Date: 06-05-2022
Location: ಬೆಂಗಳೂರು
'ನಾವು ನಡೆಸುವ ಬೌದ್ಧಿಕ ಚಟುವಟಿಕೆಯನ್ನು ವರ್ತಮಾನದ ಜೊತೆ ಮತ್ತೆಮತ್ತೆ ಕನೆಕ್ಟ್ ಮಾಡಬೇಕು. ಈ ಸದ್ಯೋಜಾತ ಗುಣ ಚಿನ್ನಪ್ಪರ ಪುಸ್ತಕದಲ್ಲಿ ಒಂದು ಮೌಲ್ಯವೇ ಆಗಿದೆ' ಎನ್ನುತ್ತಾರೆ ಪ್ರಾಧ್ಯಾಪಕರಾದ ನಿತ್ಯಾನಂದ ಬಿ. ಶೆಟ್ಟಿ. ಅವರು ತಮ್ಮ‘ಲೋಕೋಕ್ತಿ’ ಅಂಕಣದಲ್ಲಿ ಏಪ್ರಿಲ್ 30, 2022ರಂದು, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜ್‍ನಲ್ಲಿ ನಡೆದ ಪ್ರೊ. ಕೆ ಚಿನ್ನಪ್ಪ ಗೌಡರ ಕರಾವಳಿ ಕಥನಗಳು ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಆಡಿದ ಮಾತುಗಳ ಪರಿಷ್ಕೃತ ರೂಪವನ್ನು ದಾಖಲಿಸಿದ್ದಾರೆ.
'ಕರಾವಳಿ ಕಥನಗಳು' ಪುಸ್ತಕದ ಬಿಡುಗಡೆಯ ಈ ಕಾರ್ಯಕ್ರಮಕ್ಕೆ ಆಹ್ವಾನಿಸುವುದಕ್ಕಾಗಿ ಮಾರ್ಚ್ 27ರ ಭಾನುವಾರ ಬೆಳಿಗ್ಗೆ ಸುಮಾರು ಹತ್ತು ಗಂಟೆಗೆ ಪ್ರೊ. ಕೆ. ಚಿನ್ನಪ್ಪ ಗೌಡರು ನನಗೆ ಫೋನ್ ಮಾಡಿದರು. ಉಭಯ ಕುಶಲೋಪರಿಯ ಮಾತಿನ ಬಳಿಕ “ನೀವು ಕೆಲಸದಲ್ಲಿದ್ರೇನೋ, ತೊಂದರೆ ಕೊಟ್ಟೆ” ಎಂದು ಮಾತಿಗೆ ತೊಡಗಿದರು. ಚಿನ್ನಪ್ಪರ ಪ್ರಶ್ನೆಗೆ “ಹಾಗೇನಿಲ್ಲ ಸಾರ್, ಈಗಷ್ಟೇ ಒಂದು ತೆಲವು ಅನ್ನು ಪೊಜೆಂಕಿದೆ. ಇನ್ನು ಇದರ ಸುಯಿ ತೊಲ್ಲಬೇಕು” ಅಂದೆ. ತುಳು ಬೆರೆಸಿದ ನನ್ನ ಕನ್ನಡಕ್ಕೆ ಚಿನ್ನಪ್ಪರು ಗೊಳ್ ಅಂತ ನಕ್ಕರು. ಗಂಡು ಮರಿ ಕೋಳಿ ತನ್ನ ಕೌಮಾರ್ಯಾವಸ್ಥೆಯಿಂದ ತಾರುಣ್ಯಾವಸ್ಥೆಗೆ ಕಾಲಿಡುವ ಹಂತದಲ್ಲಿ, ತುಳುವಿನಲ್ಲಿ ಅದನ್ನು ‘ತೆಲವು’ ಎಂದು ಕರೆಯುತ್ತಾರೆ. ಅದೇ ಪ್ರಾಯದ ಹೆಣ್ಣು ಕೋಳಿಯನ್ನು ‘ಲಾಕಿ’ ಎಂದು ಕರೆಯುತ್ತಾರೆ. ತೆಲವು ಮತ್ತು ಲಾಕಿಗೆ ಕನ್ನಡದಲ್ಲಿ ಸಮಾನಾರ್ಥದ ಪದಗಳಿಲ್ಲ. ತುಳು ಭಾಷೆಯ ಸಮೃದ್ಧತೆಯ ಒಂದು ಮುಖವನ್ನು ಪರಿಚಯಿಸುವುದಕ್ಕಾಗಿ ನಾನು ಇದನ್ನು ಹೇಳುತ್ತಿದ್ದೇನೆ. ಕೋಳಿಗಳ ಪ್ರಪಂಚಕ್ಕೆ ಬಂದರೆ ತುಳುವಿನಲ್ಲಿ ಅದರದ್ದೇ ಒಂದು ನಿಘಂಟು ತಯಾರಿಸುವಷ್ಟು ಭಾಷಿಕ, ಸಾಂಸ್ಕೃತಿಕ ವಿವರಗಳುಳ್ಳ ಸಾಮಗ್ರಿ ಇದೆ. ಬಣ್ಣಗಳನ್ನಷ್ಟೇ ಗಮನಿಸಿ ಉರಿಯೆ, ಕಡ್ಲೆ, ಕುಪುಲೆ, ಮೈಪೆ, ಬೊಲ್ಲೆ, ಕರ್ಬೊಲ್ಲೆ, ಪಂಚೊನಿ, ಮೈರೆ, ಕೆಮ್ಮೈರೆ, ಬೂದೆ, ಪೆರಡಿಂಗೆ ಹೀಗೆ ಗಂಡು ಕೋಳಿಗಳಿಗೆ ತುಳುವಿನಲ್ಲಿ ಇರುವ ನೂರಾರು ಹೆಸರುಗಳನ್ನು ಪಟ್ಟಿ ಮಾಡಿದರೆ ಪ್ರಾಯಃ ಜಗತ್ತಿನ ಯಾವ ಭಾಷೆಯಲ್ಲೂ ಇಷ್ಟು ಹೆಸರುಗಳು ಇರುವುದಕ್ಕೆ ಸಾಧ್ಯ ಇಲ್ಲ. ಕೋಳಿಗಳಿಗಾಗಿ ಪಂಚಾಂಗವನ್ನು ತಯಾರಿಸಿದ ಸಂಸ್ಕೃತಿಯೂ ತುಳುವಿನದ್ದು. ಇವೆಲ್ಲವೂ ಸಂಸ್ಕೃತಿಯೊಂದರ ಅಂತರಂಗದ ಸಂಗತಿಗಳು.
ಈ ಕಾರ್ಯಕ್ರಮಕ್ಕಾಗಿ ತುಮಕೂರಿನಿಂದ ಬರುವಾಗ ನಾನು ಈ ಕುರಿತೇ ಯೋಚನೆ ಮಾಡುತ್ತಿದ್ದೆ. ಲಾಕಿ ಮತ್ತು ತೆಲವು ಎಂಬ ತುಳುವಿನ ಪದಗಳಿಗೆ ಕನ್ನಡದಲ್ಲಿ ಹೇಗೆ ಅನುರೂಪದ ಪದಗಳಿಲ್ಲವೋ ಹಾಗೆಯೇ ಪೊಜೆಂಕುವುದು ಎಂಬುದಕ್ಕೂ ಕನ್ನಡದಲ್ಲಿ ಸಮರೂಪದ ಪದವಿಲ್ಲ. ಕತ್ತು ಹಿಚುಕುವುದು ಎಂದು ಹೇಳಬಹುದು ಆದರೆ ಹಿಚುಕುವುದು ಬೇರೆ, ಪೊಜೆಂಕುವುದು ಬೇರೆ. ಯಾಕೆಂದರೆ ಪೊಜೆಂಕುವ ಪ್ರಕ್ರಿಯೆಯಲ್ಲಿ ಕುತ್ತಿಗೆಯನ್ನು ತಿರುಚುವ(ಪೀಂಟಿಸುವ) ಒಂದು ಕ್ರಿಯೆ ಕೂಡ ಇದೆ. ಹಿಚುಕುವುದರಲ್ಲಿ ಪೀಂಟಿಸಲಿಕ್ಕೆ ಇಲ್ಲ. ಇರಲಿ ಈಗ ಬಹಳ ಮುಖ್ಯವಾದ ಪ್ರಶ್ನೆಗೆ ಬರ್ತೇನೆ. ತುಳುವಿನಲ್ಲಿ ಇರುವ ಈ ಪೊಜೆಂಕುವುದು ಹಲಾಲ್ ಕಟ್ ಆಗ್ತದೋ ಅಥವಾ ಜಟ್ಕಾ ಕಟ್ ಆಗ್ತದೋ?
ಪೊಜೆಂಕುವುದು ಇವೆರಡಕ್ಕೂ ಬರುವುದಿಲ್ಲ. ಧರ್ಮದ ಸ್ಪರ್ಶ ಇರುವ ಹಲಾಲ್ ಕಟ್ ಮತ್ತು ರಾಜಕಾರಣದ ನೆರಳು ಇರುವ ಜಟ್ಕಾ ಕಟ್ ಇವೆರಡರ ಆಚೆಗೆ ನಮ್ಮ ತುಳು ಅಥವಾ ನಮ್ಮ ಜನಪದ ಬಹಳ ಸ್ವಚ್ಛಂದವಾಗಿದೆಯಲ್ಲ ಮತ್ತು ಸ್ವಚ್ಛವೂ ಆಗಿದೆಯಲ್ಲ ಎಂದು ಯೋಚನೆ ಮಾಡಿದಾಗ ನನಗೆ ಥ್ರಿಲ್ ಆಯಿತು. ಜನಪದಕ್ಕಿರುವ ಈ ಮುಕ್ತಭಾವವನ್ನು ಅಥವಾ ಓಪನ್ ಎಂಡೆಡ್‍ನೆಸ್ ಅನ್ನು ನಮ್ಮ ಕಾಲದ ಖಾಯಿಲೆ-ಕಸಾಲೆಗಳಿಗೆ ಸಂಬಂಧಿಸಿದಂತೆ ನಾವು ಅನ್ವೇಷಣೆ ಮಾಡಿದ್ದು ಸಾಕಾಗಿಲ್ವೇನೋ ಅಂತಲೂ ನನಗೆ ಅನ್ನಿಸಿತು.
