Date: 18-06-2022
Location: ಬೆಂಗಳೂರು
“ನೆಲೆ ನಿಲ್ಲುವ ಪ್ರಕ್ರಿಯೆ, ನಾಗರಿಕತೆ ಮತ್ತು ಸಂಸ್ಕ್ರುತಿಗಳ ಬೆಳವಣಿಗೆ ಪ್ರಕ್ರಿಯೆ ಮತ್ತು ಬಾಶೆಯ ಬೆಳವಣಿಗೆ ಈ ಎಲ್ಲವೂ ಪರಸ್ಪರ ತಳುಕು ಹಾಕಿಕೊಂಡಿರುವ ಒಂದು ಬೆಳವಣಿಗೆ” ಎನ್ನುತ್ತಾರೆ ಭಾಷಾ ವಿಶ್ಲೇಷಕ ಡಾ.ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಕನ್ನಡ ಪಳಮೆ ಕುರಿತು ವಿವರಿಸಿದ್ದಾರೆ.
ಕನ್ನಡವು ಇತರ ದ್ರಾವಿಡ ಬಾಶೆಗಳಿಂದ ಬೇರೆಯಾದ ಬಗೆಯನ್ನು ಅರಿತುಕೊಳ್ಳುವುದು ಅತ್ಯಂತ ಸೂಕ್ಶ್ಮವಾದ ಮತ್ತು ಹೆಚ್ಚು ಆಳವಾದ ಅದ್ಯಯನವನ್ನು ಬಯಸುವಂತದ್ದು. ಈ ಸಂಕೀರ‍್ಣತೆಯನ್ನು ತೋರಿಸುವುದಕ್ಕಾಗಿ ಒಂದು ಮಹತ್ವದ ವಿಚಾರವೊಂದನ್ನು ಇಲ್ಲಿ ಮಾತನಾಡಬಹುದು. ಈ ಮಾತುಕತೆಯನ್ನು 'ಕಲಬುರಗಿ' ಇಲ್ಲವೆ 'ಮಸ್ಕಿ'ಯಿಂದ ಶುರು ಮಾಡಬಹುದು. ಮೊದಲಿಗೆ ಈ ಎರಡು ಊರ ಹೆಸರುಗಳ ಚರಿತ್ರೆಯನ್ನು ಹೀಗೆ ಅರ‍್ತ ಮಾಡಿಕೊಳ್ಳಬಹುದು.
ಕಲಬುರಗಿ<ಕಲುಂಬರ್ ಕೆಯ್
ಮಸ್ಕಿ<ಮಸಿಗಿ<ಮೊಸಂಗಿ<ಮೊಸ/ಚನ್ ಕೆಯ್
ಈ ಎರಡರಲ್ಲಿಯೂ ಕೊನೆಯಲ್ಲಿ ಬಂದಿರುವ ರೂಪವು ಕೆಯ್. ಕೆಯ್ ರೂಪದಿಂದ ಕೊನೆಯಾಗುವ ಸಾವಿರಾರು ಊರುಗಳು ದಕ್ಶಿಣ ಬಾರತದಲ್ಲಿ ಸಿಗುತ್ತವೆ. ಇವು ಬೇರೆ ಬೇರೆ ರೂಪಗಳಾಗಿ ಬೆಳೆದಿವೆ. ಕೆಯ್ ಎನ್ನುವುದು ಕನ್ನಡದಾಗ ಅದರಂತೆ ಹಲವು ದ್ರಾವಿಡ ಬಾಶೆಗಳಲ್ಲಿ ಒಂದು ಸ್ವತಂತ್ರ ಪದ. ಕೆಯ್ ಪದಕ್ಕೆ ಮಾಡು ಎಂಬುದು ಮೂಲಬೂತ ಅರ‍್ತ. ಮಾಡಿದುದು ಕೆಯ್ಮೆ>ಕೆಮೆ, ಗೆಯ್ಮೆ ಆಗಿ ಬಳಕೆಯಲ್ಲಿದೆ. ನೆಲವನ್ನು ಊಳುವ ಕೆಲಸ ಮೊದಮೊದಲು ಮಾಡಿದಾಗ ಅದಕ್ಕೆ ಬಳಕೆಯಾದ ಪದ ಕೆಯ್, ಅಂದರೆ ಮಾಡುವುದು, ಕೆಲಸ ಮಾಡುವುದು, ಇಲ್ಲವೆ ಊಳುವುದು. ಹೀಗೆ ಕೆಲಸವನ್ನು ಮಾಡಿದ ಜಾಗ, ನೆಲ ಕೆಯ್. ಕೆಯ್ ಎಂದರೆ ಹೊಲ ಎಂದು ಅರ‍್ತ. ಶಾಸನಗಳಲ್ಲೆಲ್ಲ ನೆಲವನ್ನು ದಾನ ಮಾಡುವಾಗ ಕೆಯ್ ದಾನ ಮಾಡಿದುದಕ್ಕೆ ಸಾವಿರಾರು ಉದಾಹರಣೆಗಳು ಇವೆ. ಹೀಗೆ ಕೆಯ್ ಎಂಬ ಪದಕ್ಕೆ ಹಲವಾರು ಅರ‍್ತಗಳು ಇವೆ.
