ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ 

Date: 03-03-2023

Location: ಬೆಂಗಳೂರು


''ಅಕ್ಷರಗಳ ಅಳತೆಗೆ ಸಿಗದ ಸಂತಸ, ಅನುಭೂತಿಗಳನ್ನೆಲ್ಲ ಹೃದಯದೊಳಗೆ ಬೆಚ್ಚಗೆ ಬಚ್ಚಿಟ್ಟುಕೊಳ್ಳ ಬೇಕೆನಿಸಿದೆ. ಪ್ರಥಮ ಸಮ್ಮೇಳನದಲ್ಲಿ ಬಿಡುಗಡೆಯಾದ ನಮ್ಮ ನೆಲದ ಮೌಖಿಕ ಕಥನಗಳಂತಿರುವ ಯಡ್ರಾಮಿ ಸೀಮೆ ಕಥನಗಳು ಕೃತಿ ನನ್ನ ಇತರೆ ಪುಸ್ತಕಗಳಿಗಿಂತ ಅಂದು ಯಥೇಚ್ಛ ಬೇಡಿಕೆ ಪಡೆಯಿತು,'' ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, ‘'ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ'’ದ ಕುರಿತು ಲೇಖನವನ್ನು ಬರೆದಿದ್ದಾರೆ.

ಕರ್ನಾಟಕದ ತುಂಬೆಲ್ಲಾ ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಸುಗ್ಗಿಯೇ ಸುಗ್ಗಿ. ಅದೇನಿದ್ದರೂ ಮಾರ್ಚ್ ತಿಂಗಳೊಳಗೆ ಸಾಹಿತ್ಯ ಸಮ್ಮೇಳನಗಳ ನುಡಿಜಾತ್ರೆ ಮಾಡಿ ಮುಗಿಸುವ ಲೆಕ್ಕಶಾಸ್ತ್ರದ ಇರಾದೆಗಳು. ಸಹಜವಾಗಿ ಸರ್ಕಾರದ ಹಣಕಾಸು ಖರ್ಚುವೆಚ್ಚಗಳ ಆರ್ಥಿಕ ವರ್ಷಾಂತ್ಯದ ಅವಧಿ ಮುಗಿಯುವ ಸಮಯ. ಸರಕಾರ ನೀಡುವ ಅನುದಾನ ಲೆಕ್ಕಾಚಾರದಂತೆ ನೆರವೇರಬೇಕಿರುವುದು ಅಷ್ಟೇ ಸಹಜ. ಇನ್ನೂ ಇತ್ತೀಚೆಗಷ್ಟೇ ೨೦೨೩ ರ ಹೊಸವರ್ಷದ ಮೊದಲ ವಾರದಲ್ಲಿಯೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸುಮಧುರ ಗೀತಕವಿ ದೊಡ್ಡರಂಗೇಗೌಡರ ಸಾರಥ್ಯದಲ್ಲಿ ಜರುಗಿತು.

ಎಂಬತ್ತಾರು ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನಗಳು ಜರುಗಿದಂತೆ ತಾಲೂಕು, ಜಿಲ್ಲಾ ಮಟ್ಟದಲ್ಲಿ ನೂರಾರು ಸಮ್ಮೇಳನಗಳು ಸಾಹಿತ್ಯದ ಜಾತ್ರೆಯಾಗಿ ಜರುಗಿವೆ. ಜರುಗುತ್ತಲೇ ಇವೆ. ಮುಂದೆಯೂ ಜರುಗುತ್ತಲೇ ಇರುತ್ತವೆ. ಹೀಗೆ ಜರುಗಿದಾಗೆಲ್ಲ ಬಹಿರಂಗ ಅಧಿವೇಶನದಲ್ಲಿ ಸಮ್ಮೇಳನಾಧ್ಯಕ್ಷರ ಸಮಕ್ಷಮ, ಕನ್ನಡನಾಡು ನುಡಿಪರ ಕೆಲವು ಮಹತ್ವದ ನಿರ್ಣಯಗಳನ್ನು ಕಿವಿಗಡಚಿಕ್ಕುವ ಚಪ್ಪಾಳೆಗಳೊಂದಿಗೆ ಸ್ವೀಕರಿಸಲಾಗುತ್ತದೆ. ಇದು ತಾಲೂಕು, ಜಿಲ್ಲಾ ಮತ್ತು ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ನಿರಂತರ ಜರುಗುವ ಪ್ರಕ್ರಿಯೆಯಾಗಿದೆ.