ಇವೆಲ್ಲವನ್ನೂ ಇಲ್ಲಿ ಯಾಕೆ ಹೇಳ್ತಾ ಇದ್ದೇನೆಂದರೆ ಚಿನ್ನಪ್ಪ ಗೌಡ ಅವರ ‘ಕರಾವಳಿ ಕಥನಗಳು’ ಎಂಬ ಈ ಪುಸ್ತಕ ನಾನು ಯೋಚನೆ ಮಾಡುತ್ತ ಬಂದ ಧಾಟಿಯಲ್ಲೇ ನೀವೆಲ್ಲರೂ ಯೋಚನೆ ಮಾಡುವಂತೆ, ಅನೇಕಾನೇಕ ಒಳನೋಟಗಳನ್ನು ಕೊಡುವ, ಕರಾವಳಿಯ ಕೂಡುಕಟ್ಟು ಬದುಕಿನ ಲೋಕದೃಷ್ಟಿಯನ್ನು ಪರಿಚಯ ಮಾಡುವ, ಹಾಗೆಯೇ ಇಲ್ಲಿಯ ಸಾಂಸ್ಕೃತಿಕ ವಿಘಟನೆಗೆ ಕಾರಣಗಳನ್ನೂ ಸಂಸ್ಕೃತಿಯ ವಿವರಗಳಲ್ಲೇ ಹುಡುಕುವಂತಹ ಕೆಲಸ ಮಾಡುತ್ತಿದೆ.
ಪಾಡ್ದನಗಳು ಬಗೆದು ಕಟ್ಟಿದ ಲೋಕದೃಷ್ಟಿ, ತುಳುವಿನ ಅಜ್ಜಿಕಥೆಗಳು, ಕೆಲಸ ಮತ್ತು ಕುಣಿತದ ಹಾಡುಗಳು, ಉಳ್ಳಾಲ್ತಿಯ ಪರಂಪರೆ ಮತ್ತು ಇತಿಹಾಸ, ಹೊಸ ತುಳು ಕಾವ್ಯ, ತಿಳಿ ಹೇಳುವ ತುಳು ಕತೆಗಳು, ತುಳು ತಲೆ ಎತ್ತಿ ನಿಲ್ಲುವ ಬಗೆ (ಅನುವಾದ ಮೀಮಾಂಸೆಯ ಕುರಿತ ಲೇಖನ ಇದು) ಮತ್ತು ಯಕ್ಷಗಾನದ ಇತಿಹಾಸ ಕಟ್ಟುವ ಕಷ್ಟದ ಕೆಲಸ- ಹೀಗೆ ಮುನ್ನೂರು ಪುಟಗಳ ಈ ಪುಸ್ತಕದಲ್ಲಿ ಎಂಟು ಸುದೀರ್ಘ ಸಂಶೋಧನ ಲೇಖನಗಳಿವೆ.
ಇವಿಷ್ಟಲ್ಲದೆ ಪ್ರೊ. ಪುರುಷೋತ್ತಮ ಬಿಳಿಮಲೆಯವರ ಮುನ್ನುಡಿಯೂ ಈ ಪುಸ್ತಕಕ್ಕೆ ಒಂದು ಒಳ್ಳೆಯ ಪ್ರವೇಶವನ್ನು ಕೊಡುತ್ತದೆ. ಬಿಳಿಮಲೆಯವರು ಈ ಪುಸ್ತಕವನ್ನು “ತುಳುವಿನ ಘನತೆ ಹೆಚ್ಚಿಸುವ ಕೃತಿ” ಎಂದೇ ತಮ್ಮ ಮುನ್ನುಡಿಯಲ್ಲಿ ಹೇಳಿದ್ದಾರೆ. ಲೇಖಕರಾದ ಚಿನ್ನಪ್ಪ ಗೌಡರು ಈ ಎಂಟೂ ಸಂಶೋಧನ ಪ್ರಬಂಧಗಳ ವ್ಯಾಪ್ತಿ-ಉದ್ದೇಶ ಮತ್ತು ಆಶಯವನ್ನು ‘ಕಥನ ಕಾರಣ’ ಎಂಬ ತಮ್ಮ ಮಾತುಗಳಲ್ಲಿ ಹಿಡಿದಿಟ್ಟಿರುವುದರಿಂದ ಈ ಪುಸ್ತಕ ಏನನ್ನು ಉದ್ದೇಶಿಸಿದ ಪುಸ್ತಕ ಮತ್ತು ಏನನ್ನು ಮಾಡುವ ಪುಸ್ತಕ ಎಂಬುದು ಆರಂಭದಲ್ಲೇ ಸ್ಪಷ್ಟವಾಗುತ್ತದೆ.
ಸರಳ, ನೇರ ಮತ್ತು ವಿವರ-ವಿವರ-ವಿವರ ಇವು ಚಿನ್ನಪ್ಪರ ಮಾತು ಮತ್ತು ಬರವಣಿಗೆಯ ಮೂಲಮಾತೃಕೆಗಳು. ಬಹಳ ಡಿಸ್ಕ್ರಿಪ್ಟಿವ್ ಮತ್ತು ಅನಲೆಟಿಕಲ್ ಆಗಿರುವ ಈ ಪುಸ್ತಕದ ಎಲ್ಲ ಲೇಖನಗಳು ತುಳು ಜಾನಪದ ಮತ್ತು ಸಾಹಿತ್ಯದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಬರೆದ ಲೇಖನಗಳು. ತುಳುಭಾಷೆ, ಜಾನಪದ ಮತ್ತು ಸಾಹಿತ್ಯ ಇವುಗಳ ಮೋಹಕ ಮತ್ತು ಮಾಯಕದ ಲೋಕವನ್ನು ಇಲ್ಲಿಯ ಎಂಟೂ ಲೇಖನಗಳು ಓದುಗರಿಗೆ ಪದರುಪದರಾಗಿ ಪರಿಚಯಿಸುತ್ತವೆ. ಓರ್ವ ಶಿಸ್ತುಬದ್ಧ ಸಂಶೋಧಕರಾಗಿರುವ ಚಿನ್ನಪ್ಪ ಗೌಡರು ತಮ್ಮ ಪ್ರತಿಯೊಂದು ಲೇಖನದಲ್ಲೂ ಲೇಖನದ ಉದ್ದೇಶ, ವ್ಯಾಪ್ತಿ, ಅಧ್ಯಯನ ಕ್ರಮ ಮತ್ತು ಅಧ್ಯಯನಕ್ಕಿರುವ ಮುಂದಿನ ಸಾಧ್ಯತೆ ಇವನ್ನು ಬಹಳ ಸ್ಪಷ್ಟವಾಗಿ ದಾಖಲಿಸುತ್ತಾರೆ. ಅಷ್ಟೇ ಮುಖ್ಯವಾದುದು ಅವರು ಮಾಡುವ ಸಾಹಿತ್ಯ ಸಮೀಕ್ಷೆಯೂ ಕೂಡ. ಇಲ್ಲಿಯ ಎಲ್ಲ ಲೇಖನಗಳಲ್ಲಿ ಮೊತ್ತಮೊದಲಿಗೆ ಆ ಅಧ್ಯಯನ ವಿಷಯಕ್ಕೆ ಸಂಬಂಧಿಸಿದಂತೆ ನಡೆದಿರುವ ಅಗಾಧ ಕೆಲಸಕಾರ್ಯಗಳ ಸಮೀಕ್ಷೆಯನ್ನು ಚಿನ್ನಪ್ಪರು ಎಷ್ಟು ಅಚ್ಚುಕಟ್ಟಾಗಿ ಮಾಡುತ್ತಾರೆ ಎಂದರೆ ಒಬ್ಬ ಸಂಶೋಧನಾರ್ಥಿ ತನ್ನ ಸಂಶೋಧನೆಯ ಆರಂಭದಲ್ಲಿ ಮಾಡಲೇಬೇಕಾದ ಅತ್ಯಂತ ಪ್ರಮುಖ ಕೆಲಸ ಯಾವುದು ಎಂಬುದನ್ನೂ ಇದು ಹೇಳುವಂತಿದೆ. ಚಿನ್ನಪ್ಪರ ಈ ಲೇಖನಗಳಲ್ಲಿರುವ ಮಾಹಿತಿ ಕಣಜವನ್ನು ನೋಡಿ ನಾನು ನಿಜಕ್ಕೂ ದಂಗು ಬಡಿದು ಹೋದೆ. ಎಷ್ಟೊಂದು ಕೆಲಸಗಳು ತುಳುವಿನಲ್ಲಿ ನಡೆದಿದೆ ಎಂಬ ಒಂದು ಸುದೀರ್ಘ ಹಿನ್ನೋಟವನ್ನು ಚಿನ್ನಪ್ಪರು ಇಲ್ಲಿ ಕೊಟ್ಟು ಬಹಳ ಅಗತ್ಯವಾದ ಮತ್ತು ಬಹಳ ಮುಖ್ಯವಾದ ಕೆಲಸವನ್ನು ಮಾಡಿದ್ದಾರೆ.
ಇಲ್ಲಿಯ ಎಲ್ಲ ಲೇಖನಗಳ ಸಂರಚನೆ ಹೇಗಿದೆಯೆಂದರೆ ವಿವರ, ವಿವರಣೆ, ವಿಶ್ಲೇಷಣೆ ಮತ್ತು ಶೋಧನೆ ಹೀಗಿದೆ. ಇದು ಅತ್ಯಂತ ಸ್ವಾಗತಾರ್ಹವಾದ ಕ್ರಮವೂ ಹೌದು. ನನಗಿರುವ ಸಮಯದ ಮಿತಿಯ ಹಿನ್ನೆಲೆಯಲ್ಲಿ ಈ ಪುಸ್ತಕದ ಪ್ರತಿಯೊಂದು ಲೇಖನಗಳನ್ನೂ ಎತ್ತಿಕೊಂಡು ಲೇಖಕರು ಇಲ್ಲಿ ಯಾವುದನ್ನು ಚರ್ಚೆ ಮಾಡುತ್ತಿದ್ದಾರೆ, ಹೇಗೆ ವಿಶ್ಲೇಷಣೆ ನಡೆಸುತ್ತಿದ್ದಾರೆ, ಯಾವ ಮೂಲಭೂತ ಪ್ರಶ್ನೆಗಳನ್ನು ಎತ್ತಿಕೊಂಡಿದ್ದಾರೆ ಇತ್ಯಾದಿಗಳನ್ನು ಪರಿಚಯಿಸುವುದಕ್ಕೆ ಹೋಗುವುದಿಲ್ಲ. ಯಾಕೆಂದರೆ ಪುಸ್ತಕ ಓದುವ ಯಾರಿಗೇ ಆದರೂ ನನ್ನ ಅವಲೋಕನದ ಮಾತುಗಳ ಅಗತ್ಯವೇ ಇಲ್ಲದಂತೆ ಇಲ್ಲಿಯ ಎಲ್ಲ ಲೇಖನಗಳು ಸ್ವಯಂವೇದ್ಯವಾಗಿವೆ. ಆದರೆ ಈ ಪುಸ್ತಕದ ಹಿನ್ನೆಲೆಯಲ್ಲಿ ಕೆಲವು ಮುಖ್ಯ ಅಂಶಗಳ ಬಗ್ಗೆ ನಿಮ್ಮ ಗಮನ ಸೆಳೆಯುವುದಕ್ಕೆ ನಾನು ಬಯಸುತ್ತೇನೆ.
