಾಟಕವನ್ನಾಗಲಿ, ಕನ್ನಡವನ್ನಾಗಲಿ ಉತ್ತರ-ದಕ್ಶಿಣವಾಗಿ ಅರಿತುಕೊಳ್ಳುವುದು ಕಶ್ಟ. ಬದಲಿಗೆ ಇವನ್ನು ಪೂರ‍್ವ-ಪಶ್ಚಿಮವಾಗಿ ಅರಿತುಕೊಳ್ಳುವುದು ಹೆಚ್ಚು ಸಹಜವೆನಿಸಬಹುದು.
ಕನ್ನಡದ ಒಳನುಡಿಗಳನ್ನು ಗಮನಿಸಿದಾಗ ಹಲವಾರು ಒಳನುಡಿಗಳು ಇಂದು ಕಾಣಿಸುತ್ತವೆ. ತುಂಬಾ ಸ್ತೂಲವಾಗಿ ಅವಲೋಕಿಸಿದಾಗ ಈ ಒಳನುಡಿಗಳನ್ನು ಮೂರ‍್ನಾಲ್ಕು ಗುಂಪುಗಳಾಗಿ ಮಾಡಲು ಸಾದ್ಯವಾಗಬಹುದು. ಇಂದಿನ ಉತ್ತರ ಕರ‍್ನಾಟಕ, ಮಹಾರಾಶ್ಟ್ರ, ತೆಲಂಗಾಣ ಪರಿಸರಗಳಲ್ಲಿ ಬಳಕೆಯಲ್ಲಿರುವ ಕನ್ನಡಗಳು ಒಂದು ಗುಂಪಾಗುತ್ತವೆ, ಇವುಗಳನ್ನು 'ಬಡಗನ್ನಡ' ಎಂದೆನ್ನಬಹುದು. ಇಂದಿನ ದಕ್ಶಿಣ ಕರ‍್ನಾಟಕ, ಆಂದ್ರಪ್ರದೇಶ, ಕೇರಳ ಪರಿಸರಗಳಲ್ಲಿ ಇರುವ ಕನ್ನಡಗಳನ್ನು ಇನ್ನೊಂದು ಗುಂಪು ಮಾಡಲು ಸಾದ್ಯ. ಇವುಗಳನ್ನು 'ತೆಂಗನ್ನಡ' ಎಂದೆನ್ನಬಹುದು. ಇನ್ನು ಕರಾವಳಿಯ ಗುಡ್ಡಸಾಲಿನಲ್ಲಿ ಕಂಡುಬರುವ ಕನ್ನಡಗಳು ಇನ್ನೊಂದು ಗುಂಪು ಆಗುತ್ತವೆ. ಇವುಗಳನ್ನು ‘ಪಡುಗನ್ನಡ’ ಎಂದೆನ್ನಬಹುದು. ಇವುಗಳಲ್ಲದೆ ನೀಲಗಿರಿ ಪರಿಸರದಲ್ಲಿ ಹಲವಾರು ಕನ್ನಡಗಳು ಇವೆ. ಈ ಕನ್ನಡಗಳನ್ನು 'ನೀಲಗಿರಿ ಕನ್ನಡ' ಎಂದು ಕರೆಯಬಹುದು. ಬಹುತೇಕ ಕನ್ನಡಗಳು ಈ ನಾಲ್ಕು ಗುಂಪುಗಳಲ್ಲಿ ಸೇರಿಕೊಳ್ಳುತ್ತವೆ. ಈ ಗುಂಪುಗಳು ಯಾವಾಗ ಮೊದಲು ಒಡೆದುಕೊಳ್ಳುವುದಕ್ಕೆ ಶುರುವಾಗಿರಬಹುದು ಎಂದು ತಿಳಿದುಕೊಳ್ಳುವುದು ಅವಶ್ಯ.
