ಕಲ್ಲು ದೈವ, ಮೊರ ದೈವ? 

Date: 18-10-2020


ವಚನಕಾರ-ದಾಸರ ಅಂಕಿತಗಳೆಲ್ಲವೂ ಬೇರೆ ಬೇರೆ ಹೆಸರುಗಳೇ ಆಗಿವೆ ಎನ್ನುವ ಲೇಖಕ-ವಿಮರ್ಶಕ ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರು ’ದೇವನೊಬ್ಬ ನಾಮ ಹಲವು ಎಂಬ ತಿಳಿವಳಿಕೆಯೇ ಆಚರಣೆಯಲ್ಲಿದೆ ಎಂದು ಮೇಲ್ನೋಟಕ್ಕೆ ಕಂಡರೂ ನಾಮ ಹಲವು ದೈವವೂ ಹಲವು ಎಂಬ ತಿಳುವಳಿಕೆಯೂ ಇಲ್ಲಿದೆ’ ಎಂದು ನೀರು ನೆರಳು ಅಂಕಣ ದಲ್ಲಿ ಬರೆದಿದ್ದಾರೆ

ನಮ್ಮ ಜನಪದರಲ್ಲಿ ಯಾರಾದರೂ ವ್ಯಕ್ತಿಗಳು ಸಹಾಯ ಮಾಡಿದರೆ ಅವರನ್ನು ಕೃತಜ್ಞತೆಯಿಂದ ನೆನೆಸಿಕೊಳ್ಳುವ ಪ್ರವೃತ್ತಿಯಿದೆ. ವ್ಯಕ್ತಿಗಳಷ್ಟೇ ಅಲ್ಲ ಪ್ರಾಣಿ, ಪಕ್ಷಿ, ಜೀವರಾಶಿಗಳು ಯಾವುದೇ ಸಂದರ್ಭದಲ್ಲಿ ಸಹಾಯ ಮಾಡಿದರೆ ಅವನ್ನು ಕೃತಜ್ಞತೆಯಿಂದ ನೆನೆಯುತ್ತಾರೆ. ಹಾಗೆಯೇ ತಮಗೆ ಒದಗಿದ ಸಹಾಯಕ್ಕೆ ಪ್ರತಿಯಾಗಿ ಏನನ್ನಾದರೂ ನೀಡುವ ಪ್ರವೃತ್ತಿ ಕೂಡ ನಮ್ಮ ಜನಪದರಲ್ಲಿ ಇದೆ. ಅಷ್ಟೆ ಅಲ್ಲ ವಸ್ತು ಸಾಮಗ್ರಿಗಳನ್ನು ನಮ್ಮ ಜನಪದರು ತಮ್ಮ ನಿತ್ಯದ ಬದುಕಿನಲ್ಲಿ ಬಳಸುವಾಗ ಅವುಗಳನ್ನು ಆದರದಿಂದ ಮತ್ತು ಪೂಜ್ಯಭಾವದಿಂದ ಕಾಣುತ್ತಾರೆ. ಕುಯ್ಯುವ ಕುಡುಗೋಲು, ಉಳುವ ನೇಗಿಲು, ಕೇರುವ ಮೊರ, ಗುಡಿಸುವ ಪೊರಕೆ ಹೀಗೆ ಯಾವುದೇ ಆದರೂ ಅವನ್ನು ತಮ್ಮ ಕೆಲಸಕ್ಕೆ ಬಳಸುವಾಗ ಬಳಸಿ ತಮ್ಮ ಕೆಲಸ ತೀರಿದ ಮೇಲೆ ಅಸಡ್ಡೆಯಿಂದ ಬಿಸಾಡುವುದಿಲ್ಲ. ಕಾಲಿನಿಂದ ಒದೆಯುವುದಿಲ್ಲ. ಗೌರವದಿಂದ ಕಾಣುತ್ತಾರೆ. ಆಗಾಗ ಪೂಜೆ ಕೂಡ ಮಾಡುತ್ತಾರೆ. ಇಂಥ ವಸ್ತು ಸಾಮಗ್ರಿಗಳನ್ನು ಪೂಜಿಸುವ ನಮ್ಮ ಜನಪದರ ಈ ಆಚರಣೆಯನ್ನು ಮೂಢನಂಬಿಕೆ ಎಂದು ತಳ್ಳಿ ಹಾಕುವಂತಿಲ್ಲ. ತಮ್ಮ ಕೆಲಸಕ್ಕೆ ಒದಗಿಬಂದ ಯಾವುದೇ ವ್ಯಕ್ತಿ, ಪ್ರಾಣಿ, ವಸ್ತುವನ್ನು ಕೃತಜ್ಞತೆಯಿಂದ, ಪ್ರೀತಿ ಗೌರವದಿಂದ ಕಾಣಬೇಕು ಎಂಬ ತತ್ವ ಇಂತಹ ಕಡೆ ಇರುತ್ತದೆ. ಹೀಗೆ ನಮ್ಮ ಜನಪದರು ತತ್ವವನ್ನು ಹೇಳುವುದಿಲ್ಲ ಅದನ್ನು ನಿತ್ಯದ ಬದುಕಿನಲ್ಲಿ ಆಚರಣೆಯ ಮೂಲಕ ಬಾಳುತ್ತಿರುತ್ತಾರೆ.

