ಹಿಂದಣ ಹೆಜ್ಜೆಯನರಿಯದೆ 

Date: 08-10-2024

Location: ಬೆಂಗಳೂರು


"ಕನ್ನಡದ ಅರಿವನ್ನು ತಮ್ಮ ಸಾಹಿತ್ಯಕ ಪ್ರಯೋಗಗಳಿಂದ ವಿಸ್ತರಿಸಿದ ದೇವುಡುವನ್ನು ಆಯ್ಕೆ ಮಾಡಿಕೊಂಡು ಅವರ ಸೃಜನಶೀಲ ಸಾಹಿತ್ಯವನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಈ ಅಧ್ಯಯನವು ಲೇಖಕನನ್ನು ಮಾತ್ರ ಗಮನಿಸುವದಿಲ್ಲ. ಸಾಹಿತ್ಯ ರಚನೆಯ ಹಿನ್ನಲೆಯನ್ನು, ಸಾಂಸ್ಕೃತಿಕ ಒತ್ತಡಗಳನ್ನು ಮುಖ್ಯವಾಗಿ ಆಲೋಚಿಸುತ್ತದೆ," ಎನ್ನುತ್ತಾರೆ ಡಾ. ಹಳೆಮನೆ ರಾಜಶೇಖರ. ಅವರು ತಮ್ಮ, ‘ಓದಿನ ಹಂಗು’ ಅಂಕಣದಲ್ಲಿ ಕುಮಾರ ಚಲ್ಯ ಅವರ ‘ಹಿಂದಣ ಹೆಜ್ಜೆಯನರಿಯದೆ’ ಕೃತಿ ಕುರಿತು ಬರೆದ ಲೇಖನ.

ಸಂಶೋಧನೆಯನ್ನು ವ್ಯಕ್ತಿ ನೆಲೆಯಲ್ಲಿ ಗ್ರಹಿಸಿ ಅಭಿವ್ಯಕ್ತಿಸುವ ಕ್ರಮವೊಂದು ಕನ್ನಡದಲ್ಲಿ ಚಾಲ್ತಿಯಲ್ಲಿದೆ. ಸಾಧಕ ಲೇಖಕನನ್ನು ಕೇಂದ್ರವಾಗಿಟ್ಟುಕೊಂಡು ಅಧ್ಯಯನ ಮಾಡುವವರು ಅವರ ಸಾಂಸ್ಕೃತಿಕ ಅನನ್ಯತೆ ಹಾಗು ಸಾಹಿತ್ಯಕ ವಿಭಿನ್ನತೆಯನ್ನು ಗುರುತಿಸುವುದು, ಆ ಕಾಲದ ಸಂದರ್ಭವನ್ನು ಅರ್ಥೈಸುವುದು, ಕಾಲದ ಚಲನೆಯನ್ನು ಕಂಡುಕೊಳ್ಳುವುದು, ವಾಸ್ತವದ ಜೊತೆಗೆ ಮುಖಾಮುಖಿಯಾಗಿಸುವುದು ಸಂಶೋಧನೆಯ ಮುಖ್ಯ ಕಾಳಜಿಯಾಗಿರುತ್ತದೆ. ಈ ರೀತಿಯ ಸಂಶೋಧನೆಯನ್ನು ಪ್ರಸಿದ್ದ ಪ್ರಾಧ್ಯಾಪಕರಾದ ಡಾ. ಕುಮಾರ ಚಲ್ಯ ಅವರು ಕೈಗೊಂಡಿದ್ದಾರೆ. ಕನ್ನಡದ ಅರಿವನ್ನು ತಮ್ಮ ಸಾಹಿತ್ಯಕ ಪ್ರಯೋಗಗಳಿಂದ ವಿಸ್ತರಿಸಿದ ದೇವುಡುವನ್ನು ಆಯ್ಕೆ ಮಾಡಿಕೊಂಡು ಅವರ ಸೃಜನಶೀಲ ಸಾಹಿತ್ಯವನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಈ ಅಧ್ಯಯನವು ಲೇಖಕನನ್ನು ಮಾತ್ರ ಗಮನಿಸುವದಿಲ್ಲ. ಸಾಹಿತ್ಯ ರಚನೆಯ ಹಿನ್ನಲೆಯನ್ನು, ಸಾಂಸ್ಕೃತಿಕ ಒತ್ತಡಗಳನ್ನು ಮುಖ್ಯವಾಗಿ ಆಲೋಚಿಸುತ್ತದೆ. ಜೊತೆಗೆ ಅವರ ಸಾಹಿತ್ಯವನ್ನು ಸಮಗ್ರವಾಗಿ ಪರಿಶೀಲಿಸುತ್ತದೆ. ಈ ರೀತಿಯ ಅಧ್ಯಯನಗಳು ಲೇಖಕನನ್ನು ಕಾಲಾಂತರದೊಳಗೆ ಬಹುಮುಖಿಯಾಗಿ ಮರುಸೃಷ್ಟಿಸುತ್ತವೆ.

ಕೆಲವು ಲೇಖಕರು ಓದುಗರ ಪರಧಿಯಿಂದ ಸಂವಹನದ ಕಾರಣದಿಂದ ದೂರವಾಗಿರುತ್ತಾರೆ. ಜನಪ್ರಿಯತೆಯ ಮಾನದಂಡಗಳನ್ನು ಮೀರಿದ ಸಾಧ್ಯತೆಗಳು ಅವರ ಸಾಹಿತ್ಯದಲ್ಲಿ ಇರುತ್ತದೆ. ಆದ್ದರಿಂದ ಅವರನ್ನು ಓದುಗ ಒಲಯ ಗಂಭೀರವಾಗಿ ಪರಿಗಣಿಸಿರುವದಿಲ್ಲ. ಇಂತ ಸಂದರ್ಭದಲ್ಲಿ ಸಂಶೋಧಕರು ಕಾರ್ಯ ಪ್ರವೃತ್ತರಾಗಬೇಕಾಗುತ್ತದೆ. ದೇವುಡು ಅವರನ್ನು ಅಧ್ಯಯನಕ್ಕೆ ಒಳಪಡಿಸುವುದರ ಮೂಲಕ ಅಂತಹ ಮಹತ್ವದ ಕಾರ್ಯವನ್ನು ಡಾ. ಕುಮಾರ ಚಲ್ಯ ಅವರು ಮಾಡಿದ್ದಾರೆ. ಇಂತಹ ಅಧ್ಯಯನದ ಸಂದರ್ಭದಲ್ಲಿ ಎದುರಾಗುವ ದೊಡ್ಡ ಸಮಸ್ಯೆ ಅವರ ಸಾಹಿತ್ಯವನ್ನು ಒಟ್ಟು ಮಾಡುವುದು. ಚೆದುರಿ ಹೋದ ಬರಹಗಳನ್ನು ಒಂದೆಡೆ ಸಂಗ್ರಹಿಸುವುದು ಸವಾಲೆ ಸರಿ. ಅದನ್ನು ಯಶಸ್ವಿಯಾಗಿ ಸಂಶೋಧಕರು ಮಾಡಿದ್ದಾರೆ.

ಪರಂಪರೆಯನ್ನು ನಿರ‍್ಮಿಸಿದ ಲೇಖಕರನ್ನು ಅಧ್ಯಯನಕ್ಕೆ ಒಳಪಡಿಸುವಾಗ ಆಯಾ ಕಾಲದ ಮಜಲುಗಳನ್ನು ಗುರುತಿಸಬೇಕಾಗುತ್ತದೆ. ಅದನ್ನು ಸಂಶೋಧಕರು ಸಮರ್ಥವಾಗಿ ಗುರುತಿಸಿ ಶೋಧಿಸಿದ್ದಾರೆ. ‘ಪರಂಪರೆಯೊಂದರ ಅರ್ಥಪೂರ್ಣ ಮಜಲುಗಳನ್ನು ಕಾಲಕಾಲಕ್ಕೆ ಸರಿಯಾಗಿ ಗ್ರಹಿಸದೆ ಹೋಗುವುದರಿಂದ ಆಗುವ ನಷ್ಟ ಅಪಾರ. ಈ ನಿಲುವು ಸಾಹಿತ್ಯ ಕುರುತಂತೆಯು ನಿಜ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅವಜ್ಞೆಯಿಂದಲೋ, ಪೂರ್ವಗ್ರಹಿಕೆಯಿಂದಲೋ, ಎಲ್ಲಕ್ಕಿಂತಲೂ ಅನಾಸಕ್ತಿಯಿಂದಾಗಿಯೋ ಕೆಲವು ಲೇಖಕರನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಸಾಕಷ್ಟು ಮೌಲಿಕವೆನ್ನಬಹುದಾದ ಸಾಹಿತ್ಯವನ್ನು ನೀಡಿದವರನ್ನು ಪರಂಪರೆಯ ವಾಹಿನಿಯಿಂದ ಆಚೆಗೆ ಸರಿಸಿಬಿಡುವ ಪ್ರವೃತ್ತಿ ಅಪರೂಪವೇನಲ್ಲ. ”(ಪು. 4) ಎಂದು ಸಂಶೋಧಕರು ದೇವುಡು ಅವರನ್ನು ಸಮಗ್ರ ಅಧ್ಯಯನಕ್ಕೆ ಒಳಪಡಿಸಿದ್ದಾರೆ.

