ಕನಸಲ್ಲಿ ಬರುವ ಛೂಮಂತ್ರಯ್ಯ

Date: 21-03-2022

Location: ಬೆಂಗಳೂರು


'ಇದನ್ನು ಪುಸ್ತಕ ವಿಮರ್ಶೆ ಅಂತ ಕರೆಯಲು ಅಡ್ಡಿಯಿಲ್ಲ. ಅವರ ಪುಸ್ತಕವೇ ಈ ಬರೆಹವನ್ನು ನನ್ನಿಂದ ಹೀಗೆ ಬರೆಸಿದೆ. ಟೀನ್‌ಗಳಿಗೆ ನಮ್ಮಲ್ಲಿ ಆಕರ್ಷಕವಾದ ಕೃಷಿ ಸಂಕಥನಗಳೇ ಅಪುರೂಪ. ಇಂತಹ ಸಂದರ್ಭದಲ್ಲಿ ಇಂತಹ ಪುಸ್ತಕ ಒಂದನ್ನು ಬರೆದಿರುವ ಬಿಳಿಗೆರೆ ಅಭಿನಂದನಾರ್ಹರು' ಎನ್ನುತ್ತಾರೆ ಲೇಖಕ, ವಿಮರ್ಶಕ ಡಾ. ರಾಮಲಿಂಗಪ್ಪ ಟಿ.ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ಬಿಳಿಗೆರೆ ಕೃಷ್ಣಮೂರ್ತಿ ಅವರ ಛೂಮಂತ್ರಯ್ಯನ ಕಥೆಗಳು ಪುಸ್ತಕದ ಓದಿನ ಸ್ಪೂರ್ತಿಯಿಂದಾಗಿ ಬರೆದ ವಿಶೇಷ ಬರಹವನ್ನು ಹಂಚಿಕೊಂಡಿದ್ದಾರೆ.

ಎಷ್ಟು ದಿನ ಕನಸು ಬಿದ್ದರೂ ಪ್ರತಿ ಸಾರಿಯೂ ಆ ಕನಸಲ್ಲಿ ಗುಡ್ಡ ಹಳ್ಳ ತೋಟವೇ ಬರುತ್ತಿತ್ತು. ಆ ತೋಟದಲ್ಲಿ ತಿರುಗಾಡುವ ಒಬ್ಬ ವಯಸ್ಸಾದ ಮುದುಕನೂ ಒಬ್ಬಿಬ್ಬರು ಸಹಾಯಕರೂ ಇರುತ್ತಿದ್ದರು. ಅಡಕೆ, ತೆಂಗು, ಮಾವು, ಸೀಬೆ ಇತ್ಯಾದಿ ತರಾವರಿ ಮರಗಳ ಮಿಶ್ರಬೆಳೆ ತೋಟದಲ್ಲಿ ಅಲ್ಲಲ್ಲಿ ಚಟ್ಣೆ, ಬೋಕಿಬಿಲ್ಲೆ, ತೆಂಗಿನ ಚಿಪ್ಪಿನ ಕಣ್ಣಿಲ್ಲದ ಹೋಳು ಇಂಥವುಗಳಲ್ಲಿ ನೀರು ಇಟ್ಟಿರುವುದು ಕಾಣುತ್ತಿತ್ತು. ಇಲಿಗಳು, ಅಳಿಲುಗಳು, ಗೆದ್ದಲು ಹುಳುಗಳು ಆರಾಮಾಗಿ ತೋಟದಲ್ಲಿ ಇದು ನಮ್ಮದೇ ಮನೆಯೇನೋ ಅನ್ನುವ ಹಾಗೆ ಹಾಯಾಗಿ ವಾಕಿಂಗು, ಜಾಗಿಂಗು, ಡ್ಯಾನ್ಸಿಂಗು, ಈಟಿಂಗು ಮಾಡಿಕೊಂಡು ಇರ್ತಿದ್ವು.

ಇದು ಯಾರ ತೋಟ!? ದಿನಾ ದಿನ ಕನಸಿನಲ್ಲಿ ಬರ್ತದಲ್ಲ ಅಂತ ನನಗೆ ಚಿಂತೆ ಹತ್ಕೊಳ್ತು. ಆ ವಯಸ್ಸಾದ ಮುದುಕ ನೋಡೋಕೆ ನಮ್‌ ದೊಡಪ್ಪನ ಥರವೇ ಕಾಣ್ತಿದ್ದ. ಮಾತಾಡಿಸಿದರೆ ಮಾತಾಡೊಲ್ಲ; ಇಲಿ, ಅಳಿಲು, ಗೊರವಂಕ, ಎರೆಹುಳಗಳ ಭಾಷೇಲಿ ಅವುಗಳ ಜೊತೆ ಸದಾ ಏನೇನೋ ಮಾತಾಡ್ತಾ ಇರ್ತಿದ್ದ. ನನಗೆ ಒಂಚೂರೂ ಗೊತ್ತಾಗ್ತಾ ಇರಲಿಲ್ಲ. ಹಿಂಗೇ ಒಂದಿನ ನವುಲು ಜೊತೆ ಮಾತಾಡ್ತಾ ಇದ್ದಾಗ ಅದು ಇವನ್ನ ಛೂಮಂತ್ರಯ್ಯ ಅಂತ ಕರೀತಿತ್ತು. ಆವಾಗ್ಲೆ ನನಗೆ ಅವನ ಹೆಸರು ತಿಳಿದದ್ದು. ಇದೇನ್‌ ವಿಚಿತ್ರ ಹೆಸರಪ್ಪ ಅನ್ಕೊಂಡೆ. ಆ ತಾತನ ತೋಟ ಮಾತ್ರ ಹಸುರು ಮುಕ್ಕಳಿಸ್ತಿತ್ತು. ನನಗೆ ದಿನಾ ದಿನಾ ಎಚ್ಚರ ಆದಾಗ ಈ ಕನಸಿಗೆ ಬರೋ ತೋಟಾನ ನಿಜವಾಗಿ ನೋಡಬೇಕಲ್ಲ ಅಂತ ಆಸೆ ಗುದ್ದುಕೊಂಡು ಬರೋದು.

