Date: 22-11-2024
Location: ಬೆಂಗಳೂರು
“ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ,” ಎನ್ನುತ್ತಾರೆ ಡಾ. ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ಬರೆದಿರುವ ‘ಕನ್ನಡ ವಿಮರ್ಶೆ ಭಾಗ-3’ ವಿಮರ್ಶಾ ಸರಣಿ ನಿಮ್ಮ ಓದಿಗಾಗಿ..
ಕನ್ನಡ ವಿಮರ್ಶೆ 3
(ಹಿಂದಿನ ಕನ್ನಡ ವಿಮರ್ಶೆ 2 ಬರಹದ ಮುಂದುವರಿದ ಭಾಗ ಇದಾಗಿದ್ದು; ಇನ್ನೂ ಎರಡು ಕಂತುಗಳಲ್ಲಿ ಈ ಬರಹ ಪ್ರಕಟ ಆಗಲಿಕ್ಕಿದೆ. ಹಿಂದಿನ ಭಾಗವನ್ನು ಓದಿಕೊಂಡು ಇದನ್ನು ಗಮನಿಸಲು ಕೋರಿದೆ)
1.7 ವಿವರಣೆ-ಸಂಶೋಧನೆ-ದರ್ಶನ
ಪಠ್ಯ ಸಂಪಾದನೆಯನ್ನು ನಮ್ಮವರು ಹೇಗೆ ಸಂಶೋಧನೆ ಎಂದು ಕರೆದರೋ ಹಾಗೇ ನಾಡು ನುಡಿ ಚರಿತ್ರೆ, ಸಂಸ್ಕೃತಿಯನ್ನು ಕಟ್ಟಿ ವ್ಯಾಖ್ಯಾನಿಸುವ ಕೆಲಸವನ್ನೂ ಸಂಶೋಧನೆ ಎಂದೇ ಕರೆದರು. (ಶಂಬಾ ಅವರ ಕೆಲಸವನ್ನು ಸಂಸ್ಕೃತಿ ಸಂಶೋಧನೆ ಎಂದೂ ಡಿ.ಎಲ್.ಎನ್. ಅವರ ಕೆಲಸವನ್ನು ಸಾಹಿತ್ಯಕ ಸಂಶೋಧನೆ ಎಂದೂ ಈಗಾಗಲೇ ಗುರ್ತಿಸಲಾಗಿದೆ.) ಆದರೆ ಚರಿತ್ರೆರಚನೆ, ನಿಘಂಟುರಚನೆ, ಶಾಸನಶಾಸ್ತç, ಗ್ರಂಥಸಂಪಾದನಾಶಾಸ್ತ್ರ ಇವೆಲ್ಲವೂ ರೂಪಗೊಳ್ಳುತ್ತಿದ್ದ ಕಾಲದಲ್ಲಿ ಸಂಶೋಧನೆ ಎಂಬುದು ಈ ಎಲ್ಲ ವಲಯಗಳಲ್ಲೂ ಒಂದು ಪ್ರಮುಖ ದೃಷ್ಟಿಕೋನವಾಗಿ, ಮಾರ್ಗವಾಗಿ ಜಾಗ್ರತವಾಗಿತ್ತು. ಈ ಎಲ್ಲ ಕಡೆ ಸಂಶೋಧನೆಯು ವಿಮರ್ಶೆಯ ಒಂದು ಲಕ್ಷಣವಾಗಿ ಪ್ರಕಟವಾಗಿದೆ ಕೂಡ. ವಿಮರ್ಶೆಯನ್ನು ವರ್ಗೀಕರಿಸುವಾಗ ಇಂಥ ಲಕ್ಷಣವುಳ್ಳದ್ದನ್ನು ಸಂಶೋಧನಾ ವಿಮರ್ಶೆ ಎಂದೇ ಕೆಲವರು ಗುರ್ತಿಸಿದ್ದಾರೆ. ಇಂಥ ಸಂಶೋಧನೆ ಮತ್ತು ವಿಮರ್ಶೆಗಳ ಮಿಶ್ರತಳಿ ಮಾದರಿಯಾಗಿ ತೀ.ನಂ.ಶ್ರೀಯವರ ಸಮಾಲೋಕನ ಗ್ರಂಥದ ಲೇಖನಗಳನ್ನು ನೋಡಬಹುದು. (ಆದರೆ ಸುಮಾರು 1940ರ ದಶಕದ ನಂತರದಲ್ಲಿ ಪಿಎಚ್.ಡಿ. ಅಧ್ಯಯನಕ್ಕೆ ಮಾತ್ರ ಈ ಪರಿಭಾಷೆ ಅನ್ವಯವಾಗತೊಡಗಿತು.)
ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ. ಇಂಥದ್ದೇ ಇನ್ನೊಂದು ಕೊಡುಗೆ ಎಂದರೆ ವಿವರಾಣಾತ್ಮಕ ವಿಮರ್ಶೆ. ಹಳಗನ್ನಡ ಗ್ರಂಥಸಂಪಾದನೆಯಲ್ಲಿ ಪ್ರಕಟವಾಗಿರುವ ವಿಮರ್ಶೆಯ ಸಿಂಹಪಾಲು ಈ ರೀತಿಯ ಪರಿಚಯಾತ್ಮಕ ಧಾಟಿಯ ವರ್ಣನಾತ್ಮಕ (ವಿವರಣಾತ್ಮಕ) ವಿಮರ್ಶೆಯೇ ಆಗಿದೆ. ಇಂಥ ಲಕ್ಷಣವನ್ನು ಗಮನಿಸಿಯೇ ಸಂಶೋಧನಾತ್ಮಕ, ವರ್ಣನಾತ್ಮಕ, ದರ್ಶನಾತ್ಮಕ ಎಂದು ವಿಮರ್ಶೆಯನ್ನು ಕುವೆಂಪು ಮೂರು ಬಗೆಯಲ್ಲಿ ವರ್ಗೀಕರಿಸಿ ಹೇಳಿದ್ದಾರೆ. ಆದರೆ ಈ ಕಾಲದಲ್ಲಿ ಸಂಶೋಧನಾತ್ಮಕ, ವಿವರಣಾತ್ಮಕ ವಿಮರ್ಶೆಗಳು ಬೆಳೆದಂತೆ ದರ್ಶನಾತ್ಮಕ ವಿಮರ್ಶೆ ಅಷ್ಟಾಗಿ ಬೆಳೆಯಲಿಲ್ಲ. (ಜೊತೆಗೆ ನೋಡಿ: ದರ್ಶನ ಮೀಮಾಂಸೆ)
1.8. ಪ್ರಾಚೀನತೆಯ ಶೋಧ
ಸಾಹಿತ್ಯ ಚರಿತ್ರೆ ರಚನೆ ಮತ್ತು ಸಂಶೋಧನೆಗಳೆರಡೂ ನಮ್ಮ ಪರಂಪರೆಯ ಪ್ರಾಚೀನತೆಯನ್ನು ಶೋಧಿಸಲು ಸಾಕಷ್ಟು ಪ್ರಯತ್ನಿಸಿವೆ. ಕರ್ನಾಟಕ ಸಾಹಿತ್ಯ ಚರಿತ್ರೆ ಬರೆಯುವಾಗ ಕನ್ನಡ ಲಿಪಿಕ ಭಾಷೆಯ ಪ್ರಾಚೀನತೆ ಮತ್ತು ಸಾಹಿತ್ಯದ ಪ್ರಾಚೀನತೆಯ ಚರ್ಚೆಯನ್ನು ಒಂದು ಅಗತ್ಯ ರಿಚುವಲ್ಲೆಂಬಂತೆ ಮಾಡುತ್ತ ಬರಲಾಗಿದೆ. ಹೊಸನೀರಿನ ಕಾಲದ ವಿಮರ್ಶೆಯಲ್ಲಿ ಲಿಪಿಕ ಭಾಷೆ ಮತ್ತು ಸಾಹಿತ್ಯದ ಪ್ರಾಚೀನತೆಯನ್ನು ನಿರ್ಧರಿಸುವ ಬಹು ದೊಡ್ಡ ಸಂವಾದವೊಂದು ಏರ್ಪಟ್ಟಿದೆ. ಕರ್ನಾಟಕ ನಾಡು ಮತ್ತು ಕನ್ನಡ ಭಾಷೆಯ (ಪದಗಳ) ಅತ್ಯಂತ ಹಳೆಯ ಉಲ್ಲೇಖಗಳನ್ನು ಅನ್ಯಭಾಷಾ ರಚನೆಗಳಲ್ಲಿ ಹುಡುಕುವ ಪ್ರವೃತ್ತಿಯೊಂದು ಈ ಹೊಸನೀರಿನ ಕಾಲದ ವಿಮರ್ಶೆಯಲ್ಲಿ ಜರುಗಿದೆ. ಎಷ್ಟೆಷ್ಟು ಹಳೆಯ ಕಾಲಕ್ಕೆ ನಮ್ಮ ನಾಡು ನುಡಿಯ ಹಳಮೆ ಹೋಗುತ್ತದೋ ಅಷ್ಟಷ್ಟು ನಮ್ಮ ಹೆಮ್ಮೆ ಹೆಚ್ಚುತ್ತದೆ ಎಂಬ ತಿಳುವಳಿಕೆ ಈ ಹುಡುಕಾಟದ ಹಿಂದೆ ಇರುವಂತೆ ಕಾಣುತ್ತದೆ. ಆರ‍್ಯ-ದ್ರಾವಿಡ ಚರ್ಚೆ, ನಾಗರೀಕತೆಗಳ ಇತಿಹಾಸ, ರಾಜಕೀಯ ಇತಿಹಾಸ, ಜನಾಂಗೀಯ ಇತಿಹಾಸಗಳೆಲ್ಲವೂ ಈ ಚರ್ಚೆಯಲ್ಲಿ ಪ್ರಾಸಂಗಿಕವಾಗಿ ಬಂದು ಹೋಗಿವೆ.
ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರಾಚೀನತೆಯನ್ನು ಚರ್ಚೆ ಮಾಡುವಾಗ ಲಿಪಿಕ ಸಾಹಿತ್ಯದ ಚರ್ಚೆಯೆ ಹೆಚ್ಚು ಒತ್ತನ್ನು ಪಡೆದುಕೊಂಡಿದೆ. ಜನಪದ ಸಾಹಿತ್ಯಕ್ಕೆ ಮತ್ತು ಇತರ ಬಗೆಯ ಮೌಖಿಕ ಮಹಾಕಾವ್ಯಗಳ, ತತ್ವಸಾಹಿತ್ಯದ ಚರ್ಚೆಗೆ ಇಲ್ಲಿ ಹೆಚ್ಚಿನ ಒತ್ತು ಸಿಕ್ಕಿಲ್ಲ. ಇವೆಲ್ಲಕ್ಕು ಒಂದು ರೀತಿಯ ಅನಾದರ ಅಥವಾ ಗಮನದಿಂದ ಹೊರಗಿರುವ ಸ್ಥಿತಿ ಎದ್ದು ಕಾಣುತ್ತದೆ. ಜನಪದ ಮತ್ತು ಇತರೆ ಸಾಹಿತ್ಯದ ವಿಮರ್ಶೆಯು 60ರ ದಶಕದ ಆನಂತರದಲ್ಲಿ ಪ್ರಾಶಸ್ತ್ಯ ಪಡೆಯಿತಾದರು ಅದು ಸಂಪಾದನೆ, ಪರಿಶೀಲನೆ, ಸಂಗ್ರಹಗಳ ಮುದ್ರಣಗಳಿಗೆ ಹೆಚ್ಚಿನ ಆದ್ಯತೆಯನ್ನು ಪಡೆದಿರುವುದನ್ನು ಕಾಣಬಹುದು.
1.9 ಸಾಹಿತ್ಯ ಚರಿತ್ರೆ ರಚನಾಶಾಸ್ತ್ರ
ಸಾಹಿತ್ಯ ಚರಿತ್ರೆ ರಚನಾಶಾಸ್ತçವು ಆಧುನಿಕ ವಿಮರ್ಶೆಯ ವಿನ್ಯಾಸದಲ್ಲಿ ತನ್ನದೇ ಪಾತ್ರವನ್ನು ವಹಿಸಿದೆ. ಆಧುನಿಕ ವಿಮರ್ಶೆಯು ಪ್ರಕಟಗೊಂಡ ಹಲವು ಬಗೆಗಳಲ್ಲಿ ಚರಿತ್ರೆ ರಚನೆಯ ಮಾರ್ಗವೂ ಒಂದು. ಆಂಗ್ಲರ ಚರಿತ್ರೆ ಕಲ್ಪನೆಯಿಂದ, ಓರಿಯೆಂಟಲಿಸ್ಟರ (ಓರಿಯೆಂಟಾಲಜಿಸ್ಟರ) ಪಾಸಿಟಿವಿಸ್ಟ್ ದೃಷ್ಟಿಕೋನದಿಂದ ಸಾಕಷ್ಟು ಪ್ರಭಾವಿತಗೊಂಡಂತೆ ನಮ್ಮ ಈ ರಚನಾಶಾಸ್ತ್ರವು ನಿರ್ಮಾಣಗೊಂಡಿದೆ. ಇದರಿಂದಾಗಿ 1. ಸಾಹಿತ್ಯ ಚರಿತ್ರೆ ರಚನಾಶಾಸ್ತ್ರವು ಕನ್ನಡ ಸಾಹಿತ್ಯ ಪರಂಪರೆಯನ್ನು ವಿಕಾಸಶೀಲ ನೆಲೆಯಲ್ಲಿ ನಿರೂಪಿಸಲು ಯತ್ನಿಸಿದೆ. 2. ಇದು ಒಂದು ಏಕರೂಪಿ ಪರಂಪರೆಯನ್ನು ಕಟ್ಟುವ ಯತ್ನಮಾಡಿದೆ. ಬಹುರೂಪಿ ಪರಂಪರೆಗಳನ್ನು ಗಮನಿಸಿಲ್ಲ. 3. ಇಲ್ಲಿ ಬಳಕೆಯಾಗಿರುವ ವಿಮರ್ಶೆ ಸರಿಸುಮಾರು ಗುಣಗ್ರಾಹಿಯಾಗಿದೆ. 4. ಕೃತಿಯ ಕಾಲ-ಚಾರಿತ್ರಿಕ ಅಂಶಗಳಿಗೆ ಹೆಚ್ಚು ಮಹತ್ವ ನೀಡಿ ಇತರೆ ವಿಚಾರಗಳನ್ನು ಕಡೆಗಣಿಸಿದೆ 5. ಕೃತಿ-ಕೃತಿಕಾರನ ವಯಕ್ತಿಕ ವಿವರ ಮತ್ತು ಧಾರ್ಮಿಕ ವಿಚಾರಗಳು ಪ್ರಾಮುಖ್ಯತೆಯನ್ನು ಪಡೆದಿವೆ. 6. ಕೃತಿಯನ್ನು ಕಾಲ-ಧರ್ಮಗಳಿಗೆ ಬದ್ಧವಾಗಿ ನಿರ್ವಚಿಸುವ ಕೆಲಸ ಬಹುವಾಗಿ ನಡೆದಿದೆ. 7. ಶೈಲಿ-ಛಂದಸ್ಸುಗಳ ನೆಲೆಯಲ್ಲಿ ಕೃತಿಗಳನ್ನು ವಿವೇಚಿಸಲಾಗಿದೆ. 8. ನೈತಿಕ ನೆಲೆಯಲ್ಲಿ ಕೃತಿಗಳನ್ನು ವಿವೇಚಿಸಲಾಗಿದೆ. 9. ಸಾರ್ವಕಾಲೀನ/ಸಾರ್ವತ್ರಿಕ ಸಾಹಿತ್ಯ ಭಾಗಗಳ ಹುಡುಕಾಟ; ಅಧ್ಯಯನದ ಅನುಕೂಲಕ್ಕಾಗಿ ವಿಭಾಗೀಕರಣ ಮಾಡುವ ನಾಮಕರಣ ಮಾಡುವ ಕರ‍್ಯಗಳದ್ದೇ ಒಂದು ಚರಿತ್ರೆ ಈ ರಚನಾಶಾಸ್ತ್ರದಲ್ಲಿ ಸಿಗುತ್ತದೆ. ಇವೆಲ್ಲ್ಲವೂ ಚರಿತ್ರೆ ರಚನಾಶಾಸ್ತ್ರದಲ್ಲಿ ವ್ಯಕ್ತವಾಗಿರುವ ವಿಮರ್ಶೆಯ ಲಕ್ಷಣಗಳು ಮತ್ತು ಮಿತಿಗಳು.