ಅವರ ಸಾಹಿತ್ಯವನ್ನು ಕೇವಲ ಸಮೀಕ್ಷೆ ಮಾಡಿ ನಿರೂಪಿಸದೇ ಸಾಂಸ್ಕೃತಿಕ, ಚಾರಿತ್ರಿಕ ಸಂದರ್ಭಗಳನ್ನು ಶೋಧಿಸುವ ಅಧ್ಯಯನ ಮಾಡಿದ್ದಾರೆ. ಲೇಖಕರ ಬಹುಮುಖಿ ಆಯಾಮಗಳನ್ನು ಗುರುತಿಸಿ ಅವರ ಸಾಧ್ಯತೆಗಳನ್ನು ಅವಲೋಕಿಸುವದಕ್ಕೆ ಅವರ ಒಟ್ಟು ಪರಿಸರವನ್ನು ಗಮನಿಸಬೇಕಾಗುತ್ತದೆ. ಅದಕ್ಕೆ ಅಪಾರ ಸಂಗ್ರಹ ಕಾರ್ಯ ಹಾಗು ವಿಂಗಡಣೆಯ ಅಗತ್ಯವಿದೆ. ಲೇಖಕರ ವೈಯಕ್ತಿಕ ಸಂಗತಿಗಳನ್ನು ಗಮನಿಸಿ, ಅವರ ಸಾಹಿತ್ಯಿಕ ಸಾಧ್ಯತೆಗಳನ್ನು ಶೋಧಕ್ಕೊಳಪಡಿಸುವುದು ಕಠಿಣದ ದಾರಿ. ಅದನ್ನು ಬಹಳ ಯಶಸ್ವಿಯಾಗಿ ಸಂಶೋಧಕರು ನಿರ್ವಹಿಸಿದ್ದಾರೆ.

“ಪ್ರಸ್ತುತ ಅಧ್ಯಯನವು ದೇವುಡು ಅವರ ಸೃಜನಶೀಲ ಸಾಹಿತ್ಯವನ್ನು ಕುರುತದ್ದಾರೂ ಹಿನ್ನಲೆಯಗಿ ನವೋದಯಪೂರ್ವ ಹಾಗು ನವೋದಯದ ಕಾಲ ಸಂದರ್ಭದ ಮುಖ್ಯ ವಿಚಾರಗಳನ್ನು ಗಮನಿಸಲಾಗಿದೆ. ಕಾರಣ ದೇವುಡು ಅವರ ಸೃಜನಶೀಲತೆಯ ನೆಲೆಗಳಿರುವುದೇ ಆ ಕಾಲಘಟ್ಟದಲ್ಲಿ.’’ (ಪು. 4) ಎಂದು ಆಯ ಕಾಲಘಟ್ಟವನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಅಲ್ಲಿ ದೇವುಡು ಅವರ ವಿಶೇಷತೆಯನ್ನು ಗುರುತಿಸಲಾಗಿದೆ. ಅವರ ಸಾಹಿತ್ಯಕ್ಕಿರುವ ಅನನ್ಯತೆಯನ್ನು ಸಾಂಸ್ಕೃತಿಕ ಚಾರಿತ್ರಿಕ ಹಿನ್ನಲೆಯಲ್ಲಿ ಚರ್ಚಿಸಲಾಗಿದೆ. ಆ ಕಾಲಘಟ್ಟದ ಬದಲಾವಣೆಗಳು ಲೇಖಕನನ್ನು ರೂಪಿಸಿದಂತೆ ಲೇಖಕನು ಆಯಾ ಕಾಲಗಟ್ಟಕ್ಕೆ ಹೊಸತನವನ್ನು ತಂದುಕೊಡುತ್ತಾನೆ. ಆ ಸಾಮರ್ಥ್ಯ ಲೇಖಕರಲ್ಲಿ ಕಾಣುತ್ತೇವೆ. ಅದನ್ನು ಓದುಗರು ಗುರುತಿಸಲಿಲ್ಲ ಎಂಬ ವಿಷಾದ ದೇವುಡು ಅವರನ್ನು ಅಧ್ಯಯನಕ್ಕೆ ಒಳಪಡಿಸಲು ಪ್ರೇರಣೆ ನೀಡಿದೆ.``ವಿಶಿಷ್ಟ ಮನೋಧರ್ಮದ ಕೃತಿಗಳನ್ನು ನೀಡಿದ ದೇವುಡು ಅವರ ಸಾಹಿತ್ಯದ ಬಗ್ಗೆ ಗಂಭೀರವಾದ ಚರ್ಚೆ ಏಕೆ ಸಾಧ್ಯವಾಗಲಿಲ್ಲ ಎಂಬ ಸಂಶಯ ಹುಟ್ಟುತ್ತದೆ. ಅವರ `ಮಹಾಬ್ರಹ್ಮಣ’, `ಮಹಾದರ್ಶನ’, `ಮಹಾಕ್ಷತ್ರಿಯ’ ಅಪರೂಪದ ಕೃತಿಗಳು. ಅನುವಾದದ ಮೂಲಕ ಕನ್ನಡ ಕಾದಂಬರಿ ಬೆಳೆಯುತ್ತಿದ್ದಾಗ, ಈ ಶತಮಾನದ ಮೂರನೆಯ ದಶಕದಲ್ಲಿ `ಅಂತರಂಗ’ (1931)ದಂತ ಮನೋವಿಶ್ಲೇಷಣಾತ್ಮಕದಂತಹ ಕಾದಂಬರಿಯನ್ನು `ಮಯೂರ’ದಂತಹ(1931)ಐತಿಹಾಸಿಕ ಕಾದಂರಿಯನ್ನು ಬರೆದು ಕನ್ನಡದಲ್ಲಿದ್ದ ಸ್ವತಂತ್ರ ಕಾದಂಬರಿಯ ಕೊರೆತೆಯನ್ನು ತುಂಬಿಕೊಟ್ಟವರು ದೇವುಡು. ಅಲ್ಲದೆ ನಾಟಕ, ಕಥೆ, ಮಕ್ಕಳ ಸಾಹಿತ್ಯದಲ್ಲೂ ದುಡಿದ ಸವ್ಯಸಾಚಿ. ಇಂಥವರ ಸಾಹಿತ್ಯ ಕೃತಿಗಳನ್ನು ಆಯಾ ಸಂದರ್ಭದಲ್ಲಿಯೇ ಪರಿಗಣಿಸದೇ ಹೋದುದಕ್ಕೆ ಎರಡು ಕಾರಣ ಇರಬಹುದು. ಒಂದು ಲೇಖಕರೇ ಹಾಕಿಕೊಂಡ ಕೆಲವು ನಿರ್ದಿಷ್ಟ ಚೌಕಟ್ಟುಗಳು: ಅಂದರೆ ಕೃತಿ ರಚನೆಗಾಗಿ ಒಂದು ಬಗೆಯ ಬೌದ್ಧಿಕ ನೆಲೆಗಟ್ಟನ್ನು ರೂಪಿಸಿಕೊಂಡದ್ದು. ಎರಡು, ಕೃತಿಗಳನ್ನು ಗ್ರಹಿಸಲು ಬೇಕಾದ ಬೌದ್ಧಿಕ ಶಿಸ್ತು ಮತ್ತು ಮನೋಧರ್ಮ ಓದುಗನಲ್ಲಿ ಇಲ್ಲದೇ ಓದುದ್ದು.”(ಪು.4)ಎಂದು ಅವರ ಸಾಹಿತ್ಯವನ್ನು ಅಧ್ಯಯನಕ್ಕೆ ಒಳಪಡಿಸಿ, ಸಾಹಿತ್ಯಕ್ಕೆ ಅನನ್ಯತೆಯನ್ನು ತಂದುಕೊಡುವ ಜವಬ್ದಾರಿನ್ನು ಈ ಅಧ್ಯಯನ ನಿಭಾಯಿಸಿದೆ. ಏಕೆಂದರೆ ತಮ್ಮ ಸಾಹಿತ್ಯವನ್ನು ಸರಿಯಾಗಿ ಓದುಗ ವಲಯ ಗುರುತಿಸಲಿಲ್ಲ ಎಂಬ ವಿಷಾದ ಲೇಖಕರಲ್ಲೂ ಇದೆ. "ಕೆಲವರು ಜನಕ್ಕೆ ಹಿಡಿಯುವ ಪುಸ್ತಕ ಬರೆದರೆ ಯಾಕೆ ಆಗುವುದಿಲ್ಲ ಎನ್ನುತ್ತಾರೆ. ನಾನು ಓದುವರ ಮಟ್ಟಕ್ಕೆ ಪುಸ್ತಕ ಇಳಿಸಿದರೆ ಹೋಟಲ್ ತಿಂಡಿಗೂ ಇದಕ್ಕೂ ವ್ಯತ್ಯಾಸವೇನು? ಓದುವವನು ಬರೆಯುವನ ಮಟ್ಟಕ್ಕೆ ಏರಬೇಕು. ಬೇರು ನೆಲದಲ್ಲಿಯೇ ಬಿಟ್ಟರೂ ಹೂ ಮಾತ್ರ ಗಿಡದ ತಲೆಯಲ್ಲಿಯೇ ಬಿಡುವುದು. ಹಾಗೆ ಸಾಹಿತ್ಯ ಎನ್ನುತ್ತೇವೆ. ಅಲ್ಲದೆ ಮನ:ಪೂರ್ವಕ ಪ್ರಯತ್ನ ಓದುಗನಲ್ಲಿರಬೇಕು.ಆ ಪ್ರಯತ್ನ ಬಹಳ ಕಡೆ ಇನ್ನೂ ಬೆಳೆಯಬೇಕು.”(ಪು.4) ಈ ಕೊರತೆಯನ್ನು ಅವರ ಸಾಹಿತ್ಯದ ಸಾಧ್ಯತೆಯನ್ನು ತಲಸ್ಪರ್ಷಿ ಅಧ್ಯಯನದ ಮೂಲಕ ತಂಬಿಕೊಡುವ ಸಾಹಸ ಮಾಡಲಾಗಿದೆ.

