Date: 12-04-2022
Location: ಬೆಂಗಳೂರು
'ಕಡಕೋಳದ ನೆಲದಲ್ಲಿ ಹುಟ್ಟುವುದೇ ಸಾರ್ಥಕ್ಯ ಎನ್ನುವುದು ಅನುಭವಜನ್ಯ ಮಾತು. ಅದು ಮಡಿವಾಳಪ್ಪ ಮತ್ತವರ ಶಿಷ್ಯೋತ್ತಮರು ನಡೆದಾಡಿದ ಮತ್ತು ಪದ ಹಾಡಿದ ನೆಲ. ಅವರ ಹಾಡು ಧ್ವನಿ ತರಂಗಗಳ ಭಾವ ಸಂಚಾರಿ ನೆಲ. ಕಡಕೋಳ ನೆಲದಲ್ಲಿ ಒಡನಾಡುವುದೇ ಸೌಭಾಗ್ಯ ಮತ್ತು ಅಮಿತ ಸಂತಸ' ಎನ್ನುತ್ತಾರೆ ಹಿರಿಯ ಲೇಖಕ, ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ಕಡಕೋಳದ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಕಡಕೋಳ ಮಡಿವಾಳಪ್ಪನವರ ಕುರಿತು ಬರೆದಿದ್ದಾರೆ.
ಕಷ್ಟಪಟ್ಟು ಕಡಕೋಳಕ್ಕೆ ಹೋದರ /
ಕಡಿಮೇನವ್ವ ಅಲ್ಲಿ ತೊಡಕೇನವ್ವ//
ಮೃಡ ಮಹಾಂತೇಶನ ಪಾದವ
ಹಿಡಿಬೇಕವ್ವ ಅಲ್ಲಿ ದುಡಿಬೇಕವ್ವ//
ಇದು ಶ್ರಮಸಂಸ್ಕೃತಿ ಪ್ರತೀಕದ ಮಡಿವಾಳಪ್ಪನವರ ಪ್ರೀತಿಯ ತತ್ವಪದ. ಅನ್ನ ಮತ್ತು ಜ್ಞಾನದ ಮಾರ್ಗಸೂಚಿ. ಶುದ್ಧ ಕಾಯಕ ಪ್ರಜ್ಞೆಯ ಶ್ರಮಶ್ರದ್ಧೆ ಜತೆಗೆ ಕಡಕೋಳದ ಮಹತ್ವವನ್ನು ಅದು ಸಾರುತ್ತದೆ. ಕಡಕೋಳದ ನೆಲದಲ್ಲಿ ಹುಟ್ಟುವುದೇ ಸಾರ್ಥಕ್ಯ ಎನ್ನುವುದು ಅನುಭವಜನ್ಯ ಮಾತು. ಅದು ಮಡಿವಾಳಪ್ಪ ಮತ್ತವರ ಶಿಷ್ಯೋತ್ತಮರು ನಡೆದಾಡಿದ ಮತ್ತು ಪದ ಹಾಡಿದ ನೆಲ. ಅವರ ಹಾಡು ಧ್ವನಿ ತರಂಗಗಳ ಭಾವ ಸಂಚಾರಿ ನೆಲ. ಕಡಕೋಳ ನೆಲದಲ್ಲಿ ಒಡನಾಡುವುದೇ ಸೌಭಾಗ್ಯ ಮತ್ತು ಅಮಿತ ಸಂತಸ. ಮಡಿವಾಳಪ್ಪ ನಮ್ಮ ಬದುಕಿನ ಪ್ರತಿನಿಧಿ ಮಾತ್ರವಲ್ಲ ನಮ್ಮೆಲ್ಲರ ಆಸೆ, ಆಸ್ಥೆ ಮತ್ತು ಆತ್ಮಸಖ್ಯದ ಸಂಗಾತಿ. ಮಡಿವಾಳಪ್ಪ ಎಂದರೆ ಕಡಕೋಳ ಮತ್ತು ಕಡಕೋಳ ಎಂದರೆ ಮಡಿವಾಳಪ್ಪ. ಕಡಕೋಳ ಮತ್ತು ಮಡಿವಾಳರ ಈ ಎರಡರ ಜೀವಬೆಸುಗೆ ಎಂದೂ ಬೇರ್ಪಡಿಸಲಾಗದು.
ಅಂತಹ ಕಡಕೋಳ ಪರಿಸರದಲ್ಲಿ ಮನೆ ಮಾತಾದ ಹತ್ತು ಹಲವು ನುಡಿಗಟ್ಟುಗಳಿವೆ: ಸತ್ತು ಹೋದುದ್ದಕ್ಕೆ ಯಾಕಳ್ತಿಯೋ ಕತ್ತೆಮೂಳ. ಕಡಕೋಳದಲ್ಲಿ ಕತ್ತೆ ಕೂಗಿದರೂ ಶಾಸ್ತ್ರೋಕ್ತವಾಗಿರ್ತದೆ. ಕಡಕೋಳದಾಗ ಕಾಗೆ ಜೀವನವೂ ಪಾವನ. ಖಂಡಿತ ಆದವನೇ ಪಂಡಿತ. ಕರಕಿ ಬೇರು, ವರತಿ ನೀರು. ಭಾವ ಶುದ್ಧವಿದ್ದರೆ ಭಾಗ್ಯಕ್ಕೇನು ಕಡಿಮೆ. ಕಡಕೋಳ ಮಣ್ಣಿನ ಇಂತಹ ಅನೇಕ ಮಾತುಗಳು ವೇದಸದೃಶದ ಗಾದೆಗಳಾಗಿವೆ. ಹೌದು ಅದು ನೆಲಧರ್ಮದ ನುಡಿಕಾರರ ನಾಣ್ಣುಡಿ ಎಂತಲೇ ಹೇಳಬಹುದು.
ಮೂಕನಾಗಬೇಕೋ/ ಜಗದೊಳು ಜ್ವಾಕ್ಯಾಗಿರಬೇಕೋ//
ಅಬ್ಬಾ! ಇದು ಪ್ರಖರ ಪ್ರತಿಭಟನೆಯ ಸೂಕ್ಷ್ಮ ರೂಪಕ. ಮೌನವೇ ಜಗತ್ತಿನ ಸಮೃದ್ಧ ಭಾಷೆಯೆಂಬ ಆಧುನಿಕೋತ್ತರ ಕಾವ್ಯ ಮೀಮಾಂಸೆಯನ್ನು ನಿವಾಳಿಸುವಂತಹ ಪ್ರತಿಮಾ ಕಾವ್ಯ. ಹೌದು ಅಲ್ಲಗಳೆರಡಕ್ಕು ಮೂಕರಾಗುವ ಮೂಲಕ ತೋರುವ ಅದು ಅಕ್ಷರಗಳ ಭಾಷೆ ಮೀರಿದ ಮೌನ ಪ್ರತಿಭಟನೆ. ಆತ್ಮನಿವೇದನೆ. ಕಡಕೋಳದಲ್ಲಿ ಇವತ್ತಿಗೂ ಶಾಂತ ಚಿತ್ತದಿಂದ ಕುಂತು ನೋಡುವ, ಕೇಳುವ ಚಮತ್ಕಾರದ ಕುಶಲಿಗರು. ತಮಗೆ ತಾವೇ ತತ್ವಪದತ್ವದ ನಾದಕ್ಕೆ ಅರ್ಥ ಕಂಡುಕೊಳ್ಳುವ ಜನಪದರು. ಹೌದು ನಮ್ಮೂರಲ್ಲಿ ಇಂತಹ ನೂರಾರು ಆತ್ಮ ಚರಿತ್ರೆಗಳಿವೆ. ಅವರು ಇಂದಿಗೂ ದಾಖಲೆಗೆ ಸಿಗದ ಮೋಸ ಹೋಗಬಹುದಾದ ಪ್ರಾಪಂಚಿಕ ಮುಗ್ಧತೆಯನ್ನು ಉಳಿಸಿಕೊಂಡವರು.