ಈಗಷ್ಟೇ ಮಾತಾಡಿದ ತುಳು-ಕನ್ನಡ ವಿದ್ವಾಂಸರಾದ ಪ್ರೊ. ಬಿ.ಎ ವಿವೇಕ ರೈಯವರು ಎಂಪಿರಿಕಲ್ ಮತ್ತು ಥಿಯರಿಟಿಕಲ್ ಸಂಶೋಧನೆಗಳ ಬಗ್ಗೆ ಕ್ವಚಿತ್ತಾಗಿ ಪ್ರಸ್ತಾಪ ಮಾಡಿದರು. ನಾನು ಇದನ್ನು ಸ್ವಲ್ಪ ವಿಸ್ತರಿಸುವುದಕ್ಕೆ ಬಯಸುತ್ತೇನೆ. 2002ನೇ ಇಸವಿಯ ಡಿಸೆಂಬರ್ ತಿಂಗಳ ‘ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ’ಯ 37ನೇ ಸಂಚಿಕೆಯಲ್ಲಿ ನಮ್ಮ ದೇಶದ ಬಹುಮುಖ್ಯ ಚಿಂತಕರಾದ ಪ್ರೊ. ಗೋಪಾಲ್ ಗುರು ಅವರು ‘How Egalitarian Are the Social Sciences in India?’ಎಂಬ ಒಂದು ಲೇಖನ ಬರೆದಿದ್ದಾರೆ. ಆ ಲೇಖನದಲ್ಲಿ ಗೋಪಾಲ್ ಗುರು ಅವರು ಒಟ್ಟಾರೆಯಾಗಿ ಹೇಳುವುದು ಇಷ್ಟು.
ಇಂಡಿಯಾದಂತಹ ದೇಶದಲ್ಲಿ ಸೋಶಿಯಲ್ ಸೈನ್ಸ್ನ ಪ್ರಾಕ್ಟೀಸ್ ಅನ್ನೋದು ಏನಿದೆ ಅದು ಬಹಳ ಸ್ಪಷ್ಟವಾಗಿ ಎರಡಾಗಿ ವಿಭಜನೆಗೊಂಡಿದೆ. ಬಹುದೊಡ್ಡ ಸಂಖ್ಯೆಯ ಅಕಡೆಮಿಶಿಯನ್ಸ್ ಎಂಪೆರಿಕಲ್ ಆದ ರಿಸರ್ಚ್‍ಗಳನ್ನು ಮಾಡುತ್ತಿದ್ದರೆ; ಬಹಳ ಪ್ರಿವಿಲೇಜ್‍ಡ್ ಆದ ಕೆಲವೇ ಕೆಲವು ಜನರು ಥಿಯರಿಟಿಕಲ್ ಆದ ರಿಸರ್ಚ್‍ಗಳನ್ನು ಮಾಡುತ್ತಿದ್ದಾರೆ. ಈ ಥಿಯರೆಟಿಕಲ್ ರಿಸರ್ಚ್‍ಗಳನ್ನು ಮಾಡುತ್ತಿರುವ ಕೆಲವೇ ಕೆಲವು ಜನರ ಗುಂಪು ಎಂಪೆರಿಕಲ್ ರಿಸರ್ಚ್‍ಗಳನ್ನು ಮಾಡುವ ಸಂಶೋಧಕರಿಗಿಂತ ತಾವು ಸುಪೀರಿಯರ್ ಎಂದು ಭಾವಿಸಿದ್ದಾರೆ. ಇದು ನಮ್ಮ ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಇತರೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಹಳ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇದನ್ನು ಒಂದು ಅನಾಲೊಜಿಯ ಮೂಲಕ ವಿವರಿಸುವುದಾದರೆ ಇಂಡಿಯನ್ ಸೋಶಿಯಲ್ ಸೈನ್ಸ್ ಕ್ಷೇತ್ರದ ಸಂಶೋಧನೆಗಳು ಥಿಯರಿಟಿಕಲ್ ಬ್ರಾಹ್ಮಿನ್ಸ್ ಮತ್ತು ಎಂಪೆರಿಕಲ್ ಶೂದ್ರಾಸ್ ಇವರ ನಡುವಣ ಸ್ಪಷ್ಟ ವ್ಯತ್ಯಾಸವನ್ನು ಪ್ರತಿನಿಧಿಸುವಂತಿವೆ.” ಇದು ಗೋಪಾಲ್ ಗುರು ಅವರ ಮಾತಿನ ಒಟ್ಟು ಸಾರಾಂಶ. ಈ ವಾದವನ್ನು ಅವರು ಆ ಲೇಖನದಲ್ಲಿ ಸವಿವರವಾಗಿ ಚರ್ಚೆ ಮಾಡುತ್ತಾರೆ.
ಈಗ ಇದನ್ನು ಪರಿಶೀಲಿಸೋಣ. ಗೋಪಾಲ್ ಗುರು ಅವರ ಮಾತು ಸಂಪೂರ್ಣ ನಿಜ ಇದ್ದಿರಬಹುದು ಅಥವಾ ಅಲ್ಲಿಯ ಕೆಲವು ಅಂಶಗಳು ನಿಜವಾಗಿದ್ದಿರಲೂಬಹುದು. ಆದರೆ ಎಂಪೆರಿಕಲ್ ವಿವರಗಳ ಮೂಲಕವೇ ಥಿಯರೆಟಿಕಲ್ ಆದ ವಾದಗಳನ್ನು ಕಟ್ಟಿದ ಬಾಬಾಸಾಹೇಬ್ ಅಂಬೇಡ್ಕರ್ ಅವರಂಥವರ ನಿದರ್ಶನಗಳು ಕಣ್ಣ ಮುಂದೆ ಇರುವಾಗ ಗೋಪಾಲ್ ಗುರು ಅವರ ಒಟ್ಟು ವಾದವನ್ನು ನನ್ನಂಥವನಿಗೆ ಪೂರ್ಣವಾಗಿ ಒಪ್ಪುವುದು ಕಷ್ಟ.
ಇವಿಷ್ಟೇ ಅಲ್ಲದೆ ಗೋಪಾಲ್ ಗುರು ಅವರು ಮಾಡುವ ಈ ಥಿಯರಿಟಿಕಲ್ ಮತ್ತು ಎಂಪೆರಿಕಲ್ ಎಂಬ ಕ್ಲಾಸಿಫಿಕೇಶನ್ ಕೂಡ ನನಗೆ ಬಹಳ ಸಮಸ್ಯಾತ್ಮಕ. ಚಿನ್ನಪ್ಪ ಗೌಡ ಅವರ ಈ ಪುಸ್ತಕ ಗೋಪಾಲ್ ಗುರು ಅವರ ಮಾತಿನಲ್ಲಿರುವ ಸಮಸ್ಯೆಯನ್ನು ಮುಂಚೂಣಿಗೆ ತಂದಿದೆ ಎಂದು ನಾನು ಭಾವಿಸುತ್ತೇನೆ. ಚಿನ್ನಪ್ಪರ ಪುಸ್ತಕದಲ್ಲಿ ಬಹಳ ಶ್ರೀಮಂತವಾದ ಎಂಪೆರಿಕಲ್ ವಿವರಗಳು ಇವೆ. ಈ ಎಂಪೆರಿಕಲ್ ವಿವರಗಳೇ ತಮಗೆ ಬೇಕಾದ ತಾತ್ತ್ವಿಕತೆಯನ್ನು ತಮ್ಮದೇ ಆದ ರೀತಿಯಲ್ಲಿ ಕಟ್ಟಿವೆ ಮತ್ತು ಕಟ್ಟುತ್ತವೆ ಕೂಡ. ಎಂಪೆರಿಕಲ್ ವಿವರಗಳಲ್ಲಿ ತಾತ್ತ್ವಿಕತೆ ಇಲ್ಲ, ಅಥವಾ ತಾತ್ತ್ವಿಕ ಸಂಗತಿಯ ಮಂಡನೆಗೆ ಎಂಪೆರಿಕಲ್ ವಿವರಗಳ ನಿಖರತೆಯ ಅಗತ್ಯ ಇಲ್ಲ ಎಂಬುದನ್ನು ಇವತ್ತಿನ ಯಾವ ಸಂಶೋಧಕನೂ ಒಪ್ಪಲು ಸಾಧ್ಯ ಇಲ್ಲ.
ಇದನ್ನು ನಿದರ್ಶನವೊಂದರ ಮೂಲಕ ವಿವರಿಸೋಣ. ನಾವು ವೈಜ್ಞಾನಿಕ ಎಂದು ತಿಳಿಯುವ ಸಂಖ್ಯಾಶಾಸ್ತ್ರದಂತಹ ಅಂಕಿ-ಅಂಶಗಳನ್ನಷ್ಟೇ ದಾಖಲಿಸುವ, ಸಂಗ್ರಹಿಸುವ, ಶೈಕ್ಷಣಿಕ ನಿಕಾಯವೂ ತನಗೆ ಅರಿವಿಲ್ಲದಂತೆಯೇ ಅಂಕಿ-ಅಂಶಗಳ ಮೂಲಕವೇ ಒಂದು ಬಗೆಯ ತಾತ್ತ್ವಿಕತೆಯನ್ನು ಕಟ್ಟುತ್ತದೆ. ಒಂದು ದೇಶದ ಜಿಡಿಪಿಯ ಬೆಳವಣಿಗೆಯ ದರಕ್ಕೂ ಆ ದೇಶದಲ್ಲಿಯ ಶಾಂತಿ-ಸಾಮರಸ್ಯದ ವಾತಾವರಣಕ್ಕೂ ಸಂಬಂಧ ಇದೆ ಎಂಬುದನ್ನು ಇವತ್ತು ಅರ್ಥನೀತಿ ತಜ್ಞರು ನಿಖರ ಅಂಕಿ-ಅಂಶಗಳ ಮೂಲಕ ಹೇಳುತ್ತಿದ್ದಾರೆ. ಒಂದು ದೇಶವನ್ನು ಆಳುವ ಪಕ್ಷ ಯಾವ ಸಿದ್ಧಾಂತವನ್ನು ಹೊಂದಿರುತ್ತದೋ ಆ ಸಿದ್ಧಾಂತಕ್ಕನುಗುಣವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ಮತ್ತು ಬೆಳವಣಿಗೆಯ ವೃದ್ಧಿಯ ದರದಲ್ಲಿ ವ್ಯತ್ಯಾಸಗಳಾಗುತ್ತವೆ ಎಂಬುದನ್ನು ಇವತ್ತು ಸಂಖ್ಯಾಶಾಸ್ತ್ರ ತೋರಿಸಿಕೊಡುತ್ತಿದೆ. ಹಾಗಾಗಿ ಆರ್ಥಿಕ ಬೆಳವಣಿಗೆಯನ್ನು ಗಮನಿಸುವ ಅಂಕಿ-ಅಂಶಗಳ ಹಿನ್ನೆಲೆಯಲ್ಲಿ ಅರ್ಥಶಾಸ್ತ್ರಜ್ಞರು, Safeguarding the Idea of India ಎಂಬಂತಹ ರಾಜಕೀಯ ಚಿಂತನೆಯ ಲೇಖನಗಳನ್ನು ಬರೆಯಲು ತೊಡಗಿದ್ದಾರೆ ಎಂಬಂತಹ ಸಂಗತಿಗಳು ನಮಗೆ ಈ ಥಿಯರಿಟಿಕಲ್ ಮತ್ತು ಎಂಪೆರಿಕಲ್ ಎಂಬ ಶೈಕ್ಷಣಿಕ ವಲಯದ ಕೃತಕ ಗೋಡೆಗಳನ್ನು ಒಡೆಯುವಂತಹ ಸಂದೇಶವನ್ನು ರವಾನಿಸುತ್ತಿವೆ. ಚಿನ್ನಪ್ಪರ ಈ ಪುಸ್ತಕವೂ ಈ ಥಿಯರಿಟಿಕಲ್ ಮತ್ತು ಎಂಪೆರಿಕಲ್ ಎಂಬ ವರ್ಗೀಕರಣವನ್ನು ಪ್ರಶ್ನಿಸುವ ಮತ್ತು ನಿರಾಕರಿಸುವ ಕೆಲಸವನ್ನು ಮಾಡುತ್ತಿದೆ.
