Date: 01-03-2022
Location: ಬೆಂಗಳೂರು
'ವಚನ ಚಳವಳಿಯ ಬಸವೋತ್ತರ ಸಾಮಾಜಿಕ ಮತ್ತು ಧಾರ್ಮಿಕ ಮನ್ವಂತರ ನಿರ್ಮಾಣಗೊಳಿಸಿದ್ದು ತತ್ವಪದ ಚಳವಳಿ ಮತ್ತು ತತ್ವಪದಕಾರರು. ತತ್ವಪದಗಳಲ್ಲಿ ನೆಲಧರ್ಮದ ಪರಿಮಳವಿದೆ' ಎನ್ನುತ್ತಾರೆ ಹಿರಿಯ ಲೇಖಕ, ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ಕಡಕೋಳ ಮಡಿವಾಳಪ್ಪ ಹಾಗೂ ತತ್ವಪದಗಳ ಕುರಿತು ವಿಶ್ಲೇಷಿಸಿದ್ದಾರೆ.
ತತ್ವಪದಗಳು ಮಹತ್ವದ ಸಾಹಿತ್ಯ ಪ್ರಾಕಾರವೆಂದು ಗುರುತಿಸದ ಗುರುತರ ಆರೋಪ ಕನ್ನಡ ಸಾಹಿತ್ಯ ಚರಿತ್ರೆಕಾರರ ಮೇಲಿದೆ. ತತ್ವಪದಗಳನ್ನು ಬಾಳಿ ಬದುಕಿದ ಪದಕಾರರ ಕಾಲಮಾನವನ್ನು ಸಾಹಿತ್ಯ ಚರಿತ್ರೆಕಾರರು ಕಡೆಗಣ್ಣಿನಿಂದ ಕಂಡಿದ್ದಾರೆ. ತತ್ವಪದ ಸಾಹಿತ್ಯದ ಸೂಕ್ಷ್ಮತೆ, ಅದರ ಅಂತರಂಗದ ಅನುಭಾವ ಚೈತನ್ಯ ಅರಿಯುವ ಗೋಜಿಗೆ ಹೋಗಲಿಲ್ಲ. ಅದೊಂದು "ಬಹುಮುಖಿ ಕಾವ್ಯಧಾರೆ ಸಂಸ್ಕೃತಿ" ಎಂಬುದನ್ನು ಕಾವ್ಯ ಮೀಮಾಂಸಕರು ಗುರುತಿಸುವ ಬದಲು ಆಗ ಕನ್ನಡ ಸಾಹಿತ್ಯವೇ ಹುಟ್ಟಲಿಲ್ಲ ಎಂಬ ಬೀಸು ನಿರ್ಲಕ್ಷ್ಯ ತೋರುತ್ತಾರೆ. ಅಂತೆಯೇ ಕೆಲವರು ಆ ಕಾಲಘಟ್ಟವನ್ನು "ಕತ್ತಲೆಯುಗ" ಎಂತಲೂ ಕರೆದಿದ್ದಾರೆ.
ಅಚ್ಚರಿಯಂತೆ ಈ ಕತ್ತಲೆಯುಗದಲ್ಲೇ ಅಕ್ಷರಶಃ ಜೀವಬೆಳಕಿನ ಚಳವಳಿಯಂತೆ ಹುಟ್ಟಿ ಬದುಕಿದ್ದೇ ತತ್ವಪದ ಸಾಹಿತ್ಯ. ಪ್ರಾಯಶಃ ಅದೇ ಹಿನ್ನೆಲೆಯಿಂದ ಅಮವಾಸ್ಯೆಯ ಕತ್ತಲೆರಾತ್ರಿ ಮತ್ತು ಸತ್ತವರ ಮನೆಗಳ ಸೂತಕದ ಕತ್ತಲೆಯಲಿ ಅದೂ ಹೆಣದ ಸಾನಿಧ್ಯದಲಿ ಏಕತಾರಿ ನಾದದ ಮೂಲಕ ಕೇಳಿ ಬರುವ ಸಾಂಸ್ಕೃತಿಕ ಎಚ್ಚರದ ಆಹೋರಾತ್ರಿ ಭಜನೆಗಳೇ ತತ್ವಪದಗಳು. ಅವು ಬರೀ ಪದಗಳಲ್ಲ. ನಾದೋನ್ಮಾದದ ತತ್ವಜ್ಞಾನ ಪದಗಳು. ಆ ಪದಗಳಲ್ಲಿ ತತ್ವ ಮತ್ತು ಜ್ಞಾನದ ವಿನೂತನ ಬೆಳಕಿದೆ. 