1.9 1 ವಿಭಾಗೀಕರಣ-ನಾಮಕರಣ ಮಾರ್ಗ
ಸಾಹಿತ್ಯ ಚರಿತ್ರೆ ರಚನಾಶಾಸ್ತçದಿಂದ ನಮ್ಮ ವಿಮರ್ಶೆಗೆ ಒದಗಿರುವ ಹಲವು ಅನುಕೂಲ ಅಥವಾ ಮಿತಿಗಳಲ್ಲಿ ಈ ವಿಭಾಗೀಕರಣ-ನಾಮಕರಣವೂ ಒಂದು. ಇದೊಂದು ಅಧ್ಯಯನದ ಅನುಕೂಲಕ್ಕಾಗಿ ಸೃಷ್ಟಿಯಾಗಿರುವ ಅಧ್ಯಯನ ವಿಧಾನ ಮತ್ತು ಮಿತಿ. ಜಾತಿ, ಧರ್ಮ, ಜನಾಂಗ, ಕವಿ, ಸಂವೇದನೆ, ಕಾಲಘಟ್ಟ, ಭಾಷೆ ಹೀಗೆ ಇಲ್ಲಿ ಚರಿತ್ರೆ ರಚನೆಗೆ ಹಲವು ಮಾನದಂಡಗಳನ್ನು ಇರಿಸಿಕೊಳ್ಳಲಾಗಿದೆ. ವರ್ಗಿಕರಣ ಇಲ್ಲದೆ ಚರಿತ್ರೆ ಬರೆಯಲು ಸಾಧ್ಯವೇ ಇಲ್ಲ ಎಂಬ ಧೋರಣೆ ಇಲ್ಲೆಲ್ಲ ವ್ಯಕ್ತವಾಗಿರುವುದನ್ನು ಕಾಣಬಹುದು. ವರ್ಗೀಕೃತ ತುಲನೆಯು ಸಾಮಾನ್ಯವಾಗಿ ಶ್ರೇಣೀಕರಣವನ್ನು ಮಾಡುವುದರಿಂದ ವರ್ಗೀಕರಣ ವಿಧಾನವು ನಮ್ಮ ವಿಮರ್ಶೆಯಲ್ಲಿ ದೊಡ್ಡವರು-ಚಿಕ್ಕವರು, ಮುಖ್ಯರು ಅಮುಖ್ಯರು-ಅಲ್ಪ ಮುಖ್ಯರು ಇತ್ಯಾದಿ ನಂಬಿಕೆಗಳು ಉಂಟಾಗಲು ಕಾರಣವಾಗಿದೆ. ಇದಕ್ಕೆ ಎಷ್ಟೇ ಮಿತಿಗಳಿದ್ದರೂ ಈ ವಿಭಾಗೀಕರಣ-ನಾಮಕರಣವು ನಮ್ಮ ಚರಿತ್ರೆ ರಚನೆಯಲ್ಲಿ ಮಾತ್ರವೇ ಅಲ್ಲ; ಎಲ್ಲ ಕಡೆಯೂ ವಿಮರ್ಶೆಯ ಆದಿಪ್ರಾಚೀನ-ನಿತ್ಯನವೀನ ಲಕ್ಷಣಗಳಲ್ಲಿ ಒಂದಾಗಿದೆ.
ಸಾಹಿತ್ಯ ಚರಿತ್ರೆಯನ್ನು ವಿಭಾಗೀಕರಿಸಿ, ನಾಮಕರಿಸುವಾಗ ಧರ್ಮದ ಆಧಾರದಲ್ಲಿ ಜೈನಯುಗ, ಬ್ರಾಹ್ಮಣಯುಗ, ವೀರಶೈವ ಯುಗ ಎಂದೆಲ್ಲ ಪ್ರಾಚೀನವನ್ನು ವಿಭಾಗಿಸಿದರೆ ಆಧುನಿಕಕ್ಕೆ ಈ ಯಾವ ಧರ್ಮಗಳೂ ಪ್ರಧಾನವಾಗಿ ಅನ್ವಯ ಆಗದೆ ಇರುವುದರಿಂದ ಅದನ್ನು ಆಧುನಿಕ / ಹೊಸಗನ್ನಡ ಎಂದಷ್ಟೆ ಕರೆದುಕೊಳ್ಳಲಾಗಿದೆ. ಹಾಗೆಯೆ ಕವಿ ಆಧಾರದಲ್ಲಿ ವರ್ಗೀಕರಿಸುವಾಗ ಕೂಡ ಪ್ರಾಚೀನವನ್ನು ಪಂಪಯುಗ, ಬಸವಯುಗ, ಕುಮಾರವ್ಯಾಸಯುಗ ಎಂದು ಗುರ್ತಿಸಿ ಆಧುನಿಕವನ್ನು ಹಾಗೆ ಗುರುತಿಸಲಾರದೆ ಭಾಷಾ ನೆಲೆಯಲ್ಲೆ ನಾಮಕರಿಸಿಕೊಳ್ಳಲಾಗಿದೆ. ಆಧುನಿಕ ಕಾಲಘಟ್ಟವನ್ನು ವಿಭಾಗಿಸುವಾಗ ನವೋದಯ ಪೂರ್ವ, ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ, ಸ್ತ್ರೀವಾದಿ, (ನವ್ಯೋತ್ತರ, ದಲಿತೋತ್ತರ ಇತ್ಯಾದಿಯಾಗಿ) ಗುರ್ತಿಸಿ ನಾಮಕರಿಸಿಕೊಳ್ಳಲಾಗಿದೆ. ಆಧುನಿಕ ಪೂರ್ವ - ಆಧುನಿಕ; ಪ್ರಾಚೀನ - ಆಧುನಿಕ; ಹಳಗನ್ನಡ - ನಡುಗನ್ನಡ - ಹೊಸಗನ್ನಡ, ಸ್ವಾತಂತ್ಯ್ರಪೂರ್ವ - ಸ್ವಾತಂತ್ಯ್ರೋತ್ತರ ಈ ರೀತಿಯ ವರ್ಗೀಕರಣಗಳೂ ಇವೆ. ಇವೆಲ್ಲವೂ ಒಂದಲ್ಲ ಒಂದು ಮಿತಿಗಳಿಂದ ಕೂಡಿದ ವರ್ಗೀಕರಣಗಳೇ ಆಗಿವೆ.
1.9.2 ಸಾತತ್ಯ-ವಿಕಾಸ
ಹೊಸನೀರಿನ ಕಾಲವು ಸಮಾಜವನ್ನು ಸರಳರೇಖಾತ್ಮಕವಾಗಿ, ಊರ್ಧ್ವಮುಖಿ ಬೆಳವಣಿಗೆಯ, ವಿಕಾಸಶೀಲ ನಡೆಯ ಪರಸ್ಪರ ಸಂಬಂಧವುಳ್ಳ ಒಂದೇ ಧಾರೆಯಾಗಿ ಗ್ರಹಿಸಿತ್ತು. ಸಾಹಿತ್ಯ ಚರಿತ್ರೆಯ ಕಟ್ಟುವಿಕೆಯಲ್ಲಿ ಇಂಥ ಧೋರಣೆ ಪ್ರಧಾನವಾಗಿ ಇರುವುದನ್ನು ಕಾಣಬಹುದು. ನದಿಯ ಹರಿವಿಗೆ ಸಾಹಿತ್ಯ ಪರಂಪರೆಯನ್ನು ನಮ್ಮವರು ಹೋಲಿಸಿರುವುದನ್ನು (ಬಿ.ಎಂ.ಶ್ರೀ) ನೋಡಿದರೆ ಇದು ತಿಳಿಯುತ್ತದೆ. ಸ್ವತಂತ್ರ ಸಮುದಾಯ, ಸ್ವತಂತ್ರ ಕಾಲಘಟ್ಟ, ದ್ವೀಪತನದ ಅಸ್ತಿತ್ವದ ಬಗೆಗೇ ಈ ಕಾಲದ ವಿಮರ್ಶೆಗೆ ಅನುಮಾನಗಳಿದ್ದಂತೆ ತೋರುತ್ತದೆ. ಇವತ್ತು ನಮ್ಮ ಪರಂಪರೆ ನೋಡಿದರೆ ಕುಮಾರವ್ಯಾಸ ವಚನಗಳನ್ನು ಓದಿರುವ ಬಗ್ಗೆ ಯಾವ ಸುಳಿವುಗಳೂ ಸಿಗುವುದಿಲ್ಲ. ಮುದ್ದಣನಿಗೆ ತತ್ವ ಪದಗಳ ತಿಳುವಳಿಕೆ ಇದ್ದಂತೆಯೇ ತೋರುವುದಿಲ್ಲ. ಆದಾಗ್ಯೂ ನಮ್ಮ ಸಾಹಿತ್ಯ ಚರಿತ್ರೆ ರಚನಾಶಾಸ್ತ್ರವು ಪರಂಪರೆಯನ್ನು ವಿಕಾಸಶೀಲವೆಂದೇ ಭಾವಿಸುತ್ತದೆ. ಒಬ್ಬೊಬ್ಬರಿಗೂ ಅವರದೇ ಆದ ಒಂದೊಂದು ಪರಂಪರೆಗಳಿರಬಹುದು; ಒಬ್ಬೊಬ್ಬರಿಗೂ ಹಲವು ಪರಂಪರೆಗಳ ಅರಿವು ಇರಬಹುದು. ಕೆಲವರಿಗೆ ಪರಂಪರೆಯ ಅರಿವಿದ್ದೂ ಆ ಬಗ್ಗೆ ಆಸಕ್ತಿ ಇಲ್ಲದಿರಬಹುದು ಎಂಬ ಬಗ್ಗೆ ಈ ಹೊಸನೀರಿನ ಕಾಲದ ವಿಮರ್ಶೆ ಗಮನ ನೀಡಿದಂತೆ ಕಾಣುವುದಿಲ್ಲ. ಏಕರೂಪಿ ಪರಂಪರೆಯ ಕಲ್ಪನೆ ಮತ್ತು ಪರಂಪರೆಯ ರೇಖಾತ್ಮಕ ವಿಕಾಸದ ಕಲ್ಪನೆಯನ್ನೇ ಈ ವಿಮರ್ಶೆ ನಂಬಿದಂತೆ ಕಾಣುತ್ತದೆ.
1.9.3 ಏಕರೂಪಿ ಪರಂಪರೆ
ನಮ್ಮಲ್ಲಿ ಹತ್ತು ಹಲವು ರೀತಿಯ ಪರಂಪರೆಗಳು ನಿರ್ಮಾಣವಾಗಿರುವುದು ಪೌರ್ವಾತ್ಯ ಅಧ್ಯಯನ, ಸಬಾಲ್ಟನ್ ಅಧ್ಯಯನ, ಪ್ರಾಚ್ಯ ಅಧ್ಯಯನ, ಸ್ತ್ರೀವಾದಿ ಅಧ್ಯಯನ, ತೌಲನಿಕ ಅಧ್ಯಯನ, ನವಚಾರಿತ್ರಿಕವಾದ, ಮೌಖಿಕ ಇತಿಹಾಸ ಅಧ್ಯಯನ, ಜಾನಪದ ಅಧ್ಯಯನ, ಸಿಮಿಯಾಟಿಕ್ಸ್ ಇತ್ಯಾದಿ ಇತ್ಯಾದಿಗಳಿಂದ ಇಂದು ದೃಢಪಟ್ಟಿದೆ. ಆದರೆ ಹೊಸನೀರಿನ ಕಾಲದಲ್ಲಿ ಪೌರ್ವಾತ್ಯ ಅಧ್ಯಯನವೇ ಯಜಮಾನಿಕೆ ನಡೆಸಿದೆ. ಗ್ರಂಥಸಂಪಾದನೆ, ಚರಿತ್ರೆ ರಚನೆಗಳೇ ಪ್ರಧಾನವಾಗಿದ್ದ ಆ ಕಾಲದಲ್ಲಿ ನಮ್ಮ ವಿಮರ್ಶೆಗೆ ರಚಿತ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹಲವು ಪರಂಪರೆಗಳು, ಹಲವು ಚರಿತ್ರೆಗಳು ಇರಬಹುದೆಂಬ; ಇದ್ದರೂ ಅವನ್ನೆಲ್ಲ ಮಾನ್ಯ ಮಾಡಬೇಕೆಂಬ ಕಾಳಜಿಯೇ ಇರಲಿಲ್ಲ್ಲ. ಆಗೆಲ್ಲ ಒಂದು ಚರಿತ್ರೆಯನ್ನು, ಒಂದು ಪರಂಪರೆಯನ್ನು ಕಟ್ಟುವ ದೃಷ್ಟಿಯೇ ಪ್ರಧಾನವಾಗಿತ್ತು. ಹೆಚ್ಚೆಂದರೆ ಪರಂಪರೆಯನ್ನು ಭಿನ್ನ ದೃಷ್ಟಿಗಳಿಂದ ಅಧ್ಯಯನಕ್ಕಾಗಿ ವಿಭಾಗೀಕರಿಸಿ ವ್ಯಾಖ್ಯಾನಿಸುವ ಪರಿಪಾಠವಿತ್ತಷ್ಟೆ.17
ಒಂದೆ ಭಾಷೆಯ ಸಾಹಿತ್ಯದ ಹಲವು ಬಗೆಯ ಪರಂಪರೆಗಳ ಚರಿತ್ರೆಗಳು ನಮ್ಮಲ್ಲಿ ಹಿಂದೆ ರಚನೆ ಆಗಿಲ್ಲ. ಚರಿತ್ರೆಯನ್ನು ನೋಡುವ ದೃಷ್ಟಿಕೋನಗಳು ಭಿನ್ನ ಭಿನ್ನವಾಗಿ ಇದ್ದರೂ ಇತ್ತೀಚೆಗೆ ರಚನೆ ಆಗಿರುವಂತೆ ಮಹಿಳಾ ಸಾಹಿತ್ಯ ಚರಿತ್ರೆ, ದಲಿತ ಸಾಹಿತ್ಯ ಚರಿತ್ರೆ, ಜನಪದ ಸಾಹಿತ್ಯ ಚರಿತ್ರೆ, ಮಕ್ಕಳ ಸಾಹಿತ್ಯ ಚರಿತ್ರೆ, ತತ್ವ ಸಾಹಿತ್ಯ ಚರಿತ್ರೆ ಇತ್ಯಾದಿಗಳು ಹಿಂದೆ ಅಂದರೆ ಹೊಸನೀರಿನ ಕಾಲದಲ್ಲಿ ರಚನೆ ಆಗಿಲ್ಲ. ಅದಕ್ಕೆ ಕಾರಣಗಳನ್ನು ಮೇಲಿನ ಕಂಡಿಕೆಯಲ್ಲಿ ಈಗಾಗಲೆ ಚರ್ಚಿಸಲಾಗಿದೆ. ಛಂದಸ್ಸು, ಭಾಷಾ ವಿಜ್ಞಾನ, ಸಾಹಿತ್ಯಮೀಮಾಂಸೆ, ವಿಮರ್ಶೆಗಳ ವಿಚಾರದಲ್ಲು ಈ ಮಾತು ನಿಜ. ಈಗ ಇವುಗಳಿಗೆ ಒದಗಿರುವ ವ್ಯಾಪ್ತಿ ಹೊಸನೀರಿನ ಕಾಲದಲ್ಲಿ ಇರಲಿಲ್ಲ. ಡಿ.ಎನ್. ಶಂಕರಭಟ್ಟರ ಭಾಷಾ ವಿಚಾರಗಳು ಭಾಷೆಯನ್ನು ಮಾತ್ರವಲ್ಲದೆ ನಮ್ಮ ಕನ್ನಡ ವಿಮರ್ಶೆಯನ್ನು, ಮೀಮಾಂಸೆ ಮತ್ತು ಛಂದಸ್ಸುಗಳನ್ನು ನೋಡುವ ದೃಷ್ಟಿಕೋನಗಳನ್ನು ಸಾಕಷ್ಟು ಬದಲಿಸಿವೆ. ಹಾಗಾಗಿಯೆ ಇಲ್ಲಿ ಕನ್ನಡತನದ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
1.9.4 ಚರಿತ್ರೆ ಪಂಥ
ಸಾಹಿತ್ಯ ಚರಿತ್ರೆ ರಚನಾಶಾಸ್ತ್ರವು ನಮ್ಮಲ್ಲಿ ಅನೇಕ ವಿಮರ್ಶಾ ವಿಧಾನಗಳನ್ನು ಬಳಸಿಕೊಂಡಿದೆ. ಹಾಗೇ ಹಲವಾರು ವಿಮರ್ಶಾ ವಿಧಾನಗಳ ಬೆಳವಣಿಗೆಗೂ ದಾರಿ ಮಾಡಿಕೊಟ್ಟಿದೆ. ಕವಿಯೊಬ್ಬನ ಸಮಗ್ರ ಅಧ್ಯಯನ, ಕವಿಯೊಬ್ಬನ ದೃಷ್ಟಿ-ಸಂವೇದನೆಗಳ ಚಾರಿತ್ರಿಕ ವಿಕಾಸದ ಅಭ್ಯಾಸ, ಪ್ರಕಾರವೊಂದರ ಚಾರಿತ್ರಿಕ ಅಧ್ಯಯನ, ಕಾಲಘಟ್ಟ, ಸಮವೇದನೆ, ಚಳುವಳಿ ಇತ್ಯಾದಿ ನೆಲೆಯ ಚಾರಿತ್ರಿಕ ಅಧ್ಯಯನ ಹೀಗೆ ಭಿನ್ನ ವಿಮರ್ಶಾ ವಿಧಾನಗಳು ಚರಿತ್ರೆ ರಚನೆಯಿಂದ ಪ್ರೇರಿತಗೊಂಡು ಬೆಳೆದಿವೆ. ಪಾಶ್ಚಾತ್ಯ ಗಂಭೀರ ನಾಟಕಗಳು (ಎಸ್.ವಿ. ರಂಗಣ್ಣ). ಆಧುನಿಕ ಕನ್ನಡ ನಾಟಕ (ಕೆ.ಮರಳಸಿದ್ದಪ್ಪ), ಕನ್ನಡ ಕಾದಂಬರಿಯ ಬೆಳವಣಿಗೆ (ಜಿ.ಎಸ್. ಆಮೂರ), ನಡೆದು ಬಂದ ದಾರಿ (ಕೀರ್ತಿನಾಥ ಕುರ್ತುಕೋಟಿ), ಯುಗಧರ್ಮ ಮತ್ತು ಸಾಹಿತ್ಯ ದರ್ಶನ (ಕೀರ್ತಿನಾಥ ಕುರ್ತುಕೋಟಿ), ಕನ್ನಡ ಸಾಹಿತ್ಯ ವಿಮರ್ಶೆಯ ಉಗಮ ಮತ್ತು ಬೆಳವಣಿಗೆ (ಎಂ.ಜಿ.ಕೃಷ್ಣಮೂರ್ತಿ), ಶತಮಾನದ ಸಾಹಿತ್ಯ (ಸಂ: ಜಿ. ಎಚ್. ನಾಯಕ) ಹೊಸಗನ್ನಡ ಸಾಹಿತ್ಯದ ಅರುಣೋದಯ (ಶ್ರೀನಿವಾಸ ಹಾವನೂರ) ಹೀಗೆ ಇಂಥ ಚರಿತ್ರೆ ಮಾದರಿಯ ಒಂದು ವಿಮರ್ಶಾ ಪಂಥವನ್ನೇ ನಾವು ಕನ್ನಡದಲ್ಲಿ ಗುರ್ತಿಸಬಹುದು. ಇದರ ಬೇರುಗಳು ಸೃಷ್ಟಿಯಾದುದು ರೈಸ್, ಆರ್.ನರಸಿಂಹಾಚಾರ್ ಇಂಥವರ ಕಾಲದಲ್ಲಿ.
