ಅವರಲ್ಲಿ ಒಬ್ಬ ಅನೂಹ್ಯ ಕವಯತ್ರಿ ಇದ್ದಾಳೆ


“ಬದುಕಿನ ಆಗುಹೋಗುಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿ ಇರಬೇಕಾಗಿರುವುದು ಒಬ್ಬ ಕವಿ(ಸಾಹಿತಿ)ಗಿರಬೇಕಾದ ಪ್ರಾಥಮಿಕ ಅರ್ಹತೆ,” ಎನ್ನುತ್ತಾರೆ ಗಿರೀಶ ಸೊಲ್ಲಾಪುರ. ಅವರು ಪ್ರತಿಭಾ ಪಾಟೀಲ ಅವರ “ಕನಸು ದೊರೆತ ಮಳಿಗೆ” ಕೃತಿ ಕುರಿತು ಬರೆದ ವಿಮರ್ಶೆ.

ಪ್ರತಿಭಾ ಪಾಟೀಲ ಧಾರವಾಡ ನೆಲದ ಉದಯೋನ್ಮುಖ ಯುವಕವಯತ್ರಿ. ಅವರಲ್ಲಿ ಒಬ್ಬ ಅನೂಹ್ಯ ಕವಯತ್ರಿ ಇದ್ದಾಳೆಂಬುವುದು ಇತ್ತೀಚೆಗೆ ಬಿಡುಗಡೆಯಾದ ಅವರ ‘ಕನಸು ದೊರೆತ ಮಳಿಗೆ’ ಕವನ ಸಂಕಲನ ಓದಿದ ಮೇಲೆ ತಿಳಿಯಿತು. ಬದುಕಿನ ಆಗುಹೋಗುಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿ ಇರಬೇಕಾಗಿರುವುದು ಒಬ್ಬ ಕವಿ(ಸಾಹಿತಿ)ಗಿರಬೇಕಾದ ಪ್ರಾಥಮಿಕ ಅರ್ಹತೆ. ಅದು ಅವರ ಕಾವ್ಯದ ಶಕ್ತಿಯೂ. ‘ಕನಸು ದೊರೆತ ಮಳಿಗೆ’ ಪ್ರತಿಭಾ ಪಾಟೀಲ ಅವರ ಚೊಚ್ಚಲ ಕವನ ಸಂಕಲನವಾಗಿದೆ. 2024ರಲ್ಲಿ ಪ್ರಕಟಗೊಂಡ ಈ ಕೃತಿ ಓದಲು ಕುಳಿತ ಕಾವ್ಯ ಓದುಪ್ರಿಯರಿಗೆ ಖಂಡಿತವಾಗಿಯೂ ಇಷ್ಟವಾಗುವ ಪ್ರೇಮ ಕವಿತೆಗಳ ಸಂಕಲನ ಇದು.

ಇವರ ಪ್ರೇಮದ ಕವಿತೆಗಳ ನಿಲುವು ಹೀಗಿದೆ:

‘ಕನಸು ದೊರೆತ ಮಳಿಗೆ’ ಕವನ ಸಂಕಲನದ ಕವಿತೆಗಳು ಪ್ರೇಮಿಗಳ ನಡುವಿನ ಭಾವನಾತ್ಮಕ ಸಂಬಂಧವನ್ನು ವಿವರಿಸುತ್ತವೆ. ಇವುಗಳಲ್ಲಿ ಪ್ರೇಮ, ಆಶೆ, ನಿರಾಶೆ, ವಿರಹ ಮತ್ತು ಸಂತೋಷದಂತಹ ವಿವಿಧ ಭಾವನೆಗಳನ್ನು ವ್ಯಕ್ತಪಡಿಸಲಾಗುತ್ತದೆ.

ಈ ಕವಿತೆಗಳು ಸುಂದರ ಭಾಷೆ, ಲಯಬದ್ಧ ಛಂದಸ್ಸು ಮತ್ತು ರೂಪಕಗಳನ್ನು ಬಳಸಿಕೊಳ್ಳುತ್ತವೆ. ಇವುಗಳಲ್ಲಿ ಪ್ರಕೃತಿ, ಮನುಷ್ಯನ ಭಾವನೆಗಳು ಮತ್ತು ಜೀವನದ ಅನುಭವಗಳನ್ನು ವರ್ಣಿಸಲಾಗುತ್ತದೆ.

ಪ್ರೇಮದ ಕವಿತೆಗಳು ಓದುಗರಿಗೆ ಭಾವನಾತ್ಮಕ ಅನುಭವವನ್ನು ನೀಡುತ್ತವೆ.

