ಕನ್ನಡದ ಅಂಕಿಗಳು

Date: 01-03-2023

Location: ಬೆಂಗಳೂರು


''ಒಂದು ಸರಣಿಯ ಇಲ್ಲವೆ ಒಂದು ಗುಂಪಿನ ಎಲ್ಲ ಪದಗಳ ಮೇಲೆ ವಿಶೇಶಣ ರೂಪ ಬಂದು ಈ ಎರಡರ ಮೇಲೆ ಮಾತ್ರ ಯಾವುದೆ ರೂಪ ಬಂದಿಲ್ಲದಿರುವುದನ್ನು ಬಾಶಾವಿಗ್ನಾನಿಗಳು ಶೂನ್ಯರೂಪವೊಂದು ಅಲ್ಲಿ ಇದೆ ಎಂದು ವಿವರಿಸುತ್ತಾರೆ. ಹೀಗೆ ವಿವರಿಸುವುದರಿಂದ ಹಲವು ಅನುಕೂಲಗಳು ಇರುತ್ತವೆ,'' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕನ್ನಡದ ಅಂಕಿಗಳು’ ಕುರಿತು ಬರೆದಿದ್ದಾರೆ.

ಕನ್ನಡದಲ್ಲಿ ಒಂದರಿಂದ ಹತ್ತರವರೆಗೆ ಇರುವ ಅಂಕಿಗಳನ್ನು ಮೂಲಬೂತ ಅಂಕಿಗಳು ಎಂದು ಎರಡು ನೆಲೆಯಲ್ಲಿ ಹೇಳಲಾಗುತ್ತದೆ. ಮೊದಲನೆಯದಾಗಿ ಇವುಗಳು ಸಹಜ ರೂಪಗಳು, ಎರಡು ರೂಪಗಳು ಸೇರಿ ಆಗಿರುವ ಸಮಾಸ ರಚನೆಗಳು ಅಲ್ಲ ಎಂಬುದು. ಎರಡನೆಯದು ಇವುಗಳು ಸಹಜವಾಗಿ ರೂಪುಗೊಂಡಿರುವ ಪದರೂಪಗಳು, ಇವುಗಳಲ್ಲಿ ಯಾವುದೆ ಬಗೆಯ ಗಣಿತದ ಲೆಕ್ಕಾಚಾರ ಇಲ್ಲ ಎಂಬುದು. ಈ ಎರಡು ಅಂಶಗಳ ಬಗೆಗೆ ಇವತ್ತಿನ ಬರಹದಲ್ಲಿ ತುಸು ಮಾತಾಡೋಣ.

ಇಂದು ಕನ್ನಡದಲ್ಲಿ ಒಂದು ರೂಪದ ಹಾಗೆ ಕಾಣುವ ಈ ಅಂಕಿಗಳು ಮೂಲ ದ್ರಾವಿಡದಲ್ಲಿ ಒಂದು ರೂಪದ ಮೇಲೆ ಇನ್ನೊಂದು ವಿಶೇಶಣ ರೂಪ ಸೇರಿ ಬೆಳೆದಿವೆ ಎಂಬುದು ದ್ರಾವಿಡ ಬಾಶಾವಿಗ್ನಾನಿಗಳ ವಿಚಾರ. ಈ ಅಂಶವನ್ನು ಆದಾರವಾಗಿಟ್ಟುಕೊಂಡು ಕನ್ನಡದ ಅಂಕಿಗಳ ರಚನೆಯನ್ನು ಈ ಕೆಳಗಿನಂತೆ ಗುರುತಿಸಬಹುದು.

