Date: 05-02-2023
Location: ಬೆಂಗಳೂರು
“ಯಾವಾಗಲು ಲಾಸ್ಟ್ ಬೆಂಚಿನಲ್ಲಿ ಕೂರುತ್ತಿದ್ದ ನಾನು ಆಟದಲ್ಲಿ ಯಾವಾಗಲು ಮುಂದಿರುತ್ತಿದ್ದೆ. ಕ್ರಿಕೆಟ್ ಆಡ್ತೀನಿ, ಅಡುಗೆ ಮಾಡ್ತೀನಿ, ಚೂರುಪಾರು ಬರವಣಿಗೆ, ಕುವೆಂಪು, ತೇಜಸ್ವಿ ಅವರನ್ನು ಹೆಚ್ಚು ಓದುತ್ತೇನೆ. ಕಾಲೇಜು ದಿನಗಳಲ್ಲಿ ಕರ್ನಾಟಕದ ಬೇರೆ ಬೇರೆ ವಲಯಗಳಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದೆ ಎನ್ನುತ್ತಾರೆ ವೆಂಕಟಗಿರಿ ನಾಯಕ. ಲೇಖಕಿ ಜ್ಯೋತಿ ಎಸ್ ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ’ವನ್ನು ಕುರಿತು ಬರೆದಿದ್ದಾರೆ.
ನಿಸರ್ಗ ನಮ್ಮ ಉಸಿರು, ನಮ್ಮ ಆಹಾರ, ಅದು ನಮ್ಮ ಬದುಕು ಭವಿಷ್ಯ. ಕಾಡಿನ ಬಗ್ಗೆ ನಿಸರ್ಗದ ಬಗ್ಗೆ ನಾವು ಎಷ್ಟು ತಿಳಿದರೂ ಕಡಿಮೆಯೇ ಹಾಗೇನೇ ನಿಸರ್ಗವನ್ನು ತಿಳಿದವರೂ ಕಡಿಮೆಯೇ. ಕಾಡು, ಪರಿಸರ, ವನ್ಯಜೀವಿಗಳು, ಒಂದೊಂದು ಗಿಡ ಮರ ಪಕ್ಷಿ ಕೀಟಗಳ, ಬುಡಕಟ್ಟು ಜನರ ಬಗ್ಗೆ ಅತ್ಯಂತ ಕಾಳಜಿ ಗೌರವ ಇರುವ, ಸಾಮಾಜಿಕ ಕಳಕಳಿಯ ಬರಹಗಾರರಾಗಿರುವ ಬಯಲುಸೀಮೆಯ ಹುಡುಗ ಕರ್ನಾಟಕದ ಎಲ್ಲಾ ಕಾಡುಗಳಲ್ಲಿ ಕೆಲಸ ಮಾಡ್ತಾ ಕಾಡಿನ ಬಗ್ಗೆ ಇಂಚಿಂಚು ಮಾತನಾಡುವ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಹಸನ್ಮುಖಿ ವೆಂಕಟಗಿರಿ ನಾಯಕ (ಗಿರಿ ವಾಲ್ಮೀಕಿ) ಎಂಬ ಕಾಡಿನ ನೆಂಟನೊಂದಿಗೆ ಇಂದಿನ ಅಂಕಣದಲ್ಲೊಂದು ಚಾರಣ ಮಾಡುವ ಬನ್ನಿ. ಇರುವೆದಾದ್ರೇನು ಆನೆಯಾದ್ದಾದರೇನು ಜೀವ ದೊಡ್ಡದು ಎನ್ನುವ ಗಿರಿ ವಾಲ್ಮೀಕಿ ಅವರದ್ದು ಅಮ್ಮ ಶಿವ ಗಂಗಮ್ಮ, ಅಪ್ಪ ಸುಭಾಷ್ಚಂದ್ರ, ತಮ್ಮ ಹರೀಶ್ ಒಳಗೊಂಡ ಚಿಕ್ಕ ಚೊಕ್ಕ ಕುಟುಂಬ. ಅವರ ಪಯಣವನ್ನು ಅವರ ಮಾತುಗಳಲ್ಲಿ ಓದಿಕೊಳ್ಳಿ.
'ಯಾವಾಗಲು ಲಾಸ್ಟ್ ಬೆಂಚಿನಲ್ಲಿ ಕೂರುತ್ತಿದ್ದ ನಾನು ಆಟದಲ್ಲಿ ಯಾವಾಗಲು ಮುಂದಿರುತ್ತಿದ್ದೆ. ಕ್ರಿಕೆಟ್ ಆಡ್ತೀನಿ, ಅಡುಗೆ ಮಾಡ್ತೀನಿ, ಚೂರುಪಾರು ಬರವಣಿಗೆ, ಕುವೆಂಪು, ತೇಜಸ್ವಿ ಅವರನ್ನು ಹೆಚ್ಚು ಓದುತ್ತೇನೆ. ಕಾಲೇಜು ದಿನಗಳಲ್ಲಿ ಕರ್ನಾಟಕದ ಬೇರೆ ಬೇರೆ ವಲಯಗಳಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದೆ. ಕ್ರಿಕೆಟ್ ಆಡ್ತಾ ಇನ್ನೇನು ಒಂದು ಹಂತಕ್ಕೆ ಬರಬೇಕು ಅನ್ನುವಷ್ಟರಲ್ಲಿ ತಂದೆ ತೀವ್ರ ಅನಾರೋಗ್ಯದಿಂದ ತೀರಿಕೊಂಡರು. ಕಾಲೇಜು ದಿನಗಳಲ್ಲಿ ತುಂಬ ಕಷ್ಟವಿತ್ತು. ಕೊರಿಯರ್ ಬಾಯ್ ಆಗಿ, ಎಸ್.ಟಿ.ಡಿ. ಬೂತ್ ಗಳಲ್ಲಿ ಕೆಲಸ, ಇನ್ಸ್ಟಿಟ್ಯೂಟ್ ಗಳಿಗೆ ನೀರಿನ ಕ್ಯಾನುಗಳನ್ನು ಹಾಕುತ್ತಿದ್ದೆ. ಅದರಿಂದ ಬಂದ ಹಣ ಕಾಲೇಜ್ ಫೀಸ್ ಕಟ್ಟಲು ಸಹಾಯವಾಗುತ್ತಿತ್ತು. ನಾನು ಓದಿದ್ದು ಸಿವಿಲ್ ಇಂಜಿನಿಯರಿಂಗ್. ಅದರ ಬಗ್ಗೆ ಕಡಿಮೆ ಕೌಶಲ್ಯ ಇದ್ದುದರಿಂದ ಕೆಲಸ ಸಿಗುವುದು ತಡವಾಗಿತ್ತು. ಆ ಸಮಯದಲ್ಲಿ ಎಷ್ಟೇ ದುಡಿದರೂ, ಸಾಲ ಮಾಡಿದರೂ ಅಪ್ಪನ ಆಸ್ಪತ್ರೆಯ ಬಿಲ್ ಕಟ್ಟಲು ಸಹ ಸಾಕಾಗುತ್ತಿರಲಿಲ್ಲ. ತಂದೆ ತೀರಿಕೊಂಡಾಗ ಹಾಸ್ಪಿಟಲ್ ನಿಂದ ಡಿಸ್ಚಾರ್ಜ್ ಮಾಡಿಕೊಳ್ಳಲು ಸಹ ನಮ್ಮಲ್ಲಿ ಹಣವಿರಲಿಲ್ಲ. ಕ್ರಿಕೆಟ್ ನಲ್ಲಿ ಭವಿಷ್ಯ ಕಟ್ಟಿಕೊಳ್ಳಬೇಕು ಅಂತಿದ್ದ ನನ್ನ ಕನಸಿನ ಕೊಂಡಿ ಅಲ್ಲಿಗೆ ಕಳಚಿಬಿತ್ತು. ಅಲ್ಲಿಂದ ಕೆಲಸ ಹುಡುಕಲು ಶುರುಮಾಡಿದೆ. READI ಇಂಡಿಯಾ ಧಾರವಾಡದ NGOನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿಂದ ನಾನು ಕಾಡಿನ ಸಂಪರ್ಕಕ್ಕೆ ಬಂದೆ. ಫಾರೆಸ್ಟ್ ಇವ್ಯಾಲ್ಯುವೇಟರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಮೊದಲು ಉತ್ತರ ಕನ್ನಡದಿಂದ ನನ್ನ ಕಾಡಿನ ಒಡನಾಟ ಪ್ರಾರಂಭವಾಯ್ತು. ಬೆಟ್ಟ, ಗುಡ್ಡ ನೋಡಿದ್ದೆ. ಪರಿಸರದ ವಿಚಾರಗಳು, ಪಶ್ಚಿಮ ಘಟ್ಟಗಳು ಏನೂ ಗೊತ್ತಿರಲಿಲ್ಲ. ಯಾರಾದರೂ ನನ್ನ ಕಣ್ಣ ಮುಂದೆ ಮರ ಕಡಿಯುತ್ತಿದ್ದರೆ, ಸುಡುತ್ತಿದ್ದರೆ, ನದಿಯಲ್ಲಿ ಯಾರಾದರೂ ಕಸ ಹಾಕಿದರೆ ನನಗೆ ಏನೂ ಅನ್ನಿಸುತ್ತಿರಲಿಲ್ಲ. ಯಾಕಂದ್ರೆ ಆಗಿನ್ನೂ ನನಗೆ ಅರಣ್ಯದ ಬಗ್ಗೆ ಜ್ಞಾನ ಇರಲಿಲ್ಲ. ಅರಣ್ಯದ ಸಂಪರ್ಕಕ್ಕೆ ಬಂದಮೇಲೆ ಕಾಡು, ಪಶ್ಚಿಮ ಘಟ್ಟಗಳು ಅವುಗಳ ಪ್ರಾಮುಖ್ಯತೆ ಎಲ್ಲ ಅರಿವಿಗೆ ಬರಲು ಶುರುವಾಯ್ತು. ಪಶ್ಚಿಮ ಘಟ್ಟಗಳು ಉಳಿದರೆ ಮಾತ್ರ ಬಯಲುಸೀಮೆ ಉಳಿಯತ್ತೆ ಅಂತ ಗೊತ್ತಾಯ್ತು. ಹಾಗಾಗಿ ಅದಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಅಲ್ಲಿಂದ ಕಾಡಿನ ಪ್ರಯಾಣ ಶುರುವಾಯ್ತು. ಕರ್ನಾಟಕದ ಎಲ್ಲ ಜಿಲ್ಲೆಯ ಕಾಡುಗಳಲ್ಲಿ ಕೆಲಸ ಮಾಡಿದೆ. ಕಾಡಿನ ಸದ್ಯದ ಸ್ಥಿತಿಗತಿಯ ಬಗ್ಗೆ ವರದಿ ಕೊಡುವುದು, ಕಾಡಿನ ಸುತ್ತಳತೆ, ವರ್ಕಿಂಗ್ ಪ್ಲಾನ್, ಕಾಡಿನ ಗಡಿಕಲ್ಲುಗಳ ಮ್ಯಾಪಿಂಗ್ ಮಾಡುವ ಕೆಲಸಗಳನ್ನು ಮಾಡುತ್ತ ಬಂದೆ. ಪ್ರತಿಯೊಂದು ಜಿಲ್ಲೆಗೆ ಹೋದಾಗ ಮೂರು ನಾಲ್ಕು ತಿಂಗಳು ಅಲ್ಲಿ ಉಳಿಯೋಕೆ ಶುರು ಮಾಡ್ತಿದ್ವಿ. ಕೆಲಸ ಮಾಡ್ತಾ ಮಾಡ್ತಾ ಕೃಪಾಕರ ಸೇನಾನಿ, ದಿನೇಶ್ ಹೊಳ್ಳ ಮುಂತಾದ ಪರಿಸರ ವಾದಿಗಳ ಸಂಪರ್ಕ ಸಿಕ್ಕಿತು. ಕಾಡಂಚಿನ ಗ್ರಾಮಗಳಲ್ಲಿರುವ ಸಮಾಜದ ಮುಖ್ಯವಾಹಿನಿಗೆ ಬರದೇ ಇರುವ ಮಕ್ಕಳಿಗೆ ಕಲಿಕೆಯೊಂದಿಗೆ ಕಾಡಿನ ಮಹತ್ವದ ಬಗ್ಗೆ ಹೇಳುತ್ತ ಅವರೊಟ್ಟಿಗೆ ಕೆಲಸ ಮಾಡುತ್ತ ಹೋದೆ. ದಿನೇಶ್ ಹೊಳ್ಳ ಅವರ ಜೊತೆಗೆ ಚಾರಣ ಮಾಡ್ತಾ ಬೇರೆ ಬೇರೆ ಕಾಡುಗಳ ಅವರ ಅನುಭವಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ನಮ್ಮೂರಲ್ಲಿ ಹಸಿರು ಪರ್ವ ಎಂಬ ಸಮಾನ ಮನಸ್ಕರ ತಂಡ ಕಟ್ಟಿ ನಮ್ಮೂರಿನ ಸುತ್ತಮುತ್ತ ಸಾವಿರಾರು ಗಿಡ ನೆಡುತ್ತೇವೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುತ್ತೇವೆ. ಪ್ರತಿವರ್ಷ ಕಾಡೊಳಗೆ ಸಾವಿರಾರು ಖಾಲಿ ಬಾಟಲಿ, ಪ್ಲಾಸ್ಟಿಕ್, ಹರಿದ ಚಪ್ಪಲಿ, ಶೂಗಳನ್ನು ಆರಿಸಿ ಕಾರ್ಪೋರೇಷನ್ನವರಿಗೆ ಕರೆ ಮಾಡಿ ವಿಲೇವಾರಿ ಮಾಡಿಸುತ್ತೇವೆ. ಕಳೆದವರ್ಷ 3-4 ಸಾವಿರ ಬಾಟಲಿಗಳು ಸಿಕ್ಕಿವೆ. ಕರ್ನಾಟಕದ ಕಾಡುಗಳಲ್ಲದೆ, ಮಧ್ಯಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ಗೋವಾ, ಗುಜರಾತಿನ ಕಾಡುಗಳಲ್ಲೂ ನಾನು ಅಲೆದೆ. ಅಲ್ಲಿನ ಕಾಡಿಗೂ ನಮ್ಮ ಕಾಡಿಗೂ ಇರುವ ವ್ಯತ್ಯಾಸ ನನಗೆ ಸೂಕ್ಷ್ಮವಾಗಿ ಅರ್ಥವಾಗಲು ಶುರುವಾಯ್ತು. ನಂತರ ವನ್ಯಜೀವಿ ತಜ್ಞರಾದ ಸಮರ್ಥ್ ಕೊಟ್ಟೂರು ಅವರ ಸಂಪರ್ಕದಿಂದ ಕರಡಿ ದಾಳಿಯ ಬಗ್ಗೆ, ಹಾವು ಕಡಿತದ ಬಗ್ಗೆ ಜಾಗೃತಿ ಬೆಳೆಯಿತು. ಕಾಡಿನಲ್ಲಿ ಓಡಾಡುವಾಗ ಕೆಲವೊಮ್ಮೆ ಚಿರತೆಗಳು, ಆನೆಗಳು ಎದುರು ಬಂದ ಅನುಭವಗಳಾಗಿವೆ. ಕಾಡು ಪ್ರಾಣಿಗಳ ಚಲನ ವಲನ, ಅವುಗಳ ರಕ್ಷಣೆ ಜೊತೆಗೆ ನಮ್ಮ ಜನರನ್ನು ರಕ್ಷಣೆ ಮಾಡೋದು ಹೇಗೆ ಅಂತ ತಿಳಿದುಕೊಂಡೆ. ಬೀದಿನಾಟಕಗಳ ಮುಖಾಂತರ, ಶಾಲೆಗಳಲ್ಲಿ ಛದ್ಮವೇಷದ ಮುಖಾಂತರ ಅಲ್ಲಿನ ಬುಡಕಟ್ಟು ಜನರಿಗೆ ಕಾಡನ್ನು ಅರ್ಥ ಮಾಡಿಸ್ತಾ ಕಾಡಿನ ಪ್ರಾಮುಖ್ಯತೆ ಬಗ್ಗೆ ಹೇಳ್ತಾ ಬಂದ್ವಿ. ಮೊದಲ ಒಂದೆರಡು ವರ್ಷ ಅವರಿಂದ ಯಾವ ಪ್ರತಿಕ್ರಿಯೆ ಕೂಡ ಸಿಗುತ್ತಿರಲಿಲ್ಲ. ಅವರು ಈಗೀಗ ಕಾಡು ನಮ್ಮದು, ಇದನ್ನು ಉಳಿಸಬೇಕು. ಇದನ್ನು ನಂಬಿಯೇ ನಾವು ಬದುಕುತ್ತಿದ್ದೇವೆ ಎಂದು ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ. ನಮ್ಮ ಉದ್ದೇಶ ಇಷ್ಟೇ. ನಮ್ಮ ನಂತರವೂ ಮುಂದಿನ ಪೀಳಿಗೆಗೆ ಕಾಡು ಉಳಿಯಬೇಕು. ಮುಂದಿನ ಪೀಳಿಗೆಗೂ ನಾವು ನೋಡಿದ ಇಂಡಿಯನ್ ಬರ್ಸ್ಟರ್ಡ್, ನವಿಲು, ಸಿಂಹ, ಹುಲಿ ಹೀಗೆ ಎಲ್ಲ ಪ್ರಾಣಿ ಪಕ್ಷಿಗಳು ಉಳಿಯಬೇಕು. ಎಲ್ಲವನ್ನು ಹಾಳು ಮಾಡಿ ಹೋಗಬಾರದು. ಕಾಡು ಎಂದರೆ ಬದುಕು, ಕಾಡಿಂದಲೇ ಉಸಿರು, ಕಾಡೆಂದರೆ ನನ್ನ ಪಾಲಿಗೆ ಆತ್ಮ ತೃಪ್ತಿ'.
'ಬದಲಾದ ರಾಜಕೀಯ ಸ್ಥಿತ್ಯಂತರಗಳು, ಕಾಡಿನ ಮೇಲೆ ಪಟ್ಟಭದ್ರ ಹಿತಾಸಕ್ತಿಗಳ ಕೆಟ್ಟ ಕಣ್ಣು, ಕಾಪಾಡುವ ಕೈಗಳೇ ಕಬಳಿಸಲು ನಿಂತಾಗ ಕಾಡು ನಾಶವಾಗುವುದು ಸಹಜ. ಕರ್ನಾಟಕದಲ್ಲಿ ಸುಮಾರು ಹತ್ತು ಜಿಲ್ಲೆಗಳಲ್ಲಿ ನಮ್ಮ ಕಾಡು ಹಬ್ಬಿಕೊಂಡಿದೆ. ಶಿವಮೊಗ್ಗ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಡಿಕೇರಿ ಭಾಗಗಳಲ್ಲಿ ಕಾಡು ತುಂಬ ಇದೆ. ಗಣಿಗಾರಿಕೆ, ನದಿ ತಿರುವು ಯೋಜನೆಗಳು, ಡ್ಯಾಮ್ ಕಟ್ಟುವುದು, ಬಾಂಬ್ ಸಿಡಿಸುವುದು, ಕೃಷಿ ಮಾಡುವುದು, ಜಾನುವಾರುಗಳನ್ನು ಮೇಯಿಸುವುದರಿಂದ ಅರಿವಿಲ್ಲದೆಯೇ ಕಾಡು ನಾಶವಾಗುತ್ತಿದೆ. ಮಾಧವ್ ಕಾಡ್ಗಿಲ್ ವರದಿ, ಕಸ್ತೂರಿ ರಂಗನ್ ಸೇರಿದಂತೆ ಕಾಡನ್ನು ಉಳಿಸಬೇಕು ಎನ್ನುವುದರ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ಆದರೆ ಈ ವರದಿಗಳು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಕೊನೆಪಕ್ಷ ಕನ್ನಡಕ್ಕೂ ತರ್ಜುಮೆ ಆಗುತ್ತಿಲ್ಲ. ಬುಡಕಟ್ಟು ಜನರು, ಮೂಲ ನಿವಾಸಿಗಳಾದ ಹಾಲಕ್ಕಿ, ಕುಡಬಿ, ಗೌಳಿ, ಸಿದ್ದಿ, ಸೋಲಿಗ, ಇರವ ಇವರೆಲ್ಲ ಕಾಡನ್ನು ನಂಬಿಕೊಂಡು ಬದುಕುತ್ತಿರುವ ಜನರು. ಅಲ್ಲಿನ ಉಟೋಪಚಾರಗಳು, ವೈವಿಧ್ಯತೆಗಳು, ಅಲ್ಲಿನ ಉತ್ಪನ್ನಗಳನ್ನೇ ಬಳಸಿಕೊಂಡು ಕಾಡನ್ನು ಕಾಪಾಡುತ್ತಿರುವ ಅವರನ್ನು ರಕ್ಷಿಸುವ ಮುಖೇನ ಕಾಡನ್ನು ರಕ್ಷಿಸಿದರೆ ಮುಂದಿನ ಪೀಳಿಗೆಗೂ ಕಾಡು ಉಳಿಯುತ್ತದೆ. ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿ ನಾಶವಾಗುತ್ತಿದೆ. ಮೊದಲು ಮೂಲ ಸೌಕರ್ಯಗಳಿಗೆ ಒತ್ತು ಕೊಡಬೇಕು. ಪದೇ ಪದೇ ಭೂಕುಸಿತವಾಗುತ್ತಿದೆ. ಪಶ್ಚಿಮ ಘಟ್ಟಗಳಲ್ಲಿ ನೀರು ಯಾವಾಗಲು ಹರಿಯುತ್ತಿರಬೇಕು. ನೀರು ಒಂದೇ ಕಡೆ ನಿಂತರೆ ಗುಡ್ಡ ಕುಸಿಯಲು ಶುರುವಾಗತ್ತೆ. ಪಶ್ಚಿಮ ಘಟ್ಟಗಳು ತುಂಬ ಸೂಕ್ಷ್ಮ ಪ್ರದೇಶ. ಅಸಂಖ್ಯಾತ ವನ್ಯ ಪ್ರಾಣಿಗಳಿಗೆ, ಜೀವನದಿಗಳಿಗೆ ತವರೂರಿದ್ದಂತೆ. ಅನೇಕ ನದಿಗಳು ಹುಟ್ಟುವ ಜಾಗ ಅದು. ಅಲ್ಲಿ ಶೋಲಾ ಕಾಡುಗಳಿವೆ. ಆ ಕಾಡುಗಳು ನಾಶವಾದರೆ ದಿನದಿಂದ ದಿನಕ್ಕೆ ಕಾಡು ಒಣಗಲು ಶುರುವಾಗತ್ತೆ. ಕುದುರೆಮುಖ, ಮಡಿಕೇರಿ, ಶಿವಮೊಗ್ಗ ಈ ಭಾಗದಲ್ಲಿ ಶೋಲಾ ಕಾಡುಗಳು ನೋಡಲು ಸಿಗುತ್ತವೆ. ಅಲ್ಲಿನ ಹುಲ್ಲು ನೀರಿನ ಟ್ಯಾಂಕರ್ ಗಳಂತೆ. ಅಂದರೆ ನೈಸರ್ಗಿಕವಾದ ನೀರು ಫಿಲ್ಟರ್ ಆಗಿ ಬಸಿದು ಕಾಡಲ್ಲಿ ಝರಿಯಾಗಿ ತೊರೆಯಾಗಿ ಇವತ್ತು ಕರ್ನಾಟಕದ ಸಾಕಷ್ಟು ನದಿಗಳು ಉಗಮವಾದ ಜಾಗ ಅದು. ಇಲ್ಲಿ ಅಭಿವೃದ್ಧಿ ಯೋಜನೆಗಳು ಮುನ್ನೆಲೆಗೆ ಬಂದರೆ ಈ ನದಿ ಮೂಲಗಳು ಒಣಗುತ್ತಾ ಹೋಗುತ್ತವೆ. ಅಕಾಲಿಕ ಮಳೆ, ಬಿಸಿಲು, ಚಳಿ, ವಾತಾವರಣದ ವೈಪರೀತ್ಯ, ಮಳೆ ಬೀಳುವ ಜಲಚಕ್ರಗಳಲ್ಲಿ ಬದಲಾವಣೆಯಾಗುತ್ತಿದೆ. ನೈಸರ್ಗಿಕ ನೀರಿನ ಮೂಲಗಳು ನಾಶವಾಗುತ್ತಿವೆ. ಹಾಗಾಗಿ ಪರ್ಯಾಯ ಯೋಜನೆಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದೇವೆ. ನೀರಿಗೆ ಬಹುತೇಕ ಪ್ರದೇಶಗಳು ಕೊಳವೆ ಬಾವಿಗಳನ್ನೇ ಆಶ್ರಯಿಸಿರುವುದರಿಂದ ಸಿಕ್ಕ ಸಿಕ್ಕಲ್ಲಿ ಬೋರ್ ವೆಲ್ ಗಳನ್ನು ತೆಗೆಯುತ್ತಿದ್ದೇವೆ. ಅಂತರ್ಜಲ ಮಟ್ಟ ಕುಸಿದು ಹೆಚ್ಚು ಆಳದಿಂದ ನೀರನ್ನು ತೆಗೆಯುತ್ತಿದ್ದೇವೆ. ಹೆಚ್ಚು ಆಳದಿಂದ ನೀರನ್ನು ತೆಗೆಯುತ್ತಿರುವುದರಿಂದ ನೀರಿನಲ್ಲಿ ಫ್ಲೋರೈಡ್ ಕೆಮಿಕಲ್ ಮಿಶ್ರಣವಾಗಿ ಜನರು ಅಬಾಲ ವೃದ್ಧರಾಗುತ್ತಿದ್ದಾರೆ. ಬಯಲು ನಾಡಿನ ಚಿತ್ರದುರ್ಗದ ಕೆಲವು ಭಾಗಗಳಲ್ಲಿ ಇಂತಹ ನೀರನ್ನು ಕುಡಿದು ಸಾಕಷ್ಟು ಜನರು ಅಬಾಲ ವೃದ್ಧರಾಗಿಯೇ ಇದ್ದಾರೆ. ಅಂದರೆ ವಯಸ್ಸಿಗೆ ಮೀರಿದ ವಯಸ್ಸು ಅವರ ಚಹರೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗೆ ಮುಂದುವರೆದಲ್ಲಿ ಮುಂಬರುವ ಪೀಳಿಗೆಯ ಜೀವಿತಾವಧಿ ಕಡಿಮೆಯಾಗುತ್ತ ಹೋಗುತ್ತದೆ. ಕಾಡು ಉಳಿಯಬೇಕು. ಕಾಡು ಎಲ್ಲದಕ್ಕೂ ಮೂಲ. ಕಾಡು ಹಡೆದ ತಾಯಿಯಿದ್ದಂತೆ. ಪ್ರತಿಯೊಬ್ಬರೂ ಉಳಿಸಬೇಕು. ಪಶ್ಚಿಮ ಘಟ್ಟಗಳೊಂದೆ ಕಾಡಲ್ಲ. ಬಯಲು ಸೀಮೆಯ ಕುರುಚಲು ಕಾಡು ಕೂಡ ಕಾಡೆ. ಪಶ್ಚಿಮ ಘಟ್ಟದಲ್ಲಿ ದೊಡ್ಡ ದೊಡ್ಡ ಮರಗಳಿದ್ದರೆ, ಬಯಲು ಸೀಮೆಯಲ್ಲಿ ಆಫ್ರಿಕಾದ ಹುಲ್ಲುಗಾವಲು ತರ ಇರತ್ತೆ.ಇದು ಅಮೂಲ್ಯವಾದುದು ಇದನ್ನು ಉಳಿಸಿಕೊಳ್ಳಬೇಕು'
'ಕಾಡಿನಲ್ಲಿ ದಿನವೊಂದಕ್ಕೆ 18 ರಿಂದ 20 ಕಿ. ಮೀ ನಡೆಯುತ್ತೇನೆ. ಕಾಡನ್ನು ಸುತ್ತುವಾಗ ಒಮ್ಮೆ ಹಾದಿ ತಪ್ಪಿ ಒಂದೂವರೆ ದಿನ ರಸ್ತೆಯ ಸಂಪರ್ಕವೇ ಸಿಗದೆ ಒದ್ದಾಡಿದ್ದಿದೆ. ಕಾಡಿನಲ್ಲಿ ಎಲ್ಲವೂ ಇದೆ. ಮನುಷ್ಯ ಒಂದು ರೂಪಾಯಿಯು ಇಲ್ಲದೆ ನಿಶ್ಚಿಂತೆಯಿಂದ ಬದುಕಿಬಿಡಬಹುದು. ಕಾಡಿನಲ್ಲಿ ಯಾವ ಹಣ್ಣು, ಬಳ್ಳಿ ಅಂತ ಗುರುತಿಸುವುದನ್ನು ಕಲಿಯಬೇಕು ನಾಡಿನ ಸಂಪರ್ಕವಿಲ್ಲದೆ ಯಾರ ಅವಲಂಬನೆ ಇಲ್ಲದೆ ಬದುಕಬಹುದು. ಎಲ್ಲಕ್ಕೂ ಮುಂಚೆ ಸ್ಥಳೀಯ ಅರಣ್ಯ ಜ್ಞಾನ ಇರಬೇಕು. ಪ್ರವಾಸಿಗರು ಸಾಕಷ್ಟು ಓದಿರುತ್ತಾರೆ. ದೊಡ್ಡ ದೊಡ್ಡ ಯೂನಿವರ್ಸಿಟಿಗಳಲ್ಲಿ ಪದವಿ ಪಡೆದುಕೊಂಡಿರುತ್ತಾರೆ. ಆದರೂ ಕನಿಷ್ಠ ಮಟ್ಟದ ಪ್ರಜ್ಞೆ ಇರುವುದಿಲ್ಲ. ಕಾಡಿಗೆ ಬಂದಾಗ ಗಾಡಿಯಿಂದ ಇಳಿಯಬಾರದು ಅಂದ್ರೂ ಸಫಾರಿ ಸಮಯದಲ್ಲಿ ಇಳಿಯುತ್ತಾರೆ. ಆಗ ಆನೆ, ಹುಲಿ ದಾಳಿಯಾಗುತ್ತದೆ. ಕಾಡಿನ ಕೆಲವು ಪ್ರಾಣಿಗಳಿಗೆ ಹಣ್ಣು ಕೊಡೋದು, ಬಿಸ್ಕತ್ ಕೊಡೋದು ಮಾಡಿದಾಗ ಅವು ರೋಡಿಗೆ ಬಂದು ನಿಲ್ಲುತ್ತವೆ. ಇದರಿಂದ ಜನರಿಗೆ ತೊಂದರೆ. ಇದನ್ನು ಕಡಿಮೆ ಮಾಡಬೇಕು. ಹರಿದ ಶೂ, ಚಪ್ಪಲಿ, ಪ್ಲಾಸ್ಟಿಕ್ ಕಾಡಿನಲ್ಲಿ ಎಸೆದಾಗ ಯಾವುದೋ ಪ್ರಾಣಿ ತಿಂದು ಅರಗಿಸಿಕೊಳ್ಳೋಕೆ ಆಗದೆ ಸತ್ತು ಹೋಗುತ್ತದೆ. ಕಾಡು ಪ್ರಾಣಿಗಳ ಶವಪರೀಕ್ಷೆ ಮಾಡಿದಾಗ ಕೆಲವು ಪ್ರಾಣಿಗಳ ಹೊಟ್ಟೆಯಲ್ಲಿ ಚಪ್ಪಲಿ, ಶೂ, ಪ್ಲಾಸ್ಟಿಕ್, ಬಾಟಲ್, ಟೆಟ್ರಾಪ್ಯಾಕ್ ಗಳನ್ನು ನೋಡಿದ್ದೇವೆ. ಆ ಸಾವಿನ ನೈತಿಕ ಹೊಣೆ ಹೊತ್ತುಕೊಳ್ಳುವುದು ಯಾರು? ಪ್ರಜ್ಞಾವಂತರು ಮಾಡುವ ಕೆಲಸ ಇದು. ಸಿಂಹ ಮುಖದ ಸಿಂಗಳೀಕ ಒಂದು ಕಾಲದಲ್ಲಿ ಐದುಸಾವಿರಕ್ಕೂ ಹೆಚ್ಚು ಇದ್ದವು. ಈಗ ಇನ್ನೂರು ಕಾಣಿಸಿದ್ರು ಹೆಚ್ಚು. ಅವೆಲ್ಲ ನಾಶವಾಗುವ ಹಂತಕ್ಕೆ ಬಂದು ನಿಂತಿವೆ. ಚಾರಣಕ್ಕೆ ಬಂದವರು ಸುಮ್ಮನೆ ನೋಡಬೇಕು, ಹೋಗಬೇಕು. ಅಲ್ಲಿನ ಗಿಡಗಳನ್ನು, ಹೂಗಳನ್ನು ಕೀಳಬಾರದು. ಪ್ರವಾಸಿಗರಿಗೆ ಇದು ಚಿಕ್ಕ ವಿಷಯ ಅನ್ನಿಸಬಹುದು. ಆದರೆ, ಅದನ್ನು ನಂಬಿಕೊಂಡು ಕೀಟಗಳು, ಚಿಟ್ಟೆ, ಜೇನುಹುಳುಗಳು ಇರುತ್ತವೆ. ಚಿಟ್ಟೆಗಳು ಆ ಹೂವಿನ ಪರಾಗಕ್ಕೆ ದಿನಗಟ್ಟಲೆ ಕಾಯುತ್ತವೆ. ಇವೆಲ್ಲ ಸೂಕ್ಷ್ಮ ಸಂಗತಿಗಳು. ಆ ಹೂವು ಸಿಗದಿದ್ದಾಗ ಆ ಕೀಟ ಸತ್ತುಹೋಗತ್ತೆ. ಪರಾಗ ಕ್ರಿಯೆ ನಿಂತುಹೋಗತ್ತೆ. ಪರಾಗ ಕ್ರಿಯೆ ನಿಂತು ಹೋದರೆ ಆಹಾರ ಉತ್ಪಾದನೆ ಕಡಿಮೆಯಾಗತ್ತೆ. ಆಗ ಅದನ್ನು ನಂಬಿಕೊಂಡಿರುವ ಜೀವಿಗಳು ಹಂತ ಹಂತವಾಗಿ ನಾಶವಾಗುತ್ತವೆ. ಚಾರಣಕ್ಕೆ ಬಂದವರು ಕಾಡನ್ನು ಬರೀ ನೋಡಬಾರದು, ಸೂಕ್ಷ್ಮವಾಗಿ ಗಮನಿಸಬೇಕು. ಆ ಕಾಡನ್ನು ಗೌರವಿಸಬೇಕು. ಅಲ್ಲಿನ ಸ್ಥಳೀಯರನ್ನು ಗೌರವಿಸಬೇಕು. ನನ್ನ ಪ್ರಕಾರ ಹುಲಿ ಅಂದರೆ ಕಾಡು, ಕಾಡಿದ್ರೆ, ನೀರಿದ್ರೆ ನಾವು ನೀವು. ಆಯಾ ಭಾಗದ ಭೌಗೋಳಿಕ ಹಿನ್ನಲೆ, ಪ್ರದೇಶ, ವ್ಯಾಪ್ತಿ ಅದರ ಹವಾಮಾನ, ಪರಿಸರ ಅದರ ಸುತ್ತ ಮುತ್ತ ಇರುವ ಧಾರಣ ಶಕ್ತಿಯ ಮೇಲೆ ಕಾಡಿನ ವೈವಿಧ್ಯತೆ ನಿರ್ಧಾರವಾಗಿರುತ್ತದೆ. ಕಾಡು ಬೆಳಗ್ಗೆ ಒಂಥರಾ ಪ್ರೇಯಸಿ ತರ ಕಾಣಿಸಿದ್ರೆ ಮಧ್ಯಾಹ್ನ ಮುನಿಸಿಕೊಂಡ ಹಾಗೆ ಅಷ್ಟು ಬಿಸಿಲು ಇರುತ್ತದೆ. ರಾತ್ರಿ ಮೋಹಕವಾಗಿ ಕಾಣಿಸುತ್ತದೆ. ಇಲ್ಲಿ ಎಲ್ಲವೂ ಅನಿರೀಕ್ಷಿತ, ಯಾವುದೂ ಪೂರ್ವ ನಿರ್ಧರಿತ ಏನೂ ನಡೆಯುವುದಿಲ್ಲ. ಯಾವಾಗ ಏನು ಬೇಕಾದರೂ ಸಂಭವಿಸಬಹುದು. ಇಲ್ಲಿ ಸದಾ ಎಚ್ಚರಿಕೆಯಿಂದ ಇರುವವರಿಗೆ ಮಾತ್ರ ಬದುಕಲು ಸಾಧ್ಯ. ಆ ಎಚ್ಚರಿಕೆ ಪ್ರತೀಕ್ಷಣ ಜಾಗರೂಕವಾಗಿರಬೇಕು. ಇಲ್ಲಿ ವಾಸಿಸುವವರು ಚೂರು ಉದಾಸೀನ ಮಾಡಿದರೂ ಮತ್ತೆ ಮನೆಗೆ ಸೇರುವುದಿಲ್ಲ. ಇಡೀ ಭಾರತದಲ್ಲಿ ಅತೀ ಹೆಚ್ಚು ಹುಲಿಗಳಿರುವ ರಾಜ್ಯ ನಮ್ಮದು. ಭೌಗೋಳಿಕವಾಗಿ ನನಗಿಷ್ಟವಾದ ಕಾಡು ನಮ್ಮ ಬಳ್ಳಾರಿ ಕಡೆ ಇರುವ ಕೂಡ್ಲಿಗಿ, ಗಂಗಾವತಿ, ಈ ಭಾಗದ ಕಲ್ಲು, ಬೆಟ್ಟ, ಕುರುಚಲು ಕಾಡು ತುಂಬ ಇಷ್ಟ ಆಗಿದ್ದು. ನಮ್ಮ ಕರ್ನಾಟಕದ ಹತ್ತು ಜಿಲ್ಲೆಗಳಾದ ಬೆಳಗಾವಿ, ಕೊಡಗು, ಶಿವಮೊಗ್ಗ, ಉತಪರಾಗ್ಕಣೊನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿರಸಿ, ಕಾರವಾರ ಇವೆಲ್ಲವೂ ಪಶ್ಚಿಮ ಘಟ್ಟದಲ್ಲಿ ಬರುತ್ತವೆ. ಈ ಪಶ್ಚಿಮ ಘಟ್ಟಗಳು ದಕ್ಷಿಣ ಪ್ರಸ್ಥಭೂಮಿಗೆ ಹೋಗುವ ಮಳೆ ಮೋಡಗಳನ್ನು ತಡೆಹಿಡಿದು ಯಥೇಚ್ಚವಾಗಿ ಮಳೆ ಸುರಿಸುತ್ತದೆ. ಇಲ್ಲಿ ಬಿದ್ದ ಮಳೆ ಮೋಡಗಳು ಸಾಕಷ್ಟು ನದಿಗಳ ಉಗಮಕ್ಕೆ ಕಾರಣವಾಗಿದೆ. ಇಲ್ಲಿ ಅತ್ಯಂತ ಬೆಲೆ ಬಾಳುವ ಮರಗಳಿವೆ. ಧೂಪ, ಬುರುಗ, ತೇಗ, ಕಿಂದಳ್, ರೋಸ್ ವುಡ್, ನಂದಿ, ಹೆಬ್ಬೆ, ಹೆಬ್ಬಲಸು, ದಾಸವಾಳ, ಹೊಳೆ ದಾಸವಾಳ ಈ ತರಹದ ಸರಿ ಸುಮಾರು 300 ರಿಂದ 400 ವರ್ಷಗಳಷ್ಟು ಹಳೆಯದಾದ ಮರಗಳು ಇಲ್ಲಿ ಕಾಣಸಿಗುತ್ತವೆ. ದಖನ್ ಪ್ರಸ್ತಭೂಮಿ ಇದು ಸುಮಾರು 360 ರಿಂದ 370 ಕೋಟಿ ವರ್ಷಗಳಷ್ಟು ಹಳೆಯದಾದ ಭೂಮಿ ಇದು. ಅಲ್ಲಿನ ಭೋಗೋಳಿಕ ಪ್ರದೇಶ, ಆಳ, ಅಗಲ, ವ್ಯಾಪ್ತಿ, ಎಲ್ಲವೂ ದೂರದ ಆಫ್ರಿಕಾ ಖಂಡದ ಹಾಗೆ ಹೋಲುತ್ತದೆ. ಆಫ್ರಿಕಾ ಖಂಡಕ್ಕೂ ನಮ್ಮ ಬಳ್ಳಾರಿ, ರಾಯಚೂರು, ಗಂಗಾವತಿ, ಕೊಪ್ಪಳ, ಹೊಸಪೇಟೆ ಭಾಗದಲ್ಲಿರುವಂತೆ ಆಫ್ರಿಕಾದಲ್ಲೂ ಇದೇ ರೀತಿ ಭೋಗೋಳಿಕ ವ್ಯಾಪ್ತಿಯಿದೆ. ಹಾಗಾಗಿ ಇಲ್ಲಿನ ಶಾಲಾ ವ್ಯಾಪ್ತಿಯಲ್ಲಿ ಮಕ್ಕಳಿಗೆ ಪರಿಸರದ ಪ್ರತ್ಯಕ್ಷ ಅನುಭವಗಳನ್ನು ತೋರಿಸುತ್ತೇವೆ. ಇರುವೆ ಗೂಡು, ಹುತ್ತ ಇರುವುದರಿಂದ ಅಂತರ್ಜಲ ಮಟ್ಟ ಜಾಸ್ತಿ ಇರತ್ತೆ. ಹುತ್ತ ಎಲ್ಲೆಲ್ಲಿ ಇರುತ್ತದೆಯೋ ಅಲ್ಲಿನ ವಾತಾವರಣ ತಂಪಾಗಿರುತ್ತದೆ. ಹುತ್ತದಲ್ಲಿರುವ ಗೆದ್ದಲು ಹುಳುಗಳು ಯಾವುದೇ ಮರ, ಗಿಡಗಳು ಬಿದ್ದರೂ ಕೂಡ ಅವುಗಳನ್ನು ಕರಗಿಸುತ್ತವೆ. ಈ ಶಕ್ತಿ ಇರೋದು ಗೆದ್ದಲು ಹುಳುಗಳಿಗೆ ಮಾತ್ರ. ಮರ ಮುಟ್ಟು ಬಿದ್ದು ಕೊಳೆಯಲು ಪ್ರಾರಂಭಿಸುತ್ತೆ ಅಂದರೆ ಅದು ಗೆದ್ದಲು ಹುಳುಗಳಿಂದ. ಅದು ಭೂಮಿಯನ್ನು ಫಲವತ್ತತೆ ಮಾಡುತ್ತದೆ. ಮೂಢ ನಂಬಿಕೆಗಳಿಂದ ಹಾವುಗಳಿಗೆ ಸಾಕಷ್ಟು ಜೀವಹಾನಿಯಾಗುತ್ತಿದೆ. ಆಫ್ರಿಕಾದ ಮರಳುಗಾಡಿನಲ್ಲಿ ಕೆಲವೊಂದು ಹಾವುಗಳಿಗೆ ರೆಪ್ಪೆ ಇದೆ ಬಿಟ್ಟರೆ ಬೇರೆ ಯಾವ ಹಾವುಗಳಿಗೂ ಇಲ್ಲ. ಎಲ್ಲಾ ಹಾವುಗಳು ವಿಷಕಾರಿಗಳಲ್ಲ. ನಾಗರಹಾವು, ಕಟ್ಟಾವು, ಕನ್ನಡಿಹಾವು, ರಕ್ತ ಮಂಡಲ ಹಾವು ಇವುಗಳನ್ನು ಭಾಷಾವಾರು ಆಯಾ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಹಾವು ಕಚ್ಚಿದ ತಕ್ಷಣ ತಡ ಮಾಡಬಾರದು. ಆಸ್ಪತ್ರೆಗೆ ಹೋಗಬೇಕು. ಬೇರು ಕಟ್ಟುವುದು, ಮಂತ್ರವಾದಿಗಳ ಹತ್ತಿರ ಹೋಗುವುದು, ಕಚ್ಚಿದ ಹಾವನ್ನು ಹೊಡೆದು ಸಾಯಿಸಿದರೆ ವಿಷ ಇಳಿಯುತ್ತದೆ ಎಂಬ ಮೂಢನಂಬಿಕೆಗಳ ಬಗ್ಗೆ ತಿಳಿ ಹೇಳುತ್ತೇನೆ. ಮಕ್ಕಳಿಗೆ ಮುಂದಿನ ಭವಿಷ್ಯಕ್ಕೆ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಕೆಲವು ಪ್ರಾತ್ಯಕ್ಷಿಕೆಗಳ ಮೂಲಕ ಮಕ್ಕಳಿಗೆ ತೋರಿಸಿಕೊಡುತ್ತೇನೆ'.