ಇಂತಹ ಬಾಳ್ವೆಯನ್ನು ಅಥವಾ ಆಚರಣೆಗಳನ್ನು ನಿರಾಕರಿಸುವ ಮುನ್ನ ನಾವು ಅವುಗಳು ಯಾಕೆ ಹಾಗೆ ಆಚರಣೆಗೆ ಗುರಿಯಾಗುತ್ತಾ ಇರಬಹುದು? ನಮ್ಮ ಜನ ಯಾಕೆ ಇಂತಹ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ? ಎಂದು ಯೋಚಿಸಬೇಕಿದೆ. ಹೀಗೆ ನಮ್ಮ ಯೋಚನಾ ಕ್ರಮವು ಕಾರಣ ಮತ್ತು ಹಿನ್ನೆಲೆಗಳ ಅನ್ವೇಷಣೆಯನ್ನು ಅಲಕ್ಷ್ಯ ಮಾಡುವಂತಿಲ್ಲ. ಸಾಹಿತ್ಯ ವಿಮರ್ಶೆಯಲ್ಲಿಯೂ ಅಷ್ಟೆ ಕಾರಣ ಮತ್ತು ಹಿನ್ನೆಲೆಗಳನ್ನು ಯೋಚಿಸದೆ ಬರಿ ಅಕ್ಷರಗಳನ್ನೆ ಹಿಡಿದು ಕೆಲವು ತೀರ್ಮಾನಗಳಿಗೆ ಕೆಲವೊಮ್ಮೆ ನಾವು ಬರುವುದುಂಟು. ಇಂತಹ ತೀರ್ಮಾನಗಳು ಕೇವಲ ತರ್ಕವನ್ನು ಆಧರಿಸಿರುತ್ತವೆ ಅಷ್ಟೆ. ಸಾಮಾಜಿಕ ಕಾರಣ ಮತ್ತು ಪರಿಣಾಮಗಳನ್ನು ಪರಿಗಣಿಸಿರುವುದಿಲ್ಲ. ಕೃತಿನಿಷ್ಠ ಓದಿನ ಮಿತಿಯಿದು. ವಿಮರ್ಶೆಯ ಮಾನದಂಡಗಳು ಕಡ ತಂದ ಸಿದ್ಧಾಂತಗಳಿಂದ ಬರಬೇಕಿಲ್ಲ ನಿಜ. ಆದರೆ ಅವೇ ಮಾನದಂಡಗಳು ಕೇವಲ ಪಠ್ಯವನ್ನಷ್ಟೆ ಆಶ್ರಯಿಸಬೇಕು ಎಂಬುದು ಕೂಡ ತರವಲ್ಲ. ಪಠ್ಯದ ಆಚೆಗೆ ಇರುವ ಸಾಮಾಜಿಕ ವಾಸ್ತವ, ಚರಿತ್ರೆ ಮತ್ತು ಭವಿಷ್ಯಗಳು ಕೂಡ ಪಠ್ಯವನ್ನು ರೂಪಿಸುತ್ತ ಇರುತ್ತವೆ ಎಂಬುದನ್ನು ನಾವು ಮರೆಯುವಂತಿಲ್ಲ.