ಭಾರತಲ್ಲಿ ಕೆಲವರಿಗೆ ಅಗತ್ಯಕ್ಕಿಂತ ಹೆಚ್ಚು ಸ್ಥಾನಮಾನ ಸವಲತ್ತುಗಳು ದೊರೆಯುತ್ತವೆ. ಕೆಲವರನ್ನು ಸಂಪೂರ್ಣ ನಿರ್ಲಕ್ಷಿಸುತ್ತಾರೆ. ಅವರ ಸಾಧನೆಯನ್ನು ಗಮನಿಸದೆ ದೂರವಿಡುತ್ತಾರೆ. ಲೇಖಕರನ್ನು ಮುನ್ನೆಲೆಗೆ ತರುವ ಹಿನ್ನಡೆಯನ್ನುಂಟುಮಾಡುವ ವಿಮರ್ಶಾವಲಯ ಕನ್ನಡದಲ್ಲಿ ಎಂದಿನಿಂದಲೂ ಇದೆ. ಬೇಕಾದವರಿಗೆ ಮಣೆ ಹಾಕಿ ಬೇಡದವರನ್ನು ಬಿಸಾಕುವ ಪ್ರವೃತ್ತಿ ವಿಮರ್ಶಾವಲಯದಲ್ಲಿದೆ. ಅದಕ್ಕೆ ಬಲಿಯಾದವರಲ್ಲಿ ದೇವಡು ಒಬ್ಬರು. ಆ ಕುರಿತು ಸಂಶೋಧಕರು ತಮ್ಮ ಪ್ರಬಂಧದಲ್ಲಿ ಸವಿಸ್ತಾರವಾಗಿ ಚರ್ಚಿಸಿದ್ದಾರೆ. "ದೇವುಡು ಸಾಹಿತ್ಯದ ರಚನಾ ವಿನ್ಯಾಸ ಹಾಗೂ ವೈವಿದ್ಯಗಳನ್ನು ಕುರಿತು ಗಂಭೀರ ಅಧ್ಯಯನದ ಅಗತ್ಯವಿದೆ. ಖಚಿತವಾಗಿ ಹೇಳುವುದಾದರೆ ದೇವುಡು ಅವರ ಬಗೆಗೆ ನಡೆದ ಕೆಲಸ ಅತೀ ಕಡಿಮೆ. ‘ಬಹುಮುಖವಾದ ಅವರ ಪ್ರತಿಭೆಗೆ ತಕ್ಕ ಮನ್ನಣೆ ನೀಡಲಿಲ್ಲವೆಂಬುದು ಸರ್ವವಿದಿತವಾದ ವಿಷಯ. ನಮಗೆ ಯಾವ ಶಾಪವೋ ತಿಳಿಯದು. ನಿಜದ ನೆಲೆಯನ್ನರಿಯದೆ ಯೋಗ್ಯತೆಯ ಆಳವನ್ನರಿಯದೆ, ಮನ್ನಣೆಗೆ ಪಾತ್ರವಾಗುವ ನಿಜವಾದ ಯೋಗ್ಯತೆಗಳನ್ನು ಮರೀಚಿಕೆಗಳೆಂದು ಭಾವಿಸಿ, ಮರೀಚಕಗಳೇ ಯೋಗ್ಯತೆಯ ಗಳಿಗಳೆಂದು ತಿಳಿದು ನಡೆದುಕೊಳ್ಳುತ್ತಿದ್ದೇವೆ. ಬೇರೆ ದೇಶಗಳಲ್ಲಿ ಇಂತಹ ಪ್ರತಿಭಾವಂತರನ್ನು ನಾಡು ನಾಡಿನ ಜನತೆ ತಮ್ಮ ಪಾಲಿನ ಭಾಗ್ಯವೆಂದು ಪರಿಗಣಿಸಿ ಕಾಪಾಡುತ್ತದೆ. ನಮ್ಮಲ್ಲಿ ಈ ದಿಶೆಯಲ್ಲಿ ಉದಾಶೀನ ಮಾತ್ರ ತುಂಬಿತುಳುಕುತ್ತದೆ ಎಂಬ ಸಿ.ಕೆ. ನಾಗರಜ್ ಅವರ ಮಾತುಗಳು ದೇವುಡು ಸಾಹಿತ್ಯವನ್ನು ಕುರಿತು ಆಗಬೇಕಿದ್ದು ಆಗದೇ ಇರುವ ಅಧ್ಯಯದ ಕೊರತೆಯನ್ನು ಸೂಚಿಸಿವೆ. ಏಕೆಂದರೆ ಕೃತಿ ಹೊರಬರುವ ಮುಂಚೆಯೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ನೀಡುವ ವಿಮರ್ಶಕರನ್ನು ದೇವುಡು ಸಂಪಾದಿಸಿಕೊಂಡಿರಲಿಲ್ಲ .ಪೂರ್ವನಿಯೋಜಿತ ಪರಾಕು ಅವರಿಗೆ ಬೇಕಿರಲಿಲ್ಲ. ‘ಫಲಾಫಲಗಳನ್ನು ಕುರಿತು ಚಿಂತಿಸಲು ನನಗೆ ವ್ಯವಧಾನವಿಲ್ಲ. ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆಯಾಗಿ ಸೋಲೋ ಗೆಲವೋ ಎಂದು ನಾನು ನೋಡುವದಿಲ್ಲ.’ ಎಂದು ದೇವುಡು ಅವರೇ ತಿಳಿಸಿದ್ದಾರೆ. ‘ಪರಸ್ಥಿತಿಯ ಪ್ರಭಾವದಿಂದ ಹುಟ್ಟಿದ ಸಾಹಿತ್ಯ ಆಗಿನ ಕಾಲದ ಹಂಬಲ ತೀರಿಸಿ ತಾನು ತೀರಿಹೋಗುತ್ತದೆ,’ ಎಂದು ತಿಳಿದಿದ್ದ ಅವರು ಯಾರಿಗೂ ಯಾವುದಕ್ಕೂ ಕಾಯಲಿಲ್ಲ. ತಮ್ಮದೇ ಆದ ದಾರಿಯೊಂದರ ಅನ್ವೇಶಕರಾಗಿದ್ದರು. `ದಾರಿಬಿಟ್ಟು ಹೊಸ ಮಾತಾಡುವೆನೆಂದು ನನಗೊಂದು ಹೆಸರಿದೆ. ಈಗ ನಾನಾಡುತ್ತಿರುವ ಮಾತು ಕಠಿಣ. ಎಲ್ಲರ ದಾರಿಯಲ್ಲಿಲ್ಲ. ಸವೆಕಲಲ್ಲದ ಹೊಸಮಾತು’. ಎಂಬ ಮನೋಧರ್ಮ ಅವರದಾಗಿತ್ತು. ಹೀಗಾಗಿ ಅನೇಕರ ನಿರ್ಲಲಕ್ಷ್ಯಕ್ಕೆ ಗುರಿಯಾದರು. ಸಕಾಲದಲ್ಲಿ ದೊರೆಯಬಹುದಿದ್ದ ಸ್ಥಾನ ಗೌರವಗಳಿಂದ ವಂಚಿತರಾದರು. ಅಂಥ ಒಂದು ಸ್ಥಿತಿಯಲ್ಲಿ ಆಡಿದ ನುಡಿ ಇದು.` ಲೋಕದಲ್ಲಿ ಕೆಲವರು ಗುಣಬಲದಿಂದ ಮೇಲಕ್ಕೆ ಏರುವರು. ಇನ್ನೂ ಕೆಲವರು ಏರಿದ ಮೇಲೆ ಗುಣವಂತರಾಗುವರು. ಇನ್ನು ಕೆಲವರು ಏನೇ ಆದರೂ ಉದಾಸೀನರು. ನಾನು ಬಹುವಾಗಿ ಮೂರನೆಯ ವರ್ಗದವನು.’(ಪು.12) ಎಂದು ಅವರು ತಮ್ಮ ಬಗ್ಗೆಯೆ ಒಂದು ರೀತಿಯ ಉದಾಸೀನ ಭಾವನೆಯನ್ನು ತೋರಿದ್ದರು. ಸಾಹಿತ್ಯ ರಚನೆಯಲ್ಲಿ ಭಿನ್ನವಾದ ಹಾದಿಯನ್ನು ತುಳುದಿದ್ದರು. ಬಹು ಭಾಷೆಯಲ್ಲಿ ಪಾಂಡಿತ್ಯ ಸಾಧಿಸಿದ್ದ ಅವರು ಅದೆಲ್ಲವನ್ನೂ ಕನ್ನಡದಲ್ಲಿ ಧಾರೆಯೆರೆವ ಸಾಹಿತ್ಯಕ ಪ್ರಯೋಗಗಳನ್ನು ಮಾಡಿದರು. ಅದು ಸಂಶೋಧಕರಿಗೆ ಬಹುವಾಗಿ ಕಾಡಿದೆ. ಆದ್ದರಿಂದ ಅವರ ಅಧ್ಯಯನ ಪರಿಪೂರ್ಣತೆಯನ್ನು ಪಡೆದುಕೊಂಡಿದೆ. ತಮ್ಮ ಸಂಶೋಧನೆಯ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ. "ಬಹುಮುಖ ವ್ಯಕ್ತಿತ್ವದ ದೇವುಡು ಅವರ ಸೃಜನಶೀಲ ಕೃತಿಗಳ ಅಧ್ಯಯನ ಈ ಮಹಾಪ್ರಬಂಧದ ಮುಖ್ಯ ಉದ್ದೇಶ. ಸೃಜನಶೀಲ ಸಾಹಿತ್ಯವೆಂದು ವಿಷಯಕ್ಕೆ ಒಂದು ಪರಿಮಿತಿಯನ್ನು ಹಾಕಿಕೊಳ್ಳಲು ಕಾರಣ-