ಕಲಬುರಗಿ, ಮಸ್ಕಿ ಹೆಸರುಗಳಲ್ಲಿ ಎರಡನೆ ಬಾಗವು 'ಕೆಯ್' ಎಂಬುದು ಇದೆ ಎಂಬುದನ್ನು ತೋರಿಸಲಾಯಿತು. ಮಾಡು, ಮಾಡುವುದು, ಮಾಡಿದುದು ಎಂಬ ಅರ‍್ತವನ್ನು ಹೊಂದಿರುವ 'ಕೆಯ್' ಪದವೆ ಈ ಊರ ಹೆಸರುಗಳಲ್ಲಿ ಇದೆ. ಅಂದರೆ, ಇದು ಹೊಲ ಎಂಬ ಅರ‍್ತದಲ್ಲಿ ಬಳಕೆಯಾಗಿದೆ. ಕಲುಂಬರು, ಮೋಚನ್ ಹೀಗೆ ಯಾರೊ ಮಾಡಿದ, ಉತ್ತ ನೆಲ ಎಂಬ ಅರ‍್ತದಲ್ಲಿ ಈ ಹೆಸರುಗಳು ಬೆಳೆದು ಬಂದಿರಬಹುದು.
ಒಕ್ಕಲುತನವನ್ನು ಕಂಡುಕೊಂಡ ಮೇಲೆ ಒಂದು ಕಡೆ ನೆಲೆ ನಿಲ್ಲುವುದು ಮನುಶ್ಯರಿಗೆ ಸಾದ್ಯವಾಯಿತು. ಅಂದರೆ ಒಂದು ಕಡೆ ನೆಲೆ 'ಊರು'ವುದು. ಹೀಗೆ ನೆಲೆ ಊರುವುದಕ್ಕೆ ಕಾರಣವಾದುದು 'ಕೆಯ್' ಅಂದರೆ ಮಾಡಿದುದು, ಹೀಗೆ ನೆಲೆ ಊರಿದ್ದು ಕೆಯ್ದ ಜಾಗದಲ್ಲಿ ಅಂದರೆ ನೆಲವನ್ನು ಉತ್ತ ಜಾಗದಲ್ಲಿ, ಅಂದರೆ ಒಕ್ಕಲುತನ ನೆಲೆಗೊಂಡ ಜಾಗದಲ್ಲಿ. ಇದುವೆ ಮುಂದೆ ಹೊಲ ಆಗಿ ಬೆಳೆಯುತ್ತದೆ. ಹೀಗೆ ಒಕ್ಕಲುತನ ಮಾಡಿಕೊಂಡು ನೆಲೆ ನಿಂತ ಜಾಗಗಳೆ ಕೆಯ್. ಹಲವು ಪ್ರದೇಶಗಳಲ್ಲಿ ಹೀಗೆ ಮನುಶ್ಯ ನೆಲೆ ನಿಂತಿರುವುದು ತಿಳಿದ ನಂತರ ಈ ವಿವಿದ 'ಕೆಯ್'ಗಳನ್ನು ಅಂದರೆ ಉತ್ತ ವಿವಿದ ಪ್ರದೇಶಗಳನ್ನು ಬಿನ್ನ ಹೆಸರುಗಳಿಂದ ಕರೆಯುವ ಅವಶ್ಯಕತೆ ಬೆಳೆಯಿತು. ಆಗ, ಕಲಬುರಗಿ, ಮಸಿಗಿ, ಕಾಳಗಿ ಮೊದಲಾದ ಹಲವು ಹೆಸರುಗಳು ಬೆಳೆದವು. ಈ ಹೆಸರುಗಳು ಮೂಲದಲ್ಲಿ ಒಂದು ರೂಪದಲ್ಲಿ ಇದ್ದು ಕಾಲಕ್ರಮೇಣ ಬಾಶಿಕವಾಗಿ ಬದಲಾಗುತ್ತಾ ಇಂದಿನ ರೂಪಗಳಿಗೆ ಬಂದಿವೆ.