1.9.5 ವರ್ತಮಾನೀಕರಣ, ಸಾರ್ವರ್ತ್ರೀಕರಣ
ಸಾಹಿತ್ಯ ಪರಂಪರೆಯ ಶೋಧ ಮಾತ್ರವೇ ಚರಿತ್ರೆಯನ್ನು ಕಟ್ಟುವ ಕೆಲಸದಲ್ಲಿ ನಡೆಯುತ್ತಿರಲಿಲ್ಲ. ಅದನ್ನು ಸೋಸಿ, ವರ್ತಮಾನಕ್ಕೆ ಏನು, ಎಷ್ಟು ಬೇಕೋ ಅದನ್ನು ಸಂಗ್ರಹಿಸಿ ಕಟ್ಟಿಕೊಳ್ಳುವ ಕೆಲಸ ಕೂಡ ನಡೆಯುತ್ತಿತ್ತು. ಇಲ್ಲಿ ಏನು, ಎಷ್ಟು, ಎಂಥ ಪರಂಪರೆ ಬೇಕು ಎಂಬ ಸೋಸುಪ್ರಜ್ಞೆಯ ಹಿಂದೆ ಇದ್ದ ಧೋರಣೆಗಳು ಮಾತ್ರ ಓರಿಯೆಂಟ್ ಅಧ್ಯಯನದಿಂದ ಪಡಕೊಂಡ ಧೋರಣೆಗಳೇ ಆಗಿದ್ದವು. ಸಾಹಿತ್ಯ ಕೃತಿಗಳನ್ನು ಚಾರಿತ್ರಿಕವಾಗಿ ಕಾಲ, ದೇಶ ಬದ್ಧವಾಗಿ ‘ಸಂಶೋಧಿಸಿ’ ಕೊಳ್ಳುವ ಕೆಲಸವು ಏಕಕಾಲಕ್ಕೆ ಅದನ್ನು ವರ್ತಮಾನಕ್ಕೆ ಪ್ರಸ್ತುತಗೊಳಿಸಿಕೊಳ್ಳುವ ಮತ್ತು ಕಾಲ, ದೇಶ, ಮತಗಳಿಂದ ಬಿಡಿಸಿ ಸಾರ್ವತ್ರೀಕರಿಸಿ, ಸಾರ್ವಕಾಲೀನಗೊಳಿಸಿಕೊಳ್ಳುವ ಕೆಲಸವೂ ಆಗಿತ್ತು.
ಚರಿತ್ರೆಯನ್ನು ವರ್ತಮಾನಕ್ಕೆ ಬೇಕಾದಂತೆ ಕಟ್ಟಿಕೊಳ್ಳುವಾಗ ಸಾಹಿತ್ಯ ಚರಿತ್ರೆಯ ಸಮಗ್ರ ರಚನೆಯ ಜೊತೆಜೊತೆಗೆ ಸಮೀಕ್ಷೆಗಳು ಮತ್ತು ಸಂಕ್ಷಿಪ್ತ ಚರಿತ್ರೆಯ ರಚನೆಗಳೂ ನಡೆದವು. ತಮ್ಮದೇ ಶ್ರೇಷ್ಠತೆಯ ಮಾನದಂಡಗಳು. ಸ್ಥಾನನಿರ್ಣಯ ಮತ್ತು ಗುಣ ದೋಷ ನಿರ್ಣಯ ಮಾನದಂಡಗಳ ಮೂಲಕ ಚರಿತ್ರೆ ರಚನೆಯ ವಿಮರ್ಶೆಯು ಕವಿಗಳನ್ನು ಆಯ್ದು ಚರ್ಚಿಸುವ ಪರಿಪಾಠವನ್ನು ಬೆಳೆಸಿತು. ಕೆಲವೊಮ್ಮೆ ಈ ಧೋರಣೆಯು ಬಿಡಿ ಬಿಡಿಯಾದ ವಿಮರ್ಶೆಗೂ ವಿಸ್ತರಣೆಯಾಯಿತು. ‘ಉತ್ತಮ’ ಕಾವ್ಯಭಾಗಗಳ, ಪಾತ್ರಗಳ, ಸನ್ನಿವೇಶಗಳ ಚರ್ಚೆಯಾಗಿ ವಿಮರ್ಶಾ ಲೇಖನಗಳು ಉತ್ಪಾದನೆ ಆಗತೊಡಗಿದವು. ಹೀಗಾಗಿ ವಿಮರ್ಶೆಯಲ್ಲಿ ಆಯ್ಕೆ ಮತ್ತು ಆಲಕ್ಷö್ಯಗಳ ರಾಜಕಾರಣವೊಂದು ಸೃಷ್ಟಿಯಾಯಿತು. (ಜೊತೆಗೆ ನೋಡಿ: ಶ್ರೇಷ್ಠತೆಯ ಪ್ರಜ್ಞೆ)
1.9.6 ಸಮೀಕ್ಷೆ
ಚರಿತ್ರೆ ರಚನೆಯು ವಿಮರ್ಶೆಯಲ್ಲಿ ಉಂಟುಮಾಡಿದ ಒಂದು ವಿಮರ್ಶಾ ಪಂಥ ಸಮೀಕ್ಷೆ ಪಂಥ. ವರದಿ, ಉಲ್ಲೇಖಗಳೇ ಪ್ರಧಾನವಾದ ಪರಿಚಯಾತ್ಮಕ ಕ್ರಮ ಇದು. ವಿಶ್ಲೇಷಣೆ, ಮೌಲ್ಯನಿರ್ಣಯ, ಸ್ಥಾನ ನಿರ್ಣಯಗಳು ಇಂಥ ಕಡೆ ಇರುತ್ತವಾದರೂ ಅದರ ಪ್ರಮಾಣ ಕಡಿಮೆ. ಆರ್.ನರಸಿಂಹಾಚರ‍್ಯರ ಕವಿಚರಿತೆ, ರಂ.ಶ್ರೀ.ಮುಗಳಿಯವರ ಸಾಹಿತ್ಯ ಚರಿತ್ರೆ ಇದಕ್ಕೆ ಉತ್ತಮ ಉದಾಹರಣೆ. “ಸಾಹಿತ್ಯ ಆಕಾಡೆಮಿ ಪ್ರಕಟಿಸಿರುವ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮುಗಳಿಯವರು ಮಾಡಿರುವ ಆಧುನಿಕ ಕನ್ನಡ ಸಾಹಿತ್ಯದ ಮೌಲ್ಯಮಾಪನ ನಿರಾಶಾದಾಯಕವಾದುದಾಗಿದೆ. ಸಹೃದಯತ್ವವಿಲ್ಲ ಎನ್ನುವ ಕಾರಣಕ್ಕಾಗಿ ಅಲ್ಲ. ಕೇವಲ ವಿಮರ್ಶಾತ್ಮಕ ಪಟ್ಟಿ ಎಂಬ ಕಾರಣದಿಂದ. ಆಧುನಿಕ ಕನ್ನಡ ಬರಹಗಾರರನ್ನು ಕುರಿತ ಅವರ ಅಭಿಪ್ರಾಯಗಳು ವಿಶ್ಲೇಷಣೆಯ ಬೆಂಬಲ ಪಡೆದುಕೊಳ್ಳುವುದಿಲ್ಲ. ವಿಶ್ಲೇಷಣೆಯಿಂದ ಸಮರ್ಥಿಸಲ್ಪಡದ ಅಭಿಪ್ರಾಯಗಳನ್ನು ಅವರು ವ್ಯಕ್ತಮಾಡುವುದರಿಂದ ಬುದ್ಧಿವಂತ ಓದುಗ ತಾಳ್ಮೆ ಕಳೆದುಕೊಳ್ಳುತ್ತಾನೆ. ಬುದ್ಧಿವಂತನಲ್ಲದ ಓದುಗ ಆಧುನಿಕ ಕನ್ನಡ ಸಾಹಿತ್ಯದ ‘ಉನ್ನತ ಶಿಖರ’ಗಳ ಪರಿಚಯ ಪಡೆದ ಭ್ರಮೆ ಹೊಂದುತ್ತಾನೆ”18 ಆರ್.ನರಸಿಂಹಾಚರ‍್ಯರ ಕವಿಚರಿತೆಯಂತೂ ವ್ಯಾಪ್ತಿಯಲ್ಲಿ ದೊಡ್ಡದಾಗಿರುವುದರಿಂದ ಬರಿ ಉಲ್ಲೇಖ ಮತ್ತು ಸ್ಯಾಂಪಲ್ಲುಗಳ ನೀಡಿಕೆಗಷ್ಟೇ ಸೀಮಿತವಾಗುತ್ತದೆ. ಕೆಲವೊಮ್ಮೆ ಬೃಹತ್ ಶ್ಮಶಾನದಲ್ಲಿ ಗೋರಿಗಳನ್ನು ಒಂದೊಂದಾಗಿ ಪರಿಚಯಿಸುವ ನಿರ್ಲಿಪ್ತತನವೇ ಇಲ್ಲಿ ಪ್ರಧಾನವಾಗಿ ಜೀವಂತಿಕೆಯೇ ಇಲ್ಲದಂತೆ ಭಾಸವಾಗುತ್ತದೆ.
ಇದೆ ರೀತಿಯ ಮಾತುಗಳನ್ನು ಸಿ. ವೀರಣ್ಣನವರ ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ 1, 2ಕ್ಕು, ಎಲ್. ಎಸ್. ಶೇಷಗಿರಿರಾವ್ ಅವರ ಹೊಸಗನ್ನಡ ಸಾಹಿತ್ಯ ಚರಿತ್ರೆಗು, ಜಿ.ಎಚ್. ನಾಯಕರಿಂದ ಸಂಪಾದಿತ ಆಗಿರುವ ಶತಮಾನದ ಕನ್ನಡ ಸಾಹಿತ್ಯಕ್ಕು ಅನ್ವಯಿಸಬಹುದು. ಆದರೆ ಶಾಮರಾಯರ ಚರಿತ್ರೆ ಬರವಣಿಗೆ ಮತ್ತು ಲಕ್ಷ್ಮೀನಾರಾಯಣ ಭಟ್ಟರ ಸಾಹಿತ್ಯ ಚರಿತ್ರೆಗಳು ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಸರಳವಾಗಿ ಕನ್ನಡ ಸಾಹಿತ್ಯವನ್ನು ಪರಿಚಯ ಮಾಡಿಕೊಡುವ ನೆಲೆಯಲ್ಲಿ ಮಾತ್ರವೆ ತಮ್ಮ ಸಮೀಕ್ಷಾತ್ಮಕ ಕೆಲಸವನ್ನು ಮಾಡುತ್ತವೆ. ಮಿಕ್ಕಂತೆ ಅಂತಹ ವಿದ್ವತ್ ಶೋಧಗಳಾಗಿ ಇವು ಕಾಣುವುದಿಲ್ಲ. ಚರಿತ್ರೆಯ ವ್ಯಾಖ್ಯಾನಕ್ಕೆ, ಪರಿಶೀಲನೆಗೆ ತಮ್ಮದೆ ಕೊಡುಗೆಯನ್ನು ಇವು ನೀಡುವುದಿಲ್ಲ.
1.10 ರಾಷ್ಟ್ರೀಯತೆ ಮತ್ತು ವಿಮರ್ಶೆ
ಹೊಸನೀರಿನ ಕಾಲದಲ್ಲಿ ಛಂದಸ್ಸು, ವ್ಯಾಕರಣ, (ಕೋಶ) ನಿಘಂಟುರಚನಾಶಾಸ್ತ್ರ ಎಲ್ಲವೂ ಶೈಕ್ಷಣಿಕ ಉದ್ದೇಶಗಳಿಗಷ್ಟೆ ಅಲ್ಲದೆ ನಮ್ಮಲ್ಲಿ ರಾಷ್ಟ್ರೀಯ ಪ್ರಜ್ಞೆಯ ವಿಸ್ತರಣೆಯಾಗಿಯೂ ರೂಪಗೊಂಡಿವೆ. ನಾವು ಮತ್ತು ಅನ್ಯ ಎಂಬಂತೆ (ಪೂರ್ವ ಮತ್ತು ಪಶ್ಚಿಮ ಎಂಬ ಅರ್ಥದಲ್ಲಿ) ಇಡೀ ಜಗತ್ತನ್ನು ಎರಡಾಗಿ ನೋಡುವ ದೃಷ್ಟಿಕೋನವೊಂದು ಓರಿಯಂಟಾಲಜಿಯಿಂದಲೇ ನಮ್ಮವರಿಗೆ ಪ್ರಾಪ್ತವಾಗಿತ್ತಾದ್ದರಿಂದ ನಮ್ಮತನದ ಚಹರೆಗಳಾದ ಸಾಹಿತ್ಯ ಸಂಸ್ಕೃತಿಗಳನ್ನು ಕಟ್ಟಿಕೊಳ್ಳುವ ಎಚ್ಚರವೊಂದು ರಾಷ್ಟ್ರೀಯತೆಯಿಂದ ನಮ್ಮಲ್ಲಿ ಜಾಗ್ರತಗೊಂಡಿತ್ತು. ಭಾರತ ರಾಷ್ಟ್ರೀಯತೆಯ ಮತ್ತು ಕನ್ನಡ ರಾಷ್ಟ್ರೀಯತೆಗಳಲ್ಲಿ ಸ್ಪಷ್ಟವಾದ ಹೈರರ‍್ಕಿ ನಿರ್ಮಾಣವಾಗಿ ಕನ್ನಡ ರಾಷ್ಟ್ರೀಯತೆಯು ಅಧೀನವಾದುದು, ಪ್ರಾದೇಶಿಕವಾದುದು, ಉಪರಾಷ್ಟ್ರೀಯತೆ ಎಂದಾಗಿ ನಿರ್ವಚಿತಗೊಂಡಿತ್ತು. ಕನ್ನಡ ಪರಂಪರೆಯ ಕಟ್ಟಾಣಿಕೆಯು ಭಾರತೀಯ ಪರಂಪರೆಯ ‘ತನುಜಾತೆ’ ರೂಪಿ ಎಂಬ ತಿಳುವಳಿಕೆ ಸ್ಪಷ್ಟವಾಗಿತ್ತು. ಹೀಗಾಗಿ ಈ ಅಸಮಾನ ರಾಷ್ಟ್ರೀಯತೆಯ ಐಡಿಯಾಲಜಿ ನಮ್ಮ ಮೀಮಾಂಸೆ ಮತ್ತು ವಿಮರ್ಶೆಗಳನ್ನು ಪ್ರಭಾವಿಸದೆ ಇರಲಿಲ್ಲ. (ರಾಷ್ಟ್ರೀಯತೆಯ ಐಡಿಯಾಲಜಿಯು ಏಕರೂಪವಾಗಿರಲಿಲ್ಲ ಎಂಬುದು ಬೇರೆ ಮಾತು) ಸಮಾಜೋ ಸಾಂಸ್ಕೃತಿಕ ಐಡಿಯಾಲಜಿಗಳಿಗೂ ಸಾಹಿತ್ಯಕ ಐಡಿಯಾಲಜಿಗಳಿಗೂ ವ್ಯತ್ಯಾಸ ಎಂದಿಗೂ ಇರುವುದಿಲ್ಲ ಅಲ್ಲವೇ? ಹೀಗಾಗಿ ಅಸಮಾನ ರಾಷ್ಟ್ರೀಯತೆಯ ಪರಿಕಲ್ಪನೆಯ ಫಲವಾಗಿಯೇ ಕನ್ನಡದಲ್ಲಿ ಭಾರತೀಯ ಕಾವ್ಯ ಮೀಮಾಂಸೆ ಹುಟ್ಟಿಕೊಂಡಿತು.