ಸಮ್ಮೇಳನಗಳಿಗೆ ಲಕ್ಷಗಳಿಂದ ಹಿಡಿದು ಕೋಟಿಗಳವರೆಗೆ ಸರಕಾರದ ಅನುದಾನ ಬಿಡುಗಡೆ. ಶಿಷ್ಟಾಚಾರ ಪಾಲಿಸುವಂತೆ ಜನಪ್ರತಿನಿಧಿಗಳ ಪ್ರಾಶಸ್ತ್ಯದ ಮೇಲೋಗರ. ಈಗಂತೂ ಚುನಾವಣೆಗೆ ಮುನ್ನವೇ ಕೆಲವು ಭರವಸೆಗಳ ಮಹಾಪೂರ. ಕೆಲವು ಕಡೆ ಚುನಾಯಿತ ಜನಪ್ರತಿನಿಧಿಗಳು ಯಥೇಚ್ಛ ಪ್ರಮಾಣದ ದೇಣಿಗೆ ನೀಡಿ ತಿಂಗಳೊಪ್ಪತ್ತಿನಲ್ಲಿ ಬರುವ ಚುನಾವಣೆಗೆ ಅನುವು ಮಾಡಿಕೊಳ್ಳುವ ಅವಕಾಶ. ಅದರಲ್ಲೂ ಚುನಾವಣೆ ನೀತಿಸಂಹಿತೆ ಘೋಷಣೆ ಆಗಿಲ್ಲವಾದ್ದರಿಂದ ಇದು ಅವರಿಗೆ ಸಂದರ್ಭೋಚಿತ ಸದವಕಾಶ.

ನೂತನ ಜಿಲ್ಲೆಯೊಂದರ ಕೇಂದ್ರ ತಾಲೂಕಿನ ಸಾಹಿತ್ಯ ಸಮ್ಮೇಳನದ ಖರ್ಚಿಗೆ ಸಚಿವರೊಬ್ಬರು ಹತ್ತು ಲಕ್ಷಕ್ಕೂ ಮಿಕ್ಕ ದೇಣಿಗೆ ನೀಡಿದ ಸುದ್ದಿಯೊಂದನ್ನು ಯುವಕವಿ ಮಿತ್ರರೊಬ್ಬರು ಹೇಳಿದಾಗ ನನಗಂತೂ ಅಚ್ಚರಿಯಾಯಿತು. ಮೊನ್ನೆಯಷ್ಟೇ ಕಲಬುರ್ಗಿಯಲ್ಲಿ ಜರುಗಿದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿಕ್ಕಾಗ ಅವರು ನನಗೆ ಅದನ್ನು ವಿವರವಾಗಿ ಹೇಳಿದರು. ಅಷ್ಟಕ್ಕೂ ಆ ಮಂತ್ರಿಗೆ ಹತ್ತು ಲಕ್ಷ ಯಾವ ಪಡಪೋಶಿ ಲೆಕ್ಕವೂ ಅಲ್ಲವೆಂದರು. ಚುನಾವಣೆಗಳು ಕೂಗಳತೆ ಹತ್ತಿರದಲ್ಲೇ ಇರುವಾಗ ಸಹಸ್ರಾರು ಜನರು ಸೇರುವ ಯಾವುದೇ ಸಂದರ್ಭಗಳು ರಾಜಕಾರಣಿಗಳಿಗೆ 'ಮತಗಳಿಕೆ' ತಂತ್ರದ ಹುಬ್ಬೇರಿಸುವ ಹಬ್ಬಗಳು.