ದೇಹಕ್ಕೆ ಬರುವ ಜಡ್ಡು ಜಾಪತ್ರಿಯಿಂದ ಹಿಡಿದು ತಮ್ಮೆಲ್ಲ ಭವರೋಗಗಳಿಗೂ ಮಡಿವಾಳಪ್ಪನಲ್ಲೇ ಮದ್ದು ಹುಡುಕಿಕೊಳ್ಳುವ ನಂಬಿಕಸ್ತರು. ನಮ್ಮ ಸಂತಸ ಸಂಕಟ ಏನೇ ಇರಲಿ, ಪ್ರತಿನಿತ್ಯವೂ ಮಡಿವಾಳಪ್ಪನ ಗದ್ದುಗೆಗೆ ಪ್ರದಕ್ಷಿಣೆ ಹಾಕಿ ಹಣೆಹಚ್ಚಿ ಕ್ಷಣ ಕಾಲ ನಮಿಸುವುದು. ಗದ್ದುಗೆ ಕಟ್ಟೆಯಲ್ಲಿಟ್ಟಿರುವ ಆಧಾರದ ಬೂದಿಯನ್ನು ಹಣೆಗೆ ಹಚ್ಚಿಕೊಂಡು ಅದರಲ್ಲೇ ಚಿಟಿಕೆಯಷ್ಷು ನಾಲಗೆಗೆ ಉದುರಿಸಿಕೊಂಡರೆ ಮುಗೀತು. ಬಾಹ್ಯಾಡಂಬರದ ಭಕ್ತಿ ಪೂಜೆಗಳಿಗಿಂತ ಇದರಲ್ಲೇ ಜೀವಕ್ಕೆ ಹಳಾರ. ಅದು ಅನಾದಿಯಿಂದಲೂ ಅನೂಚಾನ ನಡಕೊಂಡು ಬಂದ ಮಹಾ ಸಂಕಲ್ಪದ ನಡೆ. ಅದೊಂದು ತೆರನಾದ ಯತಾರ್ಥ ಆಚರಣೆ. ಮತ್ತೊಂದು ಬಗೆಯಲ್ಲಿ ಅರ್ಥೈಸುವುದಾದರೆ ಏಕಾಂತ ಮತ್ತು ಲೋಕಾಂತಗಳೆರಡರ ಅನಿಕೇತನ ಪ್ರಜ್ಞೆ.
ಮಾಡಿ ಉಣ್ಣೋ ಬೇಕಾದಷ್ಟು/
ಬೇಡಿ ಉಣ್ಣೋ ನೀಡಿದಷ್ಟು// ಮಾಡಿದವನಿಗಾದ ಮಡಿಗಡಬ/ ಮಾಡದವನಿಗೆ ಬರಿ ಲಡಬ//
ಹೀಗೆ ದುಡಿದುಣ್ಣುವ ಹಕ್ಕು ಮತ್ತು ದುಡಿಯದೇ ಬೇಡಿ ಉಣ್ಣುವುದಾದರೆ, ನೀಡಿದಷ್ಟು ಉಣ್ಣುವ ಎರಡರ ಮಹತ್ವವನ್ನು ಮಡಿವಾಳಪ್ಪ ಮಾರ್ಮಿಕವಾಗಿ ಹೇಳಿದ್ದಾರೆ. ಜಗತ್ ಪ್ರಸಿದ್ಧನಾದ ಕಾರ್ಲ್ ಮಾರ್ಕ್ಸ್ ಗಿಂತಲೂ ಬಹಳ ಹಿಂದೆಯೇ ದುಡಿಯುವ ಮತ್ತು ದುಡಿದದ್ದಕ್ಕೆ ಹಕ್ಕಿನಿಂದ ಪ್ರತಿಫಲ ಪಡೆದುಣ್ಣುವ ಶ್ರಮಸತ್ವದ ಜೀವಸತ್ಯಗಳನ್ನು ಮಡಿವಾಳಪ್ಪ ನಿರ್ಭಿಡೆಯಿಂದ ಹೇಳಿದ್ದಾನೆ. ಆದರೆ ಮಡಿವಾಳಪ್ಪ ಮಾತ್ರ ರೂಢಿ ಪ್ರಚಾರಕ್ಕೆ ಬರಲಿಲ್ಲ. ಮಡಿವಾಳ ಪ್ರಣೀತ ಬೆವರು ಮತ್ತು ಭಕ್ತಿಯ ಶಕ್ತಿ ನೂರಿನ್ನೂರು ವರ್ಷಗಳ ಕಾಲ ಸಾಮಾನ್ಯ ಜನರ ನಾಲಗೆಯ ನುಡಿಗಡಲಲ್ಲೇ ನಲಿದಾಡುವಂತಾಯಿತು.
ಇರಬಹುದು, ಅಂತಹ ಬಸವಣ್ಣನನ್ನೇ ಎಂಟುನೂರು ವರ್ಷಗಳಷ್ಟು ಕಾಲ ತಡವಾಗಿ ಗುರುತಿಸಿದವರು ನಾವು. ಮಡಿವಾಳಪ್ಪ ಕಡೆಯಪಕ್ಷ ನೂರಿನ್ನೂರು ವರ್ಷ ತಡವಾಗಿ ಗೊತ್ತಾಗುತ್ತಿರುವುದು ಅಚ್ಚರಿ ಏನಲ್ಲ. ಹೌದು ತತ್ವಪದಗಳ ಕಾಲಮಾನವನ್ನು ವಚನ ಚಳವಳಿಯಂತೆ ಚರಿತ್ರೆಕಾರರು ಮತ್ತು ಭಲೇ ಭಲೇ ಕಾವ್ಯ ಮೀಮಾಂಸೆಕಾರರು ಗುರುತಿಸಲಿಲ್ಲ. ತತ್ವಪದಕಾರರ ಯುಗವನ್ನೇ ಕತ್ತಲೆಯುಗ ಎಂದು ಬೀಸು ನಿರ್ಲಕ್ಷ್ಯದಿಂದ ಕರೆದದ್ದುಂಟು. ತತ್ವಪದಗಳನ್ನು ಅಮವಾಸ್ಯೆಯ ಕತ್ತಲೆಗೆ, ಸತ್ತವರ ಮನೆಯ ಹೆಣಗಳ ಸನ್ನಿಧಾನದ ಆಹೋರಾತ್ರಿ ಭಜನೆಗಳಿಗೆ ಸೀಮಿತ ಗೊಳಿಸಲಾಯಿತು. ಇವತ್ತಿಗೂ ಕಡಕೋಳ ಮಠದಲ್ಲಿ ಹುಣ್ಣಿಮೆಗೆ ಬದಲು ಅಮವಾಸ್ಯೆಯನ್ನೇ ಅನನ್ಯವಾಗಿ ಆಚರಿಸಲಾಗುವುದು. ಅದು ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಹಾದಿಯ ಸಾಧನೆ.