ಕಳೆದು ಹೋದ ಜನುಮ ನನಗೆ ನೆನಪಿಲ್ಲ
ಮುಂದಿನ ಜನ್ಮ ಇದೆಯೋ ಇಲ್ಲವೋ ಗೊತ್ತಿಲ್ಲ
ಆದರೆ ಈ ಜನ್ಮದಲ್ಲಿ ನೀನಿರಬೇಕು ನಲ್ಲ

ಸಂಗಾತಿಯ ಕಾಯುವಿಕೆಯನ್ನು ಕುರಿತಾಗಿ ಬಳಸಿರುವ ರೂಪಕಗಳು ಮನಸ್ಸಿಗೆ ಮುದ ನೀಡುತ್ತವೆ.

ನೀ ನೋಡುವೆ ಎಂದಾದರೆ
ಕಾಮನಬಿಲ್ಲಿನ ರಂಗಲ್ಲಿ ಮಿಂದೆದ್ದು
ತೊಟ್ಟಿಕ್ಕುವ ಬಣ್ಣವನ್ನು ತುಟಿಯಂಚಿಗೆ
ಸವರಿ ಪದೇ ಪದೇ ಪರಿವಿಲ್ಲದೆ ಮುದ್ದಿಸುವೆ

ಭಗ್ನ ಪ್ರೇಮಿಯೊಬ್ಬ ಹತಾಶ ಪಡುವ ಪರಿಯನ್ನು ಕಣ್ಣು ಕಟ್ಟುವಂತೆ ಹಿಡಿದಿಟ್ಟಿದ್ದಾರೆ.

ಕೂಗಿದ ಪ್ರತಿಫಲ ಕೊರಗಿನಲ್ಲಿ ಕರಗಿ
ಸೊರಗಿ ಉಳಿಸಿಕೊಂಡಿದೆ, ಬರೀ ನೆನಪು
ಈಗಲೂ ಕೈಹಿಡಿದು ನಡೆಸುತ್ತಿದೆ
ನೀ ಬೇಗ ಬಂದು ನನ್ನ ತಲುಪು

ಇಲ್ಲಿನ ಕೆಲ ಕವಿತೆಗಳು ಸಂಗಾತಿಗಳಿಬ್ಬರ ನಡುವೆ ನಡೆಯುವ ಸರಸವನ್ನು ಅರಹುತ್ತವೆ. ಆ ಮೂಲಕ ಓದುಗರಿಗೆ ‘ಓಹೋ…’ ಅನ್ನುವಂತೆ ಮಾಡುತ್ತವೆ.

ಕತ್ತಲದಾಗ ಕೈ ಹಿಡಿದ ಜಗ್ತಿ
ರಮ್ಬಿಸಿ ರಮ್ಬಿಸಿ ಮೈ ಮ್ಯಾಲೆ ಎಳ್ಕೋತಿ
ಕತಿ ಹೇಳಿ ಹೇಳಿ ಕೆನ್ನಿ ಕಚ್ತಿ
ಮತಿಗೇಡಿ ಮಂಗ್ಯಾ ಅದಿ ನೀ
ನಾ ಒಲ್ಲೋ ಯಪ್ಪಾ ನಿನ್ನ ಸಂಗಾಟ..

ಭಾಷೆಯ ಬಳಕೆ, ಶಬ್ದಗಳ ಕುಣಿಸುವ ಪರಿಯನ್ನು ಹದವಾಗಿ ಬಳಸಿ, ಬೆರೆಸಿ ಕವಿತೆಗಳನ್ನು ನಮ್ಮ ಮುಂದಿಟ್ಟಿದ್ದಾರೆ.

ನನ್ನ ನಿದ್ದಿ ಎಲ್ಲಾ ಮಾಡಿ ನೀ ಭಂಗ
ಯಾಕಂದ್ರ ತಲೆಯಾಗ ಹೊಕೈತಿ ನಿಂದ ಗುಂಗ
ಮತ್ತ ಬೀಳತೈತಿ ಕನಸ ನೀ ನಕ್ಕಂಗ
ಹೌಹಾರಿ ಕಣ್ಣ ತಗದ್ರ ಮಾಯಾಗಿರ್ತಿ ಕಾಣದಂಗ