ಈ ಪುಸ್ತಕದಲ್ಲಿರುವ ಮೊದಲ ಲೇಖನ ಪಾಡ್ದನಗಳ ಒಳಗಿನಿಂದ: ಪಾಡ್ದನಗಳು ಬಗೆದು ಕಟ್ಟಿದ ಲೋಕದೃಷ್ಟಿ. ಈ ಲೇಖನದಲ್ಲಿ ಚಿನ್ನಪ್ಪ ಗೌಡರು ಕಲ್ಕುಡ-ಕಲ್ಲುರ್ಟಿಯ ಪಾಡ್ದನವನ್ನು ವಿಶ್ಲೇಷಣೆ ಮಾಡುತ್ತಾರೆ. ಅವರದ್ದೇ ಮಾತನ್ನು ನಾನು ಇಲ್ಲಿ ಉಲ್ಲೇಖಿಸುವುದಾದರೆ, “ಇದು ಪರ್ಯಾಯ ಅಲ್ಲ, ಸಮಾನಾಂತರ, ಇದು ಹಿಸ್ಟರಿ ಫ್ರಮ್ ಬಿಲೋ ಎಂಬ ಚಿಂತನೆಗೆ ಅನುಗುಣವಾದುದು, ಭಾರತೀಯ ಇತಿಹಾಸವನ್ನು ಕಟ್ಟುವ ಕೆಲಸದ ಸಂಕೀರ್ಣತೆಯನ್ನು ಇದು ಹೇಳುತ್ತದೆ, ಪಾಡ್ದನಗಳು ಕಟ್ಟಿಕೊಡುವ ಜನರ ಇತಿಹಾಸದ ಇಹಪರ ಕಾಳಜಿಗಳನ್ನು ತೋರಿಸುವುದು ನನ್ನ ಉದ್ದೇಶ, ಪಾಡ್ದನಕಾರನ ತುಡಿತ ಇರುವುದು ತೀರ್ಪು ನೀಡುವುದರಲ್ಲಿ ಅಲ್ಲ, ಮನುಷ್ಯ ವರ್ತನೆಗಳನ್ನು ನಿರೂಪಿಸುವುದರಲ್ಲಿ.” ಇವೆಲ್ಲವೂ ಚಿನ್ನಪ್ಪರ ಪುಸ್ತಕದಲ್ಲಿರುವ ಮಹತ್ವದ ಮಾತುಗಳು ಮತ್ತು ಈ ಮಾತುಗಳೆಲ್ಲವೂ ಖಚಿತವಾದ ತಾತ್ತ್ವಿಕ ಗ್ರಹಿಕೆಯ ಮಾತುಗಳೂ ಹೌದು.
ಚಿನ್ನಪ್ಪರು ಕೊಡುವ ಈ ತಾತ್ತ್ವಿಕ ಎಳೆಗಳನ್ನು ಪರಸ್ಪರ ಹೆಣೆದುಕೊಂಡು ಥಿಯರೆಟಿಕಲಿ ಗ್ರೌಂಡೆಡ್ ಆದ ಆರ್ಗ್ಯುಮೆಂಟ್‍ಗಳನ್ನು ಮುಂದೆ ಬರುವ ಸಂಶೋಧಕರು ಮಾಡಬೇಕು. ಯಾಕೆಂದರೆ ಸಂಶೋಧನೆ ಅನ್ನುವುದು ಈ ಭೂಮಿಯಲ್ಲಿ ಮನುಷ್ಯ ಪ್ರಾಣಿ ರೂಪುಗೊಂಡಂದಿನಿಂದ ಆರಂಭವಾದ ಬಹಳ ದೊಡ್ಡ ಕ್ರಾಸ್ ಕಂಟ್ರಿ ರಿಲೇ ರೇಸ್. ಓಟಗಾರನೊಬ್ಬ ತನಗೆ ನಿಗದಿಯಾದ ಗುರುತಿನಲ್ಲಿಗೆ ಓಡಿ ತನ್ನ ಬ್ಯಾಟನ್ ಅನ್ನು ಮುಂದಿನ ಓಟಗಾರನಿಗೆ ಹಸ್ತಾಂತರ ಮಾಡುವಂತೆ ಸಂಶೋಧಕರೂ ತಮ್ಮ ಸಂಶೋಧನೆಯನ್ನು ಮುಂದಿನವರಿಗೆ ದಾಟಿಸುತ್ತಾರೆ. ದೇಶ-ಕಾಲಗಳ ವ್ಯತ್ಯಾಸ ಇಲ್ಲದೆ ನಡೆಯುವ ಸಂಶೋಧನೆಯ ಅಂತಿಮ ಉದ್ದೇಶ ದೇಶ-ಕಾಲಗಳನ್ನು ಅರ್ಥ ಮಾಡಿಕೊಳ್ಳುವುದೇ ಆಗಿದೆ. ದೇಶ-ಕಾಲಗಳನ್ನು ಅರ್ಥ ಮಾಡಿಕೊಳ್ಳುವುದೆಂದರೆ ಅಂತಿಮವಾಗಿ ಮನುಷ್ಯನನ್ನು ಅರ್ಥ ಮಾಡುವುದೇ ಆಗಿದೆ. ಮನುಷ್ಯನನ್ನು ಅರ್ಥ ಮಾಡಿಕೊಳ್ಳುವ, ಅಂದರೆ ಹ್ಯೂಮನ್ ಅನ್ನು ಅರ್ಥ ಮಾಡಿಕೊಳ್ಳುವ ನಿಕಾಯದಲ್ಲೇ ನಾವೆಲ್ಲರೂ ಕೆಲಸ ಮಾಡುವುದರಿಂದ ನಾವು ಇದನ್ನು ವಿಶಾಲವಾದ ಅರ್ಥದಲ್ಲಿ ಹ್ಯೂಮಾನಿಟೀಸ್, ಮಾನವಿಕಗಳು ಎಂದು ಕರೆಯುತ್ತೇವೆ.
ಹ್ಯುಮಾನಿಟೀಸ್ ಯಾಕೆ ಮುಖ್ಯ ಎಂಬುದನ್ನು ಚಿನ್ನಪ್ಪರ ಪುಸ್ತಕದಲ್ಲೇ ಬರುವ ಒಂದು ಮಾತನ್ನು ಆಧಾರವಾಗಿಟ್ಟುಕೊಂಡು ವಿವರಿಸುತ್ತೇನೆ. ಕಾರ್ಕಳದಲ್ಲಿ ಧೀಮಂತ ಚೆಲುವಿನ ಗೊಮ್ಮಟನನ್ನು ಕೆತ್ತಿದ ಬೀರಕಲ್ಕುಡನಿಗೆ ಚಿನ್ನದ ಬಹುಮಾನವೂ ಸಿಗುತ್ತದೆ, ಹಾಗೆಯೇ ಕಾರ್ಕಳ ಬಿಟ್ಟು ಇನ್ನೊಂದೆಡೆ ಇಂಥ ಶಿಲ್ಪ ಕೆತ್ತಬಾರದು ಎಂಬ ಕಾರಣದಿಂದ ಬಲದ ಕೈ ಮತ್ತು ಎಡದ ಕಾಲನ್ನು ಕಳೆದುಕೊಳ್ಳುವಂತಹ ದುಸ್ಥಿತಿಯೂ ಬರುತ್ತದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹೀಗೆ ಎರಡನ್ನೂ ಕೊಟ್ಟವ ಕಾರ್ಕಳದ ಭೈರರಸ. ಅಂಗ ಊನಗೊಂಡ ಕಲ್ಕುಡ ಕಾರ್ಕಳದಿಂದ ವೇಣೂರಿಗೆ ಬರುತ್ತಾನೆ. ಅಲ್ಲಿ ವೇಣೂರಿನ ಅರಸನಾದ ತಿಮ್ಮಣ್ಣಾಜಿಲ “ತನಗೂ ಗೊಮ್ಮಟನನ್ನು ಕೆತ್ತಿ ಕೊಡು” ಎಂದು ಕೇಳುತ್ತಾನೆ. ಆಗ ಬೀರಕಲ್ಕುಡ “ನನ್ನ ಅಂಗ ಊನವಾಗಿದೆ, ನನಗೆ ಶಿಲಾ ಕೆತ್ತನೆ ಸಾಧ್ಯವಿಲ್ಲ” ಎನ್ನುತ್ತಾನೆ. ಅದಕ್ಕೆ ಅರಸನಾದ ಅಜಿಲ ‘ನಿನ್ನ ಜಾತಿ ಸರೀಕರನ್ನು ಕರೆಸು, ನಿನ್ನ ನೇತೃತ್ವದಲ್ಲಿ, ನಿನ್ನ ಮಾರ್ಗದರ್ಶನದಲ್ಲಿ ಗೊಮ್ಮಟನನ್ನು ಕೆತ್ತಿಸು’ ಎಂಬ ಸಲಹೆಗೆ ಕಲ್ಕುಡನ ಪ್ರತಿಕ್ರಿಯೆ ಇದು: ‘ಇತರರಿಗೆ ಗುರುತು ಮರ್ಮ ಕಲಿಸುವುದಕ್ಕಿಂತ ನಾನೇ ಮಾಡುವೆ’. ಕೆತ್ತನೆಗೆ ಅನಿವಾರ್ಯವಾಗಿ ಬೇಕಿದ್ದ ದೇಹದ ಅಂಗ ಭಾಗಗಳನ್ನು ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಶಿಲ್ಪಿ, ತಾನು ಕಲಿತ ಈ ಅಮೋಘ ವಿದ್ಯೆಯನ್ನು ತನ್ನ ಜಾತಿಯವರಿಗೇ ಆದರೂ ಕಲಿಸಿ ಕೊಡಲಾರೆ ಎಂದು ಹೇಳುತ್ತಾನೆ.