'ಅಚಲ'ಪ್ರಭೆಯ ಜೀವಸ್ಫುರಣವಿದೆ. ಅಂತೆಯೇ ಅವು ಏಕಕಾಲಕ್ಕೆ ಪಂಡಿತ ಪಾಮರರನ್ನು ಪ್ರಪಂಚದಾಚೆಯ ಪಾರಮಾರ್ಥ್ಯದ ಚಿಂತನಶೀಲ ಜಗಕ್ಕೆ ಕರೆದೊಯ್ಯುತ್ತವೆ
ವಚನ ಚಳವಳಿಯ ಬಸವೋತ್ತರ ಸಾಮಾಜಿಕ ಮತ್ತು ಧಾರ್ಮಿಕ ಮನ್ವಂತರ ನಿರ್ಮಾಣಗೊಳಿಸಿದ್ದು ತತ್ವಪದ ಚಳವಳಿ ಮತ್ತು ತತ್ವಪದಕಾರರು. ತತ್ವಪದಗಳಲ್ಲಿ ನೆಲಧರ್ಮದ ಪರಿಮಳವಿದೆ. ಲೋಕ ಮಾನಸದ ಮೀಮಾಂಸೆಗಳಿವೆ. ಅವು ಜನಪದರ ಹೃದಯ ಬಾಹುಳ್ಯದ ಪ್ರೀತಿ ಗಳಿಸಿವೆ.
ಒಂದುಕಾಲಕ್ಕೆ ವಿದ್ವತ್ ಜಗತ್ತಿನ ದಿವ್ಯ ನಿರ್ಲಕ್ಷ್ಯಕ್ಕೊಳಗಾದ ಏಕತಾರಿ ನಾದದ ತತ್ವಪದಗಳಿಗೆ ಇತ್ತೀಚಿನ ದಿನಮಾನಗಳಲ್ಲಿ ಭಾರೀ ಬೇಡಿಕೆ. ಏಕತಾರಿ ನುಡಿಸುತ್ತಾ, ಗಂಭೀರವಾಗಿ ಹಾಡುತ್ತಾ ನಮ್ಮನ್ನೆಲ್ಲ ಅಪರಿಚಿತವಾದ ಮೌನಲೋಕಕ್ಕೆ ಕರಕೊಂಡು ಹೋಗಿ ಜೀವಸಂವೇದನೆಯ ಉದ್ದೀಪನ ಉಂಟುಮಾಡುವವರಿಗೆ ಈಗೀಗ ಎಲ್ಲಿಲ್ಲದ ಮಾನ್ಯತೆ.
ಈ ಹಿಂದೆ ಕ್ಲಾಸಿಕಲ್ ಸಂಗೀತ ಲೋಕದ ವೀಣೆ ತಂಬೂರಿಗಳಂಥ ಅನೇಕ ಹೈ ಫೈ ತಂತಿನಾದಗಳ ನಡುವೆ ಕರಿ ಕುಂಬಳಕಾಯಿಯ ಏಕತಾರಿ ತಂತಿ ನಿನಾದ ನೇಪಥ್ಯಕ್ಕೆ ಸರಿಯುವಂತಾಗಿದ್ದು ಸುಳ್ಳಲ್ಲ. ಅಧೀನ ಸಂಸ್ಕೃತಿ ಧಾರೆಗೂ ಸೇರಿಸಲಾಗದೇ, ಹೆಚ್ಚೆಂದರೆ ತತ್ವಪದಗಳ ಸಂಸ್ಕೃತಿಯನ್ನು ಸಂಪ್ರದಾಯ ಭಜನೆಯೆಂದಷ್ಟೇ ಪರಿಗಣಿಸಲಾಗಿತ್ತು. ಇತ್ತೀಚೆಗೆ ಅದರ ಸಾಂಸ್ಕೃತಿಕ ಪಾರಮ್ಯದ ಪರಮ ಅರಿವು ತಡವಾಗಿಯಾದರೂ ಗಾಢವಾಗಿ ಮೂಡಿದೆ. ಯಾವ ಪ್ರಮಾಣದಲ್ಲಿ ಅಂತ ಕೇಳಿದರೆ : ಸಮಕಾಲೀನ ಸಾಂಸ್ಕೃತಿಕ ಲೋಕದ ಪೈಪೋಟಿ ಮತ್ತು ಪ್ರತಿಷ್ಠೆಯಂತೆ ತತ್ವಪದಗಳ ಹಾಡುಗಬ್ಬದ ಪರಂಪರೆ ಚಲಾವಣೆಯಾಗುತ್ತಿದೆ.