1.ದೇವುಡು ಅವರು ಕಥನ ಸಾಹಿತ್ಯ ನಿರ್ಮಿತಿಗೆ ಹೆಸರಾದವರು. ಅದರಲ್ಲೂ ಕಾದಂಬರಿ ಅವರಿಗೆ ಪ್ರಿಯವಾದ ಪ್ರಕಾರ. ಇತರ ಪ್ರಕಾರಗಳಲ್ಲಿ ಅವರು ಆಸಕ್ತಿ ತೋರಿದ್ದರೂ ಅವರ ಪ್ರತಿಭೆ ಹೆಚ್ಚು ಪ್ರಕಟಗೊಂಡಿರುವುದು ಕಾದಂಬರಿ ರಚನೆಯಲ್ಲಿ. ಉಪಲಬ್ಧವಿರುವ ಹದಿಮೂರು ಕಾದಂರಿಗಳು, ನಾಲ್ಕು ಕಥಾಸಂಕಲನಗಳು ಹಾಗು ಎರಡು ನಾಟಕಗಳು,(ಜೊತೆಗೆ ಮಕ್ಕಳಿಗಾಗಿಯೇ ಪ್ರಕಟವಾಗುತ್ತಿದ್ದ `ನಮ್ಮ ಪುಸ್ತಕ’ ಪತ್ರಿಕೆಯನ್ನು ಗಮನದಲ್ಲಿಟ್ಟುಕೊಂಡು)ಇವುಗಳನ್ನು ಪರಿಗಣಿಸಿ ಕೃತಿಗಳ ಸೃಜನಾತ್ಮಕ ಆಯಾಮಗಳನ್ನು ಕುರಿತು ಆಲೋಚಿಸಲಾಗಿದೆ.

2. ಸಂಗ್ರಹ, ವಿಚಾರ, ವಿಮರ್ಶೆ, ಜಾನಪದ, ಅನುವಾದ, ಪತ್ರಿಕೋಧ್ಯಮಕ್ಕೆ ಸಂಬಂಧಿಸಿದಂತೆ ಸುಮಾರು ಐವತ್ತು ಗ್ರಂಥಗಳು ಮತ್ತು ಅಲ್ಲಲ್ಲಿ ಚದುರಿ ನಿಂತಿರುವ ಬಿಡಿ ಲೇಖನಗಳನ್ನು ಕುರಿತು ಪ್ರತ್ಯೇಕವಾಗಿಯೇ ಒಂದು ಮಹಾಪ್ರಬಂಧವನ್ನು ಬರೆಯಬಹುದಾದ ಸಾಧ್ಯತೆಗಳನ್ನು ಸೂಚಿಸಿ ಈ ಮಹಾಪ್ರಬಂಧಕ್ಕೆ ನಿರ್ದಿಷ್ಟ ಚೌಕಟ್ಟನ್ನು ಹಾಕಿಕೊಳ್ಳಲಾಗಿದೆ.

3.ಮುಖ್ಯವಾಗಿ ಕಾದಂಬರಿ, ಕಥೆ, ನಾಟಕ, ಮಕ್ಕಳ ಸಾಹಿತ್ಯವನ್ನು ಪರಿಭಾವಿಸಿದ್ದರೂ ಅನುಷಂಗಿಕವಾಗಿ ಇತರ ಕೃತಿಗಳಿಂದಲೂ ಪೂರಕ ಸಾಮಗ್ರಿಗಳನ್ನು ಸ್ವೀಕರಿಸಲಾಗಿದೆ. ಹೀಗಾಗಿ ದೇವುಡು ಅವರ ಸೃಜನೇತರ ಸಾಹಿತ್ಯವನ್ನು ಸ್ಥೂಲವಾಗಿ ಅಧ್ಯಯನಕ್ಕೆ ಒಳಪಡಿಸಿದಂತಾಗುತ್ತದೆ.”(ಪು.11)

ಮಹಾಪ್ರಬಂಧವನ್ನು ಆರು ಅಧ್ಯಯನಗಳನ್ನಾಗಿ ವಿಂಗಡಿಸಲಾಗಿದೆ. ಅವರ ಸೃಜನಶೀಲ ಸಾಹಿತ್ಯವನ್ನು ಕೇಂದ್ರೀಕರಿಸಿ ಅಧ್ಯಯನ ಮಾಡಲಾಗಿದೆ. ಇದರಿಂದ ಅಧ್ಯಯನಕ್ಕೆ ಹೊಸ ಆಯಾಮ ದೊರಕಿದೆ. ಅವರ ಸೃಜನಶೀಲ ಹಿನ್ನಲೆಯನ್ನು ಬಹುಮುಖಿ ನೆಲೆಯಲ್ಲಿ ಗ್ರಹಿಸುವುದು ಮತ್ತು ಅಂತರ್ ಶಿಸ್ತೀಯ ಅಧ್ಯಯನಕ್ಕೆ ಒಳಪಡಿಸುವುದು ಈ ಮಹಾಪ್ರಬಂಧದ ವಿಶೇಷವಾಗಿದೆ. ಎರಡನೆಯ ಅಧ್ಯಾಯದಲ್ಲಿ ಅವರ ವೈಯಕ್ತಿಕ ಜೀವನದೊಂದಿಗೆ ಆಧುನಿಕ ಸಾಹಿತ್ಯ ಚರಿತ್ರೆಯನ್ನು ವಿಶ್ಲೇಷಿಸಲಾಗಿದೆ. ಇದರಿಂದಾಗಿ ಅವರ ಜೀವನ ಮತ್ತು ಸಾಹಿತ್ಯಕ್ಕೆ ಅವಿಭಾವ ಸಂಬಂಧ ದೊರೆತಂತಾಗಿದೆ. ದೇವುಡು ಅವರ ಸಾಹಿತ್ಯ ಚಿಂತನೆಗೆ ಸ್ಪಷ್ಟತೆ ದೊರಕಿದೆ. ಸಾಹಿತ್ಯದಷ್ಟೇ ಅವರ ವೈಯಕ್ತಿಕ ಜೀವನವು ಅತ್ಯಂತ ಪಾರದರ್ಶಕವಾದುದು. ಈ ಮಾತನ್ನು ಎಲ್ಲಾ ಸಾಹಿತಿಗಳಿಗೆ ಅನ್ವಯಿಸಿ ಹೇಳಲು ಆಗುವದಿಲ್ಲ. ನವೋದಯದ ಬಹುತೇಕ ಸಾಹಿತಿಗಳಿಗೆ ಈ ಬದ್ಧತೆ ಇರುವುದನ್ನು ಕಾಣುತ್ತೇವೆ. ಜೀವನ ಬೇರೆ ಸಾಹಿತ್ಯ ಬೇರೆ ಎಂದು ವಾದ ಮಾಡಿದರು ವೈಯಕ್ತಿಕ ಜೀವನವು ಸಾಹಿತ್ಯವನ್ನು ರೂಪಿಸುತ್ತದೆ. ಈ ಸಂಗತಿಯನ್ನು ಸಾಂಸ್ಕೃತಿಕ ಅನನ್ಯತೆಯ ನೆಲೆಯಲ್ಲಿ ಶೋಧಿಸಲಾಗಿದೆ.

