ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು

Date: 02-10-2022

Location: ಬೆಂಗಳೂರು


ಸರ್ಕಾರ ಅನುದಾನ, ಯೋಜನಾ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಹಾಸ್ಟೆಲ್‌ ಸೌಲಭ್ಯ, ವಿದ್ಯಾರ್ಥಿ ವೇತನದಂತಹ ಸವಲತ್ತುಗಳನ್ನು ನೀಡುತ್ತಿದೆ. ಇದರ ಪ್ರಯೋಜನವನ್ನು ಲಂಬಾಣಿ ಸಮುದಾಯದವರು ಪಡೆದುಕೊಳ್ಳಬೇಕು ಎನ್ನುತ್ತಾರೆ ಲೇಖಕಿ ಜ್ಯೋತಿ ಎಸ್. ಅವರು ತಮ್ಮ ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ಕಮಲಿ ಬಾಯಿ ಎಂಬ ಲಂಬಾಣಿ ಮಹಿಳೆಯ ಬಗ್ಗೆ ಬರೆದಿದ್ದಾರೆ.

ಲಂಬಾಣಿ ಭಾರತದ ಒಂದು ವಿಶಿಷ್ಟ ಜನಾಂಗ. ಇವರದ್ದು ಬಹಳ ಶ್ರೀಮಂತ ಸಂಸ್ಕೃತಿ. ಇವರನ್ನು ರಾಜಸ್ಥಾನದ ಮೂಲದಿಂದ ಬಂದವರೆಂದು ಹೇಳಲಾಗಿದ್ದು ದೇಶದ ನಾನಾ ಭಾಗಗಳಲ್ಲಿ ಇವರ ಸಮುದಾಯವು ಹಂಚಿಹೋಗಿದೆ. ಇವರು ಬಹಳ ಕಷ್ಟ ಜೀವಿಗಳು. ಇವರು ಅಲ್ಲಲ್ಲಿ ತಮ್ಮದೇ ಆದ ವಸತಿ ತಾಣಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಇಂತಹ ವಸತಿ ತಾಣಗಳ ಗುಂಪಿಗೆ ತಾಂಡಾ ಎಂದು ಕರೆಯುವರು.

ಲಂಬಾಣಿ ಸಮುದಾಯ ಎಂದಾಗ ನೆನಪಾಗುವುದು ಬಣ್ಣಬಣ್ಣ ಚಿತ್ತಾರದ ಬಟ್ಟೆಗಳು, ಕೈ ತುಂಬ ಬಳೆಗಳು, ಮೈ ತುಂಬ ಆಭರಣಗಳು, ರಂಗು ರಂಗಿನಿಂದ ಕಂಗೊಳಿಸುವ ಕೆಂಪು ನೀಲಿಯ ವಸ್ತ್ರ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಕೆರೆತಾಂಡದಲ್ಲಿ ಎದುರಾದದ್ದು ಕೆಂಪು ಬಣ್ಣದ ಲಂಗ(ಫೇಟಿಯಾ)ದ ಮೇಲೆ ಗಾಜಿನ ಬಿಲ್ಲೆಗಳು, ಹತ್ತು ಪೈಸೆ ಇಪ್ಪತ್ತು ಪೈಸೆ ನಾಲ್ಕಾಣಿಯ ನಾಣ್ಯಗಳು, ಕೊರಳಿಗೆ ಕಾಡಿನಿಂದ ಆಯ್ದು ತಂದ ಮಣಿಗಳ ಸರ, ತೋಳುಗಳಲ್ಲಿ ತೋಳಬಂಧಿ, ಕಾಲುಗಳಲ್ಲಿ ದಪ್ಪ ಬೆಳ್ಳಿ ಕಡಗ ಬೆಳ್ಳಿ ಗೆಜ್ಜೆಗಳು, ಬಟ್ಟೆಯ ತುಂಡುಗಳಿಗೆ ಸೊಗಸಾದ ಕಸೂತಿ ಕೆಲಸ ಮಾಡಿ ಅಲಂಕರಿಸಿದ ಕುಪ್ಪಸ(ಕಾಂಚಾಳಿ), ತಲೆಯ ಮೇಲಿನಿಂದ ಮೇಲು ಸೆರಗಿನಂತೆ ಇಳಿ ಬಿಟ್ಟ ರಂಗಾದ ಕಲಾತ್ಮಕ ಮೇಲುವಸ್ತ್ರ(ಛಾಟಿಯಾ), ಸೊಂಟದಲ್ಲಿ ಎಲೆ ಅಡಿಕೆ ಚೀಲ ಇಟ್ಟುಕೊಂಡು ನೋಡಲು ಎರಡು ಕಣ್ಣುಗಳು ಸಾಲದೇನೋ ಎನ್ನುವಂತೆ ಕಂಗೊಳಿಸುತ್ತಿದ್ದ ಅರವತ್ತರ ಪ್ರಾಯದ ಕಮಲಿ ಬಾಯಿ. ಇವರು ಮುಂಗೂದಲಿಗೆ ಆಭರಣಗಳನ್ನು ಹಾಕಿಕೊಳ್ಳುವುದು ಸುಮಂಗಲಿಯ ಸಂಕೇತ. ಇವರು ಈ ವೇಷಭೂಷಣದಿಂದಲೇ ಮನಸೂರೆಗೊಳ್ಳುತ್ತಾರೆ. ತಮ್ಮ ಸಮುದಾಯದ ಬಗ್ಗೆ ಕಮಲಿಬಾಯಿವರು ನನ್ನೊಂದಿಗೆ ಮಾತಾಡಿದ್ದು ಹೀಗೆ.