ಒಂದಿನ ಕನಸಿನಲ್ಲಿ ಆ ಮುದುಕನನ್ನು ಮಾತಾಡಿಸ್ಲೇಬೇಕು ಅಂತ ಹಠ ಮಾಡಿ ಹೋದೆ. ಓಯ್‌ ಛೂಮಂತ್ರಯ್ಯನೋರೇ ನಿಮ್‌ತೋಟ ಬಾಳಾ ಚೆಂದಾಗದೆ ಅಂದೆ. ನನ್ನ ಹಿಂದಿಂದ ಯೋ ಹೊಗಳೋದಕ್ಕು ಬೊಗಳೋದಕ್ಕು ವ್ಯತ್ಯಾಸ ಇಲ್ಲ ಕಣಯ್ಯ, ಮುಚ್ಕೊಂಡ್‌ ಇರಯ್ಯ ಅಂತ ಪ್ರತಿಧ್ವನಿ ಕೊಟ್ಟಂಗಾಯ್ತು. ತಿರುಗಿ ನೋಡಿದರೆ ಯಾರೂ ಇಲ್ಲ. ಮುದುಕನೂ ಇಲ್ಲ, ತದುಕನೂ ಇಲ್ಲ. ಎಚ್ಚರಾಗೋಯ್ತು. ಇಲ್ಲೆ ಇದ್ನಲ್ಲ ಹೆಂಗ್ಮಾಯ ಆಗೋದ ಅಂತ ಸುತ್ತ ಮುತ್ತ ನೋಡ್ದೆ. ಏನೂ ಇಲ್ಲ. ಯಾರೂ ಇಲ್ಲ. ಮೊದಲನೆ ದಿನವೆ ಆಸೆ ಭಂಗ.

ಸೀಗೆಣಸು ಒಂದ್‌ ಕಡೆ, ಮರಗೆಣಸು ಒಂದ್‌ ಕಡೆ, ನೇರಳೆ ಮರದಾಗೆ ನೇರಳೆ ಹಣ್ಣು ಬೆಳೆದಿರೋದೆ ಹಕ್ಕಿ ಪಕ್ಕಿ ತಿನ್ಕೊಳ್ಲಿ ಅಂತಲಂತೆ! ಒಂದು ಸಾಲು ಸೀಬೆ ಗಿಡ ಅವೆ. ಅವುಗಳಲ್ಲು ಹಣ್‌ ಕಿತ್ತು ಮಾರಲ್ವಂತೆ. ಬಂದೋರ್‌ ಬೇಕಾದ್ರೆ ಕಿತ್ಕೊಂಡ್‌ ತಿನ್ಲಿ ಅಂತೆ! ಇದೆಂಥ ತೋಟಗಾರಿಕೆನಪ್ಪ ಅನ್ಕಂಡೆ! ಮತ್‌ ತ್ವಾಟ ಯಾಕ್‌ ಮಾಡದು? ನನ್ನ ಮನಸಿನ ಮಾತೂ ಕೇಳಿಸ್ತೇನೋ ಅನ್ನುವಂಗೆ ಲೇ ಅನ್ನೇಕಾರ, ಇದೇನ್ಲ ಹಿಂಗ್‌ ಅನ್ಕಂತಿ? ಬೆಳೆ ಬೆಳೆಯೋದು ನಿನಗೆ ಮಾತ್ರಾನೇನ್ಲಾ?! ಸಕಲೆಂಟು ಜೀವಕ್ಕೂ ಅಲ್ವೇನ್ಲಾ ಅಂದಂಗಾತು! ಸುತ್ತ ತಿರುಗಿ ನೋಡುದ್ರೆ ಯಾರೂ ಇಲ್ಲ! ಇವತ್ತಾದ್ರು ಅಜ್ಜನ ಜೊತೆ ಮಾತಾಡಬೇಕು ಅಂತ ಹೋದರೆ ಎರಡನೆ ದಿನವೂ ಆಸೆ ಭಂಗ!

ಮೂರನೆ ದಿನ ಹೋದಾಗ ಅಲ್ಲೆಲ್ಲೊ ಗೆಲ್ಮೆ ಮ್ಯಾಲೆ ಛೂಮಂತ್ರಯ್ಯನವರು ಉಂಟಾಡಿಕೊಂಡು ಹೋಗ್ತಾ ಇರೋದು ಕಾಣಿಸ್ತು. ಸಣ್‌ ಬಳ್ಳಿ ಥರ ಹಬ್ಕೊಂಡಿದ್ದ ಹನಿ ನೀರಾವರಿ ಪೈಪ್‌ ಹಿಡಕೊಂಡು ನೀರು ಚುಳ್‌ಚುಳ್‌ ಅಂತ ಹನಿ ಹನಿ ಬೀಳೋದ ನೋಡ್ತಾ; ನೀರಲ್ಲ ನೆಲದ ರಕ್ತ ಇದು, ನೆಲದ ರಕ್ತ ಅಂತ ನನ್ನ ಕಡೆ ನೋಡ್ದ. ʻಮಾತಾಡ್ಸನ ಅಂತ ಸರಭರ ಹೋದೆ ಅಲ್ಲಿಲ್ಲ! ಹೋದರೆ ನಾನು ಎಲ್ಲಿಂದ ಬಂದಿದ್ನೊ ಅಲ್ಲೆ ಅವ್ನೆ! ಅದೆಂಗ್‌ ಹೋದಾ ತಿರ್ಗ ಅಲ್ಲಿಗೆ ಅಂತ ಚೋಜಗ ಪಟ್ಟೆ. ಮತ್ತೆ ತಾತ ಅಲ್ಲಿಂದನೆ ಕೈ ತೋರಸಿ ಎರೆಹುಳ ಕಚ್‌ಬುಡ್ತವೆ ಹುಷಾರ್‌ ಮಗಾ ಅಂದಂಗಾಯ್ತು. ತಿರುಗಿ ನೋಡಿದರೆ ಯಾರೂ ಇಲ್ಲ. ಎಚ್ಚರಾಗೋಯ್ತು.

ಅಲ್ಲ ಈ ಮುದುಕ ಬಲು ಆಟಾ ಆಡುಸ್ತವನಲ್ಲ ಅಂತ ಹಠ ಮಾಡಿ ಇವತ್ತು ಏನಾರ ಆಗ್ಲಿ ಮಾತಾಡಿಸ್ಲೇ ಬೇಕು ಅಂತವ ಮಲಿಕಂಡೆ. ಆದರೆ ಅವತ್ತು ಕಷ್ಟ ಪಡಲೇಬೇಕಾಗಲಿಲ್ಲ. ಆರಾಮಾಗಿ ಕನಸು ಬಿತ್ತು. ನಾವು ಬೇಕೆಂದಾಗೆಲ್ಲ ಕನಸ ಬೀಳಿಸ್ಕೊಳಕೆ ಆಗುತ್ತಾ? ಆದರೆ ಛೂಮಂತ್ರಯ್ಯನಿಗೆ ಆಗುತ್ತಂತೆ. ನಮಗು ಟ್ರೈ ಮಾಡುದ್ರೆ ಆಗುತ್ತಪ್ಪ.