ಬೀರ ಕಲ್ಕುಡನ ಈ ನಿಲುವಿಗೆ ಅನೇಕ ಕಾರಣಗಳಿರಬಹುದು. ಆದರೆ ಇಲ್ಲಿ ನಿರಾಕರಿಸಲಾಗದ ಒಂದು ಆಯಾಮ ಇದೆ. ಅದು ತನ್ನ ವಿದ್ಯೆಯನ್ನು ಉಳಿದವರಿಗೆ ಕಲಿಸಿಕೊಡಲಾರೆ, ಅದು ತನ್ನ ಜೊತೆಗೇ ಮಣ್ಣಾಗಲಿ ಎಂಬ ಮನೋಭಾವ. ಇದನ್ನು ಏನೆಂದು ಕರೆಯೋಣ? ಸಾಯುವ ಸ್ಥಿತಿಯಲ್ಲಿರುವ ಒಬ್ಬ ಮನುಷ್ಯ, ದೇಹದ ಸ್ವಾಧೀನವನ್ನೇ ಕಳೆದುಕೊಂಡ ಒಬ್ಬ ಮನುಷ್ಯ ಇಂತಹ ನಿಲುವನ್ನು ತಾಳುವುದು ಹೇಗೆ ಸಾಧ್ಯ? ಇದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಭೈರರಸನನ್ನು ಅರ್ಥ ಮಾಡಿಕೊಂಡಷ್ಟು ಸರಳವಾಗಿ ಬೀರ ಕಲ್ಕುಡನನ್ನು ಅರ್ಥ ಮಾಡಿಕೊಳ್ಳಬಹುದೇ? ಇದನ್ನು ಅಧ್ಯಯನ ಮಾಡುವುದೇ ಹ್ಯೂಮಾನಿಟೀಸ್.
ನಾವೆಲ್ಲರೂ ಮುಟ್ಟಿ ನೋಡಿಕೊಳ್ಳುವಂತೆ, ನಮ್ಮ ಮುಖಕ್ಕೆ ಕನ್ನಡಿ ಹಿಡಿಯುವಂತೆ “ಇದು ನಿಮ್ಮ ಪಾಡು” ಎಂದು ಪಾಡ್ದನ ಒಂದೇ ಒಂದು ಸಾಲಿನಲ್ಲಿ ಹೇಳಿದೆ. ಚಿನ್ನಪ್ಪರ ಪುಸ್ತಕ ಓದುತ್ತ ಹೋದಾಗ ನನ್ನಿಂದ ಹೊರಟ ಚಿಂತನೆಯ ಒಂದು ನೂಲು ಇದು. ಇಂತಹ ಹತ್ತು ಹಲವು ನೂಲುಗಳು ಈ ಪುಸ್ತಕದಲ್ಲಿ ಇವೆ. ಇವುಗಳನ್ನು ಪರಸ್ಪರ ಹೆಣೆದಾಗ ತಾತ್ತ್ವಿಕವಾದ ಒಂದು ನಕಾಶೆ ಮೂಡುತ್ತದೆ. ಮನುಷ್ಯನ ದೇಹಕ್ಕೆ ಒಂದು ಆಕಾರ ಇದೆ, ಆದರೆ ಮನುಷ್ಯನ ಮನಸ್ಥಿತಿಗೆ ಅಂತಹ ಒಂದು ನಿಚ್ಚಳ ನಕಾಶೆ ಇಲ್ಲ. ಅಂತಹ ನಕಾಶೆಯನ್ನು ನಾವು ನಾವಾಗಿಯೇ ರೇಖಿಸುವುದಕ್ಕೆ ಈ ಪುಸ್ತಕ ಅನುವು ಮಾಡಿಕೊಡುತ್ತದೆ. ಇದನ್ನು ನಾನು ‘ಕರಾವಳಿ ಕಥನಗಳು’ ಪುಸ್ತಕದ ಶಕ್ತಿ ಎಂದೇ ಭಾವಿಸಿದ್ದೇನೆ.
ತುಳುವಿನ ಅಜ್ಜಿಕತೆಗಳ ಕುರಿತು ಚಿನ್ನಪ್ಪರು ಇಲ್ಲಿ ಬಹಳ ವಿಸ್ತೃತವಾಗಿ ಬರೆದಿದ್ದಾರೆ. ಈ ಕ್ಷೇತ್ರದಲ್ಲಿ ಅವರಿಗೆ ಶ್ರೀಮಂತವಾದ ಅನುಭವವೂ ಇದೆ. ಪ್ರೊ. ಬಿ ಸುರೇಂದ್ರ ರಾವ್ ಅವರ ಜೊತೆಗೂಡಿ ಚಿನ್ನಪ್ಪರು ತುಳುವಿನ ಬಹಳ ಮುಖ್ಯವಾದ ಅರುವತ್ತು ಕತೆಗಳನ್ನು ‘ರೈನ್ ಬಾಯ್’ ಎಂದು ಇಂಗ್ಲಿಷ್‍ಗೆ ಅನುವಾದಿಸಿದ್ದಾರೆ. ತಮ್ಮ ಎಲ್ಲ ಲೇಖನಗಳಲ್ಲೂ ಮಾಡುವಂತೆ ಇಲ್ಲೂ ಕೂಡ ಚಿನ್ನಪ್ಪರು ಅಜ್ಜಿಕತೆಗಳ ಸಂಗ್ರಹದ ಇತಿಹಾಸವನ್ನು ವಿವರಿಸುತ್ತ, ಪರಿಶೀಲಿಸುತ್ತ, ಕತೆಗಳ ಸಾಂಸ್ಕೃತಿಕ ಮಹತ್ವವನ್ನು ಹೇಳುತ್ತಾರೆ. ಈ ಕತೆಗಳನ್ನು ಅಶಕ್ತರ ಆಯುಧಗಳು ಎಂದು ಅವರು ಪರಿಭಾವಿಸಿರುವುದು ಇಲ್ಲಿ ಬಹಳ ಮುಖ್ಯವಾದ ಮಾತು ಆಗಿದೆ. ಈ ಲೇಖನ ಅಜ್ಜಿಕತೆಗಳ ರಮ್ಯಲೋಕವನ್ನು ಪರಿಚಯ ಮಾಡಿಕೊಡುವುದರ ಜೊತೆಗೆ, ನಮ್ಮ ಅಜ್ಜಿಗಳು ಹಿಂದಿನ ಕಾಲದಲ್ಲಿ ಕಟ್ಟಿದ ಕತೆಗಳು ಹೀಗಿವೆ, ಆ ಅಜ್ಜಿಗಳ ಮೊಮ್ಮಕ್ಕಳಾದ ಕರಾವಳಿಯ ಈಗಿನ ಯುವಕರು ಕಟ್ಟುತ್ತಿರುವ ಕತೆಗಳೇನು ಎಂಬುದನ್ನೂ ಕೇಳುವಂತಿವೆ. ಇಲ್ಲಿಯ ಕತೆಗಳ ಭಾಷಿಕ, ರಾಜಕೀಯ ಮತ್ತು ಸಾಮಾಜಿಕ ಜಗತ್ತನ್ನು ಅನಾವರಣಗೊಳಿಸುವಲ್ಲಿ ಚಿನ್ನಪ್ಪರು ಯಶಸ್ವಿಯಾಗಿದ್ದಾರೆ. ನಮ್ಮ ಬೌದ್ಧಿಕ ಚಟುವಟಿಕೆಗಳು ಪುನರುಜ್ಜೀವನಗೊಳ್ಳಬೇಕಾದ ಕ್ರಮವೇ ಹೀಗೆ ಎಂದು ನಾನು ನಂಬಿದ್ದೇನೆ. ನಾವು ನಡೆಸುವ ಬೌದ್ಧಿಕ ಚಟುವಟಿಕೆಯನ್ನು ವರ್ತಮಾನದ ಜೊತೆ ಮತ್ತೆಮತ್ತೆ ಕನೆಕ್ಟ್ ಮಾಡಬೇಕು. ಈ ಸದ್ಯೋಜಾತ ಗುಣ ಚಿನ್ನಪ್ಪರ ಪುಸ್ತಕದಲ್ಲಿ ಒಂದು ಮೌಲ್ಯವೇ ಆಗಿದೆ.
ಈ ಪುಸ್ತಕದಲ್ಲಿರುವ ನನಗೆ ಬಹಳ ಇಷ್ಟವಾದ ಇನ್ನೊಂದು ಲೇಖನ ‘ಅನುವಾದ: ತುಳು ತಲೆ ಎತ್ತಿ ನಿಲ್ಲುವ ಬಗೆ’, ಕರ್ನಾಟಕದ ಸಂದರ್ಭದಲ್ಲಿ ಕನ್ನಡವನ್ನು ನಾವು ದೇಶಭಾಷೆ ಎಂದು ಕರೆದರೆ ಕರಾವಳಿಯ ಸಂದರ್ಭದಲ್ಲಿ ತುಳುವೂ ಕೂಡ ದೇಶ ಭಾಷೆಯೇ. ತನ್ನ ವಲಯದಲ್ಲಿ ದೇಶ ಭಾಷೆಯಾಗಿ, ವಿಸ್ತ್ರೃತ ಭೌಗೋಳಿಕ ಪರಿಮಿತಿಯಲ್ಲಿ ಪ್ರದೇಶ ಭಾಷೆಯಾಗಿರುವ ತುಳುವಿನ ವಿಶ್ವಾತ್ಮಕತೆ ಏನು ಎಂಬುದರ ಹುಡುಕಾಟವನ್ನು ಚಿನ್ನಪ್ಪರು ಇಲ್ಲಿ ಮಾಡುತ್ತಾರೆ. ಅನುವಾದದ ಕುರಿತ ಅವರ ಲೇಖನದಲ್ಲಿ ಇದು ಬಹಳಬಹಳ ಸ್ಪಷ್ಟವಾಗಿದೆ. ತುಳುವಿನ ಲೋಕದೃಷ್ಟಿ ಎಂದು ಅವರು ಮತ್ತೆಮತ್ತೆ ಹೇಳುವುದರ ಹಿಂದೆ ಈ ವಿಶ್ವಾತ್ಮಕತೆಯ ಹುಡುಕಾಟ ಇದೆ.