ಇದೇ ಹಿನ್ನೆಲೆಯಲ್ಲಿ ನಮ್ಮ ವಚನಕಾರರ ಒಂದು ಮಾತನ್ನು ನೋಡಬಹುದು. ನಮ್ಮ ವಚನಕಾರ ಬಸವಣ್ಣ ತನ್ನ ಒಂದು ವಚನದಲ್ಲಿ

ಮಡಕೆ ದೈವ, ಮೊರ ದೈವ,

ಬೀದಿಯ ಕಲ್ಲು ದೈವ,

ಹಣಿಗೆ ದೈವ, ಬಿಲ್ಲ ನಾರಿ ದೈವ--ಕಾಣಿರೊ!

ಕೊಳಗ ದೈವ, ಗಿಣ್ಣಿಲು ದೈವ--ಕಾಣಿರೊ!

ದೈವ ದೈವವೆಂದು ಕಾಲಿಡಲಿಂಬಿಲ್ಲ!

ದೇವನೊಬ್ಬನೆ ಕೂಡಲಸಂಗಮದೇವ. (ಸಮಗ್ರ ವಚನ ಸಂಪುಟ-೧-೫೬೨)

ಎಂದು ಹೇಳಿದ್ದಾನೆ. ಜನಪದರ ಆಚರಣೆಗಳ ಬಹುರೂಪಿ ಸಂಸ್ಕೃತಿಯ ನಿರಾಕರಣೆ ಇದು; ಪ್ರಜಾಪ್ರಭುತ್ವೀಯ ಮೌಲ್ಯಗಳ ನಿರಾಕರಣೆ ಇದು; ಏಕದೇವೋಪಾಸನೆಯ ತತ್ವದ ಹೇರಿಕೆ ಇದು ಎಂದೆಲ್ಲ ನಮ್ಮ ಆಧುನಿಕ ವಿಮರ್ಶೆ ಈ ಬಗ್ಗೆ ವ್ಯಾಖ್ಯಾನಿಸಿಯೂ ಇದೆ. ಆದರೆ ಇಂತಹ ಮಾತುಗಳನ್ನು ಆಡುವಾಗ ವಚನಕಾರರಿಗೆ ರಾಜಪ್ರಭುತ್ವದ ಎದುರಿಗೆ ಪರಮಶಕ್ತಿಯಾದ ದೈವಪ್ರಭುತ್ವವನ್ನು ಎತ್ತಿ ಹಿಡಿಯಬೇಕಾದ ಅನಿವಾರ್ಯತೆ ಇತ್ತು ಎಂಬುದನ್ನು ಮರೆಯುವಂತಿಲ್ಲ. ವಚನಕಾರರ ಮತ್ತು ಆನಂತರದ ಹರಿಹರ, ರಾಘವಾಂಕ ಮೊದಲಾದ ವೀರಶೈವ ಕವಿಗಳ ಒಂದು ಮುಖ್ಯವಾದ ಪ್ರತಿಪಾದನೆ ಶಿವಪ್ರಭುತ್ವದ ಪ್ರತಿಪಾದನೆಯೆ ಆಗಿದೆ. ಹಾಗೆ ನೋಡಿದರೆ ಲೌಕಿಕ ರಾಜಪ್ರಭುತ್ವದ ಎದುರು ಧರ್ಮ ಅಥವಾ ದೈವಪ್ರಭುತ್ವವನ್ನು ಎದುರು ನಿಲ್ಲಿಸುವ ಕೆಲಸವನ್ನು ನಮ್ಮ ಎಲ್ಲ ಶಿಷ್ಟ ಸಾಹಿತ್ಯವೂ ನಿರಂತರ ಮಾಡುತ್ತಲೆ ಬಂದಿದೆ. ಭಕ್ತಿಪರಂಪರೆಗಳಂತು ಇದಕ್ಕೆ ಅತ್ಯುತ್ತಮ ಉದಾಹರಣೆಗಳು.