ಹಾಗಾದರೆ, ಎಶ್ಟು ಹಿಂದೆ ಹೀಗೆ ನೆಲಕ್ಕೆ ಹೆಸರನ್ನು ಇಡುವುದು ಮೊದಲಾಗಿರಬಹುದು ಎಂಬ ಆಲೋಚನೆ ಮಾಡಬೇಕು. ಹಾಗೆಯೆ, ಹೀಗೆ ನೆಲಕ್ಕೆ ಹೆಸರನ್ನಿಡುವಾಗ ಕನ್ನಡ ಬಾಶೆ ಬಳಕೆಯಲ್ಲಿದ್ದಿತೆ ಎಂದೂ ಆಲೋಚಿಸಬೇಕು. ಒಕ್ಕಲುತನ ಯಾವಾಗ ಶುರುವಾಯಿತು, ಅಂದರೆ, ಒಂದೆಡೆ ನೆಲೆ ಊರಿ ಉತ್ತು ಬಿತ್ತು ಬೆಳೆದು ತಿನ್ನುವ ಪ್ರಕ್ರಮ ಶುರುವಾದದ್ದು ಯಾವಾಗ ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ಹೀಗೆ ನೆಲೆ ನಿಲ್ಲುವ ಪ್ರಕ್ರಿಯೆ, ನಾಗರಿಕತೆ ಮತ್ತು ಸಂಸ್ಕ್ರುತಿಗಳ ಬೆಳವಣಿಗೆ ಪ್ರಕ್ರಿಯೆ ಮತ್ತು ಬಾಶೆಯ ಬೆಳವಣಿಗೆ ಈ ಎಲ್ಲವೂ ಪರಸ್ಪರ ತಳುಕು ಹಾಕಿಕೊಂಡಿರುವ ಒಂದು ಬೆಳವಣಿಗೆ. ಪುರಾತತ್ವ ಅದ್ಯಯನಗಳು ಹೇಳುವ ಪ್ರಕಾರ ನಾಲ್ಕಯ್ದು-ಅಯ್ದಾರು ಸಾವಿರ ವರುಶಗಳ ಹಿಂದೆ ಒಕ್ಕಲುತನ, ಒಂದೆಡೆ ನೆಲೆ ನಿಂತು ಒಕ್ಕಲುತನ ಮಾಡುವುದು, ಪಶು ಸಂಗೋಪನೆ, ಪಶುಸಾಕಾಣಿಕೆ ವ್ಯವಸ್ತೆ ಇವೆಲ್ಲವೂ ಇದ್ದವು. ಇವುಗಳಿಗೆ ಕನ್ನಡ ಮಾತಾಡುವ ಪರಿಸರದಲ್ಲಿ ಸಾಕಶ್ಟು ಆದಾರಗಳನ್ನು ತೋರಿಸುತ್ತಾರೆ. ಹಾಗಾದರೆ, ಹೀಗೆ ಒಕ್ಕಲುತನ ನೆಲೆಗೊಂಡ ಕಾಲದಲ್ಲಿಯೆ ಮೊದಲಾದ ನೆಲಕ್ಕೆ ಇಲ್ಲವೆ ಹೊಲಕ್ಕೆ ಹೆಸರಿಡುವ ಪ್ರಕ್ರಿಯೆಯೂ ಮೊದಲಾಗಿದೆ. ಇದು ಕ್ರಮೇಣ ಬೆಳೆದು ಗುರುತು ಸಿಗದಂತೆ ವಿವಿದ ಪರಿಸರಗಳಲ್ಲಿ ವಿವಿದ ರೂಪಗಳಲ್ಲಿ ಬಳಕೆಯಲ್ಲಿದೆ. ಕೆಯ್ ಕೊನೆಯಲ್ಲಿ ಇದ್ದ ಊರು ಹೆಸರುಗಳೆಲ್ಲ ಇಂದು ಕೆ, ಕಿ, ಗೆ, ಗಿ, ಚೆ, ಚಿ, ಜೆ, ಜಿ ಹೀಗೆ ಹಲವಾರು ರೂಪಗಳಲ್ಲಿ ಕಂಡುಬರುತ್ತವೆ. ಇಂತ ಸಾವಿರಾರು ಊರುಗಳು ಇಂದು ಕಂಡುಬರುತ್ತವೆ. ಹೀಗೆ ಒಕ್ಕಲುತನದ ಆರಂಬದ ದಿನಗಳಲ್ಲಿ ಇಟ್ಟ ಹೆಸರುಗಳು ಇಂದು ಉಳಿದುಕೊಂಡು ಬಂದಿವೆ.