ಒನ್ + ದು = ಒಂದು
ಇರ್ >ಎರ್ + ಡು = ಎರಡು
ಮೂ + ರು = ಮೂರು
ನಾಲ್ + ಕು = ನಾಲ್ಕು
ಅಯ್ (<ಚಯ್) + ದು =ಅಯ್ದು
ಆರ್ + @ = ಆರ್>ಆರು
ಏಳ್ + @ = ಏಳ್>ಏಳು
ಎಣ್ + ಟು = ಎಣ್ಟು
ಪತ್ತು, ಪಕ್ + ತು = ಪಕ್ತು>ಪತ್ತು>ಹತ್ತು
ನೂರ್ > ನೂರು

ಈ ಮೇಲಿನ ಪಟ್ಟಿಯಲ್ಲಿ ಮೊದಲಲ್ಲಿ ಇರುವ ರೂಪಗಳು ಮೂಲದ ರೂಪಗಳು ಮತ್ತು ಇವುಗಳಿಗೆ ಆನಂತರ ಇರುವ ವಿಶೇಶಣ ರೂಪಗಳು ಸೇರಿಕೊಂಡು ಅಂಕಿಪದಗಳು ಬೆಳೆದಿವೆ ಎಂದು ಹೇಳಲಾಗುತ್ತದೆ. ಈ ಪಟ್ಟಿಯಲ್ಲಿ ಇಂದಿನ ಕನ್ನಡದ ಅಂಕಿಗಳ
ರಚನೆಯನ್ನು ಅಂದಾಜಾಗಿ ತೋರಿಸಿದೆ. ಇವುಗಳ ಮೂಲದಲ್ಲಿ ಸಮಾಸವಾದ ಬಗೆ ಮತ್ತು ಕನ್ನಡದಲ್ಲಿ ಅವು ಬೆಳೆದ ಬಗೆ ಇವೆಲ್ಲ ಅವಲೋಕಿಸಲು ಅವಕಾಶವಿರುತ್ತದೆ. ಆರು ಮತ್ತು ಏಳು ಈ ಎರಡು ಅಂಕಿಗಳ ಮೇಲೆ ಯಾವುದೆ ವಿಶೇಶಣ ರೂಪ ಸೇರಿಲ್ಲದಿರುವುದನ್ನು ಕಾಣಬಹುದು. ಒಂದು ಸರಣಿಯ ಇಲ್ಲವೆ ಒಂದು ಗುಂಪಿನ ಎಲ್ಲ ಪದಗಳ ಮೇಲೆ ವಿಶೇಶಣ ರೂಪ ಬಂದು ಈ ಎರಡರ ಮೇಲೆ ಮಾತ್ರ ಯಾವುದೆ ರೂಪ ಬಂದಿಲ್ಲದಿರುವುದನ್ನು ಬಾಶಾವಿಗ್ನಾನಿಗಳು ಶೂನ್ಯರೂಪವೊಂದು ಅಲ್ಲಿ ಇದೆ ಎಂದು ವಿವರಿಸುತ್ತಾರೆ. ಹೀಗೆ ವಿವರಿಸುವುದರಿಂದ ಹಲವು ಅನುಕೂಲಗಳು ಇರುತ್ತವೆ.

ಇನ್ನು ಈ ಪದಗಳಲ್ಲಿ ಗಣತೀಯ ಲೆಕ್ಕಾಚಾರ ಇಲ್ಲ ಎಂಬುದನ್ನು ಗಮನಿಸಬಹುದು. ಮುಂದಿನ ಅಂಕಿಗಳಲ್ಲಿ ಈ ಗಣಿತೀಯ ಲೆಕ್ಕ ಇರುವುದನ್ನು ಗಮನಿಸಿದಾಗ ಹಾಗೆಂದರೇನು ಎಂಬುದು ಸ್ಪಶ್ವವಾಗಬಹುದು.