'ಪ್ರತಿಯೊಂದು ಮರಕ್ಕೆ ತುಂಬಾ ಪ್ರಾಮುಖ್ಯತೆ ಇದೆ ಸಮಾಜದಲ್ಲಿ. ಎಲ್ಲೋ ದೂರದಲ್ಲಿರುವ ಕಾಡನ್ನು ಸಂರಕ್ಷಿಸುವ ಹಾಗೆ ನಗರದಲ್ಲಿರುವ ನಮ್ಮ ಸುತ್ತ ಮುತ್ತಲಿನ ಪರಿಸರ ಸಂರಕ್ಷಣೆ ತುಂಬ ಮುಖ್ಯ. ಕೆರೆ ಆಗಿರಲಿ, ಒಣ ಭೂಮಿ, ಆಲದಮರ, ಅರಳೀಮರ ಈ ತರದ ಮರಗಳನ್ನು ಕಾಪಾಡಬೇಕು. ಇವೆಲ್ಲ ಪಾರಂಪರಿಕ ಮರಗಳು. ಇವೆಲ್ಲ ಇದ್ರೆ ಸಾಕಷ್ಟು ಚಿಟ್ಟೆ, ಹಕ್ಕಿ ಪಕ್ಷಿಗಳಿಗೆ, ಹಾವುಗಳಿಗೆ ಆಶ್ರಯ ತಾಣವಾಗಿರುತ್ತದೆ. ಇವೆಲ್ಲಾ ಚಿಕ್ಕ ಚಿಕ್ಕ ಮಕ್ಕಳಿಗೆ ಹೇಳಿಕೊಟ್ಟು ಶಾಲೆಯ ಸುತ್ತ ಮುತ್ತ ಇರುವ ಧೂಪ, ಬಸರಿ, ನಂದಿ, ಹೊಂಗೆ ಮರಗಳನ್ನು ಗುರುತಿಸುವ ಹಾಗೆ ಮಾಡಿ ಅವರಲ್ಲಿ ಪರಿಸರ ಪ್ರೇಮವನ್ನು ಬೆಳೆಸುತ್ತೇನೆ. ಕಾಡನ್ನು ರಕ್ಷಿಸದಿದ್ದರೆ ಮುಂದಿನ ನೂರು ವರ್ಷದಲ್ಲಿ ಕಾಡು ಹಂತ ಹಂತವಾಗಿ ಕಡಿಮೆಯಾಗುತ್ತಾ ಮನುಕುಲ ಹೇಗೆ ಸಾಮೂಹಿಕ ಅಂತ್ಯ ಕಾಣುತ್ತದೆ ಎನ್ನುವುದರ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಮರಗಳನ್ನು ಕಡಿಯಬಾರದು ಅವು ಮನೆಮಕ್ಕಳಂತೆ ಎಂದುಕೊಳ್ಳಬೇಕು. ಒಂದು ಪ್ರದೇಶದಲ್ಲಿ 33% ಕಾಡು ಇರಬೇಕು. ಆಗ ಮಾತ್ರ ಆ ಊರು, ಪ್ರದೇಶ, ಜೈವಿಕವಾಗಿ, ಪ್ರಾಕೃತಿಕವಾಗಿ ಶ್ರೀಮಂತವಾಗಿರುತ್ತದೆ. ಆದರೆ ಈಗ 8%ರಿಂದ 10% ಕಾಡಿದೆ. ಕಾಡ್ಗಿಚ್ಚು ಉಂಟಾದಾಗ ಸ್ಥಳೀಯ ಅರಣ್ಯ ಇಲಾಖೆಯ 1026 ನಂಬರಿಗೆ ಕರೆ ಮಾಡಬೇಕು. ಇವರು ಇರೋದೆ ಅರಣ್ಯ ರಕ್ಷಣೆ ಮಾಡಲು. ನಿಮ್ಮ ಭಾಗದಲ್ಲಿ ಗೂಬೆ, ಆಮೆ, ಹಾವು ರೀತಿಯ ಏನೇ ಮಾರಾಟ ಮಾಡ್ತಿದ್ರು ಅರಣ್ಯ ಇಲಾಖೆಯ ಈ ನಂಬರ್ ಗೆ ಕರೆ ಮಾಡಬೇಕು. ಸುತ್ತ ಮುತ್ತಲಿನ ಪರಿಸರವನ್ನು ರಕ್ಷಣೆ ಮಾಡಬೇಕು. ಗುಡಿ, ಗೋಪುರ, ಮಸೀದಿ, ಚರ್ಚ್ ಕಟ್ಟುವುದಕ್ಕಿಂತ ಕೆರೆ, ಬಾವಿ, ಕಟ್ಟೆಗಳನ್ನು ಉಳಿಸಿ ಬೆಳೆಸಬೇಕು. ಊರಿನ ಬೆಟ್ಟ ಗುಡ್ಡಗಳನ್ನು, ಅರಣ್ಯವನ್ನು ಉಳಿಸಬೇಕು. ಅಂತಿಮವಾಗಿ ನದಿ ಸಮುದ್ರಕ್ಕೆ ಸೇರಲೇಬೇಕು. ಸಿಹಿನೀರು ಸಮುದ್ರಕ್ಕೆ ಹೋಗಿ ಸೇರಿದರೇನೇ ಮುತ್ತುಗಳು, ಹವಳಗಳು, ಉಂಟಾಗೋದು. ಮೀನುಗಾರಿಕೆಗೆ ನದಿ ನೀರು ಬೇಕು. ಆದ್ದರಿಂದ ನದಿ ನೀರು ಸಮುದ್ರಕ್ಕೆ ಸೇರಲೇಬೇಕು. ಒಂದು ಊರಿನಲ್ಲಿ ಕೆರೆ ಇದ್ದರೆ, ಆ ಭಾಗದ ಉಷ್ಣಾಂಶ ಸಮಸ್ಥಿತಿಯಲ್ಲಿರುತ್ತದೆ. ಕೃಷಿಗೆ, ಅಲ್ಲಿನ ಪ್ರಾಣಿ ಪಕ್ಷಿಗಳಿಗೆ, ಹಲವಾರು ಪ್ರಬೇಧಗಳಿಗೆ ಆವಾಸ ಸ್ಥಾನವಾಗುತ್ತದೆ. ಈ ಬುಡಕಟ್ಟು ಜನರಿಗೆ ಗಿಡ ಮೂಲಿಕೆಗಳ ಬಗ್ಗೆ ಯಾವ ವಿಶ್ವ ವಿದ್ಯಾನಿಲಯವು ತಿಳಿಯದ ಮಾಹಿತಿ ಗೊತ್ತಿದೆ. ಇವರಲ್ಲಿರುವ ಮಾಹಿತಿಯನ್ನು ಮುಂದಿನ ತಲೆಮಾರಿಗೆ ದಾಖಲಿಸಬೇಕು. ಮುಂದಿನ ಪರಂಪರೆಗೆ ಗೊತ್ತಾಗಬೇಕು. ಆಗ ಕಾಡು ಉಳಿಸುವ, ಬೆಳೆಸುವ ಬಗೆ ಹೇಗೆ ಅಂತ ಗೊತ್ತಾಗುತ್ತದೆ. ಮೂಲ ನಿವಾಸಿಗಳನ್ನು ಗೌರವಿಸಿ ಅವರ ಅಡವಿಯ ಜ್ಞಾನವನ್ನು ನಾವು ಎರವಲು ಪಡೆದುಕೊಳ್ಳಬೇಕು. ಕಾಡಿನೊಳಗೆ ಹೋಗುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಪೌಡರ್, ಸುಗಂಧ ದ್ರವ್ಯ ಹಾಕಿಕೊಂಡು ಹೋಗಬಾರದು. ಕಾಡಿನೊಳಗೆ ಹೋದಾಗ ಹೇಗಿರತ್ತೋ ಅದೇ ಮೂಲ ಸ್ಥಿತಿಯಲ್ಲಿ ಬಿಟ್ಟು