ದೇವುಡು ಅವರ ಕನ್ನಡ ಕಾರ್ಯಗಳು ಬೆರಗು ಮೂಡಿಸುವಂತವು ಕನ್ನಡ ನುಡಿಯ ಬೆಳವಣಿಗೆಗಾಗಿ ಅವಿರತ ಪ್ರಯತ್ನ ಮಾಡಿದರು. ಪ್ರಚಾರ ಕಾರ್ಯ ಕೈಗೊಂಡರು. ಜನರ ಬಳಿಗೆ ಹೋಗಿ ಕನ್ನಡ ಅಕ್ಷರ ಕಲಿಸುವ ಯೋಜನೆಯನ್ನು ರೂಪಿಸಿದರು. ಇವೆಲ್ಲವೂ ಅವರಿಗೆ ಭಾಷೆ ಬಗೆಗಿರುವ ಬಧ್ಧತೆಯನ್ನು ತೋರಿಸುತ್ತದೆ. "1947ರಲ್ಲಿ ಕನ್ನಡ ನುಡಿ ಪತ್ರಿಕೆಯಲ್ಲಿ ದೇವುಡು ಬರೆದ `ಪ್ರಥಮ ಭಾಷೆ: ಕನ್ನಡ’ ಎಂಬ ಪತ್ರ ಉಲ್ಲೇಖರ್ಹವಾದುದು. ನಮ್ಮ ಮೈಸೂರು ಭಾರತದೊಂದಿಗೆ ಸಹಕರಿಸಿ ಸ್ವತಂತ್ರ ಭೂಮಿ ಆಗುತ್ತಿರುವದು ನಮಗೆಲ್ಲ ಆನಂದ. ಈ ಆನಂದ ನಮಗೆ ಚಿರಕಾಲ ಉಳಿಯಬೇಕಾದರೆ, ನಮ್ಮ ಮುಂದಿನ ಪೀಳಿಗೆಯಲ್ಲಿ ಕನ್ನಡವೇ ನಾಡಿನ ಶಿಕ್ಷಣ ಪ್ರಪಂಚದಲ್ಲಿ ಪ್ರಪ್ರಥಮ ಸ್ಥಾನವನ್ನು ಅಲಂಕರಿಸಬೇಕು. ಅದಕ್ಕಾಗಿ ಮಿಡಲ್ ಹೈಸ್ಕೂಲುಗಳಲ್ಲಿ ಕನ್ನಡವೂ ಪ್ರಥಮ ಭಾಷೆಯಾಗುವಂತೆ ಒಂದು ಚಳುವಳಿ ನಡೆಯಬೇಕು. ಆ ಚಳುವಳಿಯನ್ನು ಹೂಡಬೇಕು. ಕೆಲವು ಕಡೆಗಳಲ್ಲಿ ತೆಲಗು ಇನ್ನೂ ಹಲವು ಕಡೆಗಳಲ್ಲಿ ಉರ್ದು ಪ್ರಥಮ ಭಾಷೆಯಾಬೇಕೆಂಬ ಪ್ರತಿ ಚಳುವಳಿ ಹುಟ್ಟೇ ಹುಟ್ಟೇಹುಟ್ಟುತ್ತದೆ. ಈಗ ಪ್ರಂತೀಕರಣವಾಗಿ ಭಾಷವಾರು ಪ್ರಾಂತಗಳಾಗುವುದರಿಂದ ಮೈಸೂರಿನಲ್ಲೆಲ್ಲ ಕನ್ನಡವೇ ಆಗಬೇಕು. ಮಿಡಲ್ ಸ್ಕೂಲಿನಿಂದ ಮುಂದೆಯೂ ಕನ್ನಡವೇ ಪ್ರಥಮ ಬಾಷೆಯಾಗಬೇಕು. ಕನ್ನಡದಲ್ಲಿಯೇ ಪಾಠಗಳು ನಡೆಯಬೇಕು ಎಂಬ ಸಿದ್ಧಾಂತ ನಿರ್ದಾಕ್ಷಿಣ್ಯವಾಗಿ ಅಂಗೀಕೃತವಾಗಬೇಕು. ಸಂಸ್ಥಾನಾದ್ಯಂತವೂ ಈ ವಿಷಯಗಳಲ್ಲಿ ಸಭೆಗಳಾಗಬೇಕು. ಸಭೆಗಳನ್ನು ನಡೆಸಲು ಪ್ರಚಾರಕರನ್ನು ಪರಿಷತ್ತು ಕಳಿಸಬೇಕು. ಪರಿಷತ್ತು ಈ ವಿಷಯವನ್ನು ಕೂಡಲೇ ಗಮನಿಸುವುದೆಂದು ನಂಬಿದ್ದೇನೆ.”(ಪು.32)

ಸಂಶೋಧಕರು ಕೆಲವು ಅಪರೂಪದ ವೈಯಕ್ತಿಕ ಜಿವನವನ್ನು ಕಟ್ಟಿಕೊಡುವುದರ ಜೊತೆಗೆ ಅವರ ವಿಚಾರಗಳನ್ನು ವಿಶ್ಲೇಸಿದ್ದಾರೆ. ಅವು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿವೆ. ಒಂದು ಕಾಲದ ಚರಿತ್ರೆಯನ್ನು ಬಿಂಬಿಸುತ್ತವೆ.

ಅವರ ಕೃತಿಗಳನ್ನು ಅಧ್ಯಯನ ಮಾಡಿರುವುದು ಕೇವಲ ಪರಿಚಯಾತ್ಮಕವಾಗದೆ ಕೃತಿ ರಚನೆಯ ಹಿಂದಿರುವ ಪರಿಸರವನ್ನು ಗ್ರಹಿಸಿ ವಿಶ್ಲೇಸಿಸಲಾಗಿದೆ. ಹೀಗಾಗಿ ಅವರ ಸೃಜನಶೀಲತೆಯನ್ನು ಕಾಘಟ್ಟದೊಂದಿಗೆ ಸಮೀಕರಿಸಲು ಸಾಧ್ಯವಾಗಿದೆ. ಇದರಿಂದ ಲೇಖಕನ ನಿಜವಾದ ಸತ್ವವನ್ನು ಒರೆಗೆ ಹಚ್ಚಿದಂತೆ ಆಗುತ್ತದೆ.

ತತ್ವಶಾಸ್ತ್ರ, ಪುರಾಣಗಳನ್ನು ಅಧ್ಯಯನ ಮಾಡಿದ ದೇವುಡು ಅವರು ಅವುಗಳ ಜಗತ್ತನ್ನು ಕಾದಂಬರಿ ಮಾಡುವ ಚಿಂತನೆ ಮಾಡಿದವರು. ಅದು ಮಹಾಪ್ರತಿಭಾವಂತರಿಗೆ ಸಾಧ್ಯವಾಗುವಂತದು. ಅವರ ಸಾಧ್ಯತೆಯನ್ನು ಸಂಶೋಧಕರು ಸರಿಯಾಗಿ ಗುರುತಿಸಿದ್ದಾರೆ. "ಮಹಾಬ್ರಹ್ಮಣ ಕಾದಂಬರಿ ರೂಪುಗೊಳ್ಳುವಲ್ಲಿ ವೇದ, ಉಪನಿಷತ್ತು ಮತ್ತು ಅನೇಕ ಸ್ಮೃತಿಗಳ ಅಭ್ಯಾಸದಿಂದ ದೊರೆತ ವಿಶಿಷ್ಟ ಉತ್ಪನ್ನಗಳು ಹಾಸುಹೊಕ್ಕಾಗಿ ಹೆಣೆದುಕೊಂಡಿವೆ. ಹೀಗಾಗಿ ಸಾಮನ್ಯರಿಗೆ ವೇದ್ಯವಾಗದ ಸಾಕಷ್ಟು ವಿಷಯಗಳು ಕೂಡಿಕೊಂಡಿವೆ. ಅಲ್ಲದೆ ಬ್ರಾಹ್ಮಣರು ನಿತ್ಯಕರ್ಮಗಳಲ್ಲಿ ಬಳಿಸುವ ಎಷ್ಟೋ ಶಬ್ದಗಳ ಪ್ರಯೋಗವಿದೆ. ಆದರೂ ಆಯ ಸಂದರ್ಭಗಳಲ್ಲಿ ಅವುಗಳ ವ್ಯಾಖ್ಯಾನವಿರುವುದರಿಂದ ಅರ್ಥಗ್ರಹಿಕೆಗೆ ಸುಲಭವಾಗುತ್ತದೆ. ಬಹಳಷ್ಟು ಹಿಂದೆ ಬಾಳಿರಬಹುದಾದ ಋಷಿಗಳನ್ನ್ನೆಲ್ಲ ಒಂದೇ ಕಾಲದಲ್ಲಿ ಒಟ್ಟುಗೂಡಿಸಿದಂತೆ ಕಂಡುಬಂದರು ಕಾದಂರಿಯಲ್ಲಿಯೇ ಅವುಗಳಿಗೆಲ್ಲ ಸುಸಂಬದ್ದವಾದ ಉತ್ತರಗಳನ್ನು ನೀಡುವ ಪ್ರಯತ್ನವಿದೆ. ಸುಮಾರು ಇಪ್ಪತ್ತೈದು ವರ್ಷಗಳ ಸತತ ನಿಷ್ಠೆಯ ಫಲ ಈ ಕಾದಂಬರಿ. `ಇದನ್ನು ಮೊದಲು ಬರೆಯಬೇಕೆಂಬ ಹಂಬಲ ಹುಟ್ಟದ್ದು 1926ರಲ್ಲಿ. ಆ ವೇಳೆಗೆ ಗಾಯಿತ್ರಿ ಮಹಿಮೆ ಗೊತ್ತಾಗಿ, ಗಾಯಿತ್ರಿಯನ್ನು ಬಲ್ಲವನು ಚತುರ್ವಿಂಶತಿ ತತ್ತ್ವಗಳನ್ನೂ ತಿರುಗಿಸಬಲ್ಲನು ಎಂಬ ನಂಬಿಕೆಯು ಬಂದಿತ್ತಾಗಿ, ಆ ಗಾಯಿತ್ರಿಯನ್ನು ಕಂಡು ಲೋಕಕ್ಕೆ ಸಾರಿ ಪರೋಪಕಾರ ಮಾಡಿದ ಮಹಾನುಭಾವನ ಕಥೆಯನ್ನು ಬರೆಯಬೇಕು ಎನ್ನಸಿತು. ಆದರೆ, ಸಚ್ಛಾಸ್ತ್ರವೊಂದನ್ನು ಸಂಪ್ರದಾಯ ಶುದ್ಧವಾಗಿ ಓದಿ ಆರ್ಷಣವನ್ನು ತೀರಿಸುವವರೆಗೂ ಆ ಮಹಿಮನ ಕಥೆಯನ್ನು ಬರೆಯುವದು ಸರಿಯಲ್ಲ ಎಂದು ಸುಮಾರು ಇಪ್ಪತ್ತು ವರ್ಷ ಹಾಗೆಯೇ ಇರಲು, 1947ರಲ್ಲಿ ಬರೆಯುವ ಪ್ರವೃತ್ತಿ ಬಲೆತು ಲೇಖನ ಕಾರ್ಯ ಮೊದಲಾಯಿತು. ಸುಮಾರು 1950ಆಗಷ್ಟ ವೇಳೆಗೆ ಮುಗಿಯಿತು, ಎಂಬ ಮಾತನ್ನು ಗಮನಿಸಿದರೆ ಈ ಕಾದಂಬರಿ ಹೊಳಹು, ಮನನ ಮತ್ತು ಸೃಜನ ಎಂಬ ಮೂರು ಘಟ್ಟಗಳಲ್ಲಿ ಪರಿಪಾಕಗೊಂಡಿರುವ ಕೃತಿ ಎನಿಸುತ್ತದೆ.”(ಪು.70) ಎಂದು ಅವರ ಅಧ್ಯಯನ ಸಾಮರ್ಥ್ಯವನ್ನು ಗುರುತಿಸಿದ್ದಾರೆ.