ಮುಂದಿನ ಅಂಕಿ, ಒಂಬತ್ತು. ಇದು ರಚನೆಯಾಗಿದೆ. ಅಂದರೆ ಇದರಲ್ಲಿ ಎರಡು ರೂಪಗಳಿವೆ. ಈ ಮೇಲಿನ ಅಂಕಿಗಳಲ್ಲಿಯೂ ಎರಡು ರೂಪಗಳನ್ನು ತೋರಿಸಿದೆ. ಆದರೆ, ಒಂದು ವ್ಯತ್ಯಾಸವೆಂದರೆ ಮೇಲಿನ ಅಂಕಿಗಳಲ್ಲಿ ಮೊದಲ ರೂಪ ಸ್ವತಂತ್ರ ಆಕ್ರುತಿಮಾ ಮತ್ತು ಎರಡನೆಯದು ಅಲ್ಲ. ಅದನ್ನು ವಿಶೇಶಣ ರೂಪ ಎಂದು ವಿವರಿಸಲಾಗಿದೆ. ಇದು ಸ್ವತಂತ್ರವಾಗಿ ಬಳಕೆಯಾಗುವ ರೂಪವಲ್ಲ. ಆದರೆ ಒಂಬತ್ತು ಎನ್ನುವುದರಲ್ಲಿ ಒನ್ ಮತ್ತು ಪತ್ತು ಎಂಬ ಎರಡು ಸ್ವತಂತ್ರ ಆಕ್ರುತಿಮಾಗಳು ಇವೆ. ಇದರೊಟ್ಟಿಗೆ ಇದರಲ್ಲಿ ಗಣಿತೀಯ ಲೆಕ್ಕಾಚಾರವೂ ಇದೆ. 'ಒಂದು ಕಳೆ ಹತ್ತರಲ್ಲಿ' ಅಂದರೆ ಹತ್ತರಲ್ಲಿ ಒಂದನ್ನು ಕಳೆ ಎಂಬುದು ಅದರ ಅರ‍್ತ. ಅಂದರೆ ಕಳೆಯುವ ಪ್ರಕ್ರಿಯೆ ಇಲ್ಲಿ ಕಾಣಿಸುತ್ತದೆ. ಕುತೂಹಲವೆಂದರೆ ಕನ್ನಡದ ಇನ್ನಾವ ಅಂಕಿಗಳಲ್ಲಿಯೂ ಈ ಕಳೆಯುವ ಪ್ರಕ್ರಿಯೆಯ ಮೂಲಕ ಅಂಕಿಗಳನ್ನು ಸಾದಿಸಿರುವುದು ಇಲ್ಲ. ಇದೊಂದರಲ್ಲಿ ಮಾತ್ರ ಕಳೆಯುವ ಪ್ರಕ್ರಿಯೆ ಕಂಡುಬರುತ್ತದೆ. ಇದು ಈ ಅಂಕಿಯ ಇತಿಹಾಸದ ಮೇಲೆ ಬೆಳಕನ್ನು ಚೆಲ್ಲತ್ತದೆ ಮತ್ತು ಈ ಅಂಕಿ ಕನ್ನಡದಲ್ಲಿ, ದ್ರಾವಿಡದಲ್ಲಿ ಆನಂತರ ಬೆಳೆದಿದೆ ಎಂಬುದಕ್ಕೆ ಇದು ಆದಾರ ಒದಗಿಸುತ್ತದೆ. ಆನಂತರದ ಅಂಕಿಗಳನ್ನು ಕೂಡಿಸುವ ಮತ್ತು ಗುಣಿಸುವ ಪ್ರಕ್ರಿಯೆಯಲ್ಲಿ ಸಾದಿಸಿದೆ.

ಹನ್ನೊಂದರಿಂದ ಹತ್ತೊಂಬತ್ತರವರೆಗಿನ ಅಂಕಿಗಳನ್ನು ಕೂಡಿಸುವ ಪ್ರಕ್ರಿಯೆಯಲ್ಲಿ ಸಾದಿಸಿದೆ. ಕೆಳಗೆ ಅಂಕಿಗಳನ್ನು ಅವುಗಳ ರಚನೆಯೊಂದಿಗೆ ತೋರಿಸಿದೆ, ಗಮನಿಸಿ.