ಚಿಮ್ಮು ಹಲಗೆ:
ಚನೋತ್ತರ ಕಾಲದ ಸ್ವರವಚನ ಸಾಹಿತ್ಯ ಮತ್ತು ಅನುಭಾವ ಚರಿತ್ರೆಯ ಕಥನಗಳು ವಿಶ್ವ ವಿದ್ಯಾಲಯಗಳ ವಿದ್ವಾಂಸರಿಗೆ ಪಿಎಚ್. ಡಿ. ಪದವಿಗಳ ವಸ್ತುವಾಗಿ, ಇಲ್ಲವೇ ಅವರ ವಿದ್ವತ್ಪೂರ್ಣ ಭಾಷಣಗಳ ಆಕರ ಪದಗಳಾಗಿ, ಮತ್ತೆ ಕೆಲವರ ಮೋಡಿ ಮಾತುಗಳ ಒಮ್ಮುಖ ಪಂಥಮಾರ್ಗದ ಚಿಮ್ಮುಹಲಗೆಯಾಗಿ ಬಳಕೆ ಆದದ್ದೇ ಅಧಿಕ. ಅದು ಅವರವರ ವ್ಯಕ್ತಿತ್ವ ಬೆಳವಣಿಗೆಗೆ ಕಂಡಾಪಟಿ ಸಹಾಯಕವಾಯಿತು. ಆದರೆ ಅದೇ ಅವರಿಂದ ಯಾವುದೇ ರೀತಿಯ ಲೋಕೋಪಯೋಗಿ ನೆರವು ದೊರಕದಿರುವುದೇ ಐತಿಹಾಸಿಕ ದುರಂತ.
ಲೋಕ ಮಾನಸದಲ್ಲಿ ತತ್ವಪದಗಳಿಗೆ ಎಲ್ಲಕಾಲಕ್ಕೂ ಮುಗಿಲೆತ್ತರದ ಸ್ಥಾನಮಾನ. ಅಂತಹ ಲೋಕಮಾನ್ಯ ಅವಧೂತ ಪರಂಪರೆ ಕಡಕೋಳ ಸೀಮೆಯಲ್ಲಿ ಯಥೇಚ್ಛವಾಗಿದೆ. ದಲಿತರು, ಮುಸ್ಲಿಮರಾದಿಯಾಗಿ ಪ್ರತಿಯೊಂದು ಓಣಿಯಲ್ಲಿ ಮಡಿವಾಳಪ್ಪನ ಪದ ಹಾಡುವ ಟಂಕಸಾಲೆಗಳಿವೆ. ಅದು ಕೇವಲ ಹಾಡುಗಾರಿಕೆಯ ಹೆಗ್ಗಳಿಕೆ ಅಲ್ಲ. ಅಲ್ಲಿನ ನಮ್ಮೆಲ್ಲರ ನಿತ್ಯಬದುಕಿನ ವಿಧಾನವೇ ಅದಾಗಿವೆ. ಮಡಿವಾಳಪ್ಪನ ತತ್ವಪದಗಳ ಭಜನೆ ಎಂದರೆ ಅದು ಅನುಭಾವದ ಸಮಾಗಮ. ಅವೆಲ್ಲ ಕಡಕೋಳ ನೆಲದ ನೆನಪು ಧರ್ಮ ಧಾರೆಗಳು. ಗುಡ್ಡದ ಕೆಳಗೆ ಜುಳು ಜುಳು ಹರಿಯುವ ಹಿರೇ ಹಳ್ಳದಷ್ಟೇ ಸರಳದ ನೀರ ನೆರಳುಗಳು. ಸ್ಥಾವರದ ಕೂಪ, ಶೋ ಕೇಸ್ ಅಕ್ವೇರಿಯಂ ನೀರ ನೆರಳಲ್ಲ.
ಅಲ್ಯಾಕೋ ಹುಡುಕುತಿ/ ಇಕೋ
ಇಲ್ಯಾದ ನೋಡ ಮುಕುತಿ//
ಎಂಬುದು ಮುಕ್ತಿ ಕಾಣ್ಕೆ ಮಾರ್ಗದ ಹಗುರ ಹಾದಿಯ ಹುಡುಕಾಟ. ಪಂಡಿತ ಪ್ರಣೀತ ಅಧ್ಯಾತ್ಮದ ಶುಷ್ಕತೆಗಳನ್ನೆಲ್ಲ ಅಗದೀ ಸರಳವಾಗಿ ದಾಟುವುದನ್ನು ನಮ್ಮವರು ಕಲಿತು ಕೊಂಡವರು. ತನ್ನ ತಾ ತಿಳಿವ ಗುರುಮನಿ ಕೀಲ ಅರಿಯುವಂತೆ ಮನೆ ಮನೆಯಲ್ಲೂ ಮಡಿವಾಳಪ್ಪನ ತತ್ವಪದಗಳ ಬೀಜಮಂತ್ರ ಪಠಣ. ಆ ಪದಗಳ ಅನುಸಂಧಾನ. ಹಾಗೆ ತತ್ವಪದಗಳಲ್ಲಿ ತಾದಾತ್ಮ್ಯಗೊಳ್ಳುತ್ತಲೇ ನಿತ್ಯ ಬದುಕಿನ ನಿರಂತರ ಸಮೀಕರಣ. ಅದು ವೈದಿಕ್ಯ ವಿರೋಧಿ ಮಡಿವಾಳ ಪ್ರಜ್ಞೆಯ ಸಾಕ್ಷೀಭಾವ.
ಅಂತಹ ಹತ್ತು ಹಲವು ದಿವಿನಾದ ದೃಷ್ಟಾಂತಗಳು ನನ್ನ ಬಾಲ್ಯಕ್ಕಂತು ದಟ್ಟವಾಗಿ ದಕ್ಕಿವೆ. ನಮ್ಮ ಮನೆಯಲ್ಲೇ ಅಂತಹ ವಾತಾವರಣವಿತ್ತು. ಮಾತು ಮಾತಿಗೂ ಮಡಿವಾಳಪ್ಪನ ಪದಗಳ ಉಲ್ಲೇಖ. ನಿತ್ಯ ಬದುಕಿನ ಎಲ್ಲ ಸಂಕಟಗಳಿಗೂ ಸಮಜಾಯಿಷಿ ನೀಡುವ ಮಡಿವಾಳಪ್ಪನೇ ಆಪ್ತ ಸಮಾಲೋಚಕ. ನಮಗೆ ಮಡಿವಾಳನೆಂಬುದು ಬರೀ ದೈವವಲ್ಲ, ತಾಯಿ ಮತ್ತು ತಾಯ್ತನ ತುಂಬಿದ ಅಂತಃಕರಣದ ಮಹಾಮೊತ್ತ. ಮಹೋನ್ನತ ಮಹಾಯಾನ. ಸಾರ್ವಕಾಲಿಕ ಎಚ್ಚರ. ಅದು ಮಡಿವಾಳ ಪ್ರಭುವಿನ ಮನುಷ್ಯ ಸಂಬಂಧಗಳ ಸಾತತ್ಯ. ಅಲ್ಲಮನೊಂದಿಗೆ ಸಮೀಕರಿಸಿದಂತೆ ಹಿರಿಯರನೇಕರು ಮಡಿವಾಳಪ್ಪನನ್ನು ಮಡಿವಾಳಪ್ರಭು ಎಂತಲೇ ಸ್ತುತಿಸುತ್ತಾರೆ.