ಈ ಜಗತ್ತಿನ ಅತ್ಯಂತ ಶಕ್ತಿಯುತವಾದ ಶಕ್ತಿಕೇಂದ್ರ ಎಂದರೆ ನಾನೇ; ನನ್ನನ್ನು ಕೇಳುವವರು ಇನ್ನಾರಿದ್ದಾರೆ ಎಂದು ರಾಜಪ್ರಭುತ್ವವು ಮೆರೆಯುತ್ತಿದ್ದರೆ ಆ ರಾಜಪ್ರಭುತ್ವದ ಮದವನ್ನು ಇಳಿಸಲು ಭಕ್ತಿಯೇ ಪ್ರಧಾನವಾದ ಪರ್ಯಾಯ ಸಾಧನ ಮತ್ತು ಸಾಧ್ಯತೆ ಎಂದು ನಮ್ಮ ಶರಣರಿಗೆ ತಿಳಿದಿತ್ತು. ಹಾಗಾಗಿಯೆ ಎಲೈ ರಾಜನೇ ನಿನಗಿಂತಲೂ ಅಧಿಕವಾದ ಶಕ್ತಿಯು ಈ ಲೋಕದಲ್ಲಿ ಇದೆ ಎಂದು ಹೇಳಲು ಶಿವಪ್ರಭುತ್ವವನ್ನು ಸಾರುವುದು ಶರಣರಿಗೆ ಬೇಕಾಗಿತ್ತು. ಹಾಗಾಗಿ ಅವರು ಶಿವನೇ ಪರಮಶಕ್ತಿ ಎಂದು ಹೇಳಿದರು. ಹಾಗೆ ಹೇಳುವಾಗ ಕಲ್ಲು, ಮೊರ, ಮಸಣಿಗಳನ್ನೆಲ್ಲ ದೇವರೆಂದು ಒಪ್ಪಿಕೊಂಡು ಹೇಳಿದ್ದರೆ ಯಾವ ರಾಜಪ್ರಭುತ್ವವೂ ಅವುಗಳ ಎದುರು ತಲೆ ಬಾಗುತ್ತಿರಲಿಲ್ಲ. ಹಾಗಾಗಿಯೆ ಶರಣರು ಕಲ್ಲು, ಮೊರ, ಮಾರಿ, ಮಸಣಿಗಳನ್ನೆಲ್ಲ ದೈವಗಳೆ ಅಲ್ಲವೆಂದು ನಿರಾಕರಿಸಿದರು. ಈ ಬಹುರೂಪಿ ಸಂಸ್ಕೃತಿಯ ನಿರಾಕರಣೆಯ ಹಿಂದೆ ಇಂಥ ರಾಜಪ್ರಭುತ್ವವನ್ನು ಹಣಿಯುವ ಉದ್ದೇಶವಿದೆಯೆ ವಿನಾ ಜನಪದರ ಆಚರಣೆಗಳನ್ನು ಅವಹೇಳನ ಮಾಡುವ, ಅಪ್ರಜಾಪ್ರಭುತ್ವೀಯವಾಗಿ ನಡೆದುಕೊಳ್ಳುವ ಪ್ರವೃತ್ತಿಯಲ್ಲ.

ಅಲ್ಲದೆ ಒಂದು ಸಮಾನ ವೇದಿಕೆಯಲ್ಲಿ ಬಹುಸಂಸ್ಕೃತಿಯ ಜನರನ್ನು ಒಗ್ಗೂಡಿಸುವಾಗ ಇಂತಹ ಸಾಂಸ್ಕೃತಿಕ ತೋಬಡಗಳು ಸಹಜವಾಗಿ ಹೊಡೆಯಲ್ಪಡುತ್ತವೆ. ಅಷ್ಟಕ್ಕು ಅಸಮಾನತೆಯ ಪ್ರತೀಕವಾದ ದೇಗುಲವನ್ನೆ ಶರಣರು ನಿರಾಕರಿಸಿದವರಲ್ಲವೆ? ದೇಹವೆ ದೇಗುಲ, ಇಷ್ಟಲಿಂಗಾರಾಧನೆ, ಆತ್ಮಲಿಂಗ ಕಲ್ಪನೆಗಳನ್ನೆಲ್ಲ ಪ್ರತಿಪಾದಿಸಿದ ಇವರಿಗೆ ಬಹುದೈವಿಕ ಪೂಜೆ-ಆಚಾರಗಳನ್ನು ನಿರಾಕರಿಸಲೆಬೇಕಿತ್ತು ಅಲ್ಲವೆ? ಸಹಜವಾಗಿ ಹಾಗೆ ನಿರಾಕರಿಸುವಾಗ ಸಮಾಜದಲ್ಲಿ ಯಾವ ದೈವ ಮತ್ತು ಆಚಾರಗಳಿಗೆ ಜಾತಿಕೇಂದ್ರಿತ 'ಕೀಳು'ತನ ಅಂಟಿದೆಯೊ ಆ ಕೀಳುತನವನ್ನು ತೊಡೆದು ಹಾಕಲು ಆ ದೈವ ಮತ್ತು ಅವುಗಳ ಸುತ್ತ ಇರುವ ಆಚರಣೆಗಳನ್ನೆ ಇಡಿಯಾಗಿ ತಿರಸ್ಕರಿಸುವುದು ಅನಿವಾರ್ಯ ಆಗಿತ್ತು. ಇದು ಬಹುತ್ವದ ನಿರಾಕರಣೆ ಅಲ್ಲ, ಅಸಮಾನತೆಯ ನಿರಾಕರಣೆ.

ಕನಕದಾಸ ಕೂಡ ಮಾರಿ ಮಸಣಿಗಳನ್ನು, ಎಲ್ಲಮ್ಮ ಎಕ್ಕನಾತಿಗಳನ್ನು ಪೂಜಿಸುವುದನ್ನು ವಿರೋಧಿಸುತ್ತಾನೆ. ಅವನು ಹೀಗೆ ವಿರೋಧಿಸುವಾಗ ಕೆಳವರ್ಗದ ಆಚಾರಗಳನ್ನು (ಅಲಕ್ಷಿತ ವರ್ಗಗಳ ದುಬಾರಿಯಲ್ಲದ ದೇಗುಲ ಸಂಸ್ಕೃತಿಯನ್ನು) ವಿರೋಧಿಸುತ್ತಿದ್ದಾನೆ ಎಂದು ನಾವು ತಿಳಿಯಬೇಕಿಲ್ಲ. ಸಾಂಸ್ಕೃತಿಕ ಚಹರೆಗಳೆ ಜನತೆಯನ್ನು ಒಡೆಯುವ ಸಾಧನಗಳಾಗಿ ಬಳಕೆ ಆಗುವ ಬಗ್ಗೆ ಅವನಿಗೆ ವಿರೋಧ ಇರುವುದನ್ನು ಈ ಮೂಲಕ ಆತ ದಾಖಲಿಸುತ್ತಾನೆ. ಅವನಿಗೆ ನಮ್ಮಲ್ಲಿನ ಅಸಮಾನ ಪೂಜಾ ಆಚಾರಗಳನ್ನು ವಿರೋಧಿಸದೆ ಎಲ್ಲರನ್ನು ಒಟ್ಟುಗೂಡಿಸಲು ಸಾಧ್ಯವಿಲ್ಲ ಎಂಬುದು ಗೊತ್ತಿದೆ. ಅಲ್ಲದೆ ಈ ರೀತಿಯ ಕೆಳವರ್ಗದ ದೇಗುಲ ಸಂಸ್ಕೃತಿಯನ್ನು ನಿರಾಕರಿಸುವಾಗ ಸ್ಪಷ್ಟವಾಗಿ ಸಮಾಜದ ಎಲ್ಲರಲ್ಲು ಪರಸ್ಪರ ಸಹಬಾಳ್ವೆ-ಸಾಮರಸ್ಯವನ್ನು ಪ್ರತಿಪಾದಿಸುವ ಇರಾದೆ ಈತನಿಗೆ ಇದೆ. ಕೇರಿದೈವಗಳ, ಮಾರಿದೈವಗಳ, ಬೀದಿ ಕಲ್ಲು ದೈವಗಳ, ಶಿಷ್ಟ-ಪರಿಶಿಷ್ಟ ದೈವಗಳ ಬಹುರೂಪಕ್ಕು ಜಾತಿ ತರತಮಕ್ಕು ನಮ್ಮ ಸಮಾಜದಲ್ಲಿ ಒಂದು ಅನ್ಯೋನ್ಯವಾದ ಸಂಬಂಧ ಇದೆ. ಹಾಗಾಗಿ ಜಾತಿ ಅಸಮಾನತೆಯನ್ನು ತೊಡೆದು ಹಾಕುವುದನ್ನೆ ತಮ್ಮ ಉದ್ದೇಶವಾಗಿ ಇಟ್ಟುಕೊಂಡ ಯಾವುದೆ ಭಕ್ತಿ ನಡಾವಳಿ ಹೀಗೆ ಬಹುದೇವತ ಆರಾಧನೆಯನ್ನು ನಿರಾಕರಿಸಿ ಏಕದೇವ ಉಪಾಸನೆಯನ್ನು ಬಿಂಬಿಸಲೇಬೇಕಾಗುತ್ತದೆ.