ಸಾಹಿತ್ಯ, ಸಂಗೀತ, ನಾಟಕ, ಸಿನೆಮಾ, ಸೆಮಿನಾರ್, ರಿಯಾಲಿಟಿ ಷೋ, ಸಾಮಾಜಿಕ ಜಾಲತಾಣಗಳಲ್ಲಿ ತತ್ವಪದಗಳಿಗೆ ಸೂಕ್ಷ್ಮ ಸ್ತರದ ಮಾನ್ಯತೆ ಬರತೊಡಗಿದೆ. ವಿಶ್ವವಿದ್ಯಾಲಯಗಳ ವಿದ್ವಾಂಸರು ತತ್ವಪದಗಳನ್ನು ತುಂಬಾನೇ ಗಂಭೀರವಾದ ಮತ್ತು ಸವಾಲಿನ ಮೀಮಾಂಸೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಇದು ಮರೆತುಹೋದ ಸಂಗೀತ ಪರಂಪರೆಗೆ ದೊರಕಿದ ಮನ್ನಣೆ. ಸಾಂಸ್ಕೃತಿಕವಾಗಿ ಅದೊಂದು ಬಗೆಯ ಚುರುಕಾದ ಸೂಕ್ಷ್ಮಾಕರ್ಷಣೆ. ಅಷ್ಟುಮಾತ್ರವಲ್ಲ., ಕ್ಲಾಸಿಕ್ ಸಂವೇದನೆಯಾಗಿಯೂ ತತ್ವಪದಗಳ ಅನುಭಾವದ ಅನುಸಂಧಾನ ವರ್ತಮಾನೀಕರಣಗೊಂಡಿದೆ. ಒಮ್ಮೊಮ್ಮೆ ಇದು ಲೋಕೋಪಯೋಗಿ ಸಮಾಹಿತದ ಸರಕಿನಂತೆ ಕಂಡುಬಂದರೂ ಜನಸಂಸ್ಕೃತಿಯ ಜೀವನಾದಗಳನ್ನು ಆವಾಹಿಸಿಕೊಂಡಿದೆ. ಅಂತೆಯೇ ತತ್ವಪದಗಳ ಕುರಿತು ದರ್ಶನ ಶಾಸ್ತ್ರಗಳ ಪಂಡಿತರ ವಲಯಗಳಲ್ಲಿಯೂ ಚುರುಕಾದ ಚಿಂತನೆಗಳು ಜರುಗುತ್ತಿರುವುದು ಸ್ವಾಗತಾರ್ಹ.
ಅಷ್ಟೇಯಾಕೆ ಜಡ್ಡುಗಟ್ಟಿದ ಅಧ್ಯಾತ್ಮ ಮತ್ತು ಶುಷ್ಕವೇದಾಂತದ ದಿಕ್ಕನ್ನೇ ಬದಲಿಸಿದ್ದು ತತ್ವಪದಗಳ ಒಳ ತಿರುಳುಗಳು ಎಂದರೆ ಅತಿಶಯೋಕ್ತಿ ಆಗಲಾರದು. ಅನುಭಾವ ಸಾಹಿತ್ಯದ ಮುಂದುವರಿಕೆಯ ಭಾಗದಂತೆ ತತ್ವಪದಗಳ ಆಶಯಗಳು ಅನುಜ್ಞಾನ ಗೊಳ್ಳುತ್ತಿವೆ. ಕನ್ನಡದ ತತ್ವಪದಗಳು ಮತ್ತು ತತ್ವಪದಕಾರರ ಬದುಕು ಸಾಧನೆಗಳು ಭಾರತೀಯ ಇತರೆ ಎಲ್ಲಭಾಷೆಗಳಿಗೆ ಭಾಷಾಂತರ ಮತ್ತು ಸೂಕ್ತರೀತಿಯಲ್ಲಿ ಅನುವಾದಗೊಂಡು ಎಲ್ಲರಿಗೂ ತಲುಪುವಂತಾದಾಗ ಅದರ ಮಹತ್ವಕ್ಕೆ ಮತ್ತಷ್ಟು ಮೆರಗು ದೊರಕಬಲ್ಲದು. ಜಾಗತಿಕ ಮಟ್ಟದ ಜಿಜ್ಞಾಸೆ, ಮನ್ನಣೆ ದಕ್ಕಬಲ್ಲದು.