ನಮ್ಮವರು ಹಾಕುವ ಸಂತಸದ ಜೈಕಾರಗಳಲ್ಲಿ ಮಹಾಂತನಿಗೇ ಮೊದಲಸ್ಥಾನ. ತದನಂತರ ಮಡಿವಾಳಪ್ಪ ಮತ್ತು ಏಕಕಾಲಕ್ಕೆ ಮಹಾಂತ ಮಡಿವಾಳೇಶ್ವರ ಮಹಾರಾಜಕಿ ಜೈ. ಇವು ನಿತ್ಯ ನಿರಂತರ ಹಾಕುವ ಜೈಕಾರಗಳು. ಮೇಲ್ನೋಟದಲ್ಲಿ ಸಾಮಾನ್ಯವಾಗಿ ತೋರುವ ಇವುಗಳಲ್ಲಿ ಗುರುಶಿಷ್ಯ ಮಾರ್ಗ ಪರಂಪರೆಯ ಅನನ್ಯತೆಗಳನ್ನು ಗುರುತಿಸಬಹುದು. ಆದರೆ ಮಡಿವಾಳಪ್ಪ ನಮ್ಮನೆಲದ ಸಾಂಸ್ಕೃತಿಕ ನಾಯಕನೆಂಬ ಹಮ್ಮು ಬಿಮ್ಮು ನಮ್ಮದು. ನಮ್ಮೆಲ್ಲ ಆಗು ಹೋಗು, ಕೊಡು ಕೊಳ್ಳುವಿಕೆಗಳು ಮಡಿವಾಳಪ್ಪನ ಮೂಲಕವೇ ಆಗು ಮಾಡುತ್ತೇವೆ. ಈ ಅಭಿಮಾನ ಎಂತಹುದೆಂದರೆ ಹೆಣ್ಣು ಗಂಡುಗಳೆನ್ನದೇ ದಲಿತರಾದಿಯಾಗಿ ಎಲ್ಲ ಜಾತಿಯಲ್ಲೂ ಊರು ತುಂಬಾ ಮಹಾಂತ ಮಡಿವಾಳರ ಹೆಸರುಗಳದ್ದೇ ಒಡ್ಡೋಲಗ.
ಎಲ್ಲೋ ಹುಡುಕಿದೆ ಇಲ್ಲದ ದೇವರ,
ಕಲ್ಲು ಮಣ್ಣುಗಳ ಗುಡಿಯೊಳಗೆ.
ಇದು ನಮ್ಮ ಈ ಕಾಲದ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರ ಕವಿತೆ. ಹದಿನೇಳನೇ ಶತಮಾನದಲ್ಲೇ ಕಡಕೋಳ ಮಡಿವಾಳಪ್ಪ ಇಂತಹದ್ದೇ ತತ್ವಪದ ಗಟ್ಟಿ ಆಶಯಗಳಿಂದ ಕಟ್ಟಿ ಹಾಡಿದ್ದು ಹೀಗೆ :
ಎಂಥಾ ಕಂಡಾಪಟ್ಟಿ ಸೂಳೆ ಮಕ್ಕಳಿವರೋ/ ಸಾಧು
ಸಂತರನ್ನು ಕಂಡರೆ ನಿಂದೆ ಆಡ್ತಿಹರೋ//
ಪುಣ್ಯದಿಚ್ಛೆಗಾಗಿ ಯಾತ್ರೆ ಮಾಡುವರೋ/ನದಿಯೊಳು
ಕಣ್ಣು ಮೂಗು ಬಾಯಿ ಮುಕಳಿ ತೊಳಕೊಂಬುವರೋ//
ಅನ್ಯಾಯದ ಮಾತು ಒಂದೂ ಅರಿಯರೋ/ ಇಂಥ
ಟೊಣ್ಣೆ ಸೂಳೆಮಕ್ಕಳಿಗಿನ್ನು ಯಾರು ಹೇಳುವರೋ//
ಕಲ್ಲು ಮಣ್ಣು ದೇವರೆಂದು ಪೂಜೆ ಮಾಡುವರೋ/ ಬಹಳ
ಬಲ್ಲಿದರು ಬಂದರೆ
ಕೊಲ್ಲು ಎಂಬುವುರೋ//
ಮುನ್ನೂರು ವರ್ಷಗಳಷ್ಟು ಮುನ್ನವೇ ಮಡಿವಾಳಪ್ಪ ಹಸಿಗೋಡೆಗೆ ಹರಳು ಹೊಡೆದಂತೆ ಹಾಡಿದ ಜನಸಂಸ್ಕೃತಿಯ ಇಂತಹ ಗಟ್ಟಿಮುಟ್ಟಾದ ಹಾಡುಗಳು ಸಾಂಸ್ಕೃತಿಕ ಜಗತ್ತಿಗೆ ತಡವಾಗಿ ಮುಟ್ಟುತ್ತಲಿವೆ. ಶಿಶುನಾಳ ಶರೀಫರಿಗಿಂತ ಅರ್ಧ ಶತಮಾನಕ್ಕೂ ಹಿಂದೆಯೇ ಬದುಕಿ ಬಾಳಿದವರು ಕಡಕೋಳ ಮಡಿವಾಳಪ್ಪ. ಅವರ ಸಾಧಕ ಪರಂಪರೆಯನ್ನು ಮುಕ್ಕಾಗದಂತೆ ಮತ್ತು ಮುಪ್ಪಾಗದಂತೆ ಮುನ್ನಡೆಸುತ್ತಿರುವ ಅಗಾಧ ಪ್ರಮಾಣದ ಗುರುಶಿಷ್ಯ ಪರಂಪರೆಯೇ ಇದೆ. ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕಡಕೋಳದಲ್ಲಿ ಮಡಿವಾಳಪ್ಪನವರೇ ಖುದ್ದು ಕಟ್ಟಿದ ಮಹಾ ಮಠದಲ್ಲಿ ಅವರ ಕರ್ತೃಗದ್ದುಗೆ ಇದೆ. ಅದರ ಹಿಮ್ಮುಖದಲ್ಲಿ ಜೀವಂತ ಸಮಾಧಿಸ್ಥರಾದ ಅವರ ಚೈತನ್ಯ ಗದ್ದುಗೆ. ಅವರು ಮರಣವೇ ಮಹಾನವಮಿ ಎನ್ನುವ ಇಚ್ಛಾಮರಣಿ.