ಅವತ್ತು ಛೂಮಂತ್ರಯ್ಯನೆ ಸ್ವತಃ ನನ್ನ ಎದುರು ಬಂದ. ಮರಿ ಬಾಳೆ ಮರಿ ಬೇಕಾ ಅಂದ. ಬಾಳೆ ಕಂದುಗಳ ಕಡೆ ಕೈ ತೋರಿಸಿ ಬಾಳೆ ಮರಿನಪ್ಪಾ ಅಂದ. ಒಂದೊಂದೂ ಬೇರೆ ಬೇರೆ ಬಣ್ಣದವು ಇದ್ದವು. ಹು ಎರಡೇ ಎರಡು ಕೊಡಿ ಅಜ್ಜ ಅಂದೆ. ಏನ್‌ಮಾಡ್ತಿ ತಗೊಂಡೋಗಿ ಅಂದ. ಅಯ್‌ ಇದೇನ್‌ ಕೇಳ್ತೀರಾ? ಎಳೆ ಬಾಳೆ ದಿಂಡಿನ ಪಲ್ಯ ಅಂದ್ರೆ ಬಾಳಾ ಒಳ್ಳೇದಂತೆ. ಅದುನ್‌ ತಿಂದ್ರೆ ಕಿಡ್ನಿ ಒಳಗಿನ್‌ ಕಲ್ಲೆಲ್ಲ ಕರಗೋಗ್ತವಂತಲ್ಲ ಅಂದೆ. ಇನ್ನೂ ನನ್ನ ಮಾತು ಮುಗಿದೇ ಇರಲಿಲ್ಲ. ಕಿಸಕ್ಕನೆ ನಕ್ಕ ಅಜ್ಜ ತಕ್ಷಣ ರೇಗಿ ಏ ಮರಿ ಇವು ತಿನ್ನೋಕಲ್ವೊ ಊಣೋಕೆ ಅಂದ. ನಾನು ಆ ಅಂತಿದ್ದಂಗೆ, ಊ ಹೋಗು ಮೊದ್ಲು ಎಲ್ಡ್‌ ಅಡಿ ಆಳ ಎಲ್ಡ್‌ ಅಡಿ ಸುತ್ತಗಲ ಗುಂಡಿ ತೋಡಿ ಆಮೇಲ್‌ ಬಾ. ಪುಟ್‌ಬಾಳೆ, ಪಚ್‌ಬಾಳೆ, ರಸಬಾಳೆ, ಯಾಲಕ್‌ಬಾಳೆ, ಕರಿಬಾಳೆ, ಬೂದ್‌ಬಾಳೆ, ನೇಂದ್ರ ಬಾಳೆ ಯಾವ್‌ಮರಿ ಬೇಕೋ ಆ ಮರಿ ತಗಂಡೋಗು ಅಂತ ಹೇಳಿ ಮಾಯಾವಾದ. ಆಮೇಲೆ ನೋಡುದ್ರೆ ತೋಟನು ಇಲ್ಲ ತುಡುಕೆನು ಇಲ್ಲ. ಮಲಗಿದ್‌ ಮಗ್ಲಾಗೆ ಏ ಏನ್‌ ಗೊಣಗೊಣ ಪಿಣಪಿಣ ಅಂತಿರ; ಏನ್‌ ಬ್ಯಮೆನ ನಿಮ್ಗೆ ಅಂತ ಹೆಣ್ತಿ ಗೊಣಗಿ ಮಗ್ಗುಲಾದ್ಲು.

ಕೆರಕಳಕ್‌ ಪುರಸೊತ್‌ ಇಲ್ದೆ ಇದ್ರು ನನ್ನ ತೋಟ ಮಾಡೋ ಹುಚ್ಚು ತೀರಲ್ಲ. ಇದು ಹಿಂಗೆ ಪದೆ ಪದೆ ಕನಸಾಗೆ ಬಂದು ಕಾಡ್ತಾ ಇರ್ತದೆ ಅನ್ಕೊಂಡು ಮಲಿಕಂಡೆ. ಅಟ್‌ಲೀಸ್ಟ್‌ ವೀಕೆಂಡ್‌ ತೋಟಗಾರ ಆದ್ರೂ ಆಗಬೇಕು ಇಲ್ದಿದ್ರೆ ನಿಜವಾಗ್ಲು ತಿಕ್ಲ್‌ ಹಿಡಿತದೆ ಅನ್ಕೊಂಡೆ. ರಾತ್ರೆಲ್ಲ ಒದ್ದಾಟವೆ ಆಯ್ತು. ಬೆಳಗಿನ ಜಾವದ ಕನಸು ನಿಜ ಆದ್ರೂ ಆಗಬೌದು ಅನ್ಕೊಂಡು ಮುಸುಕು ಎಳಕೊಂಡು ತಿರ್ಗ ಮಲಿಕಂಡೆ. ಶಿವನಂಜಯ್ಯನೆ ಛೂಮಂತ್ರಯ್ಯ ಆಗಿ ಬಂದಿರಬೌದು ಅನ್ನಿಸ್ತು. ನನಗೆ ಯಾವುದೂ ಲಾಟರಿ ಹೊಡೀಲಿಲ್ಲ. ಯಾವುದೂ ನಿಧಿ ಸಿಗಲಿಲ್ಲ. ನಾನು ಯಾವುದೂ ನೆಲ ಕೊಳ್ಳಲೂ ಇಲ್ಲ. ವೀಕೆಂಡ್‌ ತೋಟಗಾರ ಇರಲಿ, ಮಂತೆಂಡ್‌ ತೋಟಗಾರ ಆಗೋಕೂ ಆಗಲಿಲ್ಲ. ಆದರೆ ಆಗಾಗ ಕನಸು ಬೀಳಿಸ್ಕಳದು ಮಾತ್ರ ನಿಲ್ಲಲಿಲ್ಲ.