ಅಂತಹ ಅನನ್ಯತೆಯ ತತ್ವಪದಗಳ ಅನುಭಾವದ ಹರಿಕಾರನೆಂದೇ ಮೊದಲ ಸಾಲಲ್ಲೇ ನಿಲ್ಲುವ ಮೊದಲಿಗನೆಂದರೆ ಕಡಕೋಳ ಮಡಿವಾಳಪ್ಪ. ಮಡಿವಾಳಪ್ಪ ಮತ್ತು ಅರಳಗುಂಡಗಿ ಶರಣಬಸಪ್ಪ (ಕ್ರಿ.ಶ. ೧೭೪೬ - ೧೮೨೨) ಸಮಕಾಲೀನರು. ಶಿಶುನಾಳ ಶರೀಫ ಸಾಹೇಬರಿಗಿಂತ ಅಜಮಾಸು ಅರ್ಧಶತಮಾನ ಕಾಲ ಮುಂಚೆ ಕ್ರಿ. ಶ. ೧೭೬೬- ೧೮೫೫ ರ ಕಾಲಘಟ್ಟದಲ್ಲಿ ಬಾಳಿ ಬದುಕಿದವರು ಕಡಕೋಳ ಮಡಿವಾಳಪ್ಪ.
ಮಡಿವಾಳಪ್ಪನೆಂಬುದು ಅಂತಃಕರಣ ತುಂಬಿದ ತಾಯಿಜೀವ. ಅದು ತಾಯ್ತನ ಮತ್ತು ಮಗುವಿನ ಕುಸುಮ ಕೋಮಲ ಮುಗ್ದತೆ. ಹಾಗೆಂದು ಅಲ್ಲಿ ಸಿಂಹದ ಗರ್ಜನೆಯೂ ಇಲ್ಲದಿಲ್ಲ. ನಡೆ ನುಡಿ ಒಂದಾದ ಲೋಕದ ಬೆಳಕು. ಹಾಗೆಯೇ ವ್ಯವಸ್ಥೆಯ ವಿರುದ್ದದ ಪ್ರಬುದ್ಧ ಪ್ರತಿಭಟನೆಯ ಅಸಲೀಯತ್ತು. ನಿತ್ಯ ಬದುಕಿನ ಹತ್ತು ಹಲವು ಸಂಗತಿಗಳ ಉಪಮೆಗಳೊಂದಿಗೆ ಅವು ಜನಸಾಮಾನ್ಯರ ಮನಸೂರೆಗೊಳ್ಳುತ್ತವೆ. ವಿಶೇಷವಾಗಿ ಮಡಿವಾಳಪ್ಪನವರ ಮಂಗಳಾರತಿ ಪದಗಳಲ್ಲಿ ಅಗಾಧ ಅಧ್ಯಾತ್ಮ ಚಿಂತನೆಗಳ ಧ್ವನಿಪೂರ್ಣ ರೂಪಕಗಳಿವೆ. ಜೀವಗಂಧೀ ಕಾವ್ಯದ ಕಸುವಿನಿಂದಾಗಿ ಅವಕ್ಕೆ ಸ್ನಿಗ್ದ ಪ್ರೀತಿಯ ಸ್ಥಾನಮಾನ. ತನ್ಮೂಲಕ ಮಡಿವಾಳಪ್ಪ ಕನ್ನಡದ ಕಾವ್ಯಸತ್ವ ಸಮೃದ್ಧಿಗೊಳಿಸಿದ್ದಾರೆ. ಬಸಿರಿಲ್ಲದ ಮಗನ ಹೆರುವ ಮತ್ತು ಹಸಿ ಕೆಸರಿಗೆ ಬೆಂಕಿಹಚ್ಚುವ ಅಸರಂತ ಪ್ರೀತಿಯ ಅಪ್ರತಿಮ ಪ್ರತಿಮಾಲಂಕಾರಗಳ ಸಾಗರ. ಹಾಗೆಯೇ ಪ್ರತಿಭಟನಾ ಕಾವ್ಯದ ಪೆಡಸು ಹಸಿಗೋಡೆಗೆ ಹರಳು ಹೊಡೆದಷ್ಟೇ ಸುಸ್ಪಷ್ಟ.