'ನಾವು ಎಲ್ಲಿದ್ದರೂ ಜನ ನಮ್ಮನ್ನು ಗುರುತಿಸುವುದು ನಾವು ಹಾಕಿಕೊಳ್ಳುವ ಬಟ್ಟೆ, ಕೈ ತುಂಬ ಪ್ಲಾಸ್ಟಿಕ್ ಬಳೆಗಳು, ಬೆಳ್ಳಿ ಅಥವಾ ತಾಮ್ರದ ಆಭರಣಗಳಿಂದ. ನಮ್ಮ ಒಂದು ಬಟ್ಟೆ ತಯಾರಿ ಮಾಡಲು ಸುಮಾರು 5000/- ರೂಪಾಯಿಯವರೆಗೂ ಖರ್ಚು ಆಗುತ್ತದೆ. ಹಾಗಾಗಿ ನಮ್ಮ ಬಟ್ಟೆಗಳನ್ನು ನಾವೇ ಸಿದ್ಧಪಡಿಸಿಕೊಳ್ಳುತ್ತೇವೆ. ಗಂಡಸರು ಜಗಲಾ (ಪಂಚೆ) ತಲೆಗೆ ಪಾಗಡಿ (ರುಮಾಲು) ಧರಿಸುತ್ತಾರೆ. ನಮ್ಮ ಹಿರಿಯ ಮಹಿಳೆಯರನ್ನು ಹೊರತುಪಡಿಸಿ ಈಗಿನ ಯುವಕ, ಯುವತಿಯರು ಬೇರೆ ರೀತಿಯ ಬಟ್ಟೆಗಳಿಗೆ ಮಾರುಹೋಗಿ ನಮ್ಮ ಸಂಪ್ರದಾಯದ ಬಟ್ಟೆಗಳನ್ನು ಹಾಕಿಕೊಳ್ಳಲು ಹಿಂದೇಟು ಹಾಕುತ್ತಾರೆ. ಮದುವೆ, ಸಮಾರಂಭಗಳಲ್ಲಿ ಮಾತ್ರ ನಮ್ಮ ಬಂಜಾರ ಸಂಸ್ಕೃತಿಯ ಬಟ್ಟೆ ಹಾಕಿಕೊಳ್ಳುವುದು ಸದ್ಯ ಚಾಲ್ತಿಯಲ್ಲಿದೆ. ಆದುದರಿಂದ ನಮ್ಮ ವಿಶಿಷ್ಟ ಶೈಲಿಯ ಬಟ್ಟೆ ಸಂಸ್ಕೃತಿ ನಶಿಸಿ ಹೋಗುತ್ತಿದೆ. ನಮ್ಮ ಡ್ರೆಸ್ ಒಂದನ್ನು ತಯಾರಿ ಮಾಡಲು ತುಂಬಾ ಸಮಯ ಬೇಕು. ದಾರ, ಗಾಜು, ನಾಣ್ಯಗಳು, ಸಮುದ್ರ ತೀರದಲ್ಲಿ ಸಿಗುವ ಶಂಕುಗಳು, ಎಲ್ಲ ಬಳಸಿ ಮಾಡುವುದರಿಂದ ತೂಕ ಹೆಚ್ಚಿರುತ್ತದೆ. ಹಾಗಾಗಿ ಈಗಿನ ಕಾಲದ ಹೆಣ್ಣುಮಕ್ಕಳು ಇಷ್ಟಪಡುವುದಿಲ್ಲ. ನಮ್ಮಲ್ಲಿ ವಿಶೇಷವಾಗಿ ಜಡೆ ಹಾಕಿ ಅದಕ್ಕೆ ಆಭರಣವನ್ನು ತೊಡಿಸುತ್ತಾರೆ. ಈಗಿನವರಿಗೆ ಅದು ಚುಚ್ಚುತ್ತೆ, ಭಾರ ಅಂತೆಲ್ಲ ಕಾರಣಗಳನ್ನು ಕೊಟ್ಟು ಹಾಕುವುದನ್ನು ನಿಲ್ಲಿಸಿದ್ದಾರೆ. ಹೀಗೆ ಆದರೆ ನಮ್ಮ ಕಾಲಕ್ಕೇ ನಮ್ಮ ಸಂಸ್ಕೃತಿ ನಶಿಸಿ ಹೋಗಬಹುದು. ನಮ್ಮ ಡ್ರೆಸ್ ತಯಾರಿ ಮಾಡುವ ಕಲೆ ಈಗಿನವರಿಗೆ ಗೊತ್ತಿಲ್ಲ. ಕಲಿಯುವ ಮನಸ್ಸು ಮಾಡುವುದಿಲ್ಲ. ನಾವು ಹೊಲಿಯುವುದನ್ನು ನೋಡಿ ನೋಡಿ ಕಲಿಯಬೇಕು. ಅವರು ನೋಡುವುದು ಇಲ್ಲ ಕಲಿಯುವುದು ಇಲ್ಲ. ಹಾಗಾಗಿ ಕಲಿಯಲು ಯಾರೂ ಆಸಕ್ತಿ ತೋರಿಸುತ್ತಿಲ್ಲ. ಕೈ ತುಂಬ ಬಳೆಗಳನ್ನು ಹಾಕಿಕೊಳ್ಳುವುದರಿಂದ ನಾಡಿಮಿಡಿತ ಸರಿಯಾಗಿರುತ್ತದೆ ಎನ್ನುವ ವೈಜ್ಞಾನಿಕ ಕಾರಣ ಇದೆ. ಸೊಂಟಕ್ಕೆ ಬಟ್ಟೆ ಕಟ್ಟುವಾಗ ನಡುವಿನ ಮೇಲೆ ಬಿಗಿದು ಕಟ್ಟುವುದರಿಂದ ಅನವಶ್ಯಕ ಬೊಜ್ಜು ಬರುವುದಿಲ್ಲ'.