ಪ್ರತಿಭಾ ಅವರ ಈ ಕೃತಿಗೆ ತನ್ನ, ಪರರ ಮತ್ತು ಲೋಕದ ನಿರೂಪಣೆಯಾಗುವ ಎಲ್ಲಾ ಆಯಾಮಗಳು ಸಿಕ್ಕಿರುವುದು ಒಂದು ವಿಶೇಷವಾದ ಸಂಗತಿ. ಇದು ಸುಲಭಕ್ಕೆ ಸಿಕ್ಕುವಂತದ್ದಲ್ಲ. ಯಾರಿಗೆ ತಾನು ಎನ್ನುವ ಆತ್ಮರತಿಯನ್ನು ಮೀರಿಕೊಳ್ಳುತ್ತಾ ಲೋಕದ ಬಗೆಗೆ ತನ್ನಂತೆ ಪರರ ಬಗೆವ ಮಾನವೀಯ ಇರುತ್ತದೋ ಅವರಿಗೆ ಈ ಸಾಧ್ಯತೆ ತೆಗೆದುಕೊಳ್ಳುತ್ತಾ ಹೋಗುತ್ತದೆ. ಪದಗಳೊಂದಿಗಿನ ಆಟ ಮೆಚ್ಚುಗೆಯಾಗುತ್ತದೆ. ಇಲ್ಲಿನ ಕವಿತೆಗಳಲ್ಲಿನ ಮುಗ್ದತೆ ಮತ್ತು ಜೀವನ ಪ್ರೀತಿಗಳು ಮರೆಯಲಾಗದ ಚಿತ್ರವಾಗಿ ಮನಸ್ಸಿನಲ್ಲಿ ಉಳಿದುಕೊಳ್ಳುತ್ತವೆ.

ಪ್ರತಿಭಾರವರು ಕವಿತೆಗಳೊಂದಿಗೆ ಸೆಣಸಾಡುವ ಪರಿ ಬೆರಗು ಕೂಡ ಮೂಡಿಸುತ್ತದೆ. ಆ ಮೂಲಕ ಅವರು ಹೊಸದೇನನ್ನೋ ಹೇಳಲು ಹೊರಟಂತಿದೆ. ಓದುಗ ಸಹೃದಯಿ ಮನಗಳಿಗೆ ಆಪ್ತವೆನಿಸುತ್ತವೆ. ಇವರ ಲೇಖನಿಯಿಂದ ಮತ್ತಷ್ಟು ಹೊಸ ಹೊಸ ಕಾವ್ಯಗಳು ಹನಿಸಲಿ ಎಂಬುದೇ ನಮ್ಮ ಆಶಯ.

MORE FEATURES

ಬದುಕು ಮತ್ತು ಅದರಾಚೆಯ ಮಾನವನ ಅನ್ವೇಷಣೆ!

05-04-2025 ಬೆಂಗಳೂರು

“ಹಾದಿ ತಪ್ಪಿದ ದಾರಿಯ ಬಗ್ಗೆ ಕೊರಗದೇ ಸಾಗುವ ಪಯಣದಲ್ಲಿ ಹೊಸದೊಂದು ಗೆಲುವನ್ನು ಕಾಣುವುದು ಯಶಸ್ವಿ ಸಾಧಕನ ಲಕ್ಷಣ,...

ಎಷ್ಟೇ ಪ್ರಯತ್ನಪಟ್ಟರೂ ಅವರಿಗೆ ಹಣ ಮಾತ್ರ ಸಿಗಲೇ ಇಲ್ಲ

05-04-2025 ಬೆಂಗಳೂರು

“ಎಲ್ಲೇ ಹೋದರೂ ಹಿಂದಿಂದೆ ಸುತ್ತಿ ಬರುವ ಚಂದ್ರನಂತೆ, ಕಳೆದುಹೋದ ಅಜ್ಜ ಊರುಗೋಲು ಹುಡುಕುವಂತೆ, ಇದೇ ಇರಬಹುದಾದ ಈ ...

ಮಣಿಪುರ ರಾಜ್ಯವು 'ಲ್ಯಾಂಡ್ ಆಫ್ ಜೇಮ್ಸ್' ಎಂದೇ ಪ್ರಖ್ಯಾತವಾಗಿದೆ

05-04-2025 ಬೆಂಗಳೂರು

“ನಮ್ಮ ದೇಶದ ಈಶಾನ್ಯ ಭಾಗದಲ್ಲಿರುವ ಹಾಗೂ ಬಾಂಗ್ಲಾದೇಶ ಚೀನಾ ಮಯನ್ಮಾರ್ ಮತ್ತು ಭೂತಾನ ದೇಶಗಳೊಡನೆ ಗಡಿಗಳನ್ನು ಹೊ...