ಏಳು ಜಿಲ್ಲೆಗಳಿಗೆ ಸೇರಿದ ಕಲ್ಯಾಣ ಕರ್ನಾಟಕ ಉತ್ಸವ ಜರುಗಿತು. ಓರ್ವ ಯುವ ರಾಜಕಾರಣಿ ಅಗ್ದೀ ಶ್ಯಾಣೇತನದಿಂದ ತನ್ನ ಲಭ್ಯ ಅಧಿಕಾರ ಬಳಸಿಕೊಂಡದ್ದು, ಅದು ಅವನ ಹೆಸರಿನ ಉತ್ಸವವೆಂದೇ ಜನರು ಮಾತಾಡಿಕೊಳ್ಳುವಷ್ಟು ಸಾರ್ವಜನಿಕ ಚರ್ಚೆಯ ನಿಗಿನಿಗಿ ಸುದ್ದಿ. ಅಷ್ಟಲ್ಲದೇ ಸ್ವಪಕ್ಷದವರ ಕಣ್ಮನಗಳ ಕಸಿವಿಸಿಯ ಬಿಸಿಬಿಸಿ ಸುದ್ದಿ ವರಾತ. ವಯಕ್ತಿಕ ವರ್ಚಸ್ಸು ಪ್ರಚುರ ಪಡಿಸಿಕೊಳ್ಳುವಲ್ಲಿ 'ಲೋಕಸಾಕ್ಷಿ' ಮೀರಿದ ಕಣ್ಣು ಕುಕ್ಕುವ ಇನ್ನಷ್ಟು ವಿದ್ಯಮಾನಗಳು. ಅವು ನನ್ನ ನಿಕಟವರ್ತಿ ಸಂಸ್ಕೃತಿ ಚಿಂತಕ ಪ್ರಾಜ್ಞಮಿತ್ರರ ವಲಯದಲ್ಲೂ ಅನುರಣಿಸಿದವು.

ದೂರದ ಮುಂಬಯಿ, ಬೆಂಗಳೂರುಗಳಿಂದ ಸ್ಟಾರ್ ಗಾಯಕರನ್ನು ಕರೆಸಿದ್ದು ತಪ್ಪೇನಲ್ಲ. ಇಂಥದೇ ಗಾಯಕರು ನಮ್ಮದೇ ಕಲಬುರ್ಗಿ ಜಿಲ್ಲೆಯ ಗಡಿ ಲಿಂಗದಹಳ್ಳಿಯ ಸೂರ್ಯಕಾಂತ ಎಂಬ ಗಝಲ್ ಗಾಯಕನನ್ನು ಕಲರ್ಸ್ ಕನ್ನಡ ಸ್ಪರ್ಧೆಯಲ್ಲಿ ಹಾಡಿ ಹೊಗಳಿದ್ದಾರೆ. ಸೂರ್ಯಕಾಂತ ಹಾಡಿದ ಕಡಕೋಳ ಮಡಿವಾಳಪ್ಪನ 'ಮೂಕನಾಗಬೇಕು... ' ತತ್ವಪದ ಕೇವಲ ಒಂದೇ ತಾಸಿನಲ್ಲೇ ಪ್ರಪಂಚದ ಹತ್ತು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳ ಪ್ರೀತಿ ಗಳಿಸಿತು. ತನ್ಮೂಲಕ ಅದು ಸಂಗೀತ ಲೋಕದಲ್ಲಿ ಹೊಸದೊಂದು ಟ್ರೆಂಡ್ ಹುಟ್ಟು ಹಾಕಿತು.

ಮುಖ್ಯಮಂತ್ರಿ ಬೊಮ್ಮಾಯಿ, ಈತನ ಗಝಲ್ ಗಾಯನಕ್ಕೆ ಮಾರುಹೋಗಿ ಗಾಯಕನ ಹುಟ್ಟೂರಿಗೆ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸುತ್ತಾರೆ. ಅದುವರೆಗೆ ಆ ಊರಿಗೆ ಸಾರಿಗೆ ವ್ಯವಸ್ಥೆ ಇದ್ದಿರಲಿಲ್ಲ. ಇಂತಹ ಅನನ್ಯತೆಯ ಗಾಯಕ ಸೂರ್ಯಕಾಂತರನ್ನು "ಸಂಗೀತ ಕಾರ್ಯಕ್ರಮ ಕೋರಿ ಅರ್ಜಿ ಹಾಕಿಲ್ಲ" ಎಂತಲೂ ಅನೇಕ ರೀತಿ ಸತಾಯಿಸುವುದೇ.? ಅಧಿಕಾರಶಾಹಿಯ ನಿರ್ಲಕ್ಷ ಮತ್ತು ಉದ್ದಟತನ ಕುರಿತು ಸೂರ್ಯಕಾಂತ ನೊಂದು ಹೇಳಿದರು. ಹಾಗಿದ್ದರೆ ವಿಜಯಪ್ರಕಾಶ್, ಅನನ್ಯ ಭಟ್ ಅರ್ಜಿ ಹಾಕಿಕೊಂಡಿದ್ದರೇ.? ಅಧಿಕಾರಿಗಳು ಅವರಿಗೂ ಹಾಗೆ ಹೇಳಿದ್ದುಂಟೇ.?