ಜಾತಿಗಳಲ್ಲಿ ಅಸಮಾನತೆ ಇರುವಾಗ ಆ ಜಾತಿಗಳ ದೇವರುಗಳಿಗು ಆ ಅಸಮಾನತೆ ಅಂಟಿಕೊಂಡೆ ಇರುತ್ತದೆ ಅಲ್ಲವೆ? ಆಗ ಸಮಾನತೆಯನ್ನು ಪ್ರತಿಪಾದಿಸಲು ಅಸಂಖ್ಯ ದೈವಗಳ ಆರಾಧನೆಯನ್ನು ನಿರಾಕರಿಸಿ ಒಂದೇ ದೈವದ ಆರಾಧನೆಯನ್ನು ಪ್ರತಿಪಾದಿಸಲೆಬೇಕಾಗುತ್ತದೆ. ದೇಗುಲ ಆಚಾರವು ಪ್ರತಿಪಾದಿಸುವ ಸಾಮಾಜಿಕ ಅಸಮಾನತೆಯನ್ನು ಪ್ರತಿರೋಧಿಸುವ ಮಾರ್ಗವಿದು. ಹಾಗೆಯೆ ಇದು ಕೆಳವರ್ಗಗಳಲ್ಲಿ ಉಂಟಾಗಲೆಬೇಕಾದ ಒಗ್ಗಟ್ಟಿನ ಪ್ರತಿಪಾದನೆಯೂ ಹೌದು. ಇದು ಬಹುವಿಧದ ಮೂರ್ತಿ ಪೂಜೆಯ ನಿರಾಕರಣೆ ಮಾತ್ರವಲ್ಲ, ಅದರ ಸುತ್ತ ಇರುವ ಅಸಮಾನತೆಯ ನಿರಾಕರಣೆಯು ಹೌದು. ʼಹೀನ ವೃತ್ತಿಯಲಿ ನೀಕೆಡಬೇಡ ಮನವೆ... ಎಕ್ಕನಾತಿ ಎಲ್ಲಮ್ಮ ಮಾರಿ ದುರ್ಗಿಯ ಚೌಡಿಯ ಅಕ್ಕರಿಂದಲಿ ಪೂಜೆ ಮಾಡಲೇಕೆ... ಜ್ಞಾನವಿಲ್ಲದೆ ಹೀನ ದೈವವ ಭಜಿಸಲು ಏನುಂಟು ನಿನಗಿನ್ನು ಎಲೆ ಹುಚ್ಚು ಮನವೆʼ ಎಂದು ಕನಕದಾಸ ಹೇಳುವುದೂ ಇದೇ ಉದ್ದೇಶದಿಂದ. ದೈವವೇ ಹೀನ ಆಗಿರುವುದು ಸಾಮಾಜಿಕವಾಗಿ ಜನರು ಹೀನ ಆಗಿರುವುದರ ಸಂಕೇತವೂ ಹೌದು. ಅಂತಹ ದೈವಗಳ ನಿರಾಕರಣೆ ಆ ಸಾಮಾಜಿಕ ಹೀನತೆಯ ನಿರಾಕರಣೆಯೆ ಹೌದು.