ಸಂಸ್ಕೃತ ಕಾವ್ಯ ಮೀಮಾಂಸೆಯನ್ನೇ ಭಾರತೀಯ ಕಾವ್ಯಮೀಮಾಂಸೆ ಎಂದು ಗ್ರಹಿಸಿದ; ಅದನ್ನೇ ಕನ್ನಡ ಕಾವ್ಯ ಮೀಮಾಂಸೆಯ ಅಧ್ಯಯನಶಿಸ್ತಾಗಿ ಸ್ವೀಕರಿಸಿದ ಚಟುವಟಿಕೆಗಳು ಬಹುಕಾಲ ನಡೆದವು. ವ್ಯಾಕರಣ ವಿಚಾರಕ್ಕೆ ಶಬ್ದಮಣಿದರ್ಪಣಕ್ಕೆ ಅನೇಕ ವರ್ಷಗಳ ಕಾಲ ಜೋತು ಬಿದ್ದ ನಾವುಗಳು ಮೀಮಾಂಸೆಗೆ ತೀ.ನಂ.ಶ್ರೀಯವರ ಭಾರತೀಯ ಕಾವ್ಯ ಮೀಮಾಂಸೆಯನ್ನೇ ಏಕೈಕ ಪ್ರಮಾಣಗ್ರಂಥವಾಗಿ ಜಪಿಸಿದೆವು. ಇವೆರಡೂ ಸಂಸ್ಕೃತದ ಪಡಿಯಚ್ಚುಗಳೆಂಬುದು ನಮಗೆಲ್ಲ ಗೊತ್ತಿದೆ. (ಜೊತೆಗೆ ನೋಡಿ: ಪ್ರಮಾಣೀಕರಣ) ಅಲ್ಲಲ್ಲಿ ಜಿ.ಎಸ್.ಶಿವರುದ್ರಪ್ಪ, ಕೆ.ಕೃಷ್ಣಮೂರ್ತಿ ಇವರ ಕಾವ್ಯತತ್ವ ವಿಚಾರಗಳು ಚರ್ಚೆಯಾದರೂ ಅವುಗಳಿಗೆ ಮೀಮಾಂಸಾ ಸಿದ್ಧಾಂತಗಳ ಕೊಟ್ಟಣದಲ್ಲಿ ಪ್ರಾಶಸ್ತ್ಯ ಸಿಗಲಿಲ್ಲ. ಕನ್ನಡ ಕಾವ್ಯ ಮೀಮಾಂಸೆಯನ್ನು, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರಕಟವಾಗಿರುವ ವಿಮರ್ಶೆಯನ್ನು ನಾವು ಈಗೀಗ ಕ್ರೋಡೀಕರಿಸಿ ರೂಪಿಸಿಕೊಳ್ಳತೊಡಗಿದ್ದೇವೆ.
ತೌಲನಿಕ ಕಾವ್ಯಮೀಮಾಂಸೆ ಎಂಬ ಕಲ್ಪನೆಯಲ್ಲಿ ಪೂರ್ವ ಪಶ್ಚಿಮಗಳ ತುಲನೆ ಮಾತ್ರವಿದೆ. ಕನ್ನಡ ಸಂಸ್ಕೃತಗಳ ತುಲನೆಯ ಪ್ರಮಾಣ ಅತ್ಯಲ್ಪ. ಅದೂ ಕಾವ್ಯಾರ್ಥ ಪದಕೋಶ, ಕಾವ್ಯಾರ್ಥ ಚಿಂತನಗಳಂತಹ ಕೃತಿಗಳು ಪ್ರಕಟಗೊಂಡ ಕಾಲದಲ್ಲಿ ಮಾತ್ರವೆ ಕನ್ನಡ ಸಂಸ್ಕೃತಗಳ ತುಲನೆ ಆರಂಭವಾಗಿದೆ. ಆದರೆ ಮೊದಲಿಗೆ ಹೊಸನೀರಿನ ಕಾಲದಲ್ಲಿ ಬೈನರಿ ವೈರಿಗಳು ಎಂದರೆ ಪೂರ್ವ ಪಶ್ಚಿಮ ಮಾತ್ರ. ಇಂತಹ ಪೂರ್ವ ಪಶ್ಚಿಮಗಳ ತುಲನೆಯ ಹಿಂದೆ ರಾಷ್ಟ್ರೀಯ ಪ್ರಜ್ಞೆಯ ರಾಜಕಾರಣವಿದೆ. ಬಾರತೀಯತೆಯ ಒಳಗೇ ಒಳೇಟುಗಳು ಇರಬಹುದು ಎಂಬುದು ನಮಗೆ ಗೊತ್ತಿರಲಿಲ್ಲವೆಂದಲ್ಲ. ಅಂಬೇಡ್ಕರರಿಂದ, ಕುವೆಂಪು ಅವರಿಂದ ನಮಗಾ ಪ್ರಜ್ಞೆ ಬಂದಿತ್ತು. ಆದಾಗ್ಯೂ ಉತ್ತರ ದಕ್ಷಿಣ, ಶಿಷ್ಟ ಜನಪದ, ಕನ್ನಡ ಸಂಸ್ಕೃತ ಬೈನರಿ ವೈರುದ್ಯಗಳಿಂದ ಆದ ಹಾನಿಗಳನ್ನು ಗುರ್ತಿಸಿಕೊಳ್ಳುವ ತಿಳುವಿಗೆ ತಲುಪಲು ನಮಗೆ ಸ್ವಾತಂತ್ಯ್ರ ನಂತರ ನಿರ್ವಸಾಹತೀಕರಣ ಚಿಂತನೆಯ ಆಗಮನ ಆಗಬೇಕಾಯಿತು.
ದೇಸಿ ಮತ್ತು ಶಿಷ್ಠ ಈ ಎರಡೂ ನೆಲೆಯಲ್ಲಿ ಜನಪದ ಕಾವ್ಯಮೀಮಾಂಸೆ, ದ್ರಾವಿಡ ಕಾವ್ಯ ಮೀಮಾಂಸೆ/ಕನ್ನಡದ್ದೇ ಕಾವ್ಯ ಮೀಮಾಂಸೆ, ಕನ್ನಡದ್ದೇ ವ್ಯಾಕರಣಗಳ ಹುಡುಕಾಟ ನಡೆಯುತ್ತಿರುವ ಇವತ್ತಿನ ಆಧುನಿಕೋತ್ತರ ಕಾಲದಲ್ಲಿ ಕೇವಲ ಏಳೆಂಟು ದಶಕಗಳ ಹಿಂದೆ ವಸಾಹತುಶಾಹಿ ವಿರೋಧಿ ರಾಷ್ಟ್ರೀಯತೆಯೇ ನಮ್ಮ ಮೀಮಾಂಸೆಯನ್ನು ರೂಪಿಸಿರುವುದನ್ನು ಹಿಂತಿರುಗಿ ನೋಡಿದರೆ ಕಾಣಬಹುದು. ಈಗೀಗ ನಾವು ಸ್ತ್ರೀವಾದಿ ಸಾಹಿತ್ಯ ಮೀಮಾಂಸೆಯನ್ನೂ, ಸ್ತ್ರೀವಾದಿ ವಿಮರ್ಶೆಯನ್ನೂ, ಸ್ತ್ರೀವಾದಿ ಭಾಷಾಶಾಸ್ಸ್ತ್ರವನ್ನೂ ಕಟ್ಟಿಕೊಳ್ಳುತ್ತಿದ್ದೇವೆ. ಇಂತಹ ಕಟ್ಟಾಣಿಕೆಗೆ ಕನ್ನಡ ಪ್ರಜ್ಞೆಗೆ ಸಾಹಿತ್ಯದಲ್ಲಿ ಮತ್ತು ಸಮಾಜದಲ್ಲಿ ಸ್ತ್ರೀವಾದಿ ಚಳವಳಿಯೆ ಪ್ರವೇಶ ಮಾಡಬೇಕಾಯ್ತು.
ಕನ್ನಡ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಂಡ ನಾವು ಆ ಸಾಹಿತ್ಯ ಕೃತಿಗಳನ್ನು ಅಭ್ಯಾಸ ಮಾಡಿ ಅವುಗಳಿಂದಲೆ ವಿಮರ್ಶಾ ಪರಿಕರ-ಮಾನದಂಡಗಳನ್ನು ರೂಪಿಸಿಕೊಳ್ಳುವ ಎಚ್ಚರವನ್ನು ಬಹುದಿನಗಳ ಕಾಲ ಮೂಡಿಸಿಕೊಳ್ಳಲಿಲ್ಲ. ಹಾಗೇ ಹಿಂದೆ ಮೀಮಾಂಸೆಯ ವಿಚಾರದಲ್ಲಿ ಹೇಗೆ ಕಡತರಲು ಸಂಸ್ಕೃತಕ್ಕೆ ಕನ್ನಡ ಲಾಕ್ಷಣಿಕರು ಜೋತುಬಿದ್ದರೋ ಹಾಗೆ ಆಧುನಿಕ ವಿಮರ್ಶೆಯ ಸಂದರ್ಭದಲ್ಲಿ ಸಂಸ್ಕೃತ ಮತ್ತು ಇಂಗ್ಲಿಶ್ ಎರಡಕ್ಕೂ ನಮ್ಮವರು ಜೋತುಬಿದ್ದರು. ವಿಮರ್ಶೆಯ ವಿಚಾರದಲ್ಲಿ ಪರಂಪರೆಯನ್ನು ಕಟ್ಟಿಕೊಳ್ಳುವ; ವಿಮರ್ಶಾ ಚರಿತ್ರೆ ರಚಿಸುವ ಯತ್ನಗಳೇ ನಡೆಯಲಿಲ್ಲ. ಅದೆಲ್ಲವೂ ಕಾವ್ಯಮೀಮಾಂಸೆಯ (ಸಂಸ್ಕೃತ+ಭಾರತೀಯ) ಕ್ರೋಡೀಕರಣದಲ್ಲಿ ಅವಜ್ಞೆಗೆ ಗುರಿಯಾಯಿತು. ಬಹುಕಾಲ ಪ್ರಾಚೀನರಲ್ಲಿ ವಿಮರ್ಶೆ ಇರಲಿಲ್ಲ ಎಂದೇ ನಾವು ನಂಬಿದೆವು. ಮೀಮಾಂಸೆಯೂ ವಿಮರ್ಶೆಯೂ ಪರಸ್ಪರ ಬೇರೆಯಾದ ಚಟುವಟಿಕೆ/ಶಿಸ್ತುಗಳು ಎಂದೂ ನಂಬಿದೆವು.
ಇತ್ತೀಚೆಗೆ ಎಲ್ಲ ಪ್ರಕಾರಗಳ ಚರಿತ್ರೆಗಳನ್ನು ಕಟ್ಟಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಇದರ ಅಂಗವಾಗಿ ಸಂಶೋಧನೆಯ ಚರಿತ್ರೆಯೂ, ವಿಮರ್ಶೆಯ ಚರಿತ್ರೆಯೂ, ಸಂಶೋಧನೆ – ವಿಮರ್ಶೆಗಳ ಸಂಶೋಧನೆಗಳೂ ನಡೆಯುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಂತಹ ಚರಿತ್ರೆಗಳನ್ನು ಕಟ್ಟುವ ಯತ್ನಗಳು ನಡೆದಿವೆ. ಆದರೆ ಸಂಶೋಧನೆಯ ಚರಿತ್ರೆಯನ್ನು ಕಮಲಾ ಹಂಪನಾ ಅವರಿಗೆ ವಹಿಸಲಾಗಿ ಅವರು ಅದನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ವಿಮರ್ಶೆಯ ಚರಿತ್ರೆ ರಚನೆಯಲ್ಲೂ ಸಾಕಷ್ಟು ಲೋಪಗಳು ಇಣುಕಿವೆ. ಅನುವಾದ ಸಾಹಿತ್ಯದ ಚರಿತ್ರೆಯನ್ನು ಸಂಪಾದಿಸಿರುವ ಮೋಹನ ಕುಂಟಾರರ ಪ್ರಯತ್ನ ಒಂದು ಒಳ್ಳೆಯ ಪ್ರಯತ್ನ.
ನಮ್ಮ ಆಧುನಿಕ ವಿಮರ್ಶೆಯನ್ನು ರೂಪಿಸಿದ ಹಲವಾರು ಚಿಂತನೆಗಳಲ್ಲಿ (ಐಡಿಯಾಲಜಿಗಳಲ್ಲಿ) ರಾಷ್ಟ್ರೀಯವಾದವೂ ಒಂದು. ಎಲ್ಲ ಭಾರತೀಯರೂ ಒಂದೇ ಎಂಬ ಭಾವ ಮತ್ತು ನಮ್ಮ ಸಂಸ್ಕೃತಿ ಪರಂಪರೆ ಯಾರಿಗೂ ಕಡಿಮೆಯಾದುದಲ್ಲ ಎಂಬ ಭಾವಗಳು ನಮ್ಮ ಪರಂಪರೆಯನ್ನು ಅಭಿಮಾನದಿಂದ ಮರುರಚಿಸಿಕೊಳ್ಳುವ ಪ್ರಚೋದನೆಯನ್ನು ನೀಡಿದವು. ಇದು ನಮ್ಮದು, ಈ ಕೆಲಸವನ್ನು ನಾವು ನಮ್ಮ ಆತ್ಮಾಭಿಮಾನ ವೃದ್ಧಿಗಾಗಿ ಮಾಡಲೇಬೇಕು ಎಂಬ ರಾಷ್ಟ್ರೀಯ ಪ್ರಜ್ಞೆಯು ಸಾಹಿತ್ಯ ಚರಿತ್ರೆ ರಚನೆ, ಶಾಸನಗಳ ಸಂಶೋಧನೆ, ಗ್ರಂಥ ಸಂಪಾದನೆ ಮೊದಲಾದ ಶಾಸ್ತ್ರಗಳನ್ನು ಕೈಗೆತ್ತಿಕೊಂಡ ದೇಶೀ ವಿದ್ವಾಂಸರನ್ನು ಹುರಿದುಂಬಿಸಿತು. ಆದರೆ ಇದೇ ಶಾಸ್ತçಗಳನ್ನು ಕೈಗೆತ್ತಿಕೊಂಡ ಪಾಶ್ಚಾತ್ಯ ವಿದ್ವಾಂಸರಿಗೆ ಇವೆಲ್ಲವೂ ಬರಿ ಅಧ್ಯಯನ ಶಿಸ್ತುಗಳಾಗಿದ್ದವು. ಅಥವಾ ಧರ್ಮಪ್ರಚಾರ, ಆಡಳಿತಾತ್ಮಕ ಅನುಕೂಲಕ್ಕಾಗಿ ಅಭ್ಯಾಸ ಮಾಡಬೇಕಾದ ವಲಯಗಳಾಗಿದ್ದವು. ಕೆಲವರಲ್ಲಂತೂ ಕತ್ತಲ ಕೂಪದಲ್ಲಿ ಬಿದ್ದಿರುವ ಅನಾಗರಿಕ ಸಂಸ್ಕೃತಿಗಳನ್ನು ಉದ್ಧರಿಸುವ ವೈಟ್‌ಮ್ಯಾನ್ಸ್ ಬರ್ಡನ್ (ಬಿಳಿಯರ ಹೊರೆ) ಧೋರಣೆಯ ಕೆಲಸಗಳಾಗಿದ್ದವು. ಆದರೆ ನಮ್ಮವರಿಗೆ ಈ ಶಾಸ್ತ್ರಗಳು ರಾಷ್ಟಾçಭಿಮಾನದ ಸಂಕೇತಗಳಾಗಿದ್ದವು. ಬಹುಶಃ ಇದರಿಂದಾಗಿಯೇ ಏನೋ ಈ ಶಾಸ್ತ್ರಗಳ ಮೂಲಕ ರೂಪಿತಗೊಂಡಿರುವ ವಿಮರ್ಶೆಯಲ್ಲಿ ಬಹುಪಾಲು ಭಾಗವು ಪ್ರಶಂಸಾಧಾಟಿ, ಗುಣಗ್ರಹಣ, ವರ್ಣನಾತ್ಮಕ, ರಸ-ಧ್ವನಿ ನಿರ್ದೇಶಿತ ಮತ್ತು ಸಂಶೋಧನಾತ್ಮಕ ಧಾಟಿಗಳನ್ನು ಹಿಡಿದಿದೆ.