ಹಾಗೆಯೇ ಇನ್ನುಳಿದ ಇತರೆ ಆರು ಜಿಲ್ಲೆಗಳಲ್ಲಿ ಇನ್ನೂ ಅನೇಕ ಪ್ರತಿಭೆಗಳನ್ನು ಇಲಾಖೆ ಮರೆತಿರುವುದು ಸರಿಯಲ್ಲ. ಹಿತ್ತಲಗಿಡ ಮದ್ದಲ್ಲ ಎಂಬ ಅಲಕ್ಷವೇ? ಹೌದು ಆಯಾಚಿತವಾಗಿ ಒದಗಿ ಬರುವ ಅಂತಹ ಅವಕಾಶಗಳನ್ನು ಯಾವರೀತಿ ಬಳಸಿಕೊಳ್ಳಬೇಕೆಂಬ ಜಾಣ್ಮೆ ಅಧಿಕಾರಶಾಹಿ ಮತ್ತು ರಾಜಕಾರಣಿಗಳಿಗಿಂತ ಬೇರಾರೂ ಅರಿಯರು. ಆ ಎಲ್ಲಾ ಅಹಮಿಕೆ ಬಗ್ಗೆ ಇನ್ನೊಮ್ಮೆ ಇಷ್ಟರಲ್ಲೇ ವಿಸ್ತೃತವಾಗಿ ಬರೆಯುವೆ. ಸಧ್ಯಕ್ಕೆ ಅದೆಲ್ಲ ಒತ್ತಟ್ಟಿಗಿರಲಿ, ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳಿಗೆ ಬರೋಣ.

ಮುಂದಿನ ಯಾವುದೇ ಸಮ್ಮೇಳನದ ವೇಳೆಗೆ ಸರಕಾರ ಹಿಂದಿನ ಸಮ್ಮೇಳನದ ನಿರ್ಣಯಗಳನ್ನು ಈಡೇರಿಸಿದ ನಿದರ್ಶನಗಳು ಇಲ್ಲವೆಂತಲೇ ಹೇಳಬಹುದು. ಹೀಗಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಠರಾವು ಪಾಸು ಮಾಡುವ ಪರಿಪಾಠ ಮಾಮೂಲಿನಂತೆ ಮುಂದುವರಿಯುತ್ತಲೇ ನಡೆದಿದೆ. ಹಿಂದಿನ ಸಮ್ಮೇಳನದ ನಿರ್ಣಯಗಳು ವಿಸ್ಮೃತಿಗೆ ಸರಿದು ಹೋಗಿ ಹೊಸ ಸಮ್ಮೇಳನದ ನಿರ್ಣಯಗಳ ದಿವ್ಯಸ್ಮೃತಿ ಸರದಿಗೆ ಸಿದ್ಧವಾಗುವ ಸಂಪ್ರದಾಯವೇ ಬೆಳೆದು ಬಿಟ್ಟಿದೆ.