ಅಧ್ಯಯನಕಾರರು ಪ್ರತಿಯೊಂದು ಕೃತಿಯನ್ನು ಕೂಲಂಕುಷವಾಗಿ ವಿವರಣೆಗೊಡ್ಡಿ ತಾತ್ವಿಕರಿಸಿದ್ದಾರೆ. ಆಯಾ ಕೃತಿಯ ಅನನ್ಯತೆಯನ್ನು ಅನಾವರಣಗೊಳಿಸಿದ್ದಾರೆ. ಕೃತಿಗಳ ಭಾಷೆ, ತಂತ್ರ, ಸಂವಿಧಾನ,ನಿರೂಪಣ ವಿಧಾನ, ಚಿಂತನೆಯ ಹೂರಣವನ್ನು ವಿವರವಾಗಿ ಚರ್ಚಿಸಿದ್ದಾರೆ. ಮಹಾಬ್ರಹ್ಮಣ ಕೃತಿಯ ಕುರಿತು ಹೇಳುವ ಮಾತುಗಳು ಸಂಶೋಧಕರ ಸೂಕ್ಷ್ಮಮತಿಯನ್ನು ಸೂಚಿಸುತ್ತದೆ. "ಕಾದಂಬರಿಯು ಓದುಗರಿಗೆ ತುಂಬಾ ಅಚ್ಚರಿಯನ್ನುಂಟು ಮಾಡುವ ಸಂಗತಿಯೆಂದರೆ ಅದರ ಕಥಾ ಸಂವಿಧಾನ. ಮೊದಲಿಂದ ಕೊನೆವರೆಗೂ ಕ್ರಿಯೆಗಳನ್ನು ಒಂದು ನಿರ್ದಿಷ್ಟ ವ್ಯವಸ್ಥೆಗೆ ಸಕಾರಣವಾಗಿ ಒಳಪಡಿಸಿಕೊಂಡು ಹೋಗಿರುವದರಿಂದ ಕಥೆ ಕ್ರಿಯೆಯ ನಿರೂಪಣೆಯೆ ಆಗಿಬಿಡುತ್ತದೆ. ನೂರಾರು ಪಾತ್ರಗಳು ಕೇಂದ್ರ ಪ್ರಜ್ಞೆಯ ಕಡೆಗೇ ಧಾವಿಸುತ್ತವೆ. ಕಾದಂಬರಿಯ ಎಲ್ಲಾ ಸಂಗತಿಗಳು ಒಟ್ಟುಗೂಡಿ ವಿಶ್ವಾಮಿತ್ರನ ಪಾತ್ರ ಬೆಳವಣಿಗೆಯ ಜೊತೆ ಸಂಬಂಧವನ್ನು ಕಲ್ಪಸಿಕೊಳ್ಳುವುದರಿಂದ ಶಿಥಿಲ ಶಿಲ್ಪ ಏರ್ಪಡುವುದು ಬಹಳ ಕಡಿಮೆ. ಕಥಾ ವಸ್ತುವನ್ನು ಭಾಷೆ ತನ್ನೊಳಗೆ ಗರ್ಭೀಕರಿಸಿಕೊಂಡಂತಿರುವ ಪ್ರೌಢಗದ್ಯ ಶೈಲಿ ಪ್ರಾಚೀನ ಕಾವ್ಯಗಳ ಮಾದರಿಯದ್ದಾಗಿದೆ. ಇಲ್ಲಿ ಬರುವ ಅನೇಕ ಪಾತ್ರಗಳು, ಸನ್ನಿವೇಶಗಳನ್ನು ಪ್ರತೀಕಾತ್ಮಕವೆಂದೆ ತಿಳಿಯಬೇಕಾಗುತ್ತದೆ. ಕಾದಂಬರಿಯಲ್ಲಿ ದೆವತೆಗಳು ಸಮಾವೇಶಗೊಂಡಿದ್ದಾರೆ. ಹಲವಾರು ಅನುಷ್ಠಾನ ಕ್ರಮಗಳು, ಯಗ್ನ ವಿಧಿಗಳು, ದೇವತೆಗಳು ಗೋಚರಿಸುವ ರೀತಿ, ಮಂತ್ರದರ್ಶನ, ಜಟಿಲವಾದ ಧರ್ಮಸೂಕ್ಷ್ಮಗಳ ಚರ್ಚೆ ಇತ್ಯದಿ ವಿಸ್ತಾರ ಚಿತ್ರಗಳಿಂದ ವೈದಿಕ ಸಂಸ್ಕೃತಿಯ ಪರಿಚಯವಾಗುತ್ತದೆ. ‘ರಾಜನಾಗಿ ಕ್ಷಾತ್ರರೋಷದಿಂದ ತುಂಬಿ ತುಳುಕುವ ಕೌಶಿಕನು ವಸಿಷ್ಠರ ಜೊತೆಗೆ ಸ್ಪರ್ಧಿಸುತ್ತ ಅನೇಕ ಅನುಭವ ಪರಂಪರೆಗೆ ಮೈಮನಗಳನ್ನು ಒಡ್ಡಿ ವಿಶ್ವಾಮಿತ್ರನಾಗುವ ಸಂಗತಿಗೆ ಒಂದು ಸಾರ್ವಕಾಲಿಕ ಅರ್ಥವಿದೆ. ಮೂರು ಯುಗಗಳ ಅವಧಿಯಲ್ಲಿ ನಡೆಯುವ ಮಹಾಬ್ರಹ್ಮಣನ ಕಥೆ ಸಾವಿರ ವರ್ಷಗಳವರೆಗೆ ಬದುಕುವ ವ್ಯಕ್ತಿಗಳ ಮೂಲಕ ಈ ಆಶಯವನ್ನು ಬಿಂಬಿಸುತ್ತದೆ. ಇಲ್ಲಿನ ಸನ್ನಿವೇಷಗಳು ಮತ್ತು ಪಾತ್ರ ವಿನ್ಯಾಸದಲ್ಲಿ ಸಾಮಾಜಿಕ ನೈತಿಕ ಕಡೆಗೆ ಭೌತನಿಯಮಗಳು ಕೂಡ ಅನ್ವಯಿಸುವುದು ಸಾಮನ್ಯ ಮಾನವರಿಗೆ ಹೊರತು ಅತಿ ಮಾನವರಿಗಲ್ಲ ಎಂಬ ದೃಷ್ಟಿಯನ್ನು ಲೆಖಕರು ಇಟ್ಟುಕೊಂಡಿರುವAತಿದೆ.’ ದೇವುಡು ಅವರ ಕರ್ತೃತ್ವಶಕ್ತಿ ಕೌಶಿಕನ ಮನೋವಿಕಾಸವನ್ನು ವಿವಿಧ ಹಂತಗಳಲ್ಲಿ ಪ್ರಕಟಪಡಿಸುವದರಲ್ಲಿದೆ. ಹೀಗಾಗಿ ಕಥತಿಯ ಮೂಲಭೂತ ಸೆಲೆ ಸತ್ವ, ರಜಸ್ಸು, ತಮಸ್ಸುಗಳನ್ನು ಕುರಿತ ತಾತ್ತ್ವಿಕ ಚರ್ಚೆಯೆ ಆಗಿದೆ.”(ಪು.91) ಈ ರೀತಿಯ ವಿಶ್ಲೇಷಣೆಯನ್ನು ಪ್ರತಿಯೊಂದು ಕೃತಿಯ ಸಂದರ್ಭದಲ್ಲಿ ಮಾಡುತ್ತಾರೆ.