ಒಂದೊಂದು ದಿನ ಒಂದೊಂದು ಕನಸಿನಲ್ಲಿ ಒಂದೊಂದ್‌ ರೂಪ ತಾಳಿ ಆವಯ್ಯ ಬರ್ತಿದ್ದ. ನಿನ್ನ ನಿಜವಾದ್‌ ಹೆಸರೇನಜ್ಜಾ ಅಂದರೆ; ಅಯ್‌ ಹೆಸರಿನಾಗೇನದೆ ತಗಾ ಮಗ, ಬದುಕು ಬಾಳೇವು ಇಂಪಾರ್ಟೆಂಟ್‌ ಅಲ್ವಾ ಅಂತಿದ್ದ. ಒಂದ್‌ ದಿನ ನಾಗೇಶ ಹೆಗಡೆ ಥರ ಕಾಣೋನು. ಇನ್ನೊಂದ್‌ ದಿನ ನಾರಾಯಣರೆಡ್ಡಿ ಥರ ಕಾಣೋನು, ಫುಕುವೋಕಾ, ಪಾಳೇಕಾರ್‌, ಶಿವನಂಜಯ್ಯ, ರಾಜೇಂದ್ರಸಿಂಗ್‌, ಶ್ರೀಪಡ್ರೆ, ಬಿಎಂ ಹೆಗ್ಡೆ, ರಾಗಿ ಲಕ್ಷ್ಮಣಯ್ಯ, ಎಲ್‌.ಸಿ. ನಾಗರಾಜ ಅಯ್ಯೊ ಒಂದಲ್ಲ ಎರಡಲ್ಲ ಹತ್ತಾರು ವೇಷ ತಾಳನು. ಒಂದಿನ ತಿಮ್ಮಕ್ಕನ್‌ ಜೊತೆ ಎಲಡಕೆ ಹಾಕ್ಕಂಡ್‌ ಕುಂತಿದ್ದ, ಇನ್ನೊಂದ್‌ ದಿನ ನಮ್ಮೂರ್‌ ಸಿದ್ಧಜ್ಜನ ಥರ ಕಿಸ್‌ಗಾಲ್ ಹಾಕ್ಕಂಡ್‌ ನೀರ್‌ ಬಿಡತಿದ್ದ. ನಿಜವಾಗ್ಲು ನೀನ್ಯಾರ್‌ ಹೇಳಜ್ಜ ಅಂದ್ರೆ ಕಿರ್‌ನಗೆ ನಗ್ತ ನೀನ್‌ ಯಾರ್ನ್‌ ಕಾಣ್ತಿಯೋ ಅವನೆ ಕಣ್‌ ಮಗ ಅಂತಿದ್ದ. ಅವುನ್‌ ನಕ್ರೆ ಸಾಕು ಥೇಟ್‌ ನಮ್ಮೂರ್‌ ಚಾಟ್ವೆ ಸಿದ್ದೆಂಟನಂಗೆ ಕಾಣ್ತಿದ್ದ. ಬಲ್‌ ಐನಾತಿ ಅಜ್ಜ ಹೆಸರಿಗ್‌ ತಕ್ಕಂಗ್‌ ಅವ್ನೆ ಅನ್ಕಂಡೆ.

ನಮ್ಮನೇಲಿ ಕರ್ಕಿ ಬಿಳ್ಕಿ ಅಂತ ಎರಡು ಹಸ ಇದ್ವು. ಎರಡೂ ಒಳ್ಳೆ ಜೋಡಿ. ಕರ್ಕಿ ರವಷ್ಟು ಒಗಡು. ಬಿಳ್ಕಿ ಸಾಧು. ಲಕ್ಲಿ ಸೊಪ್ಪು, ತಂಗಡಿ ಸೊಪ್ಪು, ಬೇವಿನ ಸೊಪ್ಪು ಹೊಂಗೆ ಸೊಪ್ಪು ತಂದ್‌ ಹಾಕುದ್ರೆ ಆ ಕರ್ಕಿ ಸುಮ್ನ್‌ ಮಲಿಕಳಳು. ಇಲ್ದಿದ್ರೆ ರಾತ್ರೆಲ್ಲ ಅವ್ಳ್‌ ಕಾಲ್‌ ಬಡ್ತ ಕೇಳಾಕಾಗ್ತಿರಲಿಲ್ಲ. ಗ್ವಾಂದಿಗೆ ಗೂಟಾಡಿ ನೆಲ ತಾಟಾಡಿ ರಂಪ ಮಾಡಿಬಿಡೋಳು. ದಿನಾ ಹೊಸ ಸೊಪ್ಪೆ ತರಬೇಕು. ದಿನಾ ಸೊಪ್ಪಿನ ಹಾಸಿಗೆ ಇರದಿದ್ರೆ ಅವಳಿಗೆ ನಿದ್ದೆನೆ ಬರ್ತಿರಲಿಲ್ಲ ಕ್ವಾಪಿಷ್ಟೆಗೆ. ಅಡ್ನಾಡಿಗುಳ ನೀವ್‌ ಮಾತ್ರ ಚಾಪೆ ರಗ್ಗು ಕಂಬ್ಳಿ ಹಾಸ್ಗಬೇಕಾ ನಾವ್‌ ಮಾತ್ರ ಬರೆ ನೆಲ್ದಾಗ್‌ ಮಲಿಕಬೇಕಾ ಅಂತ ದಿನಾ ಅವಳು ಬಯ್ದಂಗಾಗದು. ದಿನಾ ಸಗಣಿ ಗಂಜಲ ಬೆರೆಸಿ ಸೊಪ್ನ ತಿಪ್ಪೇಗಾಕುದ್ರೆ ಸರಿ. ಇಲ್ದಿದ್ರೆ ಹಳೆ ತರಗಿನ ಮ್ಯಾಲೆ ಮಲಗೋಳೆ ಅಲ್ಲ. ಸುಪ್ನಾತಿ.

ಒಂದಿನ ಸೊಪ್‌ ಹಾಕದಿದ್ರು ಯಾಕ್ರಲಾ ಗೊಂಜಾಯ್‌ ನನ್‌ ಮಕ್ಳಾ ಇವತ್ತು ದನಿನ್‌ ಅಡೀಕೆ ಸೊಪ್‌ ಹಾಕಿಲ್ಲ ಅಂತ ನಮ್ಮಪ್ಪ ಬಯ್ಯನು. ಕೋಳಿ ಕಸ, ಕುರಿ ಪಿಚ್ಕೆ, ಗಡಿಗೆ ಗಡಿಗೆ ಗಂಜಲನೆಲ್ಲ ತಿಪ್ಪೆಗೆ ಸುರೀದೆ ಇದ್ರೆ ಮಕ್‌ಮಕದ್‌ ಮ್ಯಾಲೆ ಹೊಡೆಯೋನು. ಈ ಛೂಮಂತ್ರಯ್ಯನು ಒಂಥರ ನಮ್ಮಪ್ಪನ್‌ ಥರನೆ ಒಳ್ಳೆ ನಾಟಿ ಹಸುಗಳ ಸಾಕಿದ್ದ. ಒಂದಿನನು ಅವುಗುಳ್ನ ಅವನು ಮೂಗ್ದಾರ ಹಗ್ಗ ಹಾಕಿ ಕಟ್ದೋನೆ ಅಲ್ಲ. ಚೋಜಿಗನಪ್ಪ!