ನಿರ್ಣಯಗಳ ಅನುಷ್ಠಾನಕ್ಕೆ ಇಲಾಖೆ ಮತ್ತು ಪ್ರಭುತ್ವ ಕುರುಡು ''ನೋಟಕ್ರಮ" ಹೊಂದಿರುವಂತೆ ಸರಕಾರದ ಚುಕ್ಕಾಣಿ ಹಿಡಿದ ರಾಜಕಾರಣಿಗಳು ಸಹಜವಾಗಿಯೋ ಇಲ್ಲವೇ ಜಾಣ ಕುರುಡು, ಕಿವುಡರಂತೆ ಮರೆತು ಹೋಗಿರುತ್ತಾರೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತು ಅದರ ಪದಾಧಿಕಾರಿಗಳು ನಿರ್ಣಯಗಳ ಬೆನ್ನುಹತ್ತಿ ಈಡೇರಿಸಲು ಹೆಣಗುವುದು ಅಪರೂಪವೇ ಆಗಿರುತ್ತದೆ. ಇದು ಆಯಾ ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಈಡೇರಬೇಕಾದ ಸಣ್ಣ ಸಣ್ಣ ನಿರ್ಣಯಗಳಿಗೂ ಅನ್ವಯವಾಗುತ್ತದೆ.

ಮತ್ತೊಂದು ಮುಖ್ಯವಾದ ವಿಷಯವೆಂದರೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದವರ ಹೊಣೆ ಮುಂದಿನ ಸಮ್ಮೇಳನದವರೆಗೆ ಏನೆಂಬುದು, ಯಾವರೀತಿ ಎಂಬುದು ಅರಿತು ಪರಿಷತ್ತು ಅವರ ಸಹಭಾಗಿತ್ವದಲ್ಲಿ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹಾಗೆ ಮಾಡುವ ಮೂಲಕ ಅವರ ಸಾರಥ್ಯ ಸಮ್ಮೇಳನದ ಆಶಯಗಳ ಸಂಪೂರ್ಣ ಅನುಷ್ಠಾನದ ಕ್ರಿಯೆಗೆ ತೊಡಗಬೇಕು. ಇಲ್ಲದೇ ಹೋದಲ್ಲಿ ಸಮ್ಮೇಳನದ ನಿರ್ಣಯಗಳು ಮಾತ್ರವಲ್ಲದೇ ಸಮಗ್ರ ಸಮ್ಮೇಳನದ ಸಾರ್ಥಕತೆಗೆ ಅರ್ಥಮಾನ್ಯತೆ ಸಿಗಲಾರದು. ಅದು ಮೂರುದಿನದ ಸಂತೆಯೋ, ಜಾತ್ರೆಯೋ ಆಗಿ ಮತ್ತೆ ಮುಂದಿನ ಸಂತೆ, ಜಾತ್ರೆಗಳಿಗೆ ಸಿದ್ಧಗೊಳ್ಳುವ ಪರಿಕ್ರಮವೇ ಆಗಿಬಿಟ್ಟಿದೆ.

ನಾನು ಅಂತಹ ಪರಿಕ್ರಮದ ಭಾಗವಾಗಿದ್ದೇನೆ ಎನ್ನುವ ಪರಿಭಾವ ನನ್ನನ್ನು ನಿಕಟವಾಗಿ ಕಾಡ ತೊಡಗಿದೆ. ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವ (೨೨.೧೨.೨೦೧೯) ಅವಕಾಶ ನನಗೆ ದೊರಕಿತ್ತು. ಪ್ರಥಮ ಸಮ್ಮೇಳನ ಎಂಬ ಕಾರಣ ಸೇರಿದಂತೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಂದಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಉತ್ಸಾಹ, ತಾಲೂಕಿನ ಸಮಸ್ತ ಸಾಹಿತ್ಯ ಪ್ರೇಮಿಗಳ ಪ್ರೋತ್ಸಾಹದಿಂದ ಅಕ್ಷರಶಃ ಅದ್ದೂರಿ ಜಾತ್ರೆಯಾಗಿಯೇ ಪ್ರಥಮ ಸಾಹಿತ್ಯ ಸಮ್ಮೇಳನ ಜರುಗಿತು. ಆದರೆ ತಾತ್ವಿಕವಾಗಿ ಕಾಣಲೇಬೇಕಿದ್ದ ನುಡಿಹಬ್ಬದ ಪ್ರಾಣ ಸಂವೇದನೆಗಳು ಅಲ್ಲಿ ಕಾಣಲಿಲ್ಲ.