ಇಂಗ್ಲಿಷ್‍ಗಿರುವ ಆಕ್ರಮಣಶೀಲ ಸ್ವಭಾವದ ಜೊತೆಗೆ ಹೋಲಿಸಿದರೆ ಕನ್ನಡವಾಗಲಿ, ತುಳುವಾಗಲಿ ಯಾವ ಸಂಸ್ಕೃತಿಯನ್ನೂ ಆಕ್ರಮಿಸದ, ಆದರೆ ತಮ್ಮ ಸ್ವಾಯತ್ತತೆಯನ್ನು ಕಾಪಿಡುವುದಕ್ಕಾಗಿ ಹೆಣಗಾಡುವ ಭಾಷೆಗಳು. ಬಂಡವಾಳಶಾಹಿ ಮತ್ತು ತಂತ್ರಜ್ಞಾನ ಎಂಬ ಎರಡು ಚಕ್ರಗಳ ರಥ ಏರಿ ಸಾಮ್ರಾಜ್ಯ ವಿಸ್ತರಣೆಗೆ ಹೊರಟ ಇಂಗ್ಲಿಷ್‍ನ ಶಕ್ತಿಯ ಮುಂದೆ ಕನ್ನಡವಾಗಲಿ, ತುಳುವಾಗಲಿ ಹತಪ್ರಭಗೊಂಡ ಭಾಷೆಗಳೇ. ಬಾಹ್ಯ ಶಕ್ತಿಗಳ ಬೆಂಬಲವಿಲ್ಲದ, ಆದರೆ ಅಪಾರವಾದ ಅಂತಃಸ್ವತ್ತ್ವ ಇರುವ ಭಾಷೆಯನ್ನು ಇಂಗ್ಲಿಷ್‍ನಂತೆ ಚಲಿಸುವ ಭಾಷೆಯನ್ನಾಗಿ ಹೇಗೆ ಮಾಡಬಹುದು ಎಂಬ ಅನ್ವೇಷಣೆ ಚಿನ್ನಪ್ಪರ ಈ ಲೇಖನದಲ್ಲಿದೆ. ಅನುವಾದಗಳ ಮೂಲಕ ತುಳುವನ್ನು, ತುಳುವಿನ ಲೋಕಜ್ಞಾನವನ್ನು ಚಲಿಸುವಂತೆ ಮಾಡಬಹುದು ಮತ್ತು ತುಳುವಿನ ಈ ಅಂತಸ್ಸತ್ತ್ವದಿಂದ ಉಳಿದ ಭಾಷೆಗಳಲ್ಲೂ ಒಂದು ಬಗೆಯ ಸಂಚಲನವನ್ನು ಸೃಷ್ಟಿಸಬಹುದು ಎಂಬ ಇರಾದೆ ಚಿನ್ನಪ್ಪ ಗೌಡರಲ್ಲಿದೆ.
ಸಾವಿರಾರು ವರ್ಷಗಳ ಹಿಂದೆ ಕನ್ನಡಕ್ಕೆ ಒಬ್ಬ ಕವಿರಾಜಮಾರ್ಗಕಾರ ಇದ್ದ. ಕನ್ನಡದ ಮುಂದೆ ಇದ್ದ ಆ ಕಾಲದ ಸವಾಲುಗಳ ಸಂಕೀರ್ಣತೆಗೆ ಒಬ್ಬ ಮಾರ್ಗಕಾರ ಸಾಕು ಎಂದು ಕನ್ನಡ ಸಂಸ್ಕೃತಿ ಆತನನ್ನು ಸೃಷ್ಟಿಸಿತು. ಆದರೆ ಇಂದು ನಮ್ಮ ಮುಂದೆ ಇರುವ ಭಾಷಾ ಸಾಮ್ರಾಜ್ಯಶಾಹಿಯ ದಬ್ಬಾಳಿಕೆ, ಸಾಮಾಜಿಕ ಮಾಧ್ಯಮಗಳ ಭರಾಟೆ ಮತ್ತು ಫಿಲಸಾಫಿಕಲ್ ಆಗಿ ಆಂಕರ್ಡ್ ಆದ ಕೆಲಸಗಳನ್ನು ಮಾಡುವವರ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ತುಳುವಿನ ವಿಶ್ವಾತ್ಮಕತೆಯನ್ನು ಪ್ರಚುರ ಪಡಿಸುವ ಕೆಲಸವನ್ನು ಮಾಡಲು ಅನೇಕ ಮಂದಿ ಮಾರ್ಗಕಾರರು ಬೇಕಾಗಿದ್ದಾರೆ. ಅಮೃತ ಸೋಮೇಶ್ವರರು, ಬಿ ಎ ವಿವೇಕ ರೈಯವರು, ಕೆ ಚಿನ್ನಪ್ಪ ಗೌಡರು ಅಂತಹ ಮಾರ್ಗಕಾರರು.
ತುಳುವಿನ ಗುರುತನ್ನು, ತುಳುವಿನ ಮರ್ಮವನ್ನು ಬೀರ ಕಲ್ಕುಡನಂತಲ್ಲದೆ ಅನ್ಯರಿಗೆ ತಿಳಿಸಿಕೊಡುವ, ಕಲಿಸಿಕೊಡುವ ಕೆಲಸವನ್ನು ತುಳುವಿನ ಮಾರ್ಗಕಾರರು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಚಿನ್ನಪ್ಪರಂತೂ ಅನುವಾದಕ್ಕೆ ಬೇಕಾದ ಮೀಮಾಂಸೆಯನ್ನು ತಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅನುಭವದ ಹಿನ್ನೆಲೆಯಲ್ಲಿ ಮಂಡಿಸುತ್ತಿದ್ದಾರೆ. ಮಾರ್ಗಕಾರನಾದವನು ಮಾಡಬೇಕಾದ ಕೆಲಸ ಇದೇ. ಅನುವಾದಕ್ಕೆ ಸಂಬಂಧಿಸಿದ ಥಿಯರಿಗಳನ್ನು ಚಿನ್ನಪ್ಪರು ಇಲ್ಲಿ ಚರ್ಚೆಗೆ ಎತ್ತಿಕೊಳ್ಳುವುದಿಲ್ಲ. ಆದರೆ ತಮ್ಮ ಅನುಭವದ ಮೂಲಕವೇ ಅವರೊಂದು ಥಿಯರಿಯನ್ನು ಇಲ್ಲಿ ಮಂಡಿಸುತ್ತಿದ್ದಾರೆ. ಇದು ಬಹಳ ಮುಖ್ಯ ಅಂತ ನನಗೆ ಅನ್ನಿಸಿದೆ.
ತಮಗೆಲ್ಲರಿಗೂ ತಿಳಿದಿರುವಂತೆ ಬಹಳ ದೊಡ್ಡ ಪ್ರಮಾಣದ ಸಾಂಸ್ಕೃತಿಕ ಬಂಡವಾಳ ತುಳುವಿನಲ್ಲಿದೆ. ಈ ಕಲ್ಚರಲ್ ಕ್ಯಾಪಿಟಲ್‍ನ ಮಹತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡು ತುಳುವಿನಲ್ಲಿ ಸೃಷ್ಟಿಯಾದ ಲೋಕಜ್ಞಾನವನ್ನು ನಾವು ಅನ್ವೇಷಿಸಬೇಕಾಗಿದೆ ಮತ್ತು ಹರಡಬೇಕಾಗಿದೆ. ಅಂತಹ ಲೋಕಜ್ಞಾನ ನಮ್ಮ ಈ ಕಾಲದ ಉಗ್ರ ಮತ್ತು ಸಂಕುಚಿತ ಮತೀಯ ಮನೋಭಾವವೆಂಬ ಕ್ಯಾನ್ಸರ್ ಗೆಡ್ಡೆಗಳನ್ನು ಕರಗಿಸಬಹುದೇನೋ?
ಒಂದು ನಿದರ್ಶನ ಕೊಡುತ್ತೇನೆ. ‘ಪತ್ತ್ ಕೂಡುನ ಕಲೊಟು ಮುತ್ತು ಉಂಡು’ ( ಹತ್ತು ಜನ ಸೇರಿದ ಸ್ಥಳದಲ್ಲಿ ಮುತ್ತು(ವಿವೇಕ) ಇರುತ್ತದೆ) ಮತ್ತು ‘ಊರ-ಪರವೂರ ಹತ್ತೂ ಸಮಸ್ತರು’ ಎಂಬ ಎರಡು ನುಡಿಗಟ್ಟುಗಳು ತುಳು ಮಣ್ಣಿನಲ್ಲಿ ಮೂಡಿಬಂದಿವೆ. ಈ ನುಡಿಗಟ್ಟುಗಳು ಅಮಾಯಕವಾದ ನುಡಿಗಟ್ಟುಗಳಲ್ಲ. ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಮಹತ್ವ ಮತ್ತು ತುಳು ಜನಪದರ ದಾರ್ಶನಿಕತೆ ಈ ನುಡಿಗಟ್ಟುಗಳಲ್ಲಿ ಪ್ರತಿಫಲಿಸಿದೆ. ತುಳುವಿನ ಇಂತಹ ದಾರ್ಶನಿಕ ನಿಲುವನ್ನು ಚಿನ್ನಪ್ಪರು ಅಲ್ಲಲ್ಲಿ ಪ್ರಸ್ತಾವಿಸುತ್ತಾರೆ. “ಪತ್ತ್ ಕೂಡಿನ ಕಲ” ಎಂಬಲ್ಲಿ ಇರುವುದು ಲೆಕ್ಕ ಮಾಡಿದ ಹತ್ತು ಅಲ್ಲ, “ಹತ್ತೂ ಸಮಸ್ತರು” ಎಂಬ ದೀರ್ಘದಲ್ಲೂ ಇರುವುದು ಲೆಕ್ಕ ಮಾಡಿದ ಹತ್ತು ಅಲ್ಲ, ಊರಿನವರು, ಪರ ಊರಿನವರು, ಹತ್ತಕ್ಕಿಂತ ಮಿಗಿಲಾದವರು ಮತ್ತು ಸಮಸ್ತರು ಈ ನಾಲ್ಕು ಅಂಶಗಳು ಇಲ್ಲಿ ಬಹಳಬಹಳ ಮುಖ್ಯ. ಯಾರನ್ನೂ ತಿರಸ್ಕರಿಸದ, ಯಾರನ್ನೂ ಬಹಿಷ್ಕರಿಸದ, ಯಾರನ್ನೂ ಅನ್ಯರು ಎಂದು ಭಾವಿಸದ ವಿವೇಕ ತುಳುವಿನಲ್ಲಿದೆ. ಈ ವಿವೇಕವನ್ನು ಒಂದು ಚಿಂತನೆಯಾಗಿ, ತರ್ಕಬದ್ಧವಾಗಿ ಬೆಳೆಸಿದರೆ ಆಗ ಅದು ಡೆಮೋಕ್ರಸಿ ಎಂಬ ಪೊಲಿಟಿಕಲ್ ಫಿಲಾಸಫಿ ಆಗುತ್ತದೆ. ಇಂತಹ ಸಾಧ್ಯತೆಯನ್ನು ಚಿನ್ನಪ್ಪರು ಇಲ್ಲಿ ಚರ್ಚಿಸಿದ್ದಾರೆ ಎಂಬುದು ನನಗೆ ಬಹಳ ಸಂತೋಷ ಕೊಟ್ಟಿದೆ.