ಒಂದಿನ ಹಿಂಗೆ ಸುಮ್ನೆ ಮಲಿಕಂಡಿದ್ದೆ. ಕನಸಿನಾಗೆ ಸುಮ್ನೆ ಮಲಿಕಂಡಿರೋಗ ಕನಸು ಬಿದ್ದಂಗೆ ಕನಸು. ಅದರಲ್ಲಿ ನನಗು ಅಜ್ಜಗು ಮಾತುಕತೆ. ಅಜ್ಜಾ ತ್ವಾಟದಾಗೆ ಬ್ಯಾಸಾಯ ಮಾಡಕೆ ಎಷ್ಟು ತರ ಉಳುಮೆ ಮಾಡಬಕು? ಉಳುಮೆ ಮಾಡಬಾರದು ಕಣ ಮಗ. ಅಯ್ಯೊ ಒಂದು ತರಾನು ಉಳುಮೆನೆ ಮಾಡದೆ ಬೇಸಾಯ ಮಾಡೋದು ಹೆಂಗಜ್ಜ? ಹಂಗೇ, ಗುಂಡಿ ತೆಗಿ, ಬೀಜ ನೆಡು , ಗಿಡ ನೆಡು, ಮರಿ ನೆಡು, ಗಂಜಳ ಹಾಕು, ಸೆಗಣಿ, ಒಂಗೆ ಹಿಂಡಿ, ಬೇವಿನ ಹಿಂಡಿ, ತಂಗಡಿ ಸೊಪ್ಪು ಹಿಂಗೆ ಸಿಕ್ಕಿದ್ದೆಲ್ಲನುವೆ ತುಂಬಿ; ಮ್ಯಾಲೆ ಮಣ್‌ ಹೇರು. ಆರು ತಿಂಗಳು ಬಿಡು. ಆಮೇಲೆ? ಅಷ್ಟೆ. ಅದುಕ್ಕೆ ನೀರ್‌ ಬೇಡವಾ? ಬೇಕು. ಔಸ್ದಿ ಬೇಡವಾ? ಬೇಡ. ಉಳುತ್ ಕೊಳತ್ರು ಔಸ್ದಿ ಬೇಡವಾ? ಅಯ್‌ ಬ್ಯಾಡ ಕಣ್‌ ಮಗಾ. ಓ ಸರಿ ಬಿಡು ಬೆಳದಂಗೆಯ. ಹಂಗಂತಿದ್ದಂಗೆ ಅಜ್ಜ ಪಟಾರ್‌ ಅಂತ ಕೆನ್ನೆಗೆ ಬಿಗಿದ. ಯಪ್ಪಾ ಅಂತ ಮೆಟ್‌ ಬಿದ್ ಎದ್ದೆ. ಎಚ್ಚರಾಯ್ತು. ಮತ್ತದೇ ಮಗ್ಗುಲ ಹೆಂಡತಿ ಯಾಕ್‌ ಹಿಂಗ್‌ ಮೆಟ್‌ ಬೀಳ್ತಿ; ಎಲ್ಲನ ತಾಯ್ತ ಕಟ್ಟಸ್ಕೊ ನಾಳಿಕೆ ಅಂದ್ಲು. ಎಷ್ಟೊ ಹೊತ್ತಿನತನಕ ಗೊಣಗ್ತಾನೆ ಇದ್ಲು. ಇವುನ್‌ ಕನಸು ನಾಯ್‌ ತಿನ್ನ, ಬೇಕ್‌ ಬೇಕಾದಾಗೆಲ್ಲ ಕನಸಿಗೆ ವೊಂಟೋಯ್ತನೆ, ಬೇಕ್‌ ಬೇಕಾದೋರ್ನೆಲ್ಲ ಕನಸಿಗ್‌ ಕರ್ಕತನೆ, ಇಂಥ ಗೋಸಾಯ್‌ ನನ್‌ ಮಗ್ನಿಗೆ ಕೊಟ್ಟ ನಮ್ಮಪ್ಪ, ಇನ್ಯಾವ್‌ ಗಂಡೂ ಸಿಕ್ನಿಲ್ವ ಅವನ್‌ ಸುಳಿ ತಿನ್ಕಳ, ಇಂಥವುಕ್ಕೆ ಮದುವೆ ಬ್ಯಾರೆ ಕೇಡು ಅಂತ ಗೊಣಗ್ತಾನೆ ಇದ್ಲು. ನನಗ್‌ ತಿರ್ಗ ಅದ್‌ ಯಾವಾಗ ನಿದ್ದೆ ಬಂತೊ ಗೊತ್ತಿಲ್ಲ.

ಇನ್ನೊಂದಿನ ಆವತ್ತು ಒಳ್ಳೆ ಬಾಡೂಟ ಕತ್ತರಿಸಿ ಎಲೆ ಬೆನ್ನಿಗೆ ಜೇನುತುಪ್ಪ ಸವರಿ ಅಡಕೆಲೆ ಹಾಕ್ಕಂಡ್ ಸರೊತ್ತಾದ್ರು ಏನೋ ಓದ್ಕಂಡ್ ಕುಂತಿದ್ದೆ. ಅದ್ಯಾವಾಗ್‌ ನಿದ್ದೆ ಬಂತೋ ಗೊತ್ತಿಲ್ಲ. ಹಂಗೆ ಬುಕ್‌ ಹಿಡಕಂಡ್‌ ಮನಿಕಂಬುಟ್ಟಿದಿನಿ. ಛೂಮಂತ್ರಯ್ಯ ಎದುರೇ ಬಂದರು. ಏ ಮರಿ ಅನ್ನದ ನದಿ ಗೊತ್ತೇನೊ ಅಂದರು. ಆ ಅನ್ನದ ನದೀನಾ! ಹಂಗಂದ್ರೆ? ಹುಸುನಗೆ ನಕ್ಕ ಅಜ್ಜ ಅನ್ನದ ಮಂತ್ರ ಗೊತ್ತಾ ಅಂದರು. ನನಗೆ ಅನ್ನದ ಮಂತ್ರ ಅಂತ ಒಂದು ಇದೆಯಾ ಅಂತ ಆಶ್ಚರ್ಯ ಆಯ್ತು. ಸುಮ್ನೆ ಮೌನವಾಗಿದ್ದೆ. ಮೊನ್ನೆ ಹೊಡೆದಂಗೆ ಎಲ್ಲಿ ಛಟಾರ್‌ ಅಂತ ಕೆನ್ನೆಗೆ ಬಿಗೀತಾನೋ ಅಂತ ಸುಮ್ನಿದ್ದೆ. ಬುಕ್ ಬದನೆಕಾಯಿ ಮಾತ್ರ ಗೊತ್ತು ನಿಮ್ಗೆಲ್ಲ ಅಂದುಕೊಂಡು ಮುಂದಿನ ಸಲ ನನ್ ಜೊತೆ ತಮಿಳುನಾಡಿನ ಥಳಿ ಊರಿಗೆ ಬಾ ಅಂದರು. ನಾನು ಮಂತ್ರ ಹಾಕಿಸಿಕೊಂಡವನ ಹಾಗೆ ಹು ಅಂತ ತಲೆ ಆಡಿಸಿದೆ.

ಅವರು ಯಾವಾಗ ನನ್ನ ಥಳಿಗೆ ಕರಕೊಂಡು ಹೋಗ್ತಾರೆ ಅಂತ ಎರಡೊರ್ಸದಿಂದ ಕಾಯ್ತಾ ಇದೀನಿ. ಇನ್ನಾ ಬಂದಿಲ್ಲ. ಥಳಿಗೆ ಕರಕೊಂಡು ಹೋಗೋಕೆ ಬರಲಿಲ್ಲವಲ್ಲ ಅಂತ ಒಂದಿನ ಬೆಳ್‌ಬೆಳಗ್ಗೆನೆ ಅವರ ಮನೆತಾಕೆ ಹೋದೆ. ಛೂಮಂತ್ರಯ್ಯ ತಾತ ನೋಡಿದರೆ ಮೂರು ತಿಂಗಳ ಕೂಸು ಅಕಿರನಿಗೆ ರೂಪಾರೆಲ್, ಅರ್ವಾರಿ ಕೆರೆಗಳಿಗೆ ನೀರು ಹರಿಸಿದ ರಾಜಾಸ್ಥಾನದ ರಾಜೇಂದ್ರಸಿಂಗ್ ಕಥೆ ಹೇಳ್ತಾ ಕುಂತವ್ನೆ! ಪಾಪ ಆ ಮೂರ್‌ ತಿಂಗ್ಳ್‌ ಮಗಿಗೆ ಅದೆಲ್ಲ ಎಲ್ ಗೊತ್ತಾಗಬೇಕು. ಆ ಕಡೆ ಮಗ್ಗಲಾಗೆ ಮೂರು ವರ್ಸದ ಮಗ ಸುವ್ವಿನು ಕಣ್ ಪಿಳಿಪಿಳಿ ಬಿಟ್ಕಂಡೆ ಗದ್ದಕ್ಕೆ ಕೈ ಕೊಟ್ಕಂಡು ಕುಂತವ್ಳೆ. ಅದಕ್ ತಾನೆ ಏನ್ ತಿಳೀತದೆ. ಈವಯ್ಯ ಕತೆ ಹೇಳಿದ ಮ್ಯಾಲೆ ಸೀಬೆ ಹಣ್ ಕೊಡ್ತನೆ ಅಂತ ಕುಂತದೆ. 'ಜಲಜಲಜಲಾಜಲ ಜಲಯಾತ್ರೆ ಭಲಿರೆಭಲಾ' ಅಂತ ಗೆಳೆಯ ಬಿಳಿಗೆರೆ ಕೃಷ್ಣಮೂರ್ತಿ ಬ್ಯಾರೆ ಪಕ್ಕದಲ್ಲೆ ಕೂತ್ಕಂಡು ಹಾಡು ಹೆಳ್ತಾವ್ನೆ. ಅತ್ತಾಗ್ ಅವ್ನು ಕತೆ ಏಳದು. ಇತ್ತಾಗ್ ಇವ್ನು ಹಾಡ್ ಹೇಳದು. ಬಂದೋರ್ ವೋದೋರ್ ದ್ಯಾಸನೆ ಇಲ್ಲ. ಇಬ್ಬರಿಗು ಒಟ್ಗೆ ತಿಕ್ಕಲ್ ಹುಟ್ಕಂಡದೆ ಅಂತ ನಾನು ಅಲ್ಲೆ ಚಕ್ಕಂಬಕ್ಲ ಹಾಕ್ಕಂಡ್ ಕ್ಕುಂತ್ಕಂಡೆ. ಇವನು ಅಕಿರನಿಗೆ ಕತೆ ಹೆಳ್ತಾ ಇದ್ದವನು, ಕತೆ ಮುಗಿದ ಮೇಲೆ ಬಿಳಿಗೆರೆ ಕಡೆ ತಿರುಗಿ ಮಂಚಿಂಗ್ ಮಂತ್ರ ಹೆಂಗ್ ವರ್ಕ್ ಆಗ್ತಾ ಅದೆ ಗೆರೆ? ಗೆದ್ಲು ಉಳುಮೆ ಮಾಡ್ತಾ ಅವಾ? ಅಂತ ಹುಬ್ಬು ಮೆಲಕ್ಕೆ ಎತ್ತಿ ಕುಣಿಸಿ ಕಣ್ಣಲ್ಲೆ ಕೊಚ್ಚನ್ ಮಾರ್ಕ್ ಹಾಕ್ದ. ಈ ಗೆರೆ ಏನೋ ಹೇಳಕೆ ಬಾಯ್ ತಗದ. ಛೂಮಂತ್ರಯ್ಯ ಚಕ್ ಅಂತ ಮಾಯ ಆಗೋಗ್ಬುಟ್ಟ. ಹು ಮಿಕ್ಕಿದ್‌ ಕನಸ ನಾಳೆ ಬೀಳು ಅಂತ ಹೇಳನ ಅಂತ ಮುಸುಗ್‌ ಹಾಕ್ಕಂಡ್‌ ಮಲಿಕಂಡೆ.

ಮಳೆ ಬರಂಗಾತು. ಅವರ್ ಮಾತಿಗು ಹಾಡಿಗು ಹೊರಪು ಸಿಕ್ಕಿತ್ತು. ಎದ್ದೆ. ವಾಪಸ್ ಬರುವಾಗ ಬಿಳಿಗೆರೆ ಏನ್‌ ಸಮಾಚಾರ ಹೊಲ್ಟ್‌ಬುಟ್ಟಲ್ಲ ಅಂದ. ಇದೇನ್ ಈವಯ್ಯ ಹಿಂಗ್ ಥಳಿಗೆ ಹೋಗನ; ನಾಟಿ ಬೀಜ ತರನ ಅಂತದೆ! ನಂಗ್ ನೋಡುದ್ರೆ ಹೊಲನು ಇಲ್ಲ ಬೇಲಿನು ಇಲ್ಲ ಅಂದೆ. ಅವನು ತಂಬೂರಿ ಮೀಟ್ಕಂಡೆ ಕಣ್ಣೂ ಮಿಟುಕಿಸಿ ಅಯ್ ನಿನ್ ಮಕವಾ, ಆ ಛೂಮಂತ್ರಯ್ಯನೋರ್ ಬರ್ಲಿ ಬಿಡ್ಲಿ ನಿನಗೆ ನೀನೆ ಹೋಗಕೆ ಏನಾಗದೆ? ಊರುಗೋಲ್ ಥರ ಛೂಮಂತ್ರಯ್ಯನೆ ಬೇಕಾ? ಅಂದ. ನನಗು ಹಂಗೆ ಅನ್ನಿಸ್ತು. ಆದರೆ ಜಮೀನು ಇಲ್ಲ ಬೇಲಿನು ಇಲ್ಲವಲ್ಲ ಅಂದೆ. ನಿನ್ ಜಮೀನೆ ಆಗಬೇಕಾ, ನಿನ್ ಬೇಲಿನೆ ಆಗಬೇಕಾ ನಡಿ ನಾನೆ ಬತ್ತಿನಿ ಓಗನ ಅಂದ. ಇಬ್ರೂ ಹೋಗಿ ಅನ್ನದ ಮಂತ್ರ ಕಲಿತು ಅನ್ನದ ನದಿ ಹರಿಸೇಬಿಡನ ಅಂತ ಹೊರಟೆವು. ಹೊರಡುತ್ಲೆ ಎಚ್ಚರವಾಗೋಯ್ತು. ಅವನೂ ಇಲ್ಲ. ಇವನೂ ಇಲ್ಲ. ಯಾವ್‌ ಯಾವ್ದೋ ಬುಕ್‌ ಓದಿ ನಿನಗೆ ತಲೆ ಕೆಟ್‌ ಕೆರ ಹಿಡದ್‌ ಹೋಗದೆ. ಬುಕ್ನೆ ಎದೆ ಮ್ಯಾಲ್‌ ಕವುಚ್ಕಂಡ್‌ ಮಲಿಕೊ. ನಿನಗೆ ಎಂಡ್ರು ಮಕ್ಳ್‌ ಬ್ಯಾರೆ ಕೇಡು. ಅವಳು ಲೊಟಗ್ತಾನೆ ಇದ್ಲು. ಕನಸಿನಾಗಾದ್ರು ಇವಳ್ನ ಬದ್ಲಿಸ್ಬೇಕು ಅನ್ಕಂಡೆ. ಮಲಿಕಂಡೆ. ಬುಕ್ ಬದನೆಕಾಯಿ ತಿನ್ನೋದ್ ಅಷ್ಟು ಸುಲಭನಾ!