ಕನ್ನಡದ ಈ ಒಳನುಡಿಗಳ ಒಡೆತಕ್ಕೆ ಬಹು ಸುದೀರ‍್ಗ ಇತಿಹಾಸವಿರಲೂ ಸಾದ್ಯ. ಮೂಲಕನ್ನಡದ ಹಂತದಲ್ಲಿಯೆ ಕೆಲಕೆಲವು ಬಿನ್ನತೆಗಳು ಇದ್ದಿರಲೂಬಹುದು. ಅವುಗಳೆ ಕ್ರಮೇಣ ಒಳನುಡಿ ಒಡೆತಗಳಾಗಿ ಬೆಳೆದಿವೆ. ಮೊದಮೊದಲು ಇವು ಎರಡು-ಮೂರು ಇಲ್ಲವೆ ಮೂರು-ನಾಲ್ಕು ಗುಂಪುಗಳಾಗಿ ಒಡೆದುಕೊಂಡಿರಬಹುದು. ಆನಂತರ ಈ ಗುಂಪುಗಳಲ್ಲಿ ಮತ್ತೆ ಹಲವು ಒಳನುಡಿಗಳು ಬೆಳೆದಿವೆ. ಈಗ ಸದ್ಯ ನಮಗೆ ದೊರೆಯುವ ಕಲಬುರಗಿ ಕನ್ನಡ, ಮಸ್ಕಿ ಕನ್ನಡ, ಕೋಲಾರ ಕನ್ನಡ, ಚಾಮರಾಜನಗರ ಕನ್ನಡ ಎಂದು ಗುರುತಿಸುವ ಕನ್ನಡಗಳಿಗೆ ಕಡಿಮೆ ಎಂದರೂ ಸಾವಿರದಶ್ಟು ವರುಶಗಳ ಹಿಂದಿನಿಂದಲೆ ಒಡೆತಗಳನ್ನು ಗುರುತಿಸಲು ಸಾದ್ಯವಿದೆ. ಈ ಕನ್ನಡಗಳ ಒಡೆತ ಮತ್ತು ಬೆಳವಣಿಗೆಯ ಬಗೆಗೆ ಒಂದಶ್ಟು ಇಲ್ಲಿ ತಿಳಿದುಕೊಳ್ಳಬಹುದು.
ಕೆಳಗೆ ಕಲಬುರಗಿ ಕನ್ನಡ, ಶಿಶ್ಟಕನ್ನಡ ಮತ್ತು ಪೂರ‍್ವದ ಹಳೆಗನ್ನಡದ (ಎಂದು ಕರೆಯುವ ಆರೇಳನೆ ಶತಮಾನದ ಕನ್ನಡ) ವಾಕ್ಯದಲ್ಲಿ ಕ್ರಿಯಾಪದದ ಮೇಲೆ ಬರುವ ಪ್ರತಮ ಪುರುಶ ಪ್ರತ್ಯಯಗಳನ್ನು ಕೊಟ್ಟಿದೆ, ಗಮನಿಸಿ
ಕ್ರಿಯಾಪದ |
ಬೂತಕಾಲ |
ಪ್ರತಮ ಪುರುಶ |
ಏಕವಚನ ಪುಲ್ಲಿಂಗ |
ಕ್ರಿಯಾಪದರೂಪ |
ಪೂರ‍್ವದ ಹಳಗನ್ನಡ |
ಕೊಲ್ |
+ ದ್ |
+ ಆನ್ |
ಕೊಂದಾನ್ |
ಕಲಬುರಗಿ ಕನ್ನಡ |
ಕೊಲ್/ಕೊಲ್ಲು |
+ ದ್ |
+ ಆನ್ |
ಕೊಂದಾನ್/ನ/ನು |
ಶಿಶ್ಟಕನ್ನಡ |
ಕೊಲ್ಲು |
+ ದ್ |
+ ಅನು |
ಕೊಂದನು |
ಕರಾವಳಿಯ ಕುಂದಾಪ್ರ ಕನ್ನಡದ ಈ ರೂಪವನ್ನು ಗಮನಿಸಿ
ಪೂರ‍್ವದ ಹಳಗನ್ನಡ |
ಬರ್/ಬರು |