'ನಮ್ಮ ಸಮುದಾಯದಲ್ಲಿ ಗಂಡಸರ ಹೆಸರಿನ ಮುಂದೆ ನಾಯಕ್ ಎಂದು, ಹೆಂಗಸರ ಹೆಸರಿನ ಮುಂದೆ ಬಾಯಿ ಎಂದು ಕರೆಯಲಾಗುತ್ತದೆ. ನಮ್ಮದು ವಲಸೆ ಜೀವನ. ಆರು ತಿಂಗಳು ಒಂದು ಊರಿನಲ್ಲಿ ಇದ್ದರೆ ಇನ್ನಾರು ತಿಂಗಳು ಬೇರೆ ಕಡೆ ಹೋಗುತ್ತೇವೆ. ಮಂಡ್ಯ ಮೈಸೂರುಗಳಿಗೆ ಕಬ್ಬು ಕಡಿಯಲು, ನೆಲ್ಲು ಹಚ್ಚಲು, ಕಟಾವು ಮಾಡಲು ವಲಸೆ ಹೋಗುತ್ತೇವೆ. ಕೆಲವೊಮ್ಮೆ ಆರು ತಿಂಗಳು ವಲಸೆ ಹೋಗಿ ದುಡಿದು ತಂದ ಹಣದಿಂದ ಇನ್ನುಳಿದ ಆರು ತಿಂಗಳು ಕಾಲ ಕಳೆಯುತ್ತೇವೆ. ನಾವು ದುಡಿಮೆಗೆ ಹೋದಾಗ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ ಮಕ್ಕಳನ್ನೂ ಜೊತೆಗೆ ಕರೆದೊಯ್ಯುತ್ತೇವೆ'.