ಮಡಿವಾಳಪ್ಪನವರದು ಬಹುದೊಡ್ಡ ಶಿಷ್ಯಪರಂಪರೆ. ಲೋಕಮಾನ್ಯತೆಯ ಹೇಳಿಕೆಯೊಂದರ ಮಾಹಿತಿಯಂತೆ ಅವರಿಗೆ ಹನ್ನೊಂದು ನೂರುಮಂದಿ ಶಿಷ್ಯರು. ಹನ್ನೊಂದು ನೂರು ತತ್ವಪದಗಳು, ಹನ್ನೊಂದು ನೂರು ಮಂಗಳಾರತಿ ಪದಗಳು. ಹನ್ನೊಂದರ ಮ್ಯಾಲ ಇನ್ನೊಂದಿಲ್ಲೆಂದನು ಚಿನ್ನ ಗುಡ್ಡದಯೋಗಿ ನೀ ದಯಾಸಿಂಧು ಎಂದು ಅವರೇ ಹೇಳಿದ್ದುಂಟು. ಅಲ್ಲದೇ ನೂರೆಂಟು ನಾಮಾವಳಿ ಮತ್ತು ಗಾಳಿಪೂಜೆ ವಚನಗಳು. ಅಲ್ಲಮನ ಅನುಭಾವದ ಮಹಾಬಯಲು ನೆನಪಿಸುವ, ಕನಸಿನೆಚ್ಚರಗಳ ನಿಗೂಢಾರ್ಥದ ನೂರೆಂಟು ಸ್ವರ ವಚನಗಳು. ಅಂತಹ ರಹಸ್ಯ ವಿಚಾರ ವಿನ್ಯಾಸಗಳ ಅಧ್ಯಯನ ಆಗಬೇಕಿದೆ.
ಹನ್ನೊಂದು ನೂರು ಮಂದಿ ಸಾಧಕ ಶಿಷ್ಯವೃಂದದಲ್ಲಿ ಅನೇಕರು ತತ್ವಪದಕಾರರು ಇದ್ದಾರೆ. ಅವರಲ್ಲಿ ಖೈನೂರು ಕೃಷ್ಣಪ್ಪ, ಕಡ್ಲೇವಾಡ ಸಿದ್ಧಪ್ಪ, ಅಮರಖೇಡದ ಮುರಿಗೆಪ್ಪ, ಜೀರ ರಾಮಪ್ಪ, ಭಾಗಮ್ಮ ಗೌಡ್ತಿ ಇನ್ನೂ ಅನೇಕರು. ಮಡಿವಾಳಪ್ಪನವರ ಮತ್ತೊಂದು ಸ್ವರವಚನದ ಪ್ರಕಾರ ನೋಡುವುದಾದರೆ :
ಸುಳ್ಳೇ ಹದಿನೇಳ್ನೂರೈವತ್ತು ಸ್ವರವಚನಗಳು/
ಸುಳ್ಳೇ ಮಾಡಿದ ಡುಳ್ಳೆ ಎಂಬ ಸ್ವರವಚನದಂತೆ ಹದಿನೇಳು ನೂರಾ ಐವತ್ತು ಪದ ವಚನಗಳೆಂತಲೂ ಪರಿಗಣಿಸಬಹುದಾಗಿದೆ.
ಸೆಡ್ಡು ಹೊಡೆಯುವ ಸೇನಾಪಡೆ:
ತತ್ವಪದ ಸಾಹಿತ್ಯದ್ದು ಬಸವೋತ್ತರ ಬಹುದೊಡ್ಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿ ಎಂತಲೂ ಹೇಳಬಹುದು. ಕರ್ನಾಟಕದಲ್ಲಿ ಐದುನೂರಕ್ಕು ಅಧಿಕ ಪ್ರಮಾಣದ ತತ್ವಪದಕಾರರು ಆಗಿ ಹೋಗಿದ್ದಾರೆ. ಕಡಕೋಳ ಮಡಿವಾಳಪ್ಪನವರಿಗೆ ಅವರಲ್ಲಿ ಅಗ್ರಮಾನ್ಯ ಸ್ಥಾನ. ಅವರನ್ನು ತತ್ವಪದಕಾರರ ಅಲ್ಲಮನೆಂದೇ ಗುರುತಿಸಬಹುದು. ಅಂತೆಯೇ ಮಡಿವಾಳಪ್ಪ ಅನುಭಾವದ ಹರಿಕಾರನೆಂದೇ ನಾಮಾಂಕಿತರು. ಕಡಕೋಳದಲ್ಲಿ ಆಗ ಮಡಿವಾಳಪ್ಪನವರು ಅನುಭವ ಮಂಟಪ ಮಾದರಿಯಲ್ಲಿ ತತ್ವಜ್ಞಾನದ ಗೋಷ್ಠಿ ನಡೆಸಿದ್ದಾರೆ. ಬಹುಶಃ ಅದಕ್ಕೊಂದು ಸಾಧುರ ಮ್ಯಾಳದ ಮಾದರಿಯ ಹೆಸರು ಇದ್ದೀತು. ಅದೆಲ್ಲವೂ ಸಂಶೋಧನೆಗಳಿಂದ ಖಚಿತವಾಗಬೇಕು. ಸರಕಾರವು ತತ್ವಪದಗಳ ಸಮಗ್ರ ಅಧ್ಯಯನ ಮತ್ತು ಸಂಶೋಧನೆಗಾಗಿ ಕಡಕೋಳದಲ್ಲಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಬೇಕಿದೆ.
ಮಡಿವಾಳಪ್ಪನವರ ತತ್ವಜ್ಞಾನ ಮ್ಯಾಳದ ಸಂವಾದದಲ್ಲಿ ಹೆಣ್ಣು ಗಂಡೆನ್ನದೇ, ಜಾತಿ ಮತಗಳನ್ನದೇ ಎಲ್ಲರೂ ಭಾಗವಹಿಸುತ್ತಿದ್ದರು. ಬ್ರಾಹ್ಮಣ ಜಾತಿಯ ಖೈನೂರು ಕೃಷ್ಣಪ್ಪ, ಕಬ್ಬಲಿಗರ ಕಡ್ಲೇವಾಡ ಸಿದ್ಧಪ್ಪ, ಹೂಗಾರ ಕುಲದ ಜೀರ ರಾಮಪ್ಪ, ಮುಸ್ಲಿಮನಾದ ಚನ್ನೂರ ಜಲಾಲಸಾಹೇಬ, ಲಿಂಗವಂತರ ಭಾಗಮ್ಮ, ಬಸ್ಲಿಂಗಮ್ಮ ಹೀಗೆ ಎಲ್ಲ ಜಾತಿ ಮತ ಧರ್ಮಗಳ ಕಾಯಕ ಜೀವಿಗಳು ಭಾಗವಹಿಸುತ್ತಿದ್ದರು. ನಾನಾ ಜ್ಞಾನಸಾರಗಳ ಮೂಲಕ ಇಹಪರ ಜೀವ ಪಾರಮ್ಯಗಳ ಜ್ಞಾನ ಸಂವಾದ ಜರುಗುತ್ತಿತ್ತು. ಅದು ಲಿಂಗ, ವರ್ಣ, ವರ್ಗ ತಾರತಮ್ಯಗಳ ವಿರುದ್ಧ ಸೆಟೆದು ನಿಲ್ಲುವ, ಧಾರ್ಮಿಕ ಬಂಡವಾಳಶಾಹಿಗಳ ವಿರುದ್ಧ ಸೆಡ್ಡು ಹೊಡೆಯುವ ತತ್ವಪದಕಾರರ ಸೇನಾಪಡೆಯೇ ಆಗಿತ್ತು.