+ ಪ್ |
+ ಅನ್ |
ಬರ‍್ಪನ್ |
ಕುಂದಾಪ್ರ ಕನ್ನಡ |
ಬರ್/ಬರು |
+ ಪ್ |
+ ಅ |
ಬಪ್ಪ |
ಶಿಶ್ಟಕನ್ನಡ |
ಬರ್/ಬರು |
+ ವ್ |
+ ಅನು |
ಬರುವನು |
ಮೊದಲ ಉದಾಹರಣೆಯ ಸಂದರ‍್ಬದಲ್ಲಿ ಆರೇಳನೆ ಶತಮಾನದಲ್ಲಿ ಬಳಕೆಯಲ್ಲಿದ್ದ ಕ್ರಿಯಾಪದದ ಮೇಲೆ ಬರುವ ಪ್ರತಮ ಪುರುಶದ ಪ್ರತ್ಯಯವು ಉದ್ದಸ್ವರ ರೂಪ -ಆನ್ ಆಗಿದೆ. ಶಿಶ್ಟಕನ್ನಡದಲ್ಲಿ ಇದು -ಅನ್ ಎಂಬ ಗಿಡ್ಡಸ್ವರ ರೂಪವಾಗಿದೆ. ಕಲಬುರಗಿ ಕನ್ನಡದಲ್ಲಿ ಇಂದಿಗೂ ಉದ್ದಸ್ವರ ರೂಪವು ಬಳಕೆಯಲ್ಲಿದೆ. ಅಂದರೆ ಆರೇಳನೆ ಶತಮಾನದಲ್ಲಿ ಬಳಕೆಯಲ್ಲಿದ್ದ ರೂಪವು ಕಲಬುರಗಿ ಕನ್ನಡದಾಗ ಇಂದಿಗೂ ಬಳಕೆಯಲ್ಲಿದೆ, ಕಲಬುರಗಿ ಸುತ್ತಲಿನ ಕೆಲವು ಕನ್ನಡಗಳನ್ನು ಬಿಟ್ಟರೆ ಉಳಿದೆಲ್ಲ ಕನ್ನಡಗಳಲ್ಲಿ ಮತ್ತು ಶಿಶ್ಟಕನ್ನಡದಲ್ಲಿ ಈ ರೂಪ ಬದಲಾಗಿದೆ. ಎರಡನೆ ಉದಾಹರಣೆಯ ಸಂದರ‍್ಬದಲ್ಲಿಯೂ ಹೀಗೆ. ಕರಾವಳಿ ಬಾಗದ ಕುಂದಾಪ್ರ ಕನ್ನಡದಾಗ 'ಬಪ್ಪ' ಎಂಬ ರೂಪ ಬಳಕೆಯಲ್ಲಿದೆ. ಇದರ ಶಿಶ್ಟಕನ್ನಡದ ಸಂವಾದಿ ರೂಪ 'ಬರುವನು' ಎಂದಾಗಿದೆ. ಆದರೆ, ಕುಂದಾಪ್ರ ಕನ್ನಡಕ್ಕೆ ಹತ್ತಿರವಾದ 'ಬರ‍್ಪನ್' ಎಂಬ ರೂಪವು ಆರೇಳನೆ ಶತಮಾನದಲ್ಲಿ ಕನ್ನಡದಲ್ಲಿ ಬಳಕೆಯಲ್ಲಿದ್ದಿತು. ಆರೇಳನೆ ಶತಮಾನದಲ್ಲಿ ವಿಜಾತಿ ಒತ್ತಕ್ಕರ ಇದ್ದದ್ದು ಸಜಾತಿ ಒತ್ತಕ್ಕರವಾಗಿ ಕುಂದಾಪ್ರ ಕನ್ನಡದಲ್ಲಿ ಬಳಕೆಯಲ್ಲಿದೆ. ಅಂದರೆ, ಅಂದಿನಿಂದ ಈ ರೂಪವು ಕುಂದಾಪ್ರ ಕನ್ನಡದಲ್ಲಿ ಉಳಿದುಕೊಂಡು ಬಂದಿದ್ದರೆ ಉಳಿದ ಕನ್ನಡಗಳಲ್ಲಿ ಮತ್ತು ಶಿಶ್ಟಕನ್ನಡದಲ್ಲಿ ಇದು ಬದಲಾಗಿದೆ.