*ಭಲೆರೇ ಹುಡುಗ ಹೌದು ಹೊಡದಿ/*
*ಗುರಿ ಬಡಿಯುವ ತುಬಾಕ ಹಿಡದಿ//*
ಇಂತಹ ನೂರಾರು ತತ್ವಪದಗಳು ಸಿಡಿಲ ಮೊಗ್ಗಿನ ನುಡಿಗಳು.
ಇಲ್ಲಿರುವುದು ಸುಮ್ಮನೆ !
ಅಲ್ಲಿರುವುದು ನಮ್ಮನೆ !!
ಎಂಬ ದಾಸಸಿದ್ಧಾಂತಕ್ಕೆ ಪ್ರತಿರೋಧ ಎಂಬಂತೆ ಮಡಿವಾಳಪ್ಪನವರ
*ಅಲ್ಯಾಕ ಹುಡುಕುತಿ ಇಕೋ/*
*ಇಲ್ಯಾದ ನೋಡ ಮುಕುತಿ //*
ಎಂಬ ಕಾವ್ಯತತ್ವ ಕೇಳುತ್ತಿದ್ದಂತೆ ಅದೇ ಮಡಿವಾಳಪ್ಪ ಹೇಳುವುದು ಹೀಗೆ:
*ನಿಲುಕಿಸಿಕೋ ಮೇಲಾದ ಕಾಯಿ/*
*ಕೆಳಗ ಹಲುಬಿ ತೆರೆಯುವುದ್ಯಾತಕೋ* *ಬಾಯಿ//*
ಎಂದು ಹಾಡುವುದು ಸಂದರ್ಭೋಚಿತ ತಾರ್ಕಿಕ ಸಮಜಾಯಿಷಿಯಂತೆ ಕಾಣದಿರದು. ಹಾಗೆಂದು ಅದು ದ್ವಂದ್ವತೆಯಲ್ಲ. ಹೀಗಾಗಿ ಅವನ ಪ್ರಕಾರ ತಾನು ಯಾವ ಪಂಥ, ಪೀಠಗಳಿಗೆ, ಸಮಯಗಳಿಗೆ ಸೇರಿದವರಾಗಿರದೇ ಶಿವಸಮಯದವರೆಂದು ಹೇಳಿಕೊಂಡಿರುವುದುಂಟು. ಅದು ಪ್ರಶ್ನಾತೀತ ಶಿವನಸೊಲ್ಲು
*ಎಂಥ ವಿರತಿಯೋ ನಿಂದು*
*ಎಂಥ ವಿರತಿಯೋ/*
*ಸಂತಿ ಸೂಳೇಮಗನೇ ನಿನ್ನ*
*ಅಂತರಂಗದನುವನರಿಯೋ //*
ಹೀಗೆ ವೈದಿಕ್ಯ ಪ್ರಭುತ್ವದ ರತ್ಯುತ್ಸಾಹ ಪ್ರಜ್ಞೆಗೆ ಕೊಡಲಿಯೇಟು ಕೊಡುವ ಮಡಿವಾಳಪ್ಪ, ಸೋಗಲಾಡಿ ಸ್ವಾಮಿಗಳ ವಿರತಿಪ್ರಜ್ಞೆಯನ್ನು ಕಿತ್ತಿಜಾಡಿಸಿ ಬಿಡುತ್ತಾರೆ. ಹಾಗೇಯೇ ಪ್ರಾಣ ಪ್ರಪಂಚದಲ್ಲಿದ್ದು ಪರಬ್ರಹ್ಮದಲಿ ಲೋಲಾಡುವುದನು ಕಲಿಸಿಕೊಡುತ್ತಾನೆ. ಅದು ಅಷ್ಟು ಸುಲಭ ಸಾಧಾರಣದ ಗುರುಮನಿಯ ಕೀಲಲ್ಲ. ಇಂತಹ ಕಸುವಿನ ವಿಭಿನ್ನ ತತ್ವಜ್ಞಾನ ನಿಧಿಯನ್ನು ನೀಡಿದವರು ತತ್ವಪದ ಸಾಹಿತ್ಯ ಜಗತ್ತಿನ ಅಗ್ರಪಂಕ್ತಿಯ ಅಗ್ರಗಣ್ಯರೆಂದರೆ ಕಡಕೋಳ ಮಡಿವಾಳಪ್ಪ.