1.10.1 ಸಾಹಿತ್ಯ ಪ್ರಚಾರ-ವಿಮರ್ಶೆ
ರಾಷ್ಟ್ರೀಯತೆಯ ಹಲವು ಪ್ರಚೋದನೆಗಳಲ್ಲಿ ಸಾಹಿತ್ಯ ಪರಂಪರೆಯ ಮರುರಚನೆ ಎಷ್ಟು ಮುಖ್ಯವಾದದ್ದೋ ಆ ಮರು ರಚಿಸಿಕೊಂಡ ಸಾಹಿತ್ಯ ಪರಂಪರೆಯ ಪ್ರಚಾರ ಕರ‍್ಯ ಕೂಡ ಅಷ್ಟೇ ಮುಖ್ಯವಾದದ್ದು. ವಿಶ್ವವಿದ್ಯಾಲಯಗಳು, ಕರ್ನಾಟಕ ಸಂಘ, ವಿದ್ಯಾವರ್ಧಕ ಸಂಘ, ಸಾಹಿತ್ಯ ಪರಿಷತ್ತು, ಇಂಥ ಸಂಸ್ಥೆಗಳು ಪತ್ರಿಕೆಗಳ ಮೂಲಕ, ಪ್ರಸಾರಾಂಗಗಳ ಮೂಲಕ, ಪ್ರಚಾರೋಪನ್ಯಾಸಗಳ ಮೂಲಕ ಸಾಹಿತ್ಯವನ್ನು ಪ್ರಚಾರ ಮಾಡುವ ಕೆಲಸವನ್ನು ಭರದಿಂದ ಕೈಗೊಂಡವು. ಸಾಹಿತ್ಯವನ್ನು ಜನಗಳಿಗೆ ತಲುಪಿಸಬೇಕು, ಪರಿಚಯಿಸಬೇಕು ಎಂಬ ಉದ್ದೇಶದಿಂದ ಈ ಚಟುವಟಿಕೆಗಳು ನಡೆದದ್ದರಿಂದ ಈ ಚಟುವಟಿಕೆಗಳಲ್ಲಿ ವ್ಯಕ್ತವಾಗಿರುವ ವಿಮರ್ಶೆ ತನ್ನದೇ ಇತಿಮಿತಿಗಳನ್ನು ಪಡೆದುಕೊಂಡಿತು. ಪ್ರಚಾರೋದ್ದೇಶದ ವಿಮರ್ಶೆಯು ಕನ್ನಡ ರಾಷ್ಟ್ರೀಯತೆಯ ಪ್ರಜ್ಞೆಯಿಂದ ರೂಪಿತಗೊಂಡಿದ್ದು; ಇದು ಕೃತಿಗಳ ಗುಣ ಶಕ್ತಿಗಳನ್ನು ವೈಭವೀಕರಿಸುವ ಕೆಲಸವನ್ನೇ ಹೆಚ್ಚು ಹೆಚ್ಚು ಮಾಡಿ, ಅವುಗಳಲ್ಲಿನ ಕೇಡುಗಳನ್ನು ವಿಮರ್ಶಿಸುವ ಕೆಲಸವನ್ನು ಕ್ವಚಿತ್ತಾಗಿ ಮಾಡಿತು.
ನಮ್ಮ ಸಾಹಿತ್ಯ ಪರಂಪರೆಯಲ್ಲಿ ತಿಳಿಯಬೇಕಾದದ್ದು ಬೇಕಾದಷ್ಟಿದೆ. ನಮ್ಮ ಜನಪದರು ಇದನ್ನೆಲ್ಲ ತಿಳಿಯಬೇಕು. ಅವರಿಗೆ ನಾವೂ ಇದರಲ್ಲಿನ ಮೌಲ್ಯಗಳನ್ನೆಲ್ಲ ತಿಳಿಸಬೇಕು. ಸಾಹಿತ್ಯದ ಅಭಿರುಚಿಯನ್ನು ಹುಟ್ಟಿಸಬೇಕು ಎಂಬ ತಿಳುವಳಿಕೆಯಿಂದ ಇಂತಹ ಚಟುವಟಿಕೆಗಳು ನಡೆದವು. ಹಾಗಾಗಿಯೇ ವಿಶ್ವವಿದ್ಯಾಲಯಗಳ ಪ್ರಕಟಣಾ ವಿಭಾಗಗಳಿಗೆ ನಮ್ಮಲ್ಲಿ ಪ್ರಸಾರಾಂಗ ಎಂಬ ಹೆಸರನ್ನು ಇಡಲಾಯ್ತು. ಸಾಹಿತ್ಯಗಳನ್ನು ಶಿಷ್ಟ ಮತ್ತು ಜನಪದ ಎಂದು ಬೇಧ ಮಾಡಿ ನೋಡುವ ಪರಿಪಾಟವೂ ಇದೇ ಕಾಲದಲ್ಲಿ ರೂಪತಳೆಯಿತು. ಪ್ರಚಾರೋಪನ್ಯಾಸ ಮಾಲಿಕೆಗಳಲ್ಲಿ ಪ್ರಕಟ ಆಗಿರುವ ಬಹುಪಾಲು ಸಾಹಿತ್ಯ, ಕೃತಿ, ಕವಿ ಚರ್ಚೆಗಳಲ್ಲಿ ಪರಿಚಯ, ಸಮೀಕ್ಷೆ, ಗುಣವಿವರಣ ಇವುಗಳೆ ಪ್ರಧಾನ ಆಗಿರುವುದನ್ನು ಕಾಣಬಹುದು.
ಅಷ್ಟೆ ಅಲ್ಲ ಈ ಉಪಕ್ರಮದಿಂದಾಗಿ ಪ್ರತಿಷ್ಠಿತ ಸಾಹಿತ್ಯವನ್ನು ಏಕೈಕ ಕನ್ನಡ ಸಾಹಿತ್ಯ ಪರಂಪರೆಯಾಗಿ ಸ್ಥಾಪಿಸುವ ಕೆಲಸವೂ ಆಯಿತು. ಇದೇ ಕನ್ನಡ ಸಾಹಿತ್ಯ. ಎಲ್ಲ ಕನ್ನಡಿಗರಿಗು ಇದು ತಲುಪಬೇಕು ಎಂದು ಲಿಪಿಕ ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸುವ; ಆ ಮೂಲಕ ಜನಪದರ ಸಾಹಿತ್ಯಗಳನ್ನು ಅಲಕ್ಷಿಸುವ ಕೆಲಸವೂ ನಡೆಯಿತು. ಕನ್ನಡ ಸಾಹಿತ್ಯದ ಶಿಖರಗಳನ್ನು ಗುರ್ತಿಸಿಕೊಳ್ಳುವ, ಸಾಹಿತ್ಯ ಕೃತಿಗಳ ಧರ್ಮನಿರಪೇಕ್ಷ ಭಾಗಗಳನ್ನು ಕ್ರೋಢೀಕರಿಸಿಕೊಳ್ಳುವ, ನೈತಿಕ ನೆಲೆಗಳನ್ನು ಓದಿನ ಮೂಲಕ ಗುರ್ತಿಸಿಕೊಳ್ಳುವ ಕೆಲಸವೂ ನಡೆಯಿತು.
1.10.2 ರಾಷ್ಟ್ರ ನಿರ್ಮಾಣದ ಆಕಾಂಕ್ಷೆ-ಏಕೀಕರಣ
ಸುಧಾರಣವಾದಿ ಮನೋಧರ್ಮದಿಂದಾಗಿ ಸಾಹಿತ್ಯದ ಚರಿತ್ರೆರಚನೆಯಲ್ಲಿ ಸಾಹಿತ್ಯವನ್ನು ವೈಜ್ಞಾನಿಕ, ವೈಚಾರಿಕ, ಧರ್ಮನಿರಪೇಕ್ಷ ಮೌಲ್ಯಗಳ ಹಿನ್ನಲೆಯಲ್ಲಿ ಸಂಗ್ರಹಿಸಿಕೊಳ್ಳುವ ಪರಿಪಾಟವೊಂದು ಈ ಕಾಲದಲ್ಲಿ ರೂಡಿಯಾಯಿತಷ್ಟೆ. ಸಮಗ್ರ ಸಾಹಿತ್ಯ ಚರಿತ್ರೆಯನ್ನು ಜನಸಮುದಾಯದಲ್ಲಿ ಪ್ರಸಾರ ಮಾಡುವುದಕ್ಕಿಂತ ಆಯ್ದ ಕವಿಕೃತಿಗಳನ್ನು ಅದರಲ್ಲು ಆಯ್ದ ಕೃತಿ ಭಾಗಗಳನ್ನು-ಮೌಲ್ಯಗಳನ್ನು ಜನರಿಗೆ ಪ್ರಸರಿಸುವ ಕೆಲಸ ಜರುಗಿತು. ಇಂಥ ಸಂಗ್ರಹ, ಆಯ್ಕೆ, ಪ್ರಸಾರ ಮತ್ತು ಅಲಕ್ಷ್ಯಗಳಲ್ಲಿ ಕೆಲಸ ಮಾಡಿರುವ ವಿಮರ್ಶನ ಪ್ರಜ್ಞೆಯನ್ನು ವಿಜ್ಞಾನವಾದ, ವಿಚಾರವಾದ, ಉದಾರ ಮಾನವತಾವಾದ, ಧರ್ಮನಿರಪೇಕ್ಷ, ಜಾತ್ಯಾತೀತ, ಪ್ರಜಾಪ್ರಭುತ್ವೀಯ ದೃಷ್ಟಿ ಕೋನಗಳು ರೂಪಿಸಿವೆ. ನಿಜ. ಆದರೆ ಇವೆಲ್ಲವುಗಳ ಹಿಂದೆ ಇದ್ದ ಉದ್ದೇಶ ಮಾತ್ರ ರಾಷ್ಟ್ರ ನಿರ್ಮಾಣ. ಹಲವಾರು (ಬಹುಮುಖಿ) ರಾಷ್ಟ್ರೀಯತೆಯ ಪರಿಕಲ್ಪನೆಗಳು ನಮ್ಮ ರಾಷ್ಟ್ರವು ಹೇಗೆ ಕಟ್ಟಲ್ಪಡಬೇಕು, ನಮ್ಮ ಸಂಸ್ಕೃತಿ ಹೇಗೆ ಕಟ್ಟಲ್ಪಡಬೇಕು ಎಂಬುದನ್ನು ನಿರ್ಧರಿಸಿವೆ.
ವಿಮರ್ಶೆಯ ಸ್ವರೂಪವು ಸಂಭವಿಸುವ ಹಿಂದೆ ಕೆಲಸ ಮಾಡಿರುವ ಈ ರಾಷ್ಟçನಿರ್ಮಾಣ ಪ್ರಜ್ಞೆಯು ಗಾಂಧೀಜಿಯವರ ಸ್ವರಾಜ್ಯದ ಕಲ್ಪನೆ ಹಾಗೂ ರಾಮರಾಜ್ಯದ ಕಲ್ಪನೆಗಳಿಂದ ಪ್ರಭಾವಿತಗೊಂಡಿದೆ. ಸುಸಂಸ್ಕೃತ ನಾಡನ್ನು, ಸರ್ವೋದಯ ನಾಡನ್ನು ನಾವು ಕಟ್ಟಿಕೊಳ್ಳಬೇಕೆಂಬ ನಿರ್ಮಾಣದ ಆಕಾಂಕ್ಷೆ ನಮ್ಮ ಕುವೆಂಪು, ಡಿವಿಜಿ, ಮಾಸ್ತಿ, ತೀ.ನಂ.ಶ್ರೀ.ಯವರ ವಿಮರ್ಶೆಗಳಲ್ಲಿ ಕೆಲಸ ಮಾಡಿರುವುದನ್ನು ಗಮನಿಸಬಹುದು. ಉತ್ತಮ ರಾಷ್ಟ್ರ ಕಟ್ಟಲು ಉತ್ತಮ ಸಾಹಿತ್ಯದ ಅಗತ್ಯವಿದೆ ಎಂಬ ಚಿಂತನೆ ಡಿವಿಜಿಯವರ ಸಾಹಿತ್ಯಶಕ್ತಿ ಪುಸ್ತಕದಲ್ಲಿ ಪ್ರಕಟವಾಗಿದೆ. ಹಾಗೇ ಸಂಸ್ಕೃತಿಯನ್ನು ಕಟ್ಟುವ ಅಂಗವಾಗಿ (ಸಂಸ್ಕೃತದ ಮಾದರಿಯ ಮೂಲಕ) ನಮ್ಮದೇ ಕಾವ್ಯ ಮೀಮಾಂಸೆಯನ್ನು ಕಟ್ಟಿಕೊಳ್ಳುವ ಪ್ರಯತ್ನವನ್ನು ತೀನಂಶ್ರೀಯವರಲ್ಲಿ ಕಾಣಬಹುದು. ರಾಷ್ಟ್ರೀಯತೆಯಿಂದ, ಧರ್ಮನಿರಪೇಕ್ಷೀಕರಣ ಚಿಂತನೆಯಿಂದ, ಸಾರ್ವಕಾಲಿಕ ಮೀಮಾಂಸಾ ತತ್ವಗಳ ಅನ್ವೇಷಣ ಪ್ರಜ್ಞೆಯಿಂದ ಪ್ರೇರಿತವಾದ ದೃಷ್ಟಿಕೋನಗಳು ಭಾರತೀಯ ಕಾವ್ಯ ಮೀಮಾಂಸೆ ಕೃತಿಯಲ್ಲಿ ಕೆಲಸ ಮಾಡಿವೆ.
ರಾಷ್ಟ್ರನಿರ್ಮಾಣದ ಆಕಾಂಕ್ಷೆಯು ಪ್ರಕಟಗೊಂಡಿರುವ ಒಂದು ಬಗೆ ನಾಳಿನ ನಾಡನ್ನು ಕಟ್ಟುವುದು. ಆದರೆ ಇದೇ ಆಕಾಂಕ್ಷೆಯು ನೆನ್ನೆಯ ನಾಡನ್ನು ಮರುಕಟ್ಟಿಕೊಳ್ಳುವ ಬಗೆಯಾಗಿಯೂ ಪ್ರಕಟವಾಗಿದೆ. ಕಡೆಂಗೋಡ್ಲು ಅವರ ಕನ್ನಡ ನುಡಿಯ ಏಳಿಗೆ ಮತ್ತು ಬಿ.ಎಂ.ಶ್ರೀಯವರ ಕನ್ನಡ ಮಾತು ತಲೆಯೆತ್ತುವ ಬಗೆ ಇಂಥ ಕಡೆ ನಾಳಿನ ಕರ್ನಾಟಕ ಕಟ್ಟುವ ಚಿಂತನೆ ಇದ್ದರೆ, ಶಂಬಾ ಅವರ ಕಂನುಡಿಯ ಹುಟ್ಟು ಇಂಥ ಕಡೆ ನೆನ್ನೆಯ ಕರ್ನಾಟಕವನ್ನು ಕಟ್ಟುವ ಚಿಂತನೆ ಇದೆ. (ನೆನ್ನೆಯ ಚರಿತ್ರೆ ಕಟ್ಟಿರುವುದೂ ಕೂಡ ಭವಿಷ್ಯದ ಕನಸಿಗಾಗಿಯೇ.) ಆರ್.ನರಸಿಂಹಾಚಾರ್ಯರ ಮತ್ತು ಮುಗಳಿಯವರ ಸಾಹಿತ್ಯ ಚರಿತ್ರೆ ರಚನೆ, ಶಂಬಾರ ಕರ್ನಾಟಕ ಸಂಸ್ಕೃತಿಯ ಸಂಶೋಧನೆ, ಗೋವಿಂದ ಪೈಯವರ ಭಾಷೆ-ಸಾಹಿತ್ಯಗಳ ಹಳಮೆಯನ್ನು ಗುರ್ತಿಸುವ ಕೆಲಸ, ಆಲೂರ ವೆಂಕಟರಾಯರ ಕರ್ನಾಟಕ ಗತವೈಭವದ ವಿಚಾರ, ಇವೆಲ್ಲಾ ಕರ್ನಾಟಕತ್ವ ಅಥವಾ ಕರ್ನಾಟಕ ಸಂಸ್ಕೃತಿ ಚರಿತ್ರೆಯನ್ನು ಕಟ್ಟಿಕೊಳ್ಳುವ ಆಕಾಂಕ್ಷೆಗಳ ಬೇರೆ ಬೇರೆ ರೂಪಗಳೇ ಆಗಿವೆ. ಇಂಥ ಎಲ್ಲ ರೂಪಗಳಿಂದ ನಮ್ಮ ಹೊಸನೀರಿನ ಕಾಲದ ವಿಮರ್ಶಾ ಸಂಸ್ಕೃತಿ ಪ್ರಭಾವಿತಗೊಂಡಿದೆ ಮತ್ತು ರೂಪಿತಗೊಂಡಿದೆ.