ಛೂಮಂತ್ರಯ್ಯನೋರ ಬಗ್ಗೆ ಇಲ್ಲಸಲ್ಲದ ಪುಕಾರುಗಳನ್ನೆಲ್ಲ ಜನ ಹಬ್ಬಿಸ್ತಾರೆ ಅನ್ನೋದು ಕೃಷ್ಣಮೂರ್ತಿ ತಕರಾರು. ಹೌದು ಅವರು ಗೂಬೆ ಸಾಕಿದಾರೆ. ಅದುಕ್ಕೆ ಅವರ ತೋಟದಲ್ಲಿ ಇಲಿಗಳ ಕಾಟ ಕಡಿಮೆ ಆಗಿದೆ. ಹೌದು ಅವರು ಕನಸು ಬೀಳಿಸಿಕೊಳ್ತಾರೆ. ಬೀಳಿಸ್ಕೊಳದು ಅವರಿಗೆ ದಕ್ಕದೆ. ಹೌದು ಅವರು ಬೇಲಿಗೆ ಮಂತ್ರ ಹಾಕಿದಾರೆ. ಅದಕ್ಕೆ ಅವರಿವರು ಕಿತ್ತುಕೊಂಡ ತರಕಾರಿಗಳು ಮತ್ತೆ ಬಂದು ಬಳ್ಳಿಗೆ ನೇತಾಡ್ಕೊತಾವೆ. ಏನೀಗ? ಅಂತ ಕಣ್ಣ್ ಮಿಟುಕಿಸ್ತಾನೆ.

ಹೌದು ಅವರು ಕರಡಿಗಳಿಗೆ ಹಲಸಿನ ಗಿಡದ ಮಂತ್ರ ಹಾಕ್ತಾರೆ, ಅಳಿಲುಗಳಿಗೆ ಹೆಸರುಕಾಳಿನ ಮಂತ್ರ ಹಾಕಿ ಸೀಬೆ ಗಿಡಕ್ಕೆ ಹತ್ತಿಸಿ ಅಡಕೆ ಅರಳು ಉಳಿಸ್ತಾರೆ, ಕೋತಿಗಳಿಗೆ ನೀರಿಕ್ಕಿ ಎಳನೀರ ಚೆಲ್ಲದೆ ಅಪರೂಪಕ್ಕೆ ಒಮ್ಮೆ ಕುಡಿಯೋದ ಹೇಗೆ ಅಂತ ಕಲಿಸ್ತಾರೆ, ಮುಚ್ಚಳದಲ್ಲಿ ಇಲಿಗಳಿಗೆ ನೀರಿಟ್ಟು ಬದುಕಿಸ್ತಾರೆ, ಅದೇ ಹಾವುಗಳಿಗೆ ಇಲಿ ಮಂತ್ರ ಹಾಕಿ ಇಲಿಗಳ ಇಲ್ಲ ಅನ್ನಿಸ್ತಾರೆ. ಛೂಮಂತ್ರಯ್ಯನವರು ಹಕ್ಕಿಗಳಿಗೆ ಮಂತ್ರ ಹಾಕಿ ತೋಟಕ್ಕೆ ಬಿಟ್ಟುಕೊಳ್ತಾರೆ. ಒಂದೇ ಮರದಲ್ಲಿ ಐದಾರು ಬಗೆ ಹಣ್ಣುಗಳ್ನ ಬೆಳೀತಾರೆ. ಗಿಡಮರಗಳ ಜೊತೆ ಅಳಿಲು ಇಲಿಗಳ ಜೊತೆ ಮಾತಾಡ್ತಾರೆ. ಮಂಚಿಕೆ ಹಾಕ್ಕಂಡ್ ತೋಟದಾಗೆ ಮಲಿಕತಾರೆ. ಅಮಾಸೆ ಕತ್ಲಾಗೆ ಕಣ್ ಬಿಟ್ ಈಜತಾರೆ. ಇತ್ಯಾದಿ ಇತ್ಯಾದಿ... ಹಿಂಗೇ ಒಂದಲ್ಲ ಎರಡಲ್ಲ ಪುಕಾರು. ಅವು ಪುಕಾರಲ್ಲವಂತೆ ನಿಜನೆ ಅಂತೆ.

ಸುಮಾರು ಹತ್ತು ಕಿಮೀ ಉದ್ದದಷ್ಟು ಇಲಿ ಅಳಿಲುಗಳ ಮೆರವಣಿಗೆ ತಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿಸಿ ಅಲ್ಲಿನ ಫೈಲುಗಳನ್ನೆಲ್ಲ ಕಡಿಸಿದರು. ರೈತರ ಆತ್ಮಹತ್ಯೆ ವಿರುದ್ಧ ಹೋರಾಟ ಸಂಘಟಿಸಿದರು. ಆಮೇಲೆ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳ ಪರವಾಗಿ ಕ್ಯಾಬಿನೆಟ್ ಸೇರಿ ಮಂತ್ರಿಯೂ ಆದರು ಅಂತ ಜನ ಇವರ್‌ ಬಗ್ಗೆ ಆಡಿಕೊಳ್ಳೋದ್‌ ಮಾತ್ರ ನಿಂತಿಲ್ಲ.