ಒಮ್ಮೆ ಅಂತಹ ಸಂವಾದ ಚನ್ನೂರ ಜಲಾಲಸಾಹೇಬ ಮತ್ತು ಕಡಕೋಳ ಮಡಿವಾಳಪ್ಪನ ನಡುವೆಯೇ ನಡೆಯುತ್ತದೆ. ಅವರ ಸ್ವಾಸ್ಥ್ಯಪೂರ್ಣ ಸಂವಾದದಿಂದ ಎರಡು ಮಹತ್ವದ ತತ್ವಪದಗಳು ಜಾತಿ ನಿರಸನದ ಸಾಕ್ಷಿಪ್ರಜ್ಞೆಯ ನಿದರ್ಶನಗಳಾಗಿ ವರ್ತಮಾನದ ನಮ್ಮನ್ನು ಜೀವಂತವಾಗಿರಿಸಿವೆ.
ಜಲಾಲ ಸಾಹೇಬರು ಹಾಡಿದ :
"ಜಂಗಮನಾಗಬೇಕಾದರೆ ಮನಲಿಂಗ ಮಾಡಿ ಕೊಂಡಿರಬೇಕು."
ಅದಕ್ಕೆ ಸವಾಲಿನ ಜವಾಬಿನಂತೆ ಮಡಿವಾಳಪ್ಪ ಹಾಡಿದ:
"ಫಕೀರನಾಗಬೇಕಾದರೆ ಮನಧಿಕಾರ ಮಾಡಿಕೊಂಡಿರಬೇಕು."
ಇವೆರಡು ಆ ಇಬ್ಬರು ಹಾಡಿದ ಘನಿಷ್ಠ ಸಂವಾದದ ತತ್ವಪದಗಳು. ಚನ್ನೂರ ಜಲಾಲನ ಮನಲಿಂಗದ 'ಜಂಗಮಪ್ರಜ್ಞೆ' ಮತ್ತು ಕಡಕೋಳ ಮಡಿವಾಳಪ್ಪನ ಮನಧಿಕಾರದ 'ಫಕೀರಪ್ರಜ್ಞೆ'ಗಳು ಅವರಿಬ್ಬರ ಪದಗಳಲ್ಲಿ ಅಪ್ಪಟ ಮನುಷ್ಯತ್ವ ಹುಡುಕಾಟದ ತತ್ವ ಪ್ರತಿಪಾದನೆ ಸುಸ್ಪಷ್ಟ ಎಂದೆನಿಸುತ್ತದೆ.
ಅಣಜಗಿ ಗೌಡಪ್ಪ ಸಾಧು:
ಇದುವರಗೆ ಮಡಿವಾಳಪ್ಪನವರ ಮುನ್ನೂರೈವತ್ತು ಪದಗಳು ದೊರಕಿರುವ ಸಂಗ್ರಹ ಕಾರ್ಯವಷ್ಟೇ ಜರುಗಿದೆ. ಒಂದೊಂದು ಪದವು ಒಂದೊಂದು ಪುಸ್ತಕದ ಮಸ್ತಕವಾಗುವ ಬಹುಳ ಪ್ರಜ್ಞೆಯ ವಸ್ತು. ನಮ್ಮೂರಿನವರೇ ಆಗಿ ಹೋಗಿದ್ದ ಅಣಜಗಿ ಗೌಡಪ್ಪ ಸಾಧುಗಳು ತನ್ನನ್ನು ಮಡಿವಾಳರ ಮರಿ ಮೊಮ್ಮಗನೆಂದು ವಿನಮ್ರದಿಂದ ಕರೆದು ಕೊಂಡಿದ್ದಾರೆ. ಮಡಿವಾಳಪ್ಪನ ಒಂದೊಂದು ಪದಗಳು ಹುಟ್ಟಿಕೊಂಡ ಸಂದರ್ಭೋಚಿತ ಟಿಪ್ಪಣಿ ಮತ್ತು ಟೀಕುಗಳನ್ನು ಅನುಸಂಧಿಸಿದ್ದಾರೆ. ಅಷ್ಟೇ ಯಾಕೆ ಬಸವ ಪ್ರಣೀತ ಷಟ್ ಸ್ಥಲ ನಿಷ್ಠೆಯ ಸ್ಥಲಕಟ್ಟುಗಳ ನೆಲೆಯಲ್ಲಿ ನೋಡುವ ಪ್ರಯೋಗ ಮಾಡಿದ್ದಾರೆ. 1953-54 ರ ಆಸುಪಾಸಿನಲ್ಲಿ ಅವರು ಸಂಗ್ರಹಿಸಿದ ಮಡಿವಾಳಪ್ಪನ ಪದಗಳ ಅಮೂಲ್ಯ ಕೆಲಸವೇ ಇಂದಿನ ನಮಗೆಲ್ಲ ಬಹುದೊಡ್ಡ ಆಕರ ಸಂಪತ್ತು.
ಅವರು ಅಂದು ದಾಖಲೆಗೆ ಒದಗಿಸಿದ ಪ್ರಸ್ತಾವನೆ ಮಡಿವಾಳಪ್ಪನವರ ಚಾರಿತ್ರಿಕ ಬದುಕು ಮತ್ತು ಸಾಧನೆಯ ಮೇಲೆ ಪ್ರಖರ ಬೆಳಕು ಚೆಲ್ಲಿದೆ. ಅದು ಸಂಶೋಧಕರಿಗೆ ಮಹಾಮಾರ್ಗದ ತೋರುಹಾದಿಯ ಬೆಳಕಿಂಡಿಯಂತಿದೆ. ಗೌಡಪ್ಪ ಸಾಧು ಸೊಂಟಕ್ಕೆ ಶಲ್ಯ ಕಟ್ಟಿಕೊಂಡು, ಏಕತಾರಿ ನುಡಿಸುತ್ತಾ ಕುಣಿ, ಕುಣಿದು ಪದ ಹಾಡುತ್ತಿದ್ದರು. ಮಡಿವಾಳಪ್ಪನ ಪದಗಳಿಗಾಗಿ ಹನ್ನೆರಡು ವರ್ಷಗಳ ಕಾಲ ಕಾಠಿಣ್ಯದ ತಪಸ್ಸಿನಂತೆ ದಿನಕ್ಕೊಂದೇ ರೊಟ್ಟಿ ಉಂಡು ಊರೂರು ತಿರುಗಿದರು. ಸಾಮಾನ್ಯರ ಸಿರಿಕಂಠದಲ್ಲಿ ಅಡಗಿದ್ದ ಪದಗಳನ್ನು ತಾನು ಹಾಡಲು ಕಲಿತು ಅಜಮಾಸು ಇನ್ನೂರಾ ಹದಿನಾರು ಪದಗಳನ್ನು ಕಂಠೋದ್ಗತ ಮಾಡಿಕೊಂಡರು.