'ನನಗೆ ಹನ್ನೆರಡನೇ ವಯಸ್ಸಿಗೆ ರತ್ನ ನಾಯಕ್ ಎಂಬುವರ ಜೊತೆಗೆ ಮದುವೆಯಾಯ್ತು. ನಮ್ಮಲ್ಲಿ ಒಂದು ವಾರ ಮದುವೆ ಕಾರ್ಯ ನಡೆಯುತ್ತದೆ. ಪ್ರತಿದಿನ ಒಂದೊಂದು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಒಂದು ದಿನ ಸಿಹಿ ಊಟ, ಇನ್ನೊಂದು ದಿನ ಮಾಂಸದೂಟ, ನೃತ್ಯ, ಹಾಡು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ನನಗೆ ಏಳು ಜನ ಮಕ್ಕಳು. ನಾವು ಮಾತನಾಡುವ ಭಾಷೆ ಲಂಬಾಣಿ. ನಾನು ಏನೂ ಓದಿಲ್ಲ. ನಮ್ಮಲ್ಲಿ ತುಂಬ ಜನ ಶಾಲೆಯ ಮುಖವನ್ನೇ ನೋಡಿದವರಲ್ಲ. ನಾವು ಪೂಜಿಸುವ ದೇವರು ಸೇವಾಲಾಲ್ ಮತ್ತು ಮಾರಿಯಮ್ಮ. ವರ್ಷಕ್ಕೊಮ್ಮೆ ಸೇವಾಲಾಲ್ ಜಯಂತಿ ಫೆಬ್ರವರಿ ತಿಂಗಳಲ್ಲಿ ನಡೆಯುತ್ತದೆ. ಆಗ ಹದಿನೈದು ದಿನ ಮುಂಚೆಯೇ ಗುಡಿಗೆ ಹೋಗಿ ಗಡಿಗೆಗಳಲ್ಲಿ ಮಣ್ಣು ತುಂಬಿಸಿ ಗೋಧಿಯನ್ನು ಮೂರು ದಿನ ನೀರಿನಲ್ಲಿ ನೆನೆಸಿ ನೆಟ್ಟಿರುತ್ತಾರೆ. ಹಾಡು ಹಾಡಿ ಪಥ್ಯ ಇದ್ದರೆ ಗೋಧಿ ಸಸಿ ಚೆನ್ನಾಗಿ ಬರುತ್ತದೆ ಎಂಬ ಅಗಾಧ ನಂಬಿಕೆ. ನಾವು ಪ್ರತಿದಿನ ಹೋಗಿ ಹಾಡು ಹಾಡಿ ಬರುತ್ತೇವೆ. ಸೇವಾಲಾಲ್ ಜಯಂತಿ ದಿನದಂದು ಗೋಧಿ ಸಸಿ ಎತ್ತಿಕೊಂಡು ಹಿರಿಯರಿಗೆ ಅರ್ಧ ಕೊಟ್ಟು ಆಶೀರ್ವಾದ ತೆಗೆದುಕೊಳ್ಳುತ್ತೇವೆ. ಇನ್ನುಳಿದ ಅರ್ಧವನ್ನು ನೀರಿಗೆ ಬಿಡುತ್ತೇವೆ. ನಮ್ಮ ತಾಂಡಾದವರು ಎಲ್ಲೇ ಇದ್ದರೂ ಆ ದಿನ ಬರುತ್ತಾರೆ. ನಮ್ಮ ಪುರಾತನ ಪದ್ಧತಿ ಇದು'