ಸಮ್ಮೇಳನ ಜರುಗಿದ ವಾರವೊಪ್ಪತ್ತಿನಲ್ಲೇ "ಯಡ್ರಾಮಿ ತಾಲೂಕಿನ ದೈವಕ್ಕೆ ಶರಣು" ಎಂಬ ಶೀರ್ಷಿಕೆ ಬರಹದ ಶರಣಾರ್ಥಿಗಳನ್ನು ಸಲ್ಲಿಸಿ ಈ ಕೆಳಗಿನಂತೆ ಕೃತಜ್ಞತೆಯ ಅಕ್ಷರನುಡಿ ಸೇವೆ ಸಲ್ಲಿಸಿದ್ದೆ. ಮೂರು ವರುಷಗಳ ತರುವಾಯ ಅದೇ ಯಡ್ರಾಮಿಯಲ್ಲಿ ಎರಡನೇ ಸಾಹಿತ್ಯ ಸಮ್ಮೇಳನ ಇದೇ ಮಾರ್ಚ್ ನಾಲ್ಕರಂದು (04.03.23) ನೆರವೇರಲಿದೆ. ಯಡ್ರಾಮಿ ತಾಲೂಕಿನ ದ್ವಿತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಅರಳಗುಂಡಗಿ ಹಿರೇಗೌಡರ ಭೀಮರಾಯ ಗೌಡರಿಗೆ ಕನ್ನಡ ಧ್ವಜ ನೀಡುವ ಮೂಲಕ ನನ್ನ ಅಧ್ಯಕ್ಷತೆಯ ಪ್ರಥಮ ಸಮ್ಮೇಳನಾಧ್ಯಕ್ಷತೆಯ ಕನ್ನಡ ಕೈಂಕರ್ಯ ಹಸ್ತಾಂತರ ಮಾಡಲಿದ್ದೇನೆ.

ಅಂತೆಯೇ ಪ್ರಥಮ ಸಮ್ಮೇಳನದ ತರುವಾಯ ಕೃತಜ್ಞತೆ ನುಡಿಗಳನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಅಂದು ಹಂಚಿದ್ದೆ. ಇಂದಿನ ಸಮ್ಮೇಳನಾಧ್ಯಕ್ಷರು ಮತ್ತು ಪರಿಷತ್ತು ಹಾಗೂ ಪ್ರಭುತ್ವ, ಯಡ್ರಾಮಿ ತಾಲೂಕಿನ ಸಮಸ್ತ ಕನ್ನಡದ ಓದುಗ ದೊರೆಗಳು ಆ ನುಡಿಗಳತ್ತ ಗಮನ ಹರಿಸಲೆಂದು ವಿನಮ್ರವಾಗಿ ವಿನಂತಿಸುವೆ. ಕೃತಜ್ಞತಾ ನುಡಿಸೇವೆ ಹೀಗಿತ್ತು :

ಯಡ್ರಾಮಿ ತಾಲೂಕಿನ ದೈವಕ್ಕೆ ಶರಣು:
ಮನದ ತುಂಬಾ ಭಾವ ಪರವಶತೆ ತುಂಬಿಕೊಂಡು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಒಂದಾಗಿ ಬಂದು ಯಡ್ರಾಮಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಕ್ಷರಶಃ ಜಾತ್ರೆಯಾಗಿಸಿದರು. ನನ್ನನ್ನೂ ಭಾವುಕತೆಯ ಹೊಳೆಯಲ್ಲಿ ತೇಲಿಸಿದರು. ಅಕ್ಷರ ಜಾತ್ರೆಯ ತೇರು ಎಳೆದರು. ಅಕ್ಷರಶಃ ಭಾವಕಾರಂಜಿಯ ಬುಗ್ಗೆಯನ್ನೇ ಚಿಮ್ಮಿಸಿದರು. ಸಂಭ್ರಮದ ಮುಗ್ದತೆಯನ್ನು ತಮಗೆ ಅಪರಿಚಿತವಾದ ಸಾಹಿತ್ಯ ಸಮ್ಮೇಳನದಂತಹ ಹೊಸದೊಂದು ಸಾಂಸ್ಕೃತಿಕ ಸಂದರ್ಭಕ್ಕು ಏಕೋಭಾವದ ಸಂಪ್ರೀತಿ ತೋರಿದುದು ನಮ್ಮ ನೆಲಧರ್ಮದ 'ಖುಷಿತಂತು' ಅದಾಗಿತ್ತು.