ದಿನಕ್ಕೊಂದೇ ರೊಟ್ಟಿ ಉಂಡು ಕಷ್ಟಪಟ್ಟು ಕೂಡಿಟ್ಟ ಮುನ್ನೂರು ರುಪಾಯಿ ಹಣದಲ್ಲಿ ಪುಸ್ತಕ ಮುದ್ರಣಕ್ಕೆ ಮುಂದಾಗುತ್ತಾರೆ. ಕೊಂಡಗೂಳಿಯ ಕನ್ನಡ ಸಾಲಿ ಮಾಸ್ತರ ಎ.ಕೆ. ರಾಮೇಶ್ವರ ಅವರ ಜತೆಗೂಡಿ ಯಾದಗಿರಿಯ ಶಂಕರಾನಂದ ಮುದ್ರಣಾಲಯದಲ್ಲಿ ಮಡಿವಾಳಪ್ಪನ ತತ್ವಪದಗಳ ಪುಸ್ತಕ ಪ್ರಕಟಿಸಿದರು. ಗೌಡಪ್ಪ ಸಾಧು ತಾನು ಕಲಿತ ಪದಗಳಿಗೆ ಆಗ ಅವರಿಗೆ ಲಿಪಿಕಾರನಾಗಿದ್ದವರು ನಮ್ಮ ನಡುವಿನ ತೊಂಬತ್ತರ ತುಂಬು ವಸಂತಗಳ ನಿವೃತ್ತ ಉಪಾಧ್ಯಾಯ ಶ್ರೀ ಎ. ಕೆ. ರಾಮೇಶ್ವರ.
ಗೌಡಪ್ಪ ಸಾಧು ಸಂಗ್ರಹದ ಅಂದಿನ ಆ ಪುಸ್ತಕಕ್ಕೆ "ಕೈವಲ್ಯ ವಾಕ್ಯಾಮೃತ" ಎಂಬ ಹೆಸರಿಟ್ಟು ಮನಗಂಡ ಮುನ್ನುಡಿ ಬರೆದು ಹರಸಿದವರು ಜಿ.ಎಂ. ಗುರುಸಿದ್ಧಶಾಸ್ತೀ. ಯಾದಗಿರಿ ಸಂಸ್ಕೃತ ಪಾಠಶಾಲೆಯ ಸಂಸ್ಕೃತ ಪಂಡಿತರಾದ ರಾಮಗಿರಿ ಹಿರೇಮಠದ ಕಾವ್ಯತೀರ್ಥ ಬಿರುದಿನ ಶ್ರೀ ಜಿ. ಎಂ. ಗುರುಸಿದ್ಧಶಾಸ್ತ್ರಿಗಳು ಕೇವಲ ಮುನ್ನೂರು ರುಪಾಯಿ ಹಣದಲ್ಲಿ ನೂರೈವತ್ತು ಪುಟದ ಕೈವಲ್ಯ ವಾಕ್ಯಾಮೃತ ಪುಸ್ತಕ ಪ್ರಕಟಿಸುವ ಸಹೃದಯತೆ ತೋರಿದ್ದಾರೆ. ಮೊಟ್ಟಮೊದಲ (1958) ಬಾರಿಗೆ ಮಡಿವಾಳಪ್ಪನವರ ಸಂಕ್ಷಿಪ್ತ ಜೀವನ ಚರಿತ್ರೆ, ಗಾಳಿಪೂಜೆ ವಚನ, ನೂರೆಂಟು ನಾಮಾವಳಿಗಳ ಸಮೇತ ಅತ್ಯಧಿಕ ತತ್ವಪದಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ ಕೀರ್ತಿ ಗೌಡಪ್ಪ ಸಾಧುಗೆ ಸಲ್ಲಬೇಕಿದೆ.
ತದನಂತರ ದುಮ್ಮದ್ರಿ ಮೂಲದ ಸರದಾರ ಶರಣಗೌಡ ಇನಾಮದಾರ ಮತ್ತು ಯಡ್ರಾಮಿಯ ಬಸಪ್ಪಗೌಡ ಮಾಲಿಪಾಟೀಲ ಜತೆ ಸಂಪಾದಕರಾಗಿ ದಿನಾಂಕ : 24.06.1965ರಲ್ಲಿ ಶ್ರೀ ಕಡಕೋಳ ಮಡಿವಾಳ ಶಿವಯೋಗಿ ವಿರಚಿತ "ನಿಜಲೀಲಾನುಭವ ವಚನ" ಎಂಬ ಅಪರೂಪದ ಗ್ರಂಥವನ್ನು ಪ್ರಕಟಿಸುತ್ತಾರೆ. ಯಾದಗಿರಿಯ ಅದೇ ರಾಮಗಿರಿ ಹಿರೇಮಠದ ಶ್ರೀ ಜಿ. ಎಂ. ಗುರುಸಿದ್ಧಶಾಸ್ತ್ರಿಗಳು ಈ ಗ್ರಂಥದ ಪ್ರಕಾಶಕರು. ಬಸವತತ್ವ ರತ್ನಾಕರ ಎಂಬ ಮಹಾನ್ ಕೃತಿಯ ರಚಯಿತೃಗಳಾದ ವ್ಯಾಕರಣ ತೀರ್ಥ ಶ್ರೀ ಚಂದ್ರಶೇಖರ ಶಾಸ್ತ್ರೀ ಅದಕ್ಕೆ ಮೌಲಿಕ ಮುನ್ನುಡಿ ಬರೆದಿದ್ದಾರೆ. ಮಡಿವಾಳಪ್ಪನವರ ಈ ಗ್ರಂಥ ಅಧ್ಯಾತ್ಮ ಜಿಜ್ಞಾಸುಗಳು, ಮುಮುಕ್ಷುಗಳಿಗೆ ಕರದರ್ಪಣದಂತಿದೆ.