'ನಮ್ಮ ಪೂರ್ವಜರು ರಾಜಸ್ಥಾನದಿಂದ ವಲಸೆ ಬಂದವರು ಎಂದು ಹೇಳುತ್ತಿದ್ದರು. ರಾಜ ಮಹಾರಾಜರ ಕಾಲದಿಂದಲೂ ನಮ್ಮ ಸಮುದಾಯದವರು ಇದ್ದಾರೆ. ಆಗೆಲ್ಲ ಕಷ್ಟ ಜೀವಿಗಳು, ಪ್ರಾಮಾಣಿಕರು ಎಂದರೆ ನಾವು ಎಂದು ನಮ್ಮ ಲಂಬಾಣಿ ಸಮುದಾಯವನ್ನು ಗುರುತಿಸುತ್ತಿದ್ದರು. ರಾಜರು ಆಗಿನ ಕಾಲದಲ್ಲಿ ಚಿನ್ನ, ವಜ್ರದಂತಹ ಬೆಲೆ ಬಾಳುವ ವಸ್ತುಗಳನ್ನು ಒಂದುಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ನಮ್ಮ ಸಮುದಾಯದ ಜನರಿಗೆ ವಹಿಸುತ್ತಿದ್ದರು. ಪ್ರಾಮಾಣಿಕತೆಗೆ ಅಷ್ಟು ಹೆಸರಾಗಿದ್ದವರು ನಾವು. ನಂತರ ದಿನ ಕಳೆದಂತೆ ವಲಸೆ ಹೋದವರು ಅಲ್ಲಲ್ಲೇ ಚದುರಿ ಹೋದರು. ರಾಜರ ಕಾಲದಲ್ಲಿ ನಮ್ಮ ಸಮುದಾಯದವರು ಯುದ್ಧ ಮಾಡುವುದರಲ್ಲಿ ಸದಾ ಸಿದ್ಧ ಹಸ್ತರಾಗಿದ್ದರು. ವಸ್ತು ಸಾಗಾಣಿಕೆ ಮಾಡುತ್ತ ಕಾಡು ಮೇಡುಗಳಲ್ಲಿ ವಾಸಿಸಲು ಪ್ರಾರಂಭಿಸಿದರು. ಈಗ ಎಲ್ಲಾ ಜಿಲ್ಲೆಗಳಲ್ಲೂ, ರಾಜ್ಯಗಳಲ್ಲೂ ನಮ್ಮವರು ಹಂಚಿ ಹೋಗಿದ್ದಾರೆ. ಹೆಚ್ಚಾಗಿ ಮಹಾರಾಷ್ಟ್ರ, ರಾಜಸ್ತಾನ, ಆಂಧ್ರಪ್ರದೇಶಗಳಲ್ಲಿ ಕಾಣಸಿಗುತ್ತಾರೆ. ನಮ್ಮ ಸಮುದಾಯದವರು ವಲಸೆ ಹೋಗುವುದರಿಂದ ಹಲವಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಹುತೇಕರು ಒಂದು ವರ್ಷ ಕೂಡ ಒಂದು ಕಡೆ ಇದ್ದು ಮಕ್ಕಳಿಗೆ ಶಿಕ್ಷಣ ಕೊಡಿಸುವ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಅಲ್ಲಿ ದುಡಿಮೆಗೆ ಎಂದು ಹೋಗುತ್ತಾರೆ. ಇಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲವೆಂದು ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ದುಡಿಯುವ ಅನಿವಾರ್ಯತೆ ಇರುತ್ತದೆ. ಅಲ್ಲಿ ಮಕ್ಕಳಿಗೆ ಯಾವ ಶೈಕ್ಷಣಿಕ ಚಟುವಟಿಕೆಗಳು ಇರುವುದಿಲ್ಲ. ಅಪ್ಪ ಅಮ್ಮ ದುಡಿದುಕೊಂಡು ಬರುತ್ತಾರೆ. ಮಕ್ಕಳು ಆಟ ಆಡಿಕೊಂಡು ಊಟ ಮಾಡಿಕೊಂಡು ಅದಕ್ಕೆ ಮೈ ಒಗ್ಗಿಸಿಕೊಂಡು ಬಿಟ್ಟಿರುತ್ತಾರೆ. ಕೆಲವು ವರ್ಷ ಹಾಗೆ ಕಾಲಕಳೆದು ಪ್ರೌಢ ಶಾಲೆಯ ಹಂತಕ್ಕೆ ಬಂದಾಗ ಅಪ್ಪ ಅಮ್ಮನ ಜೊತೆಗೆ ಅವರೂ ದುಡಿಯಲು ಪ್ರಾರಂಭಿಸುತ್ತಾರೆ. ಆಗ ತಂದೆ ತಾಯಿಯರು ಆರ್ಥಿಕವಾಗಿ ಸ್ವಲ್ಪ ಚೇತರಿಕೆ ಕಾಣುತ್ತಾರೆ. ಸಾಲವನ್ನು ಬೇಗ ತೀರಿಸಬಹುದು ಎಂದು ಶಿಕ್ಷಣದ ಯೋಚನೆಯನ್ನೂ ಮಾಡದೆ ಅವರ ಜೊತೆಗೆ ದುಡಿಯಲು ಕರೆದುಕೊಂಡು ಹೋಗುತ್ತಾರೆ. ಅಷ್ಟರಲ್ಲಿ ಮಕ್ಕಳ ಮನಸ್ಸಿನಲ್ಲಿ ಮದುವೆ, ಮಕ್ಕಳು ಹೀಗೆಲ್ಲಾ ಕನಸುಗಳು ಶುರುವಾಗುತ್ತವೆ. ಓದುವ ಆಲೋಚನೆಯಿಂದ ಶಾಶ್ವತವಾಗಿ ದೂರವಾಗುತ್ತಾರೆ' ಎಂದು ತಮ್ಮ ಸಮುದಾಯದ ಅಸಹಾಯಕತೆಯನ್ನು ನೆನೆದರು.

ಸರ್ಕಾರ ಇವರ ಲಿಪಿಯ ಅಧ್ಯಯನದ ಬಗ್ಗೆ ಸಮಿತಿಗಳನ್ನು ನೇಮಿಸಿದೆ ಅನ್ನುವುದನ್ನು ಬಿಟ್ಟರೆ ಇವರ ಸಮುದಾಯದ ಅಭಿವೃದ್ಧಿ ಬಹುತೇಕ ಚುನಾವಣಾ ಸಂದರ್ಭದ ಭರವಸೆಗಳಿಗೆ ಸೀಮಿತ. ಆದಾಗ್ಯೂ ಹಿಂದುಳಿದ ಜನಾಂಗದವರ ಏಳ್ಗೆಗಾಗಿ ಸರ್ಕಾರ ಅನುದಾನ, ಯೋಜನಾ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಹಾಸ್ಟೆಲ್‌ ಸೌಲಭ್ಯ, ವಿದ್ಯಾರ್ಥಿ ವೇತನದಂತಹ ಸವಲತ್ತುಗಳನ್ನು ನೀಡುತ್ತಿದೆ ಹಾಗಾಗಿ ಲಂಬಾಣಿ ಸಮುದಾಯದವರು ಈ ಪ್ರಯೋಜನಗಳನ್ನು ಪಡೆದುಕೊಂಡು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಮುಂದೆ ಬರಬೇಕು.

-ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...