ಯಡ್ರಾಮಿ ಸಾಹಿತ್ಯ ಸಮ್ಮೇಳನದ ಚೊಚ್ಚಲ "ಜಾತ್ರೆಯತೇರು" ಯಶಸ್ವಿಯಾಗಿ ಎಳೆದಿದ್ದೇವೆ. ಅದರ ಅದ್ದೂರಿತನ ಎಣೆ ಮೀರಿದ್ದು. ಆದರೆ ನಾವು ಮರೆಯಬಾರದು : ನುಡಿತೇರು, ಅಕ್ಷರಜಾತ್ರೆಯ ರಥ ಎಳೆಯಬೇಕಿದೆ. ಸಾಹಿತ್ಯ ಸಮ್ಮೇಳನದ ಅಕ್ಷರಶಃ ಮಹದುದ್ದೇಶವೇ ಅದು. ನಮ್ಮ ನೆಲಮೂಲ ಬದುಕಿನ ಗಂಭೀರ ಸಂವಾದ, ಸಾಂಸ್ಕೃತಿಕ ಅನುಸಂಧಾನಗಳು ನಡೆದಾಗ ಅದು ನುಡಿಹಬ್ಬ, ಅಕ್ಷರ ಪರಿಶೆ ಆದೀತು. ಹಾಗೆಯೇ ಸಮ್ಮೇಳನಾಧ್ಯಕ್ಷರು ಉತ್ಸವಮೂರ್ತಿ ಮಾತ್ರವಲ್ಲ.

ಸಮ್ಮೇಳನದ ಸರ್ವಾಧ್ಯಕ್ಷರ ಸಮಕ್ಷಮ ಸಾರ್ವತ್ರಿಕವಾಗಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಎಲ್ಲರೂ ಬದ್ಧರಾಗಬೇಕು. ಮುಂದಿನ ಸಮ್ಮೇಳನದಲ್ಲಿ ಆ ಬಗ್ಗೆ ಚರ್ಚೆಗಳಾಗಬೇಕು. ಲೈಕು, ಕಮೆಂಟು, ಶೇರುಗಳಲ್ಲೇ ಕಳೆದು ಹೋಗುವಂತೆ ನಮ್ಮೆಲ್ಲರ ಉಲ್ಲಾಸ, ಉಮೇದು, ಸಂತಸ, ಯಶಸ್ಸುಗಳು ಸನ್ಮಾನ ಮತ್ತು ಮೆರವಣಿಗೆಯಲ್ಲೇ ಕರಗಿ ಹೋಗಬಾರದು. ಹಾಗೆಂದು ಅವು ಆಗಲೇಬಾರದೆಂದಲ್ಲ. ಆದರೆ ಆಗಲೇ ಬೇಕಾದುದು ಆಗದಿದ್ದರೆ ಹೇಗೇ.? ಮುಂದೆ ಜರುಗುವ ಸಮ್ಮೇಳನದಲ್ಲಿ ಇಂತಹ ಸಟಪಟ ಓರೆಕೋರೆಗಳು ಸರಿದೂಗಲಿ. ಅನುಭವದ ಈ ಸಾಂಸ್ಕೃತಿಕ ಸಂಭ್ರಮ ಮುಂದಿನದಕೆ ನಾಂದಿಯೆಂದು ಕೊಳ್ಳೋಣ.