ಆದರೆ ನಮ್ಮ ಹಲವಾರು ವಚನಕಾರ ವಚನಕಾತಿಯರ ಭಿನ್ನ ಭಿನ್ನ ಅಂಕಿತಗಳೆಲ್ಲವೂ ಶಿವನ ಬೇರೆ ಬೇರೆ ಹೆಸರುಗಳೇ ಆಗಿವೆ. ನೋಡಿ ಇಲ್ಲಿ ದೇವನೊಬ್ಬ ನಾಮ ಹಲವು ಎಂಬ ತಿಳಿವಳಿಕೆಯೇ ಆಚರಣೆಯಲ್ಲಿದೆ ಎಂದು ಮೇಲ್ನೋಟಕ್ಕೆ ಕಂಡರೂ ನಾಮ ಹಲವು ದೈವವೂ ಹಲವು ಎಂಬ ತಿಳುವಳಿಕೆಯೂ ಇಲ್ಲಿದೆ. ಏಕದೇವ ಉಪಾಸನೆಯನ್ನು ಪ್ರತಿಪಾದಿಸುವುದು ಬಸವಾದಿ ವಚನಕಾರರ ಏಕಮಾತ್ರ ಉದ್ದೇಶವಾಗಿತ್ತೆ? ಅಸಮಾನತೆಗಳನ್ನು ತೊಡೆದು ಹಾಕುವುದು ಇವರ ಮುಖ್ಯ ಉದ್ದೇಶವಾಗಿತ್ತೆ? ಈ ಹಿನ್ನೆಲೆಯಲ್ಲಿ ಬಹುಸಂಸ್ಕೃತಿ ಅಥವಾ ಬಹುದೈವಾರಾಧನೆ ಮತ್ತು ಏಕದೇವೋಪಾಸನೆಗಳ ನಡುವಣ ಕರ್ಷಣದಂತೆಯೂ; ಮುಖಾಮುಖಿಯಂತೆಯೂ ನಮ್ಮ ಶರಣ ಚಳುವಳಿಯನ್ನು ಕಾಣಬಹುದು. ಶೈವಭಕ್ತಿ ಎನ್ನುವುದು ಒಂದಲ್ಲ ಹಲವು ತೆರನಾದುದು. (ಇಂದಿನ ವೀರಶೈವ ಲಿಂಗಾಯತ ಭೇದ ಕೂಡ ಅಂತಹ ಅಸಮಾನತೆ ಮತ್ತು ಸಮಾನತೆಗಳ ನಡುವಣ ಸಂಘರ್ಷವೇ. ಎಲ್ಲರಿಗಿಂತ ನಾವು ಸ್ವಲ್ಪ ಮೇಲು ಅವರು ಕೀಳು ಎಂಬ ರೋಗದ ಸಂಕೇತವೇ)