ಒಂದು ಮಾಹಿತಿಯಂತೆ ಕನ್ನಡ ನಾಡಿನಾದ್ಯಂತ ಐದುನೂರು ಮಂದಿ ತತ್ವಪದಕಾರರು ಬಾಳಿ ಬದುಕಿದ್ದಾರೆ. ಹೊಲೆ ಮಾದಿಗರಾದಿಯಾಗಿ ಬ್ರಾಹ್ಮಣ, ಮುಸ್ಲಿಂ, ಲಿಂಗಾಯತ ಹೀಗೆ ಎಲ್ಲ ಜಾತಿಯ ಪದಕಾರರು ಬದುಕಿದ ಬಹುತ್ವದ ಮಹಾಜಗತ್ತು. ಅಷ್ಟು ಮಾತ್ರವಲ್ಲದೇ ಗಂಡು ಹೆಣ್ಣೆಂಬ ತರತಮ ಇಲ್ಲದ ಪ್ರಾಣದರ್ಶನ ತಾತ್ವಿಕತೆ ಮೆರೆದ ಪ್ರಕಾರ.
ತತ್ವಪದಗಳ ಕುರಿತು, ತತ್ವಪದಕಾರರ ಕುರಿತು ಗಂಭೀರ ಅಧ್ಯಯನ, ಸಂಶೋಧನೆ, ನಾನಾ ಜ್ಞಾನ ಶಿಸ್ತು ಸಾರಗಳ ಮೂಲಕ ಅಭ್ಯಾಸ ಮಾಡುವ ಅನೇಕಾನೇಕ ಕೆಲಸಗಳು ನಾಡಿನ ಸಮಸ್ತ ಹಿತದೃಷ್ಟಿಯಿಂದ ಆಗಬೇಕಾಗಿದೆ. ಈಗ ಹೆಚ್ಚೆಂದರೆ ತತ್ವಪದಗಳ ಒಂದುಹಂತದ ಸಂಗ್ರಹ ಕಾರ್ಯ ಜರುಗಿದೆ. ಆಗಲೇಬೇಕಾದ ಸಮಗ್ರ ಕಾರ್ಯಕ್ಕಾಗಿ "ತತ್ವಪದಗಳ ಮತ್ತು ಸೂಫಿಸಂತರ ಕಾವ್ಯ ಅಧ್ಯಯನ, ಸಂಶೋಧನಾ ಅಭಿವೃದ್ಧಿ ಪ್ರಾಧಿಕಾರ" ರಚನೆಯಾಗಬೇಕಿದೆ.
ತತ್ವಪದಕಾರರ ನುಡಿಭಂಡಾರದಲ್ಲೇ ಅಗ್ರಮಾನ್ಯನಾದ ಕಡಕೋಳ ಮಡಿವಾಳಪ್ಪನವರ ಹೆಸರಲ್ಲಿ ಅವರ ಕರ್ಮಭೂಮಿ ಕಡಕೋಳದಲ್ಲಿ ಪ್ರಾಧಿಕಾರ ಸ್ಥಾಪನೆಯಾಗಬೇಕು. ಕಲ್ಯಾಣ ಕರ್ನಾಟಕವು ತತ್ವಪದಕಾರರ ತವರೂರು. ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕಡಕೋಳ ಸೀಮೆ ಮಡಿವಾಳಪ್ಪನವರ ನೂರಾರು ಮಂದಿ ಶಿಷ್ಯರು ತತ್ವಪದಕಾರರಾಗಿ ಬಾಳಿ ಬದುಕಿದ ನೆಲ. ಪ್ರಯುಕ್ತ ಕಡಕೋಳದಲ್ಲಿ "ತತ್ವಪದ ಹಾಗೂ ಸೂಫಿಸಂತರ ಅಧ್ಯಯನ ಮತ್ತು ಸಂಶೋಧನಾ ಅಭಿವೃದ್ಧಿ ಪ್ರಾಧಿಕಾರ" ವನ್ನು ಸರಕಾರ ಸ್ಥಾಪನೆ ಮಾಡಬೇಕು. ಆ ಮೂಲಕ ತತ್ವಪದ ಲೋಕದ ಸರ್ವಾಂಗೀಣ ಅಭಿವೃದ್ಧಿ ಆಗಬೇಕು.
ಮಲ್ಲಿಕಾರ್ಜುನ ಕಡಕೋಳ
ಮೊ: 93410 10712
ಈ ಅಂಕಣದ ಹಿಂದಿನ ಬರಹಗಳು
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.