ಆದರೆ ಸಾಹಿತ್ಯ ಪರಂಪರೆಯನ್ನು ಕಟ್ಟಿಕೊಳ್ಳುವ ಮತ್ತು ಪುನರ್ಕಟ್ಟಿಕೊಳ್ಳುವ ಕ್ರಿಯೆಯಲ್ಲಿ ಗಾಂಧೀಜಿಯವರ ಸ್ವರಾಜ್ಯ-ಗ್ರಾಮಸ್ವರಾಜ್ಯ ಕಲ್ಪನೆಯು ಅಷ್ಟಾಗಿ ಸ್ವಂತಿಕೆಯ ಪ್ರಶ್ನೆಗಳನ್ನು ಬಡಿದೆಬ್ಬಿಸಿದಂತೆ ಕಾಣುವುದಿಲ್ಲ. ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣ, ಕನ್ನಡದ್ದೇ ಆದ ಸಾಹಿತ್ಯ ಮೀಮಾಂಸೆ, ವೈಚಾರಿಕತೆಗಳನ್ನು ಕಟ್ಟಿಕೊಳ್ಳುವ ಪ್ರಜ್ಞೆಯೊಂದು ಇತ್ತೀಚೆಗಷ್ಟೇ ಬೆಳೆದಿದೆ. ಹಾಗೆ ನೋಡಿದರೆ ಶುದ್ಧಾಂಗವಾಗಿ ಇದು ಕನ್ನಡದ್ದೇ ಎಂದು ಹೇಳಬಹುದಾದ ವ್ಯಾಕರಣದ ಪೂರ್ಣ ಸ್ವರಾಜ್ಯ, ವಿಮರ್ಶೆ, ವೈಚಾರಿಕತೆಗಳ ಪೂರ್ಣ ಸ್ವರಾಜ್ಯವೊಂದು ಇರಲಿಕ್ಕೆ ಸಾಧ್ಯವಿಲ್ಲ. ಇದೊಂದು ವಿಕಲ್ಪ. ಅಂಥದ್ದೊಂದು ಸ್ಥಿತಿಯನ್ನು ನಿರ್ಮಿಸಲೂ ಸಾಧ್ಯವಿಲ್ಲ. ಆದಾಗ್ಯೂ ಇಂಥ ಪ್ರಯತ್ನಗಳು ನಡೆಯುತ್ತಿವೆ. ಆದರೆ ಈ ಪ್ರಯತ್ನಗಳು ಆರಂಭದಲ್ಲಿ ಪ್ರಭಾವಗಳ-ಭಿನ್ನ ಅನುಸಂಧಾನಗಳ ಜೀರ್ಣಫಲ ಎಂಬಂತೆಯೇ ನಡೆದಿವೆ ಮಾತ್ರ. 19 ಆಂಡಯ್ಯ ವ್ಯಕ್ತಿತ್ವ ಮತ್ತು ಬಿ.ಎಂ.ಶ್ರೀ ವ್ಯಕ್ತಿತ್ವಗಳೆಲ್ಲ ನಮ್ಮಲ್ಲಿ ಬೆರೆತುಹೋಗಿವೆ. ಪ್ರಭಾವಗಳ ಅನ್ವೇಷಣೆ, ಮೂಲಗಳ ಅನ್ವೇಷಣೆಗಳಿಗೂ (ಮೂಲವ್ಯಾಧಿಗಳಿಗೂ?) ಶುದ್ಧತೆ-ಸ್ವಂತಿಕೆಯ ಅನ್ವೇಷಣೆ, ನಮ್ಮ-ಅನ್ಯವೆಂಬ ವಿಂಗಡಣೆಗಳಿಗೂ ಅಂಥ ವ್ಯತ್ಯಾಸವೇನಿಲ್ಲ.
1.11 ಸಮನ್ವಯತೆ-ಸಂವಾದ ಗುಣ
ಅತ್ತ ತೀರಾ ಭಜನೆಯೂ ಆಗದ ಇತ್ತ ತೀರಾ ಕಟುನಿಂದೆಯೂ ಆಗದ ಸಮನ್ವಯ ಸ್ಥಿತಿಯೊಂದನ್ನು ಸಾಧಿಸಬೇಕೆಂಬ ಧೋರಣೆ ನಮ್ಮ ವಿಮರ್ಶೆಯಲ್ಲಿ ಪ್ರಕಟವಾಗಿರುವುದನ್ನು ಕಾಣಬಹುದು. ಹಾಗೇ ಯಾವುದೋ ಕಾಲದಲ್ಲಿ ಯಾರೋ ಬರೆದ ವಿಮರ್ಶೆಗೆ ಇನ್ಯಾರೋ ಇನ್ನೆಲ್ಲೋ ಉತ್ತರ ಕೊಟ್ಟಿರುವ ಸಂವಾದ ಗುಣವೂ ಇಲ್ಲಿ ಸಾಕಷ್ಟಿದೆ.
ವಿಪರೀತ ಪ್ರಶಂಸೆ ಮಾಡುವುದು. ಮತ್ತು ವಿಪರೀತ ವಸ್ತುನಿಷ್ಠವಾಗಿ ಕಟುವಿಮರ್ಶೆಯನ್ನು ಪ್ರಕಟಿಸುವುದು ಇವೆರಡರ ಬಗೆಗೂ ನಮ್ಮಲ್ಲಿ ಆತ್ಮವಿಮರ್ಶೆ ಇದೆ. ರಂಗಣ್ಣನವರ ‘ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು’ ಲೇಖನದ ಮುದ್ದಣನ ಕುರಿತ ನಿಷ್ಠುರ ಅಭಿಪ್ರಾಯದ ಜೊತೆಗೆ ಅ.ನ.ಕೃ. ಅವರ ‘ವಿಮರ್ಶಕನ ಹಾದಿ’ ಪ್ರಬಂಧವನ್ನು ಇಟ್ಟು ನೋಡಬಹುದು. “ಕಟು ವಿಮರ್ಶೆಗೆ ಹೊರಡುವ ವಿಮರ್ಶಕ ತನ್ನ ಅಧಿಕಾರವೇನೆಂಬುದನ್ನು ತಾನೇ ಕೇಳಿಕೊಳ್ಳಬೇಕು. ಕೈಗೆ ಸಿಕ್ಕಿದ ಗಡಿಯಾರವನ್ನು ಅಂಬೆಗಾಲಿಕ್ಕುವ ಮಗು ಕೂಡ ಬಿಚ್ಚಿ, ಹರಿದು, ಚೂರು ಚೂರು ಮಾಡಿಬಿಡಬಹುದು. ಆದರೆ ಅದನ್ನು ಮತ್ತೆ ಕೂಡಿಸುವುದಕ್ಕೆ ಪ್ರತಿಭೆ ಬೇಕು.” 20 ಕಟುವಿಮರ್ಶೆಯ ಬಗೆಗೆ “ಕಟುವಾಗಿ ಬರೆದು ಕವಿಯ ಮನಸ್ಸಿಗೆ ಕಿರುಕುಳ ಕೊಟ್ಟೆನೆಂದು ತೃಪ್ತಿಪಟ್ಟುಕೊಳ್ಳುವ ವಿಮರ್ಶಕ ಸರಸ್ವತೀ ದ್ರೋಹ ಮಾಡುತ್ತಿದ್ದಾನೆಂಬುದನ್ನು ಮರೆಯಬಾರದು. ಕಾವ್ಯಪ್ರಪಂಚದಲ್ಲಿ ಕಟು ವಿಮರ್ಶೆಯನ್ನು ಜೀರ್ಣಿಸಿಕೊಳ್ಳಬಲ್ಲ ವಾಲ್ಟ್ ವಿಟ್‌ಮನ್‌ಗಳಿಗಿಂತ ಷೆಲ್ಲಿಗಳೆ ಅಧಿಕರಾಗಿದ್ದಾರೆ. ವಿನಾಕಾರಣ ಕವಿಯ ಕ್ರಿಯಾಶಕ್ತಿಯ ಮೇಲೆ ಆಘಾತ ಮಾಡುವ ವೃತ್ತಿ ಪಶುವೃತ್ತಿ”21 ಎಂದು ಕಟುವಾಗಿಯೇ ಅ.ನ.ಕೃ. ವಿಮರ್ಶೆಯ ಸ್ವರೂಪ ಹೇಗಿರಬೇಕೆಂಬ ಬಗ್ಗೆ ಹೇಳುತ್ತಾರೆ.
1.12 ಶ್ರೇಷ್ಠತೆಯ ಪ್ರಜ್ಞೆ
ನವೋದಯ ಪೂರ್ವವೋ, ನವೋದಯದ ಆರಂಭಕಾಲವೋ, ಪುನರುಜ್ಜೀವನ ಕಾಲವೋ, ಸ್ವಾತಂತ್ಯ್ರಪೂರ್ವ ಕಾಲವೋ ಇಪ್ಪತ್ತನೆಯ ಶತಮಾನದ ಮುಂಜಾವೋ, ಹೊಸಗನ್ನಡದ ಅರುಣೋದಯವೋ ಏನಾದರು ಕರೆಯಲಿ; ಈ ಹೊಸನೀರಿನ ಕಾಲದ ವಿಮರ್ಶೆಯ ಒಂದು ಮುಖ್ಯ ಚಹರೆ ಎಂದರೆ ಅದು ಶ್ರೇಷ್ಠತೆಯ ಪ್ರಜ್ಞೆ. ಶ್ರೇಷ್ಠ ಕೃತಿ, ಶ್ರೇಷ್ಠ ಕವಿ, ಶ್ರೇಷ್ಠ ಕೃತಿಭಾಗ ಹೀಗೆ ಶ್ರೇಷ್ಠವೆಂದು ತಮಗೆ ಕಂಡ ಸಾಹಿತ್ಯ ಭಾಗ-ಸಾಹಿತ್ಯಗಳನ್ನು ಈ ಕಾಲದ ವಿಮರ್ಶೆ ಅನುಸಂಧಾನಕ್ಕೆ ಎತ್ತಿ ಕೊಂಡಿದೆ. ಶ್ರೇಷ್ಠತೆಯೆಂಬುದು ವ್ಯಸನವೆಂಬಷ್ಟರ ಮಟ್ಟಿಗೆ ಇವತ್ತಿಗೂ ನಮ್ಮ ವಿಮರ್ಶೆಯಲ್ಲಿ ಇದು ಚಾಲ್ತಿಯಲ್ಲಿ ಇರುತ್ತ ಬಂದಿದೆ. ಶ್ರೇಷ್ಠತೆ ಎಂದರೆ ಏನು? ಶ್ರೇಷ್ಠತೆಯ ನಿರ್ವಚನ ಹೇಗೆ ಬದಲಾಗುತ್ತ ಬಂದಿದೆ? (ಆ ಕಲ್ಪನೆಯ ಹಿಂದಿನ ಸಾಂಸ್ಕೃತಿಕ ರಾಜಕಾರಣವೇನು?) ಶ್ರೇಷ್ಠತೆಯ ಮಾನದಂಡಗಳು ಹೇಗೆ ಕಾಲಕಾಲಕ್ಕೆ ಬದಲಾಗುತ್ತ ಬಂದಿವೆ. ಸಾಮಾಜಿಕ ಸ್ತರವಿನ್ಯಾಸಕ್ಕೂ ಶ್ರೇಷ್ಠತೆಗೂ ಯಾವಸಂಬಂಧವಿದೆ ಎಂಬ ಚರ್ಚೆ ಇಲ್ಲಿ ಅಪ್ರಸ್ತುತ. ಆದರೆ ವಿಮರ್ಶೆಯನ್ನು ಪ್ರಭಾವಿಸಿದ, ರೂಪಿಸಿದ ಅನೇಕ ಪ್ರಜ್ಞೆಗಳಲ್ಲಿ ಈ ಶ್ರೇಷ್ಠತೆಯ ಪ್ರಜ್ಞೆಯೂ ಒಂದು ಎಂಬುದು ನಿರ್ವಿವಾದ. ಸಂಪಾದನೆ, ಸಂಗ್ರಹ ಕರ‍್ಯಗಳಲ್ಲಿ ಇದು ಎದ್ದು ಕಂಡರೆ; ಚರಿತ್ರೆರಚನೆಯಲ್ಲಿ ಇದು ಅಂತರ್ಗತವಾಗಿದೆ. (1990ರ ಸಂದರ್ಭದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನಡೆದ ರ‍್ಯಾಯ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯದ ಶ್ರೇಷ್ಠತೆಯ ಚರ್ಚೆ ತಾರಕಕ್ಕೆ ಏರಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಡಿ. ಆರ್, ನಾಗರಾಜ, ಕಿರಂ ನಾಗರಾಜ, ಲಂಕೇಶ್, ಶೂದ್ರ ಶ್ರೀನಿವಾಸ್ ಮೊದಲಾದವರು ಈ ಸಮ್ಮೇಳನವನ್ನು ಸಂಘಟಿಸಿದ್ದರು.)
ಮುಗಳಿಯವರ ಸಾಹಿತ್ಯ ಚರಿತ್ರೆ ನೋಡಿದರೂ ಸಾಕು ಅವರು ಎಲ್ಲರ ಬಗೆಗೆ ಬರೆದಿಲ್ಲ. ತಮಗೆ ಗಟ್ಟಿ ಕಾಳುಗಳೆಂದು ಕಂಡು ಬಂದ; ಮುಖ್ಯರು, ಶ್ರೇಷ್ಠರು ಅನಿಸಿದ ಕವಿಗಳನ್ನು ಆರಿಸಿಕೊಂಡು ಚರಿತ್ರೆ ಬರೆದಿದ್ದಾರೆ ಎನ್ನುವುದು ಎದ್ದು ಕಾಣುತ್ತದೆ. ಹಾಗಾಗಿ ಅದೊಂದು ಆಯ್ದ ಸಾಹಿತ್ಯ ಚರಿತ್ರೆ. ಆಪೂರ್ಣವಾದರು ಸಮಗ್ರವೆಂದು ಭಾವಿಸಲಾಗಿರುವ, ನಮಗೆ ಇಷ್ಟೇ ಸಾಕೆಂದು ತಿಳಿಯಲಾಗಿರುವ ಚರಿತ್ರೆ. ಇಂಥ ಆಯ್ದ ಚರಿತ್ರೆಗಳಲ್ಲಿನ ವಿಮರ್ಶೆಯನ್ನು ಶ್ರೇಷ್ಠತೆಯ ಪ್ರಶ್ನೆ ನಿಯಂತ್ರಿಸಿದೆ. ಯಾವ ಮಾನದಂಡಗಳು ಈ ಶ್ರೇಷ್ಠತೆಯ ಕಲ್ಪನೆಯನ್ನು ರೂಪಿಸಿರಬಹುದು? ಹೊಸ ರೀತಿಯ ಛಂದೋಪ್ರಯೋಗ, ಹೊಸರೀತಿಯ ಭಾಷಾಬಳಕೆ, ಮಾರ್ಗನಿರ್ಮಾಪಕ ಅಥವಾ ಪರಂಪರೆಯ ನಿರ್ಮಾಪಕ ಶಕ್ತಿ, ಮೀಮಾಂಸಾ ಪರಿಕರಗಳ ಮೂಲಕ ಪರೀಕ್ಷೆಯಲ್ಲಿ ಗೆದ್ದು ಬರಬಹುದಾದ ಶಕ್ತಿ, ಸಾರ್ವಕಾಲಿಕತೆ, ಧರ್ಮನಿರಪೇಕ್ಷತೆ, ವೈಚಾರಿಕತೆ, ಭಾವಸಮೃದ್ಧಿ, ವರ್ಣನೆ-ಕಥನಗಳ ಬಳಕೆಯ ಸೂಕ್ತ ಔಚಿತ್ಯಪ್ರಜ್ಞೆ ಇತ್ಯಾದಿ ಇತ್ಯಾದಿಗಳು ಶ್ರೇಷ್ಠತೆಯ ಮಾನದಂಡಗಳಾಗಿ ಬಳಕೆಯಾಗಿವೆಯಾದರೂ ಇವು ಆಧುನಿಕ ಸಂದರ್ಭದಲ್ಲಿ ಮುನ್ನೆಲೆಗೆ ಬಂದ ಮಾನದಂಡಗಳಾಗಿವೆ. ಇದಕ್ಕೂ ಹಿಂದೆ ಕುಮಾರವ್ಯಾಸನಾಗಲೀ ಬಸವನಾಗಲೀ ಪಂಪನಾಗಲೀ ಆಯಾ ಧರ್ಮದವರಿಗೆ ಮಾತ್ರವೇ ಹೆಚ್ಚು ಶ್ರೇಷರಾಗಿ ಕಂಡಿದ್ದಾರೆ! ಬೇಂದ್ರೆಯಂಥವರು ಭಕ್ತಕವಿಗಳು ಮತ್ತು ಸಾಹಿತ್ಯ ಕವಿಗಳು ಎಂದು ಇದೇ ಕವಿ ಸಮೂಹವನ್ನು ವಿಭಜಿಸಿ; ಭಕ್ತಕವಿಗಳು ಶ್ರೇಷ್ಠರು ಎಂದಿದ್ದಾರೆ! ನವೋದಯದ ಸಂದರ್ಭದಲ್ಲಿ ಸಾಹಿತ್ಯವು ಯಾರಿಗೆ ರಚಿತವಾಗಿದೆ? ಯಾಕೆ ರಚಿತವಾಗಿದೆ? ಎಂಬ ವಿಚಾರ ಗೌಣವಾಗಿ ಹೇಗೆ ರಚಿತವಾಗಿದೆ ಎಂಬುದೆ ಶ್ರೇಷ್ಠತೆ ನಿರ್ಧರಿಸುವ ಮಾನದಂಡವಾಗಿದೆ. (ಉದಾ: ಕುರ್ತಕೋಟಿ ಅಂತಹವರಲ್ಲಿ) ಇವೆಲ್ಲ ವಿಮರ್ಶೆಯ ಹಿಂದಿನ ಸಾಂಸ್ಕೃತಿಕ ರಾಜಕಾರಣಗಳಲ್ಲದೆ ಬೇರೆ ಅಲ್ಲ. ಇಂಥ ಹಲವು ರಾಜಕಾರಣಗಳು ನಮ್ಮ ವಿಮರ್ಶೆಯನ್ನು ರೂಪಿಸಿವೆ. ರೂಪಿಸುತ್ತಿವೆ.