ಹನ್ + ಒಂದು = ಹನ್ನೊಂದು
ಹನ್ + ಎರಡು = ಹನ್ನೆರಡು
ಹದಿ + ಮೂರು = ಹದಿಮೂರು
ಹದಿ + ನಾಲ್ಕು = ಹದಿನಾಲ್ಕು
ಹದಿನ್ + ಅಯ್ದು = ಹದಿನಯ್ದು
ಹದಿನ್ + ಆರು =ಹದಿನಾರು
ಹದಿನ್ + ಏಳು = ಹದಿನೇಳು
ಹದಿನ್ + ಎಂಟು = ಹದಿನೆಂಟು
ಹತ್ + ಒಂಬತ್ತು = ಹತ್ತೊಂಬತ್ತು

ಈ ಅಂಕಿಗಳಲ್ಲಿ ಹತ್ತು ಎಂಬುದಕ್ಕೆ ಒಂದು, ಎರಡು ಮೊದಲಾದ ಮೂಲಬೂತ ಅಂಕಿಗಳು ಸೇರಿ ಹನ್ನೊಂದು, ಹನ್ನೆರಡು ಮೊದಲಾದ ಅಂಕಿಗಳು ರೂಪುಗೊಂಡಿವೆ. ಇವುಗಳಲ್ಲಿ ಹತ್ತು ಎಂಬುದರ ರೂಪವು ವಿವಿದ ರೂಪಗಳಲ್ಲಿ ಬಂದಿರುವುದನ್ನು ಪಟ್ಟಿಯಲ್ಲಿ ಗಮನಿಸಬಹುದು. ಇದರಲ್ಲಿ ಹತ್ತಕ್ಕೆ ಒಂದನ್ನು ಸೇರಿಸು ಎಂಬ ಲೆಕ್ಕ ಇದೆ. ದೊಡ್ಡ ಅಂಕಿ ಮೊದಲಿಗೆ ಬಂದಿದೆ ಮತ್ತು ಸಣ್ಣ ಸಂಕೆಯ ಅಂಕಿ ಆನಂತರ ಬಂದಿದೆ.

ಇನ್ನು, ಇಪ್ಪತ್ತು, ಮೂವತ್ತು ಇಂತ ಅಂಕಿಗಳ ರಚನೆಯನ್ನು ಗಮನಿಸಬಹುದು. ಇದರಲ್ಲಿ ಗುಣಿಸುವ ಲೆಕ್ಕಾಚಾರ ಇದೆ. ಅಂದರೆ ಇಪ್ಪತ್ತು ಎಂಬ ರಚನೆಯನ್ನು ಮಾಡುವುದಕ್ಕೆ ಇರ್ + ಪತ್ತು ಎಂಬ ಸಮಾಸವನ್ನು ಬಳಸಿಕೊಂಡಿದೆ. ಇದರಲ್ಲಿ ಎರಡನ್ನು ಇರ್ ಎಂಬ ರೂಪ ಪ್ರತಿನಿದಿಸುತ್ತದೆ. ಅದರ ಮೇಲೆ ಹತ್ತು ಎಂಬ ರೂಪ ಬಂದಿದೆ. ಇದು, ಎರಡನ್ನು ಹತ್ತರಿಂದ ಗುಣಿಸು ಎಂಬ ಅರ‍್ತವನ್ನು ಇಲ್ಲವೆ ಲೆಕ್ಕವನ್ನು ತೋರಿಸುತ್ತದೆ. ಗಮನಿಸಿ, ಹನ್ನೊಂದರಿಂದ ಹತ್ತೊಂಬತ್ತರವರೆಗಿನ ಅಂಕಿಗಳಲ್ಲಿ ಅಂದರೆ ಕೂಡಿಸುವ ಪ್ರಕ್ರಿಯೆ ಇರುವ ಅಂಕಿಗಳಲ್ಲಿ ದೊಡ್ಡ ಅಂಕಿ ಮೊದಲು ಬಂದು ಸಣ್ಣ ಅಂಕಿ ಆಮೇಲೆ ಬಂದರೆ, ಇಪ್ಪತ್ತು, ಮೂವತ್ತು ಮೊದಲಾದ ಗುಣಿಸುವ ಪ್ರಕ್ರಿಯೆ ಇರುವ ಅಂಕಿಗಳಲ್ಲಿ ಸಣ್ಣ ಅಂಕಿ

ಮೊದಲು ಬಂದಿದೆ ಮತ್ತು ಆನಂತರ ದೊಡ್ಡ ಅಂಕಿ ಬಳಕೆಯಾಗಿದೆ. ಉಳಿದ ಅಂಕಿಗಳ ರಚನೆಯನ್ನು ಕೆಳಗೆ ಪಟ್ಟಿ ಮಾಡಿಕೊಟ್ಟಿದೆ.