ಇಂತಾ ಹಲವಾರು ಉದಾಹರಣೆಗಳು ವಿವಿದ ಕನ್ನಡಗಳಲ್ಲಿ ಸಿಗುತ್ತವೆ. ಅಂದರೆ ಆರೇಳನೆ ಶತಮಾನದಲ್ಲಿ ಕೆಲವು ಬಳಕೆಯಲ್ಲಿದ್ದ ರೂಪಗಳು ಇತಿಹಾಸಿಕ ಬೆಳವಣಿಗೆಯಲ್ಲಿ ಹಲವು ಕನ್ನಡಗಳಲ್ಲಿ ಬದಲಾಗಿದ್ದರೆ ಇನ್ನು ಕೆಲವು ಕನ್ನಡಗಳಲ್ಲಿ ಮಾತ್ರ ಉಳಿದುಕೊಂಡಿವೆ. ಅಂದರೆ, ಅಶ್ಟು ಹಿಂದಿನಿಂದಲೆ ಕೆಲಕೆಲ ಒಳನುಡಿಗಳು ಉಳಿದ ಒಳನುಡಿಗಳೊಂದಿಗೆ ಬಿನ್ನವಾದ ಬೆಳವಣಿಗೆಗಳನ್ನು ಬೆಳೆಸಿಕೊಂಡಿವೆ. ಅಂದರೆ, ಅಶ್ಟು ಹಿಂದಿನಿಂದಲೆ ಕನ್ನಡದಲ್ಲಿ ಒಳನುಡಿಗಳ ಒಡೆತ ಶುರುವಾಗಿದೆ. ಇದು ಕನ್ನಡ ಬಾಶೆಯ ಮಾತುಗ ಸಮುದಾಯ ಎಶ್ಟು ವ್ಯಾಪಕವಾದ ಬಾಶಾ ವ್ಯವಹಾರ ನಡೆಸಿದೆ ಎಂಬುದನ್ನು ಕನ್ನಡಿಸುತ್ತದೆ. ಸಹಜವಾಗಿಯೆ ಹೆಚ್ಚು ಸಾಮಾಜಿಕ ವ್ಯವಹಾರವು ಬಾಶೆಯಲ್ಲಿ ಹೆಚ್ಚು ಬದಲಾವಣೆಗೆ ಕಾರಣವಾಗುತ್ತದೆ.