1.12.1 ಪ್ರಮಾಣೀಕರಣ
ಸಾಹಿತ್ಯ ಪರಂಪರೆಯಲ್ಲಿ ಮುಖ್ಯವಾಗಿ ಇವರನ್ನು ಗಮನಿಸಬೇಕು ಎಂಬಂತೆ ಅಥವಾ ಇಂತಿಂಥವರನ್ನು ಗಮನಿಸಿದರೆ ಸಾಕು ಎಂಬಂತೆ ಚರಿತ್ರೆಯನ್ನು ಕಟ್ಟಿಕೊಳ್ಳುವ ಹಿಂದೆ ಶ್ರೇಷ್ಠತೆಯ ಪ್ರಶ್ನೆ ಅಡಗಿದೆಯೆಂದು ಈಗಾಗಲೇ ಚರ್ಚಿಸಲಾಗಿದೆ. ಆದರೆ ಇದರ ಪರಿಣಾಮ ಏನಾಗಿದೆಯೆಂದರೆ. ನಿರ್ಧಿಷ್ಟ ಪರಂಪರೆಯೊಂದರ ಪ್ರಮಾಣೀಕರಣ ಇದರಿಂದ ಉಂಟಾಗಿದೆ. ಇದು ಮಾತ್ರ ನಮ್ಮೆಲ್ಲರ ಪರಂಪರೆ; ಇದು ನಮ್ಮ ಹೆಮ್ಮೆ, ಇದನ್ನು ಯಾರೂ ನಿರ್ಲಿಕ್ಷಿಸಬಾರದು, ಮರೆಯಬಾರದು ಎಂಬ ನಿರ್ದೇಶನ ಈ ಪ್ರಮಾಣೀಕರಣದಿಂದ ಒದಗಿದೆ. ಆದರೆ ಈ ಪರಂಪರೆ ನಿರ್ಮಾಣವಾಗಿರುವುದೇ ಏಕರೂಪಿ ತತ್ವದ ಮೇಲೆ. ಹಲವು ವಿಸ್ಮೃತಿ-ಅಲಕ್ಷ್ಯಗಳ ಮೇಲೆ.
ಮೊದಲಿನ ಗ್ರಂಥ ಸಂಪಾದನೆ-ಸಂಗ್ರಹಗಳನ್ನು, ಭಾರತೀಯ ಕಾವ್ಯಮೀಮಾಂಸೆಯಂತಹ ಕೃತಿಗಳನ್ನು, ವ್ಯಾಕರಣ ರಚನೆಗಳನ್ನು, ಶಿಕ್ಷಣ ಪಠ್ಯಗಳನ್ನು, ಸಾಹಿತ್ಯ ಚರಿತ್ರೆಗಳನ್ನು ನೋಡಿದರೆ ಪಠ್ಯಗಳ (ಪಾಠಗಳ) ಏಕರೂಪೀಕರಣ, ಮೀಮಾಂಸೆಗಳ ಏಕರೂಪೀಕರಣ, ವ್ಯಾಕರಣಗಳ ಏಕರೂಪೀಕರಣ, ಒಂದು ಪ್ರಮಾಣ ಕನ್ನಡ ಭಾಷೆಯ ರೂಪಣೆ, ಒಂದೇ ಸಾಹಿತ್ಯ ಪರಂಪರೆಯ ಕಲ್ಪನೆ ಹೀಗೆ ಹಲವು ನೆಲೆಗಳಲ್ಲಿ ಆಯ್ಕೆ ಮತ್ತು ಅಲಕ್ಷ್ಯಗಳ ರಾಜಕಾರಣ ಕೆಲಸ ಮಾಡಿರುವುದನ್ನು ಕಾಣಬಹುದು. ಸಮಾಜವನ್ನು ಏಕಚಕ್ರಾಧಿಪತ್ಯಕ್ಕೆ ಒಳಪಡಿಸುವಾಗ-ಏಕರೂಪಿ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡಬೇಕಾದಾಗ ಇಂತಹ ಪ್ರಮಾಣೀಕರಣಗಳು ನಡೆಯುತ್ತವೆ. ಇದು ಅನಿವರ‍್ಯವಾಗಿತ್ತೇ? ಇದರಿಂದ ಆದ ಪರಿಣಾಮಗಳೇನು? ಅಡ್ಡಪರಿಣಾಮಗಳೇನು? ಇಲ್ಲಿ ಜ್ಞಾನ ಮತ್ತು ಅಧಿಕಾರಗಳ ನಡುವಿನ ಸಂಬಂಧ ಹೇಗೆ ಅಧಿಕಾರಕ್ಕಾಗಿ ದುಡಿಯುತ್ತದೆ? ಇವೆಲ್ಲ ಕೂಲಂಕುಶವಾಗಿ ಚರ್ಚಿಸಬೇಕಾದ ಪ್ರಶ್ನೆಗಳು. ಸಂಶೋಧಿಸಬೇಕಾದ ಪ್ರಶ್ನೆಗಳು.
1.13 ದೇಶ ಒಂದೆ-ಭಾಷೆ ಒಂದೆ
‘ಭಾಷೆ ಬೇರೆ, ದೇಶ ಒಂದೆ, ನಾವು ಭಾರತೀಯರು’ ಎಂಬ ಭಾವ ‘ಭಾರತೀಯ’ ರಾಷ್ಟçಕಲ್ಪನೆಯಲ್ಲಿ ಇದ್ದರೆ; ಕರ್ನಾಟಕ ರಾಷ್ಟ್ರಕಲ್ಪನೆಯಲ್ಲಿ ದೇಶ ಒಂದೇ ಭಾಷೆ ಒಂದೇ ಎಂಬ ಭಾವ ತಲೆದೋರಿದೆ. ಕನ್ನಡ ರಾಷ್ಟ್ರೀಯತೆಯ ತುಡಿತವು ಇಲ್ಲಿನ ಹಲವು ಬರಹಗನ್ನಡಗಳನ್ನು ಒಂದು ಬರಹಗನ್ನಡವಾಗಿ ಪ್ರಮಾಣಕನ್ನಡವನ್ನು ರೂಪಿಸಲು ತನ್ನದೇ ದಾರಿಗಳಲ್ಲಿ ಯತ್ನಿಸಿದೆ. ಮೊದಮೊದಲು ಅಚ್ಚು ಮೊಳೆಗಳನ್ನು ರೂಪಿಸಲು, ಇಲ್ಲಿನ ಭಾಷೆಯನ್ನು ಕಲಿತು ಆ ಮೂಲಕ ಧರ್ಮ ಪ್ರಚಾರ ಮಾಡಲು ಒಂದು ಬರಹ ಭಾಷೆಯ ಅಗತ್ಯವನ್ನು ಮನಗಂಡ ಕ್ರೈಸ್ತ ವಿದ್ವಾಂಸರು ಸ್ಥಳೀಯ ಪಂಡಿತರ ಒಡಗೂಡಿ ಒಂದು ವರ್ಣಮಾಲೆ, ಒಂದು ಮಾನಕ ಬರಹಗನ್ನಡವನ್ನು ರೂಪಿಸಲು ಶ್ರಮಿಸಿದ್ದಾರೆ. ಶಿಕ್ಷಣ ಕನ್ನಡವಾಗಿ ಅದು ಅನಂತರ ರೂಪಗೊಂಡಿದ್ದು ಈಗ ಇತಿಹಾಸ. ಕನ್ನಡ ವಿಮರ್ಶೆ ಕೂಡ ಎಲ್ಲ ಆಡುನುಡಿಗಳನ್ನು ಆದಷ್ಟು ಪಕ್ಕಕ್ಕೆ ಸರಿಸಿ ಒಂದೇ ಮಾನಕ ಕನ್ನಡವನ್ನು ರೂಪಿಸಿಕೊಂಡಿದೆ. (ಸಾಹಿತ್ಯದಲ್ಲಿದು ಸಾಧ್ಯವಾಗಲಿಲ್ಲ) ಪರಿಭಾಷೆಗಳ ಕಗ್ಗಾಡೆ ವಿಮರ್ಶೆಯಲ್ಲಿ ಸೃಷ್ಟಿಯಾದರೂ ವಿಮರ್ಶೆಯ ಭಾಷೆ ಮಾತ್ರ ಶಿಕ್ಷಣ ಕನ್ನಡವೇ ಆಗಿ ಪ್ರಮಾಣೀಕರಣಕ್ಕೆ ಗುರಿಯಾಗಿದೆ. ಇದನ್ನೊಂದು ಮನ್ನಣೆ ನೀಡಿದ ಭಾಷೆಯಾಗಿ ವಿಶ್ವವಿದ್ಯಾಲಯ ವಿದ್ವಾಂಸರು ಬಳಸಿ ಮಾನ್ಯಗೊಳಿಸಿದ್ದಾರೆ. ಎ.ಆರ್.ಕೃ. ವಿಮರ್ಶೆಯ ಭಾಷೆ, ಮಾಸ್ತಿ ವಿಮರ್ಶೆಯ ಭಾಷೆ, ಕಡೆಂಗೋಡ್ಲು, ಬಿ.ಎಂ.ಶ್ರೀ, ಮುಳಿಯರ ವಿಮರ್ಶೆಯ ಭಾಷೆ ಹೀಗೆ ಹಲವು ವಿಮರ್ಶಕರ ಭಾಷೆಗಳು ಅಷ್ಟೇನೂ ಭಿನ್ನವಾಗಿರದೇ ಒಂದೇ ಪ್ರಮಾಣ ಕನ್ನಡವನ್ನು ತಮ್ಮ ಭಾಷೆಯಾಗಿ ರೂಡಿಸಿಕೊಂಡಿರುವುದನ್ನು ಕಾಣಬಹುದು. ಶೈಲಿಯಲ್ಲಿ ವ್ಯಕ್ತಿವಿಶಿಷ್ಟತೆ ಇರುವುದನ್ನು ಅಲ್ಲಗಳೆಯುವಂತಿಲ್ಲ. ಆದರೂ ಇವರೆಲ್ಲ ಬಳಸುವ ಪ್ರಮಾಣಕನ್ನಡ ಒಂದೇ ಕನ್ನಡವಾಗಿದೆ.
ಆದರೆ ಇವರಿಗೂ ಮುಂಚಿನ ಹೊಸನೀರಿನ ಕಾಲದಲ್ಲಿ ಸಮಾನತೆಗಳಿಗಿಂತ ಭಿನ್ನತೆಗಳು ಹೆಚ್ಚಾಗಿ ಕಾಣುತ್ತವೆ. ಹಿರಣ್ಯಗರ್ಭನ (1873) ಭಾಷೆಗೂ, ಕವಿಚರಿತೆಯ ಆರ್.ನರಸಿಂಹಾಚರ್ (1898) ಭಾಷೆಗೂ ಸಾಕಷ್ಟು ಅಂತರವಿದೆ. ಹಾಗೇ ದೇವಚಂದ್ರನ ಭಾಷೆಗೂ, ಎಂ.ಎಲ್.ಶ್ರೀಕಂಠೇಶಗೌಡರ ಭಾಷೆಗೂ, ಎಂ.ಎ,ರಾಮಾನುಜ ಐಯ್ಯಂಗಾರರ ಭಾಷೆಗೂ, ಮಾಸ್ತಿಯವರ ಭಾಷೆಗೂ, ಕುವೆಂಪು ಅವರ ವಿಮರ್ಶೆಯ ಭಾಷೆಗೂ ಸಾಕಷ್ಟು ವ್ಯತ್ಯಾಸ ಇದೆ. ತದನಂತರದಲ್ಲಿ ಮಾತ್ರವೆ ಬಹುರೂಪತೆಗಳಿಗಿಂತ ಏಕರೂಪತೆಯ ಲಕ್ಷಣಗಳು ಹೆಚ್ಚಾಗಲು ತೊಡಗಿವೆ. ವಿಮರ್ಶೆಯು ಕುವೆಂಪು, ಪು.ತಿ.ನ ಇಂತಹ ಒಂದೆರಡು ಅಪವಾದಗಳನ್ನು ಬಿಟ್ಟರೆ ಅನಂತರದಲ್ಲಿ ಒಂದು ಪ್ರಮಾಣ ಭಾಷೆಯನ್ನು ತನ್ನ ಭಾಷೆಯಾಗಿ ರೂಪಿಸಿಕೊಳ್ಳುವ ಕಡೆಗೆ ಚಲಿಸಿದಂತೆ ಸ್ಪಷ್ಟವಾಗಿ ಕಾಣುತ್ತದೆ.22
ದೇಸೆ ಬೇರೆ ಬೇರೆಯಾಗಿ ಇರುವುದರಿಂದ ಸಾವಿರ ನಾಲಿಗೆಯುಳ್ಳ ವಾಸುಕಿಯು ಕೂಡ ಬೇಸರಗೊಂಡಿದ್ದಾನೆ ಎಂದು ಅಸಂಖ್ಯ ಕನ್ನಡ ಭಾಷಾ ಪ್ರಬೇಧಗಳ ಬಗ್ಗೆ ಶ್ರೀವಿಜಯನೇ ಹೇಳಿದ್ದಾನೆ. ಅವನ ಕಾಲದಿಂದಲೂ ಒಂದು ಪ್ರಮಾಣ ಕನ್ನಡವನ್ನು ಸಾಹಿತ್ಯಭಾಷೆಯಾಗಿ ರೂಪಿಸುವ; ಒಂದು ಪ್ರಮಾಣ ಸಾಹಿತ್ಯ ಭಾಷೆಯನ್ನು ಕಟ್ಟಿಕೊಳ್ಳುವ ಪ್ರಜ್ಞೆ ನಮ್ಮ ಪರಂಪರೆಯುದ್ದಕ್ಕು ಅಂತರ್ಗತವಾಗಿ ಚಲಿಸುತ್ತ ಬಂದಿದೆ. ಆದರೆ ಅದು ಎಂದಿಗೂ ಘಟಿಸಿಲ್ಲ ಎಂಬುದು ಮಾತ್ರ ನಿಜ. ಸಂಸ್ಕೃತ ಕನ್ನಡ ಬೆರಕೆಯ ಬಗ್ಗೆ, ಬರಿ ಕನ್ನಡ ಮಾತ್ರವನ್ನೆ ಬಳಸುವ ಬಗ್ಗೆ, ಲಲಿತವಹ ಕನ್ನಡವನ್ನು ಬಳಸುವ ಬಗ್ಗೆ, ಪದ್ಯಂ ವದ್ಯಂ ಗದ್ಯಂ ಹೃದ್ಯಂ ಎಂದು ಪದ್ಯ ಗದ್ಯ ರೂಪಗಳ ಬಗ್ಗೆ ಹೀಗೆ ಹಲವು ತೆರನ ಸಂವಾದಗಳು ನಮ್ಮ ಪರಂಪರೆಯಲ್ಲಿ ನಡೆದಿವೆ. ಹಲವು ತೆರನ ಅವಸ್ಥಾಂತರಗಳಿಗೆ; ರೂಪ-ಸ್ಥಿತಿಗಳಿಗೆ; ಬೇಧಗಳಿಗೆ ನಮ್ಮ ಸಾಹಿತ್ಯ ಭಾಷೆಯು ಗುರಿಯಾಗುತ್ತಾ ಬಂದಿದೆ. ಆಧುನಿಕ ಸಂದರ್ಭದಲ್ಲು ಒಂದು ಸಾಹಿತ್ಯ ಕನ್ನಡ ಎನ್ನುವುದು ಇಲ್ಲ. ಆದರೆ ವಿಮರ್ಶೆಯ ಭಾಷೆಯಲ್ಲಿ ಸಾಹಿತ್ಯದಷ್ಟು ಬಹುಳತೆ ಕಾಣುವುದಿಲ್ಲ ಎಂಬುದು ಮಾತ್ರ ನಿಜ.