1974ರಲ್ಲಿ ಇಂಡಿಯಾ ಬುಕ್ ಹೌಸ್ ಪ್ರಕಟಿಸಿದ ಎ.ಕೆ. ರಾಮೇಶ್ವರ ವಿರಚಿತ ಕಡಕೋಳ ಮಡಿವಾಳಪ್ಪ ಜೀವನ ಚರಿತ್ರೆ ಮಕ್ಕಳ ಪಠ್ಯಪುಸ್ತಕದ NCERT ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ. ಇದೆಲ್ಲಕ್ಕು ಪೂರ್ವದಲ್ಲಿ ಕ್ರಿ.ಶ. 1927 ರ ಸುಮಾರಿಗೆ ವಚನ ಪಿತಾಮಹ ಶ್ರೀ ಫ. ಗು. ಹಳಕಟ್ಟಿಯವರು ತಮ್ಮ 'ಹಿತ ಚಿಂತಕ' ಮುದ್ರಣಾಲಯದಲ್ಲಿ ಪ್ರಕಟ ಪಡಿಸಿದ 'ಭಜನ ಸುಧಾ' ಗ್ರಂಥಗಳಲ್ಲಿ ಕಡಕೋಳ ಮಡಿವಾಳಪ್ಪನವರ ತತ್ವಪದಗಳು ಪ್ರಪ್ರಥಮ ಬಾರಿಗೆ ಮುದ್ರಿತ ಅಕ್ಷರಗಳಲ್ಲಿ ಪ್ರಕಟಗೊಂಡಿರುವುದು ಐತಿಹ್ಯವೇ ಹೌದು. ಎಂಬತ್ತರ ದಶಕಾರಂಭದಲ್ಲಿ ಡಾ. ಮಲ್ಲಿಕಾರ್ಜುನ ಶಿವಪ್ಪ ಲಠ್ಠೆ ಅವರು ಓರ್ವ ಅಕೆಡಮಿಷಿಯನ್ ಮಾಡುವಂತೆ ಶಾಸ್ತ್ರೀಯ ಶಿಸ್ತು ಸ್ವರೂಪದಲ್ಲಿ ಸುದೀರ್ಘ ಪ್ರಸ್ತಾವನೆಯೊಂದಿಗೆ ಕಡಕೋಳ ಮಡಿವಾಳಪ್ಪನವರ ಸ್ವರವಚನಗಳು ಗ್ರಂಥ ಪ್ರಕಟಿಸಿದರು. ಅದನ್ನು ಗದುಗಿನ ತೋಂಟದಾರ್ಯ ಮಠದವರು ಪ್ರಕಟಿಸಿದರು. ಲಿಂಗಣ್ಣ ಸತ್ಯಂಪೇಟೆ, ಶಿವಪುತ್ರಪ್ಪ ಮಹಾಂತಪುರ, ಡಾ. ಎಂ. ಎಸ್. ಹಿರೇಮಠ, ಬಿ. ಮಹಾದೇವಪ್ಪ, ಲಿಂಗರಾಜು, ಈಶ್ವರಯ್ಯ ಮಠ, ಮಲ್ಲಿಕಾರ್ಜುನ ಕಡಕೋಳ ಹೀಗೆ ಅನೇಕರು ಬಿಡಿಯಾಗಿ ಮತ್ತು ಇಡಿಯಾಗಿ ಪ್ರಕಟಿಸಿದ್ದಾರೆ. ಸಾಹಿತ್ಯ ಅಕಾಡೆಮಿ, ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಮಡಿವಾಳಪ್ಪನ ತತ್ವಪದಗಳ ಮೇಲೆ ಪ್ರಕಟಣೆಯ ಬೆಳಕು ಚೆಲ್ಲಿವೆ.
ಮತ್ತೊಂದು ಗಮನೀಯ ಬೆಳವಣಿಗೆಯೆಂದರೆ ಮಡಿವಾಳಪ್ಪನವರ ಸಾಹಿತ್ಯದ ಮುದ್ರಿತ ಪುಸ್ತಕಕ್ಕೆ ಸೆಡ್ಡು ಹೊಡೆದಂತಹ ಪ್ರಸಂಗ ಇಲ್ಲಿ ಉಲ್ಲೇಖಿಸಲೇ ಬೇಕಿದೆ. ಶಾಲಿವಾಹನ ಶಕೆ ಮತ್ತು ಕ್ರಿಸ್ತಶಕೆಗಳನ್ನು ಉಲ್ಲೇಖಿಸಿ ಮುದ್ರಣಾಲಯದ ಅಕ್ಷರಗಳಿಗಿಂತಲೂ ಅತ್ಯಂತ ಮುದ್ದಾಗಿ ಬರೆದು ಅಷ್ಟೇ ಸೊಗಸಾಗಿ ವಿನ್ಯಾಸಗೊಳಿಸಿದ ಕೈ ಬರಹದ ಪುಸ್ತಕ ಕಡಕೋಳ ಶ್ರೀಮಠದಲ್ಲಿದೆ. ಅದನ್ನು ಗುರುಪಾದಯ್ಯ ಬಸಯ್ಯ ಮಠ, ಸಿದನೂರ ಎಂಬುವರು ಸಿದ್ಧಪಡಿಸಿದ ಗ್ರಂಥ. ಅಜಮಾಸು ಮುನ್ನೂರು ಪುಟಗಳಿಗೂ ಮಿಕ್ಕ ಸಾಹಿತ್ಯ ಕೃತಿ ಅದಾಗಿದೆ. ಅದು ಯಥಾವತ್ತಾಗಿ ಈ ಕೆಳಗಿನಂತಿದೆ.
ಆನಂತರ ಮೀನಾಕ್ಷಿ ಬಾಳಿ ಅವರು ಕಡಕೋಳ ಮಡಿವಾಳಪ್ಪ ಮತ್ತು ಅವರ ಶಿಷ್ಯರು ಎಂಬ ವಿಷಯ ಕುರಿತು ಸುದೀರ್ಘ ಅಧ್ಯಯನ ಗೈಯ್ದು ಸಂಶೋಧನಾ ಮಹಾಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದ ಅವಾರ್ಡ್ ಪಡೆದಿದ್ದಾರೆ. ಈ ಪರಿಯಾಗಿ ಕಡಕೋಳ ನಾಡಿನಲ್ಲಿ ಅನುಭಾವದ ನೆಲಸಿರಿಯೇ ಇರುವುದನ್ನು ಅಜಮಾಸು ಶತಮಾನದಷ್ಟು ಹಿಂದೆಯೇ ದಾಖಲೆಗಳು ಹೇಳುತ್ತವೆ. ಆದರೆ ಮಡಿವಾಳೋತ್ತರ ಕಡಕೋಳ ನೆಲದ ತತ್ವಭಾವ ನೆಲೆಗಳ ಕುರಿತು ಆಳವಾದ ಅಧ್ಯಯನಗಳು ಅತ್ಯಗತ್ಯವಾಗಿ ಜರುಗಬೇಕಿದೆ.
ಮಡಿವಾಳಪ್ಪನವರು ಬಾಳಿ ಬದುಕಿದ ಅನುಭಾವ ಪರಂಪರೆಯ ಬೇರು ಸಂಸ್ಕೃತಿಯ ಬೀಜ ಬೆಳೆ, ಪೈರು ತೆನೆ ಇಂದಿಗೂ ಈ ನೆಲದಲ್ಲಿ ಹಸಿರಾಗಿವೆ. ಅಂತಹ ಹಸಿರು ಹೊನ್ನು ಹುಡುಕಿಕೊಳ್ಳಲು ಸಹೃದಯ ಉಸಿರಿನ ಜ್ಞಾನ ಮತ್ತು ಜಾಣತನ ಎರಡೂ ಬೇಕು. ಮಹಾಂತ ಮಡಿವಾಳನ ನಮ್ಮೂರಿಗೆ ನೀವು ಬರಬೇಕಾದರೆ ನಮ್ಮ ನಿಮ್ಮ ಮನಸು ಒಂದಾಗಿರಬೇಕು.
*ಮಲ್ಲಿಕಾರ್ಜುನ ಕಡಕೋಳ*
9341010712
ಈ ಅಂಕಣದ ಹಿಂದಿನ ಬರಹಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.