ಒಂದು ಸಿನೆಮಾದಲ್ಲಿ ಒಂದು ಪಾತ್ರ ಮಾಡಿದ ಹೀರೋ ಇನ್ನೊಂದರಲ್ಲಿ ಇನ್ನೊಂದು ಮತ್ತೊಂದರಲ್ಲಿ ಮತ್ತೊಂದು ಮಾಡಲ್ವೆ. ಹಂಗೆ ಈ ಛೂಮಂತ್ರಯ್ಯನೂ ಜನಗಳ ಬಾಯಿಂದ ಬಾಯಿಗೆ ಹರಿಯೊ ಕತೆಗಳಲ್ಲಿ ಒಂದೊಂದು ಕತೆನಾಗು ಒಂದೊಂದು ಥರ ಪಾತ್ರ ಮಾಡವ್ನೆ. ನನಗಂತು ಒಂದೊಂದು ಕನಸಿನಾಗು ಒಂದೊಂದ್ ಥರ ಕಾಣುಸ್ತಾನೆ.

ಛೂಮಂತ್ರಯ್ಯನವರ ಮಂತ್ರಗಳು ಏನೂ ಹೊಸವಲ್ಲ; ಆದರೆ ಅವುಗಳನ್ನ ಈ ಗೆರೆ ಮಾತ್ಮ ಕತೆ ಕಟ್ಟಿ ಊರ್ತುಂಬ ಹೇಳ್ತಿರೊ ರೀತಿ ಮಾತ್ರ ಹೊಸದು ಅಂತ ನಮ್ಮೂರಿನ್ ತಿಪ್ಗ ನಗ್ತಾನೆ. ತಲ್‍ ತಲಾಂತ್ರದಿಂದ ನಮ್ ನೆಲ್ದಾಗ್ ಹರ್ಕಬಂದಿರದ್ನೆ ಇವ್ನ್ ಬರ್ಕಬಂದವ್ನೆ ತಗ ಅಂತನೆ. ಏನ್ ಮಾಡನ. ಮಾಡೋದೆ ಮರೀತಾ ಇರೋವಾಗ ಹೇಳೋದು ಮುಕ್ಯ ಅಲ್ಲವಾ? ಆದ್ರೆ ಊರ್‌ ತುಂಬಾ ಟಾಮ್‌ ಟಾಮ್‌ ಮಾಡದಲ್ದೆ ಇವನು ಕತೆ ಬರದು ಅವನಿಗ್‌ ಕೊಟ್ಟ. ಅವನು ಪ್ರಿಂಟ್‌ ಮಾಡಿ ನೂರ್‌ ಅದ್ನಾರ್‌ ಪೇಜ್‌ ಮಾಡಿ ನೂರ್‌ ನಲವತ್‌ ರೂಪಾಯ್‌ ಮಡಗ್ದ! ಈಪಾಟಿ ದುಡ್‌ ಕೊಟ್‌ ಕತೆ ಯಾರ್‌ ಕೊಳ್ತಾರೆ. ನನ್ನಂತ ಕೆಲವ್ರು ಓದ್ತರೆ. ಮಿಕ್ಕಂತೆ ಲಾಸು. ಸರಿ ಲೈಬ್ರಿಗೆ ಹಾಕು. ಮುಗಿಸು. ಅಷ್ಟೆಯ.

ಈ ಬಿಳಿಗೆರೆ ಆದ್ರು ಯಾರಂತೀರ? ತಂತಿ ಬಿಕ್ಕಂಡಿರ ತಂಬೂರಿನ್ ಇಡ್ಕಂಡಿರನು ಅಂತ ತಗಳಿ. ಛೂಮಂತ್ರಯ್ಯ ಅವರದೊಂದು ಸೊನ್ನೆ ಇಸ್ಕೂಲು ಅಂತ ಅದೆ. ಅಲ್ಲಿ ಈ ಬಿಳಿಗೆರೆ ಮೇಷ್ಟ್ರಾಗವ್ನೆ. ಒಂದಿನ ಅಟೆಣೆನ್ಸ್ ಕರೆಯೊವಾಗ ರೆಕಾಲ್ಡ್ ಮಾಡ್ಕಂಡಿದ್ದೆ. ಎಂತೆಂಥ ಮಕ್ಕಳು ಅಲ್ಲವೆ ಅಂತಿರ; ವಿಸ್ಮಯ್ ಚಿರತೆ, ಹಣ್ಣಮ್ಮ ವಗರು, ಗಿರಿಯಜ್ಜನವರ್ ಕೆಂಪಕ್ಕಿ, ಬೆವರ್ ಸಾಗರ್, ಕವಿನಾಯಕ್ ಅಯ್ಯನ್ರಾಗಿ, ಕೆರಿಯಪ್ಪ ತೂಬು, ಲಗತ್ ಎರೆ, ನವ್ವಾಲೆ ಬದ, ಸುವ್ವಾಲೆ ಕಣ, ಅಕಿರ ಹಾಲಪ್ಪ, ಮಂಜಿಲ್ ಬಿಸೆರೊಟ್ಟಿ ಹಿಂಗೇ ನೂರಾರ್ ಜನ ಹಳ್ಳಿಮಕ್ಳು ಉಳ್ಳಿ, ಉದ್ದು, ನುಗ್ಗೆ, ಸೀಬೆ ಅಂತೆಲ್ಲ ಹೆಸರಿಟ್ಕಂಡು ಕುಂತ್ಕತರೆ. ಇವರಿಗೆ ಇವ್ನು ತಂಬೂರಿ ಹಿಡ್ಕಂಡ್ ಪಾಟ ಮಾಡದು. ಇದ್ಯಾವ್ ಇಸ್ಕೂಲಲಾ ಇದು ಸೊನ್ನೆ ಇಸ್ಕೂಲು ಸೀಮೇಗಿಲ್ಲುದ್ದು ಅಂತ ನಾನು ಒಂದ್ ದಿನ ತಡೀನಾರದೆ ಕೇಳೇ ಬಿಟ್ಟೆ. ಅದಕ್ಕವನು ಶೂನ್ಯ ಬೇಸಾಯ ಅನ್ನಲ್ವೆ ಹಂಗೆಯ ಇದು ಸೊನ್ನೆ ಇಸ್ಕೂಲು ಅಂದ. ಹು. ಈ ಥರನೆ ದೇಸುದ್‌ ತುಂಬ ಸೊನ್ನೆ ಇಸ್ಕೂಲು, ಸೊನ್ನೆ ಕಾಲೇಜುಗುಳೆ ಹೆಚ್ಲಿ ತಗಳಿ.

ಈ ಅಂಕಣದ ಹಿಂದಿನ ಬರೆಹಗಳು:
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...