ಬರಬೇಕು. ಅಷ್ಟು ಕೃತಜ್ಞತೆಯನ್ನಾದರೂ ಉಳಿಸಿಕೊಳ್ಳಬೇಕು. ಅಭಿವೃದ್ಧಿಯ ಹೆಸರಲ್ಲಿ ಎಲ್ಲವೂ ಕಾಡಿನ ಮೇಲೆ ಒತ್ತಡವನ್ನು ತರುತ್ತಿದೆ. ಇದು ಕಡಿಮೆಯಾಗಬೇಕು. ಕಾಡು, ನದಿ, ಬೆಟ್ಟ, ಗುಡ್ಡ ನೆಟ್ವರ್ಕ್ ಇಲ್ಲದೆ ಇರುವ ಜಾಗ ಕಾಡಿನ ಕೆಲಸ ಮಾಡ್ತಾ ಮಾಡ್ತಾ ಕರ್ನಾಟಕದ ಎಲ್ಲಾ ಕಾಡು ಅಭಯಾರಣ್ಯಗಳನ್ನು ಸುತ್ತಿದೆ. ಇಷ್ಟು ಕಡಿಮೆ ವಯಸ್ಸಿನಲ್ಲಿ ಹೆಚ್ಚು ಅನುಭವವಾದ ಖುಷಿ. ದಿನೇಶ್ ಹೊಳ್ಳ ಅವರ ವನಚೇತನ, ವನಬೆಳಕು ತಂಡದೊಂದಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳ ಜೊತೆಗೆ ಕೆಲಸ ಮಾಡುತ್ತೇನೆ. ಈಗ ಜರ್ನಲಿಸಂನಲ್ಲಿ ಮಾಸ್ಟರ್ಸ್ ಮುಗಿಸಿ ಕಾಡಿನೊಟ್ಟಿಗೆ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಕೆಲಸ ಮಾಡುತ್ತೇನೆ' ಎನ್ನುವ ಗಿರಿಯವರ ಪರಿಸರ ಕಾಳಜಿಯನ್ನು ಅರ್ಥ ಮಾಡಿಕೊಳ್ಳೋಣ.
ಕಾಡು, ಬೆಟ್ಟ, ಬಯಲು, ನದಿ ಒಟ್ಟಾರೆ ಇಡಿಯ ಪ್ರಕೃತಿ ನಮ್ಮದು. ನಾವು ಎಲ್ಲರೂ ಚಿಕ್ಕಂದಿನಿಂದ ಪರಿಸರ ರಕ್ಷಣೆಯ ಬಗ್ಗೆ ಓದಿದ್ದೇವೆ ಆದರೆ ಬಹುತೇಕರು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಅದನ್ನು ಹಾಳು ಮಾಡುತ್ತಿದ್ದೇವೆ. ಮತ್ತು ಪ್ರಕೃತಿ ಮನುಷ್ಯನದಷ್ಟೇ ಅಲ್ಲ ಎಲ್ಲ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳದ್ದೂ ಹೌದು. ಸಣ್ಣ ಹುಳುವೂ ಕೂಡ ತನ್ನ ಸುತ್ತಲಿನ ದೊಡ್ಡ ಪರಿಸರ ವ್ಯವಸ್ಥೆಯನ್ನು ಕಾಪಾಡಬಲ್ಲದು. ಎಲ್ಲ ಜೀವಜಾಲ ಸರಿಯಾಗಿ ಇದ್ದಾಗಲೇ ಪ್ರಕೃತಿ ಸಮತೋಲನದಲ್ಲಿರುತ್ತದೆ. ಅಭಿವೃದ್ಧಿ ಬೇಕು ಆದರೆ ಪ್ರಕೃತಿಯನ್ನು ನಾಶ ಮಾಡಿ ಅವೈಜ್ಞಾನಿಕವಾಗಿ ಮಾಡಬಾರದು. ನಮ್ಮ ಓಡಾಟಕ್ಕೆ, ನಮ್ಮ ಸ್ಥಳಗಳಿಗೆ ಬೇಗ ತಲುಪಬೇಕೆಂದು ನಿಸರ್ಗ ಕಡಿದು ದೊಡ್ಡ ದೊಡ್ಡ ಹೈವೇ, ರೈಲ್ವೇ ಹಳಿಗಳನ್ನು ಮಾಡಿಕೊಂಡು ಸಾವಿನ ಸ್ಥಳವನ್ನು ಬೇಗ ತಲುಪುತಿದ್ದೇವೆ. ಕೈಗಾರಿಕೆ, ರೆಸ್ಟೋರೆಂಟ್, ಕ್ಲಬ್ ಕಟ್ಟಿಕೊಂಡು ಉಸಿರಿಗಾಗಿ ಆಕ್ಸಿಜನ್ ಟ್ಯಾಂಕ್ ಕಟ್ಟಿಕೊಂಡು ಬದುಕುವಂತಾಗಬಾರದು. ಸರ್ಕಾರಗಳ ಕೆಲವು ದೊಡ್ಡ ಯೋಜನೆಗಳು ಅವುಗಳ ನಿರ್ಮಾಣದ ಜೊತೆಗೆ ಪ್ರಕೃತಿಯೊಂದಿಗೆ ನಮ್ಮ ಸಮಾಧಿಯನ್ನೂ ನಿರ್ಮಿಸಹೊರಟಿವೆ. ಇದನ್ನು ನಾವು ಖಂಡಿಸಬೇಕು. ನಮಗಾಗಿ ನಮ್ಮ ಮಕ್ಕಳಿಗಾಗಿಯಾದರೂ ಉತ್ತಮ ಪರಿಸರವನ್ನು ಉಳಿಸಬೇಕು. ಎಲ್ಲೋ ಕಾಡಿನ ಮರಕ್ಕೆ ಬಿದ್ದ ಕೊಡಲಿ ಪೆಟ್ಟು ಪರೋಕ್ಷವಾಗಿ ಮನುಷ್ಯನ ಬದುಕಿಗೆ ಕೊಳ್ಳಿಯಾಗುತ್ತದೆ. ನಾವು ಪ್ರಕೃತಿಯ ಭಾಗ ಪ್ರಕೃತಿ ನಮ್ಮ ಭಾಗವಲ್ಲ, ನಾವಿಲ್ಲದೆ ಪ್ರಕೃತಿ ಇರುತ್ತದೆ ಆದರೆ ಪ್ರಕೃತಿಯಿಲ್ಲದೆ ನಾವಿರಲು ಸಾಧ್ಯವಿಲ್ಲ. ನಮ್ಮ ಹಿಂದಿನವರು ಅದನ್ನು ಬೆಳೆಸಿ ಉಳಿಸದೇ ಇದ್ದಿದ್ದರೆ ನಾವಿಂದು ಉಳಿಯುತ್ತಿರಲಿಲ್ಲ. ಹಾಗೆಯೇ ನಾವಿಂದು ನಿಸರ್ಗವನ್ನು ಉಳಿಸಿದರೆ ಮುಂದಿನ ಪೀಳಿಗೆ ಉಳಿಯುತ್ತದೆ. ನಿಸರ್ಗವನ್ನು, ಅದರ ಮಹತ್ವವನ್ನು ನಾವು ತಿಳಿಯೋಣ ಮಕ್ಕಳಿಗೆ ತಿಳಿಸೋಣ. ನಿಸರ್ಗವನ್ನು ಬೆಳೆಸೋಣ ಉಳಿಸೋಣ.
ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.