ಪುರಾಣ ಜಗತ್ತನ್ನು ಕಥನ ಮಾಡುವ ವಿಧಾನವೆ ವಿಶಿಷ್ಡತೆಯಿಂದ ಕೂಡಿರುವುದು. ಅವುಗಳನ್ನು ನಿಕಷಕ್ಕೊಡ್ಡುವಾಗ ಪುರಾಣ ಜ್ಞಾನವು ಅಗತ್ಯವಾಗುತ್ತದೆ. ಅಂತಹ ತಿಳುವಳಿಕೆಯನ್ನು ಪಡೆದುಕೊಂಡಿರುವುದು ಕಾದಂಬರಿಗಳನ್ನು ಅರ್ಥೈಯಿಸುವ ಸಂದರ್ಭದಲ್ಲಿ ಎದ್ದು ಕಾಣುತ್ತದೆ. ಸಂಶೋಧಕರು ಮೂರು ಕಾದಂಬರಿಗಳನ್ನು ಕುರುತು ಹೇಳವ ಮಾತುಗಳು ಗಮನಾರ್ಹವಾಗಿವೆ. "ಮಹಾಬ್ರಾಹ್ಮಣ, ಮಹಾಕ್ಷತ್ರಿಯ, ಮಹಾದರ್ಶನ, ವಸ್ತುವಿನ ದೃಷ್ಟಿಯಿಂದ ಬೇರೆ ಬೇರೆಯಾದರೂ ಅವು ಕಟ್ಟಿಕೊಡುವ ಆವರಣಗಳು ವಿಶಿಷ್ಟವಾಗಿವೆ. ಸನಾತನ ಕಾಲದ ಜೀವನ ಕ್ರಮ, ಅದಕ್ಕೆ ಸರಿಹೊಂದುವ ವಾತವರಣ ನಿರ್ಮಿತಿ, ಹದಗೊಂಡು ಬೆರೆತು ಬರುವ ಸಂಸ್ಕೃತ ಭಾಷಾ ಬಳಕೆಯಿಂದಾಗಿ ದೇವುಡು ಅವರು ಪ್ರತಿಭೆ ಪಾಂಡಿತ್ಯಗಳ ಸಮನ್ವಯಗಳನ್ನು ಸಾಧಿಸಿದ್ದಾರೆ ಎನಿಸುತ್ತದೆ. `ಈ ಕಾದಂಬರಿಗಳನ್ನು ಬರೆಯುವ ಉದ್ದೇಶ ಬೌದ್ಧಿಕ ಸ್ವರೂಪದ್ದಾಗಿದೆ. ದೇವುಡು ಅವರಿಗೆ ಸಾಹಿತ್ಯ ನಿರ್ಮಾಣ ಕರ್ಮಕಾಂಡದಂತೆಯೇ ಜ್ಞಾನಕಾಂಡವೂ ಆಗಿದೆ. ಈ ಮೂರು ಕೃತಿಗಳು ಮಾತ್ರ ಕೇವಲ ಪ್ರಚೀನ ಜ್ಞಾನವನ್ನಷ್ಟೇ ಪ್ರಕಟಿಸುತ್ತವೆ. ಈ ಜ್ಞಾನಕ್ಕೆಲ್ಲ ಕಾದಂಬರಿಗಳು ಹಿನ್ನಲೆಯನ್ನು, ಸಂದರ್ಭಗಳನ್ನು ಒದಗಿಸುತ್ತವೆ. ಆರ್ಷ ಜಗತ್ತಿನಲ್ಲಿ ದೊರಕಿದ ಸತ್ಯಗಳ ಉಪಬೃಂಹಣದ ಪ್ರಯತ್ನ ಈ ಕೃತಿಗಳಿಗೆ ಪ್ರೇರಣೆಯನ್ನಿತ್ತಿದೆ.’ ಎಂಬ ಮಾತನ್ನು ಒಪ್ಪುವುದರ ಜೊತೆಗೆ, ಪ್ರಾಚೀನ ಜ್ಞಾನದೊಡನೆ ಅರ್ವಾಚೀನ ಜ್ಞಾನವೂ ಹಾಸುಹೊಕ್ಕಾಗಿರುವುದನ್ನು ಆಯಾಯಾ ಕೃತಿ ವಿವೇಚನೆಯ ಸಂದರ್ಭದಲ್ಲಿ ಗಮನಿಸಬಹುದು. ಕಾದಂಬರಿಗಳ ಪಾತ್ರವರ್ಗ, ತಂತ್ರ-ವಿಧಾನ ಕೂಡ ವಿಭಿನ್ನವಾದುದಾಗಿದೆ. ಕೌಶಿಕ ವಿಶ್ವಾಮಿತ್ರನಾಗಿ ಬ್ರಹ್ಮರ್ಷಿ ಪದವಿಯನ್ನು ಪಡೆಯುವದು, ನಹುಷ ಮಹಾಕ್ಷತ್ರಿಯ ಎನಿಸಿಕೊಳ್ಳುವುದು, ಯಾಜ್ಞವಲ್ಕ್ಯ ಉಪಾಸನೆಗಳ ಮೂಲಕ ಸಾಧಿಸುವ ಬ್ರಹ್ಮವಿಧ್ಯೆ- ಇವೆಲ್ಲ ಅವರವರ ಅನುಭವ ಪರಂಪರೆಗಳನ್ನು ತೆರೆದು ತೋರಿಸುತ್ತವೆ. ಒಂದೊಂದು ತಾತ್ತ್ವಿಕ ನಂಬಿಕೆಗೆ ಬದ್ಧವಾಗಯೇ ಹಲವಾರು ಪಾತ್ರಗಳು ಬೆಳೆಯುತ್ತವೆ. ಪ್ರಾಚೀನ ಕಾವ್ಯ ಮಾದರಿಯುಳ್ಳ ಈ ಕಾದಂರಿಗಳ ಅಭಿವ್ಯಕ್ತಿ ಕ್ರಮ ಹೊಸದು. ಅಲ್ಲಿ ವರ್ಣನೆಯ ಭಾಗಗಳು ಹೇರಳವಾಗಿವೆ. ಆಮೂಲಕ ಅಪರಿಚಿತ ಸಂಗತಿಗಳನ್ನು, ಸನ್ನಿವೇಶಗಳನ್ನು ಪ್ರತ್ಯಕ್ಷ ಅನುಭವದ ನೆಲೆಗೆ ತಂದುಕೊಡುವ ನೌಪುಣ್ಯತೆಯನ್ನು ಕಾಣಬಹುದು.”(ಪು.115)