ಮೇಲೆ ಹೇಳಿದ ಗುಂಪುಗಳ ಒಡೆತ ಮೊದಲು ಶುರುವಾಗಿ ಆನಂತರ ಅದು ಒಂದು ಹಂತದ ಬೆಳವಣಿಗೆಯನ್ನು ಪಡೆದುಕೊಂಡ ಬಳಿಕ ಮತ್ತೆ ಅದರೊಳಗೆ ಹಲವು ಕನ್ನಡಗಳು ಬಿನ್ನವಾಗುತ್ತ ಬೆಳೆದಿವೆ. ಗುಂಪುಗಳ ಒಡೆತಕ್ಕೆ ಇನ್ನೂ ಸುದೀರ‍್ಗವಾದ ಇತಿಹಾಸವಿರಲೂ ಸಾಕು. ಈ ಒಳನುಡಿಗಳ ಒಡೆತವನ್ನು ಈ ಮೇಲೆ ಹೇಳಿದ ಗುಂಪುಗಳಾಗಿ ಮಾಡುವುದು ಅದ್ಯಯನದ ಅನುಕೂಲಕ್ಕೆ. ಕೆಲವು ಸಮಾನ ಲಕ್ಶಣಗಳನ್ನು ಪಡೆದುಕೊಂಡು ಒಂದು ಗುಂಪಾಗಿ ಒಡೆದುಕೊಂಡರೂ ಈ ಗುಂಪುಗಳ ಒಳಗಿನ ಒಳನುಡಿಗಳು ಮತ್ತೆ ಕಾಲಾಂತರದಲ್ಲಿ ಒಡೆತಗಳನ್ನು ಪಡೆದುಕೊಂಡು ಬೆಳೆಯುತ್ತವೆ. ಇದಕ್ಕೆ ಒಂದು ಉದಾಹರಣೆಯನ್ನು ನೋಡಬಹುದು.
ಬಡಗನ್ನಡದಲ್ಲಿ ಹಲವು ಒಳನುಡಿಗಳು ಇವೆ. ಇವುಗಳಲ್ಲಿ ಪ್ರತಮ ಪುರುಶ ಏಕವಚನ ಸ್ತ್ರೀಲಿಂಗ ಮತ್ತು ಪುಲ್ಲಿಂಗ ಸರ‍್ವನಾಮಗಳ ರೂಪಗಳು ಬೇರೆ ಬೇರೆ ಒಳನುಡಿಗಳಲ್ಲಿ ಈ ಕೆಳಗಿನಂತೆ ಇವೆ, ಗಮನಿಸಿ.
ಕನ್ನಡ |
ಪ್ರತಮ ಪುರುಶ ಏಕವಚನ ಸ್ತ್ರೀಲಿಂಗ |
ಪ್ರತಮ ಪುರುಶ ಏಕವಚನ ಪುಲ್ಲಿಂಗ |
ಮಸ್ಕಿಕನ್ನಡ |
ಅಕಿ |
ಅತ |
ಕಲಬುರಗಿ ಕನ್ನಡ |
ಅಕಿ/ಕಕಿ |
ಅ~ವ/ಕ~ವ |
ದಾರವಾಡ ಕನ್ನಡ |
ಆಕಿ |
ಆತ |
ಒಂದು ಗುಂಪಿನ ಒಳಗಿನ ಒಳನುಡಿಗಳು ಇಶ್ಟುಮಟ್ಟಿಗೆ ಬಿನ್ನತೆಯನ್ನು ತೋರಿಸುತ್ತವೆ. ಇದು ಕನ್ನಡದ ಒಳನುಡಿಗಳ ಶ್ರೀಮಂತ ಬೆಳವಣಿಗೆಯನ್ನು ಕನ್ನಡಿಸುತ್ತದೆ.
ಇಂದು ಹಲವು ಕನ್ನಡಗಳು ಸಾವಿರಕ್ಕೂ ಹೆಚ್ಚು ವರುಶಗಳ ಬದುಕಿನ ಮತ್ತು ಸಮಾಜದ ಅನುಬವವನ್ನು ಗಟ್ಟಿಗೊಳಿಸಿಕೊಂಡು ಬಳಕೆಯಲ್ಲಿವೆ, ಬದುಕಿವೆ. ಈ ಒಳನುಡಿಗಳನ್ನು ಅದ್ಯಯನ ಮಾಡುವುದು ಮಾತ್ರವಲ್ಲದೆ ಅವುಗಳ ಬಳಕೆಯನ್ನು ಗವುರವಿಸುವುದು ಅವಶ್ಯ.
ಈ ಅಂಕಣದ ಹಿಂದಿನ ಬರೆಹ:
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.