ಇರ್ + ಪತ್ತು = ಇಪ್ಪತ್ತು
ಮೂ + ಪತ್ತು = ಮೂವತ್ತು
ನಲ್ (<ನಾಲ್) + ಪತ್ತು = ನಲವತ್ತು
ಅಯ್ + ಪತ್ತು = ಅಯ್ವತ್ತು
ಆರ್ + ಪತ್ತು = ಅರವತ್ತು
ಏಳ್ + ಪತ್ತು =ಎಪ್ಪತ್ತು
ಎಣ್ + ಪತ್ತು = ಎಂಬತ್ತು
ತೊನ್ + ಪತ್ತು =ತೊಂಬತ್ತು

ಮೇಲಿನ ಪಟ್ಟಿಯಲ್ಲಿ ಎಪ್ಪತ್ತು ಮತ್ತು ಎಂಬತ್ತು ಇವುಗಳಲ್ಲಿ ಸಂದಿ ಆಗಿರುವುದನ್ನು ಕಾಣಬಹುದು. ಉಳಿದ ಅಂಕಿಗಳಲ್ಲಿ ಪ್>ವ್ ಬದಲಾವಣೆ ಕಾಣಿಸುತ್ತದೆ. ತೊಂಬತ್ತು ಎಂಬ ರೂಪವು ಕನ್ನಡದಲ್ಲಿ ಇರುವ ಒಂಬತ್ತು ಇದಕ್ಕೆ ಸಂಬಂದಿಸಿದಂತೆ ಕಾಣಿಸುತ್ತಿಲ್ಲ. ಇದು ಬಹುಶಾ ಬೇರೊಂದು ಮೂಲ ರೂಪದಿಂದ ಬಂದಿರುವಂತಿದೆ. ದ್ರಾವಿಡದಲ್ಲಿ ಒಂಬತ್ತಕ್ಕೆ ಎರಡು ಮೂಲರೂಪಗಳಿರುವುದನ್ನು ವಿದ್ವಾಂಸರು ಮಾತನಾಡಿದ್ದಾರೆ.

ಇನ್ನುಳಿದಂತೆ, ಇಪ್ಪತ್ತೊಂದು, ಇಪ್ಪತ್ತೆರಡು ಮೊದಲಾದ ಹೆಚ್ಚಿನ ಬೆಲೆಯ ಅಂಕಿಗಳನ್ನು ಈ ಮೇಲೆ ನೋಡಿದ ಎರಡು ಬಗೆಯ ಗಣಿತೀಯ ಲೆಕ್ಕಾಚಾರದ ಮೇಲೆ ರೂಪಿಸಲಾಗುತ್ತದೆ. ಕೆಳಗೆ ಒಂದೆರಡು ಉದಾಹರಣೆಗಳನ್ನು ಕೊಟ್ಟಿದೆ.

ಇರ್ + ಪತ್ತು = ಇಪ್ಪತ್ತು + ಒಂದು = ಇಪ್ಪತ್ತೊಂದು
ಇರ್ + ಪತ್ತು = ಇಪ್ಪತ್ತು + ಎರಡು = ಇಪ್ಪತ್ತೆರಡು
ಹೀಗೆ ಕನ್ನಡದ ಅಂಕಿಗಳು ರೂಪುಗೊಂಡಿವೆ.

ಅಂಕಿಗಳ ಅದ್ಯಯನ ಜಗತ್ತಿನ ವಿಗ್ನಾನಿಗಳ ದೊಡ್ಡಪ್ರಮಾಣದ ಗಮನವನ್ನು ಸೆಳೆದಿದೆ. ಅಂಕಿಗಳ ಅದ್ಯಯನವು ಜಗತ್ತಿಗೆ ದೊಡ್ಡ ಅರಿವನ್ನು ಕೊಡುತ್ತದೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...