Date: 03-04-2025
Location: ಬೆಂಗಳೂರು
ಬೆಂಗಳೂರು: ಪ್ರಖ್ಯಾತ ಸಾಹಿತಿ ಹಾಗೂ ಕನ್ನಡ ಪರ ಹೋರಾಟಗಾರ ಪಿ.ವಿ. ನಾರಾಯಣ (82) ಅವರು ಗುರುವಾರ ಬೆಳಿಗ್ಗೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಂತಿಮ ದರ್ಶನಕ್ಕಾಗಿ ಅವರ ನಿವಾಸ (ಹೇಮಂತ ಅರಿಷ್ಠ ಅಪಾರ್ಟ್ಮೆಂಟ್, ಜಯನಗರ 8ನೇ ಬ್ಲಾಕ್) ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಂತ್ಯಸಂಸ್ಕಾರ ಮಧ್ಯಾಹ್ನ 3 ಗಂಟೆಯ ಬಳಿಕ ಬನಶಂಕರಿ ಚಿತಾಗಾರದಲ್ಲಿ ನಡೆಯಲಿದೆ.
1942ರ ಡಿಸೆಂಬರ್ 18ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ಜನಿಸಿದ ನಾರಾಯಣ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ, ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ‘ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪಡೆದಿದ್ದರು.
ಅವರು ಬೆಂಗಳೂರು ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಅಲ್ಲದೆ, ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಪಿ.ವಿ. ನಾರಾಯಣ ಅವರು ವಿಮರ್ಶೆ, ಸಂಶೋಧನೆ, ಕಾದಂಬರಿ, ಅನುವಾದ ಸೇರಿದಂತೆ ಒಟ್ಟು 45ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಬಳ್ಳಿಗಾವೆ, ಕಾಯಕತತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ, ಪದ್ಮನೀ ಪರಿಣಯ ಅವರ ವಿಮರ್ಶೆ/ಸಂಶೋಧನಾ ಕೃತಿಗಳು. ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ ಅನುವಾದ ಕೃತಿಗಳು. ಅಂತರ, ವಿಕಾಸ, ಶೋಧನೆ, ನಿರ್ಧಾರ, ಧರ್ಮಕಾರಣ ಕಾದಂಬರಿಗಳು.
ಅವರು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು.
‘ವಚನ ವ್ಯಾಸಂಗ’ ಕೃತಿಗೆ ಶ್ರೀವಿಜಯ ಮಹಂತೇಶ ಮಠ ಪುರಸ್ಕಾರ, ‘ಸಮಾಜದ ಮೇಲೆ ವಿಜ್ಞಾನದ ಪ್ರಭಾವ’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಶೋಧನೆ’ ಕಾದಂಬರಿಗೆ ಸುಧಾ ವಾರಪತ್ರಿಕೆಯ ಕಾದಂಬರಿ ಸ್ಪರ್ಧೆ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಅವರಿಗೆ ಲಭಿಸಿವೆ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ನಾರಾಯಣ ಅವರ ಅಗಲಿಕೆಯು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಸಂತಾಪ ನುಡಿಗಳು:
ಹಂ. ಪ. ನಾಗರಾಜಯ್ಯ : ಪಿವಿಎನ್ ಪ್ರಾಚೀನ ಸಾಹಿತ್ಯ ಸಂವರ್ಧನೆಗೆ ಸಲ್ಲಿಸಿದ ಕೊಡುಗೆ ದೊಡ್ಡ ಪ್ರಮಾಣದ್ದು. ಅಷ್ಟೇ ವಿಶಿಷ್ಟವಾದದ್ದು ಕನ್ನಡ ಚಳುವಳಿ ಯಲ್ಲಿ ಅವರು ವಹಿಸಿದ ಪಾತ್ರ. ಅವರು ಮರೆಯಬಾರದ ಬಹುಶ್ರುತ ರು. ಪ್ರತಿಷ್ಠಾನದ ಪ್ರಗತಿಗಾಗಿ ಶ್ರಮಿಸಿದವರು. ಎಲ್ಲಾ ನೆನಪಿಗೆ ಬಂದು ದುಃಖ ತಪ್ತನಾದೆ
ಎಂ ನರಸಿಂಹ: ಡಾಕ್ಟರ್ ಪಿ ವಿ ನಾರಾಯಣ ಕಂಚಿನ ಕಂಠದ ಕನ್ನಡ ನಾಡಿನ ಜನ ಜಾಗೃತಿ ಮೂಡಿಸುವ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಉದಯಭಾನು ಕಲಾಸಂಘದ ತುಂಬು ಅಭಿಮಾನಿಗಳು. ಹಿರಿಯ ಸಾಹಿತಿಗಳು ಮತ್ತು ಪ್ರಾಧ್ಯಾಪಕರು ಆಗಿದ್ದ ಅವರು ಸಂಘದ ಸುವರ್ಣ ಮಹೋತ್ಸವದ ನೆನಪಿನಲ್ಲಿ ಪ್ರಕಟವಾದ ಸುವರ್ಣ ಪುಸ್ತಕ ಮಾಲೆ ಅಡಿಯಲ್ಲಿ 50 ಮಂದಿ ಹಿರಿಯರ ಐವತ್ತು ಕೃತಿಗಳ ಸಂಪಾದಕರಾಗಿ ಅಷ್ಟೇ ಮಂದಿ ಸಾಹಿತಿಗಳನ್ನು ತೊಡಗಿಸಿ ಎರಡು ಮೂರು ವರ್ಷಗಳ ಕಾಲ ಸಂಘದ ಉದ್ದೇಶವನ್ನು ಈಡೇರಿಸಲು ಸಹಾಯ ಮಾಡಿದ್ದರು. ಅವರ 80ನೇ ವರ್ಷದ ಹಬ್ಬವನ್ನು ಸಂಘದ ಸಭಾಂಗಣದಲ್ಲಿ ಅವರ ಅಭಿಮಾನಿಗಳ ಸಹಕಾರದಿಂದ ನೆರವೇರಿಸಲಾಯಿತು.
ಡಾಕ್ಟರ್ ನಾರಾಯಣ ಅವರು ಇಳಿ ವಯಸ್ಸಿನಲ್ಲೂ ಕನ್ನಡದ ಬಗ್ಗೆ ತುಂಬು ಅಭಿಮಾನದಿಂದ ಹೃದಯಪೂರ್ವಕವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ಜನಜಾಗೃತಿ ಮೂಡಿಸುತ್ತಿದ್ದರು. ಅಂತಹ ಹಿರಿಯರನ್ನು ಆಸ್ಪತ್ರೆಯ ಹಾಸಿಗೆಯ ಮೇಲೆ ನೋಡಿದಾಗ ಕರುಳು ಹಿಂಡಿದಂತಾಗಯಿತು. ದಯಾಮಯನಾದ ಪರಮಾತ್ಮನು ಅವರ ಅಮರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಮತ್ತು ಅವರ ಬಂಧು ಬಳಗಕ್ಕೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಉದಯಭಾನು ಕಲಾಸಂಘದ ಪರವಾಗಿ ಪ್ರಾರ್ಥಿಸುತ್ತೇನೆ.
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2022, 2023 ಮತ್ತು 2024ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸ...
ಧಾರವಾಡ: ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್, ಧಾರವಾಡ ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಧಾರವಾಡ ಕುರ್ತಕೋಟಿ ...
ಲಂಡನ್: ಪ್ರತಿಷ್ಠಿತ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿಯ ಕಿರುಪಟ್ಟಿ ಪ್ರಕಟವಾಗಿದ್ದು, ಕನ್ನಡದ ಸಾಹಿತಿ ಬಾನು ಮುಸ್ತಾಕ್...
©2025 Book Brahma Private Limited.