ಎಲ್ಲಕ್ಕು ಮುಖ್ಯವಾಗಿ ರಾಜಕಾರಣಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ಸಮಯ ಪ್ರಜ್ಞೆಯ ಅಗತ್ಯವಿದೆ. ಅದರ ಔಚಿತ್ಯದ ಅರಿವು ಮತ್ತು ಅನುಷ್ಠಾನದ ಮೂಲಕ ಗುಣಾತ್ಮಕ ಸಾಹಿತ್ಯದ ನೆಲೆಗೆ ಪರಿಷತ್ತು, ತಾಲೂಕಿನ ಎಲ್ಲ ಕನ್ನಡಿಗರು ಬಾಧ್ಯಸ್ಥರಾಗಬೇಕಿದೆ. ಮೊಗಲಾಯಿ ನೆಲದ ನಾವು ಅತಿಯಾದ ಸಿಹಿ ಮತ್ತು ಅತಿಯಾದ ಖಾರ ಉಣ್ಣುವವರಾದ್ದರಿಂದ ಅದನ್ನು ಸರಿದೂಗಿಸುವುದು ದುಃಸಾಧ್ಯವೆಂದು ಅಕ್ಷರ ಸಂಸ್ಕೃತಿಯ ಮಂದಿ ನಾವು ಕೈಚೆಲ್ಲಿ ಕುಂತರೆ ಬೇರೆಯವರ ಕೆಲಸ ಅದಲ್ಲ. ಸಂಸ್ಕೃತಿ ಚಿಂತಕ ಚಾರ್ಮ್ಸ್ ನೊವಷ್ಕಿ ಹೇಳುವಂತೆ ಸಾಹಿತಿಗಳಾದವರು ಸಮಾಜಕ್ಕೆ ಸತ್ಯವನ್ನು ತಿಳಿಸಿ ಹೇಳದಿದ್ದರೆ ಅದನ್ನು ಇನ್ನಾರು ಹೇಳಲು ಸಾಧ್ಯ.? ಮುಂದಿನ ಸಮ್ಮೇಳನದಲ್ಲಿ ಅವೆಲ್ಲ ಅಪಸವ್ಯಗಳನ್ನು ಸರಿಪಡಿಸಿಕೊಳ್ಳೋಣ. ಅಲ್ಲಿಯವರೆಗೆ ಪ್ರಥಮ ಸಮ್ಮೇಳನಾಧ್ಯಕ್ಷರನ್ನು ಯಡ್ರಾಮಿ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯಾಸಕ್ತರು ಸಾಂಸ್ಕೃತಿಕ ಸಹಭಾಗಿತ್ವದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.

ಅಕ್ಷರಗಳ ಅಳತೆಗೆ ಸಿಗದ ಸಂತಸ, ಅನುಭೂತಿಗಳನ್ನೆಲ್ಲ ಹೃದಯದೊಳಗೆ ಬೆಚ್ಚಗೆ ಬಚ್ಚಿಟ್ಟುಕೊಳ್ಳ ಬೇಕೆನಿಸಿದೆ. ಪ್ರಥಮ ಸಮ್ಮೇಳನದಲ್ಲಿ ಬಿಡುಗಡೆಯಾದ ನಮ್ಮ ನೆಲದ ಮೌಖಿಕ ಕಥನಗಳಂತಿರುವ ಯಡ್ರಾಮಿ ಸೀಮೆ ಕಥನಗಳು ಕೃತಿ ನನ್ನ ಇತರೆ ಪುಸ್ತಕಗಳಿಗಿಂತ ಅಂದು ಯಥೇಚ್ಛ ಬೇಡಿಕೆ ಪಡೆಯಿತು. ಅವರೆಲ್ಲರೂ ಅದಕೆ ತೋರಿದ ನೆಲಧರ್ಮ ಪ್ರೀತಿ, ಗೌರವ ದೊಡ್ಡದು. ಅವರ ಬಾಳುವೆ, ಬದುಕು ದೊಡ್ಡದು. ಅಂತಹ ಮಹತ್ತರ ಬದುಕಿಗೆ, ಅದನು ಬದುಕುತ್ತಿರುವವರಿಗೆ ಶರಣಾರ್ಥಿ ಹೇಳಲು ಮತ್ತೊಮ್ಮೆ ,ಮತ್ತೊಮ್ಮೆ ನನ್ನ ನೆಲಕ್ಕೆ ಹಣೆಬಾಗಿ ಋಣಿಯಾಗಿರುವೆ.

ಮಲ್ಲಿಕಾರ್ಜುನ ಕಡಕೋಳ
ಯಡ್ರಾಮಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ M : 9341010712

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...