ಮತ್ತೆ ನಾನು ಚಿನ್ನಪ್ಪರ ಅನುವಾದ ಮೀಮಾಂಸೆಯ ಬಗ್ಗೆ ಬರ್ತೇನೆ. ನಂಬಿಕೆ ಮತ್ತು ಆರಾಧನೆಯಲ್ಲಿ ಬಹುದೇವತೆಗಳ ಉಪಾಸನೆಯನ್ನು ಒಪ್ಪಿದ ತುಳು ಸಂಸ್ಕೃತಿ, ಲೌಕಿಕದ ದಿನನಿತ್ಯದ ಬದುಕಿನಲ್ಲೂ ಸಮಸ್ತರ ಇರುವಿಕೆಯನ್ನು ಅಪೇಕ್ಷಿಸುವ ತುಳು ಸಂಸ್ಕೃತಿಯ ಚಲನೆಯನ್ನು ಇಲ್ಲಿಗೇ ನಿಲ್ಲಿಸದೆ ಆಧುನಿಕ ಸಂದರ್ಭದಲ್ಲೂ ಮುಂದುವರಿಸಬೇಕಿದ್ದರೆ ಅದು ಕನ್ನಡ, ಸಂಸ್ಕೃತ, ಮಲೆಯಾಳಮ್, ಬ್ಯಾರಿ, ಉರ್ದು, ಕೊಂಕಣಿ, ಇಂಗ್ಲಿಷ್ ಎಂಬ ‘ಎಳುವೆರ್ ದೆಯ್ಯಾರ್’ಗಳನ್ನು (ಸಪ್ತ ಮಾತೃಕೆಯರು) ಮತ್ತೆಮತ್ತೆ ಭೇಟಿಯಾಗಬೇಕು. ಪ್ರಾಚೀನ ಕಾಲದಿಂದಲೂ ಯಾವ ಬಹುದೇವತಾರಾಧನೆಗೆ ನಾವು ನಡೆದುಕೊಂಡು ಬಂದಿದ್ದೇವೋ ಅದನ್ನು ನಾವು ಆಧುನಿಕಗೊಳಿಸಿ ರೂಪಾಂತರ ಮಾಡಬೇಕು. ಅಂತಹ ರೂಪಾಂತರಕ್ಕೆ ನಮ್ಮ ಶೈಕ್ಷಣಿಕ ವಲಯದಲ್ಲಿ ಯಥೋಚಿತ ಅವಕಾಶ ಸೃಷ್ಟಿಯಾಗಬೇಕು. ಇಂತಹ ರೂಪಾಂತರಕ್ಕೆ ಅನುವಾದಗಳು ಬಹಳ ಅಗತ್ಯ. ಹೊಸಕಾಲದಲ್ಲಿ ಹೊಸ ಬೆಳವಣಿಗೆಗಾಗಿ ಹೊಸ ದೇವತೆಗಳ ಬಳಿಗೆ ಸಾಗುತ್ತ ತುಳುವಿನ ಕ್ಷಿತಿಜವನ್ನು ವಿಸ್ತರಿಸುವ ಮಾರ್ಗವನ್ನು ಚಿನ್ನಪ್ಪರು ಇಲ್ಲಿ ಆರಿಸಿಕೊಂಡಿರುವುದು ಅತ್ಯಂತ ಶ್ಲಾಘನೀಯವಾದುದು.
ತುಳುವಿನ ಪ್ರಾಚೀನ ಪಠ್ಯಗಳನ್ನು ಓದಿ, ಸಮಕಾಲೀನ ಜಗತ್ತಿನಲ್ಲಿ ಹಳೆಯ ಪಠ್ಯಗಳಿಗೆ ಹೊಸ ಅರ್ಥಗಳನ್ನು ತುಂಬುವ ಫಿಲಾಲಜಿಸ್ಟ್‍ಗಳು (ಪ್ರಾಚೀನ ಪಠ್ಯಗಳ ತಜ್ಞ ಓದುಗರು) ತುಳುವಿನಲ್ಲಿ ಬಹಳ ಮಂದಿ ಇಲ್ಲ. ಪರಂಪರೆಯಿಂದ ಬಂದಿರುವ ಲಿಖಿತ ಯಾ ಮೌಖಿಕ ಪಠ್ಯಗಳನ್ನು ಓದಿ/ಕೇಳಿ ಅರ್ಥಮಾಡಿಕೊಂಡು ಹೊಸಬಗೆಯ ಅರ್ಥಗಳನ್ನು ವ್ಯಂಜಿಸುವ ಫಿಲಾಲಜಿಸ್ಟ್‍ಗಳು, ನಮಗೆ ಈಗ ಅಗತ್ಯವಾಗಿ ಬೇಕಾಗಿದ್ದಾರೆ. ಆದರೆ ಇಂಥ ಗಂಭೀರ ಫಿಲಾಲಜಿಸ್ಟ್‍ಗಳಿಗೆ ಬಹಳ ದೊಡ್ಡ ಅಪಾಯ ಇರುವುದು ಆಯಾ ಭಾಷೆಯಲ್ಲಿರುವ ನರ್ಸಣ್ಣರುಗಳಿಂದ. ರಂಜನೆಗಾಗಿ, ಜನಮರುಳು ಮಾಡುವುದಕ್ಕಾಗಿ ತುಳುವಿನ ನುಡಿ ಮತ್ತು ನುಡಿಗಟ್ಟುಗಳನ್ನು ಓತಪ್ರೇತವಾಗಿ, ಹನಿಗಡಿಯದ ಮಳೆಯಂತೆ ಸುರಿಸುವ ಬುಡುಬುಡಿಕೆ ನರ್ಸಣ್ಣರ ವಾಗ್ಜಾಲವನ್ನೇ ತುಳುವಿನ ಶಕ್ತಿ ಎಂದು ತಿಳಿದರೆ ತುಳುವಿನ ಶೈಕ್ಷಣಿಕ ಲೋಕಕ್ಕೆ ಖಂಡಿತವಾಗಿಯೂ ಅಪಾಯ ಇದೆ. (ಬುಡುಬುಡಿಕೆ ನರ್ಸಣ್ಣ ವೃತ್ತಿ ಮಾಡುವವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರನ್ನು ಅಥವಾ ಅವರ ಕುಲಕಸುಬನ್ನು ಕೀಳಂದಾಜು ಮಾಡಿದ ಮಾತು ಇದು ಅಲ್ಲ.)
ಅನುವಾದದ ಕುರಿತು ಈ ಪುಸ್ತಕದಲ್ಲಿರುವ ಚಿನ್ನಪ್ಪರ ಲೇಖನ ಭಾಷಿಕ ಅಲಂಕಾರ ಮತ್ತು ಚಿಂತನೆಯ ಸತ್ವದ ನಡುವೆ ಬಹಳ ಸ್ಪಷ್ಟವಾದ ವ್ಯತ್ಯಾಸವನ್ನು ಮಾಡುತ್ತಿದೆ. ಮುಳಿಯ ತಿಮ್ಮಪ್ಪಯ್ಯನವರು ಕನ್ನಡದ ಆದಿಕವಿ ಪಂಪನನ್ನು ಒಬ್ಬ ಫಿಲಾಲಜಿಸ್ಟ್ ಆಗಿಯೇ ಓದಿಕೊಂಡವರು. ಚಿನ್ನಪ್ಪ ಗೌಡರು ತುಳುವಿನ ಓರ್ವ ಫಿಲಾಲಜಿಸ್ಟ್. ಓರ್ವ ಸಮರ್ಥ ಫಿಲಾಲಜಿಸ್ಟ್ ಮಾತ್ರ ಓರ್ವ ಯಶಸ್ವೀ ಅನುವಾದಕನೂ ಆಗಬಲ್ಲ. ಅನುವಾದವೆಂದರೆ ಒಂದು ಭಾಷೆಯಲ್ಲಿರುವ ಕಂಟೆಂಟ್ ಅನ್ನು ಇನ್ನೊಂದು ಭಾಷೆಗೆ ದಾಟಿಸುವುದಲ್ಲ, ವಸ್ತುವಿನ ಜೊತೆಗೆ ಸತ್ವವನ್ನೂ ದಾಟಿಸುವ ‘ಅಡಕವಾದ ಶಕ್ತ ಮರು ಬರವಣಿಗೆ’ಯೇ ಅನುವಾದ. ಇಂತಹ ಮರುಬರವಣಿಗೆಯನ್ನು ಮಾಡುವಾಗ ಒಂದು ಭಾಷೆಯ ಜ್ಞಾನ ಮತ್ತು ಆ ಜ್ಞಾನ ಕಂಡರಿಸಿದ ಲೋಕದೃಷ್ಟಿಯನ್ನೂ ಸಮರ್ಥವಾಗಿ ಹಿಡಿದಿಡಬೇಕು ಎಂಬುದು ಚಿನ್ನಪ್ಪರ ನಿಲುವು. ಇದು ಅವರ ಈ ಲೇಖನದಲ್ಲೂ ಮತ್ತು ಪ್ರೊ. ಬಿ ಸುರೇಂದ್ರ ರಾವ್ ಜೊತೆ ಸೇರಿ ನಡೆಸಿದ ಅವರ ಎಲ್ಲ ಅನುವಾದಗಳಲ್ಲೂ ಪ್ರತಿಫಲಿಸಿದೆ. ಈ ಕಾರಣಕ್ಕಾಗಿಯೂ ನಾನು ಚಿನ್ನಪ್ಪ ಗೌಡರನ್ನು ಅಭಿನಂದಿಸುತ್ತೇನೆ.
‘ಕರಾವಳಿ ಕಥನಗಳು’ ಪುಸ್ತಕವನ್ನು ಆಕೃತಿ ಪ್ರಿಂಟ್ಸ್‍ನ ಮುಖ್ಯಸ್ಥರಾದ ಕಲ್ಲೂರು ನಾಗೇಶ್ ಅವರು ಬಹಳ ಸೊಗಸಾಗಿ ಮುದ್ರಿಸಿದ್ದಾರೆ. ಪ್ರಸಿದ್ಧ ಕಲಾವಿದ, ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕ ಅವರು ರಚಿಸಿದ ಮುಖಪುಟ ಚಿತ್ರವನ್ನು ನೋಡುವ ಕಣ್ಣುಗಳಿಗೆ ಹಿತವಾಗುವಂತೆಯೂ ವರ್ಣವಿನ್ಯಾಸಗೊಳಿಸಿ ಕಲ್ಲೂರು ನಾಗೇಶರು ಈ ಪುಸ್ತಕವನ್ನು ಪ್ರೀತಿಯಿಂದ ಎತ್ತಿಕೊಳ್ಳುವಂತೆಯೂ ಮಾಡಿದ್ದಾರೆ. ಅವರನ್ನು ಮತ್ತು ದಿನೇಶ್ ಕುಕ್ಕುಜಡ್ಕರನ್ನು ನೆನಪಿಸಿಕೊಳ್ಳಬೇಕಾದುದು ನನ್ನ ಕರ್ತವ್ಯವೂ ಹೌದು.