ಇನ್ನು ಯೋಚಿಸಬೇಕಾದ ವಿಚಾರವೆಂದರೆ ಆ, ಅಂದರೆ ನಾಲ್ಕಯ್ದು-ಅಯ್ದಾರು ಸಾವಿರ ವರುಶಗಳ ಹಿಂದೆ ಹೀಗೆ ನೆಲಕ್ಕೆ/ಹೊಲಕ್ಕೆ ಹೆಸರಿಡುವ ಸಂದರ‍್ಬದಲ್ಲಿ ಬಳಕೆಯಲ್ಲಿದ್ದ ಬಾಶೆ ಯಾವುದು ಎಂಬುದು ಸ್ಪಶ್ಟವಿಲ್ಲ. ಇದಕ್ಕೆ ಇನ್ನೂ ಹೆಚ್ಚಿನ ಅದ್ಯಯನಗಳು ಬೇಕು. ಒಂದು ಸ್ಪಶ್ಟ ವಿಚಾರವೆಂದರೆ 'ಕೆಯ್' ಎನ್ನುವ ಈ ರೂಪ ಕನ್ನಡದಲ್ಲಿ ವಿಶೇಶವಾಗಿ ವಾರ‍್ಗಿಕವಾಗಿ ಬೆಳೆದು ವ್ಯಾಪಕವಾಗಿ ಬಳಕೆಯಲ್ಲಿದೆ. ಹೆಸರುಗಳಲ್ಲಿ ಎರಡು ಬಾಗಗಳು ಸಾಮಾನ್ಯ. ಇವುಗಳಲ್ಲಿ ಮೊದಲ ಬಾಗ ನಿರ‍್ದಿಶ್ಟ ಎನಿಸಿಕೊಂಡರೆ ಎರಡನೆ ಬಾಗ ವಾರ‍್ಗಿಕ ಎನಿಸಿಕೊಳ್ಳುತ್ತದೆ. ಹೀಗೆ ವಾರ‍್ಗಿಕವಾಗಿ 'ಕೆಯ್' ಹೆಚ್ಚಿನ ಊರ ಹೆಸರುಗಳಲ್ಲಿ ಬಳಕೆಯಲ್ಲಿರುವುದು ಇಂದು ಇಲ್ಲವೆ ಬಹು ಹಿಂದೆ ಕನ್ನಡವು ಹೆಚ್ಚು ಬಳಕೆಯಲ್ಲಿದ್ದ ಪರಿಸರದಲ್ಲಿ ಇದ್ದ ಹಾಗಿದೆ. ಆದರೆ ಆಳವಾದ ಅದ್ಯಯನ ಬೇಕು.
ಇದೆ ವೇಳೆಗೆ ಈ ಪ್ರದೇಶದಲ್ಲಿ ಒಕ್ಕಲುತನಕ್ಕೆ ಸಂಬಂದಿಸಿದ ನಂಬಿಕೆ, ಆಚರಣೆಗಳು ಬೆಳೆದಿದ್ದವು ಎನ್ನುವುದಕ್ಕೂ ಸಾಕಶ್ಟು ಆದಾರಗಳನ್ನು ಪುರಾತತ್ವ ಅದ್ಯಯನಗಳು ತೋರಿಸಿಕೊಡುತ್ತವೆ. ಎಲ್ಲಮ್ಮ ಎಂಬ ಒಕ್ಕಲುತನದ ನಂಬಿಕೆಯೂ ಈ ಕಾಲದಲ್ಲಿಯೆ ಬೆಳೆದಿತ್ತು ಎನ್ನುವುದಕ್ಕೆ ಇಂದಿಗೂ ಬಳಕೆಯಲ್ಲಿರುವ ಒಕ್ಕಲುತನ, ಒಕ್ಕಲುತನದ ಆಚರಣೆ ಇವೆಲ್ಲವೂ ಆದಾರ ಒದಗಿಸುತ್ತವೆ. ಮುಕ್ಯವಾಗಿ ಒಕ್ಕಲುತನ, ಕಲ್ಲು, ಲೋಹ ಇಂತಾ ವಲಯಗಳ ಪದಕೋಶವನ್ನು ಅದ್ಯಯನ ಮಾಡಿದರೆ ಈ ವಿಚಾರವಾಗಿ ಇನ್ನೂ ಹೆಚ್ಚಿನ ತಿಳುವಳಿಕೆ ದೊರೆಯುತ್ತದೆ. ಈ ಅದ್ಯಯನಗಳು ಕನ್ನಡದ ಪಳಮೆಯನ್ನು ಕಮ್ಮಿ ಎಂದರೂ ನಾಲ್ಕಯ್ದು ಸಾವಿರ ವರುಶಗಳಶ್ಟು ಹಿಂದಕ್ಕೆ ತೆಗೆದುಕೊಂಡು ಹೋಗುತ್ತವೆ.
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.