ನೇಗಿಲು, ಪೊರಕೆ, ಕಲ್ಲು, ಮೊರ, ಮಾರಿ ಮಸಣಿಗಳನ್ನು ದೈವಗಳು ಎನ್ನಲಾಗದು ಎಂದು ನಿರಾಕರಿಸುವ ವಚನಕಾರರು ಕಾಯಕವೆ ಕೈಲಾಸವೆಂದೂ ಹೇಳಿದ್ದಾರಲ್ಲವೆ? ಕಲ್ಲು, ಮೊರ, ಮಡಕೆಗಳನ್ನೆಲ್ಲ ದೈವಗಳಲ್ಲ ಎಂದು ನಿರಾಕರಿಸುವ ಹಿಂದೆ ಜನರನ್ನು ಒಗ್ಗೂಡಿಸುವ ಉದ್ದೇಶವಿದೆಯೆ ವಿನಾ ಅವರ ಬದುಕನ್ನು ಅವಹೇಳನ ಮಾಡುವ ಉದ್ದೇಶ ಖಂಡಿತಾ ಇಲ್ಲ.ಅದೇ ರೀತಿಯಲ್ಲಿ ಜನರ ಪೂಜಾ ಆಚರಣೆಯಲ್ಲಿಯೂ ಕಾಯಕವೆ ಕೈಲಾಸ-ಕಾಯಕ ಸಾಮಗ್ರಿ ಎಲ್ಲವೂ ಗೌರವಾರ್ಹ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯ ನಂಬಿಕೆಗಳೆಲ್ಲ ಮೂಡನಂಬಿಕೆಗಳಲ್ಲ. ಹೀಗೆ ಯಾವುದಾದರೂ ವಿಚಾರದ ಬಗ್ಗೆ, ಆಚರಣೆಯ ಬಗ್ಗೆ ನಿರಾಕರಣೆಯ ತೀರ್ಮಾನಗಳನ್ನು ಕೊಡುವ ಮತ್ತು ವಿಮರ್ಶೆಯ ಹೆಸರಿನಲ್ಲಿ ವ್ಯಾಖ್ಯಾನಿಸುವ ಮುನ್ನ ನಾವು ಬರಿದೆ ಅಕ್ಷರಕ್ಕೆ ಮಾತ್ರ ಗಮನ ಕೊಡದೆ ಅದರ ಸಾಮಾಜಿಕ ಮತ್ತು ಸಾಂಸ್ಕೃತಿಕ ನ್ಯಾಯದ ಆಯಾಮಗಳ ಬಗೆಗೂ ಯೋಚಿಸಬೇಕಿದೆ. ದುರಂತವೆಂದರೆ ಸಿಕ್ಕಸಿಕ್ಕ ಕಲ್ಲು, ಮೊರ, ಎಕ್ಕನಾತಿ, ಎಲ್ಲಮ್ಮ, ಮಾರಿ, ಮಸಣಿಗಳನ್ನೆಲ್ಲ ಪೂಜಿಸಬೇಡಿ ಎಂದು ಯಾರು ಹೇಳಿದರೋ ಅವರು ಇಂದು ದೈವಗಳೆ ಆಗಿದ್ದಾರೆ. ಯಾರು ಜಾತಿಗಳನ್ನು ಸಮಾನತೆಯ ಮೂಲವೆಂದು ನಿರಾಕರಿಸಿದರೊ ಅವರೆಲ್ಲ ಇಂದು ಜಾತಿಯ ನಾಯಕರೆ, ಐಕಾನುಗಳೆ ಆಗಿದ್ದಾರೆ. ವಿಶ್ವಮಾನವತೆ ಸಾರಿದ ಕುವೆಂಪುವನ್ನೂ ಇದು ಬಿಟ್ಟಿಲ್ಲ! ಗಾಂಧಿ, ಅಂಬೇಡ್ಕರ್ ಕೂಡ ವ್ಯಕ್ತಿ ಪೂಜೆಯ/ ನಾಯಕ ಪೂಜೆಯ ಇಕ್ಕಟ್ಟಿನಲ್ಲಿ ಪುರಾಣಪುರುಷರೆ ಆಗುತ್ತಿದ್ದಾರೆ!

ಈ ಅಂಕಣದ ಹಿಂದಿನ ಬರೆಹಗಳು

ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು

ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...