ತಾನು ಬರೆದ ಪುಸ್ತಕದ ಲೋಕಾರ್ಪಣೆಯ ಸಂದರ್ಭದಲ್ಲಿ ತನ್ನ ಶಿಷ್ಯ ಪುಸ್ತಕದ ಅವಲೋಕನವನ್ನು ಮಾಡಲಿ ಎಂದು ಗುರುವಾದವರು ಬಯಸುವುದು ಮತ್ತು ಅದು ಸಾಧ್ಯವಾಗುವುದು ಗುರು-ಶಿಷ್ಯರ ನಡುವೆ ಪರಸ್ಪರ ಪ್ರೀತಿ-ಗೌರವದ ಸಂಬಂಧ ಇದ್ದಾಗ ಮಾತ್ರ. ಇಂತಹ ಪ್ರೀತಿ ಮತ್ತು ಗೌರವವನ್ನು ನನಗೆ ತೋರಿಸಿದ ಪ್ರೊ. ಕೆ ಚಿನ್ನಪ್ಪ ಗೌಡ ಅವರು ಭಾಷೆ-ಸಂಸ್ಕೃತಿಯ ಕುರಿತು ಆಸಕ್ತಿ ಇರುವ ಜಿಜ್ಞಾಸುಗಳಿಗೆ ಅತ್ಯಂತ ಅಗತ್ಯವಾಗಿ ಬೇಕಿದ್ದ ಇಂತಹ ಮಹತ್ವದ ಪುಸ್ತಕವನ್ನು ರಚಿಸಿಕೊಟ್ಟಿದ್ದಾರೆ. ಇದಕ್ಕಾಗಿ ಅವರಿಗೆ ನನ್ನ ವಿಶೇಷ ಅಭಿನಂದನೆಗಳು.
ಸಂಸ್ಕೃತಿ ಪ್ರೀತಿಯ ಇಂತಹ ಪ್ರಕಟಣೆಗಳ ಮೂಲಕ ಒಂದು ಶಿಕ್ಷಣ ಸಂಸ್ಥೆ ಮಾಡಬೇಕಾಗಿರುವ ಕೆಲಸ ಏನು ಎನ್ನುವುದಕ್ಕೆ ಮಾದರಿಯಾಗಿರುವುದು ನನ್ನ ಪ್ರೀತಿಯ ಸಂತ ಅಲೋಶಿಯಸ್ ಕಾಲೇಜ್. ಇಲ್ಲಿ ಒಂದು ಸಣ್ಣ ಅಧಿಕಪ್ರಸಂಗ ಮಾಡಬೇಕು ನಾನು. ಅದು ನಿಜವಾಗಿಯೂ ಅಧಿಕಪ್ರಸಂಗವೇ ಆಗಿದ್ದರೆ ದಯವಿಟ್ಟು ನನ್ನನ್ನು ಮನ್ನಿಸಿ. ಇಂದಿನ ಈ ಕಾರ್ಯಕ್ರಮವನ್ನು ಇಲ್ಲಿಯ ಕನ್ನಡ ವಿಭಾಗ ಮತ್ತು ಪ್ರಸಾರಾಂಗ ಆಯೋಜಿಸಿದೆ. ಸಂತ ಅಲೋಶಿಯಸ್ ಕಾಲೇಜ್‍ನ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸಿದ್ದು ಮಾತ್ರವಲ್ಲದೆ, ಕನ್ನಡದ ಬೌದ್ಧಿಕ ಲೋಕವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಸಿದವರು ಪಂಡಿತ ಮುಳಿಯ ತಿಮ್ಮಪ್ಪಯ್ಯನವರು. ನಾಳೆಯ ದಿನಗಳಲ್ಲಿ ಸಂತ ಅಲೋಶಿಯಸ್ ಕಾಲೇಜ್ ಯೂನಿವರ್ಸಿಟಿ ಆಗುವ ಸಾಧ್ಯತೆಗಳಿವೆ ಎಂಬ ಸುದ್ದಿಯನ್ನು ನಾವೆಲ್ಲರೂ ಕೇಳಿದ್ದೇವೆ. ಆ ದಿನ ಬಂದಾಗ ಇಲ್ಲಿಯ ಕನ್ನಡ ವಿಭಾಗವನ್ನು ‘ಮುಳಿಯ ತಿಮ್ಮಪ್ಪಯ್ಯ ಕನ್ನಡ ಅಧ್ಯಯನ ಮತ್ತು ಸಂಶೋಧನ ಕೇಂದ್ರ’ ಎಂದು ಮರುನಾಮಕರಣ ಮಾಡಿ ಮೇಲ್ದರ್ಜೆಗೇರಿಸಿ ಎಂದು ಮಾನ್ಯ ಪ್ರಾಂಶುಪಾಲರಲ್ಲಿ ನಾನು ವಿನಯದಿಂದ ಆಗ್ರಹಿಸುತ್ತೇನೆ. ಹಾಗೆ ನೋಡಿದರೆ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರವನ್ನೇ ಮುಳಿಯ ತಿಮ್ಮಯ್ಯಪ್ಪರ ಹೆಸರಿನಲ್ಲಿ ಸ್ಥಾಪಿಸಬೇಕು. ಇದೆಲ್ಲ ಸರಕಾರ ಮಾಡುವಂತಹ ಕೆಲಸ. ಆದರೆ ನಮ್ಮ ಸರಕಾರ ಪೊಲೀಸರನ್ನು ಆಯ್ಕೆ ಮಾಡುವ ಪರೀಕ್ಷೆಗೆ ಕಳ್ಳರನ್ನು ನಿಯೋಜಿಸಿ ಫಜೀತಿಗೊಳಗಾಗಿದೆ ಎಂದು ಮಾಧ್ಯಮಗಳು ಪ್ರತಿದಿನ ವರದಿ ಮಾಡುತ್ತಿವೆ. ಪೂರ್ಣ ಪ್ರಮಾಣದ ದೇಶಭಕ್ತನಾಗಿರುವ ನಾನು, ಮಾಧ್ಯಮಗಳು ಹೇಳುವ ಇಂತಹ ಸುದ್ದಿಗಳನ್ನು ಸುಲಭದಲ್ಲಿ ನಂಬುವವನಲ್ಲ. ಅದೇನೇ ಇರಲಿ. ಸರಕಾರ ಮಾಡದ್ದನ್ನು ಸಂತ ಅಲೋಶಿಯಸ್ ಕಾಲೇಜು ಮಾಡಲಿ, ಫಾದರ್ ಪ್ರವೀಣ್ ಮಾರ್ಟಿಸ್ ಅವರೇ, ನಿಮ್ಮ ಆಡಳಿತಾವಧಿಯಲ್ಲಿ ಇಂತಹ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮಹತ್ವದ ಕೆಲಸ ನಡೆಯಲಿ ಎಂದು ಆಶಿಸುತ್ತ ನನ್ನ ಮಾತುಗಳನ್ನು ಪ್ರೀತಿಯಿಂದ ಮತ್ತು ಆಸಕ್ತಿಯಿಂದ ಕೇಳಿದ ಈ ಸಭೆಗೂ ಮತ್ತೊಮ್ಮೆ ವಂದಿಸುತ್ತ ಮಾತು ಮುಗಿಸುತ್ತೇನೆ.
ನಮಸ್ಕಾರ.
ಈ ಅಂಕಣದ ಹಿಂದಿನ ಬರೆಹಗಳು:
ಮಾದ್ರಿಯ ಮಕ್ಕಳು
ಎಪ್ಪತ್ತು ತಿರುಗಾಟಗಳು: ಒಡಲುಗೊಂಡವನ ಕಥನ
ಯಕ್ಷಗಾನ ಮತ್ತು ನಾವು: ಭಾಗ-2
ಯಕ್ಷಗಾನ ಮತ್ತು ನಾವು
ರಾಜಾರಾಂ ತಲ್ಲೂರು ಎಂಬ ನಾಗರಿಕ ಸಮಾಜದ ಪ್ರತಿನಿಧಿ
ಕನ್ನಡ ಸಾಹಿತ್ಯ ಸಂಶೋಧನೆಯ ನಿನ್ನೆ-ಇಂದು-ನಾಳೆಗಳ ‘ಮಾರ್ಗಾನ್ವೇಷಣೆ’
ಜಾತಿ ಸಮಾಜ-ನಾಗರಿಕ ಸಮಾಜ–ರಾಜಕೀಯ ಸಮಾಜ: ಭಾಗ-5
ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ: ಭಾಗ-4
ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 3
ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 2
ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 1
‘ಸ್ವತಂತ್ರ ಭಾರತ’ ಎಂಬ ಇತ್ಯರ್ಥವಾಗದ ವಿದ್ಯಮಾನ
ಕೃಷ್ಣಮೂರ್ತಿ ಹನೂರರ ಕಾಲಯಾತ್ರೆ–ಬೃಹತ್ ಕಾದಂಬರಿಯೊಂದರ ಮೊದಲ ಪುಟಗಳು
ಅನೇಕಲವ್ಯ – 3
ಅನೇಕಲವ್ಯ-2
ಅನೇಕಲವ್ಯ-1
‘ಇಂದಿರಾಬಾಯಿ’ ಯ ರಾಜಕೀಯ ಓದು
"ನಾಗರಿಕತೆಯ ದಾಳಕ್ಕೆ ಇಡೀ ಊರು ಕುಟುಂಬ ಎಲ್ಲದರಲ್ಲಿ ಆಗುವ ಬದಲಾವಣೆ ಆ ಬದಲಾವಣೆಯನ್ನು ಜೀರ್ಷಿಸಿಕೊಳ್ಳಲಾಗದಂತಹ ಪ...
"ಬಾಶಿಕ ಸ್ತಿತಿಯ ಹಲವು ಆಯಾಮಗಳು ತಾಯ್ಮಾತಿನ ಶಿಕ್ಶಣಕ್ಕೆ ದೊಡ್ಡ ಮಟ್ಟದ ಸವಾಲುಗಳನ್ನು ಒಡ್ಡುತ್ತಿವೆ. ಬಾಶಾವಿಗ್ನ...
"ಯಾವುದೇ ಪ್ರಶಸ್ತಿ ಪುರಸ್ಕಾರಗಳ ಬೆನ್ನು ಹಿಡಿಯದೆ ಅದರ ಬಗ್ಗೆ ತಲೆಯೂ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಮ್ಮ ಕಾರ್ಯ...
©2025 Book Brahma Private Limited.