1.14. ಅನುಸಂಧಾನಗಳ-ಜೀರ್ಣಫಲ
ಅನುವಾದಗಳಲ್ಲದ ಆದರೆ ‘ಜೀರ್ಣಫಲ’ ರೂಪಿಗಳೆಂದು ಕರೆಯಬಹುದಾದ ಹಲವು ಮಾದರಿಯ ಕೃತಿಗಳು ನಮ್ಮಲ್ಲಿ ರಚಿತವಾಗಿವೆ. ಅರವಿಂದರ ವಿಚಾರಗಳು ಎಂಬ ಬೇಂದ್ರೆಯವರ ಲೇಖನ, ಮಾಸ್ತಿಯವರ ವಿಮರ್ಶೆಯ ಕರ‍್ಯ, ಇನಾಂದರರ ಪಾಶ್ಚಾತ್ಯ ಕಾವ್ಯ ಮೀಮಾಂಸೆ, ಕುವೆಂಪು ಅವರ ರಾಮಾಯಣದರ್ಶನಂ, ತೀನಂಶ್ರೀಯವರ ಭಾರತೀಯ ಕಾವ್ಯ ಮಿಮಾಂಸೆ, ಶ್ರೀಯವರ ಅಶ್ವತ್ಥಾಮನ್ ಹೀಗೆ ಹಲವು ಬರಹಗಳನ್ನು ಗಮನಿಸಿದರೆ ಇವನ್ನು ಅನುವಾದಗಳೆಂದು ಹೇಳಲಾಗುವುದಿಲ್ಲ. ಆದರೆ ಇವನ್ನು ಹಲತೆರನ ಅನುಸಂಧಾನಗಳ ಜೀರ್ಣಫಲಗಳು ಎನ್ನಬಹುದು. ಇವು ಸ್ವತಂತ್ರ ದೃಷ್ಟಿಗಳೇ ಹೌದು. ಅದರೂ ಇವುಗಳ ಹಿನ್ನೆಲೆಯಲ್ಲಿ ಅನ್ಯ ಅನುಸಂಧಾನಗಳು ಕೆಲಸ ಮಾಡಿರುವುದನ್ನು ತಳ್ಳಿ ಹಾಕಲಾಗುವುದಿಲ್ಲ. ವಿಮರ್ಶೆಯು ಮಾತ್ರ ಹಲವು ಬಗೆಯ ಅನುಸಂಧಾನಗಳ ಜೀರ್ಣಫಲವೇ ಆಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಭಾರತೀಯ ಕಾವ್ಯ ಮೀಮಾಂಸೆಯಲ್ಲಿನ ಧ್ವನಿತತ್ವದ ಚರ್ಚೆ ಹೇಗೆಲ್ಲಾ ಕನ್ನಡ ವಿಮರ್ಶೆಯ ಪರಂಪರೆಯನ್ನು ಪ್ರಭಾವಿಸಿದೆಯೆಂದು ತಿಳಿಯಲು, ಅಂತಹ ಪರಿಶೀಲನೆಗೆ ತೊಡಗಲು ನೋಡಿ ಕೆ.ವಿ.ನಾರಾಯಣ ಅವರ ‘ಧ್ವನಿತತ್ವ ಮತ್ತು ಕನ್ನಡ ವಿಮರ್ಶೆ’ ಲೇಖನ.23
ಹೊಸನೀರಿನ ಕಾಲದ ಹಲವು ಸಾಹಿತ್ಯ ಸಂಬಂಧಿ ಜ್ಞಾನ ಶಾಖೆಗಳು ರೂಪಗೊಳ್ಳುವ ಹಿಂದೆ ಹಲವು ರೀತಿಯ ಪ್ರೇರಣೆ-ಪ್ರಭಾವ-ಸ್ಪೂರ್ತಿಗಳು ಇವೆ. ಇವನ್ನೆಲ್ಲ ಕ್ರೋಡೀಕರಿಸಿ ನಮ್ಮದೇ ಸ್ವೀಕಾರ ಸಿದ್ಧಾಂತಗಳನ್ನು ಇಂದು ಕಟ್ಟಿಕೊಳ್ಳಬೇಕಾದ ಅಗತ್ಯವಿದೆ. ಕನ್ನಡವು ಏನೇನನ್ನು ಹೇಗೆಲ್ಲ ಸ್ವೀಕರಿಸಿ ಬೆಳೆಯುತ್ತ ಬಂದಿದೆ ಏಂಬ ಸ್ವೀಕರಣೆಗಳ ಅಧ್ಯಯನವೇ ಒಂದು ಪ್ರತ್ಯೇಕ ಅಧ್ಯಯನ ವಲಯ ಆಗುವಷ್ಟು ವ್ಯಾಪ್ತಿಯನ್ನು ಹೊಂದಿದೆ. ಆದರೆ ಈ ನಿಟ್ಟಿನಲ್ಲಿ ತಾತ್ವೀಕರಣ-ಸೈದ್ಧಾಂತೀಕರಣಗಳು ನಮ್ಮಲ್ಲಿ ಆಗಿಲ್ಲ. ಬಿಡಿ ಚರ್ಚೆಗಳು ನಡೆದಿವೆ ಅಷ್ಟೆ. ನಮ್ಮ ಹೊಸನೀರಿನ ಕಾಲದ ವಿಮರ್ಶೆಯು ಸಂಸ್ಕೃತ ಪರಂಪರೆ, ಕನ್ನಡ ಪರಂಪರೆ, ಇಂಗ್ಲಿಶ್ ಲೋಕಗಳ ಅನುಸಂಧಾನಗಳ ಜೀರ್ಣಫಲ ಎಂಬ ಕಲ್ಪಿತವೊಂದನ್ನು (ಹೈಪಾತೀಸೀಸೊಂದನ್ನು) ಸದ್ಯಕ್ಕೆ ನಂಬಬಹುದೆಂದು ಕಾಣುತ್ತದೆ.24
1.14.1 ವಿಚಾರವಾದ-ವಿಜ್ಞಾನವಾದ-ವಿಮರ್ಶೆ
ಆಧುನಿಕ ವಿಮರ್ಶೆಯು ಪ್ರಾಚೀನ ಸಾಹಿತ್ಯದ ಅನುಸಂಧಾನವಾಗಿ ಪ್ರಕಟವಾಗುತ್ತಿದ್ದಾಗ ಅದು ಪರಂಪರೆಯನ್ನು ಬೆಲೆ ಕಟ್ಟುವುದಕ್ಕಿಂತ ಪರಂಪರೆಯ ಗುಣಲಕ್ಷಣಗಳನ್ನು ದೊಡ್ಡದು ಮಾಡಿ ಹೇಳಿಕೊಳ್ಳಬೇಕಾದ ಅನಿವರ‍್ಯಕ್ಕೆ ಸಿಲುಕಿತ್ತು. ನಮಗೆ ಚರಿತ್ರೆಯ ಪ್ರಜ್ಞೆಯಿಲ್ಲವೆಂದು ಪಾಶ್ಚಾತ್ಯ ಓರಿಯೆಂಟಲ್ ಅಧ್ಯಯನವು ಆರೋಪ ಮಾಡಿತ್ತು. ಅಲ್ಲದೆ ಪುನರುಜ್ಜೀವನ ಯುಗೀನ ಪ್ರಭಾವಗಳು ನಮ್ಮಲ್ಲಿ ವಿಚಾರಪ್ರಜ್ಞೆ, ವಿಜ್ಞಾನ ಮನೋಭಾವ ಇಲ್ಲ ಎಂಬ ಕೀಳರಿಮೆಯನ್ನು ಮೂಡಿಸಿದ್ದವು. ಜೊತೆಗೆ ನಮ್ಮ ಸಾಹಿತ್ಯಸಂಸ್ಕೃತಿ ಪರಂಪರೆ ಪೂರ್ತಿ ಮತಧರ್ಮಗಳ ಮೇಲಾಟಗಳಿಂದ ಕೂಡಿದೆ ಎಂದು ನಾವೇ ಭಾವಿಸುವ ಹಾಗೆ ಆ ಮೂಲಕ ನಮ್ಮ ಪರಂಪರೆ ಬಗ್ಗೆ ನಾವೇ ಕೀಳರಿಮೆ ಮೂಡಿಸಿಕೊಳ್ಳುವ ಹಾಗೆ ಓರಿಯೆಂಟ್ ಅಧ್ಯಯನವು ನಮ್ಮನ್ನು ತಯಾರು ಮಾಡಿತ್ತು. ಹೀಗಾಗಿ ನಮ್ಮಲ್ಲಿಯೆ ನಮ್ಮ ಸಾಹಿತ್ಯ ಪರಂಪರೆ ಅಪ್ರಸ್ತುತವಾಗುವ ಭಯವಿತ್ತು. ಆ ಕಾರಣದಿಂದ ನಮ್ಮ ಪ್ರಾಚೀನ ಸಾಹಿತ್ಯದ ಅನುಸಂಧಾನವು ಸಂಗ್ರಹ ಕರ‍್ಯದ ಮೂಲಕ ವೈಚಾರಿಕ, ನೈತಿಕ ದೃಷ್ಟಿಗಳಿಂದ ಪಠ್ಯಗಳನ್ನು ಪರಿಷ್ಕರಿಸತೊಡಗಿತು. ಪಾಶ್ಚಾತ್ಯ ವಿಚಾರವಾದ ಮತ್ತು ವಿಜ್ಞಾನವಾದಗಳು ತಾವು ಮಾತ್ರವೆ ಶ್ರೇಷ್ಠ. ವೈಚಾರಿಕತೆ, ವೈಜ್ಞಾನಿಕತೆ ಇಲ್ಲದ ಚಿಂತನೆಗಳು ಕೀಳು ಎಂಬ (ಎಂಪಿರಿಸಿಸ್ಟ್, ಪಾಸಿಟಿವಿಸ್ಟ್ ಆದ ಧೋರಣೆಗಳೇ ಭಾರತೀಯರಲ್ಲಿ ಇಲ್ಲ ಎಂಬ) ಯಜಮಾನೀಯ ದೃಷ್ಟಿಕೋನವೊಂದನ್ನು ನಮ್ಮಲ್ಲಿ ಬಿತ್ತಿದ್ದರಿಂದ ನಮ್ಮ ಹೊಸನೀರಿನ ಕಾಲದ ವಿಮರ್ಶೆ ಅನಿವರ‍್ಯವೋ ಎಂಬಂತೆ ವೈಚಾರಿಕ, ನೈತಿಕ ದೃಷ್ಟಿಗಳನ್ನು ರೂಢಿಸಿಕೊಂಡಿತು. ಪರತತ್ವ, ಪರವಿಚಾರಗಳ ಜೊತೆ ಸಹಬಾಳ್ವೆ ನಡೆಸುತ್ತ ಬಂದ ನಮ್ಮ ಸಾಹಿತ್ಯ ಪರೆಂಪರೆಯನ್ನು ಈ ನೆಲದ ಉತ್ಪನ್ನವಾಗಿ ಗ್ರಹಿಸದೆ ವಿಜ್ಞಾನವಾದಿ, ವಿಚಾರವಾದಿ ದೃಷ್ಟಿಗಳಿಂದ ಸಾಹಿತ್ಯವನ್ನು ನೋಡುವ ಸ್ವಭಾವ ಇಂದಿಗೂ ನಮ್ಮ ವಿಮರ್ಶೆಯಲ್ಲಿ ರಕ್ತಗತವಾಗಿ ಬೆರೆತು ಹೋಗಿದೆ. ಇದಕ್ಕೆ ಕುವೆಂಪು ಆದಿಯಾಗಿ ಆಧುನಿಕ ಲೇಖಕರೆಲ್ಲರೂ ನೀರೆರೆದಿದ್ದಾರೆ ಕೂಡ. ಕುವೆಂಪು, ಬೇಂದ್ರೆ ಅವರ ವಿಜ್ಞಾನಸೂರ್ಯ, ವಿಜ್ಞಾನ ದೀವಿಗೆ ಕಲ್ಪನೆಗಳು; ಡಿ.ವಿ.ಜಿ. ಅವರ ವಿಜ್ಞಾನಿ ಮತ್ತು ಕವಿಗಳಿಬ್ಬರೂ ಗಂಡಬೇರುಂಡದಂತೆ ಒಂದೇ ದೇಹ ಎರಡು ಮುಖಗಳು ಎಂಬ ಕಲ್ಪನೆಗಳನ್ನು ಈ ಹಿನ್ನೆಲೆಯಲ್ಲೇ ನೋಡಬಹುದು.
ಶೈಲಿ, ರಸ, ರೀತಿ, ಔಚಿತ್ಯ, ಧ್ವನಿ ಇತ್ಯಾದಿ ಮೀಮಾಂಸಾ ತತ್ವ ಪ್ರಧಾನವಾದ ಪ್ರಾಚೀನ ಸಾಹಿತ್ಯದ ಮುಖಾಮುಖಿ ಒಂದು ಕಡೆಯಿಂದ ಹೆಚ್ಚು ಹೆಚ್ಚಾಗಿ ನಡೆಯಲು ನಮ್ಮ ವಿಮರ್ಶೆಯ ಆಳದಲ್ಲಿ ಅಡಗಿರುವ ಧರ್ಮನಿರಪೇಕ್ಷ ದೃಷ್ಟಿಯೇ ಕಾರಣ. ಸಾಂಸ್ಕೃತಿಕ ವಿಚಾರಗಳಿಗಿಂತ ಸೈದ್ಧಾಂತಿಕ ವಿಚಾರಗಳು ಹೆಚ್ಚು ಮುಖ್ಯವಾದದ್ದು ವಿಜ್ಞಾನವಾದಿ ಪ್ರಭಾವವೇ ಆಗಿದೆ. ರಾಷ್ಟ್ರೀಯತಾವಾದ, ಉದಾರ ಮಾನವತಾವಾದ, ಸುಧಾರಣಾವಾದ, ಆಧುನೀಕರಣ, ಪುನರುಜ್ಜೀವನ ಪ್ರಜ್ಞೆ, ವಿಜ್ಞಾನವಾದ, ವಿಚಾರವಾದ, ಸರ್ವೋದಯ, ಪೌರ್ವಾತ್ಯ ಅಧ್ಯಯನ ಹೀಗೆ ಹತ್ತು ಹಲವು ವಾದಗಳು, ಪ್ರಜ್ಞೆಗಳು, ಧೋರಣೆಗಳು ಆಧುನಿಕ ಸಂಸ್ಕೃತಿಯನ್ನು ಪ್ರಭಾವಿಸಿವೆ. ಈ ಪ್ರಭಾವಗಳಿಗೆ ಇಡೀ ಸಂಸ್ಕೃತಿಯೇ ಒಳಗಾಗಿರುವುದರಿಂದ ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆಗಳು ಇದರಿಂದ ಹೊರತಾಗಲಿಲ್ಲ. ಹೊಸನೀರಿನ ಕಾಲದ ಕನ್ನಡ ವಿಮರ್ಶೆಯನ್ನು ರೂಪಿಸಿರುವ ಹಲವು ವಿಚಾರಗಳಲ್ಲಿ ಇವು ಕೆಲವು.
ಅಡಿಟಿಪ್ಪಣಿಗಳು
ಹೆಚ್ಚಿನ ವಿವರಗಳಿಗೆ ನೋಡಿ ಮೊದಲ ಕಟ್ಟಿನ ಗದ್ಯ -ಎಚ್.ಎಸ್.ಶಿವಪ್ರಕಾಶ್, ಅಭಿನವ ಪ್ರಕಾಶನ, ಬೆಂಗಳೂರು, ಪುಟ-107 ಮತ್ತು 141
ಕೃತಿ ಸಂಸ್ಕೃತಿ -ಎಂ.ಜಿ.ಕೃಷಮೂರ್ತಿ, ಋಜುವಾತು ಪ್ರಕಾಶನ, ಮೈಸೂರು, 1994: ಪುಟ 300
ಈ ಕುರಿತ ವಿವರಗಳಿಗೆ ನೋಡಿ: ಸಂಸ್ಕೃತಿ ಕಥನ -ಡಿ.ಆರ್. ನಾಗರಾಜ, ಕನ್ನಡ ಪುಸ್ತಕ ಪ್ರಾದಿಕಾರ. 2002: ಪುಟ, 199-23
ಸಹೃದಯ ಸಂವಾದ -ಸಂ ಎಸ್.ವಿದ್ಯಾಶಂಕರ, ಜಿ.ಎಂ.ಹೆಗಡೆ, ಪ್ರಿಯದರ್ಶಿನಿ ಪ್ರಕಾಶನ, ಬೆಮಗಳೂರು, 2005: ಪುಟ-199
ಅದೇ, ಪುಟ-198
ಇದರ ಇನ್ನಷ್ಟು ಚರ್ಚೆಗೆ ನೋಡಿ: ವಿಮರ್ಶೆಯ ಭಾಷೆ ಪರಿಭಾಷೆ-ಎಂ.ವೀ.ಸೀ: ಕನ್ನಡ ವಿಮರ್ಶೆಯ ನೆಲೆ ಬೆಲೆ-ಸಂ.ಜಿ.ಎಸ್.ಶಿವರುದ್ರಪ್ಪ, ಬೆಂಗಳೂರು ವಿ.ವಿ. 1975
ಧ್ವನಿತತ್ವ ಮತ್ತು ಕನ್ನಡ ವಿಮರ್ಶೆ -ಡಾ.ಕೆ.ವಿ.ನಾರಾಯಣ, ಸಾಹಿತ್ಯ ವಿಮರ್ಶೆ-ಸಂ.ಜಿ.ಎA.ಹೆಗಡೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 1998, ಪುಟ 1
ಇದನ್ನೊಂದು ಸಿದ್ಧಾಂತವನ್ನಾಗಿ ಮಂಡಿಸಲು ಇನ್ನಷ್ಟು ಸಾಧಾರಪೂರ್ವಕ ಅಧ್ಯಯನ ಅಗತ್ಯ. ಈ ಬರಹವು ಅಜಮಾಸು ಇಂತಹ ಯತ್ನವೊಂದನ್ನು ಪರೋಕ್ಷವಾಗಿ ಮಾಡುತ್ತಿದೆ.
ಸಾಹಿತ್ಯ ವಿಮರ್ಶೆ ಮತ್ತು ರಾಜಕಾರಣ -ಕೆ.ಕೇಶವರ‍್ಮ, ಸಾಹಿತ್ಯ ವಿಮರ್ಶೆ-ಸಂ.ಪಂಡಿತಾರಾಧ್ಯ, 1999, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 1998, ಪುಟ 42
ಹೆಚ್ಚಿನ ವಿವರಗಳಿಗೆ ನೋಡಿ: ಹಳಗನ್ನಡ ಸಾಹಿತ್ಯಾದ್ಯಯನ ಸಮೀಕ್ಷೆ: ಡಾ.ಎಚ್.ಎಸ್.ಶ್ರೀಮತಿ, ಅಜಂತ ಪ್ರಕಾಶನ, ಹೊಸಪೇಟೆ, 1993: ಪುಟ: 3-6.
- ಡಾ. ರಾಮಲಿಂಗಪ್ಪ ಟಿ. ಬೇಗೂರು
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
©2024 Book Brahma Private Limited.