ಕನ್ನಡದ ಒಬ್ಬ ಮಹತ್ವದ ಲೇಖಕನನ್ನು ವಿಸ್ತಾರವಾಗಿ ಈ ಮಹಾಪ್ರಬಂಧ ಚರ್ಚಿಸುತ್ತದೆ. ಕೃತಿ ಮತ್ತು ಲೇಖಕನ ವೈಯಕ್ತಿಕ ವಿವರ, ಚಿಂತನೆಗಳನ್ನು ಮೇಳೈಸಿ ಶೋಧಿಸಿರುದರಿಂದ ಇದೊಂದು ವಿಶಿಷ್ಟ ಮಹಾಪ್ರಬಂಧವಾಗಿದೆ. ಸಾಮಾಜಿಕ, ಚಾರಿತ್ರಿಕ, ಪೌರಾಣಿಕ, ಕಾಲಮಾನದ ಅಧ್ಯಯನ ವಿಧಾನದ ಮೂಲಕ ಲೇಖಕರಿಗೆ ಒಂದು ಸ್ಪಷ್ಟವಾದ ಸೈದ್ಧಾಂತಿಕ ನೆಲೆಯನ್ನು ಒದಗಿಸಿಕೊಟ್ಟಿದ್ದಾರೆ. ಪ್ರೊ. ಎಚ್. ಜೆ. ಲಕ್ಕಪ್ಪಗೌಡರು ಮಹಾಪ್ರಬಂಧ ಕುರಿತು ಹೇಳುವ ಮಾತುಗಳು ಸಂಪರ್ಣವಾಗಿ ಈ ಸಂಶೋಧನೆಗೆ ಅನ್ವಯಿಸುತ್ತವೆ. "ಈ ಮಹಾಪ್ರಬಂಧ, ಸಾಧನೆಯಲ್ಲಿ ಅಸಧಾರಣವಾದರೂ ವಿಮರ್ಶಕರ ಕಣ್ಣು ಸೆಳೆಯುವದರಲ್ಲಿ ವಿಫಲಗೊಂಡ ಕನ್ನಡದ ಮಹತ್ವದ ಲೇಖಕರೊಬ್ಬರ ಸೃಜನಶೀಲ ಸಾಹಿತ್ಯವನ್ನು ಅತ್ಯಂತ ಸಮರ್ಥವಾಗಿ ವಿಶ್ಲೇಷಿಸಿರುವ ಒಂದು ಉದ್ಘ ಕೃತಿಯಾಗಿದೆ. ಸಾಂಪ್ರದಾಯಿಕ ಪದ್ಧತಿಯಂತೆ ಈ ಕೃತಿಗಳ ಕಥಾ ಸಾರಂಶವನ್ನು ನೀಡಿ, ಅವುಗಳ ಬಗ್ಗೆ ಭಾಷ್ಯ ಬರೆದು ಕೊನೆಯಲ್ಲಿ ಅವುಗಳ ಮೌಲ್ಯದ ಬಗ್ಗೆ ನಾಲ್ಕು ಮಾತುಗಳನ್ನು ಹೇಳದೆ, ಕೃತಿಗಳ ಅಂತರಂಗದ ಮಹತ್ವವನ್ನು, ಉದ್ದೇಶದ ಮೌಲಿಕತೆಯನ್ನು ಹಾಗೂ ವಿಚಾರಗಳ ವಿಶಿಷ್ಟತೆಯನ್ನು ವಿವರಿಸುವ ದಾರಿಯಲ್ಲಿ ಆಯಾ ಕೃತಿಗಳ ಕಥಾನಕ ಮೈಗೂಡಿಕೊಳ್ಳುವಂತೆ ಮಾಡಿರುವ ಇಲ್ಲಿನ ಬರವಣಿಗೆ ಮತ್ತು ತಂತ್ರ ಅತ್ಯಂತ ಅಭಿಮಾನಾಸ್ಪದವಾಗಿದೆ, ಸತ್ವಪೂರ್ಣವಾಗಿದೆ.

ಪ್ರಬಂಧಕಾರರ ವಿಸ್ತಾರವಾದ ಅಧ್ಯಯನ, ಸೂಕ್ಷ್ಮವಾದ ಅವಲೋಕನ ಶಕ್ತಿ, ಪಕ್ಷಪಾತರಹಿತವಾದ ಗುಣಗ್ರಹಣ ಮನೋಧರ್ಮ, ಸಾಹಿತ್ಯದ ಇತಿಹಾಸವನ್ನು ಅತ್ಯಂತ ಆಪ್ತವಾಗಿ ಗಮನಿಸುವ ಶಕ್ತಿ, ತನ್ನ ಅಧ್ಯಯನ ಸಾಮಗ್ರಿಯನ್ನು ಸೂಕ್ಷ್ಮವು ಹರಿತವೂ ನಿಷ್ಠುರವೂ ಆದ ವಿಶ್ಲೇಷಣೆಗೆ ಒಳಪಡಿಸುವ ಸ್ವೋಪಜ್ಞಶೀಲ ಹಾಗೂ ಸಮತೋಲನವಾದ ಗಂಭೀರ ವಿಮರ್ಶನಾ ಪ್ರಜ್ಞೆ, ಮೂಲ ಲೇಖಕರ ಕೃತಿ ರಚನಾ ಸಂದರ್ಭದ ವಿಶಿಷ್ಟ ಹಿನ್ನಲೆ ಬಗೆಗಿನ ಎಚ್ಚರ ಮತು ಅವುಗಳೆಲ್ಲವನ್ನು ಪಾರದರ್ಶಕವಾಗಿ ದುಂದುಗಾರಿಕೆಯಿಲ್ಲದೆ ಸತ್ವಯುಕ್ತವಾಗಿ ಹಿಡಿದಿಡಬಲ್ಲ ನಮನಶೀಲ ವಿಮರ್ಶಾನ ಶೈಲಿ ಇವುಗಳೆಲ್ಲಾ ಈ ಮಹಾಪ್ರಬಂಧ ಒಂದು ಸತ್ವಪೂರ್ಣ ಕೃತಿ ಎಂಬುದನ್ನು ಸಾಬೀತು ಪಡಿಸುತ್ತದೆ. ಆಧುನಿಕ ವಿಮರ್ಶಾ ಲೋಕಕ್ಕೆ ಇದೊಂದು ಮೌಲಿಕ ಕೊಡುಗೆ.”

ಹಿಂದಣ ಹೆಜ್ಜೆಯನ್ನರಿಯದೆ ಮುಂದಣ ಹೆಜ್ಜೆ ಹಿಡಲಾಗದು ಎಂಬುದನ್ನು ಈ ಮಹಾಪ್ರಬಂಧ ಸಾಬೀತುಪಡಿಸುತ್ತದೆ.

ಡಾ. ಹಳೆಮನೆ ರಾಜಶೇಖರ
ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ
ಶ್ರೀ.ಧ.ಮಂ. ಸ್ವಾಯತ್ತ ಕಾಲೇಜು, ಉಜಿರೆ-574240
ದಕ್ಷಿಣ ಕನ್ನಡ

ಈ ಅಂಕಣದ ಹಿಂದಿನ ಬರಹಗಳು:
ಮೃತ್ಯುಂಜಯ ಕಾದಂಬರಿ ತಾತ್ವಿಕ ವಿಶ್ಲೇಷಣೆ

ಪ್ರಗತಿಶೀಲ ಸಾಹಿತ್ಯ ಮತ್ತು ನಿರಂಜನರು
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಆದಿಪುರಾಣ – ವೈಭೋಗ ಮತ್ತು ವೈರಾಗ್ಯದ ತಾತ್ವಿಕತೆ
ನಳ ಚರಿತ್ರೆ : ಪ್ರೇಮದ ಅವಿಷ್ಕಾರ
ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ
ಧರ್ಮಾಧಿಕಾರದ ಆಶಯಗಳು

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ
ಘಾಂದ್ರುಕ್ ಕಾದಂಬರಿ: ಜೀವನ ಮುಕ್ತಿಯ ಶೋಧ
ಧನಿಯರ ಸತ್ಯನಾರಾಯಣ ಕತೆಃ ಕಾಲಮಾನದ ಶೋಷಣೆಯ ಸ್ವರೂಪ
ಸಾಲಗುಂದಿ ಗುರುಪೀರಾ ಖಾದರಿ ತತ್ವಪದಗಳಲ್ಲಿ ಬದುಕಿನ ಚಿಂತನೆ
ಇದ್ದೂ ಇಲ್ಲದ್ದೂಃ ಪರಂಪರೆಯ ಸಾತತ್ಯ ಹಾಗೂ ದೇವರ ಬಿಕ್ಕಟ್ಟಿನ ಕಥನ
ಕಾಂತಾವರ ಕನ್ನಡ ಸಂಘದ ಕನ್ನಡ ಕಾಯಕ
`ಹೆಣ್ತನದ’ ಕತೆಗಳು
ಡಾ. ಪೂವಪ್ಪ ಕಣಿಯೂರು ಸಂಶೋಧನೆಗಳು: ಜಾನಪದೀಯ ಬಹು ಪ್ರಮಾಣಗಳ ಆಖ್ಯಾನ
ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ
ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು

MORE NEWS

ಮಗು ಮತ್ತು ಬಾಶಾಗಳಿಕೆ 

11-10-2024 ಬೆಂಗಳೂರು

"ಮಕ್ಕಳು ಬಾಶೆಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಎಂಬುದು ಬಹುಶಾ ಮೊದಲಿನಿಂದಲೂ ಮನುಶ್ಯರನ್ನು ಕಾಡಿದ ಹಲವು ಪ್ರಶ್ನ...

ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ

09-10-2024 ಬೆಂಗಳೂರು

"ಸಾಹಿತ್ಯವೂ ವ್ಯಕ್ತಿಯ ಮನಸ್ಸನ್ನು ಸಾಮಾಜಿಕ ಕ್ರಾಂತಿಯ ಮೂಲಕ ಸಾಧಿಸುವ ಶಕ್ತಿ ಎಂದು ನಂಬಿದ್ದ ಇವರು ಅಸ್ಪೃಶ್ಯತೆ ...

ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ

02-10-2024 ಬೆಂಗಳೂರು

"ಯಶವಂತ ಚಿತ್ತಾಲರ ಸೆರೆ ಕಥೆಯನ್ನು ಒಂದು ದೃಷ್ಟಾಂತವಾಗಿ ನೋಡಬಹುದಾದದ್ದು. ತಂದೆಯ ಶ್ರಾದ್ಧದ ದಿನದಂದೇ ಮಗನ ಮದುವೆ...